ಕೊಳೆಗೇರಿ ಪದದ ಸುತ್ತ ಒಂದು ಜಿಜ್ಞಾಸೆ

ಕೊಳೆ ಇರುವ ಕೇರಿ ಕೊಳಗೇರಿ. ಕೊಳೆಗೇರಿಗಳೆಲ್ಲ ಕೊಳಗಳಿರುವ ಕೇರಿಗಳಾದರೆ ಕೊಳಚೆ ನಿರ್ಮೂಲನೆ ಮಂಡಳಿಯ ಕೆಲಸ ಹಗುರಾದೀತು. ಇದು ಒತ್ತಟ್ಟಿಗೆ ಇರಲಿ. ಇನ್ನೊಂದು ಸ್ವಾರಸ್ಯಕರ ಸಂಗತಿಯನ್ನು ಗಮನಿಸೋಣ. -ಕೆ ರಾಜಕುಮಾರ್, ತಪ್ಪದೆ ಮುಂದೆ ಓದಿ…

Slumಗೆ ಮೊದಲು ಅಂದರೆ 70ರ ದಶಕದವರೆಗೂ ಕನ್ನಡದಲ್ಲಿ ಕೊಳಚೆಪ್ರದೇಶ ಎಂದು ಬಳಸಲಾಗುತ್ತಿತ್ತು. ಸಮಾಜಕಾರ್ಯ (Social work) ವಿಭಾಗದ ಪ್ರಾಧ್ಯಾಪಕರಾಗಿದ್ದ ಡಾ. ಎಚ್.ಎಂ. ಮರುಳಸಿದ್ದಯ್ಯನವರು ಕೊಳೆಗೇರಿ ಎಂಬ ಸಂವಾದಿ ಪದವನ್ನು ಟೀಕಿಸಿದರು. ಪತ್ರಿಕೆಗಳಲ್ಲಿ ಶೀರ್ಷಿಕೆಯಾಗಿ ಬಳಸಲು ಕೊಳಚೆಪ್ರದೇಶ ಹೆಚ್ಚು ಸ್ಥಳ ಬೇಡುತ್ತಿತ್ತು. ಹಾಗಾಗಿ ಕೊಳೆಗೇರಿ ಎಂಬ ಸಂಕ್ಷಿಪ್ತ ಪದವನ್ನು ಟೀಕಿಸಿದಾಗ ಪತ್ರಿಕೆಗಳು ಸಂಭ್ರಮದಿಂದ ನಡೆಮಡಿ ಹಾಸಿ ಸ್ವಾಗತಿಸಿದವು. ಇದು ಬರಬರುತ್ತ ಕೊಳಗೇರಿ ಆಗುತ್ತದೆ ಎಂದು ಆಗಲೇ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರು ಹೇಳಿದ್ದರು. ಅಂತೆಯೇ ಆಯಿತು. ಕೊಳೆ ಇರುವ ಕೇರಿ ಕೊಳೆಗೇರಿ. ಆದರೆ ಇದು ಕೊಳ ಇರುವ ಕೇರಿ ಕೊಳಗೇರಿ ಎಂದು ಆಗಿಬಿಟ್ಟಿತು. ಇದು ಪದಸ್ವರೂಪದಲ್ಲಿ ಆದ ವ್ಯತ್ಯಾಸವಷ್ಟೇ ಅಲ್ಲ. ಅರ್ಥದಲ್ಲೇ ಆದ ವ್ಯತ್ಯಾಸ. ಆದರೆ ಆಗಿನ ಬಳಕೆಯಲ್ಲಿ ಪದದ ಅರ್ಥ ಮತ್ತು ರೂಪಗಳೆರಡೂ ಬದಲಾದ ಕೊಳಗೇರಿಯೇ ಬಹುತೇಕವಾಗಿ ಉಳಿದುಕೊಂಡಿತು. ಅಕ್ಷರ ಸಮರದಲ್ಲಿ ನಾಲಗೆಯೇ ಜಯವನ್ನು ದಾಖಲಿಸಿತು. ಇದಕ್ಕಾಗಿ ಮರುಗಬೇಕಾಗಿಯೂ ಇಲ್ಲ. ಸಂಭ್ರಮಿಸಬೇಕಾಗಿಯೂ ಇಲ್ಲ.

ಭಾಷೆ ಎಂಬುದು ನಿರಂತರ ಹರಿವ ಸಲಿಲ. ಅದು ತನ್ನ ಹರಿವಿನ ಪಥದಲ್ಲಿ ಬದಲಾಗುತ್ತ ಸಾಗುತ್ತದೆ. ಆದರೆ ಕಾಗುಣಿತ, ಸಂಧಿ, ಸಮಾಸ, ಕಾಲ, ವಚನಗಳ ಬಗೆಗೆ ಪರಿವೆ ಇರುವ ಪಂಡಿತರು, ವೈಯಾಕರಣಿಗಳು ಪದಗಳಲ್ಲಿ ಆಗುವ ಇಂಥ ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸುವುದಿಲ್ಲ. ಮೂಲ ಪದಗಳ ಬಗೆಗೆ ಅವರಿಗೊಂದಷ್ಟು ಮಮಕಾರ ಇದ್ದೇ ಇರುತ್ತದೆ. ಆದರೆ ಆಧುನಿಕ ಭಾಷಾ ವಿಜ್ಞಾನಿಗಳು ಈ ಮಮಕಾರವನ್ನು ತೊರೆದು ನಾಲಗೆಯ ಅಂಗಳದಿಂದ ಹೊರಟ ಎಲ್ಲ ಪದಗಳನ್ನೂ ಮಾನ್ಯ ಮಾಡುತ್ತಾರೆ. ಅಪಭ್ರಂಶವಿರಲಿ, ಅಪಸವ್ಯವೇ ಆಗಿರಲಿ ಸಮ್ಮತಿಯ ಮೊಹರನ್ನು ಒತ್ತಿಬಿಡುತ್ತಾರೆ. ಇಂತಹ ಅಕ್ರಮಗಳನ್ನೆಲ್ಲ ಸಕ್ರಮ ಮಾಡಿದರೆ ನುಡಿಯ ಗತಿಯೇನು ಎಂದು ವೈಯಾಕರಣಿಗಳು ವ್ಯಥಿತರಾಗುತ್ತಾರೆ. ಈ ಅಕ್ರಮ, ಸಕ್ರಮ ಸಂಗ್ರಾಮ ಆದಿಯಿಂದಲೂ ನಡೆದೇ ಇದೆ. ಭಾಷಾ ಸಾರ್ವಭೌಮ ಯಾರು? ಅದರ ಬಳಕೆದಾರ ಅಂದರೆ ಶ್ರೀಸಾಮಾನ್ಯ. ಇದು ಒಪ್ಪತಕ್ಕ ಮಾತು. ಆದರೆ ಇಂದು ದೃಶ್ಯ, ಶ್ರವ್ಯ ಮಾಧ್ಯಮಗಳ ನಿರೂಪಕರು ಅರಿವಿನ ಕೊರತೆ, ಅಹಂ, ಭ್ರಮೆ ಇತ್ಯಾದಿ ಕಾರಣಗಳಿಂದ ತಪ್ಪು ರೂಪಗಳನ್ನು ಹೇರುತ್ತಿದ್ದಾರೆ. ಇವು ಪ್ರಯೋಗಗಳೂ ಅಲ್ಲ. ನಿರಂತರ ಬಳಕೆಯಿಂದ ಆದ ಬದಲಾವಣೆಗಳೂ ಅಲ್ಲ. ಇವಕ್ಕೆ ತಡೆ ಒಡ್ಡಬೇಕಲ್ಲವೆ?

ವಾಸ್ತವದಲ್ಲಿ ಕೊಳೆ ಇರುವ ಕೇರಿ ಕೊಳಗೇರಿ. ಕೊಳೆಗೇರಿಗಳೆಲ್ಲ ಕೊಳಗಳಿರುವ ಕೇರಿಗಳಾದರೆ ಕೊಳಚೆ ನಿರ್ಮೂಲನೆ ಮಂಡಳಿಯ ಕೆಲಸ ಹಗುರಾದೀತು. ಇದು ಒತ್ತಟ್ಟಿಗೆ ಇರಲಿ.
ಇನ್ನೊಂದು ಸ್ವಾರಸ್ಯಕರ ಸಂಗತಿಯನ್ನು ಗಮನಿಸೋಣ. ರಾಜ್ಯ ಸರ್ಕಾರ Slum Clearance Board ಸ್ಥಾಪಿಸಿದಾಗ ಅದನ್ನು ಕೊಳೆಗೇರಿ ನಿರ್ಮೂಲನಾ ಮಂಡಳಿ ಎಂದು ಕರೆಯಲಿಲ್ಲ. ಕೊಳಚೆ ನಿರ್ಮೂಲನಾ ಮಂಡಳಿ ಎಂದು ಹೆಸರಿಸಿತು. ಇಂದು ಕೊಳೆಯ ವ್ಯಾಪ್ತಿಯು ಪ್ರದೇಶ, ಕೇರಿಯನ್ನು ಮೀರಿ ಇಡೀ ಪರಿಸರವನ್ನು ಒಳಗೊಂಡಿರುವುದರಿಂದ ಕೊಳಚೆ ಪದದ ಮರುಪ್ರವೇಶವಾಯಿತು.

ಕೊಳೆಗೇರಿ ಅಚ್ಚಗನ್ನಡದ ಪದ. ಇದರ ಸ್ವರಾನುಕ್ರಮಣಿಕೆ ಗಮನಿಸಿ.

ಆರಂಭದ ಮೂರು ಅಕ್ಷರಗಳು: ಒ, ಎ, ಏ. ಉಚ್ಚಾರಣಾ ಸೌಲಭ್ಯಕ್ಕಾಗಿ ಕೊಳೆಗೇರಿಯು ಕೊಳಗೇರಿ ಎಂದು ಬದಲಾದಾಗ ನಡುವಿನ ಸ್ವರ ಒ ಇದ್ದದ್ದು ಅ ಎಂದಾಗಿದೆ. ಈ ಪಲ್ಲಟ ಕನ್ನಡ ಪದಗಳಲ್ಲಿ ಸಹಜ. ಆದರೆ ಅರ್ಥ ಬದಲಾಗದ ಹಾಗೆ ಅದರ ಮೂಲ ಸ್ವರೂಪದಲ್ಲೇ ನಾವು ಬಳಸಬೇಕೆ? ಅಥವಾ ಏನೇ ಇರಲಿ; ಎಂತೆಯೇ ಇರಲಿ ಬದಲಾವಣೆಗೆ ಮಣೆ ಹಾಕಬೇಕೆ? ಪದಚಿಂತಕರ ನಿಲುವೇನು?

ಈಗ ಏನಾಗಿದೆ?

ಈ ಪದ ಸೃಷ್ಟಿಯಾದ 50 ವರ್ಷಗಳ ಅನಂತರದ ಸ್ಥಿತಿ ಗಮನಿಸಿದರೆ ಕೊಳೆಗೇರಿ ಮತ್ತು ಕೊಳಗೇರಿ ಎರಡೂ ಸ್ವರೂಪಗಳು ಉಳಿದುಕೊಂಡಿವೆ!

ಅನುಬಂಧ

ಸುಮಾರು 50 ವರ್ಷಗಳ ಹಿಂದೆ ಟಂಕಿಸಿದ ಪದ ಕೊಳೆಗೇರಿ. ಆರಂಭದ ಕೆಲ ವರ್ಷಗಳಲ್ಲೇ ಅದು ಕೊಳಗೇರಿಯಾಯಿತು. ನುಡಿ ಎಂಬುದು ನಾಲಗೆ ಮೇಲಿನ ನರ್ತನಶಾಲೆ. ಅಲ್ಲಿ ಅದು ತನಗೆ ಬೇಕಾದಂತೆ ನಲಿಯುತ್ತದೆ, ನುಲಿಯುತ್ತದೆ, ನವಿಲಾಗುತ್ತದೆ. ವೈಯಾಕರಣಿಗಳು ಹೇಳಿದರೂ ಕೇಳದು. ನುಡಿ ಎಂಬುದು ಚೌಕಟ್ಟಿಗೆ ನಿಲುಕದ ಚಿತ್ರ. ಆದರೂ ಆಯಾ ಕಾಲದ ವಿದ್ವಾಂಸರು ಎರ್ರಾಬಿರ್ರಿಯಾಗಿ ಎಲ್ಲೆಲ್ಲೋ ಓಡುವ ಅದಕ್ಕೆ ಮೂಗುದಾರ ಹಾಕುತ್ತಲೇ ಇರಬೇಕು. ಭಾಷಾವಿಜ್ಞಾನಿಗಳು ಏನು ಮಾಡಬೇಕು? ಅವರದು ನುಡಿಯಲ್ಲಿನ ಈ ಎಲ್ಲ ಬದಲಾವಣೆಗಳೂ ಸರಿ ಎಂದು ಸಮರ್ಥಿಸುವ ಕೆಲಸ.

ಕೊಳೆಗೇರಿ ಸರಿ. ಕೊಳಗೇರಿ ಎಂಬುದು ಕಾಲಾನುಕ್ರಮದಲ್ಲಿ ಬಳಕೆದಾರರ ನಾಲಿಗೆ ಮೇಲೆ ಆಗಿರುವ ಪ್ರಮಾದ. ಆಡುನುಡಿ ಕ್ರಮೇಣ ಬರೆಹಕ್ಕೂ ಇಳಿಯುತ್ತದೆ. ಈಗೇನು ಅಂದಿರಾ? ಬಲ್ಲವರು, ಉಳ್ಳವರು ಕೊಳೆಗೇರಿ ಎಂದು ಬಳಸುತ್ತಿದ್ದಾರೆ. ಕೆಲವರು ಕೊಳಗೇರಿ ಎಂದು ಬಳಸುತ್ತಿದ್ದಾರೆ!

ಮಾತೆಂಬುದು ಜ್ಯೋತಿರ್ಲಿಂಗ. ಅದು ಹಿಂದಕೆ ನೋಡುತ ಮುಂದಕೆ ದುಡುಕುವ ನದಿಯಂತೆ. ಅದರದು ಸ್ವೈರವಿಹಾರ; ಸುಂದರ ಸ್ವೈರವಿಹಾರ.


  • ಕೆ ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading