ಶೃಂಗೇರಿಯ ಜಗತ್ ಪ್ರಸಿದ್ಧ ಶಾರದಾ ಪೀಠವನ್ನು ನೋಡುವುದರ ಜೊತೆಗೆ ಅಲ್ಲಿಯ ಸುತ್ತಲಿನ ನಿಸರ್ಗದ ಸವಿಯ ಕುರಿತು ವಾಣಿ ಜೋಶಿ ಅವರು ತಮ್ಮ ಅನುಭವದ ಪುಟ್ಟ ಲೇಖನವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಸುತ್ತಲೂ ಪರ್ವತಗಳು, ನಡುವೆ ಗುಡಿಗಳು. ಪದಗಳಿಗೆ ನಿಲುಕದ ಶೃಂಗೇರಿ. ವನಸಿರಿ ಶೃಂಗ +ಗಿರಿ= ಶೃಂಗೇರಿಯಾಗಿದೆ ಎನ್ನಬಹುದು. ಶ್ರೀಮಂತ ಪ್ರಾಕೃತಿಕ ಸೌಂದರ್ಯ ಹೊದ್ದು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ತುಂಗಾ ತಟದಲ್ಲಿರುವ ಅತ್ಯಂತ ಮಹಿಮಾನ್ವಿತ ಸ್ಥಳ ಶೃಂಗೇರಿ.
ಅಭಯಾರಣ್ಯ, ದಟ್ಟ ಕಾಡುಗಳ ಮಧ್ಯೆ ಇರುವ ಶಿಖರಗಳೆಲ್ಲವನ್ನು ಆಧ್ಯಾತ್ಮಿಕ ಕ್ಷೇತ್ರವನ್ನಾಗಿಸಿದವರು ಅದ್ವೈತ ವೇದಾಂತ ಪ್ರತಿಪಾದಕರು ಶ್ರೀ ಆದಿ ಶಂಕರಚಾರ್ಯರು ಎಂದು ಬಹುತೇಕವಾಗಿ ಎಲ್ಲರಿಗೂ ತಿಳಿದಿರುವುದೇ ವಿಷಯ. ಶೃಂಗೇರಿಲ್ಲಿ ಜಗತ್ ಪ್ರಸಿದ್ಧ ಶಾರದಾ ಪೀಠವಿರುವುದರಿಂದ ಮೊದಲು ತಾಯಿಯ ದರ್ಶನ ಪಡೆದು ಬರುವುದು ಎಲ್ಲರ ವಾಡಿಕೆ. ನಾಲ್ಕು ಗಿರಿ ಶಿಖರದಲ್ಲಿ, ಸುತ್ತೆಲ್ಲಾ ಕಾಡು ಶಾಂತವಾದ, ಸ್ವಚ್ಛವಾದ ವಾತಾವರಣದಲ್ಲಿ ಕಾಲಭೈರವ, ಆಂಜನೇಯ, ಕಾಳಿ ಮತ್ತು ವನದುರ್ಗೆ ಎಂಬ ನಾಲ್ಕು ದಿಕ್ಕ ಪಾಲಕರ ಮಧ್ಯೆ ಶಾರದಾ ಮಾತೆಯನ್ನು ಕುಳ್ಳಿರಿಸಿ ವಿರಾಜಮಾತೆಯಾಗಿ, ಮೆರೆಯುವಂತೆ ಪವಿತ್ರ ಕ್ಷೇತ್ರವನ್ನಾಗಿಸಿದ ಪರಿ ಅದ್ಭುತ…!!!!!
ಇದರ ಜೊತೆಗೆ ವಿದ್ಯಾ ಶಂಕರ ಸನ್ನಿಧಿ, ತೋರಣ ಗಣಪತಿ ದೇವಸ್ಥಾನ, ಜನಾಧ೯ನ ದೇವಸ್ಥಾನ, ನರಸಿಂಹ ವನ, ಮಲಹಾನಿಕೇಶ್ವರ ದೇವಸ್ಥಾನ, ಚತುವಿ೯ದ್ಯೇಶ್ವರ ಸನ್ನಿಧಿ
(ಹಳೇ ಶೃಂಗೇರಿ), ಸೂರ್ಯ ನಾರಾಯಣ ಸನ್ನಿಧಿ, ಶಂಕರ ಹಿಲ್ಸ್, ಋಷ್ಯಶೃಂಗ (ಕಿಗ್ಗ) ಇವುಗಳು ಪ್ರಸಿದ್ಧಿ ಪಡೆದ ದೇವಸ್ಥಾನಗಳು. ಹೀಗೆ ಗಿರಿಗಳಲ್ಲೆಲ್ಲ ಗುಡಿಗಳಿವೆ. ಇಲ್ಲಿ ಎಲ್ಲವೂ ತೀರ್ಥ ಕ್ಷೇತ್ರಗಳಿದ್ದು, ಎಲ್ಲವನ್ನು ನೋಡಲೇಬೇಕಾದಂತಹ ಮಂದಿರಗಳಿವೆ.
ಶೃಂಗೇರಿಯಿಂದ ೨೦ ಕೀ.ಮೀ ಅಂತರದಲ್ಲಿ ‘ಹರಿಹರಪುರ ಮಠ’ವಿದೆ, ಇದು ಬಹುಶಃ ಬಹಳಷ್ಟು ಪ್ರವಾಸಿಗರಿಗೆ ತಿಳಿದಿಲ್ಲ. ಇಲ್ಲಿ ಕಲ್ಲಿನಲ್ಲೇ ಕೆತ್ತನೆ ಮಾಡಿದ ಬೃಹತ್ ದೇವಾಲಯವೊಂದು ಇದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಇದು ಮಾಡುತ್ತದೆ, ಶೃಗೇರಿ ಕಡೆಗೆ ಹೋದಾಗ ಇಲ್ಲಿಗೆ ತಪ್ಪದೆ ಭೇಟಿ ನೀಡಿ. ದರ್ಶನ ಪಡೆಯಿರಿ. ಇದು ಕೂಡ ಶಂಕರಾಚಾರ್ಯರು ಸ್ಥಾಪಿಸಿದ ಲಕ್ಷ್ಮಿ ನರಸಿಂಹ ದೇವಸ್ಥಾನ.
ಇನ್ನು ನರಸಿಂಹ ವನದಲ್ಲಿ ಪ್ರತಿದಿನ ರಾತ್ರಿ ನಡೆಯುವ ಚಂದ್ರಮೌಳೀಶ್ವರ ಪೂಜೆ, ದಿನಾಲೂ ನಡೆಯುವ ಬೆಳ್ಳಿ ರಥೋತ್ಸವ, ಶಾರದಾಂಬೆ ಸನ್ನಿಧಿಯಲ್ಲಿ ಪ್ರತಿ ಶುಕ್ರವಾರ ರಾತ್ರಿ ನಡೆಯುವ ಚಿನ್ನದ ರಥೋತ್ಸವ….. ಹೀಗೆ ನಡೆಯುತ್ತಿರುವ ಹಲವಾರು ಪೂಜೆಗಳು, ಸೇವೆಗಳು, ಮಂತ್ರ ಘೋಷಗಳಿಂದ ಕಣಾ೯ನಂದ, ದೃಶ್ಯಾನಂದ, ಕಡೆಗೆ ಹೃದಯಾನಂದವನ್ನೂ ಮೀರಿದಂಥಾ ಅನುಭೂತಿ ಸಿಗುವುದು ಮಾತ್ರ ಖಚಿತ.
ಪ್ರತಿದಿನ ಬರುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡುವ ಎರಡೂ ಹೊತ್ತಿನ ಅನ್ನದಾಸೋಹ ರುಚಿಯಾಗಿದ್ದು, ತಾಯಿ ಪ್ರೀತಿಗೆ ಪಾತ್ರರಾಗಿರಿ. ತಾಯಿ ಶಾರದಾಂಬೆ ಸನ್ನಿಧಿ ಹಾಗೂ ಶೃಗೇರಿಯ ಸುತ್ತಮುತ್ತಲಿನ ವರ್ಣನೆಯನ್ನು ಎಷ್ಟೇ ಮಾಡಿದರೂ ಮುಗಿಯುದಿಲ್ಲ. ನನ್ನ ಒಂದು ಅನುಭವವನ್ನು ಇಲ್ಲಿ ಕಲೆಹಾಕಿದ್ದೇನೆ. ನೀವು ಕೂಡಾ ಶೃಗೇರಿಗೆ ತಪ್ಪದೆ ಭೇಟಿ ನೀಡಿ…
- ಲೇಖನ ಹಾಗೂ ಕ್ಯಾಮೆರಾ ಹಿಂದಿನ ಕಣ್ಣು : ವಾಣಿ ಜೋಶಿ
