ಮನೆಯೊಳಗೆ ಬಿಳಿಯ ದುಂಡನೆಯ ಮೊಟ್ಟೆಗಳು,ಅದರಲ್ಲಿ ಹಲ್ಲಿಯಾಕಾರ ಕಾಣತೊಡಗಿತ್ತು, ನಾನು ಹಲ್ಲಿಯ ಮೊಟ್ಟೆಗಳನ್ನು ನೋಡಿರಲಿಲ್ಲ. ಮುಂದೇನಾಯಿತು ಓದಿ ಸಿದ್ಧರಾಮ ಕೂಡ್ಲಿಗಿ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಹಲ್ಲಿ ಮೊಟ್ಟೆ ಮತ್ತು ಹಲ್ಲಿ ಕುರಿತು ಅವರು ಬರೆದ ಲೇಖನ…
ಮನೆಯಾಕೆಗೂ ಮನೆಯಲ್ಲಿನ ಹಲ್ಲಿಗೂ ಆಗಿಬರುವುದಿಲ್ಲ. ಅಂದರೆ ಹಲ್ಲಿಗಳನ್ನು ಕಂಡರೆ ಸಾಕು ಮನೆಯಾಕೆಗೆ ವಿಪರೀತ ಕೋಪ. ” ಬಂದ್ ಬಂದ್ ಸೇರ್ಕೋಂಡ್ ಬಿಟ್ಟಾವ ಹಾಳಾದ್ವು, ಎಲ್ಲಿ ಅಡಗಿಯೊಳಗ ಬಿದ್ದ್ ಬಿಡ್ತಾವೋ ಏನೋ ” ಎಂದು ಶಪಿಸುತ್ತಿರುತ್ತಾಳೆ. ಆ ದೊಡ್ಡ ದೊಡ್ಡ ಹಲ್ಲಿಗಳೋ ಮನೆಯಾಕೆಯ ಬಯ್ಗುಳ ತಮಗೆ ಕೇಳಿಯೇ ಇಲ್ಲವೆಂಬಂತೆ (ನನ್ನಂತೆ) ದೊಡ್ಡ ಕಣ್ಣುಗಳನ್ನು ಅರಳಿಸಿ ತೆಪ್ಪಗೆ ಗೋಡೆಗೆ ಅಂಟಿಕೊಂಡು ಬಿದ್ದಿರುತ್ತವೆ. ನಾನು ” ಇರ್ಲಿ ಬಿಡೇ ಮನಿಯೊಳಗ ಹುಳಾ ಹುಪ್ಡಿ ಬಂದ್ರ ತಿಂತಾವ, ಜೇಡಾನೂ ಹಿಡದ್ ತಿಂತಾವ, ಮನಿ ಸ್ವಚ್ಛ ಆಗಿರ್ತೈತಿ ಬಿಡು ” ಎಂದು ನಾನೇನಾದರೂ ಹಲ್ಲಿಯ ಪರ ವಕಾಲತ್ತು ವಹಿಸಿಬಿಟ್ಟರೆ ಮುಗಿದೇ ಹೋಯ್ತು. ” ಕೆಟ್ಟ ಹೊಲಸ ಜೀವಿಗಳು ಅವು, ನೋಡ್ರಿ ಹೆಂಗ್ ಕಣ್ಣ್ ಬಿಡಾಕತ್ತೈತಿ, ಅವು ಹೊರಗ ಹೋಗಿ ಏನರ ತಿನ್ಕೊಳ್ಳಿ ನಮ್ ಮನ್ಯಾಗ ಬ್ಯಾಡ, ನೀವು ದೊಡ್ಡದಾಗಿ ಅವುಗಳ ಪರ ಬರಬ್ಯಾಡ್ರಿ ” ಎಂದು ಬಿಡುತ್ತಾಳೆ.
ಫೋಟೋ ಕೃಪೆ : alamy
ಅವುಗಳನ್ನು ಹೊರಗೆ ಹಾಕಲು ಅವು ಕೈಗೆ ಸಿಕ್ಕರೆ ತಾನೆ ಎಂದು ನಾನು ಮನಸಿನೊಳಗೇ ನಗುತ್ತಿರುತ್ತೇನೆ. ವಿಚಿತ್ರವೆಂದರೆ ಒಮ್ಮೊಮ್ಮೆ ಆಕಸ್ಮಿಕವಾಗಿ ಕೆಳಗೆ ಬಂದ ಹಲ್ಲಿಯನ್ನು ಬಟ್ಟೆಯಲ್ಲಿ ಹಿಡಿದು ಹೊರಗೆ ಒಯ್ದು ಬಿಸಾಡಿ ಬಿಡುತ್ತಾಳೆ. ನಾನು ಹಿಂದೆಯೇ ಕೂಗುತ್ತಿರುತ್ತೇನೆ ” ಹಲ್ಲಿ ಕೊಂದ್ರ ಮಹಾಪಾಪ ಅಂತ, ಬಂಗಾರದ ಹಲ್ಲೀನ ಮಾಡಸ್ಬೇಕಂತ “. ಕೊನೆಗೆ ಹೀಗಾದರೂ ಅವುಗಳು ಉಳಿಯಲಿ ಎಂದು ನನ್ನ ಆಪೇಕ್ಷೆ. ” ಬಂಗಾರ ಹಲ್ಲಿ ಅಲ್ಲ, ವಜ್ರದ ಹಲ್ಲೀನ ಮಾಡಸೋಣ, ಮೊದಲು ಅವು ನಮ್ ಮನೀಯಿಂದ ತೊಲಗಲಿ, ನಾನೇನ್ ಸಾಯ್ಸಿಲ್ಲ, ಹಂಗ ಒಯ್ದು ಬಿಡ್ತೀನಿ ” ಎಂದು ಹಲ್ಲಿಗಳನ್ನು ಹೊರಗೊಯ್ದು ಬಿಡುತ್ತಾಳೆ. ನನಗಂತೂ ಅವುಗಳನ್ನು ಹಿಡಿಯೋ ಧೈರ್ಯ ಇಲ್ಲ. ಅಬ್ಬಾ ! ಅವುಗಳ ಜೀವವಾದ್ರೂ ಉಳೀತಲ್ಲ ಎಂದು ನಿಟ್ಟುಸಿರುಬಿಡುತ್ತೇನೆ.
ಫೋಟೋ ಕೃಪೆ : Pinkvilla
ಮೊನ್ನೆ ಹೀಗಾಯ್ತು, ಮನೆಯನ್ನು ಸ್ವಚ್ಛಮಾಡುತ್ತೇನೆಂದು ಮನೆಯಾಕೆ ಅಡುಗೆ ಮನೆಯ ಮೇಲಿನ ಸೆಲ್ಫ್ ಗಳನ್ನು ಸ್ವಚ್ಛಗೊಳಿಸುತ್ತಿರುವಾಗ ಪುಟಕ್ಕನೆ ಗೋಲಿಯಾಕಾರದ ಏನೋ ಕೆಳಗೆ ಉರುಳಿ ಬಿದ್ದಂತಾಯ್ತು. ನೋಡಿದರೆ ಬಿಳಿಯ ದುಂಡನೆಯ ಮೊಟ್ಟೆಗಳು. ಅವುಗಳಲ್ಲಿ ಒಂದು ಬಿರಿದಿತ್ತು. ತಕ್ಷಣ ಮನೆಯಾಕೆ ಗಾಬರಿಯಿಂದ ನನ್ನನ್ನು ಕೂಗಿದಳು. ” ರೀ ಬನ್ನಿ ಇಲ್ಲೆ, ನಮ್ ಮನ್ಯಾಗ ಹಾವು ತತ್ತಿ ಇಟ್ಟೈತಿ ” ಎಂದಳು. ನಾನೂ ಅವಸರದಿಂದ ಹೋಗಿ ನೋಡಿದರೆ ಅವು ಹಲ್ಲಿಯ ತತ್ತಿಗಳು. ಗಾತ್ರ ದೊಡ್ಡದಗಿದ್ದುದರಿಂದ ಅವಳಿಗೆ ಅವು ಹಾವಿನ ತತ್ತಿಗಳೇನೋ ಎಂಬ ಭಯ ಆವರಿಸಿಬಿಟ್ಟಿತ್ತು. ನಾನು ನಗುತ್ತ ” ಹಾವು ಗ್ವಾಡಿ ಏರಿ ಸೆಲ್ಫಿನ್ ಮೂಲ್ಯಾಗ ತತ್ತಿ ಇಡಂಗಿಲ್ಲ, ಅಷ್ಟು ಎತ್ತರ ಏರೂ ಸಾಧ್ಯತೆ ಇಲ್ಲ. ತಲಿ ಕೆಡಿಸ್ಕೋಬ್ಯಾಡ, ಅವು ಹಲ್ಲಿ ತತ್ತಿಗಳು” ಎಂದೆ ನೋಡಿ ಮನೆಯಾಕೆಯ ಕೋಪ, ತಾಪ ಎಲ್ಲವೂ ಸ್ಫೋಟಗೊಂಡವು. ಹಲ್ಲಿಯ ವಂಶವನ್ನೆಲ್ಲ ನಿವಾಳಿಸಿಬಿಟ್ಟಳು. ನಾನೇ ಸಮಾಧಾನಪಡಿಸಿದೆ.
ನಂತರ ಸೂಕ್ಷ್ಮವಾಗಿ ನೋಡಿದಾಗ ಒಂದು ಬಿರಿದ ಮೊಟ್ಟೆಯಿಂದ ಹಲ್ಲಿಯಾಕಾರ ಕಾಣತೊಡಗಿತ್ತು. ಎರಡು ಕಪ್ಪನೆಯ ಕಣ್ಣುಗಳು ನಮ್ಮನ್ನೆ ದಿಟ್ಟಿಸಿ ನೋಡತೊಡಗಿದಂತಿತ್ತು. ಉಳಿದವು ಬಿಳೀಯ ಗುಂಡನೆಯ ತತ್ತಿಗಳು. ನಾನೂ ಸಹ ಹಲ್ಲಿಯ ಮೊಟ್ಟೆಗಳನ್ನು ನೋಡಿರಲಿಲ್ಲ. ಈಗ ಸ್ಪಷ್ಟವಾಗಿ ಕಂಡವು. ಕ್ಲಿಕ್ ಮಾಡಿದೆ. ಮನೆಯಾಕೆ ಹಣೆ ಚಚ್ಚಿಕೊಳ್ಳುತ್ತಿದ್ದಳು. ” ನನಗೊಂದ್ ಹತ್ತಿದ್ದ್ರ ಇವರಿಗೊಂದ್ ಹತ್ತೈತಿ ” ಎಂದು.
ಸಿದ್ಧರಾಮ ಕೂಡ್ಲಿಗಿ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದ ಹಲ್ಲಿ ಮೊಟ್ಟೆಗಳು
ಹಾವಿನ ರೀತಿಯಲ್ಲಿಯೇ ಇವೂ ಸಹ ಸರೀಸೃಪ ವರ್ಗಕ್ಕೆ ಸೇರಿದವು. ನೆಲದಲ್ಲಿ ತೆವಳುವ ಹಾವಿಗೆ ಕಾಲಿರುವುದಿಲ್ಲ ಇವಕ್ಕಿರುತ್ತವೆ. ಭಾರತ, ದಕ್ಷಿಣ ಯುರೋಪ್, ಏಷ್ಯ, ಆಫ್ರಿಕ ಮತ್ತು ಅಮೆರಿಕಗಳಲ್ಲಿ 140ಕ್ಕೂ ಹೆಚ್ಚು ಪ್ರಭೇದಗಳು ಕಂಡುಬರುತ್ತವೆ. ಅತಿ ಸಣ್ಣದಾದ ಹಲ್ಲಿಯ ಉದ್ದ 4 ಸೆಂಮೀ. ಟೋಕೆ ಹಲ್ಲಿ ಉಳಿದೆಲ್ಲವುದಕ್ಕಿಂತ ದೊಡ್ಡದು, ಸುಮಾರು 35 ಸೆಂಮೀ ಉದ್ದವಿರುತ್ತವೆ. ಉದ್ದ ಸು. 10-12 ಸೆಂಮೀ. ತಲೆ ಗಿಡ್ಡ, ಮೂತಿ ಕೊಂಚ ಚೂಪು, ಬೆರಳುಗಳಲ್ಲಿ ಉಗುರುಗಳಿವೆ. ಅಷ್ಟೇ ಅಲ್ಲದೆ ಗೋಡೆಯ ಮೇಲೆ ಹರಿದಾಡಲು ಕಾಲಿಗೆ ಸಹಕರಿಸುವ ಅಂಟುತಟ್ಟೆಗಳೂ ಇವೆ. ಹೀಗಾಗಿ ಇವು ಗೋಡೆಗೆ ಅಂಟಿಕೊಂಡಂತೆ ಇರುತ್ತವೆ. ಸುಲಭವಾಗಿ ಏರಿಳಿಯುತ್ತವೆ. ಕೆಳಗೆ ಬೀಳುವುದಿಲ್ಲ. ಬಾಲದ ಬುಡ ಕೊಂಚ ಉಬ್ಬಿಕೊಂಡಿದೆ. ಕಣ್ಣುಗಳು ಚಲಿಸುವ ರೆಪ್ಪೆಗಳಿಂದ ರಕ್ಷಿಸಲ್ಪಟ್ಟಿವೆ.
ಸಿದ್ಧರಾಮ ಕೂಡ್ಲಿಗಿ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದ ಹಲ್ಲಿ ಮೊಟ್ಟೆಗಳು
ಹಲ್ಲಿಗಳು ಮಾಂಸಾಹಾರಿ. ಹುಳುಹುಪ್ಪಟೆಗಳು, ಕೀಟಗಳು, ಜೇಡಗಳು ಇತ್ಯಾದಿ ಇವುಗಳ ಆಹಾರ. ಪ್ರಾಣಿಗಳು, ಶತ್ರುಗಳು ಎದುರಾದಾಗ ತನ್ನ ಬಾಲವನ್ನು ಕಡಿದುಕೊಳ್ಳುತ್ತದೆ. ಶತ್ರುವಿನ ಗಮನವನ್ನು ತನ್ನಿಂದ ದೂರ ಸೆಳೆಯಲು ಈ ಪ್ರವೃತ್ತಿ.
ಅಂತೂ ಕೊನೆಗೆ ಹಲ್ಲಿಯ ಮೊಟ್ಟೆಗಳನ್ನು ತೋಟದಲ್ಲಿ ಚೆಲ್ಲಿ ಬಂದದ್ದಾಯ್ತು. ನನ್ನ ಮೊಟ್ಟೆಗಳನ್ನು ಏನು ಮಾಡಿದಿರಿ ? ಎಂದು ಕೇಳುತ್ತದೇನೋ ಎಂಬಂತೆ ಈಗಲೂ ಗೋಡೆಯ ಮೇಲಿನ ದಪ್ಪನೆಯ ಹಲ್ಲಿ ಲೊಚಗುಟ್ಟುತ್ತ ನಮ್ಮನ್ನೇ ದಿಟ್ಟಿಸಿ ನೋಡುತ್ತಿದೆಯೆನಿಸುತ್ತದೆ.
- ಸಿದ್ಧರಾಮ ಕೂಡ್ಲಿಗಿ – ಛಾಯಾಗ್ರಾಹಕರು, ಲೇಖಕರು