ಊರಿನ ಜನ ಬಾವಿಯಲ್ಲಿ ಹಾಲು ಹಾಕಿದರೂ ಬಾವಿಯಲ್ಲಿ ಹಾಲು ಇರಲಿಲ್ಲ…ಇದರಿಂದ ಬರಗಾಲವು ನೀಗಲಿಲ್ಲ… ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…
ಒಂದು ಊರಲ್ಲಿ ಸುಮಾರು ವರ್ಷಗಳಿಂದ ಮಳೆಯಿಲ್ಲದೆ ನೀರು ಇಲ್ಲದಂತಾಗಿ ಬರಪರಿಸ್ಥಿತಿ ನಿರ್ಮಾಣವಾಯಿತು. ನೀರಿಗೆ ಹಾಹಾಕಾರ ಪ್ರಾರಂಭವಾಯಿತು. ನೀರಿಲ್ಲದೆ ಪ್ರಾಣಿ ಪಕ್ಷಿಗಳ ಸಂಕುಲ ಸಾಯಲು ಶುರುವಾದವು. ತದನಂತರ ಊರಲ್ಲಿಯ ಜನರೂ ಒಬ್ಬೊಬ್ಬರೇ ಮರಣ ಮೃದಂಗವನ್ನು ಬಾರಿಸಲು ಪ್ರಾರಂಭಿಸಿದರು.
ಚಿಂತಾಕ್ರಾಂತರಾದ ಊರಿನ ಜನರು ಊರಲ್ಲಿರುವ ಒಬ್ಬನೇ ಒಬ್ಬ ಆಚಾರ್ಯನ ಬಳಿ ಹೋಗಿ ಇದಕ್ಕೆ ಪರಿಹಾರವನ್ನು ಕೇಳಿದರು. ಆಚಾರ್ಯನು ಎಲ್ಲ ಪೂಜೆ-ಪುನಸ್ಕಾರಗಳನ್ನು ಮಾಡಿ ಎಲ್ಲ ವಿಧಿ – ವಿಧಾನಗಳನ್ನು ಮುಗಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕೊನೆಗೆ ಊರಿನ ಜನರು ದೇವರ ಮೊರೆಯನ್ನು ಹೋಗಿ ಪ್ರಾರ್ಥಿಸಲು ಪ್ರಾರಂಭಿಸಿದರು. ಅಲ್ಲೊಂದು ದೇವವಾಣಿ ಪ್ರಕಟವಾಯಿತು. ಊರಿನ ಜನಗಳೆ ಕೇಳಿ, ಇವತ್ತು ರಾತ್ರಿ ನಿಮ್ಮೂರಿನ ಹೊರಗಿರುವ ಬಾವಿಯಲ್ಲಿ ಪ್ರತಿಯೊಬ್ಬರು ಹೋಗಿ ಒಂದು ಲೋಟ ಹಾಲನ್ನು ಹಾಕಬೇಕು ಆದರೆ ಬಾವಿಯೊಳಗೆ ಇಣುಕಿ ನೋಡಕೂಡದು. ಹೀಗೆ ಮಾಡಿದಲ್ಲಿ ಬೆಳಿಗ್ಗೆ ನೀವೆಲ್ಲ ಎದ್ದೆಳುವದರೊಳಗಾಗಿ ನಿಮ್ಮೂರಿನ ನೀರಿನ ಬರ ನೀಗುವುದು ಎಂದು ಹೇಳಿ ಅದೃಷ್ಯವಾಯಿತು.

ಫೋಟೋ ಕೃಪೆ : google
ಆ ಊರಿನ ಜನ ಆ ರಾತ್ರಿ, ಪ್ರತಿಯೊಬ್ಬರೂ ಬಂದು ಒಂದೊಂದು ಲೋಟ ಹಾಲನ್ನು ಬಾವಿಯಲ್ಲಿ ಹಾಕಿ ಹೋಗತೊಡಗಿದರು. ಆದರೆ ಆ ಊರಿನಲ್ಲಿರುವ ಜಿಪುಣನೊಬ್ಬ ಯೋಚನೆ ಮಾಡಿದ, ಎಲ್ಲರೂ ಹಾಲನ್ನು ಹಾಕುವಾಗ ನಾನೊಂದು ಲೋಟ ನೀರನ್ನು ಹಾಕಿದರೆ ಯಾರಿಗೂ ಕಾಣದು ಎಂದು ಅವನು ಒಂದು ಲೋಟ ನೀರನ್ನು ಹಾಕಿ ಹೊರಟು ಹೋದ. ಇದು ಯಾರಿಗೂ ಊರಿನಲ್ಲಿ ತಿಳಿಯಲೇ ಇಲ್ಲ.
ಊರಿನ ಜನರು ಬೆಳಗಾಗುವದಕ್ಕಾಗಿ ಕಾಯಲು ಪ್ರಾರಂಭಿಸಿದರು ಏಕೆಂದರೆ ಹೀಗೆ ಮಾಡಿದಲ್ಲಿ ಬೆಳಗಿನಜಾವದ ಒಳಗಾಗಿ ಊರಿನವರ ಬರ ಪರಿಹಾರವಾಗುವುದೆಂದು ದೇವವಾಣಿ ಆಗಿತ್ತು. ಆದರೆ ಆಶ್ಚರ್ಯಕರವಾಗಿ ಬೆಳಿಗ್ಗೆ ಊರಿನವರ ನಿರೀಕ್ಷೆಯಂತೆ ಯಾವುದೇ ನೀರಿನ ಬರ ಪರಿಹಾರವಾಗಲಿಲ್ಲ, ಮಳೆಯೂ ಬರಲಿಲ್ಲ. ಅಯ್ಯೋ ನೀರಿನ ಬರ ನೀಗಲೇ ಇಲ್ಲ ಏನಿದು ಆಶ್ಚರ್ಯ ಎಂದು ಎಲ್ಲರೂ ಆಶ್ಚರ್ಯಚಕಿತರಾಗಿ ಬಂದು ಬಾವಿಯೊಳಗೆ ಇಣುಕಿ ನೋಡಿದರು.
ಆಶ್ಚರ್ಯಕರ ಸಂಗತಿ ಏನೆಂದರೆ ಆ ಬಾವಿಯೊಳಗೆ ಒಂದು ಹನಿಯು ಹಾಲು ಇರಲಿಲ್ಲ, ಎಲ್ಲವೂ ನೀರಿನಿಂದಲೇ ತುಂಬಿತ್ತು. ಹಾಲಿನ ಬದಲಾಗಿ ನೀರು ಹೇಗೆ ಬಂತು ಎಂದು ಎಲ್ಲರೂ ಯೋಚಿಸುವಾಗ ನಿಜ ಸಂಗತಿ ತಿಳಿಯಿತು.
ಅವತ್ತು ರಾತ್ರಿ ಆ ಊರಿನ ಜಿಪುಣನ ತಲೆಯಲ್ಲಿ ಬಂದ ವಿಚಾರವೆಂದರೆ, ಎಲ್ಲರೂ ಹಾಲನ್ನು ಹಾಕುವಾಗ ನಾನೊಂದು ಲೋಟ ನೀರನ್ನು ಹಾಕಿದರೆ ಏನು ವ್ಯತ್ಯಾಸವಾದೀತೂ, ಯಾರಿಗೇ ತಿಳಿದಿತೂ ಎನ್ನುವದು. ಇದೇ ಯೋಚನೆ ಊರಿನ ಪ್ರತಿಯೊಬ್ಬರ ತಲೆಯಲ್ಲಿ ಬಂದು ಎಲ್ಲರೂ ಹಾಲಿನ ಬದಲು ನೀರನ್ನೆ ಬಾವಿಗೆ ಹಾಕಿ ಹೋಗಿದ್ದರು. ಹೀಗಾಗಿ ಆ ಊರಿನ ಬರ ಪರಿಹಾರವಾಗಲೇ ಇಲ್ಲ.
ಸ್ನೇಹಿತರೇ, ಜವಾಬ್ದಾರಿ ಎನ್ನುವುದು ನಾನೊಬ್ಬ ಮಾಡುವುದರಿಂದ ಏನು ಬದಲಾಗುವುದು ಎಂದು ನಕಾರಾತ್ಮಕವಾಗಿ ಯೋಚನೆ ಮಾಡುವುದಲ್ಲ. ಜಗದ ಬದಲಾವಣೆ ಪ್ರತಿಯೊಬ್ಬನಿಂದಲೇ ಪ್ರಾರಂಭವಾಗುವುದು. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಹೋದಾಗಲೇ ಜಗತ್ತಿನ ಪರಿವರ್ತನೆ ತಾನಾಗಿಯೇ ಆಗುವುದು. ವ್ಯಕ್ತಿಗತ ಜವಾಬ್ದಾರಿಗಳನ್ನು ಇನ್ನೊಬ್ಬರ ತಲೆಯ ಮೇಲೆ ಹಾಕಲು ನಿಸ್ಸಿಮರಾದ ನಾವುಗಳು ಇನ್ನಾದರು ಜವಾಬ್ದಾರರಾಗುತ್ತೆವೆಯೇ?

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ಜೀವನದಲ್ಲಿ ಯಾರು ತೃಪ್ತರು
- ಕಣ್ಣೊಳಗಿನ ಮೊದಲ ದೃಷ್ಟಿಕೋನ
- ಸೋಲಿಲ್ಲದ ಸರದಾರ
- ಡಾ ರಾಜಶೇಖರ ನಾಗೂರ
