ಬಡತನವಿರಲಿ, ಸಿರಿತನವಿರಲಿ, ಕಷ್ಟವಿರಲಿ ಸುಖವಿರಲಿ ಪ್ರೀತಿಯಿಂದ ಪ್ರೇಮದಿಂದ ಜೊತೆಗೂಡಿ ಬಾಳಿದರೆ ಅದೇ ಸ್ವರ್ಗ ಸುಖ. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಒಂದೂರಲ್ಲಿ ಒಬ್ಬ ಹಿರಿಯ ಯಜಮಾನನಿದ್ದ. ಅವನಿಗೆ ನಾಲ್ಕು ಜನ ಮಕ್ಕಳಿದ್ದರು. ತುಂಬಾ ಸಮೃದ್ಧಿಯಿಂದ ಕೂಡಿದ ಮನೆತನ ಅದಾಗಿತ್ತು. ತುಂಬಾ ಚೆನ್ನಾಗಿ ದುಡಿಯುತ್ತಾ ಸಂತೋಷದಿಂದ ಇರುವ ಮನೆತನ ಅದಾಗಿತ್ತು.
ಒಂದು ದಿನ ಮನೆಯ ಹಿರಿಯ ಯಜಮಾನ ಮಲಗಿರುವಾಗ ಅವನಿಗೊಂದು ಕನಸು ಬಿತ್ತು. ಆ ಕನಸಿನಲ್ಲಿ ಆ ಮನೆಯಿಂದ ಭಾಗ್ಯ ದೇವತೆ ಹೊರಹೋಗುತ್ತಿದ್ದಳು. ಯಜಮಾನ ಎದ್ದು ಆ ಭಾಗ್ಯದೇವತೆಯನ್ನು ನಿಲ್ಲಿಸಿ ಕೇಳಿದ “ಎಲ್ಲಿಗೆ ಹೋಗುತ್ತಿರುವೆ” ಎಂದು. ಆಗ ಭಾಗ್ಯ ದೇವತೆ ಹೇಳಿದಳು, ಇಷ್ಟು ವರ್ಷಗಳ ಕಾಲ ನಿಮ್ಮ ಮನೆಯ ಹಿರಿಯ ತಲೆಗಳಿಂದ ನನ್ನನ್ನು ತುಂಬಾ ಗೌರವಯುತವಾಗಿ, ಭಕ್ತಿಯಿಂದ ಆದರಣೀಯವಾಗಿ ನೋಡಿಕೊಂಡಿರುತ್ತೀರಿ. ಈಗ ನಾನು ಹೊರಡುವ ಸಮಯ ಬಂದಿದೆ. ನಾನು ಹೊರಡಲೇಬೇಕು ಎಂದು ಹೇಳುತ್ತಾಳೆ.
ಹಾಗೆಯೇ ಇಷ್ಟು ದಿನದವರೆಗೆ ನೀವು ನನ್ನನ್ನು ಅತಿಯಾದ ಭಕ್ತಿಯಿಂದ ನೋಡಿಕೊಂಡಿದ್ದಕ್ಕಾಗಿ ಏನಾದರೂ ವರವನ್ನು ಕೇಳುವುದಿದ್ದರೆ ಕೇಳಿಬಿಡಿ, ನಾನು ಹೊರಡಲೇಬೇಕು ಎಂದು ಹೇಳುತ್ತಾಳೆ. ಆಗ ಆ ಮುದಿ ಮನುಷ್ಯ ಹೇಳುತ್ತಾನೆ “ನನ್ನದೇನಿದೆ! ವಯಸ್ಸಾಯ್ತು. ನನಗಾಗಿ ಕೇಳುವಂತಹದ್ದು ನನಗೆ ಏನಿಲ್ಲ. ನನ್ನ ಮಕ್ಕಳ ಜೊತೆ ಒಮ್ಮೆ ಚರ್ಚಿಸಿ ನಾನು ನಿನಗೆ ನಾಳೆ ಹೇಳುತ್ತೇನೆ ಎಂದ. ಹಾಗಾದರೆ ನಾಳೆ ನಿನ್ನನ್ನು ಭೇಟಿಯಾಗುತ್ತೇನೆ ಎಂದು ಮನೆಯೊಳಗಡೆ ಭಾಗ್ಯದೇವತೆ ಬಂದಳು.

ಫೋಟೋಕೃಪೆ : google
ಯಜಮಾನ ತನ್ನ ನಾಲ್ಕು ಮಕ್ಕಳನ್ನು ಕರೆದು ವಿಷಯವನ್ನು ಮುಂದಿಟ್ಟ. ಭಾಗ್ಯದೇವತೆ ಮನೆಯಿಂದ ಹೊರ ಹೋಗುತ್ತಿದ್ದಾಳೆ. ಏನಾದರೂ ಕೇಳುವುದಿದ್ದರೆ ಕೇಳಿ ಎಂದು ಹೇಳಿದ.
ಆಗ ಹಿರಿಯ ಮಗ ಹೇಳಿದ ‘ಅತಿಯಾದ ಸಂಪತ್ತನ್ನು ಕೇಳಿಬಿಡು. ಕೋಟಿ ಕೋಟಿ ಹಣವಿದ್ದರೆ ನಾವು ಐಷಾರಾಮಿಯಾಗಿ ಇರಬಹುದು ಎಂದು.
ಆಗ ಎರಡನೇ ಮಗ ಹೇಳಿದ ‘ಕೋಟಿ ಕೋಟಿ ಹಣವನ್ನು ದೋಚುವವರಿದ್ದಾರೆ. ಕಳ್ಳಕಾಕರಿದ್ದಾರೆ. ಸಂಪತ್ತು ಕಳ್ಳರ ಪಾಲಾಗಬಹುದು. ಭೂಮಿಯನ್ನು ಯಾರೂ ದೋಚುವುದಿಲ್ಲ. ಹೀಗಾಗಿ ಸಾವಿರಾರು ಎಕರೆ ಭೂಮಿಯನ್ನು ಕೇಳಿಬಿಡು ಎಂದ.
ಆಗ ಮೂರನೆಯ ಮಗ ಹೇಳಿದ. ಸಮಯ ಬಂದರೆ ಭೂಮಿಯು ಹೊರಟು ಹೋಗುತ್ತದೆ. ಭೂಮಿಯು ಮಾರಾಟವಾಗುತ್ತದೆ ಅಥವಾ ಸರ್ಕಾರ ತನ್ನ ಕೆಲಸ ಕಾರ್ಯಗಳಿಗೆ ಆಕ್ರಮಿಸಿಕೊಳ್ಳಲೂ ಬಹುದು. ಹೀಗಾಗಿ ಅಧಿಕಾರವನ್ನು ಕೇಳಿಬಿಡು ಎಂದ. ಒಳ್ಳೆಯ ಹುದ್ದೆಯಲ್ಲಿದ್ದರೆ ರಾಜಕೀಯವಿರಬಹುದು, ನೌಕರಿಯಲ್ಲಿರಬಹುದು. ಉನ್ನತ ಹುದ್ದೆಯಲ್ಲಿದ್ದರೆ ಹಣ, ಆಸ್ತಿ, ಎಲ್ಲವೂ ಹರಿದುಕೊಂಡು ತಾನಾಗಿಯೇ ಬರುತ್ತದೆ ಎಂದ.
ಆಗ ಕೊನೆಯ ಚಿಕ್ಕ ಮಗಳು ಹತ್ತಿರ ಬಂದು ಎಲ್ಲರಿಗೂ ಹೇಳಿದಳು. ಭಾಗ್ಯದೇವತೆಯೇ ಮನೆ ಬಿಟ್ಟು ಹೋದರೆ ಕೋಟಿ ಕೋಟಿ ಹಣ, ಸಾವಿರಾರು ಎಕರೆ ಭೂಮಿ, ಅಧಿಕಾರ ಇವೆಲ್ಲವೂ ಉಳಿಯುತ್ತವೆಯೇ! ಖಂಡಿತ ಸಾಧ್ಯವಿಲ್ಲ. ಭಾಗ್ಯ ದೇವತೆ ಒಮ್ಮೆ ಮನೆ ಬಿಟ್ಟು ಹೋದರೆ ಅವಳ ಹಿಂದೆ ಇವೆಲ್ಲವೂ ಹೋಗಿಬಿಡುತ್ತವೆ. ಹೀಗಾಗಿ ಬಡತನವಿರಲಿ, ಸಿರಿತನವಿರಲಿ. ಕಷ್ಟವಿರಲಿ ಸುಖವಿರಲಿ ನಾವೆಲ್ಲರೂ ಒಬ್ಬರಿಗೊಬ್ಬರು ಪ್ರೀತಿಯಿಂದ ಪ್ರೇಮದಿಂದ ಇಲ್ಲಿಯವರೆಗೂ ಜೊತೆಗೂಡಿ ಬಂದಿದ್ದೇವೆ. ಹೀಗಾಗಿ ಈ ಪ್ರೇಮ ಈ ನಮ್ಮ ಮನೆಯಲ್ಲಿ ಸದಾ ಹೀಗೆಯೇ ಇರಲಿ ಎಂದು ಪ್ರೇಮವನ್ನೆ ಕೇಳಿಬಿಡಿ ಎಂದು ಹೇಳಿದಳು.

ಮರುದಿನ ಆ ಮನೆಯ ಯಜಮಾನ, ಭಾಗ್ಯದೇವತೆಯನ್ನು ಸಂಧಿಸಿ, ನಮಗೆ ಆಸ್ತಿ, ಐಶ್ವರ್ಯ, ಅಧಿಕಾರ ಯಾವುದೂ ಬೇಡ. ಪ್ರೇಮವನ್ನು, ಪ್ರೀತಿಯನ್ನು ಮಾತ್ರ ಬಿಟ್ಟು ಹೋಗು ಎಂದು ಹೇಳುತ್ತಾನೆ. ಆಗ ಭಾಗ್ಯದೇವತೆ ಹೇಳುತ್ತಾಳೆ “ಇಲ್ಲ ಇಲ್ಲ ಪ್ರೇಮವನ್ನು ಕೊಡಲು ಆಗುವುದಿಲ್ಲ. ಅದೊಂದನ್ನು ಬಿಟ್ಟು ಕೇಳು” ಎನ್ನುತ್ತಾಳೆ. ಯಜಮಾನ ಹೇಳುತ್ತಾನೆ “ಇಲ್ಲ ಇಲ್ಲ, ನಿನ್ನ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ಏನಾದರೂ ಕೇಳು ಎಂದು ನೀನು ಹೇಳಿರುವೆ. ಹೀಗಾಗಿ ನನಗೆ ಏನಾದರೂ ನೀನು ಕೊಡುವುದಾದರೆ ಪ್ರೇಮವನ್ನೇ ಕೊಡು, ಆ ಪ್ರೀತಿಯನ್ನೇ ಕೊಡು. ಅದನ್ನು ಮಾತ್ರ ನನಗೆ ಕೊಟ್ಟು ನೀನು ಹೊರಡಬಹುದು. ನಾನು ನಿನ್ನನ್ನು ತಡೆಯುತ್ತಿಲ್ಲ ಎಂದು ಹೇಳುತ್ತಾನೆ.
ಆಗ ಭಾಗ್ಯದೇವತೆ ಅವನಿಗೆ ಹೇಳುತ್ತಾಳೆ. ಪ್ರೇಮವೇ ನನ್ನ ಜೀವಾಳ. ಪ್ರೇಮವನ್ನು ಬಿಟ್ಟು ನಾನು ಒಂದು ಹೆಜ್ಜೆ ಮುಂದೆ ಹೋಗಲಾರೆ. ಎಲ್ಲಿ ಪ್ರೇಮವಿದೆಯೋ ಅಲ್ಲಿ ಭಾಗ್ಯವಿದೆ. ಎಲ್ಲಿ ಪ್ರೀತಿ ಇದೆಯೋ ಅಲ್ಲಿ ನಾನಿರುತ್ತೇನೆ. ಹೀಗಾಗಿ ನಾನು ಮನೆಯಿಂದ ಹೊರಡಲಾರೆ. ನಿನ್ನಲ್ಲಿಯೇ ನೆಲೆಸುತ್ತೇನೆ ಎಂದು ಅಲ್ಲಿಯೇ ನೆಲೆಸುತ್ತಾಳೆ.
ಪ್ರೇಮದ ಮಹತ್ವ, ಪ್ರೀತಿಯ ತಾಕತ್ತು ಅತಿ ದೊಡ್ಡದು. ಎಲ್ಲಿ ಪ್ರೇಮವಿದೆಯೋ ಎಲ್ಲವನ್ನೂ ಹಿಡಿದಿಡುವ ತಾಕತ್ತು ಈ ಪ್ರೀತಿಗಿದೆ. ಎಲ್ಲವನ್ನೂ ಮೀರಿದ್ದು ಈ ಪ್ರೇಮ.ಹೀಗಾಗಿ ಆಯ್ಕೆಗಳು ಬಂದಾಗ ಪ್ರೇಮವನ್ನು ಆಯ್ಕೆ ಮಾಡಿಕೊಳ್ಳಿ. ಉಳಿದದ್ದು ಇದ್ದರೂ ಇಲ್ಲದಿದ್ದರೂ ಬದುಕಿಗೆ ಏನೂ ವ್ಯತ್ಯಾಸವಾಗಲಾರದು.
ಇಂತಹ ಪ್ರೇಮವು ಪಾವಿತ್ರ್ಯವನ್ನು ಪಡೆದುಕೊಂಡಾಗ ಭಕ್ತಿಯಾಗಿ ಮಾರ್ಪಡುತ್ತದೆ.
ಹಾಗಾದರೆ ನುಸುಳಿ ಹೋಗುವ ಹಣ, ಐಶ್ವರ್ಯ, ಭೂಮಿ, ಅಧಿಕಾರ ಇವೆಲ್ಲವುಗಳಿಗಿಂತ, ಎಂದೆಂದೂ ನಶಿಸಿ ಹೋಗದ ಪ್ರೀತಿ, ಪ್ರೇಮದಿಂದ ನಾವೆಲ್ಲ ಸ್ನೇಹಿತರು ಕುಟುಂಬದವರು ದೇಶದ ಪ್ರಜೆಗಳು ಇರಬಹುದಲ್ಲವೇ!

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಡಾ. ರಾಜಶೇಖರ ನಾಗೂರ
