ಸ್ವಾಮಿ ವಿವೇಕಾನಂದರು 1863 ಜನವರಿ 12ರಂದು ಕಲ್ಕತ್ತಾದಲ್ಲಿ ಸಾಂಪ್ರದಾಯಿಕ ಹಾಗೂ ಶ್ರೀಮಂತ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ವಿಶ್ವನಾಥ ದತ್ತ ಮತ್ತು ತಾಯಿಯ ಹೆಸರು ಭುವನೇಶ್ವರಿ ದೇವಿ. ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ ದತ್ತ ಇವರ ತಂದೆ ವಿಶ್ವನಾಥ ದತ್ತ ರವರು ಕಲ್ಕತ್ತಾ ಹೈಕೋರ್ಟಿನಲ್ಲಿ ವಕೀಲರಾಗಿದ್ದರು. ತಾಯಿ ಮಹಾನ್ ದೈವ ಭಕ್ತೆ. – ಚೇತನ ಭಾರ್ಗವ ತಪ್ಪದೆ ಮುಂದೆ ಓದಿ…
ಭುವನೇಶ್ವರಿ ದೇವಿಯವರಿಗೆ ಹೆಣ್ಣು ಮಕ್ಕಳಿದ್ದರೂ, ಭಗವಂತ ಮಡಿಲು ತುಂಬುವ ಗಂಡು ಮಗು ಕರುಣಿಸು ಎಂದು ಪ್ರತಿದಿನ ಶಿವನನ್ನು ಪ್ರಾರ್ಥಿಸುತ್ತಿದ್ದರು. ಪೂರ್ಣ ಭಕ್ತಿ ಶ್ರದ್ಧೆಗಳಿಂದ ಪೂಜೆ ಪ್ರಾರ್ಥನೆ ಮಾಡುತ್ತಿದ್ದರು.ಆ ಪೂಜೆಯ ಫಲವಾಗಿ ಅವರಿಗೆ ಗಂಡು ಮಗು ಜನನವಾಯಿತು. ಅಂದು ಮಕರ ಸಂಕ್ರಾಂತಿಯ ಶುಭದಿನ. ಮಹಿಳೆಯರೆಲ್ಲರೂ ಗಂಗಾ ಸ್ನಾನಕ್ಕೆ ಎಂದು ತೆರಳಿದ್ದರು. ಭುವನೇಶ್ವರಿ ದೇವಿಯವರ ಮನೆಯಿಂದ ಕೇಳಿ ಬರುತ್ತಿದ್ದ ಶಂಖ ಧ್ವನಿಯನ್ನು ಕೇಳಿಸಿಕೊಂಡು ಏನೋ ಶುಭ ಸಮಾಚಾರವಿರಬಹುದು ಎಂದು ಅವರ ಮನೆಗೆ ಮಹಿಳೆಯರೆಲ್ಲರೂ ಓಡಿ ಹೋದರು.
ಸುಂದರವಾದ ದುಂಡು ಕೆನ್ನೆಯ ತುಂಬಾ ಮುಗುಳ್ನಗೆಯ ಅಗಲವಾದ ಅದ್ಭುತವಾದ ಕಣ್ಣುಗಳುಳ್ಳ ಗಂಡು ಮಗುವನ್ನು ನೋಡಿ ಎಲ್ಲರಿಗೂ ಆನಂದವಾಯಿತು. ಅವರೆಲ್ಲ ಹಿಂದೆಂದೂ ಇಷ್ಟು ಸುಂದರವಾಗಿರುವ ಮಗುವನ್ನು ನೋಡಿಯೇ ಇರಲಿಲ್ಲ. ಈ ಮಗುವನ್ನು ಕಂಡು ಇದೊಂದು ವಿಶಿಷ್ಟ ಮಗು ಎಂದು ಭವಿಷ್ಯನುಡಿದರು. ಈ ಮಗುವು ಶಿವನ ವರಪ್ರಸಾದವೇ ಎಂದು ಭುವನೇಶ್ವರಿಯವರು ದೃಢವಾಗಿ ನಂಬಿದ್ದರು. ಮಗುವಿಗೆ ಅನ್ನ ಪ್ರಾಶನ ಮಾಡುವ ದಿನದಂದು ನರೇಂದ್ರನಾಥ ದತ್ತ ಎಂದು ಹೆಸರನ್ನಿಟ್ಟರು. ನರೇಂದ್ರ ಎಂದು ಸಂಭೋದಿಸುತ್ತಿದ್ದರು.
ಬಾಲ್ಯದಲ್ಲಿ ನರೇಂದ್ರನಾಥನು ಬಹಳ ತುಂಟ ಕೋಪಿಷ್ಟ ಹುಡುಗನಾಗಿದ್ದನು. ಕೆಲವು ಸಲ ಕೋಪ ಬಂದಾಗ ಇವನನ್ನು ಯಾರಿಂದಲೂ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಅವನು ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲ ಎಸೆದು ಒಡೆದು ಹಾಕಿಬಿಡುತ್ತಿದ್ದನು. ಇಂತಹ ಸಂದರ್ಭದಲ್ಲಿ ಅವರ ತಾಯಿ “ನಾನು ಶಿವನನ್ನು ನಿನ್ನಂತಹ ಮಗನನ್ನು ಕರುಣಿಸು ಎಂದು ಬೇಡಿಕೊಳ್ಳುತ್ತಿದ್ದೆ ,ಅವನಂತವನನ್ನು ಕರುಣಿಸುವ ಬದಲು ಅವನ ಭೂತ ಗಣದಲ್ಲಿ ಒಂದನ್ನು ಕರುಣಿಸಿ ಬಿಟ್ಟಿರಬೇಕು ಎಂದು ಹೇಳುತ್ತಿದ್ದರು”.

ಫೋಟೋ ಕೃಪೆ : google
ನರೇಂದ್ರನ ತುಂಟತನ ಮಿತಿಮೀರಿದಾಗ ಭುವನೇಶ್ವರಿ ದೇವಿಯವರು ಶಿವ ಶಿವ ಎನ್ನುತ್ತಾ ಅವನ ತಲೆಯ ಮೇಲೆ ಮೂರು ನಾಲ್ಕು ಕೊಡ ತಣ್ಣೀರನ್ನು ಸುರಿಯುತ್ತಿದ್ದರು. ಆಗ ನರೇಂದ್ರನು ತನ್ನ ತುಂಟತನವನ್ನು ಬಿಟ್ಟು ಶಾಂತನಾಗುತ್ತಿದ್ದನು.
ನರೇಂದ್ರನ ಬಾಲ ಲೀಲೆಗಳು ಹಲವು ಮರಕೋತಿಯಾಟ ರಾಜಮಂತ್ರಿಯ ಆಟ ಮೊದಲಾದವುಗಳನ್ನು ಆಡುತ್ತಿದ್ದನು. ಧ್ಯಾನ ಮಾಡುವುದನ್ನು ಕೂಡ ಒಂದು ಆಟವೆಂದು ಸ್ನೇಹಿತರೊಡನೆ ಆಡುತ್ತಿದ್ದನು. ಪದ್ಮಾಸನವನ್ನು ಹಾಕಿ ಕೈಗಳನ್ನು ಮಡಿಲ ಮೇಲೆ ಇಟ್ಟು ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಲು ಕುಳಿತರೆ ಬುದ್ಧನಂತೆ ಕಾಣಿಸುತ್ತಿದ್ದನು. ಹುಡುಗರೆಲ್ಲ ಸೇರಿ ಧ್ಯಾನದ ಆಟ ಆಡಲು ಪ್ರಾರಂಭಿಸಿದರು. ಎಲ್ಲರೂ ಕಣ್ಣು ಮುಚ್ಚಿ ಕುಳಿತರು. ನರೇಂದ್ರನ ಸ್ನೇಹಿತರು ಮಧ್ಯಮಧ್ಯ ಕಣ್ಣು ತೆರೆದು ನೋಡುತ್ತಿದ್ದರು. ಆದರೆ ನರೇಂದ್ರ ಮಾತ್ರ ತಪಸ್ವಿಯಂತೆ ಮಿಸುಕಾಡದೆ ಕುಳಿತಿದ್ದನು. ಆ ಹೊತ್ತಿಗೆ ಅಲ್ಲೊಂದು ಸರ್ಪವೊಂದು ಬಂದಿದ್ದು. ಅದನ್ನು ಕಂಡು ಸ್ನೇಹಿತರೆಲ್ಲರೂ ಚಂಗನೆ ನೆಗೆದು “ಅಯ್ಯೋ, ಹಾವು ಹಾವು ಎಂದು ಕಿರುಚುತ್ತಾ ಓಡಿದರು”. ಆದರೆ ನರೇಂದ್ರ ಮಾತ್ರ ಗಾಢ ಧ್ಯಾನದಲ್ಲಿ ಕುಳಿತುಕೊಂಡಿದ್ದನು ಅವರೆಲ್ಲ ದೂರದಿಂದ “ನರೇಂದ್ರ ನರೇಂದ್ರ ಏಳು ಓಡಿ ಬಾ ಸರ್ಪವಿದೆ ಕಚ್ಚುವುದು ಎಂದು ಕೂಗಿದರು”. ಅವನು ದೇವರನ್ನೇ ನೆನೆಯುತ್ತಾ ಕುಳಿತಿದ್ದನು. ನರೇಂದ್ರನಿಗೆ ಆ ಸದ್ದು ಕೇಳಲೇ ಇಲ್ಲ ಅಲುಗಾಡದೆ ಪ್ರಪಂಚದ ಅರಿವೇ ಇಲ್ಲದೆ ಧ್ಯಾನದಲ್ಲೇ ಮಗ್ನನಾಗಿ ಕುಳಿತಿದ್ದನು. ಸರ್ಪವು ಏನೂ ತೊಂದರೆ ಮಾಡದೆ ಹೊರಟು ಹೋಯಿತು.
ನರೇಂದ್ರ ಬಹಳ ಕರುಣಾಮಯಿ ಬಾಲಕನಾಗಿದ್ದನು. ಭಿಕ್ಷುಕರಿಗೆ ಸಾಧು ಸನ್ಯಾಸಿಗಳಿಗೆ ಕಷ್ಟದಲ್ಲಿ ಇರುವವರಿಗೆ ಎಂದೂ ಬರಿ ಕೈಯಲ್ಲಿ ಕಳುಹಿಸುತ್ತಿರಲಿಲ್ಲ. ಮನೆಯಲ್ಲಿ ತಮ್ಮ ಕೈಗೆ ಸಿಕ್ಕಿದ ವಸ್ತುಗಳನ್ನು ಕೊಟ್ಟು ಕಳುಹಿಸುತ್ತಿದ್ದನು.
ತಂದೆಯ ಪ್ರಗತಿಪರ ತರ್ಕ ಬದ್ಧ ವರ್ತನೆ ಮತ್ತು ತಾಯಿಯ ಧಾರ್ಮಿಕ ಮನೋಧರ್ಮ ಆಲೋಚನೆಯೂ ನರೇಂದ್ರ ನ ಮೇಲೆ ಬಹಳ ಪ್ರಭಾವ ಬೀರಿತ್ತು ನರೇಂದ್ರನಾಥನು ಬಹಳ ಚಿಕ್ಕ ವಯಸ್ಸಿನಿಂದಲೇ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದನು.
ನರೇಂದ್ರ ತುಂಬಾ ಬುದ್ಧಿವಂತ ಹುಡುಗ. ಅವನಿಗೆ ಆರು ವರ್ಷಕ್ಕೂ ಮೊದಲೇ ರಾಮಾಯಣ ಮಹಾಭಾರತದ ಕಥೆಗಳು ಬಾಯಿಗೆ ಬರುತ್ತಿತ್ತು. ಒಂದು ವ್ಯಾಕರಣದ ಪುಸ್ತಕವನ್ನು ಬಾಯಿ ಪಾಠ ಮಾಡಿ ಬಿಟ್ಟಿದ್ದ. ಏನನ್ನಾದರೂ ಒಂದು ಬಾರಿ ಕೇಳಿದರೆ ಸಾಕು ಅದನ್ನು ಎಂದಿಗೂ ಮರೆಯುತ್ತಿರಲಿಲ್ಲ. ಆತನಿಗೆ ಅಸಾಧಾರಣವಾದ ಜ್ಞಾಪಕ ಶಕ್ತಿಯಿತ್ತು.
ನರೇಂದ್ರನೋ ಮೆಟ್ರೋಪಾಲಿಟನ್ ಶಾಲೆಗೆ ಹೋಗುತ್ತಿದ್ದನು. ಅವನು ಶಿಕ್ಷಕರು ಮಾಡುವ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದನು ಅದನ್ನು ಎಂದಿಗೂ ಮರೆಯುತ್ತಿರಲಿಲ್ಲ. ಹಾಗಾಗಿ ಅವನಿಗೆ ಆಟವಾಡಲು ಇತರೆ ಚಟುವಟಿಕೆಗಳನ್ನು ಕರಗತ ಮಾಡಿಕೊಳ್ಳಲು ಹೆಚ್ಚಿನ ಸಮಯ ಸಿಗುತ್ತಿತ್ತು. ಅವನು ದೊಣ್ಣೆ ಬೀಸುವುದನ್ನು ವ್ಯಾಯಾಮ ಬಾಕ್ಸಿಂಗ್ ಮೊದಲಾದ ಆತ್ಮ ರಕ್ಷೆಯ ವಿದ್ಯೆಗಳನ್ನು ಕಲಿತಿದ್ದನು. ಯಾವ ವಿಷಯವನ್ನು ಸುಲಭಕ್ಕೆ ಒಪ್ಪುತ್ತಿರಲಿಲ್ಲ ಅದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿ ಮನವರಿಕೆ ಆದಮೇಲೆಯೇ ಸುಮ್ಮನಾಗುತ್ತಿದ್ದನು. ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದನು. ಒಮ್ಮೆ ಭೂಗೋಳ ತರಗತಿಯಲ್ಲಿ ಅವನ ಶಿಕ್ಷಕರು ಪ್ರಶ್ನೆ ಒಂದನ್ನು ಕೇಳಿದರು. ಅವನು ಸರಿಯಾದ ಉತ್ತರವನ್ನೇ ಕೊಟ್ಟಿದ್ದರು, ಆತನ ಶಿಕ್ಷಕರು ನೀನು ತಪ್ಪು ಉತ್ತರವನ್ನು ಹೇಳಿದ್ದೀಯಾ ಎಂದು ಹೇಳಿದರು. ನರೇಂದ್ರ ಇಲ್ಲ ನಾನು ಸರಿಯಾದ ಉತ್ತರವನ್ನೇ ನೀಡಿದ್ದೇನೆ ಎಂದು ವಾದಿಸಿದನು. ಶಿಕ್ಷಕರಿಗೆ ಕೋಪ ಬಂದು ಇವನಿಗೆ ಬೈದು ಹೊಡೆದರು. ನಂತರ ಅವರಿಗೆ ಇವನು ಕೊಟ್ಟ ಉತ್ತರ ಸರಿಯಾಗಿತ್ತು ಎಂದು ತಿಳಿದು ಇವನ ಬಳಿ ಕ್ಷಮೆ ಕೇಳಿದರು. ಈ ಘಟನೆ ಅವನ ದೃಢವಾದ ನಿಲುವಿಗೆ ಒಂದು ನಿದರ್ಶನ.
ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ನರೇಂದ್ರ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದನು. ಬಾಲ್ಯದಿಂದಲೂ ದೇವರ ಬಗ್ಗೆ ತುಂಬಾ ಪ್ರಶ್ನೆಗಳನ್ನು ಕೇಳುತ್ತಿದ್ದನು. ದೇವರ ಬಗ್ಗೆ ಚಿಂತಿಸಿದಷ್ಟು ಅವನಿಗೆ ದೇವರನ್ನು ಕಾಣುವ ಹಂಬಲ ಹೆಚ್ಚಾಗುತ್ತಿತ್ತು. ಧಾರ್ಮಿಕ ವ್ಯಕ್ತಿಗಳ ಬಳಿ “ಮಹಾಶಯರೇ ನೀವು ದೇವರನ್ನು ನೋಡಿದ್ದೀರಾ?” ಎಂಬ ಪ್ರಶ್ನೆಯನ್ನು ಕೇಳುತ್ತಿದ್ದನು. ಆದರೆ ಯಾರಿಂದಲೂ ಅವನಿಗೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ.

ಫೋಟೋ ಕೃಪೆ : google
ಒಂದು ದಿನ ಶ್ರೀರಾಮಕೃಷ್ಣಪರಮಹಂಸ ನರೇಂದ್ರನ ಮನೆಯ ಸಮೀಪದ ಮನೆಗೆ ಬಂದಿದ್ದರು. ಅಲ್ಲಿ ನರೇಂದ್ರನು ತನ್ನ ಸುಮಧುರ ಕಂಠದಿಂದ ಒಂದು ದೇವರ ನಾಮವನ್ನು ಹಾಡಿದನು. ಅದನ್ನು ಕೇಳಿದ ಶ್ರೀರಾಮಕೃಷ್ಣ ಪರಮಹಂಸರಿಗೆ ಬಹಳ ಸಂತೋಷವಾಯಿತು. ಅವರು ಅತ್ಯಂತ ಪ್ರೀತಿಯಿಂದ ನರೇಂದ್ರನಿಗೆ ‘ಒಮ್ಮೆ ದಕ್ಷಿಣೇಶ್ವರಕ್ಕೆ ಬಾ ಎಂದು ಆಹ್ವಾನಿಸಿದರು”.
ನರೇಂದ್ರನೋ ಒಮ್ಮೆ ದಕ್ಷಿಣೇಶ್ವರಕ್ಕೆ ಹೋದನು ಅವನನ್ನು ಪರಮಹಂಸರು ಆದರದಿಂದ ಉಪಚರಿಸಿದ್ದರು. ನರೇಂದ್ರನಿಗೆ ಬಹುದಿನದಿಂದ ಕಾಡುತ್ತಿದ್ದ ಪ್ರಶ್ನೆಯನ್ನು ಅವರ ಮುಂದೆ ಇಟ್ಟನು ಪರಮಹಂಸರು ಅವನಿಗೆ ಮನಮುಟ್ಟುವಂತೆ ಉತ್ತರಿಸಿದರು ಅವರಿಟ್ಟ ಉತ್ತರಕ್ಕೆ ಅವನಿಗೆ ಆಶ್ಚರ್ಯದೊಂದಿಗೆ ಮಹಾದಾನಂದವೂ ಆಯಿತು ಇಂತಹ ಆಧ್ಯಾತ್ಮ ಗುರುವನ್ನು ನಾನು ಇಷ್ಟು ಕಾಲ ಹುಡುಕುತ್ತಿದ್ದೆ ಎಂದು ತನ್ನೊಳಗೆ ಚಿಂತಿಸಿದನು. ನಂತರ ಅವರ ಶಿಷ್ಯನಾದನು.
ಸನ್ಯಾಸತ್ವ ದೀಕ್ಷೆಯನ್ನು ಪಡೆದ ಮೇಲೆ ನರೇಂದ್ರನಾಥನು ಸ್ವಾಮಿ ವಿವೇಕಾನಂದರಾದರು. ವಿವೇಕಾನಂದರು ಭಾರತವನ್ನು ಸಂಚರಿಸುತ್ತಾ, ಇಲ್ಲಿಯ ವಸ್ತುಸ್ಥಿತಿ ಜನಜೀವನವನ್ನು ಅಧ್ಯಾಯನ ಮಾಡತೊಡಗಿದರು ಕಾಲ್ನಡಿಗೆಯಲ್ಲಿಯೇ ಭಾರತದ ಉದ್ದಗಲಕ್ಕೂ ಸಂಚರಿಸಿದರು.
1893 ಸೆಪ್ಟೆಂಬರ್ 11ನೇ ತಾರೀಕು ಆರಂಭವಾದ ಅಮೇರಿಕಾದ ಚಿಕಾಗೋ ಧಾರ್ಮಿಕ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಕೇಸರಿ ಬಣ್ಣದ ವಸ್ತ್ರವನ್ನು ಧರಿಸಿ ಹಳದಿ ಬಣ್ಣದ ದೊಡ್ಡಪೇಟವನ್ನು ತಲೆಗೆ ಸುತ್ತಿಕೊಂಡಿದ್ದರು. ಅವರ ಮುಖ ಬೆಳಕಿನ ದೀಪಗಳಿಂದ ಪ್ರಜ್ವಲಿಸುತ್ತಿತ್ತು ಅವರು ಮನದಲ್ಲೇ ವಿದ್ಯಾಧಿದೇವತೆ ಶಾರದೆಗೆ ನಮಸ್ಕರಿಸಿ ಕೊಳ್ಳುತ್ತಾ ಅಮೆರಿಕದ ಸಹೋದರ ಸಹೋದರಿಯರೇ ಎಂದು ಸಂಬೋಧಿಸುತ್ತಾ ತಮ್ಮ ಧರ್ಮದ ಬಗ್ಗೆ ಭಾಷಣ ಮಾಡಿದರು ಅಲ್ಲಿ ನಡೆದ ಬೇರೆ ಬೇರೆ ದೇಶದ ಬೇರೆ ಬೇರೆ ಧರ್ಮದ ಪ್ರತಿನಿಧಿಗಳು ಇವರ ಭಾಷಣ ಕೇಳಿ ಮೂಕ ವಿಸ್ಮಿತರಾಗಿ ಚಪ್ಪಾಳೆ ತಟ್ಟುತ್ತಲೇ ಇದ್ದರು ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಮೊದಲ ಭಾಷಣದಿಂದಲೇ ಜಗದ್ವಿಖ್ಯಾತರಾದರು ಮರುದಿನ ಚಿಕಾಗೋ ನಗರದ ಬೀದಿ ಬೀದಿಗಳಲ್ಲಿ ಅವರ ದೊಡ್ಡ ಭಾವಚಿತ್ರವನ್ನು ಬಿತ್ತರಿಸಲಾಯಿತು.

ಫೋಟೋ ಕೃಪೆ : google
ವಿವೇಕಾನಂದರು ಹೋದ ಕಡೆಯಲ್ಲ ಜನರಿಗೆ ದೇಶ ಸೇವೆ ಮಾಡುವಂತೆ ಹುರಿದುಂಬಿಸುತ್ತಿದ್ದರು . ಹಾಗೆಯೇ ಅನೇಕ ದೇಶೋದ್ಧಾರ ಹಾಗೂ ಧರ್ಮ್ಮೋದ್ಧಾರದ ಕಾರ್ಯಗಳನ್ನು ಮಾಡಿ, ರಾಷ್ಟ್ರದ ಯುವಕರು ಅವುಗಳನ್ನು ಕೈಗೊಳ್ಳುವಂತೆ ಕರೆನೀಡಿದರು.
1897ರಲ್ಲಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಪಾಶ್ಚಿಮಾತ್ಯ ದೇಶಗಳಿಗೆ ವೇದಾಂತ ಮತ್ತು ಯೋಗವನ್ನು ಪರಿಚಯಿಸಿ ಸರ್ವಧರ್ಮದ ಜಾಗೃತಿಯನ್ನು ಮೂಡಿಸಿದರು. ಇಡೀ ವಿಶ್ವವೇ ಹಿಂದೂ ಧರ್ಮವನ್ನು ಗೌರವಿಸುವಂತೆ ಮಾಡಿದ ಕೀರ್ತಿ ಅವರದು. 1902 ಜುಲೈ 4ರಂದು ವಿವೇಕಾನಂದರು ಗಾಢ ಧ್ಯಾನಕ್ಕೆ ಕುಳಿತವರು ಹಿಂದಿರುಗಿ ಬರಲೇ ಇಲ್ಲ ಚಿರನಿದ್ರೆಯಲ್ಲಿ ಲೀನರಾದರು.
ಸ್ವಾಮಿ ವಿವೇಕಾನಂದರ ಆದರ್ಶಗಳು:
*ಏಳಿ ಎದ್ದೇಳಿ ಗುರಿ ತಲುಪುವವರೆಗೂ ನಿಲ್ಲದಿರಿ
*ಜ್ಞಾನ ನಮ್ಮ ಮಧ್ಯ ಇರುವುದು ಅದನ್ನು ನಾವು ಆವಿಷ್ಕರಿಸಬೇಕು.
*ಸದಾ ಕಾರ್ಯನ್ಮುಖರಾಗಿರಿ
*ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ
*ಕಷ್ಟ ಬಡತನ ಜೀವನವನ್ನು ಬೋಧಿಸುತ್ತದೆ.
*ಬುದ್ಧಿ ಮತ್ತು ಹೃದಯದ ಸಂಘರ್ಷದಲ್ಲಿ ಹೃದಯದ ಮಾತನ್ನು ಕೇಳಿ.
*ಮಾನವೀಯತೆಯ ಶಿಕ್ಷಣವೇ ನಿಜವಾದ ಶಿಕ್ಷಣ
*ಸತ್ಯಕ್ಕಾಗಿ ತ್ಯಾಗ ಮಾಡಿ ಸತ್ಯವನ್ನೇ ತ್ಯಾಗ ಮಾಡದಿರಿ
*ನಿಮ್ಮಲ್ಲಿ ನೀವು ಶ್ರದ್ಧೆ ಇಡಿ. ನಿಮ್ಮೊಳಗೆ ಸರ್ವಶಕ್ತಿ ಅಡಗಿದೆ.
*ವಿಕಾಸವೇ ಜೀವನ ಸಂಕೋಚವೇ ಮರಣ
*ಎಲ್ಲರನ್ನು ಸಮನಾಗಿ ಪ್ರೀತಿಸಿ
*ಮುಕ್ತಿ ಬೇಕಾದರೆ ಧಾರ್ಮಿಕ ಭೂಮಿಕೆಯಲ್ಲಿ ಸಾಧನೆ ಮಾಡಿ
*ಶುದ್ಧ ಚಾರಿತ್ರೆ ಒಂದೇ ಕಷ್ಟ ಪರಂಪರೆಗಳ ಅಭೇದ್ಯ ಕೋಟೆಯನ್ನು ಭೇದಿಸಿಕೊಂಡು ಹೋಗಬಲ್ಲದು.
- ಚೇತನ ಭಾರ್ಗವ
