ವೇದಾವತಿ ನದಿಯು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟಿದೆ.ಈ ನದಿಯು ಹರಿಯುತ್ತಾ ಮುಂದೆ ಸಾಗಿ ಕಡೂರು ಬಳಿಯಲ್ಲಿ ಮಗದ ಕೆರೆಯಿಂದ ಹರಿದು ಬರುವ ಪ್ರಖ್ಯಾತವಾದ ಅವತಿ ಹಳ್ಳದೊಂದಿಗೆ ಸೇರಿದ್ದಕ್ಕಾಗಿ ವೇದಾವತಿ ಎಂದು ಹೆಸರು ಪಡೆದು ನದಿಯಾಗಿ ಮುಂದೆ ಸಾಗಿದೆ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ವೇದಾವತಿ ನದಿ ಕುರಿತಾಗಿದೆ, ತಪ್ಪದೆ ಮುಂದೆ ಓದಿ…
ನದಿಗಳು ಎಂದರೆ ಸರ್ವ ಪ್ರತಿಕಗಳ ಮೂಲ.ನಾಡಿನ ಪ್ರತಿ ಕ್ಷೇತ್ರಕ್ಕೂ ತಮ್ಮದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತವೆ.ನದಿಗಳು ಜನಿಸುವ ಸ್ಥಳಗಳಲ್ಲಿ ಅರಣ್ಯ ದೇವಾಲಯಗಳು ನೆಲೆಯೂರಿದ್ದರಿಂದ ಅಲ್ಲಲ್ಲಿ ಧಾರ್ಮಿಕ ಕ್ಷೇತ್ರಗಳಾಗಿ. ಪ್ರಸಿದ್ಧ ಅಭಯಾರಣ್ಯ,ವನ್ಯಧಾಮಗಳಾಗಿ,ಕಾಡು, ಅಡವಿಗಳಾಗಿ ಸ್ಥಾಪಿಸಿಕೊಂಡು ಪ್ರತಿ ಆಯಾಮಗಳಿಂದ ದೇಶದ ಸಂಪನ್ಮೂಲಗಳನ್ನು ಹೆಚ್ಚಿಸುವಲ್ಲಿ ನದಿಗಳ ಪಾತ್ರವೂ ಅನನ್ಯ ಅನುಪಮ.ಇಂತಹ ನದಿಗಳ ಸಾಲಿನಲ್ಲಿ ಕಂಡು ಬರುವ ಪ್ರಮುಖ ನದಿಯೇ ವೇದಾವತಿ ನದಿ.

ಫೋಟೋ ಕೃಪೆ : google
ಈ ನದಿಯ ಹೆಸರು ಕೇಳುತ್ತಿದ್ದಂತೆ ಪೌರಾಣಿಕ ಹಿನ್ನೆಲೆ ಹೊಂದಿರಬಹುದೆಂದು ಮೇಲ್ನೋಟಕ್ಕೆ ಸಹಜವಾಗಿಯೇ ತಿಳಿಯಲಾಗುತ್ತದೆ.ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜನ್ಮ ತಾಳುವ ಈ ನದಿ ಹಸಿರು ಸಿರಿಯಲ್ಲೆ ಗರ್ಭದರಿಸಿ ಅರಣ್ಯದ ಆರೈಕೆಯಲ್ಲಿಯೇ ಬೆಳೆದಿದೆ.ಬರ ಬರುತ್ತಾ ಅಗಾಧವಾದ ಪ್ರದೇಶವನ್ನು ಆವರಿಸಿಕೊಳ್ಳುತ ಜೀವರಾಶಿಗಳನ್ನು ಪೊರೆಯುತ್ತ ಸಾಗುತ್ತದೆ. ಬರದಿಂದ ಕಂಗೆಟ್ಟ ಭೂಮಿಗಳಿಗೆ ಈ ನದಿಯಿಂದ ಸಾವಿರಾರು ಹೆಕ್ಟೇರ್ ಭೂಮಿಗಳು ತಣಿದಿದ್ದು ಪುನರ್ಜನ್ಮ ಪಡೆದಂತಾಗಿದೆ.
ವೇದಾವತಿ ನದಿಯು ದಟ್ಟ ಹಸಿರಿನಿಂದ ಕೂಡಿದ ಹಲವು ಪ್ರಸಿದ್ಧ ಬೆಟ್ಟ ಗುಡ್ಡಗಳನ್ನು ಹೊಂದಿದ ಹಸಿರ ಸೀರೆಯ ಒಡಲೆಂದು ಹೆಸರಾದ ಕರ್ನಾಟಕದ ಹಸಿರಿನ ಧಾಮವಾದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟಿದೆ.ಈ ನದಿಯು ಹರಿಯುತ್ತಾ ಮುಂದೆ ಸಾಗಿ ಕಡೂರು ಬಳಿಯಲ್ಲಿ ಮಗದ ಕೆರೆಯಿಂದ ಹರಿದು ಬರುವ ಪ್ರಖ್ಯಾತವಾದ ಅವತಿ ಹಳ್ಳದೊಂದಿಗೆ ಸೇರಿದ್ದಕ್ಕಾಗಿ ವೇದಾವತಿ ಎಂದು ಹೆಸರು ಪಡೆದು ನದಿಯಾಗಿ ಮುಂದೆ ಸಾಗಿದೆ.ಈ ನದಿಯು ಕೂಡ ವಿಶಿಷ್ಟವಾಗಿದ್ದು ಏಕೆಂದರೆ ಹಳ್ಳದೊಂದಿಗೆ ಬೆರೆಯುವ ಈ ನದಿಗೆ ಹಳ್ಳದ ಹೆಸರು ಕೂಡ ಜೊತೆಯಾಗಿ ವೇದಾವತಿ ಎಂಬ ಹೆಸರು ಬಂದಿದ್ದು ಹಳ್ಳಗಳ ಮಹತ್ವವನ್ನು ಕೂಡ ಸಾರಿ ಹೇಳುವಂತಿದೆ. ಹಳ್ಳಗಳು ಕೂಡ ನದಿಯ ಜೀವನಾಡಿ ಎಂದು ಸಾರಿದಂತಿದೆ.

ಫೋಟೋ ಕೃಪೆ : google
ಈ ನದಿಯು ಒಂದಿಲ್ಲ ಒಂದು ರೀತಿಯಲ್ಲಿ ತನ್ನದೆಯಾದ ವೈಭವದೊಂದಿಗೆ, ವಿಭಿನ್ನತೆಗೆ ಹೆಸರಾಗಿದ್ದಂತೂ ಸುಳ್ಳಲ್ಲ.ಹಾಗಾಗಿ ಇದಕ್ಕೆ ಪ್ರಸಿದ್ಧ ಜಲಾಶಯಾದ ಅಣೆಕಟ್ಟು ನಿರ್ಮಾಣವಾಗಿದ್ದು ಇದರ ಮತ್ತೊಂದು ಗರಿಮೆಯನ್ನು ಸಾರುತ್ತದೆ. ದೇಶ ಕಂಡ ಅಪ್ರತಿಮ ಅಭಿಯಂತರರಾದ ಸರ್ ಎಂ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ವಾಣಿ ವಿಲಾಸಸಾಗರದ ಅಣೆಕಟ್ಟು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಈ ಆಣೆಕಟ್ಟನ್ನು ಅಡ್ಡಲಾಗಿ ನಿರ್ಮಿಸಿದ್ದು ಕೂಡ ಇದೆ ನದಿಗೆ ಹಾಗಾಗಿ ಈ ನದಿಗೆ ಅಣೆಕಟ್ಟು ನಿರ್ಮಿಸಿದ್ದರಿಂದ ಸಾವಿರಾರು ರೈತರ ಪಾಲಿಗೆ ದೇವರಾಗಿದೆ.ನೀರಾವರಿಗೆ ಬಹಳಷ್ಟು ಅನುಕೂಲವಾಗಿದ್ದು ಕೃಷಿ ವಲಯಕ್ಕೆ ಆಪ್ತವಾಗಿ ಆರ್ಥಿಕತೆಗೆ ಬೆನ್ನೆಲುಬಾಗಿದೆ.
ವಾಣಿವಿಲಾಸ ಸಾಗರ ಜಲಾಶಯದಿಂದ ಮುಂದೆ ಹರಿಯುತ್ತ ನೆರೆಯ ರಾಜ್ಯವಾದ ಆಂಧ್ರಪ್ರದೇಶವನ್ನು ಸೇರುತ್ತದೆ.ಅಂದರೆ ಇಂದು ಕರ್ನಾಟಕವಷ್ಟೇ ಅಲ್ಲದೆ ಆಂಧ್ರಕ್ಕೂ ಕೂಡ ತನ್ನ ಪಥವನ್ನು ಚಾಚಿದೆ.ಇದು ಹುಟ್ಟಿದ್ದೂ ಕರ್ನಾಟಕವಾದರೂ ತನ್ನ ವ್ಯಾಪ್ತಿಯನ್ನು ಪಸರಿಸುತ್ತ ಆಂಧ್ರದ ಬಳಿ ಹರಿಯುತ್ತಾ ಆ ನೆಲೆಯಲ್ಲಿ ಹಗರಿ ನದಿಯಾಗಿ ಮುನ್ನಡೆಯುತ್ತಾ ವರದಾನವಾಗಿದೆ.ಹಾಗೂ ಆಂಧ್ರದ ಬಳಿಯಲ್ಲಿ ಹರಿಯುವುದರಿಂದ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾಗಿದ್ದು ಕೈಗಾರಿಕೆಗಳಿಗೆ ಅಧಿಕ ಪ್ರಮಾಣದಲ್ಲಿ ಉದಕವನ್ನು ಒದಗಿಸುತ್ತದೆ.ಹಾಗಾಗಿ ಆಂಧ್ರದ ಆರ್ಥಿಕ,ಕೃಷಿ,ಕ್ಷೇತ್ರಕ್ಕೆ ಇದರ ಪಾಲು ಅಗಾಧವಾಗಿದೆ.
ಈ ನದಿಯು ಹಗರಿ ನದಿಯಾಗಿ ಹರಿಯುತ್ತಾ ಮುಂದೆ ತನ್ನ ಪಥದ ದಿಕ್ಕನ್ನು ಬದಲಿಸುತ್ತಾ ತುಂಗಭದ್ರಾ ನದಿಯೊಂದಿಗೆ ಬೆರೆಯುತ್ತಾ ಮುನ್ನಡೆಯುತ್ತದೆ.ಅಂದರೆ ಈ ನದಿಯು ನಿಸ್ವಾರ್ಥಕ್ಕೆ ಹೆಸರಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ತಾನು ಹರಿಯುವ ದಿಕ್ಕಿನಲ್ಲಿ ಬರುವ ಹಳ್ಳ ಕೊಳ್ಳ, ನದಿಗಳನ್ನು ತನ್ನೊಡಲಲಿ ಪೋಷಿಸುತ್ತಾ ಅವುಗಳೊಂದಿಗೆ ಸಾಗುತ್ತ ದ್ವಿ ರಾಜ್ಯಗಳ ಪಾಲಕನಾಗಿ ಪೊರೆಯುತ್ತದೆ. ಇನ್ನೊಂದು ವಿಶೇಷವೆಂದರೆ ಈ ನದಿಯು ಅಲ್ಲಲ್ಲಿ ಬೇರೆ ಬೇರೆ ನದಿಗಳ ಸ್ನೇಹ ಬೆಳೆಸುವುದು ಇದರ ಗುಣವೇನೋ ಎಂದಂತೆ ಭಾಸವಾಗುತ್ತದೆ.ಹಾಗಾಗಿ ಈ ನದಿ ಎಲ್ಲ ನದಿಗಳಿಗಿಂತ ತುಂಬಾ ವಿಶೇಷವಾಗಿದೆ ಈ ನದಿ ತುಂಗಭದ್ರಾ ವಿಲೀನವಾಗುವುದರೊಂದಿಗೆ ಮೊದಲು ಈ ನದಿಯನ್ನು ಸುವರ್ಣ ಮುಖಿ ನದಿಯು ಸಂಗಮಿಸುತ್ತದೆ.
ವೇದಾವತಿ ನದಿಯು ಅವತಿ ಹಳ್ಳದೊಂದಿಗೆ ಸೇರಿ ವೇದಾವತಿ ಎಂಬ ಹೆಸರನ್ನು ಪಡೆದಿದ್ದು ಹಳ್ಳಗಳ ಮಹತ್ವವನ್ನು ಸಾರುತ್ತವೆ.ಇದು ಪ್ರಕೃತಿಯ ಮಡಿಲಿಗೆ ಒಂದು ರೀತಿಯ ಸೊಜುಗವೇ ಸರಿ.ಅಷ್ಟರ ಮಟ್ಟಿಗೆ ತನ್ನ ಸುತ್ತಮುತ್ತಲೂ ಅಪರಿಮಿತವಾದ ಪ್ರಾಕೃತಿಕ ಸಂಪನ್ಮೂಲಭರಿತ ಕಾಡು,ಅಡವಿ,ಸಣ್ಣ ಸಣ್ಣ ಬೆಟ್ಟ ಗುಡ್ಡಗಳು ಆವೃತವಾಗಿವೆ.ಈ ನದಿಯು ಅಗಾಧ ಪ್ರಮಾಣದ ನೀರಿನ ಸಂಗ್ರಹಣಾ ಪ್ರಮಾಣವನ್ನು ಹೊಂದಿದ್ದು ಅತ್ಯಂತ ಆಳವಾಗಿದೆ.

ಫೋಟೋ ಕೃಪೆ : google
ಈ ನದಿಯು ತುಂಬಿತೆಂದರೆ ಸಾಕು ಸುತ್ತಲಿನ ಹಳ್ಳಿಗಳಲ್ಲಿ ಒಂದು ರೀತಿಯ ಹಬ್ಬದ ವಾತಾವರಣದಂತೆ ಸಂಭ್ರಮ ಮನೆ ಮಾಡುತ್ತದೆ.ಏಕೆಂದರೆ ಈ ನದಿ ತುಂಬುವುದೇ ಅಪರೂಪ.ಹಾಗಾಗಿ ನದಿ ತುಂಬಿದಾಗ ಬತ್ತಿ ಬರಡಾದ ನೂರಾರು ಭೂಮಿಗಳಿಗೆ ಮತ್ತೆ ಜೀವ ಬಂದಂತಾಗುತ್ತದೆ.ಅಲ್ಲದೆ ಇಲ್ಲಿನ ಪ್ರಮುಖ ಬೆಳೆಯಾದ ಭತ್ತವನ್ನು ಬಲು ಹುರುಪಿನಿಂದ ಜನ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತ ತಮ್ಮ ಖುಷಿಯನ್ನು ನದಿಯ ಕುರಿತು ಹಾಡುತ್ತಾ ಭತ್ತ ನಾಟಿ ಮಾಡುತ್ತಾರೆ.ಅಲ್ಲದೆ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರ ಮೊಗದಲ್ಲಿ ಮಂದಹಾಸ ಮೂಡಿ ಬದುಕುವ ಭರವಸೆ ಮೂಡುತ್ತದೆ.
ಈ ನದಿಯ ನೀರಿನ ಪ್ರಮಾಣ ಕಡಿಮೆಯಾಗಿ ಅಲ್ಲದೆ ಆಗಾಗ ಈ ನದಿ ಬತ್ತುವುದರಿಂದ ಸರ್ಕಾರ ಈ ನದಿಯ ಸುತ್ತಮುತ್ತಲಿನ ಜನರು,ಜಾನುವಾರಗಳು,ಮತ್ತು ಭೂಮಿಯ ದಾಹ ತಣಿಸಲು ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿ ವಿಲಾಸ ಸಾಗರ ಡ್ಯಾಂ ನಿಂದ ವೇದಾವತಿ ನದಿಗೆ ನೀರು ಹರಿಸುತ್ತದೆ.ಇದರಿಂದ ಅಲ್ಲಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂಗಳು ತುಂಬಿ ಕೃಷಿಗೆ ಆಧಾರ ಸ್ತಂಭವಾಗುತ್ತದೆ. ಹಾಗಾಗಿ ರೈತರು ಹೆಚ್ಚು ಕೃಷಿ ಮಾಡಲು ಉತ್ಸುಕರಾಗುತ್ತಾರೆ.
ಸುಮಾರು ವರ್ಷಗಳ ನಂತರ ಈ ನದಿ ಮೈದುಂಬಿ ಹರಿದಾಗ ನದಿಯ ಎರಡು ಬದಿಯ ರೈತರು ಬೃಹತ್ ಪ್ರಮಾಣದಲ್ಲಿ ಭತ್ತ, ಕಬ್ಬು ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆದು ಅವುಗಳ ಕಟಾವು ಸಂದರ್ಭದಲ್ಲಿ ಸುಗ್ಗಿ ನೋಡುವುದೇ ಕಣ್ಣಿಗೆ ಹಬ್ಬ. ಈ ಹಬ್ಬದ ರೀತಿಯ ಸಂಭ್ರಮ ನೋಡಲು ಈಗಲೂ ಆಗಾಗ ನದಿಯು ಮೈದುಂಬಿದಾಗ ಮರುಕಳಿಸುತ್ತದೆ.
ಈ ನದಿಯ ಸುತ್ತಲಿನ ಹಲವಾರು ಹಳ್ಳಿಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದವು.ಆದರೆ ಇಂದು ನದಿಯು ತುಂಬಿದ ಫಲವಾಗಿ ನೀರಿನ ಬವಣೆಯ ಸಮಸ್ಯೆಯು ದೂರವಾಗಿದೆ.
ನದಿಯ ಅಕ್ಕಪಕ್ಕದ ಹಳ್ಳಿಗಳಾದ ಹಿರಿಯೂರು ತಾಲೂಕು,ಚಳ್ಳಿಕೆರೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬತ್ತಿದ ಕೊಳವೆಬಾವಿಗಳ ಅಂತರ್ಜಲದ ಮಟ್ಟವು ಹೆಚ್ಚಾಗಿ ಬಾವಿಗಳು ಕೂಡ ಮೈದುಂಬಿವೆ. ನೀರಿನ ಸಮಸ್ಯೆ ನೀಗುವುದರೊಂದಿಗೆ ರೈತರು ಬೆಳೆಗಳಿಗೆ ಬೇಕಾದಷ್ಟು ನೀರು ಲಭ್ಯವಾಗುತ್ತಿದೆ.ಈ ನದಿಯಿಂದ ಸುತ್ತಲೂ ಬತ್ತಿದ ನೂರಾರು ಬಾವಿಗಳು ಪುನರ್ಜನ್ಮ ಪಡೆದಂತಾಗಿ ಮತ್ತೆ ಮೊದಲಿನಂತೆ ತುಂಬಿ ಉಕ್ಕಿ ಹರಿಯುತ್ತಿವೆ.ಒಟ್ಟಿನಲ್ಲಿ ನದಿ ತುಂಬಿದ್ದರಿಂದ ಪಕ್ಕದ ಊರುಗಳ ಜನರಲ್ಲಿ ಉತ್ಸಾಹ,ಬಾಳುವ ಹುಮ್ಮಸ್ಸು ಇಮ್ಮಡಿಗೊಂಡಿದೆ.ಅಲ್ಲದೆ ಬ್ಯಾರೇಜ್ ಗಳು ಕೂಡ ತುಂಬಿದ್ದರಿಂದ ಬೇಸಿಗೆಯಲ್ಲಿ ಕೂಡ ಇಲ್ಲಿನ ಕೃಷಿಕರು ದಾಳಿಂಬೆ,ಅಡಕೆ,ತೆಂಗು,ದಾಳಿಂಬೆ,ಬೆಳೆ ಕಾಪಾಡಿಕೊಂಡು ಭತ್ತ ರಾಗಿ,ಈರುಳ್ಳಿ,ಶೇಂಗಾ ಬೆಳೆಯುತ್ತಾರೆ.
ಈ ನದಿಯ ಬರ ನೀಗಿಸಲು ಕೆಲವೊಮ್ಮೆ ಇತರ ಡ್ಯಾಂ ಗಳಿಂದ ನೀರನ್ನು ಬಿಡುವುದರಿಂದ ಸುತ್ತಲಿನ ರೈತರಲ್ಲಿ ಆಶಾಭಾವನೆ ಮೂಡಿ ಚೈತನ್ಯ ಒಡಮೂಡುತ್ತದೆ. ಇನ್ನೊಂದು ಈ ನದಿಯ ತೇವಾಂಶದಿಂದ ಸುತ್ತಲೂ ಹಸಿರು ಹುಲ್ಲು ಚಿಗುರುವುದರಿಂದ ಜಾನುವಾರಗಳಿಗೆ ಆಹಾರ ದೊರಕಿದಂತಾಗುತ್ತದೆ.ಅಲ್ಲದೆ ಮಳೆಯ ಸಂದರ್ಭದಲ್ಲಿ ನೀರಿನ ಜೊತೆ ತೇಲಿ ಹೋಗುವ ಮಣ್ಣಿನು ತಡೆ ಹಿಡಿದು ಮಣ್ಣಿನ ಸಂರಕ್ಷಣೆ ಕೂಡ ಮಾಡುತ್ತದೆ.
ಮುಳ್ಳಯ್ಯನಗಿರಿ ಜನಿಸುವ ಈ ನದಿ ಚಿಕ್ಕಮಗಳೂರು ಅಲ್ಲದೆ ಚಿತ್ರದುರ್ಗ ಜಿಲ್ಲೆಯ ಜನರಿಗೆ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಮುಲಾಧಾರವಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಈ ನದಿಯ ಪಾತ್ರವೂ ನಾನಾ ಕಾರಣಗಳಿಂದ ಕಿರಿದಾಗುತ್ತಿದ್ದು. ಜನರ ನಿರ್ಲಕ್ಷ್ಯತನದಿಂದ ಇಂದು ತನ್ನ ಕಳೆಯನ್ನು ಕಳೆದುಕೊಳ್ಳುತ್ತಿದೆ.ಸತತ ಬರಗಾಲದಿಂದ ತತ್ತರಿಸಿದ ಜನರಿಗೆ ಈ ನದಿಯು ವರದಾನವಾಗಿದೆ.
ಇಂದು ಈ ನದಿಯು ಉಳಿಯಬೇಕಾದರೆ ಇದನ್ನು ಸಂಧಿಸುವ ಹಳ್ಳ ಕೊಳ್ಳಗಳು,ಉಪನದಿಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ.ಚಿತ್ರದುರ್ಗಕ್ಕೆ ಈ ನದಿಯೊಂದೇ ಆಧಾರವಾಗಿದ್ದರಿಂದ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಅರಣ್ಯೇತರ ಚಟುವಟಿಕೆಗಳು,ಕಾಡುಗಳ ನಾಶ, ಹುಲ್ಲುಗಾವಲಿನ ನಾಶ,ಸಂಪನ್ಮೂಲಗಳ ಕಬಳಿಕೆ, ಪ್ರದೇಶ ಒತ್ತುವರಿಯಂತ ಚಟುವಟಿಕೆಗಳು ಅಲ್ಲದೆ ವನ್ಯಜೀವಿಗಳು, ಪ್ರಾಣಿ ಪಕ್ಷಿಗಳು ರೈತರು ಕೂಡ ಇದರ ಮೇಲೆ ಅವಲಂಬಿತರಾಗಿದ್ದರಿಂದ ಈ ನದಿಯನ್ನು ಸಂರಕ್ಷಿಸಬೇಕಿದೆ ಈ ದೆಸೆಯಲ್ಲಿ ಸರ್ಕಾರವು ಕೂಡ ಲಕ್ಷ್ಯ ವಹಿಸಿ ನದಿಯ ಪುನಶ್ಚೇತನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ನದಿಯನ್ನು ಸಂರಕ್ಷಿಸಬೇಕು.ಆಗ ಮಾತ್ರ ವೇದಾವತಿ ನದಿ ಎನ್ನುವುದು ಜೀವಂತವಾಗಿರುತ್ತದೆ ಇಲ್ಲದಿರೆ ಮುಂದಿನ ಪೀಳಿಗೆಯು ಹೀಗೂ ಒಂದು ನದಿ ಇತ್ತು ಎಂದು ಹೆಸರನ್ನು ಮಾತ್ರ ಕೇಳುವಂತಾಗಬಹುದು.
ಹಿಂದಿನ ಸಂಚಿಕೆಗಳು :
- ಮಧ್ಯ ಭಾರತದ ಜೀವದಾತೆ : ಗೋದಾವರಿ ನದಿ
- ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು : ಭೀಮಾ ನದಿ
- ದೈವೀಕತೆಗೆ ಹೆಸರು ದೇವತೆಗಳ ಉಸಿರು – ಸರಸ್ವತಿ ನದಿ
- ಅವಿನಾಶ ಸೆರೆಮನಿ
