ನಾಲ್ಕು ಜಾತಿಯ ಹಾವುಗಳು ಮಾತ್ರ ವಿಷಪೂರಿತ

ಹಾವುಗಳ ದೃಷ್ಟಿ ಮಂದವಾಗಿದ್ದು, ಮುಂದೆ ಇರುವ ವಸ್ತುಗಳನ್ನು ಸರಿಯಾಗಿ ಅವು ಸರಿಯಾಗಿ ಗುರುತಿಸಲಾರವು. ನಾಗರಹಾವು ಕೇರೆಹಾವಿನೊಡನೆ ಪ್ರಣಯದಾಟ ನಡೆಸುತ್ತದೆ ಎಂಬುದು ಶುದ್ದ ಸುಳ್ಳು. ಹಾವಿನ ಕುರಿತು ಇನ್ನಷ್ಟು ಕುತೂಹಲಕಾರಿ ವಿಷಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಅರಣ್ಯ ಇಲಾಖೆ ಸಿಬ್ಬಂದಿ ಗಿರಿವಾಲ್ಮೀಕಿ. ತಪ್ಪದೆ ಓದಿ, ತಿಳಿದುಕೊಳ್ಳಿ…

ತೆವಳುವ ಜಾತಿಗೆ ಸೇರಿರುವ ಭೂಮಿಯ ಮೇಲೆ ಮೋಹಕವಾಗಿ ಸಂಚರಿಸುವ ಹಾವುಗಳು ಜೀವ ಲೋಕದ ಅನನ್ಯ ಕೊಂಡಿ. ಪರಿಸರ ಮತ್ತು ಆಹಾರ ಸರಪಳಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುವ ಈ ವಿಲಕ್ಷಣ ಜೀವಿಗಳು ಯಾವತ್ತೂ ಮನುಷ್ಯನ ಸಾಮೀಪ್ಯ ಬಯಸದ, ಆತನ ಕಣ್ಣು ತಪ್ಪಿಸಿ ಬದುಕುವ ಪರಿಸರ ಸ್ನೇಹಿ ಜೀವಿಗಳು.

ನಮ್ಮ ದೇಶದಲ್ಲಿ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತವಾಗಿದ್ದು, ಈ ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತಾನೆ ಹೊರತು, ಬೇರೆ ಎಲ್ಲಾ ಹಾವುಗಳು ವಿಷರಹಿತ.

ನಾಲ್ಕು ಜಾತಿಯ ಹಾವುಗಳು :

1. ಗರಗಸ ಹಾವು (Saw scaled viper)
2.  ನಾಗರ ಹಾವು (Cobra)
3. ಕನ್ನಡಿ ಹಾವು ಅಥವಾ ಕೊಳಕು ಮಂಡಲ (Russell’s Viper)
4. ಕಡಂಬಳ ಅಥವಾ ಕಟ್ಟು ಹಾವು (Common krait)

ಗರಗಸ ಹಾವು (ಫೋಟೋ ಕೃಪೆ : inaturalist)

ನಾಗರ ಹಾವು  (ಫೋಟೋ ಕೃಪೆ : en.wikipedia)

ಕನ್ನಡಿ ಹಾವು ಅಥವಾ ಕೊಳಕು ಮಂಡಲ (ಫೋಟೋ ಕೃಪೆ : en.wikipedia)

ಕಡಂಬಳ ಅಥವಾ ಕಟ್ಟು ಹಾವು  (ಫೋಟೋ ಕೃಪೆ : reptilegardens)

ಹಾವಿನ ಬಗ್ಗೆ ಕುತೂಹಲಕಾರಿ ಅಂಶಗಳು :

1) ಹಾವುಗಳ ದೃಷ್ಟಿ ಮಂದವಾಗಿದ್ದು, ಮುಂದೆ ಇರುವ ವಸ್ತುಗಳನ್ನು ಸರಿಯಾಗಿ ಅವು ಸರಿಯಾಗಿ ಗುರುತಿಸಲಾರವು ಮತ್ತು ಹಾವುಗಳಿಗೆ ಬಣ್ಣಗಳ ವ್ಯತ್ಯಾಸ ತಿಳಿಯುವುದಿಲ್ಲ.

2) ಹಾವುಗಳಿಗೆ ಹೊರ ಕಿವಿಗಳಿಲ್ಲ, ಕಿವಿ ತಮಟೆಯೂ ಇಲ್ಲ. ಅವುಗಳಿಗೆ ಕೇವಲ ಒಳಕಿವಿ ಮಾತ್ರ ಇರುತ್ತದೆ. ಆದ್ದರಿಂದ ಹಾವುಗಳಿಗೆ ಗಾಳಿಯ ಮೂಲಕ ಪ್ರಸಾರವಾಗುವ ಯಾವ ಶಬ್ದವೂ ಕೇಳಿಸಲಾರದು. ಅವುಗಳಿಗೆ ಭೂಮಿಯ ಮೇಲುಂಟಾಗುವ ಕಂಪನ,ತರಂಗ ಮತ್ತು ಶಾಖದಿಂದ ಮಾತ್ರ ಅವು ಗ್ರಹಿಸಬಲ್ಲವು.

3) ಹಾವಿನ ನಾಲಿಗೆ ಉದ್ದವಿದ್ದು ಮುಂಭಾಗದಲ್ಲಿ ಸೀಳುಗಳಿರುತ್ತವೆ. ಹಾವು ಸೀಳಿದ ನಾಲಿಗೆಯನ್ನ ಹೊರ ಚಾಚುವುದರಿಂದ ಹಾವಿಗೆ ಎರಡು ನಾಲಿಗೆಗಳಿವೆ ಎಂದು ತಪ್ಪಾಗಿ ಭಾವಿಸಲಾಗಿದೆ. ಹಾವುಗಳು ನಾಲಿಗೆಯನ್ನು ವಾಸನೆಯನ್ನು ಕಂಡುಹಿಡಿಯಲು ಬಳುಸುತ್ತವೆ. “ಜಕೋಬ್ಸನ್” ಎಂಬ ಮೇಲ್ದವಡೆಯ ಅಂಗದಿಂದ ವಾತಾವರಣದಲ್ಲಿ ಆಗುವ ಅನೇಕ ಏರಿಳಿತ ಬದಲಾವಣೆಗಳನ್ನ ಹಾವಿನ ನಾಲಿಗೆ ಗ್ರಹಿಸಬಲ್ಲದು..!

ಕಾಳಿಂಗ ಸರ್ಪ (ಫೋಟೋ ಕೃಪೆ : vijayavani)

4) ಕಾಳಿಂಗ ಸರ್ಪ 100ಮೀಟರ್ ದೂರದಲ್ಲಿ ಚಲಿಸುತ್ತಿರುವ ತನ್ನ ಬೇಟೆಯನ್ನು ಪತ್ತೆ ಹಚ್ಚುತ್ತದೆ. ಹಾವುಗಳು ಮಾಂಸಹಾರಿ. ಸಸ್ಯಹಾರಿ ಹಾವು ಈ ಭೂಮಿಯ ಮೇಲೆ ಇಲ್ಲವೇ ಇಲ್ಲ.

5) ಹಾವಿನ ವಿಷದಲ್ಲಿ “ಫಾಸ್ಫೊಡೈಯೆಸ್ಟಿರೇಸ್” ಎಂಬ ಕಿಣ್ವವಿದ್ದು, ಇದು ಜೀವಿಗಳ ಅನುವಂಶೀಯತೆಗೆ ಕಾರಣವಾಗುವ ಜೈವಿಕ ವಸ್ತು DNA ತಂತುಗಳನ್ನು ಬೇರ್ಪಡಿಸುತ್ತದೆ. ಇದನ್ನು ಬಳಸಿ DNA ಯ ರಚನೆ ಹಾಗೂ ಅದರ ಕಾರ್ಯ ವಿಧಾನಗಳನ್ನು ಅರಿಯಲು ಸಾಧ್ಯವಾಗಿದೆ.

6) ನರಕೋಶಗಳನ್ನು ನಿಷ್ಕ್ರಿಯಗೊಳಿಸುವ ಸರ್ಪದ ವಿಷವನ್ನು ಬಳಸಿ ಪಾರ್ಶ್ವವಾಯು ಅಥವಾ ನರಮಂಡಲ ಸಂಬಂಧೀ ರೋಗಗಳಿಗೆ ಔಷಧಿ ತಯಾರಿಸಲಾಗುತ್ತದೆ. ವಿಷದ ಘಟಕವಾದ ಆ್ಯಂಕ್ರೊಡ್ ಎಂಬ ವಸ್ತುವನ್ನು ಬೇರ್ಪಡಿಸಿ ಅದನ್ನು ನರರೋಗ ಚಿಕಿತ್ಸೆಗೆ ಬಳಸುವ ಪ್ರಯತ್ನವೂ ನಡೆಯುತ್ತಿದೆ. (ವೈಜ್ಞಾನಿಕವಾಗಿ ಈ ಪ್ರಯತ್ನ ಇನ್ನೂ ಸಫಲವಾಗಿಲ್ಲದಿದ್ದರೂ ಪ್ರಯತ್ನ ಮುಂದುವರೆದಿದೆ.) ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಭೂಮಿಯ ಎಲ್ಲಾ ಖಂಡಗಳಲ್ಲಿ ಸರೀಸೃಪಗಳಿವೆ.

7)ಭಾರತೀಯ ವಾಸ್ತು ಶಿಲ್ಪಕಲೆಯಲ್ಲಿ ನಾಗರ ಶೈಲಿಯು ಅತ್ಯಂತ ಪ್ರಸಿದ್ಧವಾದುದು ಮತ್ತು ಸುಂದರವಾದದ್ದು.

ಕೇರೆಹಾವು (ಫೋಟೋ ಕೃಪೆ : vijayakarnataka)

8) ನಾಗರಹಾವು ಕೇರೆಹಾವಿನೊಡನೆ ಪ್ರಣಯದಾಟ ನಡೆಸುತ್ತದೆ ಎಂಬುದು ಶುದ್ದ ಸುಳ್ಳು. ನಾಗರಹಾವು ಮತ್ತು ಕೇರೆಹಾವು ಬೇರೆ ಬೇರೆ ಪ್ರಭೇದದ ಹಾವುಗಳಾಗಿರುವುದರಿಂದ ಇವುಗಳ ನಡುವೆ ಖಂಡಿತ ಪ್ರಣಯದಾಟ ನಡೆಯುವುದಿಲ್ಲ.

9) ಪರಾಸ ಮಣಿ, ನೀಲಾ ಮಣಿ, ಕೌಸ್ತುಭ ಮಣಿ, ಚಂದ್ರಕಾಂತ ಮಣಿ, ಶಮಂತಕ ಮಣಿ, ಸ್ವಟಿಕ ಮಣಿ, ಘೃತ ಮಣಿ, ತೈಲ ಮಣಿ, ಭೀಷ್ಮಕ ಮಣಿ,ಸ್ಕಂದ ಮಣಿ ಸೇರಿದಂತೆ ಇನ್ನೂ ಸಾಕಷ್ಟು ನಾಗಮಣಿಗಳ ಕುರಿತು ಪುರಾಣದ ಕಥೆಗಳಲ್ಲಿ ಹಾವುಗಳ ಬಗ್ಗೆ ಸಾಕಷ್ಟು Fantasy ವಿವರಣೆಗಳಿವೆ. ಆದರೆ ಇದು ಕತೆಯೇ ಹೊರತೂ ವಾಸ್ತವ ಅಲ್ಲ. ಇಂತಹ ಯಾವ ಮಣಿಯೂ ನಾಗರ ಹಾವಿನ ನೆತ್ತಿಯ ಮೇಲಿಲ್ಲಾ.

10) ರಾಮಾಯಣದಲ್ಲಿ ಇಂದ್ರಜಿತುವು ಸರ್ಪಾಸ್ತ್ರದಿಂದ ಶ್ರೀರಾಮ ಹಾಗೂ ಲಕ್ಷ್ಮಣನನ್ನು ಕಟ್ಟಿ ಹಾಕಿದರೆ, ಮಹಾಭಾರತದಲ್ಲಿ ಕರ್ಣನ ಬತ್ತಳಿಕೆಯಲ್ಲಿ ನಾಗಸ್ತ್ರಾವು ಅರ್ಜುನನ್ನು ಕೊಲ್ಲುವ ಬಾಣವಾಗಿತ್ತು. ದುರ್ಯೋಧನನ ರಥ ಬಾವುಟದ ಚಿಹ್ನೆ ಕೂಡ ನಾಗರ ಹಾವು.

11 ) ಹಾವುಗಳ ಬಗೆಗಿನ ಮನುಷ್ಯ ಹೊಂದಿರುವ ಭಯಕ್ಕೆ “ಓಪಿಡೀಯೋ ಪೋಬಿಯಾ” ( Ophidiophobia is an extreme, overwhelming fear of snakes.) ಎಂದು ಹೆಸರು ನಮ್ಮ ಜಾಗ್ರತೆಯಲ್ಲಿ ನಾವಿದ್ದರೆ ಹಾವುಗಳಿಂದ ಕಡಿತಕ್ಕೊಳಗಾಗುವ ಸಂದರ್ಭವೇ ಬರುವುದಿಲ್ಲ.ಮನುಷ್ಯನ ಸ್ವಾರ್ಥದಿಂದ ಹಾವುಗಳು ಅಳಿವಿನಂಚಿಗೆ ಬಂದು ನಿಂತಿವೆ. ಸರ್ಪ ಸಂತತಿ ಉಳಿಸಲು ಇವುಗಳ ಆವಾಸ ಸ್ಥಾನವಾದ ಕಾಡುಗಳನ್ನು ಸಂರಕ್ಷಿಸುವುದು ಅತಿ ಮುಖ್ಯ. ಜೊತೆಗೆ ಹಾವುಗಳ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಗಳು ಮೊದಲು ಹೋಗಬೇಕು.ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಹಾವುಗಳನ್ನು ಉಳಿಸಬೇಕಾಗಿದೆ.


  • ಗಿರಿವಾಲ್ಮೀಕಿ – ಅರಣ್ಯ ಇಲಾಖೆ ಸಿಬ್ಬಂದಿ, ಪರಿಸರವಾದಿ, 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW