ಹೆತ್ತ ಕಂದನನ್ನು ಬಿಟ್ಟುಹೋದ ಆ ಹೆಣ್ಣು ಹೆಣ್ಣಷ್ಟೇ, ತಾಯಿಯಲ್ಲ. ಬೀದಿಗೆ ಬಂದು ಅನಾಥವಾಗಬೇಕಿದ್ದ ಮಗುವನ್ನು ಒಪ್ಪಿ ಅಪ್ಪಿ ಸಾಕಿ ಸಲಹುವ ಜವಾಬ್ದಾರಿ ಹೊತ್ತ ಈ ಹೆಣ್ಣು ತಾಯಿಯಷ್ಟೇ ಅಲ್ಲ, ದೇವತೆ. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…
ಹೆರಿಗೆಗಾಗಿ ಜಿಲ್ಲಾಸ್ಪತ್ರೆ ಸೇರಿದ್ದ ಹೆಣ್ಣು ಮಗಳೊಬ್ಬಳು ತನಗೆ ಹುಟ್ಟಿದ ಕೂಸನ್ನು ಬಿಟ್ಟು ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿಯಾದಳು. ಅಲ್ಲಿ ಗದ್ದಲ ಗಲಾಟೆ ಪ್ರಾರಂಭವಾಯಿತು. ಯಾರು? ಏನು? ಹೇಗೆ? ಎಂಬ ಪ್ರಶ್ನೆಗಳು ಉದ್ಬವವಾಗಿ ವಿಚಿತ್ರ ಸಂದರ್ಭ ಏರ್ಪಟ್ಟಿತು. ಮಗುವಿನ ಆಕ್ರಂದನ ಎಲ್ಲರನ್ನು ಸೆಳೆಯಲು ಪ್ರಾರಂಭಿಸಿತು. ಆ ಒಂದೆರಡು ದಿನದ ಹಸುಗೂಸನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಒಪ್ಪಿಸುವುದೇ ಅಥವಾ ಯಾರಾದರೂ ಮಕ್ಕಳಿಲ್ಲದವರಿಗೆ ಕೊಡುವುದೋ ಹೀಗೆ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
ಕೆಲವು ಸಂದರ್ಭಗಳಲ್ಲಿ ತಂದೆ ತಾಯಿಗಳಿಬ್ಬರೂ ಕಾಲವಾದಾಗ, ಬಂಧು ಬಳಗವೆಲ್ಲವಿದ್ದರೂ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳದ ಇಂದಿನ ಕಾಲದಲ್ಲಿ ಯಾರೊಬ್ಬರು ವಾರಸುದಾರರಿಲ್ಲದೆ ಅನಾಥವಾದ ಆ ಮಗುವನ್ನು ಯಾರು ತಾನೇ ಎತ್ತಿಕೊಂಡಾರು!!

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)
ಆ ಬಟ್ಟೆಯಲ್ಲಿ ಸುತ್ತಿಟ್ಟ ಆ ಮಗುವಿನ ಅಳು ಎಲ್ಲರ ಕಣ್ಣಂಚಲ್ಲಿ ನೀರೆನೋ ತರಿಸಿತು ಆದರೆ ಯಾರೊಬ್ಬರೂ ಆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ಎಲ್ಲರ ಅನುಕಂಪದಲ್ಲಿ ಆ ಮಗು ಅನಾಥವಾಗಿಯೇ ಅಳುತ್ತಿತ್ತು. ಎಲ್ಲರೂ ‘ಅಯ್ಯೋ ಪಾಪ’ ಎಂದು ಮುಂದೆ ಸಾಗುತ್ತಿದ್ದರು.
ಎಲ್ಲರೂ ಕೈ ಬಿಟ್ಟಾಗ ಮೇಲಿನವನು ಕೈ ಹಿಡಿಯುತ್ತಾನಂತೆ. ಯಾವುದೋ ಒಂದು ಕೇಸ್ ಮೇಲೆ ಡಿಸ್ಟ್ರಿಕ್ ಹಾಸ್ಪಿಟಲ್ ಲಿ ಲೇಡಿ ಕಾನ್ಸ್ಟೆಬಲ್ ಒಬ್ಬಳ ರಾತ್ರಿ ಡ್ಯೂಟಿ ಇತ್ತು. ಅವಳು ಇತ್ತೀಚೆಗೆ ಮದುವೆಯಾಗಿದ್ದ ಹೆಣ್ಣುಮಗಳು. ಅವಳು ಆ ಸಂದರ್ಭವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಆ ಮಗುವನ್ನು ಎತ್ತಿಕೊಂಡು ಈ ಮಗುವಿನ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಕಾನೂನಿನ ಯಾವುದೇ ಪ್ರಕ್ರಿಯೆಗೆ ನಾನು ಸಿದ್ಧಳೆಂದು ಹೇಳಿ ಆ ಮಗುವನ್ನು ತನ್ನ ಹೆಗಲಿಗೆ ಹಾಕಿಕೊಂಡು ನಡೆಯುತ್ತಾಳೆ.
ಮನೆಯಲ್ಲಿ ಸಂಶಯಾತ್ಮಕ ಗಂಡ ಅತ್ತೆ ಎಲ್ಲರೂ ಇದನ್ನು ಒಪ್ಪಲಾರರು. ಅದನ್ನೆಲ್ಲಾ ಧಿಕ್ಕರಿಸಿ ಆ ಎರಡು ದಿನದ ಮಗುವನ್ನು ಸಲುಹಲು ಪ್ರಾರಂಭಿಸುತ್ತಾಳೆ. ಆ ಮಗುವಿಗೆ ಎಲ್ಲಾ ಸೌಕರ್ಯವನ್ನು ಒದಗಿಸಿ ತನ್ನ ಮಗುವಿನಂತೆಯೇ ನೋಡಿಕೊಳ್ಳುತ್ತಾಳೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಟು ನವೋದಯ, ಸೈನಿಕ ಶಾಲೆಯ ಕೋಚಿಂಗ್ ಗೆ ಹಾಕುತ್ತಾಳೆ. ಇಂದು ಆ ಮಗು 15-16 ವರ್ಷದವನಿರಬಹುದು. ತುಂಬಾ ಚೂಟಿ ಮತ್ತು ಜಾಣ. ತಾಯಿಯ ಆರೈಕೆ ಇಲ್ಲದೆ ಪ್ರಾಣಬಿಡಬೇಕಿದ್ದ ಆ ಮಗು ಇಂದು ನಗು ನಗುತ್ತಾ ಜೀವಿಸಿದೆ. ಎಲ್ಲೋ ಅನಾಥವಾಗಿ ಅಲೆದಾಡಬೇಕಿದ್ದ ಮಗು ಇಂದು ಜವಾಬ್ದಾರಿಯುತವಾಗಿ ಓದುತ್ತಾ ಸಂತೋಷವಾಗಿದೆ.
ಹೆತ್ತ ಕಂದನನ್ನು ಬಿಟ್ಟುಹೋದ ಆ ಹೆಣ್ಣು ಹೆಣ್ಣಷ್ಟೇ, ತಾಯಿಯಲ್ಲ. ಬೀದಿಗೆ ಬಂದು ಅನಾಥವಾಗಬೇಕಿದ್ದ ಮಗುವನ್ನು ಒಪ್ಪಿ ಅಪ್ಪಿ ಸಾಕಿ ಸಲಹುವ ಜವಾಬ್ದಾರಿ ಹೊತ್ತ ಈ ಹೆಣ್ಣು ತಾಯಿಯಷ್ಟೇ ಅಲ್ಲ. ದೇವತೆ.
ಈ ಘಟನೆ ಕಾಲ್ಪನಿಕವಲ್ಲ. ಆ ಹೆಣ್ಣು ಕಾಲ್ಪನಿಕ ಕನ್ಯೆಯಲ್ಲ. ನನ್ನ ಶಾಲಾ ಸಹಪಾಠಿ. ಅವಳ ಈ ಮಾನವೀಯ ನಡೆಯು ಹೆಣ್ಣಿನ ಮೇಲಿನ ನನ್ನ ಗೌರವವನ್ನು ದ್ವಿಗುಣಗೊಳಿಸಿದ್ದು ಸುಳ್ಳಲ್ಲ.
ಇನ್ನೊಂದು ಮಹತ್ವದ ವಿಷಯವೇನೆಂದರೆ ಜಾತಿ, ಮತ, ಪಂಥ ಎಂದು ದ್ವೇಷ ಹುಟ್ಟುಹಾಕುವ ಇಂದಿನ ಸಮಾಜದ ದೃಷ್ಟಿಯಲ್ಲಿ ಆ ಮಗು ಬೇರೆ ಧರ್ಮಕ್ಕೆ ಸೇರಿದ್ದು, ಅದನ್ನು ಹೊತ್ತು ತಂದ ಈ ಮಹಿಳೆ ಬೇರೆ ಧರ್ಮಕ್ಕೆ ಸೇರಿದವಳು ಆದರೆ ಸೃಷ್ಟಿಯ ದೃಷ್ಟಿಯಲಿ ಅವರಿಬ್ಬರೂ ದೇವರ ಧರ್ಮಕ್ಕೆ ಸೇರಿದವರು ಎನ್ನುವುದು ನನ್ನ ಅಭಿಪ್ರಾಯ.

ಅದಕ್ಕೆ ಇರಬೇಕು ಶ್ರೀ ಜಿ. ಎಸ್. ಶಿವರುದ್ರಪ್ಪನವರು
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಎಂದಿದ್ದು.
‘ಜವಾಬ್ದಾರಿ’ ಎನ್ನುವ ಪದದ ಅರ್ಥವು ತುಂಬಾ ವಿಶಾಲವಾದದ್ದು ಎಂದೆನಿಸಿದ್ದು ದಿಟ. ಜವಾಬ್ದಾರಿ ಎನ್ನುವುದು ಕೇವಲ ನಮ್ಮ ನಮ್ಮ ಕುಟುಂಬಕ್ಕೆ ಸೀಮಿತಗೊಳಿಸಿ ನೋಡುವುದಲ್ಲ. ದೇಶ, ಭಾಷೆ, ಮಾನವೀಯತೆ ಹೀಗೆ ವಿವಿಧ ನೆಲೆಯಲ್ಲಿ ನಾವೆಲ್ಲಾ ಅದನ್ನು ನೋಡಬೇಕಾಗಿದೆ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ‘ರಾಮರಾಜ್ಯ’ ವೆಂದರೆ…!
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ವಚನಕ್ಕೊಂದು ಕಥೆ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ಭಾವನಾ ದ್ರವ್ಯ
- ಜೀವನದಲ್ಲಿ ಯಾರು ತೃಪ್ತರು
- ಕಣ್ಣೊಳಗಿನ ಮೊದಲ ದೃಷ್ಟಿಕೋನ
- ಸೋಲಿಲ್ಲದ ಸರದಾರ
- ನಾನೊಬ್ಬ ಮಾಡದಿರೆ ಏನಾದೀತು!!!
- ‘ತಾಳಿದವನು ಬೆಳೆದಾನು’
- ಮೂರೂವರೆ ನಿಮಿಷದ ಭಾಷಣ-ಎಲ್ಲೆಡೆ ತಲ್ಲಣ
- ಭೂ ತಾಯಿ
- ಅವನಂತಾಗೋಣ
- ಶಕ್ತಿಗೆ ಮಾತ್ರ ದೇಹ ದಾರ್ಡ್ಯತೆ, ಯುಕ್ತಿಗಲ್ಲ..
- ಒಳ್ಳೆಯದು ಒಳ್ಳೆಯವರನ್ನು ಸೆಳೆಯುತ್ತೆ
- ಊರಿಗೆ ಬಾ ಎಂದ ಗೆಳೆಯನ ಮೃತದೇಹ ಹೊತ್ತು ಹೋದೆ
- ವಿಚಾರ ಬದಲಾಗಲಿ… ಬದುಕೇ ಬದಲಾಗುತ್ತೆ
- ಭಾಗ್.. ಮಿಲ್ಖಾ ಭಾಗ್ (ಓಡು.. ಮಿಲ್ಖಾ ಓಡು)
- ಡಾ. ರಾಜಶೇಖರ ನಾಗೂರ
