“ಸುಪಾರಿ” ಪುಸ್ತಕ ಪರಿಚಯ – ಹೆಚ್ ವಿ ಮೀನ

ಖ್ಯಾತ ಲೇಖಕರಾದ ಶ್ರೀ ಕುಂವೀ ಅವರ “ಸುಪಾರಿ” ಕಾದಂಬರಿಯ ಕುರಿತು ಹೆಚ್ ವಿ ಮೀನ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : “ಸುಪಾರಿ”
ಲೇಖಕರು : ಶ್ರೀ ಕುಂವೀ (ಯಾನೆ ಕುಂಬಾರ ವೀರಭದ್ರಪ್ಪ )
ಪ್ರಕಾಶನ : ಸ್ವಪ್ನ ಬುಕ್ ಹೌಸ್
ಬೆಲೆ : 450/-
ಪ್ರಥಮ ಮುದ್ರಣ : ಜನವರಿ 2023
ನಂಬರ್ : 40114455
7022122121

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಪರಿಷತ್ ನಿಂದ ನೃಪತುಂಗ ಪ್ರಶಸ್ತಿ….. ಹೀಗೆ ಇನ್ನೂ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಲೋಕಪ್ರಿಯ ಲೇಖಕರಾದ ಶ್ರೀ ಕುಂವೀ ಅವರ “ಸುಪಾರಿ” ಕಾದಂಬರಿಯ ಪರಿಚಯವನ್ನು ಮಾಡಿಸಲು ನನಗೆ ಸೂಕ್ತ ಸಾಹಿತ್ಯ ಜ್ಞಾನದ ಅರ್ಹತೆ ಇಲ್ಲದಿದ್ದರೂ ಪುಸ್ತಕ ಪರಿಚಯವನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ತಪ್ಪುಗಳಿದ್ದರೆ ಕ್ಷಮಿಸಿ.

ಹಾದಿ ಇಲ್ಲದ ಕಡೆ ಹಾದಿಯನ್ನು ನಿರ್ಮಿಸಿಕೊಳ್ಳುತ್ತಾ ಹೆಜ್ಜೆ ಹಾಕುತ್ತಿದ್ದ ಆಕೆಯು ತನ್ನ ಅಭಿಮುಖವಾಗಿ ಬರುತ್ತಿದ್ದ ಶಿವರಾಮ ಶರ್ಮನಿಗೆ ತನ್ನ ಕೈಯಲ್ಲಿದ್ದ ಕೂಸನ್ನು ಆತನ ವಶಕ್ಕೆ ಒಪ್ಪಿಸುತ್ತಾ…. “ಇನ್ನು ಮುಂದೆ ಇವನು ನಿಮ್ಮ ಮಗ….ಇವನನ್ನು ಹಂತಕರಿಂದ ರಕ್ಷಿಸಿ ” ಎಂದು ಹೇಳಿ ಅಲ್ಲಿಂದ ಕಣ್ಮರೆಯಾಗುತ್ತಾಳೆ. ಸಂತಾನ ವಂಚಿತರಾಗಿದ್ದ ಶಿವರಾಮ ಶರ್ಮ ಅವರು ಆ ಗಂಡು ಮಗುವನ್ನು ತಮ್ಮ ಕರುಳ ಕುಡಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ಸಂಸ್ಕೃತ ಪಂಡಿತರಾಗಿದ್ದ ಶರ್ಮ ಅವರು ಆ ಮಗುವಿಗೆ ಬಾಲ್ಯದಲ್ಲಿಯೇ ಅಷ್ಟಾದಶ ಪುರಾಣಗಳನ್ನು ಪರಿಚಯಿಸಿದರು. ಈ ಪುರಾಣಗಳಲ್ಲಿ ಆ ಹುಡುಗ ಸಿದ್ಧಾರ್ಥನಿಗೆ ಇಷ್ಟವಾದದ್ದು ” ಗರುಡ ಪುರಾಣ “. ನಂತರದ ದಿನಗಳಲ್ಲಿ ತನನ್ನು ಹಂತಕರಿಂದ ದೂರವಿಟ್ಟಿದ್ದ ತನ್ನ ಸಾಕು ತಂದೆಯವರನ್ನು ಬಹಳ ವರುಷಗಳ ಕಾಲ ಅವನು ನೋಡಲೇ ಇಲ್ಲ. ತನ್ನ ತಂದೆ-ತಾಯಿ ಎಲ್ಲಿದ್ದಾರೆ? ಹೇಗಿದ್ದಾರೆ? ಬದುಕಿದ್ದಾರ? ಇಲ್ಲವಾ! ಎಂಬ ನೋವನ್ನು ಯಾರಿಗೂ ತಿಳಿಯದಹಾಗೆ ಅನುಭವಿಸುತ್ತಿದ್ದ ಸಿದ್ಧಾರ್ಥ ಅವರ ತಂದೆಯ ದಾರುಣ ಹತ್ಯೆಯು ಸಿದ್ಧಾರ್ಥಅವರನ್ನು ಸಾಹಿತ್ಯ ಲೋಕದಲ್ಲಿ ಸಿಲುಕಿಸುತ್ತದೆ. ಜೊತೆಗೆ ಅವರ ಸಾಕು ತಂದೆಯ ಆಸೆಯೂ ಅದೇ ಆಗಿದ್ದು….. ಸಿದ್ಧಾರ್ಥ ಅವರಿಗೆ ಶೋಷಕರ ಗುಂಡಿಗೆ ಬಲಿಯಾದ ತಂದೆಯ ಹಂತಕನನ್ನು ಪತ್ತೆ ಮಾಡಲು ಪದೇ ಪದೇ ಎಚ್ಚರಿಸುತ್ತಿದ್ದ ಕಾರಣ,ಹಂತಕನ ನಿರಂತರ ಹುಡುಕಾಟಕ್ಕಾಗಿ ಸಿದ್ಧಾರ್ಥ ಅವರು ಹೆಸರಾಂತ ಲೇಖಕರಾಗುತ್ತಾರೆ. ತಮ್ಮ ಸಂಸ್ಕೃತ ಗುರುಗಳ ಮಾರ್ಗದರ್ಶನದಂತೆ “ಹಂತಕರ ಅನ್ವೇಷಣೆಯಲ್ಲಿರುವವರು “ಗರುಡಪುರಾಣ”ದ ಅಧ್ಯಯನ ಮಾಡುವುದು ಸೂಕ್ತ” ಎಂಬ ಸಲಹೆಯನ್ನು ಪಾಲಿಸಿ ತನ್ನ ತಂದೆಯ ಹಂತಕನ ಹುಡುಕಾಟ ನಿರಂತರವಾಗಿ ನಡೆಸುತ್ತಾ ಕೊನೆಯದಾಗಿ “ಶಾನವಾಸಪುರ”ಕ್ಕೆ ಬರುತ್ತಾರೆ. ಸುಪಾರಿ ರಹಸ್ಯ ಕೋಟೆಯನ್ನು ಭೇದಿಸುತ್ತಾರೆ. ಆ ಭದ್ರ ಕೋಟೆಯಲ್ಲಿ ಭೇಟಿ ಆದವರು.

ಅವರೇ………

ದಯಾನಿಧಿಆಚಾರ್ಯರು…..ವಯಸ್ಸು ಸುಮಾರು ಅರವತ್ತೈದು ಎಪ್ಪತ್ತರ ಸಾತ್ವಿಕ ತೇಜಸ್ಸಿನ ದುಂಡನೆ ಮುಖವುಳ್ಳ ಸರಳ ಸಜ್ಜನಿಕೆ ಸುಸಂಸ್ಕಾರವಂತ ಎಂದೇ ಹೆಸರು ಪಡೆದಿದ್ದ ಹಿರಿಯ ನಾಯಕನಾದ ಇವರು …. “ಅತೃಪ್ತ ಆತ್ಮಗಳನ್ನು ತೃಪ್ತಿ ಪಡಿಸುವವರು “. ಅಪರಕರ್ಮ ವಿದ್ಯಾಪಾರಂಗತರಾದ ದಯಾನಿಧಿಯವರು “ಗರುಡ ಪುರಾಣದ” ಆಚರಣೆಯಲ್ಲಿ ಅಪಾರ ನಂಬಿಕೆ ಇಟ್ಟವರು. ಸರಸ್ವತಿ ಪುತ್ರ ಎಂದೇ ಪ್ರಸಿದ್ಧರಾದವರು ದಯಾನಿಧಿಯವರು.

ಹುಟ್ಟಿದ್ದು ಎಲ್ಲೋ! ಬೆಳೆದದ್ದು ಎಲ್ಲೋ! ಪರಸ್ಪರ ಬಂಧನಗಳಿಲ್ಲದ ವಿಚಿತ್ರ ಸಂಬಂಧಗಳ ನಡುವೆ ಅಲೆಮಾರಿ ಬದುಕನ್ನು ಕಟ್ಟಿಕೊಂಡಿದ್ದ ಸಿದ್ಧಾರ್ಥ ಅವರು ದಯಾನಿಧಿ ಅವರ ಪ್ರೀತಿಯ ನುಡಿಗಳಿಗೆ ಭಾವುಕರಾಗುತ್ತಾರೆ. ಅವಧೂತರೆಂದೇ ಜನರ ಹೃದಯದಲ್ಲಿ ನೆಲೆಸಿದ್ದ ದಯಾನಿಧಿಯವರ ಆತ್ಮ ಕಥೆಯನ್ನು ಬರೆಯುವ ನೆಪದಲ್ಲಿ ಸಿದ್ದಾರ್ಥ ಅವರು ದಯಾನಿಧಿಯವರ ಸ್ನೇಹವನ್ನು ಗಳಿಸಿ ಅವರ ಹೃದಯಕ್ಕೆ ಹತ್ತಿರವಾಗುತ್ತಾರೆ. ಇಬ್ಬರಲ್ಲೂ ತಂದೆ ಮಗನ ಬಾಂಧವ್ಯ ಹುಟ್ಟುತ್ತದೆ.

ಜೀವನದಲ್ಲಿ ರೋಸಿದ್ದ ತಾಯಿಯೊಬ್ಬಳು ಒಂದು ವರ್ಷ ಪ್ರಾಯದ ತನ್ನ ಕೂಸನ್ನು ಬುಟ್ಟಿಯಲ್ಲಿರಿಸಿ ಸಮುದ್ರದಲ್ಲಿ ಎಸೆದುಬಿಡುತ್ತಾಳೆ. ಅದೇ ಸಮುದ್ರದ ಮತ್ತೊಂದು ದಿಕ್ಕಿನ ಕೈವಲ್ಯಾಪುರದ ರಂಗನಾಥ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಹಾಗೂ ಸಂತಾನ ವಿಲ್ಲದೆ ಕೊರಗುತ್ತಿದ್ದ ವಾಸುದೇವಾಚಾರ್ಯ ದಂಪತಿಗಳಿಗೆ ಸೂರ್ಯನಿಗೆ ಜಲತರ್ಪಣ ನೀಡುವ ಸಮಯದಲ್ಲಿ ದೊರಕಿದ ಈ ಕೂಸನ್ನು ದೇವರ ಕರುಣೆ ಅದು ಜಾತಿಗಳಿಗೆ ಅತೀತ ಎಂದು ಭಾವಿಸಿ ತಮ್ಮ ಕಣ್ಣುಗಳಲ್ಲಿರಿಸಿಕೊಂಡರು. ಕೂಸಿನ ಬೆಳವಣಿಗೆಯನ್ನು ನೋಡಿ ಆನಂದಿಸಿದರು. ಸಂಸ್ಕೃತ ಪಂಡಿತರಾದ ಇವರು ಅಪರಕರ್ಮ ಶ್ರಾದ್ಧಾ ಕ್ರಿಯಾಕರ್ಮಗಳನ್ನು ಧರ್ಮಕ್ಕೆ ಚ್ಯುತಿ ಬಾರದ ಹಾಗೆ ನಿರ್ವಹಿಸುತ್ತಿದ್ದರು. ಬಹಳ ಜಾಣನಾಗಿದ್ದ ಬಾಲಕ “ದಯಾನಿಧಿ”ಯಲ್ಲೂ ಈ ವಿದ್ಯೆಯನ್ನು ಕಲಿಯುವ ಆಸಕ್ತಿ ಮೂಡಿತು…..ಆದರೇ ದಯಾನಿಧಿಗೆ ಇನ್ನೂ ಉಪನಯನ ಆಗಿರುವುದಿಲ್ಲ…..ಇದಕ್ಕೆ ಕಾರಣವಾದರೂ ಏನಿರಬಹುದು!!!?

ಖರ್ಚಿನಲ್ಲಿ ಉಪನಯನ ವಿವಾಹಕ್ಕೆ ಸಮವಿತ್ತು. ಉಪನಯನ ಐಚ್ಚಿಕವೋ, ಮುಖ್ಯವೋ!……ಬಾಲಕ ದಯಾನಿಧಿಗೆ ಅದರ ವಿರಾಟ ರೂಪದ ಅರಿವು ಬಂದದ್ದು……
ಅಂದು…….

“ಶಾಸ್ತ್ರೋಕ್ತ ರೀತಿಯಲ್ಲಿ ಉಪನಯನ ಮಾಡುವುದಕ್ಕೆ ಅವನೇನು ನಮ್ಮ ಸ್ವಂತ ಮಗನೇ! ಯಾರ ಮಗನೋ ಎನೋ ಅವನ ಕುಲ ಗೋತ್ರ ಗೊತ್ತಿಲ್ಲ! ಪೂರ್ವೋತ್ತರ ತಿಳಿದಿದ್ದರೂ ನೀವು ಉಪನಯನ ಮಾಡಲು ನಿರ್ಧರಿಸಿದ್ದೀರಲ್ಲಾ! ನೀವು ನಿಮ್ಮ ಬುದ್ದಿಯನ್ನು ಎಲ್ಲಿಟ್ಟಿದ್ದೀರ! ”

ತಾಯಿ ಸುಶೀಲಾಬಾಯಿಯ ಮಾತುಗಳನ್ನು ಕೇಳಿಸಿಕೊಂಡ ದಯಾನಿಧಿಯು ತಂದೆ ತಾಯಿಯನ್ನು ಬಿಟ್ಟು ಪಲಾಯನ ಮಾಡುವ ಮನಸ್ಸಾಯಿತು ಆದರೇ ಎಳೇ ವಯಸ್ಸಿವನು ಎಲ್ಲಿ ಹೋದಾನು!

“ನನ್ನದು ಯಾವ ಜಾತಿ! ಬಾಲಕನಿಗೆ ಆ ಕ್ಷಣದವರೆಗೆ ತಿಳಿದಿರಲಿಲ್ಲ”.

ಸ್ವಲ್ಪ ದಿನಗಳಲ್ಲಿ ಬಾಲಕ ದಯಾನಿಧಿಯ ಉಪನಯನ ಕಾರ್ಯವು ಜರುಗುತ್ತಿದ್ದಾಗ ಅಲ್ಲಿಗೆ ಬಂದಿದ್ದ ಬಳಗದವರಲ್ಲಿ ಒಬ್ಬರಾದ ಗೋವಿಂದಾಚಾರ್ಯರು “ಈ ಉಪನಯನವನ್ನು ನಿಲ್ಲಿಸಿ ” ಎಂದು ಜೋರಾಗಿ ಕೂಗಿದರು…. ಆಗ ಅಲ್ಲಿ ನಡೆದ ಘಟನೆಯಿಂದ ಉಪನಯನದ ಪೀಠಸ್ಥನಾಗಿದ್ದ ದಯಾನಿಧಿಯ ಎದೆಯಲ್ಲಿ ಜ್ವಲಾಮುಖಿ ಸ್ಪೋಟಿಸುತ್ತದೆ ….

“ಉಪನಯನ ಸಾಂಗೋಪಾಂಗವಾಗಿ ಸಾಗಲಿ” ಎಂದು ಹೇಳಲು ದಯಾನಿಧಿಯ ತಂದೆಯ ಪರವಾಗಿ ಅಲ್ಲಿ ಯಾರೂ ಇರಲಿಲ್ಲ….ಅಲ್ಲಿಂದ ಕ್ಷೌರಿಕ ಸೇರಿದಂತೆ ಎಲ್ಲರೂ ಹೊರಟು ಹೋಗುತ್ತಾರೆ.

“ಮರುದಿನ ಗೋವಿಂದಾಚಾರ್ಯರ ಹತ್ಯೆ ನಡೆದಿರುತ್ತದೆ “.

ಇಲ್ಲಿಗೆ ನಾನು ಪುಸ್ತಕ ಪರಿಚಯವನ್ನು ಮುಗಿಸುತ್ತಿದ್ದೇನೆ. ಮುಂದಿನ ಪುಟಗಳಲ್ಲಿ ರೋಚಕ ರಹಸ್ಯಗಳೊಂದಿಗೆ ಮುಂದೇನಾಯಿತು ಎಂದು ಅರಿಯಲು ನೀವು ಪುಸ್ತಕವನ್ನು ಕೊಂಡು ಓದಿ ಶ್ರೀ ಕುಂವೀ ಅವರ ವೈಶಿಷ್ಟ್ಯ ಬರಹವನ್ನು ಆನಂದಿಸಿ.

ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಹಲವಾರು ಹಿಂಸಾತ್ಮಕ ಕ್ರೌರ್ಯ ಘಟನೆಗಳ ಬಗ್ಗೆ ಪರಿಚಯವಿದ್ದ ಕುಂವಿ ಅವರು ನಕ್ಸಲೈಟರ ಹಾಗೂ ಪ್ರತಿಸ್ಪರ್ಧಿಗಳ ಹತ್ಯೆಗಳ ಬಗ್ಗೆ ಹಾಗೂ ಜಮೀನ್ದಾರರು ತಾವು ಮಾಡಿದ ಕೃತ್ಯಕ್ಕೆ ತಾವೇ ಬಲಿಯಾದ ಘಟನೆಗಳ ಕುರಿತಾಗಿ, ರಾಯಲಸೀಮಾದ ಜಮೀನ್ದಾರರ ಕ್ರೌರ್ಯಗಳ ನೈಜ ಚಿತ್ರಣವನ್ನು ತಮ್ಮಅನೇಕ ಕೃತಿಗಳಲ್ಲಿ ತಿಳಿಸಿದ್ದಾರೆ. ಹಾಗೆಯೇ ಸುಪಾರಿಹಂತಕರ ಜೊತೆ ಕೆಲವು ದಿನಗಳ ಕಾಲ ಒಡನಾಡಿ ಪಡೆದ ಅನುಭವದ ಹಿನ್ನೆಯಲ್ಲಿ ಒಂದು ಕಾದಂಬರಿಯನ್ನು ಬರೆಯಬೇಕೆಂಬ ಅವರ ಆಸೆಯು ಸುಮಾರು 15 ವರುಷಗಳ ನಂತರ ಜನವರಿ 2023 ರಲ್ಲಿ “ಸುಪಾರಿ” ಎಂಬ ಹೆಸರಿನಲ್ಲಿ ಹೊರಹೊಮ್ಮಿತು. ಅವರ ಅನುಭವಜನ್ಯ ಕಾದಂಬರಿ ಈ “ಸುಪಾರಿ”. ಸಮೃದ್ಧವಾಗಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಗಟ್ಟಿಸ್ಥಾನವನ್ನು ಗಳಿಸಿದ ಶ್ರೀ ಕುಂವೀ ಅವರ “ಸುಪಾರಿ” ಪತ್ತೇದಾರಿ ಕಾದಂಬರಿ ಒಂದು ವಿಶೇಷವಾದ ಕಥಾ ಹಂದರವನ್ನು ಹೊಂದಿದ್ದು ಇದರಲ್ಲಿ ಸಾಮಾಜಿಕ, ರಾಜಕೀಯ ಹಿನ್ನಲೆಯನ್ನು ಹೊಂದಿದ್ದು ಗರುಡಪುರಾಣದ ಬಗ್ಗೆ ಬೆಳಕನ್ನು ಹರಿಸಿ ಕೊನೆಯತನಕ ಓದುಗರ ಕುತೂಹಲವನ್ನು ಹೆಚ್ಚಿಸುತ್ತಾ ಬರಹಗಾರರಿಗೆ ಹಾಗೂ ಓದುಗರಿಗೆ ಕನ್ನಡ ಸಾಹಿತ್ಯದ ಬಗ್ಗೆ ಹೆಮ್ಮೆಯನ್ನು ಮೂಡಿಸಿದೆ.


  • ಹೆಚ್ ವಿ ಮೀನ – ಬೆಂಗಳೂರು.

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading