ನಾನೂ ಸುಮಾರು ಹದಿನೈದು ವರ್ಷ ಹೊಸೂರು-ಗೌರೀಬಿದನೂರುಗಳಲ್ಲಿ ಕಳೆದಿದ್ದರೂ, ಅವರು ಗೌರೀಬಿದನೂರಿನವರೇ ಎಂಬುದು ತಿಳಿಯಲು ಮತ್ತಷ್ಟು ವರ್ಷಗಳೇ ಆಗಿದ್ದವು. ಪತ್ರಕರ್ತರಾದ ರಾಘವನ್ ಚಕ್ರವರ್ತಿ ಅವರು ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತಾರಾಂ ಅವರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಟಿ.ಎನ್.ಸೀತಾರಾಂ ಅವರನ್ನು ಮೊದಲು ಕಂಡಿದ್ದು, ಸುಮಾರು ೮೪-೮೫ ರಲ್ಲಿ, ದೆಹಲಿ ದೂರದರ್ಶನದಲ್ಲಿ ಒಂದು ಭಾನುವಾರ ಮಧ್ಯಾಹ್ನ, ಲಂಕೇಶರ ’ಪಲ್ಲವಿ’ ಪ್ರಸಾರವಾದಾಗ. ಸಿನಿಮಾ ಹೀಗೂ ಇರಬಹುದು, ಹೀರೋ ಎಂಬಾತನೂ ಹೀಗೂ ಇರಬಹುದು ಎಂಬ ವಿಚಿತ್ರ ಸತ್ಯವನ್ನು ಮನಗಾಣಿಸಿದ ಚಿತ್ರ. ನಿಧಾನವಾಗಿ ಸಾಗುವ ಕಪ್ಪು-ಬಿಳುಪಿನ ಚಿತ್ರದಲ್ಲಿ, ಸಹಜವಾದ, ಮೈ-ಕೈ ತುಂಬಿಕೊಂಡ ಸನ್ನಿವೇಶಗಳು. ೭೦ರ ದಶಕದ ಬೆಂಗಳೂರಿನ ಯಥಾವತ್ ಚಿತ್ರಣ. ಕಾಲೇಜಿನ ದೃಶ್ಯಗಳು ನೈಜವಾಗಿ ಮೂಡಿಬಂದಿದ್ದವು. ಮೇಷ್ಟ್ರು ಹೇಳಿದ್ದನ್ನು ತಲೆಬಾಗಿಸಿ ತಕ್ಷಣ ನೋಟ್ಸ್ ಇಳಿಸುವ, ಯಾಂತ್ರಿಕವಾಗಿ ತರಗತಿಯಲ್ಲಿ ಕುಳಿತ ವಿದ್ಯಾರ್ಥಿನಿಯರು, ಮೇಷ್ಟ್ರ ಇರುವಿಕೆಯನ್ನೇ ಧಿಕ್ಕರಿಸಿ ಕ್ಲಾಸಿನೊಳಗೆ ತಮ್ಮ ಚೇಷ್ಟೆ ಮುಂದುವರೆಸುತ್ತಾ ಕವಕವಗುಟ್ಟುವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ‘ಸದ್ದಡಗಿಸು’ವಂತೆ ತರಗತಿಗೆ ಎಂಟ್ರಿ ಕೊಟ್ಟು, ಕುರ್ಚಿಯಲ್ಲಿ ಕುಳಿತು ಒಂದುಕಾಲನ್ನು ನೆಲದ ಮೇಲಿಟ್ಟು, ಮತ್ತೊಂದು ಕಾಲನ್ನು ಟೇಬಲ್ ಮೇಲಿರಿಸಿ ಅಪ್ಪಟ ಪಾಳೇಗಾರನಂತೆ ಗುಟುರು ಹಾಕುವ ಪರ್ವತವಾಣಿ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಕೊಟ್ಟ ಇಂತಹ ಅನುಭವ ಸ್ಮರಣೀಯ.

ಕಾಣಿಸಿರುವ ಎರಡೂ ಪಟಗಳೂ ’ಪಲ್ಲವಿ’ ಚಿತ್ರದ್ದು.
ಚಿತ್ರ ಮತ್ತಷ್ಟು ಮನಸ್ಸಿಗಿಳಿಯಲಾರಂಭಿಸಿದ್ದು ಚಂದ್ರು (ಸೀತಾರಾಂ), ಶಾಂತಾ (ವಿಮಲಾ ನಾಯ್ಡು), ಜಗನಾಥ್ (ಲಂಕೇಶ್) ಪಾತ್ರಗಳಿಂದ. ೭೦ ರ ದಶಕದ ನಿರುದ್ಯೋಗಿ ತರುಣನ ಭ್ರಮೆ, ಹತಾಶೆ, ಕೀಳರಿಮೆಗಳದರ ಮೂರ್ತರೂಪವಾದ ಚಂದ್ರು ಪಾತ್ರ, ಸೀತಾರಾಂ ಅವರಿಗೇ ಹೇಳಿ ಮಾಡಿಸಿದಂತಿತ್ತು. ಅದೇ ವರ್ಷ ಬಿದುಗಡೆಯಾಗಿದ್ದ ಸತ್ಯಜಿತ್ ರೇ ಅವರ ’ಜನ ಅರಣ್ಯ’ ದ ಸೋಮನಾಥ್ ಪಾತ್ರ ಕೂಡಾ ಅಪ್ಪಟ ನಿರುದ್ಯೊಗಿ. ಆದರೆ ಆತ ಹಲವು ರಾಜಿಗಳನ್ನು ಮಾಡಿಕೊಳ್ಳುತ್ತಾನೆ. ನೈತಿಕತೆಯನ್ನು ಪಣಕ್ಕೊಡ್ಡಿ ಅಸಹಾಯಕನಾಗುತ್ತಾನೆ. ಆದರೆ ಚಂದ್ರು ಪಾತ್ರದಲ್ಲಿ ಯಾವುದೇ ರಾಜಿ ಇಲ್ಲ. ತನ್ನ ಹತಾಶೆಯನ್ನು ಅನಾವರಣಗೊಳಿಸುತ್ತಾ ಪೋಲೀಸರ ಪಾಲಾಗುವ ಚಂದ್ರು, ಸೋಮನಾಥ್ ಗಿಂತ ಹೆಚ್ಚು ಸಶಕ್ತ ಪಾತ್ರವೆನಿಸಿತ್ತು. ಲಂಕೇಶರ ’ಬಿರುಕು’ ಕಥೆ ಆಧರಿಸಿದ ಚಿತ್ರದಲ್ಲಿ, ಅವರ ಕಥೆಗಳಲ್ಲಿ ಸಾಮಾನ್ಯವಾಗಿ ಮೂಡುವ ಗಾಢತೆಯಿತ್ತು. ಚಿತ್ರ ಯಶಸ್ವಿಯಾಗಲಿಲ್ಲ. ಆದರೆ ನಿರ್ದೇಶಕರಾಗಿ ಲಂಕೇಶ್ ಗೆದ್ದಿದ್ದರು. ಹೀರೋ ’ಸೀತಾರಾಂ’ ತರ ಕೂಡಾ ಇರಬಹುದು ಎಂಬುದೂ ಮನದಟ್ಟಾಯಿತು.
ನಾನೂ ಸುಮಾರು ಹದಿನೈದು ವರ್ಷ ಹೊಸೂರು – ಗೌರೀಬಿದನೂರುಗಳಲ್ಲಿ ಕಳೆದಿದ್ದರೂ, ಅವರು ಗೌರೀಬಿದನೂರಿನವರೇ ಎಂಬುದು ತಿಳಿಯಲು ಮತ್ತಷ್ಟು ವರ್ಷಗಳೇ ಆಗಿದ್ದವು. ಅಷ್ಟರಲ್ಲಿ ಸೀತಾರಾಂ ಕಿರುತೆರೆಗೆ ವರ್ಗವಾಗಿದ್ದರು. ಅವರ ’ಮಾಯಮೃಗ’ ಪ್ರಸಾರವಾಗಿತ್ತಿದ್ದ ಸಮಯದಲ್ಲಿ ನಾನು ಮನೆ ತಲುಪುತ್ತಿರಲಿಲ್ಲ. ಅವರ ಹಲವು ಧಾರಾವಾಹಿಗಳನ್ನು ನೋಡಲಾಗಲೇ ಇಲ್ಲ. ಆದರೆ ಆ ಧಾರಾವಾಹಿಗಳ ಬಗ್ಗೆ ಪ್ರಶಂಸೆಯ ಮಹಾಪೂರ ಹರಿಯುತ್ತಿತ್ತು.

ಕೆಲವು ವರ್ಷಗಳ ಹಿಂದೆ, ’ಪಾವ್-ಭಾಜಿ’ ನಾಟಕ ಪ್ರದರ್ಶನಕ್ಕೆ ಕೆ.ಎಚ್.ಕಲಾಸೌಧಕ್ಕೆ ಹೋಗಿದ್ದಾಗ ಮೊದಲ ಬಾರಿ ಅವರ ಭೇಟಿಯಾಗಿತ್ತು. ಪರಿಚಯ ಮಾಡಿಕೊಂಡೆ. ಬಹಳ ಆತ್ಮೀಯವಾಗಿ ಮಾತನಾಡಿಸಿದರು. ಪುಟ್ಟಣ್ಣ ಕಣಗಾಲ್ ಬಗ್ಗೆ ಬರೆದಿದ್ದ ಲೇಖನ ಇಷ್ಟಪಟ್ಟಿದ್ದರು. ನನಗಿಂತ ಪುಟ್ಟಣ್ಣನವರನ್ನು ಹೆಚ್ಚಾಗಿ ಕಂಡ, ಒಡನಾಡಿದ ಅವರಿಗೆ ಆದರೆ ಆ ಬರಹದ ಬಗ್ಗೆ ಕೆಲವು ಆಕ್ಷೇಪಣೆಗಳಿದ್ದವು. ಆದರೆ ಇದುವರೆಗೂ ಆ ಬಗ್ಗೆ ಮಾತನಾಡಿಸಲಾಗಿಲ್ಲ.
ಟಿ,ಎನ್.ಸೀತಾರಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
- ರಾಘವನ್ ಚಕ್ರವರ್ತಿ
