‘ಅಜ್ಜಿ ಜಗಲಿ’ ಕೃತಿ ಪರಿಚಯ – ಸುಮಾ ಭಟ್

ಪುರಾತನ ಜಾನಪದ ಕಥೆಗಳ ಸಂಗ್ರಹ ಮಾಡಿ ಕನ್ನಡದ ಮಕ್ಕಳಿಗೆ ಪರಿಚಯಿಸುವುದು ನೀಳಾದೇವಿ ಲೇಖಕಿಯವರ ಉದ್ದೇಶವಾಗಿತ್ತೆಂದು ತಮ್ಮ ನುಡಿಗಳಲ್ಲಿ ಪುಸ್ತಕದ ಪ್ರಾರಂಭದಲ್ಲಿ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ. ನೀಳಾದೇವಿ ಅವರ ‘ಅಜ್ಜಿ ಜಗಲಿ’ ಕೃತಿಯ ಕುರಿತು ಸುಮಾ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕದ ಶೀರ್ಷಿಕೆ: ಅಜ್ಜಿ ಜಗಲಿ
ಲೇಖಕರು: ನೀಳಾದೇವಿ (ಸಂಗ್ರಹ)
ಮುದ್ರಣ: ೨೦೦೯
ಪ್ರಕಾಶಕರು: ಹೇಮಂತ ಸಾಹಿತ್ಯ
ಪುಟಗಳು: ೮೮
ಬೆಲೆ:೫೦

ಪುಟಾಣಿ ಮತ್ಸ್ಯ ಕನ್ಯೆ

ಇದು ಹ್ಯಾನ್ಸ್ ಕ್ರಿಶ್ಚಿಯನ್ ಮೂಲದ ಕಥೆಯಾಗಿದ್ದು, ಪ್ರೀತಿಯ ಹೊಸದೊಂದು ಪರಿಭಾಷೆಯೊಂದಿಗೆ ತ್ಯಾಗದ ಮೂರ್ತರೂಪವನ್ನು ತೋರುವ ಎಳೆಯೊಂದನ್ನು ಈ ಕಥನದಲ್ಲಿ ಕಾಣಬಹುದು. ಸಮುದ್ರಲೋಕದಲ್ಲಿನ ರಾಜ ಮೀನಿಗೆ ಆರು ಜನ ಪುತ್ರಿಯರಿದ್ದು, ಅವನ ಮಡದಿ ಮಡಿದ ಕಾರಣ ಅವನ ತಾಯಿ ಅಂದರೆ ಮಕ್ಕಳ ಅಜ್ಜಿಯೇ ಅವರನ್ನು ಸಾಕುತ್ತಿದ್ದಳು. ಕೊನೆಯ ಮಗಳು ಭೂಮಿಯ ಮೇಲೆ ವಿಹರಿಸಲು ಬಯಸಿ ಅಜ್ಜಿಯಿಂದ ಅಲಂಕೃತಳಾಗಿ ಹೊರಟಾಗ ರಾಜಕುಮಾರನೊಬ್ಬ ಬರುತ್ತಿದ್ದ ನಾವೆಗೆ ಕಲ್ಲು ಬಡಿದು ಮುರಿದು ಬಿದ್ದಾಗ ಅದು ನೀರು ಪಾಲಾಯಿತು. ಮೀನಿನ ರಾಜಕುಮಾರಿ ಅವನ ರಕ್ಷಣೆಗೆ ಹೊರಟು ಅವನನ್ನು ಜೀವಂತವಾಗಿ ಉಳಿಸಿ ಮಣ್ಣಿನ ಭೂಮಿಗೆ ತಂದಿರಿಸಿ ಅಲೆಗಳ ಮರೆಯಲ್ಲಿ ನೋಡುತ್ತಿರುತ್ತಾಳೆ. ಆಗ ಅಲ್ಲಿಗೆ ಬಂದ ಯಾವುದೋ ಬೇರೆ ರಾಜಕುಮಾರಿ(ಭೂಮಿಯ) ಸಲಹುವುದನ್ನು ಕಂಡು ಮೀನು ರಾಜಕುಮಾರಿ ಸಮುದ್ರಕ್ಕೆ ವಾಪಾಸಾಗುತ್ತಾಳೆ.

ಮೀನಿನ ರಾಜಕುಮಾರಿ ರಾಜಕುಮಾರನನ್ನು ಮರೆಯಲಾಗದೆ ಚಡಪಡಿಸಿ ಅವನನ್ನು ಸೇರಲು ಸಮುದ್ರದ ಮಾಟಗಾತಿಯ ಸಹಾಯ ಪಡೆಯುತ್ತಾಳೆ. ತನ್ನ ಬಾಲ ಕಳೆದುಕೊಂಡ ಕಾರಣ ಬಂದ ಕಾಲು ನಡೆಯಲು ನೋವು ಕೊಟ್ಟರೂ, ಮಾತು ನಿಂತು ಹೋದರೂ ಸಹಾ ತನ್ನವರನ್ನು ತೊರೆದು ಹೊರಡುವ ರಾಜಕುವರಿಗೆ ಕೆಲ ಎಚ್ಚರಿಕೆ ನೀಡಿ ಮಾಟಗಾತಿ ಮಣ್ಣಿನ ಅಂದರೆ ಭೂಮಿಗೆ ಕಳಿಸುತ್ತಾಳೆ. ಮೀನಿನ ರಾಜಕುಮಾರಿ ರಾಜಕುಮಾರನನ್ನು ಭೇಟಿಯಾದರೂ ಮಾತು ಬರದ ಕಾರಣ ಅವನಿಗೆ ತಾನಾರೆಂದು ತಿಳಿಸಲಾಗುವುದಿಲ್ಲಾ. ಅವನು ತನ್ನನ್ನು ರಕ್ಷಿಸಿದ ರಾಜಕುವರಿ ಇವಳೆಂದು ತಿಳಿಯದೆ, ದಡದಿಂದ ತಂದು ರಕ್ಷಿಸಿದವಳ ಹುಡುಕಾಡಿ ಅವಳನ್ನು ಮದುವೆಯಾಗಲು ಹೊರಡುತ್ತಾನೆ.

ರಾಜಕುವರನನ್ನು ಬಯಸಿ ಒಂದಾಗಲು ಹಲವು ತ್ಯಾಗಗಳನ್ನು ಮಾಡಿ ಬಂದ ಮೀನಿನ ರಾಜಕುಮಾರಿ ರಾಜಕುಮಾರನು ಸಿಗದಿದ್ದಾಗ ಅವಳ ಮನಃ ಸ್ಥಿತಿ ಏನಾಯಿತು??? ಸಮುದ್ರಕ್ಕೂ ಹೋಗಲಾಗದೆ ಭೂಮಿಯಲ್ಲೂ ಇರಲಾಗದೆ ಕಷ್ಟಪಡುತ್ತಿದ್ದ ಮೀನು ರಾಜಕುವರಿಯನ್ನು ಹುಡುಕಿ ಬಂದ ಅವಳ ಅಕ್ಕಂದಿರು ಆ ರಾಜಕುಮಾರನನ್ನು ಕೊಲ್ಲಲು ಹೇಳಿದ್ದೇಕೆ??? ರಾಜಕುವರಿಯ ಕಥೆ ಮುಂದೇನಾಯಿತು??? ನೀವೇ ಓದಿ ನೋಡಿ.

ಮರಿ ಹಕ್ಕಿ ಹಾರಿತು

ಇದೊಂದು ಹತ್ತೊಂಭತ್ತನೇ ಶತಮಾನದ ಐರಿಷ್ ಕಥೆಯಾಗಿದ್ದು, ಇದರ ಮೂಲ ಲೇಖಕರು ಲೈಮ್ ಒ ಪ್ಲಾಹರ್ಟಿ. ಕಡಲ ತೀರದಲ್ಲಿ ಮರಳು ರಾಶಿ ಬಂಡೆಗಳ ಮಧ್ಯದ ಜಾಗ ಹಕ್ಕಿಗಳಿಗೆ ಮೊಟ್ಟೆ ಇಡಲು ಯೋಗ್ಯವಾದ ಸ್ಥಳವಾದ ಕಾರಣ ಹಲವಾರು ಪಕ್ಷಿಗಳು ಅಲ್ಲಿ ಗೂಡು ಕಟ್ಟಿದ್ದವು. ಇದೇ ರೀತಿ ಮೊಟ್ಟೆ ಇಟ್ಟ ಪಕ್ಷಿಗಳು ಮೊಟ್ಟೆಗೆ ಕಾವು ಕೊಟ್ಟು ಮರಿಗಳು ಬಂದಾಗ, ಅವುಗಳ ತಾಯಿ ಆ ಎಳೆ ಜೀವಗಳಿಗೆ ಕೊಕ್ಕಿನಲ್ಲಿ ಆಹಾರ ತಂದು ಅವುಗಳಿಗೆ ತುತ್ತು ನೀಡುತ್ತಿತ್ತು. ಮರಿಗಳು ಹಾರಲು ಕಲಿತ ಮೇಲೆ ಅವುಗಳ ಸುರಕ್ಷತೆಗಾಗಿ ತಾಯಿ, ತಂದೆ ಹಕ್ಕಿಗಳು ಗಮನಿಸುತ್ತಿದ್ದರೂ ರೆಕ್ಕೆ ಬಲಿತ ಮೇಲೆ ಮರಿ ಹಕ್ಕಿಗಳು ಅವುಗಳ ಆಹಾರ ಅವುಗಳೇ ಸಂಪಾದಿಸುತ್ತಿದ್ದವು.

ರೆಕ್ಕೆ ಬಲಿತು ಕೆಲವೇ ದಿನದಲ್ಲಿ ಹಾರಲು ಕಲಿಯುತ್ತಿದ್ದ ಹಕ್ಕಿಗಳು ಸ್ವತಂತ್ರವಾಗಿ ಬಿಡುತ್ತಿದ್ದವು. ಆದರೆ ಸಮುದ್ರ ತೀರದ ಕಡಲ ಹಕ್ಕಿಗಳ ಗೂಡಿನಲ್ಲಿ ಪುಟ್ಟ ಮರಿಯೊಂದಿತ್ತು, ಅದರ ಜೊತೆ ಹುಟ್ಟಿದ ಅವಳಿ ಅಣ್ಣ, ತಂಗಿಯರು ಹಾರುವುದನ್ನು ಕಲಿತರೂ ಪುಟ್ಟ ಮರಿ ಕಲಿಯದೇ ಇದ್ದದ್ದು ತಾಯಿ ಹಕ್ಕಿಯ ಯೋಚನೆಗೆ ಕಾರಣವಾಯಿತು. ಎರಡು ದಿನ ಆಹಾರ ತಂದುಕೊಟ್ಟ ತಾಯಿ ಪಕ್ಷಿ ಪುಟ್ಟ ಪಕ್ಷಿಯ ಈ ನಡವಳಿಕೆಯಿಂದ ಬೇಸತ್ತಿತು. ಕಡೆಗೊಮ್ಮೆ ಅವುಗಳ ಭಾಷೆಯಲ್ಲಿ ತಂದೆ, ತಾಯಿ ಹಕ್ಕಿಗಳು ಹಾರಲು ಮತ್ತು ಅದರ ಆಹಾರವನ್ನು ಮರಿಹಕ್ಕಿಗೆ ಸಂಪಾದಿಸಲು ಹೇಳಿ ಅವುಗಳ ಆಹಾರ ಸಂಗ್ರಹಿಸಲು ಹೊರಟು ಬಿಟ್ಟವು.

ಹಸಿವಿನಿಂದ ಕಂಗೆಟ್ಟ ಮರಿ ಹಕ್ಕಿಯ ದಿನಚರಿ ಹೇಗಿತ್ತು??? ಮರಿ ಹಕ್ಕಿ ಹಾರಲು ಮತ್ತು ಆಹಾರ ಸಂಪಾದಿಸಲು ತಾಯಿ ಹಕ್ಕಿ ಮಾಡಿದ ಉಪಾಯವಾದರೂ ಏನು??? ಕಥೆಯ ಶೀರ್ಷಿಕೆಯಂತೆ ಹೆದರುತ್ತಿದ್ದ ಮರಿ ಹಕ್ಕಿ ಹಾರಿದ್ದು ಹೇಗೆ??? ಉತ್ತಮ ಸಂದೇಶವಿರುವ ಈ ಕಥೆ ಓದಿ ನೋಡಿ.

ಹಿಮದ ನಾಡಿನ ಕಡವೆ

ಅಮೇರಿಕಾ ಕೆನಡಾ ಪ್ರಾಂತ್ಯದಲ್ಲಿ ಹಿಮ ಸುರಿವ ಚಳಿಗಾಲದಲ್ಲಿ ನಡೆದ ಕಥೆಯಾಗಿದ್ದು, ಇದರ ಮೂಲ ಲೇಖಕ ಚಾರ್ಲ್ಸ್ ಡಗ್ಲಾಸ್ ರಾಬರ್ಟ್. ಒಂದು ಕಾಡಿನ ಪಕ್ಕದೂರಿನ ಜೋನ್ಸ್ ಎಂಬ ಬಾಲಕ ತನ್ನ ತಂದೆಯ ಆದೇಶದಂತೆ ಹಿಮದ ಮೇಲೆ ಜಾರುವ ಗಾಡಿಯ ಮೇಲೆ ಅಗತ್ಯ ವಸ್ತುಗಳೊಂದಿಗೆ ಜಮೀನಿನೆಡೆಗೆ ಸಾಗುತ್ತಿದ್ದ. ಸಂಜೆಯ ವೇಳೆಯಲ್ಲಿ ಆ ದಾರಿಯಲ್ಲಿ ಹೆಣ್ಣು ಮತ್ತು ಗಂಡು ಮತ್ತವುಗಳ ಮರಿಗಳೊಂದಿಗಿನ ಕಡವೆಯ ಕುಟುಂಬವೊಂದನ್ನು ಕಾಣುತ್ತಾನೆ. ಅದರಲ್ಲಿ ಒಂದು ಮರಿ ಮಡಿದದ್ದು ಕಂಡು ಉಳಿದ ಕಡವೆಗಳನ್ನು ಉಳಿಸಲು ಅಲ್ಲಿಯೇ ಇದ್ದ ಬಿರ್ಜ್ ಮರದ ಕೊಂಬೆಗಳನ್ನು ನೀಡಿ ಮರುದಿನ ಅವುಗಳಿಗೆ ಮನೆಯಿಂದ ಆಹಾರ ತರುವ ಆಶ್ವಾಸನೆ ನೀಡಿ ಹೊರಡುತ್ತಾನೆ.

ಮರುದಿನ ಮನೆಯಲ್ಲಿ ತಂದೆಯನ್ನು ಒಪ್ಪಿಸಿ ಕೊಂಚ ತೋಕೆ ಗೋಧಿ ಹಿಡಿದು ಕಡವೆಗಳ ಬಳಿ ತಲುಪಿ ಅದನ್ನು ನೀಡಿದಾಗ ಅದು ಮೂಸಿ ಕಾಳು ಚೆಲ್ಲುವಂತೆ ಮಾಡಿತು‌. ಸತ್ತ ಕಡವೆಯನ್ನು ಒಂದೆಡೆ ಹಾಕಲು ಹೋದಾಗ ತಂದೆ ತಾಯಿ ಕಡವೆಗಳು ಪ್ರತಿಭಟಿಸಿದವು, ಆದರೂ ಜೋನ್ಸ್ ಮತ್ತು ಕಡವೆಗಳಲ್ಲಿ ಅಪರೂಪದ ಬಾಂಧವ್ಯ ಎರ್ಪಟ್ಟಿತ್ತು. ನಂತರ ಚಳಿ ಕರಗಿ ಮಳೆ ಶುರುವಾದಾಗ ಜೋನ್ಸ್ ಆ ಕಡವೆಗಳಿಂದ ಅಗಲುವ ದುಃಖ ಕಾಡುತ್ತದೆ. ಅವುಗಳನ್ನು ಕಡೆ ಬಾರಿ ನೋಡಲು ತೆರಳಿದ ಜೋನ್ಸಿಗೆ ಗಂಡು ಕಡವೆ ಮಾತ್ರ ದೊರಕುತ್ತದೆ.

ಸತ್ತ ಕಡವೆಯನ್ನು ಜೋನ್ಸ್ ಕೊಂಡೊಯ್ಯುವಾಗ ಬೇರೆ ಕಡವೆಗಳ ಪ್ರತಿಭಟನೆಗೆ ಅವನು ಹೇಗೆ ಪ್ರತಿಕ್ರಯಿಸಿದ??? ಸತ್ತ ಕಡವೆಗಳನ್ನು ಭಕ್ಷಿಸಲು ಯಾವೆಲ್ಲಾ ಪ್ರಾಣಿಗಳು ಕಾದಿದ್ದವು??? ಜೋನ್ಸ್ ಹೆಣ್ಣು ಕಡವೆಯನ್ನುಭೇಟಿಯಾಗಲೇ ಇಲ್ಲವೆ ಇಲ್ಲಾ ಭೇಟಿ ಮಾಡಿ ಕಾಡಿಗೆ ಬೀಳ್ಕೊಟ್ಟನೆ ???ನೀವೇ ಓದಿ ನೋಡಿ.

ಒಡಕಲು ಗಡಿಗೆ

ಇದೊಂದು ಭಾರತೀಯ ಮೂಲದ ಕಥೆಯಾಗಿದ್ದು, ಇದರಲ್ಲಿ ಕೆಲವೊಮ್ಮೆ ಅಗತ್ಯಕ್ಕೆ ಬಾರದೆಂದು ಬಿಸಾಡಿದ ವಸ್ತು ಹೇಗೆ ಪ್ರಯೋಜನಕಾರಿಯಾಗಿ ಬಿಡುತ್ತದೆ ಎಂಬ ಸಂದೇಶ ಸಾರುತ್ತದೆ. ಬಹಳ ವರ್ಷಗಳ ಹಿಂದೆ ಸಾಹುಕಾರನ ಮನೆಯಲ್ಲಿ ನೀರು ತುಂಬಲು ನೀರುಗಂಟಿ ಎಂಬುವವನಿದ್ದ. ಸಾಹುಕಾರನ ಮನೆಯಲ್ಲಿ ಎರಡು ಗಡಿಗೆಯಿದ್ದು ಅದನ್ನು ಹಗ್ಗದಲ್ಲಿ ಕಟ್ಟಿಕೊಂಡು ಭುಜದ ಮೇಲಿಟ್ಟುಕೊಂಡು ದೂರದಿಂದ ನೀರು ತರುವ ಕೆಲಸ ನೀರುಗಂಟಿಯದಾಗಿತ್ತು. ಎರಡು ಗಡಿಗೆಯಲ್ಲಿ ಒಂದು ತುಂಬಾ ಸೋರುತ್ತಿದ್ದು, ಅದನ್ನು ನೀರುಗಂಟಿ ಯಜಮಾನನಿಗೆ ತಿಳಿಸಿದರೆ ಅವನು ಹೊಸದು ತರುವೆ ಎಂದು ಜಿಪುಣತನ ತೋರುತ್ತಿದ್ದ. ನೀರುಗಂಟಿ ನೀರು ಸೋರಿ ಹೋಗುತ್ತಿದ್ದ ಗಡಿಗೆಯನ್ನು ಆಗಾಗ ಶಪಿಸುತ್ತಿದ್ದರಿಂದ ತೂತಿಲ್ಲದ ಸರಿಯಾಗಿದ್ದ ಗಡಿಗೆಗೆ ದರ್ಪ ಬಂದು, ಅದು ಒಡಕಲು ಗಡಿಗೆಯನ್ನು ಆಗಾಗ ಹೀಯಾಳಿಸುತ್ತಿತ್ತು.

ಒಡಕಲು ಗಡಿಗೆ ಕೀಳರಿಮೆಯಿಂದ ಕುಗ್ಗಲಾರಂಭಿಸಿತು ಅದಕ್ಕೆ ಅದು ನೀರಗಂಟಿಯ ಬಳಿ ತನ್ನ ಅಸಹಾಯಕತೆಯಿಂದ ನೀನು ಕಷ್ಟಪಡುವುದು ಬೇಡ ನನ್ನನ್ನು ಮನೆಯಲ್ಲಿರುವ ಒನಕೆಯಿಂದ ಒಡೆದುಬಿಡು ಎಂದು ಹೇಳುತ್ತದೆ. ಆಗ ನೀರುಗಂಟಿ ಒಡಕಲು ಗಡಿಗೆಯನ್ನು ಸಮಾಧಾನಿಸಿ ಮೊದಲು ಅಸಮಾಧಾನ ಜಿಗುಪ್ಸೆ ನಿನ್ನ ಮೇಲಿತ್ತು ಆದರೀಗಿಲ್ಲಾ ಎನ್ನುತ್ತಾನೆ. ಕೊಳದಿಂದ ಸಾಹುಕಾರನ ಮನೆಗೆ ಬರುವ ಜಾಗದಲ್ಲಿ ಒಡಕಲು ಗಡಿಗೆ ಕಟ್ಟಿದ ಪಾರ್ಶ್ವದಲ್ಲಿ ನೀರು ಸೋರುವ ಜಾಗದಲ್ಲಿ ಬೆಳೆದ ಹೂದೋಟವನ್ನು ನೀರುಗಂಟಿ ಒಡಕಲು ಗಡಿಗೆಗೆ ತೋರಿಸುತ್ತಾನೆ.

ನೀರುಗಂಟಿ ತೋರಿಸಿದ ಹೂದೋಟವನ್ನು ಕಂಡ ಒಡಕಲು ಗಡಿಗೆಯ ಮನದಲ್ಲಿ ಮೂಡಿದ ಪ್ರಶ್ನೆಯೇನು??? ನೀರುಗಂಟಿ ಯಾವ ರೀತಿ ಒಡಕಲು ಗಡಿಗೆಯಿಂದ ಉಪಕಾರವಾಯಿತೆಂದು ಹೇಳುತ್ತಾನೆ??? ನೀರುಗಂಟಿಯ ಯಾವ ಮಾತುಗಳಿಂದ ಕೀಳರಿಮೆಯಿಂದ ನರಳುತ್ತಿದ್ದ ಒಡಕಲು ಗಡಿಗೆಗೆ ಅದರ ಜನ್ಮ ಸಾರ್ಥಕವಾಯಿತೆಂಬ ಭಾವನೆ ಮೂಡಿತು??? ತಿಳಿಯಲು ಈ ಕಥೆ ಪೂರ್ಣವಾಗಿ ಓದಿ. ಕಭೀ ಕಭೀ ಖೋಟಾ ಸಿಕ್ಕಾ ಭೀ ಕಾಮ್ ಆಜಾತಾ ಹೈ ಎಂಬ ಹಿಂದಿ ಗಾದೆಗೆ ಉದಾಹರಣೆಯಾಗುವ ಕಥೆಯಿದು.

ಇಲಿ,ಗೂಬೆ,ಮುಂಗುಸಿ ಬೆಕ್ಕು

ಆಲದ ಮರದ ಬುಡವೊಂದರಲ್ಲಿ ಇಲಿ ಮತ್ತು ಮುಂಗುಸಿ ತಮ್ಮದೇ ಆದ ಬಿಲದಲ್ಲಿ ನೆಲೆಸಿದರೆ…ಬೆಕ್ಕು ಪೊಟರೆಯಲ್ಲಿ ವಾಸಿಸಿದರೆ…ಅದರ ಕೊಂಬೆಯ ಮೇಲೆ ಗೂಬೆಯೊಂದು ನೆಲೆಸಿತ್ತು. ಇಲಿಗೆ ಬೆಕ್ಕು, ಗೂಬೆ ಮುಂಗುಸಿ ಮೂರನ್ನು ಕಂಡರೂ ಭಯವಾದರೆ ಬೆಕ್ಕಿಗೆ ಈ ಮೂರರಲ್ಲೂ ವೈರತ್ವವಿತ್ತು. ಅದೊಂದು ದಿನ ಬೆಕ್ಕು ಬೇಟೆಗಾರ ಬೀಸಿದ ಬಲೆಗೆ ಸಿಕ್ಕಿ ಹಾಕಿಕೊಂಡದ್ದನ್ನು ಕಂಡು ಇಲಿಗೆ ಸಂತಸವಾಯಿತು. ಅದು ಸಂತಸ ಪಡುವ ಸಮಯಕ್ಕೆ ಗೂಬೆ, ಮುಂಗುಸಿ ಅಲ್ಲಿಗೆ ಬಂದಾಗ ಇಲಿಯ ಸಂತಸದ ಜಾಗ ಭಯ ಆಕ್ರಮಿಸಿತು. ಆ ವೇಳೆಗೆ ಇಲಿಯೊಂದು ಉಪಾಯ ಮಾಡಿ ಬೆಕ್ಕಿನ ಸ್ನೇಹ ಬೆಳೆಸಿಕೊಂಡ ಕಾರಣದಿಂದ ಗೂಬೆ ಮುಂಗುಸಿ ಅಲ್ಲಿಂದ ಹೊರಟು ಹೋಗುತ್ತವೆ. ಬೆಕ್ಕಿನ ಸ್ನೇಹ ಸಂಪಾದಿಸಿದ ಇಲಿ ಅದರೊಂದಿಗೆ ಮಾತಾಡುತ್ತಾ, ಆಶ್ವಾಸನೆ ನೀಡುತ್ತಾ ಕಡೆಗೊಮ್ಮೆ ಬೆಕ್ಕು ಬೇಟೆಗಾರನಿಗೆ ಸಿಗುವಂತೆ ಮಾಡಿ ಬಿಡುತ್ತದೆ.

ಯಾವ ಉಪಾಯದಿಂದ ಮತ್ತು ಯಾವ ರೀತಿ ಸಹಾಯ ಮಾಡುವೆನೆಂದು ಹೇಳಿ ಇಲಿ ಬೆಕ್ಕಿನ ಸ್ನೇಹ ಸಂಪಾದಿಸುತ್ತದೆ??? ಬೆಕ್ಕು ಬೇಟೆಗಾರನಿಗೆ ಸಿಗುವಂತೆ ಮಾಡುವಲ್ಲಿ ಇಲಿ ಯಾವ ತಂತ್ರ ಮಾಡಿ ಸಫಲವಾಯಿತು??? ನೀವೇ ಓದಿ ತಿಳಿಯಿರಿ. ಶತ್ರುಗಳಿಂದ ಪಾರಾಗಲು ಶಕ್ತಿಯ ಅವಶ್ಯಕತೆಯಲ್ಲಾ ಯುಕ್ತಿಯ ಅವಶ್ಯಕತೆ ಮುಖ್ಯ ಎಂದು ಸಿದ್ಧಪಡಿಸುವ ಕಥೆಯಿದು.

ನಾಲಿಗೆ ತುಂಡಾದ ಗುಬ್ಬಿಯ ಕಥೆ

ಇದೊಂದು ಜಪಾನಿನ ಜಾನಪದ ಕಥೆಯಾಗಿದ್ದು ಒಳ್ಳೆಯತನದ ಪರಿಣಾಮ ಮತ್ತು ದುರಾಸೆಯ ಫಲ ಹೇಳೋ ಕಥೆಯಿದು. ಮುದುಕನೊಬ್ಬನಿಗೆ ಅವನಿಗಿಂತ ವಯಸ್ಸಿನಲ್ಲಿ ಹಿರಿಯವಳಾದ ಮಡದಿಯಿದ್ದು ಅವಳು ತುಂಬಾ ಜೋರಿನ ಸ್ವಭಾವದವಳಾಗಿದ್ದಳು. ಮುದುಕನಿಗೆ ಅವಳು ಉತ್ತಮ ಸಂಗಾತಿಯಾಗಿರದಿದ್ದರೂ, ಅವನು ಸಾಕಿದ ಗುಬ್ಬಿ ಅವನಿಗೆ ಆತ್ಮೀಯವಾಗಿತ್ತು. ತಾತ ಹೊಲದ ಕೆಲಸಕ್ಕೆ ಹೋದಾಗ ಗುಬ್ಬಿಯ ಒಂದು ಕಾರ್ಯದಿಂದ ಕುಪಿತಗೊಂಡ ಅವನ ಮಡದಿ ಕರುಣೆಯಿಲ್ಲದೆ ಕ್ರೂರವಾಗಿ ಅದರ ಅರ್ಧ ನಾಲಿಗೆ ಕತ್ತರಿಸಿ ಬಿಡುತ್ತಾಳೆ. ಹೊಲದಿಂದ ಬಂದ ನಂತರ ವಿಷಯ ತಿಳಿದ ತಾತ ಹೆಂಡತಿಯನ್ನು ಬೈದು, ನಾಲಿಗೆ ಕತ್ತರಿಸಿಕೊಂಡು ಹಾರಿಹೋದ ತನ್ನ ಆಪ್ತ ಗುಬ್ಬಿ ಕಾಣದೆ ಬೇಸರಿಸುತ್ತಾನೆ.

ಆರೇಳು ತಿಂಗಳು ಕಳೆದ ನಂತರ ತಾತನಿಗೆ ಸಿಕ್ಕ ಗುಬ್ಬಿ ಮನುಷ್ಯರಂತೆ ಮಾತಾಡುತ್ತಿದ್ದು, ತಾತನನ್ನು ತನ್ನ ಮನೆಗೆ ಕರೆದೊಯ್ಯುತ್ತದೆ. ಗುಬ್ಬಿ ಅದರ ಹೆಂಡತಿ ಮಕ್ಕಳು ಆದರದಿಂದ ತಾತನಿಗೆ ಉಪಚರಿಸಿ ಆತ್ಮೀಯತೆ ತೋರಿ ಕೆಲ ದಿನಗಳು ಅಲ್ಲೇ ಇರಲು ಕೋರುತ್ತದೆ. ತಾತ ಗುಬ್ಬಿ ಪರಿವಾರದ ಆತಿಥ್ಯ, ಆದರ ಆತ್ಮೀಯತೆಗೆ ಮನ ಸೋತು ಐದು ದಿನ ಅಲ್ಲೇ ಉಳಿದು ಹೊರಟಾಗ ನೆನಪಿಗಾಗಿ ಹಗುರದಾದ ಮತ್ತು ಭಾರವಾದ ಹೆಣಿಗೆ ಬುಟ್ಟಿಗಳನ್ನು ತಂದು ಆಯ್ಕೆಗೆ ತಾತನಿಗೆ ನೀಡುತ್ತವೆ. ದುರಾಸೆಯವನಲ್ಲದ ತಾತ ಹಗುರವಾದ ಚಿಕ್ಕ ಬುಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಾನೆ. ತಾತ ಬರದೇ ಹೋಗಿದ್ದನ್ನು ಬೇಜವಾಬ್ದಾರಿತನವೆಂದು ಜರೆದ ಅವನ ಹೆಂಡತಿ ಅವನು ತಂದ ಬುಟ್ಟಿಗಳನ್ನು ತೆಗೆದು ನೋಡಿದಾಗ ಅದರಲ್ಲಿ ಬಂಗಾರ ವಜ್ರ, ವೈಢೂರ್ಯ, ಪಚ್ಚೆ ಇಂತಹಾ ಅಮೂಲ್ಯ ವಸ್ತುವಿನಿಂದ ತುಂಬಿತ್ತು.

ಯಾವ ಸಣ್ಣ ಕಾರಣಕ್ಕೆ ಅಜ್ಜನ ಮಡದಿ ಗುಬ್ಬಿಯ ನಾಲಿಗೆ ಕತ್ತರಿಸಿದಳು???ತಾತನಿಗೆ ಗುಬ್ಬಿ ನೀಡಿದ ಬುಟ್ಟಿಗಳಲ್ಲಿ ಬಂಗಾರ, ವಜ್ರ ಮುಂತಾದ ಅಮೂಲ್ಯ ವಸ್ತುಗಳೊಂದಿಗೆ ಮತ್ಯಾವ ವಿಶೇಷ ವಸ್ತುವೊಂದಿತ್ತು??? ಬುಟ್ಟಿಯಲ್ಲಿ ಅಮೂಲ್ಯ ವಸ್ತುಗಳನ್ನು ಕಂಡು ತಾತನ ಮಡದಿ ತಾನು ನಾಲಿಗೆ ಕೊಯ್ದ ಗುಬ್ಬಿಯ ಬಳಿ ಹೋದಾಗ ಅದು ಅವಳಿಗೆ ನೀಡಿದ ಬುಟ್ಟಿಯಲ್ಲಿ ಏನಿತ್ತು??? ತಾತನ ಹೆಂಡತಿಗೆ ಯಾರು ಯಾವಾಗ ಯಾವ ರೀತಿ ಸರಿಯಾದ ಪಾಠ ಕಲಿಸುತ್ತಾರೆ??? ನೀವೇ ಓದಿ ನೋಡಿ.

ಈ ಪುಸ್ತಕದಲ್ಲಿ ಪ್ರಪಂಚದ ಹಲವಾರು ದೇಶಗಳ ಜನಪದೀಯ ಕಥೆಗಳ ತೋರಣವಿದ್ದು, ಆಯಾ ಜಾಗದ ವೈಶಿಷ್ಟ್ಯತೆ ಮತ್ತು ವಿಶೇಷತೆಯೊಂದಿಗೆ ಚಂದದ ಸಂದೇಶವಿರುವ ಕಥೆಗಳು ಇದರಲ್ಲಿವೆ. ಬೇರೆ ಬೇರೆ ಶತಮಾನದ, ಕಾಲಮಾನಕ್ಕೂ ಮೀರಿದ ಪುರಾತನ ಜಾನಪದ ಕಥೆಗಳ ಸಂಗ್ರಹ ಮಾಡಿ ಕನ್ನಡದ ಮಕ್ಕಳಿಗೆ ಪರಿಚಯಿಸುವುದು ಲೇಖಕಿಯವರ ಉದ್ದೇಶವಾಗಿತ್ತೆಂದು ತಮ್ಮ ನುಡಿಗಳಲ್ಲಿ ಪುಸ್ತಕದ ಪ್ರಾರಂಭದಲ್ಲಿ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವೊಂದು ನೀತಿ ಹೇಳಿದರೆ..ಕೆಲವೊಂದು ಉತ್ತಮ ಸಂದೇಶವನ್ನು ಹೊತ್ತು ತಂದರೆ…ಮತ್ತೆ ಕೆಲವು ಆ ದೇಶದ ಆಗಿನ ಕಾಲದ ನಂಬಿಕೆಗಳು….ಆಯಾ ದೇಶದ ಜನಜೀವನದ ಪರಿಚಯ ಇಂತಹಾ ಹಲವಾರು ವಿಷಯಗಳಿಗೆ ಮಹತ್ವ ನೀಡುತ್ತದೆ. ಈ ಕಥೆಗಳು ಈಗಾಗಲೇ ಉದಯವಾಣಿ, ತರಂಗ, ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ.

ಇಲ್ಲಿರುವ ಕೆಲವು ಕಥೆಗಳು ಆ ದೇಶದ ಜಾನಪದ ಕಥೆಯಾದರೂ ಅದನ್ನು ನಂಬಲು ಕೆಲ ಕುರುಹುಗಳನ್ನು ಇಂದಿಗೂ ನಾವು ಕಾಣಬಹುದಾಗಿರುವುದೇ ವಿಶೇಷ. ಗೋಸುಂಬೆಯ ಬಣ್ಣ ಬದಲಿಸೋ ಗುಣ… ತಿಮಿಂಗಲದ ತಲೆಯಲ್ಲಿರುವ ತೂತಿನಿಂದ ನೀರು ಚಿಮ್ಮುವುದು…ಹಾವು ಪೊರೆ ಕಳಚುವ ಪ್ರಕ್ರಿಯೆ… ನಕ್ಷತ್ರ ಮೀನಿಗೆ ಆ ಆಕಾರ ಬರಲು ಕಾರಣ ಇವೆಲ್ಲಾ ಅವುಗಳ ದೇಹದ ಭಾಗಗಳ ರಚನೆಯ ಆಧಾರದ ಮೇಲೆ ಹೇಳಿದ್ದಾರೋ…ಅದು ಮಿಥ್ಯವೋ…ಇಲ್ಲಾ ಅದೇ ಸತ್ಯವೋ ಎಂದು ವಿಮರ್ಶಿಸಲಾಗದು. ಆದರೆ ಮಕ್ಕಳ ಜ್ಞಾನ ವೃದ್ಧಿಸಲು, ಅವರಲ್ಲಿ ಆಲೋಚನಾ ಶಕ್ತಿ ಮೂಡಿಸಲು, ಮನರಂಜನೆ ನೀಡಲು, ಬೇರೆ ದೇಶದ ಪ್ರದೇಶ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಕುತೂಹಲ ಮೂಡಿಸಲು ಸಹಕಾರಿಯಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲಾ. ಇನ್ನೇಕೆ ತಡಾ ಸಿಕ್ಕರೆ ಖಂಡಿತಾ ಓದಿ ನೋಡಿ….


  •  ಸುಮಾ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading