‘ರಾಮರಾಜ್ಯ’ ವೆಂದರೆ…!

ಇಂದಿನ ಪ್ರಸ್ತುತ ಕಾಲದಲ್ಲಿಯೂ ಕೂಡ, ಪ್ರತಿಯೊಂದು ಕುಟುಂದಲ್ಲಿ ಒಬ್ಬ ಸದಸ್ಯ, ಇನ್ನೊಬ್ಬ ಸದಸ್ಯನ ಒಳಿತಿಗೆ ಚಿಂತಿಸಿದರೆ ಮನೆಯೇ ಮಂದಿರವಾಗುತ್ತದೆ. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಲಕ್ಷ್ಮಣ ಮತ್ತು ರಾವಣನ ಮಗ ಮೇಘನಾಥನ ನಡುವೆ ಯುದ್ಧ ಪ್ರಾರಂಭವಾದಾಗ ಮೇಘನಾಥನು ಹೂಡಿದ ಬಾಣವು ಲಕ್ಷ್ಮಣನಿಗೆ ತಾಗುತ್ತದೆ. ಲಕ್ಷ್ಮಣನು ಮೂರ್ಛೆ ಹೋಗಿ ಸಾವು ಬದುಕಿನ ಮಧ್ಯೆ ಹೋರಾಡಲು ಪ್ರಾರಂಭಿಸುತ್ತಾನೆ. ಲಕ್ಷ್ಮಣನನ್ನು ಬದುಕಿಸಲು ಒಂದೇ ಒಂದು ಉಪಾಯವೆಂದರೆ ಸೂರ್ಯೋದಯವಾಗುವುದರೊಳಗೆ ಹಿಮಾಲಯದಲ್ಲಿರುವ ಸಂಜೀವಿನಿಯನ್ನು ತರುವುದು.

ನಮಗೆ ನಿಮಗೆ ತಿಳಿದಿರುವಂತೆ ಹನುಮಂತನು ಸಂಜೀವಿನಿಯನ್ನು ತರಲು ಲಂಕೆಯಿಂದ ಹಿಮಾಲಯಕ್ಕೆ ಹಾರಿ ಸಂಜೀವಿನಿಯನ್ನು ತೆಗೆದುಕೊಂಡು ಅಯೋಧ್ಯೆಯ ಮೇಲಿನಿಂದ ಮರಳಿ ಹೋಗುತ್ತಿರುವಾಗ ಭರತನು ಕೆಳಗೆನಿಂದ ನೋಡಿ ಹನುಮಂತನು ರಾಕ್ಷಸನಿರಬೇಕು ಎಂದುಕೊಂಡು ಅವನ ಮೇಲೆ ಬಾಣಪ್ರಯೋಗವನ್ನು ಮಾಡಿದಾಗ, ಅದು ಹನುಮಂತನಿಗೆ ತಗುಲಿ ಹನುಮಂತನು ಕೆಳಗೆ ಉರುಳುತ್ತಾನೆ.

ಫೋಟೋ ಕೃಪೆ : google

ಅವನನ್ನು ಸಮೀಪಿಸಿದಾಗ ಹನುಮಂತನು ಎಲ್ಲ ವಿಷಯವನ್ನು ಸವಿಸ್ತಾರವಾಗಿ ವಿವರಿಸುತ್ತಾನೆ. ರಾವಣನು ಸೀತೆಯನ್ನು ಅಪಹರಿಸಿದ್ದಾನೆ. ಲಕ್ಷ್ಮಣ ಮತ್ತು ಮೇಘನಾಥನ ನಡುವೆ ಯುದ್ಧ ನಡೆದಾಗ ಲಕ್ಷ್ಮಣನು ಮೂರ್ಛೆ ಹೋಗಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾನೆ. ರಾಮನು ಲಕ್ಷ್ಮಣನ ತಲೆಯನ್ನು ತನ್ನ ತೊಡೆಯ ಮೇಲೆ ಇರಿಸಿಕೊಂಡು ಸಂಜೀವಿನಿಗಾಗಿ ಕಾಯುತ್ತಿದ್ದಾನೆ. ಸೂರ್ಯೋದಯ ಆಗುವುದರೊಳಗೆ ನಾನು ತಲುಪದಿದ್ದರೆ ಲಕ್ಷ್ಮಣನು ಉಳಿಯಲಾರ ಎಂದು ಹೇಳುತ್ತಾನೆ.

ಇದನ್ನು ಕೇಳುತ್ತಿದ್ದ ರಾಮನ ತಾಯಿ ಕೌಸಲ್ಯ ಹೇಳುತ್ತಾಳೆ “ಓ ಹನುಮ, ರಾಮನಿಗೆ ಹೇಳು, ಲಕ್ಷ್ಮಣನಿಲ್ಲದೆ ಅಯೋಧ್ಯೆಗೆ ಅವನು ಕಾಲಿಡುವಂತಿಲ್ಲ ಎಂದು”.

ಅಲ್ಲಿಯೇ ಇರುವ ಲಕ್ಷ್ಮಣನ ತಾಯಿ ಸುಮಿತ್ರ ಹೇಳುತ್ತಾಳೆ. “ಹನುಮಂತ ಯಾವ ಚಿಂತೆಯೂ ಇಲ್ಲ. ನನಗೆ ಇನ್ನೊಬ್ಬ ಮಗ ಶತ್ರುಘ್ನನಿದ್ದಾನೆ. ನನಗೆ ಲಕ್ಷ್ಮಣ ಮತ್ತು ಶತ್ರುಘ್ನರೂ ಅವಳಿ ಮಕ್ಕಳು. ರಾಮನ ಸೇವೆಗಾಗಿಯೇ ಹುಟ್ಟಿದವರು. ಶತ್ರುಘ್ನನನ್ನು ಕೂಡ ನಾನು ಯುದ್ಧಕ್ಕೆ ಕಳಿಸುತ್ತೇನೆ. ನೀನು ಧೈರ್ಯವಾಗಿ ಹೋಗು” ಎಂದು ಹೇಳುತ್ತಾಳೆ. ಇಬ್ಬರು ತಾಯಂದಿರ ಮಾತನ್ನು ಕೇಳಿ ಹನುಮಂತನಿಗೆ ಕಣ್ಣಂಚಲಿ ನೀರು ತುಂಬುತ್ತದೆ.

ಆದರೆ ಲಕ್ಷ್ಮಣನ ಹೆಂಡತಿ ಊರ್ಮಿಳೆ ಅಲ್ಲಿ ಶಾಂತವಾಗಿ, ಪ್ರಸನ್ನತೆಯಿಂದ ನಿಂತಿರುವುದನ್ನು ಕಂಡು ಹನುಮಂತನಿಗೆ ಆತಂಕವಾಗುತ್ತದೆ. ಹತ್ತಿರ ಬಂದು ಊರ್ಮಿಳೆಗೆ ಹನುಮಂತನು ಹೇಳುತ್ತಾನೆ “ಮಾತೆ ಲಕ್ಷ್ಮಣನು ಪ್ರಾಣಾಪಾಯದಲ್ಲಿದ್ದಾನೆ. ಸೂರ್ಯೋದಯವಾಗುತ್ತಿದ್ದಂತೆ ಸೂರ್ಯ ಕುಲದ ದೀಪ ಆರುವ ಹಂತದಲ್ಲಿದೆ. ಇಂತಹ ಸ್ಥಿತಿಯಲ್ಲಿ ಕೂಡ ನೀನು ಶಾಂತವಾಗಿ, ಪ್ರಶಾಂತವಾಗಿರುವೆಯಲ್ಲ. ಈ ನಿನ್ನ ಪ್ರಸನ್ನತೆಗೆ ಕಾರಣವೇನು ಮಾತೆ!” ಎಂದು ಸಂಕೋಚದಿಂದ ಕೇಳುತ್ತಾನೆ.

ಫೋಟೋ ಕೃಪೆ : google

ಆಗ ಊರ್ಮಿಳೆ ಹೀಗೆ ಉತ್ತರಿಸುತ್ತಾಳೆ “ನನ್ನ ದೀಪ (ಲಕ್ಷ್ಮಣ) ಆರಲು ಸಾಧ್ಯವೇ ಇಲ್ಲ. ಹನುಮಂತ, ನೀನು ಬೇಕಿದ್ದರೆ ಇನ್ನೂ ಸ್ವಲ್ಪ ದಿನ ಅಯೋಧ್ಯೆಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಂಡು ಹೋಗಬಹುದು. ನೀನು ಅಲ್ಲಿಗೆ ಹೋಗುವವರೆಗೆ ಸೂರ್ಯೋದಯ ಆಗುವುದೇ ಇಲ್ಲ. ಏಕೆಂದರೆ ನೀನೇ ಹೇಳಿದಂತೆ ನನ್ನ ದೀಪ ಲಕ್ಷ್ಮಣನನ್ನು ಶ್ರೀರಾಮ ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದಾನೆ ಎಂದು. ಯಾವ ವ್ಯಕ್ತಿ ಶ್ರೀರಾಮನ ಮಡಿಲಲ್ಲಿ ಇರುವನೋ ಅವನನ್ನು ಈ ಕಾಲವೆಂಬುದು ಮುಟ್ಟುವುದಲ್ಲ, ಮುಟ್ಟಲು ಯೋಚಿಸುವುದೂ ಇಲ್ಲಾ. ನನ್ನ ಪತಿ ವನವಾಸಕ್ಕೆ ಹೋಗುವ ಮೊದಲು 14 ವರ್ಷಗಳ ಕಾಲ ಅಣ್ಣನ ಸೇವೆ ಮಾಡುತ್ತಾ ನಿದ್ರಿಸುವುದಿಲ್ಲ ಎಂದು ಮಾತು ಕೊಟ್ಟು ಹೋಗಿದ್ದಾನೆ. ಹೀಗಾಗಿ ಈ 14 ವರ್ಷಗಳ ಅವಿಶ್ರಾಂತ ಸೇವೆಯ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದಾನಷ್ಟೇ. ಭಗವಾನ್ ಶ್ರೀ ರಾಮನ ಮಡಿಲು ಸಿಕ್ಕಿದೆ ಅಲ್ವಾ, ಹೀಗಾಗಿ ವಿಶ್ರಾಂತಿಯ ಸಮಯವನ್ನು ವಿಸ್ತರಿಸಿದ್ದಾನೆ. ಸ್ವಲ್ಪ ಸಮಯದ ನಂತರ ಎದ್ದೇಳುತ್ತಾನೆ. ಆ ಮೇಘದೂತನಲ್ಲ ಈ ಬ್ರಹ್ಮಾಂಡದಲ್ಲಿರುವ ಯಾವ ಶಕ್ತಿಯು ನನ್ನ ಪತಿ ಲಕ್ಷ್ಮಣನನ್ನು ಮೂರ್ಛೆಗೊಳಿಸಲು ಸಾಧ್ಯವಿಲ್ಲ. ಮೇಘದೂತನ ಬಾಣ ತಾಕಿರುವುದು ನನ್ನ ಗಂಡ ಲಕ್ಷ್ಮಣನಿಗಲ್ಲ. ಅದು ನಿಜ ಅರ್ಥದಲ್ಲಿ ತಾಕಿದ್ದು ಶ್ರೀರಾಮನಿಗೆ.

 

ನನ್ನ ಗಂಡನ ಪ್ರತಿ ಉಸಿರಲ್ಲಿ ರಾಮನಿದ್ದಾನೆ. ಪ್ರತಿ ಹೃದಯದ ಬಡಿತದಲ್ಲಿ ರಾಮನಿದ್ದಾನೆ. ರೋಮ ರೋಮಗಳಲ್ಲಿ ರಾಮನಿದ್ದಾನೆ. ಅವನ ಪ್ರತಿ ರಕ್ತದ ಕಣ ಕಣದಲ್ಲಿ ರಾಮನಿದ್ದಾನೆ. ಲಕ್ಷ್ಮಣನ ಶರೀರ ಮತ್ತು ಆತ್ಮಗಳೆರಡರಲ್ಲಿಯೂ ರಾಮನೇ ಇದ್ದಾನೆ. ಹೀಗಿರುವಾಗ ನಾಟಿರುವ ಬಾಣ ಲಕ್ಷ್ಮಣನಿಗಲ್ಲ. ರಾಮನಿಗೆ. ಹೀಗಾಗಿ ನೋವು, ಯಾತನೆ ರಾಮನಿಗೆ ಆಗುತ್ತಿದೆಯೇ ಹೊರತು ಲಕ್ಷಣನಿಗಲ್ಲ. ಹೀಗಾಗಿ ಹನುಮಂತ ನೀನು ನಿಶ್ಚಿಂತೆಯಿಂದ ವಿಶ್ರಾಂತಿಯನ್ನು ಪಡೆದು ಹೊರಡಬಹುದು. ನೀನು ಹೋಗುವವರೆಗೆ ಸೂರ್ಯೋದಯವಾಗುವುದಿಲ್ಲ. ಲಕ್ಷ್ಮಣನಿಗಂತೂ ಏನು ಆಗುವುದಿಲ್ಲ” ಎಂದು ಶಾಂತ ಚಿತ್ತದಿಂದ, ಅದೇ ಪ್ರಸನ್ನತೆಯಿಂದ ಊರ್ಮಿಳೆ ನುಡಿಯುತ್ತಾಳೆ.

ಊರ್ಮಳೆಯ ಮಾತುಗಳಿಂದ ಹನುಮಂತನ ಆನಂದದ ಅಶ್ರುಧಾರೆ ಹರಿಯುತ್ತದೆ.

ಸ್ನೇಹಿತರೆ ರಾಮ ರಾಜ್ಯದ ಕಲ್ಪನೆಯನ್ನು ರಾಮನೆನೋ ಊಹಿಸಿಕೊಂಡಿದ್ದ. ನಿಜ ಅರ್ಥದಲ್ಲಿ ರಾಮ ರಾಜ್ಯದ ಕಲ್ಪನೆಯನ್ನು ನಿಜಗೊಳಿಸಿದವರು ಶ್ರೀರಾಮನ ಕೌಟುಂಬಿಕ ಸದಸ್ಯರೆ. ಕೆಲವೊಮ್ಮೆ ಸೀತೆ, ಕೆಲವೊಮ್ಮೆ ಊರ್ಮಿಳೇ. ಕೆಲವೊಮ್ಮೆ ಭರತ ಶತ್ರುಘ್ನ, ಲಕ್ಷ್ಮಣ, ಇನ್ನೂ ಕೆಲವೊಮ್ಮೆ ಕೌಸಲ್ಯ, ಸುಮಿತ್ರೆಯರು.

ಇವರೆಲ್ಲರ ಪ್ರೇಮ, ತ್ಯಾಗ, ಸಮರ್ಪಣೆಯೇ ರಾಮ ರಾಜ್ಯವಾಗಲು ಕಾರಣವಾಗಿದ್ದು.

ಇಂದಿನ ಪ್ರಸ್ತುತ ಕಾಲದಲ್ಲಿಯೂ ಕೂಡ, ಪ್ರತಿಯೊಂದು ಕುಟುಂದಲ್ಲಿ ಒಬ್ಬ ಸದಸ್ಯ, ಇನ್ನೊಬ್ಬ ಸದಸ್ಯನ ಒಳಿತಿಗೆ ಚಿಂತಿಸಿದರೆ ಮನೆಯೇ ಮಂದಿರವಾಗುತ್ತದೆ.

ಈ ದೇಶದಲ್ಲಿರುವ ಒಂದು ಧರ್ಮದವರು, ಇನ್ನೊಂದು ಧರ್ಮದವರನ್ನು ಪ್ರೀತಿಯಿಂದ ನೋಡಿದಾಗ, ಒಬ್ಬರು ಇನ್ನೊಬ್ಬರಿಗಾಗಿ ತ್ಯಾಗ ಮಾಡಲು ಸಿದ್ದರಿದ್ದಾಗ, ಒಬ್ಬರು ಇನ್ನೊಬ್ಬರ ಒಳಿತನ್ನು ಬಯಸುವವರಾದಾಗ ಅದೇ ರಾಮ ರಾಜ್ಯವಲ್ಲವೇ! ಹೀಗಾದಾಗ ಆ ರಾಮ ರಾಜ್ಯದ ಕಲ್ಪನೆ ವಾಸ್ತವದಲ್ಲಿ ನನಸಾಗಬಹುದು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW