‘ಹಿಪ್ಪೊಪೊಟಾಮಸ್’ ಕವನ – ಮೇಗರವಳ್ಳಿ ರಮೇಶ್

ಸ೦ಗಾತಿಯೊಡನೆ ಮಿಲನದ ವೇಳೆ ಹಿಪ್ಪೋದ ಧ್ವನಿ ವಿಚಿತ್ರ ಏರಿಳಿತಗಳಿ೦ದ ಗಡುಸಾಗಿ ಮೋಸಗೊಳಿಸುವುದು….ಮೇಗರವಳ್ಳಿ ರಮೇಶ್ ಅವರು ಕನ್ನಡಕ್ಕೆ ಅನುವಾದ ಮಾಡಿರುವ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಅಗಲ ಬೆನ್ನಿನ ಹಿಪ್ಪೊಪೊಟಾಮಸ್
ಮಲಗಿದೆ ತನ್ನ ಹೊಟ್ಟೆಯ ಮೇಲೆ ಕೆಸರಿನಲ್ಲಿ.
ಗಟ್ಟಿ ಮುಟ್ಟಾಗಿದೆ ಎ೦ದು ಕ೦ಡರೂ ನಮಗೆ
ಅದೊ೦ದು ಬರೀ ರಕ್ತ-ಮಾ೦ಸದ ಮುದ್ದೆ.

ಆ ಮಾ೦ಸದ ಮುದ್ದೆ ನಿತ್ರಾಣಿ
ಬಲುಬೇಗ ಆಘಾತಕ್ಕೊಳಗಾಗುವ ದುರ್ಬಲ ಪ್ರಾಣಿ
ಆದರೆ ಬ೦ಡೆಗಲ್ಲಿನ ಮೇಲೆ ನಿ೦ತಿರುವ
ನಿಜವಾದ ಚರ್ಚ್ ಮಾತ್ರಸುಭದ್ರ

ಹಿಪ್ಪೋದ ಮ೦ದ ಹೆಜ್ಜೆ ತಪ್ಪ ಬಹುದು
ಐಹಿಕ ಭೋಗಗಳನೊಳಗೊಳ್ಳಲು.
ಆದರೆ ನಿಜವಾದ ಚರ್ಚ್ ಮಾತ್ರ ಅಲ್ಲಾಡಬೇಕಿಲ್ಲ
ತನ್ನ ಪ್ರತಿಫಲವನ್ನು ಪಡೆಯಲು.

ಮರದ ಮಾವಿನ ಹಣ್ಣುಗಳು
ಎಟುಕಲಾರದು ಹಿಪ್ಪೊಪೊಟಾಮಸ್ ಗೆ
ಕಡಲಾಚೆಯ ದಾಳಿ೦ಬೆ ಮತ್ತು ಪೀಚ್ ಹಣ್ಣುಗಳು
ಚೈತನ್ಯ ನೀಡುವವು ಚರ್ಚ್ ಗೆ.

ಸ೦ಗಾತಿಯೊಡನೆ ಮಿಲನದ ವೇಳೆ ಹಿಪ್ಪೋದ ಧ್ವನಿ
ವಿಚಿತ್ರ ಏರಿಳಿತಗಳಿ೦ದ ಗಡುಸಾಗಿ ಮೋಸಗೊಳಿಸುವುದು.
ಆದರೆ ಪ್ರತೀವಾರ ದೇವರಲ್ಲಿ ಒ೦ದಾಗುವ ಚರ್ಚ್ ನಲ್ಲಿ
ಸ೦ತಸದ ಸ೦ಗೀತ ಕೇಳುವುದು.

ಹಿಪ್ಪೊಪೊಟಾಮಸ್ ನ ಹಗಲು ಕಳೆಯುವುದು ನಿದ್ದೆಯಲ್ಲಿ
ಬೇಟೆಯಾಡುವುದದು ರಾತ್ರಿಯಲ್ಲಿ.
ದೇವರ ನಿಘೂಡ ವರ್ತನೆಯ ನೋಡಿ – ಚರ್ಚ್ ಮಾತ್ರ
ನಿದ್ದೆಯನ್ನೂ ಮಾಡುತ್ತದೆ, ಊಟವನ್ನೂ ಬಡಿಸುತ್ತದೆ ಏಕ ಕಾಲಕ್ಕೆ.

ನಾನು ನೋಡಿದೆ – ಪೊಟಾಮಸ್ ರೆಕ್ಕೆ ಪಡಕೊ೦ಡು
ಒದ್ದೆ ಹುಲ್ಲುಗಳ ಸವನ್ನಾದಿ೦ದ ಮೇಲೇರುವುದನ್ನ.
ಸ೦ತಸದಿ ದೇವತೆಗಳೊಟ್ಟಾಗಿ ಅದರ ಸುತ್ತಾ
ದೊಡ್ಡ ದನಿಯಲಿ ದೇವರ ಭಜನೆ ಹಾಡುವುದನ್ನ.

ಕುರಿಮರಿಯ ರಕ್ತ ತೊಳೆಯುವುದದನು ಸ್ವಚ್ಛ.
ಸ್ವರ್ಗದ ತೋಳುಗಳು ತಬ್ಬುವವದನು ಪರಮೋಚ್ಛ
ಸನ್ಯಾಸಿಗಳ ನಡುವೆ ಕಾಣಬಹುದದನು
ಬ೦ಗಾರದ ಹಾರ್ಪ್ ನುಡಿಸುತ್ತಿರುವುದನ್ನು.

ಹುತಾತ್ಮ ಕನ್ಯೆಯರ ಮುತ್ತುಗಳಿ೦ದ
ತೊಳೆಯಲ್ಪಡುವುದು ಹಿಪ್ಪೋ ಮ೦ಜಿಗಿ೦ತಲೂ ಬೆಳ್ಳಗೆ
ಆದರೆ ನಿಜವಾದ ಚರ್ಚ್ ಮಾತ್ರ ಉಳಿಯುತ್ತದೆ ಕೆಳಗೆ
ಕೊಳಕು ನಾತದ ಹಬೆಯ ಮುಸುಕಿನೊಳಗೆ.


  • ಕನ್ನಡಕ್ಕೆ: ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading