ನೇಸರನೂ ನಾಚಿ ಸರಿದಿರಲು ಮೆಲ್ಲ ನೀನೇಕೆ ಬಾರದಿಹೆ…ಕವಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬೀಸುತಿದೆ ತಳಿರ ಬೀಸಣಿಕೆ
ಗುನುಗುತಿದೆ ಪರ್ಣಕಂಠ
ನಡುವೆ ಎಲ್ಲೋ ಹೊಮ್ಮುತಿದೆ
ಕೋಗಿಲೆಯ ಸಿರಿಕಂಠ…
ಬರುವೆನೆಂದವ ನೀನು
ಬಾರದಿಹೆ ಏಕೆ
ಅಲ್ಲೇ ತಡೆದು ನಿಲ್ಲಿಸಿತೆ
ಈ ಲಕ್ಷ್ಮಣ ರೇಖೆ
ಬೆಟ್ಟ ಸಾಲಿನ ಮೇಲೆ
ತರುಮುಖವು ರಂಗೇರಿ
ಹೋಳಿಯಾಗಿದೆ ನೋಡು
ಬರಲಿ ನಿನ್ನ ಸವಾರಿ
ನೇಸರನೂ ನಾಚಿ
ಸರಿದಿರಲು ಮೆಲ್ಲ
ನೀನೇಕೆ ಬಾರದಿಹೆ
ಉಸುರದೆಯೇ ಸೊಲ್ಲ
ಬೆಡಗು ಕಣ್ಣನು ತುಂಬಿ
ಎದೆಯ ಪಿಚಕಾರಿಗಿಳಿದು
ಕಾದಿದೆ ಕಾತರದಿ
ತೋಯಿಸಲು ನಿನ್ನ
ಆ ಧರೆಯು ಈ ನೀನು
ನಿನ್ನೊಡನೆ ನಾನು
ಸಿರಿಯನೀಂಟುತ ಇರಲು
ಬಯಕೆಗೇನಿದೆ ಇಲ್ಲಿ ಹುಗಲು
ತಳುವದಿರು ಬಂದುಬಿಡು
ಬರುವ ಹೊತ್ತಾಯ್ತು ಮಾಧವ
ಇನ್ನು ಯಮುನೆಯ ದಡದಿ
ಅವನದೇ ಕಲರವ….
ನನ್ನ ನಿನ್ನಯ ಸಮಾಗಮಕೆ
ಇಹುದು ಕಾಲ ಬರೀ ತೃಣ ಸಮ
ಅವಸರಿಸು ತಳುವದಿರು
ನಿನಗಿಹುದು ಈಗ ಒಂದೇ ಕ್ಷಣ…!
- ಶಿವದೇವಿ ಅವನೀಶಚಂದ್ರ – ಕೊಡಗು.
