‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ

ಅಂದಿನ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಅಧಿಕಾರಾವಧಿಯಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಲವಾರು ಪ್ರಸಿದ್ಧ ಲೇಖಕರ ಕೃತಿಗಳನ್ನು ಪ್ರಕಟಿಸಲಾಗಿತ್ತು. ಅದರಲ್ಲಿ ‘ಗಳಗನಾಥರ’ ಈ ಐತಿಹಾಸಿಕ ಕಾದಂಬರಿ ಕನ್ನಡಿಗರ ಕರ್ಮ ಕಥೆಯೂ ಒಂದು. ಈ ಕೃತಿಯ ಕುರಿತು ಮಾಲತಿ ಭಟ್ ಅವರು ಓದುಗರ ಮುಂದೆ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ ಹೆಸರು: ಕನ್ನಡಿಗರ ಕರ್ಮ ಕಥೆ.
ಲೇಖಕರು: ಗಳಗನಾಥ.
ವಿಶ್ವ ಕನ್ನಡ ಸಮ್ಮೇಳನ ಬೆಂಗಳೂರು.
ಮುದ್ರಣದ ವರ್ಷ: ೧೯೧೬ & ೧೯೮೩.
ಪುಟ: ೩೩೬.
ಬೆಲೆ:ರೂ. ೩.೦೦.( ಹಳೆಯ ಬೆಲೆ)

***
ಅಂದಿನ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಅಧಿಕಾರಾವಧಿಯಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಲವಾರು ಪ್ರಸಿದ್ಧ ಲೇಖಕರ ಕೃತಿಗಳನ್ನು ಪ್ರಕಟಿಸಲಾಗಿತ್ತು. ಅದರಲ್ಲಿ ‘ಗಳಗನಾಥರ’ ಈ ಐತಿಹಾಸಿಕ ಕಾದಂಬರಿಯೂ ಒಂದು. ಐತಿಹಾಸಿಕ ಕಾದಂಬರಿಯನ್ನು ಬರೆಯುವುದು ಸುಲಭವಲ್ಲ. ಅದಕ್ಕೆ ಅಪಾರ ಅಧ್ಯಯನ ಅಗತ್ಯ. ಸಂಪೂರ್ಣ ಶುದ್ಧ ಕನ್ನಡ ಭಾಷೆ, ಸುಂದರ ಶಬ್ಧಗಳ ಬಳಕೆಯಿಂದ ಕೂಡಿದ ಈ ಕಾದಂಬರಿಯಲ್ಲಿ ಅಂದಿನ ವಿಜಯ ನಗರದ ವೈಭವ ಹಾಗೂ ವಿನಾಶದ ಅವಸಾನ ಎರಡನ್ನೂ ಕಣ್ಣಿಗೆ ಕಟ್ಟುವಂತೆ ಲೇಖಕರು ಅಧ್ಬುತವಾಗಿ ಬರೆದಿದ್ದಾರೆ.

ಕೃಷ್ಣ ದೇವರಾಯನ ಕಾಲದಲ್ಲಿ ವಿಜಯ ನಗರ ಸಾಮ್ರಾಜ್ಯವು ಉತ್ಕರ್ಷ ಹಾಗೂ ಸುಭಿಕ್ಷವಾಗಿತ್ತು. ಅವನ ರಾಣಿ ನಾಗಲಾ ದೇವಿ. ಸಿಂಹಾಸನದ ಗಾದಿಯ ಮೇಲೆ ವಿಶೇಷ ಹಕ್ಕು ಇರುವ ತನ್ನ ಅಣ್ಣನ ಮಕ್ಕಳನ್ನು ಸೆರೆಯಲ್ಲಿಟ್ಟು ಆತ ಅಧಿಕಾರಕ್ಕೆ ಬಂದಿದ್ದರಿಂದ ಆಗಲೇ ರಾಜ್ಯದಲ್ಲಿ ಒಳಸಂಚುಗಳು ಶುರುವಾಗಿದ್ದವು. ನೆರೆ ರಾಜ್ಯದ ಮುಸಲ್ಮಾನ ದೊರೆ ವಿಜಾಪುರದ ಆದಿಲ್ ಶಾಹನಿಗೆ ಆಗ ವಿಜಯನಗರದ ಅರಸನಾದ ಕೃಷ್ಣ ದೇವರಾಯನನ್ನು ಎದುರಿಸಲು ಧೈರ್ಯವಿರಲಿಲ್ಲ.

ವಿಜಯನಗರ ಸರದಾರನ ಮಗ ‘ರಾಮರಾಜ’ನೆಂಬ ಹಿಂದೂ ಯುವಕ ಮುಸ್ಲಿಂ ತರುಣಿಯೊಬ್ಬಳನ್ನು ಕಾಡಿನಲ್ಲಿ ಹುಲಿಯಿಂದ ಕಾಪಾಡಿದ್ದ. ಆಕೆಯ ಹೆಸರು ‘ಮೆಹೆರ್ಜಾನ್’. ಆಕೆಯ ಸೌಂದರ್ಯಕ್ಕೆ ಮಾರು ಹೋದ ರಾಮರಾಜ ಅವಳನ್ನು ಸಂಗಾತಿಯಾಗಿ ಪಡೆಯಲು ಬಯಸಿದಾಗ ಅವಳ ಸಾಕು ತಾಯಿ ಮಾರ್ಜಿನೆ ಇದು ಧರ್ಮ ವಿರುದ್ಧವಾಗುತ್ತದೆಂದು ವಿರೋಧಿಸಿದ್ದಳು.

ಆದರೆ ಇಬ್ಬರಿಗೂ ಪರಸ್ಪರ ಪ್ರೇಮ ಅಂಕುರಿಸಿದ್ದರಿಂದ ರಾಮರಾಜನು ತನ್ನ ಪ್ರೇಯಸಿ ಮೆಹೆರ್ಜಾನಳನ್ನು ‘ಕುಂಜವನ’ ಎಂಬ ಉದ್ಯಾನದ ಮನೆಯೊಂದರಲ್ಲಿ ಇರಿಸಿದ್ದನು. ಇಬ್ಬರೂ ಒಂದಷ್ಟು ವರ್ಷ ಸುಖವಾಗಿ ಅಲ್ಲಿ ವಾಸವಾಗಿದ್ದರು.

ಆದರೆ ರಾಜ್ಯದ ಬಗ್ಗೆ ಮಹತ್ವಾಕಾಂಕ್ಷೆಯುಳ್ಳ ಶೂರ ರಾಮರಾಜನಿಗೆ ಕೃಷ್ಣ ದೇವರಾಯನು ತನ್ನ ಮಗಳನ್ನು ಲಗ್ನ ಮಾಡಿಸಿ, ಅಳಿಯನಾದವನಿಗೆ ಮಂತ್ರಿ ಪದವಿಯನ್ನು ಕೊಡಬೇಕೆಂದು ಇಚ್ಛಿಸಿದ್ದನು. ಈ ಅವಕಾಶವನ್ನು ಕಳೆದು ಕೊಳ್ಳಲು ಸಿದ್ಧನಿರದ ರಾಮರಾಜ ಮೆಹೆರ್ಜಾನಳಿಂದ ವಿಷಯ ಗುಟ್ಟಾಗಿಟ್ಟು ರಾಜಕುವರಿಯನ್ನು ಮತ್ತೆ
ವಿವಾಹವಾಗಿದ್ದನು.

ಅಪರೂಪಕ್ಕೆ ಮೆಹರ್ಜಾನಳ ಬಳಿಗೆ ಹೋಗುತ್ತಿದ್ದ ರಾಮರಾಜ ತನ್ನನ್ನು ಉದಾಸೀನ ಮಾಡುತ್ತಿದ್ದಾನೆಂದು ಬೇಸರ ಗೊಂಡಿದ್ದವಳು ಈಗ ಅವನು ತನಗೆ ದ್ರೋಹವೆಸಗಿದ್ದು ಗೊತ್ತಾಗಿ ಖಿನ್ನಳಾಗಿದ್ದಳು. ಅಲ್ಲದೇ ಆ ಸಮಯದಲ್ಲಿ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಅವನ ಹಂಗು ತನಗಿನ್ನು ಬೇಡವೆಂದು ನಿರ್ಧರಿಸಿ, ಅವನು ಇದುವರೆಗೂ ತನಗಿತ್ತ ಒಡವೆ ವಸ್ತ್ರಗಳನ್ನು ಬಿಚ್ಚಿಟ್ಟು ದುಃಖದಿಂದ ಊರು ಬಿಟ್ಟು ಹೊರಟು ಹೋಗಿದ್ದಳು.!

ಮತ್ತೊಂದು ಮದುವೆಯಾದರೂ ಮೆಹೆರ್ಜಾನಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ರಾಮರಾಜ ಅವಳ ಕಣ್ಮರೆಯಿಂದ ಪಶ್ಚಾತ್ತಾಪದಿಂದ ಕಂಗಾಲಾಗಿದ್ದ. ! ಅವಳ ಶೋಧಕ್ಕಾಗಿ ‘ಧನಮಲ್ಲ’ ಎಂಬ ಕಾವಲುಗಾರನನ್ನು ನೇಮಿಸಿದ್ದ. ಆದರೆ ಎಷ್ಟು ಹುಡುಕಿಸಿದರೂ ಅವಳು ಸಿಗಲಿಲ್ಲ. ಈ ಕಾರಣಕ್ಕಾಗಿ ಧನಮಲ್ಲನಿಗೆ ಶಿಕ್ಷಿಸಿದ್ದ. ಇದು ಧನಮಲ್ಲನ ಹೃದಯದಲ್ಲಿ ಒಡೆಯನ ಮೇಲೆ ಸೇಡು ತೀರಿಸಿ ಕೊಳ್ಳುವ ವಿಚಾರ ಉತ್ಪನ್ನವಾಗುವಂತೆ ಮಾಡಿತು.

ಪ್ರೇಯಸಿಯ ಕಣ್ಮರೆ ಅವನ ಚಿತ್ತ ಸ್ವಾಸ್ತ್ಯ ಕೆಡಿಸಿದರೂ, ಅವನು ರಾಜ್ಯಭಾರದ ಪ್ರಭಲ ಮಹತ್ವಾಕಾಂಕ್ಷೆಯನ್ನು ಪೂರೈಸಿ ಕೊಳ್ಳುತ್ತಿದ್ದ.ರಾಜ್ಯದಲ್ಲಿ ತನ್ನ ಅಣ್ಣ ತಿರುಮಲನಿಗೆ ಸೇನಾಪತಿಯ ಅಧಿಕಾರ ಹಾಗೂ ಮಿತ್ರನಿಗೆ ರಾಜನ ಖಾಸಗೀ ಕಾರಭಾರಿ ಕೆಲಸ ಕೊಡಿಸಿದ್ದನು.

ಕೃಷ್ಣ ದೇವರಾಯನು ತನ್ನ ಮಗನು ರಾಜ್ಯಭಾರ ನಡೆಸುವುದನ್ನು ನೋಡಲು ಆಶಿಸಿದ್ದ. ಆದರೆ ಯಾರದೋ ವಿಷಪ್ರಾಶನದಿಂದ ಮಗ ಸತ್ತ ತರುವಾಯ ಪುತ್ರ ಶೋಕದಿಂದ ಕೊರಗಿ ಮರಣ ಹೊಂದಿದ. ನಂತರ ಅವರ ತಮ್ಮ ಅಚ್ಯುತರಾಯ ಆಡಳಿತಕ್ಕೆ ಬಂದ ಮೇಲೆ ರಾಮರಾಜನ ಪಕ್ಷವು ಕೆಲವು ವರ್ಷ ಅಜ್ಞಾತವಾಸ ಮಾಡಬೇಕಾಗಿ ಬಂದಿತು. ಅಲ್ಲಿಂದಲೇ ವಿಜಯನಗರದ ವಿನಾಶಾಂಕುರವೂ ಬೆಳೆಯ ತೊಡಗಿತ್ತು.

ಅಚ್ಯುತರಾಯ ರಾಜ್ಯಭಾರಕ್ಕೆ ಅಯೋಗ್ಯನಾಗಿದ್ದ. ಅವನ ಬಳಿ ಹೋಜೆ ತಿರುಮಲರಾಯ ಇರುವ ತನಕ ಆತನ ಸೂತ್ರ ಗೊಂಬೆಯಾಗಿದ್ದನು. ಅವನ ನಂತರ ಸದಾಶಿವ ರಾಯನನ್ನು ಸಿಂಹಾಸನದಲ್ಲಿ ಪಟ್ಟಕ್ಕೆ ಕೂರಿಸಿ ರಾಮರಾಜ ಅಧಿಕಾರ ನಡೆಸಿದನು. ತನ್ನ ಚತುರತೆಯಿಂದ ಆತ ಮತ್ತೆ ಉತ್ಕರ್ಷ ಹೊಂದಿದ.

ನಾಲ್ಕು ದಿಕ್ಕಿನ ಮುಸಲ್ಮಾನರ ಅರಸರೊಂದಿಗೆ ಒಪ್ಪಂದ ಮಾಡಿಕೊಂಡು ಯುದ್ಧವನ್ನು ತಡೆದ. ಅವನ ಆಳ್ವಿಕೆಯು ವಿಜಯನಗರ ರಾಜ್ಯದ ಅಭಿವೃದ್ಧಿಯ ಕಾಲವಾಗಿತ್ತು. ಆತ ತನ್ನನ್ನು ಎಂದೂ ‘ಸಾಮ್ರಾಟ’ನೆಂದು ಕರೆಸಿಕೊಳ್ಳದೇ ಜಾಣ್ಮೆಯಿಂದ ‘ಮಹಾ ಮಂಡಲೇಶ್ವರ’ ಎಂದು ಮಾತ್ರ ಕರೆಸಿಕೊಳ್ಳುತ್ತಿದ್ದನು.

ರಾಮರಾಜನು ಮುಸಲ್ಮಾನರ ನಾಲ್ವರು ಬಾದಶಹರಲ್ಲಿ ಕಲಹವನ್ನುಂಟು ಮಾಡಿ, ತಾನು ಒಮ್ಮೆ ಒಬ್ಬರಿಗೆ, ಮತ್ತೊಮ್ಮೆ ಮತ್ತೊಬ್ಬರಿಗೆ ಸಹಾಯ ಮಾಡುತ್ತಾ ಬಲಿಷ್ಠನಾಗ ತೊಡಗಿದನು. ಆತನ ಉತ್ಕರ್ಷವನ್ನು ಬಾದಶಹರು ಸೈರಿಸದಾದರು. ತಮ್ಮಲ್ಲಿ ಒಗ್ಗಟ್ಟಿಲ್ಲದೇ ಇಷ್ಟೆಲ್ಲಾ ಆಯಿತು ಎಂದು, ಹೊಸ ತಂತ್ರ ಹೂಡಿ ಆ ಕೆಲಸದ ಸಲುವಾಗಿ ಒಬ್ಬ ತರುಣ ವಕೀಲನನ್ನು ರಾಮರಾಜನ ದರ್ಬಾರಿಗೆ ಕಳಿಸಲಾಯಿತು. ಆತನಿಗೆ ಕುಂಜನವನದಲ್ಲಿ ತಂಗಲು ವ್ಯವಸ್ಥೆ ಮಾಡಿ ಕೊಡಲಾಗಿತ್ತು.

ಆ ವಕೀಲ ‘ರಣಮಸ್ತಖಾನ’ನ ಸುಂದರ ರೂಪ, ತೇಜಸ್ಸು ನೋಡಿ ರಾಮರಾಜನಿಗೆ ಸಂತೋಷವಾಗಿತ್ತು. ಆತನ ತಾಯಿಗೂ ಬಂಗಲೆಯ ಕೋಣೆಯನ್ನು ನೀಡಲಾಗಿತ್ತು.
ಸದಾ ಕುರಾನ್ ಪಠನ ಮಾಡುತ್ತಾ ಯೋಗಿನಿಯಂತೆಯೇ ಆಕೆ ಇರುತ್ತಿದ್ದಳು. ಆ ‘ಮಾಸಾಹೇಬಳಿಗೆ’ ಜೊತೆಯಾಗಿ ಲೈಲಾ ಎಂಬ ವಯಸ್ಸಾದ ದಾದಿ ಇದ್ದಳು.

ಒಮ್ಮೆ ಮುಸಲ್ಮಾನ ತರುಣಿಯೊಬ್ಬಳು ಸಂಗನಪಲ್ಲಿ ದರ್ಗಾದ ದರ್ಶನ ಮಾಡಲು ರಾಜ್ಯದ ಸೀಮೆಯಲ್ಲಿ ನಡೆದು ಹೋಗುತ್ತಿದ್ದಾಗ, ಆಕೆಯನ್ನು ಸಂಶಯಿಸಿ ‘ಬುರುಖಾ’ ತೆಗೆಸಿ ನೋಡಿ ರಾಮರಾಜನು ಅಪಮಾನ ಮಾಡಿದ್ದು ವಕೀಲ ರಣಮಸ್ತ ಖಾನನಿಗೆ ಅಸಮಾಧಾನವನ್ನುಂಟು ಮಾಡಿತ್ತು. ಆ ಸುಂದರಿಯ ಹೆಸರು ‘ನೂರ್ ಜಹಾನ್’. ಆಕೆಯ ಪರವಾಗಿ ನಿಂತ ರಣಮಸ್ತ ಖಾನನ ಮೇಲಿನ ಅಭಿಮಾನವೇ ಅವರಿಬ್ಬರ ಪ್ರೇಮಕ್ಕೆ ನಾಂದಿಯಾಗಿತ್ತು. !!

ಇತ್ತ ರಾಮರಾಜನಿಗೆ ರಣಮಸ್ತ ಖಾನನನ್ನು ನೋಡಿದಾಗಲೆಲ್ಲ ಮೆಹರ್ಜಾನಳ ನೆನಪು ಮೂಡಿ ಅವನು ತನ್ನ ಮಗನೇ ಇರ ಬಹುದೇ?…ಎನ್ನುವ ಸಂಶಯ ಕಾಡುತ್ತಿತ್ತು. ಅದು ಸತ್ಯವೇ ಎಂಬುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಅವನು ಸಫಲನಾದನೆ?…

ಮೆಹರ್ಜಾನಳನ್ನು ಅವನು ಮತ್ತೆ ಭೇಟಿಯಾದನೆ? …
ರಾಮರಾಜನಿಗೆ ಆತನು ತನ್ನ ಮಗನೆಂದು ಗೊತ್ತಾಗಿದ್ದು ಹೇಗೆ?…

ಇತ್ತ ನೂರ್ ಜಹಾನ್ ರಾಮರಾಜನಿಗೆ ಶತ್ರುವಾಗಿದ್ದಳು. ಅವಳು ರಣ ಮಸ್ತಖಾನ್ ಬಳಿ ಆತನನ್ನು ನಾಶ ಮಾಡ ಬೇಕೆಂದು ವಚನ ಪಡೆದು ವಿಜಾಪುರಕ್ಕೆ ವಾಪಸಾಗಿದ್ದಳು. ಬಾದಶಹರ ಕೃಪೆಯಿಂದ ರಣ ಮಸ್ತಖಾನನು ದಿನೇ ದಿನೇ ಉತ್ಕರ್ಷವನ್ನು ಪಡೆಯ ಹತ್ತಿದನು. ಈಗ ರಾಮರಾಜನ ಅಂತಃಕರಣವು ಪುತ್ರ ವಾತ್ಸಲ್ಯದಿಂದ ತುಂಬಿ ಹೋಗಿತ್ತು.ಆದರೆ ಮತ್ತೊಬ್ಬ ವಕೀಲನನ್ನು ಬಾದಶಹರು ನೇಮಿಸಿದ್ದರಿಂದ ಕುಂಜನವನದಲ್ಲಿ ಜಾಗ ಸಾಲದೇ ಹೋಗಿತ್ತು.

ಇದರಿಂದ ಒಳಗೇ ಸ್ನೇಹವಿದ್ದರೂ ಹೊರಗಡೆ ಶತ್ರುಗಳಂತೆ ನಟಿಸುತ್ತಾ, ರಾಮರಾಜ ಮತ್ತು ರಣಮಸ್ತಖಾನರು ರಹಸ್ಯವಾಗಿ ಭೇಟಿಯಾಗ ತೊಡಗಿದ್ದರು. ಒಳತಂತ್ರದ ಇದನ್ನು ತಾಯಿಗೆ ತಿಳಿಸದೇ ರಣಮಸ್ತ ಖಾನನು ಮಾತೃ ದ್ರೋಹವೆಸಗಿದನು!!.

ಆದರೆ ಅವನ ನಡೆ- ನುಡಿಗಳು ಮಾಸಾಹೇಬಳಿಗೆ ಸಂಶಯವನ್ನುಂಟು ಮಾಡಿದವು. ದುಸ್ವಪ್ನ ಕಂಡು ಅವರು ತಲ್ಲಣಿಸ ತೊಡಗಿದರು. ಮಗನ ಹಿಂದೆ ಧನಮಲ್ಲನೆಂಬ ಆ ಹಳೆಯ ಸಿಪಾಯಿಯನ್ನು ಪತ್ತೆಗೆ ಬಿಟ್ಟರು. ಸುದ್ದಿ ನಿಜವಾದಾಗ ಅವರಿಗೆ ದಶ ದಿಕ್ಕುಗಳು ಶೂನ್ಯವಾದವು.

ಬಾದಶಹರ ಪತ್ರ ಓದಿ ಮಾಸಾಹೇಬಳಿಗೆ ಮಗನ ಮೇಲೆ ಬೇಸರವಾಗಿತ್ತು. ಅತ್ತ ತನ್ನ ಅರಗಿಣಿ ನೂರ್ ಜಹಾನ್ ಳಿಗಾಗಿ ಮೊದಲೇ ಮಾತು ಕೊಟ್ಟಂತೆ ರಣಮಸ್ತಖಾನರು ತನ್ನ ಸ್ವಂತ ತಂದೆಯ ಶಿರಶ್ಚೇಧನ ಮಾಡಿ ತಾಯಿಗೆ ತನ್ನ ಪರಾಕ್ರಮವನ್ನು ತೋರಲೆಂದು ಹೋದಾಗ ಆಕೆ ಕುಸಿದಳು.!

ಸ್ವಂತ ಮಗನೇ ತಂದೆಯನ್ನು ಹತ್ಯೆ ಮಾಡಿದ್ದಕ್ಕೆ ಮಾಸಾಹೇಬ ದುಃಖಿಸುತ್ತಾ ಆ ರುಂಡದೊಡನೆ ತಾನೂ ಪುಷ್ಕರಿಣಿಯಲ್ಲಿ ಹಾರಿ ಪ್ರಾಣತ್ಯಾಗ ಮಾಡಿದಳು. ! ಹೀಗೆ ಆ ದಂಪತಿಗಳ ಅಂತ್ಯವಾಯಿತು. ಇಷ್ಟು ದಿನವೂ ತಾಯಿ ಬಚ್ಚಿಟ್ಟಿದ್ದ ರಹಸ್ಯವನ್ನು ತಿಳಿದ ರಣಮಸ್ತಖಾನರು ದಿಗ್ಭ್ರಾಂತರಾಗಿದ್ದ.ಇಷ್ಟು ಹೊತ್ತಿನ ತನಕ ಇದ್ದ ಆತನ ವಿಜಯ ಆನಂದ ಎಲ್ಲವೂ ತಾಯಿಯ ಜೊತೆಯಲ್ಲಿಯೇ ಮುಳುಗಿ ಹೋಗಿದ್ದವು.

ಇದುವರೆಗೂ ಎಲ್ಲವನ್ನೂ ಕಣ್ಣೆದುರೇ ನೋಡುತ್ತಾ ನಿಂತ ನೂರ್ ಜಹಾನಳಿಗೆ ತನ್ನ ಪ್ರೇಮಿಯಾಗಿದ್ದ ಆತ ಈಗ ‘ಕೊಲೆಗೆಡುಕ’ ಎನಿಸ ತೊಡಗಿತ್ತು. ಹಿಂದೂವಾಗಿದ್ದ ರಾಮರಾಜನೇ ಆತನ ತಂದೆ ಎಂದು ಗೊತ್ತಾದ ಮೇಲೆ ಅವನು ಹೀನ ಸಂತಾನವೆನ್ನಿಸಿ ರಣಮಸ್ತಖಾನನನ್ನು ತಿರಸ್ಕರಿಸಿ ಆಕೆ ಅವನನ್ನು ತೊರೆದು ಹೋದಳು.

ಅಲ್ಲಿಂದ ದಂಗೆ ಪ್ರಾರಂಭವಾಗಿತ್ತು. ! ಮುಸಲ್ಮಾನ ದೊರೆಗಳು ಸಿಕ್ಕ ಸಿಕ್ಕಲ್ಲಿ ಹಿಂದೂ ಸೈನ್ಯವನ್ನು ಸದೆ ಬಡಿದರು.ವಿಜಯ ನಗರ ಸಾಮ್ರಾಜ್ಯವು ದಿನೇ ದಿನೇ ನಾಶವಾಗತೊಡಗಿತು. ಇತಿಹಾಸಕಾರರು ಹೇಳುವಂತೆ ಈ ಸುಲಿಗೆಯಲ್ಲಿ ಕೋಳಿಯ ತತ್ತಿಯ ಗಾತ್ರದ ರಾಮರಾಜನ ಕುದುರೆಯ ಶಿರೋರತ್ನದಿಂದ ಹಿಡಿದು ಅಪಾರ ಸಂಪತ್ತು ಲೂಟಿಯಾಯಿತು.!!

ದರಿದ್ರರು ಮತ್ತು ಅರಸರು ಎಲ್ಲರೂ ಕರ್ಮಫಲವನ್ನು ಅನುಭವಿಸಿಯೇ ತೀರಬೇಕು ಎಂಬುದಾಗಿ ಲೇಖಕರು ಅದ್ಭುತವಾಗಿ ಈ ಕೃತಿಯ ಮೂಲಕ ಹೇಳಿದ್ದಾರೆ.


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW