ವೀರ ಸನ್ಯಾಸಿ ವಿವೇಕರೆಂದರೆ ಜಗಕೆ ಹಿಂದುಸ್ಥಾನದ ಸಿರಿ ಸಂಸ್ಕೃತಿಯ ತತ್ವ-ಸತ್ವಗಳ ಅರುಹಿದ ಮಹಾಪ್ರಣತೆ.! – ರಶ್ಮಿಪ್ರಸಾದ್ ( ರಾಶಿ) ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಅಪ್ರತಿಮ ವೀರ ಸನ್ಯಾಸಿ ವಿವೇಕರೆಂದರೆ
ವಿಶ್ವವೇ ನೆನೆವ ಭಾರತದ ಚಿರ ದಂತಕತೆ
ಇಂದಿಗೂ ಲೋಕಾದರ್ಶವಾಗಿ ಮೆರೆವ
ಧರೆಯೆಂದೂ ಮರೆಯದ ಅಮರ ಚರಿತೆ.!
ದಿಗ್ಧಿಗಂತಗಳಿಗು ಭವ್ಯ ಭಾರತೀಯತೆಯ
ಸಾರ ಸಾರಿದ ಧೀಮಂತ ಯಶೋಗಾತೆ
ಜಗಕೆ ಹಿಂದುಸ್ಥಾನದ ಸಿರಿ ಸಂಸ್ಕೃತಿಯ
ತತ್ವ-ಸತ್ವಗಳ ಅರುಹಿದ ಮಹಾಪ್ರಣತೆ.!
‘ಏಳಿ, ಎದ್ದೇಳಿ’ಯೆಂದು ಕಂಚಿನ ಕಂಠದಿ
ಯುವಕರ ಬಡಿದೆಬ್ಬಿಸಿದ ಚೈತನ್ಯದೊರತೆ
ಈ ಮಣ್ಣಿನಾ ಮೇರು ಸಂಸ್ಕಾರ ಕಿರಣಗಳ
ಬ್ರಹ್ಮಾಂಡಕೆಲ್ಲ ಹರಡಿ ಹರಸಿದ ದಿವ್ಯಹಣತೆ.!
ಅಖಂಡ ಜ್ಞಾನ ಅಗಾಧ ಅರಿವು ತಿಳಿವಿನ
ತೇಜೋಕಳೆಯಿಂದ ಮಿನುಗಿದ ಅನನ್ಯತೆ
ಅಪೂರ್ವ ಚೆಲುವು ನಿಲುವುಗಳ ವ್ಯಕ್ತಿತ್ವದಿ
ಮಾರ್ದನಿಸಿದ ಸುಮಧುರ ಜೀವನಗೀತೆ.!
ಖಾವಿಯಲಿ ಪ್ರಜ್ವಲಿಸಿದ ಮಹಾಚೇತನವೇ
ಬದುಕುಗಳ ದಿಕ್ಕು ಬದಲಿಸಿದ ದೈವಸ್ವರವೇ
ನಿಮಗಿದೋ ಜನ್ಮದಿನಕೆ ಹೃದ್ಯ ಶುಭಕಾಮನೆ
ಎದೆಯ ಭಾವ-ಭಾಷ್ಯಗಳ ಕಾವ್ಯೋಪಾಸನೆ.!
- ರಶ್ಮಿಪ್ರಸಾದ್ ( ರಾಶಿ)
