ಭಾರತ ಸರ್ಕಾರ ನೀಡುವ ಪ್ರತಿಷ್ಠಿತ 2020ನೇಯ ಇಸವಿಯ ‘ಭಾರತದ ಉತ್ತಮ ಶಿಕ್ಷಕಿ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಶಿಕ್ಷಕಿ ಸುರೇಖ ಜಗನ್ನಾಥ್ ಅವರು. ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭೆ ಪರೀಕ್ಷೆ’ ನಡೆಸುವ ಪುಟಾಣಿ ವಿಜ್ಞಾನ ಸಂಸ್ಥೆಯಿಂದ ಅವರು ‘ರಾಜ್ಯ ಮಟ್ಟದ ಉತ್ತಮ ವಿಜ್ಞಾನದ ಸಂಘಟಕಿ’ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಶಿಕ್ಷಕಿ ಸುರೇಖ ಜಗನ್ನಾಥ್ ಅವರ ಸಾಧನೆಯ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ಲೇಖನವೊಂದನ್ನು ಓದುಗರ ಮುಂದಿಟ್ಟಿದ್ದಾರೆ, ಮುಂದೆ ಓದಿ…
‘ನೋಡಿ ತಿಳಿ, ಮಾಡಿ ಕಲಿ’ ಎಂಬ ಹೇಳಿಕೆ ಎಲ್ಲಾ ಶಾಲಾ ಪುಸ್ತಕಗಳಲ್ಲಿರುತ್ತದೆ. ಆದರೆ ಎಷ್ಟೋ ಶಾಲೆಯ ಮಕ್ಕಳಿಗೆ ಇದು ಪುಸ್ತಕದ ಬರಹ ಮಾತ್ರ ಆಗಿ ಉಳಿದಿದೆ. ಟೀಚರ್ ಕ್ಲಾಸ್ ರೂಂಗೆ ಬಂದಾಗ ಎಲ್ಲಿ ಹೋಂ ವರ್ಕ ಕೇಳುತ್ತಾರೋ, ಏನು ಮಾಡುತ್ತಾರೋ ಎಂದು ಯೋಚನೆ ಮಾಡೋ ವಿದ್ಯಾರ್ಥಿಗಳು ಸಾಮಾನ್ಯ. ಆದರೆ ಬಂದರವಾಡ ಶಾಲೆಯಲ್ಲಿ ‘ಸೈನ್ಸ್ ಮಿಸ್ ಬರುತ್ತಾರೆ, ಹೊಸದೇನೋ ತೋರಿಸುತ್ತಾರೆ, ಹೊಸದೇನೋ ಮಾಡಿಸುತ್ತಾರೆ’ ಎಂದು ನಿರೀಕ್ಷೆ ಮಾಡುವ ವಿದ್ಯಾರ್ಥಿಗಳು ಕೂಡ ಇದ್ದಾರೆ. ಯಾರು ಈ ಸೈನ್ಸ್ ಮಿಸ್ .? ‘ಎಲೆ, ಗಿಡ, ಮರ….’ ನೈಸರ್ಗಿಕವಾಗಿ ದೊರೆಯುವ ವಸ್ತುಗಳು. ಅವುಗಳನ್ನು ಪುಸ್ತಕಗಳಲ್ಲಿ ಓದಿದರೆ ಸಾಕೇ? ಗಿಡ, ಮರಗಳ ಹತ್ತಿರ ಮಕ್ಕಳೇ ಹೋದರೆ, ಆಗ ಆ ಗಿಡ ಮರಗಳೇ ಮಕ್ಕಳಿಗೆ ಪಾಠ ಹೇಳಿಕೊಡುತ್ತವೆ ‘ ಎಂದು ನಂಬಿರುವ 2020ನೇಯ ಇಸವಿಯಲ್ಲಿ ‘ಭಾರತದ ಉತ್ತಮ ಶಿಕ್ಷಕಿ’ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ಪಡೆದಿರುವರ ಶ್ರೀಮತಿ ಸುರೇಖ ಜಗನ್ನಾಥ್.

ಫೋಟೋ ಕೃಪೆ : My gov
ವಿಜ್ಞಾನದ ಅಧ್ಯಾಪಕಿ ಆಗಿ ಜುಲೈ 2004ರಲ್ಲಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡು ಸರ್ಕಾರಿ ಹೈಸ್ಕೂಲ್, ಕೊಡದುರ್, ಕಲ್ಬುರ್ಗಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸುತ್ತಾರೆ. ಒಂದನೇಯ ಜನವರಿ 2005ರಲ್ಲಿ, ಅಂದರೆ ಕೆಲಸಕ್ಕೆ ಸೇರಿದ ಆರೇ ತಿಂಗಳಲ್ಲಿ, ‘ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭೆ ಪರೀಕ್ಷೆ’ ನಡೆಸುವ ಪುಟಾಣಿ ವಿಜ್ಞಾನ ಸಂಸ್ಥೆಯಿಂದ ಇವರು ‘ರಾಜ್ಯ ಮಟ್ಟದ ಉತ್ತಮ ವಿಜ್ಞಾನದ ಸಂಘಟಕಿ’ ಪ್ರಶಸ್ತಿಯನ್ನು ಪಡೆಯುತ್ತಾರೆ. ಇದು ಹೇಗೆ ಸಾಧ್ಯವಾಯಿತು? ಎಂದು ಫೋನ್ ನಲ್ಲಿ ಪರಿಚಯ ಮಾಡಿಕೊಂಡು ಕೇಳಿದಾಗ ದೂರದ ಕಲ್ಬುರ್ಗಿಯಿಂದ ಶ್ರೀಮತಿ ಸುರೇಖ ಜಗನ್ನಾಥರವರು ತಾವು ನಡೆದು ಬಂದ ದಾರಿಯ ಪರಿಚಯ ಮಾಡಿಕೊಟ್ಟರು.
ನಡೆದು ಬಂದ ದಾರಿ :
‘ನಾನು ಆರನೇಯ ತರಗತಿಯಲ್ಲಿ ಓದುತ್ತಿರುವಾಗ ನನ್ನ ವಿಜ್ಞಾನದ ಶಿಕ್ಷಕರು ಆ ಕಾಲದಲ್ಲಿ ಸಿಗುವ ವಸ್ತುಗಳಿಂದ ಪ್ರಯೋಗಗಳ ಮೂಲಕ ಪಾಠ ಮಾಡಲು ಪ್ರಯತ್ನ ಮಾಡಿದ್ದರು. ಅದು ನನ್ನ ಮನಸ್ಸಿನಲ್ಲಿ ಪ್ರಭಾವ ಬೀರಿತ್ತು. ನಾನು ಟೀಚರ್ ಆದಾಗ ಅದೇ ರೀತಿ ಮಾಡಲು ಪ್ರಯತ್ನ ಪಟ್ಟೆ’ ಎಂದು ಹೇಳುತ್ತಾ ತಮಗೆ ಪಾಠ ಮಾಡಿದ ಶ್ರೀ ಶಿವಪ್ರಕಾಶ್ ಹಿರೇಮಠರ ಹೆಸರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು.

ಫೋಟೋ ಕೃಪೆ : My gov
ಈಗೀನ ಶಾಲೆಗಳಲ್ಲಿ ವಿಜ್ಞಾನದ ಪಾಠ ಮಾಡುವುದು ಸವಾಲೇ ಸರಿ ಎಂಬ ಮಾತಿದೆ, ತಾವು ಹೇಗೆ ನಿಭಾಯಿಸಿದಿರಿ? ಎಂದು ಕೇಳಿದಾಗ ‘ ಯಾವುದೇ ವಿಷಯವೇ ಇರಲಿ, ವಿದ್ಯಾರ್ಥಿಗಳಲ್ಲಿ ಆ ವಿಷಯದ ಬಗ್ಗೆ ಕುತೂಹಲ ಹುಟ್ಟಿಸುವುದು ಮೊದಲ ಕೆಲಸ.
ಒಂದು ಸಾರಿ ಕುತೂಹಲ ಹುಟ್ಟಿದರೆ ಸಾಕು, ಅದು ಅನ್ವೇಷಣೆಯ ಸ್ವಭಾವ ಬೆಳೆಸುತ್ತದೆ. ಉದಾಹರಣೆಗೆ ಕಡಲೇಕಾಯಿ ನೆಲದ ಒಳಗೆ ಬಿಡುತ್ತದೆ ಎಂದು ಹೇಳಿದರೆ ಸಾಕೇ? ಶಾಲೆಯ ಪಕ್ಕದಲ್ಲಿ ಇದ್ದ ಹೊಲಕ್ಕೆ ವಿದ್ಯಾರ್ಥಿಗಳನ್ನು ನಿಯಮಿತವಾಗಿ ಕರೆದುಕೊಂಡು ಹೋಗುತ್ತೇನೆ. ಕಡಲೇಕಾಯಿ ಗಿಡದ ಹೂ ಭೂಮಿಯ ಮೇಲೆ ಬಿಟ್ಟು ಪರಾಗಪರ್ಶದ ನಂತರ ಭೂಮಿಯ ಒಳಗಡೆ ಹೋಗಿ ಕಡಲೇಬೀಜವಾಗುವ ವಿಧಾನವನ್ನು ಹೊಲದಲ್ಲಿ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದರೆ ಎಲ್ಲರಿಗೂ ಆಸಕ್ತಿ ಬರೆದೇ ಇರಲು ಸಾಧ್ಯವೇ?’ ಎಂದು ನನಗೇ ಕೇಳಿದರು. ಇದರ ಜೊತೆಗೆ ಶಾಲೆಯ ತೋಟದಲ್ಲಿ ಹೂವು, ಹಣ್ಣು, ತರಕಾರಿ ಬೆಳೆಸಲು ಅವಕಾಶ ಕಲ್ಪಿಸಿ ಪ್ರಕೃತಿಯ ಮಡಿಲಲ್ಲಿ ಜೀವ ಅರಳುವ ಬಗೆಯನ್ನು ವೀಕ್ಷಿಸುವ ಅವಕಾಶ ಮಾಡಿಕೊಟ್ಟಿರುವ ವಿಷಯ ತಿಳಿಸಿದರು.

ಫೋಟೋ ಕೃಪೆ : My gov
‘ಪಾಠದ ಹಿಂದಿನ ದಿನ ನಾಳೆಯ ಪಾಠಕ್ಕೆ ಬೇಕಾಗುವ ಮನೆಯಲ್ಲಿ ಇರುವ ಸಾಮಾಗ್ರಿ ಮತ್ತು ಸರಕರಣೆಗಳನ್ನು ತರಲು ಹೇಳುತ್ತಿದ್ದರು. ದುಡ್ಡು ಕೊಟ್ಟು ತರುವ ವಸ್ತುವಾಗಿದ್ದರೆ ಅವರೇ ತರುತ್ತಿದ್ದರು. ಶಾಲೆಯಲ್ಲಿ ಸೋಪು ತಯಾರಿಸಿ ಕೈ ತುಂಬ ನೊರೆ ಮಾಡಿಕೊಂಡು ಒಡಾಡಿದ ದಿನಗಳು ಯಾವಾಗಲೂ ಕಾಡುತ್ತವೆ. ಈ ರೀತಿ ಕಲಿತ ಪಾಠ ಮರೆಯುವುದು ಹೇಗೆ? ‘, ಫೋನ್ ಮೂಲಕ ಸಂಪರ್ಕಿಸಿದಾಗ ವೈಜನಾಥ್ ಪಾಟೀಲರು ಹೇಳಿದ ಮಾತಿದು. ಪಾಟೀಲರು 2006 ರಿಂದ 2008ರಲ್ಲಿ ಸುರೇಖ ಟೀಚರ್ ವಿದ್ಯಾರ್ಥಿ. ಈ ದಿನ ಶ್ರೀಯುತ ಪಾಟೀಲರು ಕೆ.ಪಿ.ಟಿ.ಸಿ.ಎಲ್. ನಲ್ಲಿ ಎ.ಇ.ಇ. ಯಾಗಿ ಕೆಲಸ ಮಾಡುತ್ತಿದ್ದಾರೆ.
‘ಕಡಲೇಕಾಯಿ ಬೆಳೆಯುವ ರೀತಿ ಮಾತ್ರವಲ್ಲ ರೇಷ್ಮೆ ಹುಳುವಿನ ಜೀವನ ಚಕ್ರ ಕೂಡ ಶಾಲೆಯಲ್ಲಿ ತೋರಿಸಿದ್ದಾರೆ’. ಇದನ್ನು ನೆನಪಿಕೊಂಡು ಶ್ರೀ ಸಚಿನ್ ಅಂಬಣ್ಣ ಕಂಟೆಗೊಳರವರು ಫೋನಿನಲ್ಲಿ ಹೇಳಿದ ಮಾತಿದು. ಸಚಿನ್ 2012-14 ರವರೆಗೆ ಸುರೇಖರವರ ವಿದ್ಯಾರ್ಥಿ. ಈ ದಿನ ಸಚಿನ್ ತಮ್ಮ ನೆಚ್ಚಿನ ವಿಷಯ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿ. ‘ಹುಳುವೊಂದು ಬೆಲೆಬಾಳುವ ವಸ್ತ್ರವಾಗುವ ಪರಿಯನ್ನು ಕಣ್ಣೆದುರಿಗೆ ತೋರಿಸಿದರೆ ಕುತೂಹಲದ ಜೊತೆಗೆ ಸೂಕ್ಷ್ಮವಾಗಿ ಅವಲೋಕನ ಮಾಡುವ ಬುದ್ದಿಯನ್ನು ಬೆಳೆಸುತ್ತದೆ’ ಎಂಬ ಅವರ ಮಾತಿನಲ್ಲಿ ಸತ್ಯವಿದೆಯಲ್ಲವೇ?.
ಸುರೇಖ ಜಗನ್ನಾಥ್ ಶಿಕ್ಷಿಕಿಯವರ ಹಿನ್ನೆಲೆ ಮತ್ತು ವಿಜ್ಞಾನದ ಬಗ್ಗೆ ಅವರ ಅನಿಸಿಕೆಗಳು :
ಶ್ರೀ ಹುಲಗಪ್ಪ ಮತ್ತು ಗೋಪಮ್ಮ ದಂಪತಿಗಳ ಮಗಳಾಗಿ #ರಾಯಚೂರು_ಜಿಲ್ಲೆಯ, ದೇವದುರ್ಗ ತಾಲ್ಲೂಕಿನ ವಂಡಾಲಿ ಎಂಬ ಚಿಕ್ಕ ಹಳ್ಳಿಯಲ್ಲಿ ಸುರೇಖ 11ನೇಯ ಮಾರ್ಚ 1976ರಂದು ಹುಟ್ಟಿದರು. ಲಿಂಗಸುಗೂರನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹತ್ತನೇಯ ತರಗತಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದರು. ಅವರು 1993ರಲ್ಲಿ ಪದವಿಪೂರ್ವ ಶಿಕ್ಷಣವನ್ನು ಕಿಟ್ಟಲ್ ವಿಜ್ಞಾನ ಶಾಲೆ, ಧಾರವಾಡದಿಂದ ಮುಗಿಸಿ, ವಿ.ಜಿ.ಮಹಿಳೆಯರ ಕಾಲೇಜ್, ಕಲ್ಬುರ್ಗಿಯಲ್ಲಿ ವಿಜ್ಞಾನ (ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ)ದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ 1996ರಲ್ಲಿ ಪದವಿ ಪಡೆದರು. ಇವರು ತಮ್ಮ ಹಳ್ಳಿಯ ಪ್ರಥಮ ಪದವೀಧರೆ. ನಂತರ ಬಿ.ಎಡ್. ಪದವಿ ಪಡೆದು, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು 2001ರಲ್ಲಿ ಪಡೆದರು.
ವಿಜ್ಞಾನದ ಉಪ ಅಧ್ಯಾಪಕಿ ಆಗಿ 2004ರಲ್ಲಿ ಕರ್ನಾಟಕ ಸರ್ಕಾರದವರು ನೇಮಕ ಮಾಡಿದಾಗ ಸರ್ಕಾರಿ ಹೈಸ್ಕೂಲ್, ಕೊಡದುರ್, ಕಲ್ಬುರ್ಗಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ನಂತರ 2009ರಲ್ಲಿ ಸರ್ಕಾರಿ ಹೈಸ್ಕೂಲ್, ಆಫಜ್ಪುರ ಬ್ಲಾಕ್ ನ ಗೊಬ್ಬುರ್ ಶಾಲೆಗೆ ವರ್ಗಾವಣೆಯಾಗುತ್ತದೆ. ಈಗ ಕಳೆದ ಮೂರು ತಿಂಗಳಿನಿಂದ ಅವರು ಬಂದ್ರವಾಡ್ ಹೈಸ್ಕೂಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮೊದಲಿಗೆ ವಿದ್ಯಾರ್ಥಿಗಳಿಗೆ ಇರುವ ಆಸಕ್ತಿ ತಿಳಿದುಕೊಳ್ಳಬೇಕು. ಶಾಲೆಯಲ್ಲಿ ನಡೆಯುವ ವಿವಿಧ ರಾಷ್ಟ್ರೀಯ ಹಬ್ಬಗಳ ದಿನಗಳಲ್ಲಿ, ಶಾಲಾ ವಾರ್ಷಿಕೋತ್ಸವದಲ್ಲಿ ಅವರಿಷ್ಟದ ಕೆಲಸ ಮಾಡಲು ಬಿಡಬೇಕು. ಆಗ ಮಾತ್ರ ಸರ್ವತೋಮುಖ ಬೆಳವಣಿಗೆ ಸಾಧ್ಯ.’ ಎಂದು ಹೇಳುತ್ತಾ ಎಲ್ಲರನ್ನೂ ಒಳಗೊಂಡ ಶಿಕ್ಷಣ ನೀಡುವ ಅಗತ್ಯತೆ ಬಗ್ಗೆ ಹೇಳುತ್ತಾರೆ.

ಫೋಟೋ ಕೃಪೆ : My gov
ಇವರು ಆಯೋಜಿಸುವ ವಿಜ್ಞಾನದ ಮೇಳಗಳಲ್ಲಿ ಕನಿಷ್ಠ ಐವತ್ತರಿಂದ ನೂರು ತನಕ ವಿವಿಧ ವಿಜ್ಞಾನದ ಮಾದರಿಗಳನ್ನು ಮಾಡಿಸಿ ಸುತ್ತಲಿನ ಸಮುದಾಯದ ಮುಂದೆ ಪ್ರದರ್ಶನ ಮಾಡಿದಾಗ ವಿದ್ಯಾರ್ಥಿಗಳು ಕಲಿಯುವುದರ ಜೊತೆಗೆ ಕೆಲವು ಸಮುದಾಯದಲ್ಲಿರುವ ಅಂದ ಶ್ರದ್ಧೆಗಳನ್ನು ನಿವಾರಣೆ ಮಾಡುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ.
‘ ಈ ದಿನ ನಾನು ವೈದ್ಯಕೀಯ ವಿಜ್ಞಾನದಲ್ಲಿ ಜೀವಕೋಶಗಳ ಬಗ್ಗೆ ಬಹಳಷ್ಟು ಅಭ್ಯಾಸ ಮಾಡಿದ್ದೇನೆ. ಆದರೆ ಯಾವಾಗ ಜೀವಕೋಶದ ವಿಷಯ ಬರುತ್ತದೋ ಆಗ ನೆನಪಾಗುವುದು ಸುರೇಖ ಟೀಚರ್ ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ ಜೀವಕೋಶದ ವಿಭಜನೆಯ ಬಗ್ಗೆ ಮಾಡಿದ ಪಾಠ’ ಎಂದು ಫೋನ್ ನಲ್ಲಿ ಹೇಳಿದವರು ವೈದ್ಯಕೀಯ ವಿಜ್ಞಾನದಲ್ಲಿ ಕೊನೆಯ ವರ್ಷದಲ್ಲಿ ಓದುತ್ತಿರುವ ನಾಗರಾಜ್ ರವರು. 2014ರಲ್ಲಿ ನಾಗರಾಜ್ ಸುರೇಖ ಟೀಚರ್ ವಿದ್ಯಾರ್ಥಿ.
ಮಾನವನ ಶರೀರ ರಚನೆಯಿಂದ ಹಿಡಿದು ಸಸ್ಯಗಳ #ಜೀವನ_ಚಕ್ರದವರೆಗೆ ಆನೇಕ ಪಟ್ಯೋಪಕರಣಗಳನ್ನು ಅಭಿವೃದ್ಧಿ ಪಡಿಸಿ ಪಾಠದ ಸಮಯದಲ್ಲಿ ಬಳಸುವ ಸುರೇಖ ಟೀಚರ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕೆಲವು ಪ್ರಾಣಿಗಳ ಆಗಾಂಗಗಳನ್ನು ಶಾಲೆಗೆ ತಂದು ಪಾಠ ಮಾಡುವ ಬಗ್ಗೆ ಕೇಳಿದಾಗ ‘ಹೃದಯದ ಬಗ್ಗೆ ಚಿತ್ರ ಬರೆದು ನಾಲ್ಕು ಕವಾಟಗಳಿವೆ ಎಂದು ಹೇಳುವ ಬದಲು ಕೆಲವು ಪ್ರಾಣಿಗಳ ಹೃದಯ ತೋರಿಸಿ ಅದರ ಬಗ್ಗೆ ವಿವರಿಸಿದರೆ ಆಗುವ ಪರಿಣಾಮವೇ ಬೇರೆ ಅಲ್ಲವೇ?’ ಎಂದು ಕೇಳಿದರು.
2019-20ರ ಶೈಕ್ಷಣಿಕ ವರ್ಷ ಸ್ವಲ್ಪ ವಿಶೇಷವೇ ಸರಿ. ಆ ವರ್ಷದಲ್ಲಿ 26ನೇಯ ಡಿಸಂಬರ್ 2019, ಮತ್ತು 21ನೇಯ ಜೂನ್ 2020ರಂದು ಸೂರ್ಯ ಗ್ರಹಣ ಸಂಭವಿಸಿದಾಗ ಈ ಸೂರ್ಯ ಗ್ರಹಣವನ್ನು ವೈಜ್ಞಾನಿಕವಾಗಿ ವೀಕ್ಷಿಸುವ ಅವಕಾಶವನ್ನು ಅಲ್ಲಿಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಅಲ್ಲಿನ ಸಮುದಾಯದವರಿಗೂ ಕಲ್ಪಿಸುವುದರ ಜೊತೆಗೆ ಆ ಸಮಯದಲ್ಲಿ ಆಹಾರ ಸೇವನೆಗೆ ಅವಕಾಶ ಮಾಡಿಕೊಟ್ಟು ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

ಫೋಟೋ ಕೃಪೆ : My gov
ವಿದ್ಯಾರ್ಥಿಗಳಿಗೆ ವಿಜ್ಞಾನದ ಮೇಳಗಳಲ್ಲಿ ಭಾಗವಹಿಸಲು ಉತ್ತೇಜನ ಕೊಡುವುದರ ಜೊತೆಗೆ ತಾವು ಸ್ವತಃ ಈ ಮೇಳಗಳಲ್ಲಿ ಭಾಗವಹಿಸಿ ಅನೇಕ ಬಹುಮಾನ ಪಡಿದಿದ್ದಾರೆ. ಜಿಲ್ಲಾ ಮಟ್ಟದ ಮೇಳದಲ್ಲಿ ಫ್ರಥಮ ಬಹುಮಾನ, ರಾಜ್ಯ ಮಟ್ಟದ ಮೇಳದಲ್ಲಿ ಮೂರನೇಯ ಬಹುಮಾನ ಪಡೆಯುವುದರ ಜೊತೆಗೆ ದಕ್ಷಿಣ ಭಾರತ ಮಟ್ಟದ ವಿಜ್ಞಾನದ ಮೇಳದಲ್ಲಿ ತಮ್ಮ ಶಾಲೆಯನ್ನು ಪ್ರತಿನಿಧಿಸಿದ್ದಾರೆ. ತಾಲ್ಲೂಕಿನ ಮಟ್ಟದ ಮತ್ತು ಜಿಲ್ಲಾ ಮಟ್ಟದ ‘#ವಿಜ್ಞಾನ_ಹಬ್ಬ‘ ದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು :
ಇವರು ಮಾಡಿರುವ ಸೇವೆಗೆ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
- 2016 ರಲ್ಲಿ ‘ತಾಲ್ಲೂಕ ಮಟ್ಟದ ಉತ್ತಮ ಶಿಕ್ಷಕಿ’ ಪ್ರಶಸ್ತಿ
- 2017ರಲ್ಲಿ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ’ ಪ್ರಶಸ್ತಿ
- 2017 ‘ರಾಜೀವ್ ಗಾಂಧೀ ಸ್ಮಾರಕ-ರಾಜ್ಯ ಮಟ್ಟದ ಉತ್ತಮ ವಿಜ್ಞಾನ ಶಿಕ್ಷಕಿ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ಪಡೆದಿದ್ದಾರೆ.
- 2020ರಲ್ಲಿ ಭಾರತ ಸರ್ಕಾರದಿಂದ ‘ರಾಷ್ಟ್ರ ಮಟ್ಟದಲ್ಲಿ ಉತ್ತಮ ಶಿಕ್ಷಕಿ’ ಪಡೆಯುತ್ತಾರೆ.
ರಾಜ್ಯ ಸರ್ಕಾರದಿಂದ ರಾಷ್ಟ್ರಮಟ್ಟದಲ್ಲಿ ಉತ್ತಮ ಉಪನ್ಯಾಸಕಿ ಪ್ರಶಸ್ತಿಗೆ ಪ್ರಸ್ತುತಿ ಪಡಿಸಲು ಆಯ್ಕೆಯಾದ ಆರು ಅಭ್ಯರ್ಥಿಗಳಲ್ಲಿ ಇವರೂ ಒಬ್ಬರು.

‘#ರಾಷ್ಟ್ರ_ಪ್ರಶಸ್ತಿ ಬಂದಾಗ ಏನನಿಸಿತು?’ ಎಂದು ಟೀಚರ್ ಗೆ ಕೇಳಿದಾಗ ‘ ಮನೆಯವರು, ಸಹೋದ್ಯೋಗಿಗಳು ಎಲ್ಲರಿಗಿಂತ ಹೆಚ್ಚಾಗಿ ನನ್ನ ಗುರುಗಳು ಅವರಿಗೇ ಪ್ರಶಸ್ತಿ ಬಂದಷ್ಟು ಸಂತೋಷ ಪಟ್ಟರು. ಅದಕ್ಕಿಂತ ಸಂತೋಷ ಇನ್ನೇನಿದೆ?’ ಎಂದು ನನಗೇ ಕೇಳುತ್ತಾ ತಮ್ಮ ವಿದ್ಯಾರ್ಥಿಗಳಿಗೆ ಬಂದ ಪ್ರಶಸ್ತಿಗಳ ವಿಷಯ ಹಂಚಿಕೊಂಡರು.
“ಬಂದ್ರವಾಡ ಪ್ರದೇಶ, ಅಫ್ಜಲ್ಫುರ್ ತಾಲ್ಲೂಕ, ಕಲ್ಬುರ್ಗಿಯ ಜಿಲ್ಲೆಯ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆ ಮತ್ತು ಅಭ್ಯಾಸ”ದ ಬಗ್ಗೆ ಮಾಡಿದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳ ಜೊತೆಗೆ, ಈ ವಿದ್ಯಾರ್ಥಿಗಳು 26ನೇಯ ರಾಷ್ಟ್ರ ಮಟ್ಟದ ಮಕ್ಕಳ ವಿಜ್ಞಾನ ಕಾಂಗ್ರೆಸ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಭಾಗ್ಯವನ್ನು 2018ರಲ್ಲಿ ಪಡೆದಿದ್ದರು. ‘ಈ ದಿನ ನಮ್ಮ ಶಾಲೆಯ ಮಕ್ಕಳು ದಾರಿಯಲ್ಲಿ ಕಾಣ ಸಿಗುವ ಅನೇಕ ಗಿಡ, ಮರಗಳ ಹೆಸರು, ಅದರ ಉಪಯೋಗ ಹೇಳ ಬಲ್ಲವರಾಗಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು. ಇವರ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಂರಕ್ಷಣೆ ಸಂಶೋಧನ ಸಂಸ್ಥೆ(ಪಿ.ಸಿ.ಆರ್.ಐ) ಎರ್ಪಡಿಸಿದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರೂ.5000/- ನಗದು ಪ್ರಶಸ್ತಿ ಪಡೆದಿದ್ದಾರೆ.
ಕೇವಲ ನಿಗದಿತ ಪಾಠ ಮಾತ್ರ ಮಾಡದೇ ಸ್ವಚ್ಛ ಭಾರತ್ ಅಭಿಯಾನ, ಆರೋಗ್ಯ, ಪರಿಸರ ವಿಷಯಗಳ ಬಗ್ಗೆ ನಾಟಕ, ಜಾಥ, ಚರ್ಚೆ ಇತ್ಯಾದಿಗಳನ್ನು ಏರ್ಪಡಿಸಿ ಸಮುದಾಯದಲ್ಲಿ ಅರಿವು ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲದರ ಕಾರಣದಿಂದ ‘ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭೆ ಪರೀಕ್ಷೆ’ ನಡೆಸುವ ಪುಟಾಣಿ ವಿಜ್ಞಾನ ಸಂಸ್ಥೆಯಿಂದ ಇವರು ‘ರಾಜ್ಯ ಮಟ್ಟದ ಉತ್ತಮ ವಿಜ್ಞಾನದ ಸಂಘಟಕಿ’ ಪ್ರಶಸ್ತಿಯನ್ನು 2005, 2011, 2015ರಲ್ಲಿ ಪಡೆದರೆ, 2012 ಮತ್ತು 2014ರಲ್ಲಿ ಎರಡುಬಾರಿ ‘ರಾಷ್ಟ್ರ ಮಟ್ಟದ ಉತ್ತಮ ವಿಜ್ಞಾನದ ಸಂಘಟಕಿ’ ಪ್ರಶಸ್ತಿ ಇವರನ್ನು ಅರಸಿ ಬಂದಿವೆ.
ತಮ್ಮ ಬಿಡುವಿನ ಸಮಯದಲ್ಲಿ ಅಗಸ್ತ್ಯ ಅಂತರರಾಷ್ಟ್ರೀಯ ದತ್ತಿ ಸಂಸ್ಥೆ, ಅಜೀಂ ಪ್ರೇಮ್‍ಜಿ ದತ್ತಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶೈಕ್ಷಣಿಕ ತರಬೇತಿ ಪಡೆದು ವಿದ್ಯಾರ್ಥಿಗಳ ತರಬೇತಿಯಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿದ್ದಾರೆ. ಆಕಾಶವಾಣಿ, ದೂರದರ್ಶನ ಮತ್ತು ಇನ್ನಿತರ ಶಾಲೆ, ಕಾಲೇಜಗಳಿಗೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಆಜೀವ ಸದಸ್ಯರಾಗಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸಮಾಡುತ್ತಾ ವಿಜ್ಞಾನದ ವಿಷಯಗಳ ಮೇಲೆ “ಬಾಲ ವಿಜ್ಞಾನ” ಮತ್ತು ಇತರ ಕನ್ನಡ ದಿನಪತ್ರಿಕೆಗಳಲ್ಲಿ ಬರೆಯುತ್ತಾ ವೈಜ್ಞಾನಿಕ ಚಿಂತನೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಫೋಟೋ ಕೃಪೆ : My gov
ಶಿಕ್ಷಕಿಯ ಕೆಲಸದ ಜೊತೆಗೆ ಸಸ್ಯ ಶಾಸ್ತ್ರದಲ್ಲಿ ವೈಜ್ಞಾನಿಕ ಫ್ರೌಢ ಪ್ರಬಂಧವನ್ನು ಕಾರಣ್ಯ ವಿಶ್ವವಿದ್ಯಾಲಯ, ಕೊಯಂಬತ್ತೂರ್,ತಮಿಳುನಾಡಿನಲ್ಲಿ 2011ರಲ್ಲಿ ನಡೆದ #ಅಂತರರಾಷ್ಟ್ರೀಯ_ ಸಮ್ಮೇಳನದಲ್ಲಿ ಪ್ರಕಟಿಸಿದ್ದಾರೆ.
ಕಳೆದ ಕೊರೋನ ಸಮಯದಲ್ಲಿ ತಮ್ಮ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಆನ್ ಲೈನ್ ತರಗತಿಗಳನ್ನು ಸಮನ್ವಯಗೊಳಿಸಿದ ಹೆಗ್ಗಳಿಕೆ ಜೊತೆಗೆ ಶಿಕ್ಷಣ ಇಲಾಖೆಯ ಪ್ರಸ್ತುತ ಪಡಿಸಿದ ಅನೇಕ ವೆಬಿನಾರ್ ಗಳ ಹಿಂದೆ ನಿಂತು ಕೆಲಸ ಮಾಡಿದ್ದಾರೆ.

‘ಯಾವುದೇ ವಿಷಯದಲ್ಲೂ ಒಂದು ಕುತೂಹಲ, ಕೇಳಿ ತಿಳಿದುಕೊಳ್ಳುವ ಆಸಕ್ತಿ, ಸೂಕ್ಷ್ಮವಾಗಿ ಮಾಡುವ ಅವಲೋಕನ, ಬಂದ ಫಲಿತಾಂಶದ ವಿಮರ್ಶಾತ್ಮಕ ವಿಶ್ಲೇಷಣೆ ಮಾಡುವುದನ್ನು ಕಲಿತಾಗ ಮಾತ್ರ ಸಂವಿಧಾನದ ಆಶಯದಂತೆ ವಿಜ್ಞಾನ ಶಿಕ್ಷಣದ ಉದ್ದೇಶವಾದ ತರ್ಕಬದ್ಧವಾದ ಮತ್ತು ವೈಜ್ಞಾನಿಕವಾಗಿ ಯೋಚಿಸುವ ಮತ್ತು ಜವಾಬ್ದಾರಿಯುತ ಸಮಾಜಮುಖಿ ನಾಗರೀಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎನ್ನುವುದು ಘೋಷಣೆ ಮಾತ್ರ ಆಗಿರದೆ ಕಾರ್ಯ ರೂಪಕ್ಕಿಳಿಸಿರುವುದು ಶ್ರೀಮತಿ ಸುರೇಖ ಜಗನ್ನಾಥರವರ ಹೆಗ್ಗಳಿಕೆ.
ವಿಜ್ಞಾನದ ಟೀಚರ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಹೈಸ್ಕೂಲ್ ನಂತರದ ವಿದ್ಯಾಭ್ಯಾಸಕ್ಕೂ ಅವರ ಕೈ ಜೋಡಿಸಿದ್ದಾರೆ. ಎಲ್ಲಾ ಕೆಲಸಕ್ಕೆ ಇವರ ಪತಿ ಸ್ವತಃ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿರುವ ಜಗನ್ನಾಥ್ ಕೈ ಜೋಡಿಸಿದ್ದಾರೆ.

ಫೋಟೋ ಕೃಪೆ : My gov
’10 ನೇಯ ತರಗತಿಯ ನಂತರ ಮುಂದೇನು ಎಂದು ತಿಳಿಯದೇ ಹೋದಾಗ, ಅವರ ಪತಿ ಪ್ರಾಂಶುಪಾಲರಾಗಿದ್ದ ‘ನೋಬಲ್ ಕಾಲೇಜಿ’ಗೆ ಸೇರಿಸಿ ಅವರೇ ಎರಡು ವರ್ಷದ ಶುಲ್ಕ ಕಟ್ಟಿದರು. ಅವರ ಸಲಹೆಯಂತೆ ಮುಂದೆ ಯು.ವಿ.ಸಿ.ಇ. ಯಲ್ಲಿ ಓದಿ, ಈಗ ಕೆ.ಪಿ.ಟಿ.ಸಿ.ಎಲ್. ನಲ್ಲಿ ಇಂಜನೀಯರ್ ಕೆಲಸ ಮಾಡುತ್ತಿದ್ದೇನೆ ‘ ಎಂದು #ವೈಜನಾಥ್_ಪಾಟೀಲ್ ಹೇಳುತ್ತಾ, ಈ ತರಹ ಅನೇಕರಿಗೆ ಬೆನ್ನೆಲುಬಾಗಿ ಟೀಚರ್ ನಿಂತಿದ್ದಾರೆಂದು ಕೃತಜ್ಞತೆಯಿಂದ ನೆನಪಿಸಿಕೊಂಡರು. ಈ ವಿದ್ಯಾರ್ಥಿಗಳು ಈಗ ಹೇಳುವ ಮಾತು-‘ಅವರು ಟೀಚರ್ ಮಾತ್ರವಲ್ಲ. ನಮ್ಮ ತಾಯಿಯೇ ಸರಿ’. ಈ ಮಾತುಗಳು ಒಬ್ಬ ಟೀಚರ್ ಗೆ ಸಿಗಬಹುದಾದ ಅತಿ ದೊಡ್ಡ ಬಹುಮಾನವೇ ಸರಿ. ಪಾಟೀಲ್, ಸಚಿನ್, ನಾಗಾರಾಜ್ ಕೇವಲ ಉದಾಹರಣೆಗಳು ಮಾತ್ರ. ಈವರೆಗೆ ಬಹುಶಃ 2000ಕ್ಕೂ ಹೆಚ್ಚು ವೈಜ್ಞಾನಿಕ ಮನೋಭಾವದ ಒಂದು ಹೊಸ ಸಮುದಾಯವೇ ಸುರೇಖರವರ ಗರಡಿಯಲ್ಲಿ ತಯಾರಾಗಿದ್ದಾರೆ.

ಓಮ್ಮೆ ಡಾಕ್ಟರ್ ಆಗಲು ಆಸೆ ಪಟ್ಟಿದ್ದರೂ ನಂತರ ಸಾದ್ಯವಾಗದೇ ಇದ್ದಾಗ ತಂದೆಯ ಮಾತಿನಂತೆ ತಮ್ಮ ನೆಚ್ಚಿನ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಈ ದಿನ ಇವರ ಅನೇಕ ವಿದ್ಯಾರ್ಥಿಗಳು ಡಾಕ್ಟರ್, ಇಂಜನೀಯರ್, ವಿಜ್ಞಾನದ ಅನೇಕ ವಿಷಯಗಳಲ್ಲಿ ಪದವೀಧರರಾಗಿ ಕೆಲಸಮಾಡಲು ಸ್ಪೂರ್ತಿ ತುಂಬಿದ್ದಾರೆ. ಇದಕ್ಕೆಲ್ಲಾ ತಮ್ಮ ಗುರುಗಳ ಸ್ಪೂರ್ತಿ, ಶಾಲೆಯಲ್ಲಿ ಸಹೋದ್ಯೋಗಿಗಳ ಸಹಕಾರ ಮತ್ತು ಮನೆಯವರು ಜೊತೆಗೆ ನಿಂತಿರುವುದನ್ನು ಕೃತಜ್ಞತೆಯಿಂದ ಸುರೇಖ ಟೀಚರ್ ನೆನಸುತ್ತಾರೆ.
‘ನೋಡಿ ತಿಳಿ, ಮಾಡಿ ಕಲಿ’ ಕೇವಲ ಘೋಷಣೆ ಮಾತ್ರ ಆಗಿರದೆ ಅಕ್ಷರಶಃ ಜಾರಿಗೆ ತಂದಿರುವ ಶ್ರೀಮತಿ ಸುರೇಖ ಜಗನ್ನಾಥ ಎಲ್ಲರಿಗೂ ಮಾದರಿ. ಇವರು ನಮ್ಮ ಕರ್ನಾಟಕದ ಹೆಮ್ಮೆಯ ಸಾಧಕಿ.
ಧನ್ಯವಾದಗಳು.
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್) ಕ.ವಿ.ನಿ.ನಿ, ಲೇಖಕರು), ಬೆಂಗಳೂರು.
