‘ಕ್ಷಮಿಸಿ’ ಅನ್ನೋಕ್ಕಿಂತ ‘ಸಾರೀ…’ ಅನ್ನೋ ಪದಕ್ಕೆ ಹೆಚ್ಚು ಬೆಲೆನಾ?…ಬಸ್ ನಲ್ಲಿ ಆದ ಒಂದು ಘಟನೆಯನ್ನು ಲೇಖಕರು ಪ್ರೊ ರೂಪೇಶ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ …
೧೯೯೮…
ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ನಾನು #ಬೆನಸಾಸಂ ಮೇಲೆ ತೀವ್ರ ಅವಲಂಬಿತನಾಗಿದ್ದೆ. ರಾತ್ರಿ ೮.೩೦ಗಂಟೆಗೆ ನಾನು ತಂಗುತ್ತಿದ್ದ ಕೊಠಡಿ/ರೂಂ-ಕಡೆಗೆ ಕೊನೆಯ ಬಸ್ಸು. ಬೆಳಿಗ್ಗೆ ೫.೩೦ಕ್ಕೆ ಬಸ್ಸು ಹತ್ತುವ ನಾನು, ಸಿಕ್ಕ ಸಿಕ್ಕಲ್ಲಿ ಟ್ಯೂಷನ್ ನಂತರ ಕಾಲೇಜು ಮುಗಿಸಿ ಪುನಃ ಟ್ಯೂಷನ್… ದಿನದ ಕೊನೆಯ ಹಂತ ಕೆಂಬನಿ (ಕೆಂಪೇಗೌಡ ಬಸ್ ನಿಲ್ದಾಣ/ಮೆಜೆಸ್ಟಿಕ್) ಇಂದ ೮.೩೦ಗಂಟೆಯ ಬಸ್ಸು. ಅದರ ಕೊನೆಯ ನಿಲ್ದಾಣ ನಂದಿನಿ ಬಡಾವಣೆ. ಅಲ್ಲಿಂದ ಒಂದು ಹದಿನೈದು ನಿಮಿಷ ನಡೆದರೆ ರೂಂ.
ಬಾಯಿ – ಕಾಲು ಸುಸ್ತಾಗಿ ೮.೩೦ ಬಸ್ಸಿಗೆ ಹತ್ತುವಾಗ, ನಿರ್ವಾಹಕ ಒಂದು ಸೀಟನ್ನು ಕಾಯ್ದಿರಿಸಿ, ಕೂತು ನನಗೆ ಎದ್ದು ಕೊಡುತ್ತಿದ್ದ. ಯಾಕೆಂದರೆ ಮಾರನೇ ದಿನ ಬೆಳ್ಳಂ ಬೆಳಿಗ್ಗೆ ನಾನೇ ಆ ಬಸ್ಸಿಗೆ ಫಸ್ಟ್ ಗಿರಾಕಿ. ಆದರೆ ಅಂದು ರಾತ್ರಿ ಆ ನಿರ್ವಾಹಕ ಇರಲಿಲ್ಲ. ಕೆಂಬನಿಯಲ್ಲಿ ಬಸ್ಸು ಹತ್ತಿದ ನಂತರ, ಸುಸ್ತಾದ ದೇಹವನ್ನು ಹೋರುವ ಕಂಗಾಲಾದ ಕಾಲುಗಳು ನಿಯಂತ್ರಣವನ್ನು ಕಳೆದೂ ಕಳೆಯದೆಯೂ ದೃಢತೆಯನ್ನು ಸಮನ್ವಯಿಸುತ್ತಿದ್ದ ವೇಳೆಯಲ್ಲಿ, ಗೊತ್ತಿಲ್ಲದೆ ಒಬ್ಬ ಸಹಪ್ರಯಾಣಿಕನ ಕಾಲು ತುಳಿದೆ, ಹಳ್ಳಿ ಗುಗ್ಗುವಾದ ನಾನು ತಕ್ಷಣ “#ಕ್ಷಮಿಸಿ” ಅ೦ತ ಕೇಳಿಕೊಂಡೆ, ನಂತರ ( ಜೊತೆಗೆ ನಮ್ಮ ಹಳ್ಳಿಯ ಪ್ರಾಯೋಗಿಕ ಕ್ಷಮೆಯಾಚನೆ ಮಾಡಿದೆ) ಅವರನ್ನು ಮುಟ್ಟಿ ನಮಸ್ಕರಿಸಿದೆ. ಆದರೆ ಆ ಸಹಪ್ರಯಾಣಿಕ ನನ್ನ ಬೆಂಗ್ಳೂರ್ ಕನ್ನಡದಲ್ಲಿ ಬೈಯೋಕೆ ಶುರು ಹಚ್ಚಿದ.
ಅವನ ಜೊತೆ ಉಳಿದ ಹಲವು ಪ್ರಯಾಣಿಕರೂ ಕೊರಸ್ ಆಗಿ ನನ್ನ “…ಏಯ್ ****
#Sorry ಕೇಳು ಮಗನೇ… ” ಅ೦ತ ಹಲವು ಬಾರಿ ಜರೆದರು.
“ನಾನು ಆಗಲೇ ಕ್ಷಮೆ ಕೇಳಿದನಲ್ಲಾ” ಅ೦ತ ಬಾರಿ ಬಾರಿ ಕೇಳಿ ಕೊ೦ಡರೂ, ಅವರು ಒಪ್ಪಲಿಲ್ಲ.
“ಏಯ್ ನಮ್ಮನ್ನ ಏನೂಂತಾ ತಿಳಿದಿದ್ದಿಯಾ?”
Sorry ಕೇಳು ಇಲ್ಲಾಂದ್ರೆ….ಬಾರಿಸ್ತೀವಿ… ಬಂದ ಊರಿಗೆ ತಿರ್ಗಾ ಓಡಿಸ್ತೀವಿ. ಹುಷಾರ್…. ಡಾಶ್…ಡಾಶ್ …” ಎಂದು ಆಕ್ರಮಣಕ್ಕೆ ಸಜ್ಜಾಗಿದುದು ನೋಡಿ, ಕೊನೆಗೆ ” Sorry…. ” ಅ೦ದೆ.
ಅದರ ನಂತರ ಹಲವರು ಸುಮ್ಮನಾದರೂ….ಕೆಲ ಕೆಲವರು ಅಲ್ಲಿಲ್ಲಿ ಮಾತನಾಡುತ್ತಿದ್ದರು. ” ಒಂದು sorry ಹೇಳಕ್ಕೆ ಎಷ್ಟು ಗಾಂಚಾಲಿ ಮಾಡ್ತಾನೆ ನೋಡು…….. ಆವಾಗ್ಲೇ ಹೇಳ್ಬಿಡಬಹುದಿತ್ತು ..
ಗುಬ್ಬಾಲ್… Manners ಇಲ್ಲ ಇವಕ್ಕೆಲ್ಲಾ….. ಯಾವೂರಿಂದಲೋ ದುಡಿಯೋಕೆ ಬರ್ತಾವೆ. culture ಹಾಳು ಮಾಡ್ತಾರೆ. …. ಸರಿಯಾಗಿ ಕನ್ನಡ ಬರಲ್ಲ….”ನಮ್ಮೂರಿನ ಜಾತ್ರೆಗೆ ಆಕಾಶದಲ್ಲಿ ಹೊಡೆದ ಪಟಾಕಿ , ಅಲ್ಲೇ ಹೊಳಪಲ್ಲಿ ಹೊಳೆದು, ಕೆಲ ಸಮಯ ಕೆಳಗೆ ಬರುತ್ತಾ ಕಣ್ಮರೆ ಆದಂತೆ….ಈ ಗುಸು ಗುಸು ಮಾತುಕತೆ ತಣ್ಣಗಾಗಲು ಸುಮಾರು ೪೫ ನಿಮಿಷ ಹಿಡಿಯಿತು. ” ಕ್ಷಮಿಸಿ ಎಂಬುದು ಕನ್ನಡ ಪದ ಅಲ್ಲವೇ? Sorry ಎಂಬುದು ಬೆಂಗಳೂರಿನ ಅಪ್ಪಟ ಕನ್ನಡ ಪದ ಆಗಿರಬಹುದೇ… ” ಎಂಬ ಸಂಶಯ ಕಾಡುತಿತ್ತು.
ಆ ಸ್ವಲ್ಪ ಸಮಯದ ನಂತರ ನನಗೆ ಕುಳಿತುಕೊಳ್ಳಲು ಸೀಟು ಸಿಕ್ತು. ಬಸ್ಸು ಇಳಿದು ಕೊಠಡಿಯ ಕಡೆ ನಡೆದಾಗಲೂ ಈಗಲೂ ” … ನಾನೆಂದು #ಕನ್ನಡ ಕಲಿಯಬಹುದು?….” ಎಂಬ ಪ್ರಶ್ನೆ ನನ್ನೊಂದಿಗೆ ಶಾಶ್ವತ ಮಿತ್ರತ್ವ ಪಡೆದಿತ್ತು.
ನಿಮ್ಮವ ನಲ್ಲ
*ರೂಪು*
- ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)
