ಆತ್ಮಹತ್ಯೆಗೂ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ. ಆತ್ಮಹತ್ಯೆಯೇ ಪರಿಹಾರವಲ್ಲ. ಬಂದ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬೇಕು. ವಿನಃಹ ಆತ್ಮಹತ್ಯೆಗೆ ಕೊರಳೊಡ್ಡುವ ಕೆಟ್ಟ ಕೆಲಸ ಮಾಡಬಾರದು. ಮಕ್ಕಳ ಪರೀಕ್ಷಾ ಸಂದರ್ಭದಲ್ಲಿ ಶಿಕ್ಷಕಿ ಡಿ.ಅನ್ಸರಿ ಮೊಯಿನ್ ಅವರು ಬರೆದ ಈ ಲೇಖನ ಯುವಜನತೆ ತಪ್ಪದೆ ಓದಬೇಕು…
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಹಾಗೂ ದಿನಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವಾಗಿ ಓದುತ್ತಿರುವ ವಿಷಯವೆಂದರೆ ಆತ್ಮಹತ್ಯೆ. ಅದರಲ್ಲೂ ಯುವ ಜನತೆಯಲ್ಲಿ ಹೆಚ್ಚು. ಆತ್ಮಹತ್ಯೆಗೆ
ಇಂತಹದ್ದೇ ಎಂಬ ಕಾರಣವಿಲ್ಲ, ಕ್ಷುಲ್ಲಕ ಘಟನೆಗಳು, ಸೂಕ್ಷ್ಮ ವಿಚಾರಗಳು ಕಾರಣವಾಗಬಹುದು. ಪ್ರೀತಿ ವೈಫಲ್ಯ, ಸಾಲಬಾಧೆ, ಪೋಷಕರ ಬುದ್ದಿಮಾತು, ಸಾಂಸಾರಿಕ ಕಲಹ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಂಶಗಳ ಪ್ರಭಾವ ಹೀಗೆ ಹತ್ತು ಹಲವು ನಿದರ್ಶನಗಳನ್ನು ನೀಡಬಹುದು.
ಜೀವನದಲ್ಲಿ ಕಷ್ಟ ಮತ್ತು ಸುಖ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುಖ ಬಂದಾಗ ಹಿಗ್ಗಿ, ಕಷ್ಟ ಕಾಲದಲ್ಲಿ ಪರಿಹಾರ ಮಾರ್ಗ ಕಾಣದೆ ಸಾವಿನ ಕದ ತಟ್ಟುವುದರಲ್ಲಿ ಸುಲಭ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದರಿಂದ ನಮ್ಮ ಆಲೋಚನಾಶಕ್ತಿ ಎಷ್ಟು ಸಂಕುಚಿತಗೊಂಡಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂದಿನ ಯುವಜನತೆಯಲ್ಲಿ ದುಡಿಕಿನ ನಿರ್ಧಾರಗಳು ಹೆಚ್ಚಾಗಿವೆ. ತಾಳ್ಮೆ, ಸಹನೆ, ಆತ್ಮವಿಶ್ವಾಸ, ಆಲೋಚನಾ ಶಕ್ತಿಯಂತಹ ಮೌಲ್ಯಗಳ ಬೆಳವಣಿಗೆ ಕುಂಟಿತಗೊಂಡಿವೆ. ನಿಷ್ಪ್ರಯೋಜಕ ನಿಲುವುಗಳು ನಮ್ಮನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತವೆಂಬ ಅರಿವು ಮೂಡಬೇಕಿದೆ.

ಫೋಟೋ ಕೃಪೆ : google
ಇಂದಿನ ಬಿಡುವಿಲ್ಲದ ಜೀವನದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳಿಂದ ಹೊರಬರದೆ ಗೊಂದಲದಲ್ಲಿ ಸಿಲುಕಿ ಮಾನಸಿಕ ಖಿನ್ನತೆಯಿಂದ ಸಾವಿನ ದಾರಿ ತುಳಿಯುತ್ತಿದ್ದಾರೆ. ಮಾನಸಿಕಒತ್ತಡಕ್ಕೆ ಸಿಲುಕಿದ ವ್ಯಕ್ತಿಗೆ ಚಿಕ್ಕಸಮಸ್ಯೆಯು ಪರ್ವತದಂತೆ ಕಾಣುತ್ತದೆ. ಅದರಿಂದ ಹೊರ ಬರುವ ತನ್ನೆಲ್ಲಾ ಪ್ರಯತ್ನಗಳನ್ನು ನಿಲ್ಲಿಸಿ ಕೈಚೆಲ್ಲಿ ನಿಲ್ಲುವ ನಿರ್ಧಾರ. ಕತ್ತಲೆಯನ್ನು ಆವರಿಸಿ ನಿಲ್ಲುವ ಅವನ ಮನಸ್ಸಿಗೆ ಬೆಳಕಿನ ಆಶಾಕಿರಣ ಕಾಣದ ಅಂಧತ್ವದ ಮುಸುಕು ಆವರಿಸಿಬಿಡುತ್ತದೆ. ಕತ್ತಲೆ ನಂತರ ಬೆಳಕುಂಟು ಎಂಬ ಮಾತನ್ನು ಕೇಳಿಸಿಕೊಳ್ಳದಂತಹ ಕಿವುಡನಾಗುತ್ತಾನೆ. ಕೊನೆಗೆ ಅವನಿಗೆ ಕಾಣುವ ಏಕೈಕ ಮಾರ್ಗ ಆತ್ಮಹತ್ಯೆ.
“ಪುತ್ರ ಶೋಕಂ ನಿರಂತರಂ” ಎಂಬಂತೆ ಮಕ್ಕಳನ್ನು ಕಳೆದುಕೊಂಡ ಪೋಷಕರು ಜೀವನ ಪರ್ಯಂತ ನೋವಿನ ಭಾರವನ್ನು ತಮ್ಮ ಎದೆಯಲ್ಲಿ ಹೊರಬೇಕಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡರಂತೂ, ಅದಕ್ಕೆ ರೆಕ್ಕೆಪುಕ್ಕ ಕಟ್ಟಿ ಮತ್ತೇನೋ ಕಾರಣಕ್ಕೆ ಹೀಗಾಯಿತೆಂದು ಬಿಂಬಿಸುವ ಜನರೇ ಹೆಚ್ಚು. ಇದು ಹೆತ್ತ ಕರಳಿಗೆ ನುಂಗಲಾರದ ತುತ್ತಾಗಿ ಅವಮಾನದ ಪಾಲಾಗಬೇಕಾಗುತ್ತದೆ. ಇಂತಹ ಘಟನೆಗಳು ಸಂಭವಿಸಿದಾಗ ಇದನ್ನು ನಿದರ್ಶನವಾಗಿ ನೀಡಿ ಆತ್ಮಹತ್ಯೆಯಿಂದ ಉಂಟಾಗುವ ಸಾಧಕಬಾಧಕ ಅಂಶಗಳ ಬಗ್ಗೆ ಮನೆಯಲ್ಲಿ ಮುಕ್ತವಾಗಿ ಚರ್ಚಿಸಿ ಯುವ ಪೀಳಿಗೆಯಲ್ಲಿ ಜಾಗೃತಿಯನ್ನುಂಟು ಮಾಡಬೇಕು.
ಆತ್ಮಹತ್ಯೆ ಎಂಬುದು ಸಮಸ್ಯೆಗೆ ಪರಿಹಾರವೂ ಅಲ್ಲ, ಗಳಿಸುವುದು ಏನೂ ಇಲ್ಲ. ‘ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ’ ಎಂಬಂತೆ, ಇದ್ದು ಸಾಧಿಸಬೇಕೇ ಹೊರತು ಸತ್ತು ಸಾಧಿಸುವುದೇನೂ ಇಲ್ಲ. ಇರುವ ಸಮಸ್ಯೆಗಳ ಜೊತೆಗೆ ಇನ್ನಷ್ಟು ನೋವನ್ನು ಉಳಿಸಿ ಹೋಗುವುದಷ್ಟೆ. ಇದರಿಂದ ಪ್ರಯೋಜನವಾದರೂ ಏನೆಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುವಷ್ಟು ಆತ್ಮಮಂಥನ ಒಮ್ಮೆಯಾದರೂ ಮಾಡಬೇಕು. ಇದರಿಂದಾಗುವ ಪರಿಣಾಮಗಳೇನು ಎಂಬ ಮನೋಭಾವ ಯುವಜನತೆಯಲ್ಲಿ ಮೂಡಬೇಕು. ಆಗಲೇ ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ಹೆಚ್ಚುತ್ತದೆ. ಇದಕ್ಕೆ ಸಹಕಾರಿಯಾಗಿ ಕುಟುಂಬದಲ್ಲಿ ಆತ್ಮೀಯ ವಾತಾವರಣ ಹಾಗೂ ಅಭಿಪ್ರಾಯಗಳ ಹಂಚಿಕೆಗೆ ಮುಕ್ತ ಅವಕಾಶ ಕಲ್ಪಿಸಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಛಾಪು ಮೂಡಿಸಬೇಕು. ಹೆಚ್ಚು ಮೌಲ್ಯಯುತ ಅಂಶಗಳನ್ನು ಶಾಲಾ ಹಂತದಿಂದಲೇ ಮಕ್ಕಳಲ್ಲಿ ಬೆಳೆಸಬೇಕಿದೆ. ಜೊತೆಗೆ ಸಾಮಾಜಿಕ ವ್ಯವಸ್ಥೆಯು ಸಹಕಾರಿಯಾಗಿ ನಿಲ್ಲಬೇಕು.
ಆತ್ಮಹತ್ಯೆಗೆ ಕೊರಳೊಡ್ಡುವ ಯುವಜನರೆ ನಿಮಗೊಂದು ಮನವಿ ‘ಆತ್ಮಹತ್ಯೆಗೂ ಮುನ್ನ ಆತ್ಮಾವಲೋಕನವಿರಲಿ’…
- ಡಿ.ಅನ್ಸರಿ ಮೊಯಿನ್ – ಶಿಕ್ಷಕರು. ಗೌರಿಬಿದನೂರು.
