ತನು ಕರಗದವರು – ಪದ್ಮನಾಭ. ಡಿ.

‘ದಪ್ಪ’ ಎನ್ನುವುದು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಚಿಂತೆ ಜಾಸ್ತಿ.ತಮ್ಮನ್ನು ಜನ ನೋಡಿ ಆಡಿಕೊಳ್ಳುವರೆಂಬ ಚಿಂತೆ. ಈ ಕುರಿತು ಕವಿ ಪದ್ಮನಾಭ ಡಿ. ಅವರು ಬರೆದ ಒಂದು ಚಿಂತನ ಲೇಖನದ ಜೊತೆ ಒಂದು ಪುಟ್ಟ ಕವನ, ತಪ್ಪದೆ ಓದಿ…

ಆಕೆ ಹೆಚ್. ಡಿ. ಕೋಟೆಯಲ್ಲಿದ್ದಾಗ ನನ್ನ ನೆರೆಮನೆಯವರ ಮಗಳು. ನೋಡಲು ಲಕ್ಷಣವಾಗಿದ್ದರೂ ಸ್ವಲ್ಪ ಸುತ್ತಳತೆ ಜಾಸ್ತಿ ಆದ್ದರಿಂದ ಲೇಡಿ ರಾಂಬೋ, ಘಟೋತ್ಕಜೆ ಬುಲ್ಡೋಜರ್, ಡ್ರಮ್ ಇತ್ಯಾದಿ ಬಿರುದುಗಳನ್ನು ಪಡೆದಿದ್ದಳು. ಆದರೆ ಆಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತುಂಬಾ ಲವಲವಿಕೆಯಿಂದ ಚಟುವಟಿಕೆಯಿಂದ ಇದ್ದಳು.ಅಷ್ಟೇ ಅಲ್ಲ ತನ್ನ ಪರ್ಸನಾಲಿಟಿ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಳು.

ಯಾರಾದರೂ ದಪ್ಪ ಅಂದರೆ” ನಾನು ಡಯೆಟ್ ಮಾಡಿ, ಯೋಗ ಮಾಡಿ ಸಣ್ಣಗಾಗಬಹುದು ಆದರೆ, ನೀವು ತಪಸ್ಸು ಮಾಡಿದರೂ ನನ್ನ ಪರ್ಸನಾಲಿಟಿ ನಿಮಗೆ ಬರುತ್ತಾ? ಏನು ತಿಂದರೂ ದಪ್ಪ ಆಗ್ತೀರಾ ಒಳ್ಳೆ ಸೊರಗಿದಂತೆ ಅಪ್ಪ ಅಮ್ಮ ಊಟವೇ ಹಾಕಿಲ್ಲವೇನೋ ಅನ್ನೋ ಹಾಗೆ ಇರ್ತೀರಾ ನೋಡಿ ನನ್ನಿಂದ ಅಪ್ಪ ಅಮ್ಮನಿಗೆ ಆ ಚಿಂತೆ ಇಲ್ಲ. ಎಷ್ಟು ಚೆನ್ನಾಗಿ ಬೆಳೆಸಿದ್ಜಾರೆ ಅಂತ ಜನ ಹೇಳ್ತಾರೆ ಗೊತ್ತಾಯ್ತಾ ಎಂದು ಎದುರುಪಾರ್ಟಿಯವರ ಬಾಯಿಮುಚ್ಚಿಸುತ್ತಿದ್ದಳು. ಉದರ ಸ್ಥೂಲವಿದ್ದರೆ ಚಿಂತೆ ಮಾಡಬೇಕಿತ್ತು ನನ್ನದು all round development ಎಂದು ಹೇಳಿ ಅವಳೇ ನಕ್ಕುಬಿಡುತ್ತಿದ್ದಳು. ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆ ಎಂದರೆ ಸ್ಥೂಲಕಾಯರೆಂದು ವೃಥಾ ಚಿಂತಿಸದೇ, ಇತರರ ಕಾಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳದೇ ಆಕೆಯಂತೆ ಆತ್ಮವಿಶ್ವಾಸ ಬೆಳೆಸಿಕೊಂಡರೆ ಜೀವನದಲ್ಲಿ ಗುರಿಸಾಧನೆಗೆ ಕರಗದ ತನು ಅಡ್ಡಿಯಾಗುವುದಿಲ್ಲ.

ಫೋಟೋ ಕೃಪೆ : singlecare

ಬಹುತೇಕ ಎಲ್ಲರೂ ಗಮನಿಸಿರುತ್ತೀರಿ ಚಿಕ್ಕ ಮಕ್ಕಳು ದಪ್ಪಗಿದ್ದರೆ ನೋಡು ಮೈಕೈ ತುಂಬಿಕೊಂಡು ಎಷ್ಟು ಚೆನ್ನಾಗಿದೆ, ಗುಂಡಗುಂಡಗೆ ಅಂತ ಖುಷಿ ಪಡುತ್ತಾರೆ. ಆದರೆ ಬೆಳೆದಂತೆಲ್ಲ ತುಂಬಾ ದಪ್ಪಗಾದರೆ ಖುಷಿ ಪಡಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಈ ಚಿಂತೆ ಜಾಸ್ತಿ. 0 ಸೈಜಿನ ವ್ಯಾಮೋಹ ವಿಪರೀತ. ನೋಡಿದವರು ನಮ್ಮನ್ನು ಆಡಿಕೊಳ್ಳುವರೆಂಬ ಚಿಂತೆ. ಈ ಚಿಂತೆಯೇ ಈಗ ತೂಕ ಇಳಿಸುವ ಬೊಜ್ಜು ಕರಗಿಸುವ ಔಷಧಿಗಳೂ, ತೆರಪಿ ಕೇಂದ್ರಗಳೂ ಹೆಚ್ಚಾಗಲು ಕಾರಣವಾಗಿದೆ. ಅತಿ ಹೆಚ್ಚು ಜಾಹೀರಾತುಗಳು ಕಾಣುವುದೇ ತನು ಕರಗಿಸುವ ಬಗ್ಗೆ ಅಥವ ಕೇಶ ಸಂರಕ್ಷಣೆಯ ಬಗ್ಗೆ. ಆದರೆ ತನು ಕರಗಿಸಿಕೊಳ್ಳುವ ಚಿಕಿತ್ಸೆಗೆ ಹೋದವರಲ್ಲಿ ಹಲವಾರು ಮಂದಿ ಅನಾರೋಗ್ಯದಿಂದ ಬಳಲಿದ್ದಾರೆ ಎಂದು ಕೆಲವರ ಅಭಿಪ್ರಾಯ. ಕರಗದ ತನುವಿನ ಬಗ್ಗ ಚಿಂತಿಸದೆ ಅದನ್ನೇ ಯಶಸ್ವಿಯಾಗಿ ಬಳಸಿ ಜೀವನದಲ್ಲಿ ಗೆಲುವು ಸಾಧಿಸಿದ ದೊಡ್ಡಣ್ಣ, ಶಾಲಿನಿ, ಗೀತ ಇಂದೂ, ಮಂಜುಮಾಲಿನಿ ಮೊದಲಾದ ಹಲವು ಕಲಾವಿದರು ನಮ್ಮ ಕಣ್ಮುಂದೆಯೇ ಇದ್ದಾರೆ.

ಸ್ಥೂಲಕಾಯದವರನ್ನು ಮದುವೆಯಾಗಲು ಹಲವರು ಹಿಂದೇಟು ಹಾಕುವುದೂ ನೋಡಿರುವ ವಿಷಯವೆ. ಆದರೆ ಮದುವೆಯಾದ ಮೇಲೆ ಮಕ್ಕಳಾದ ಮೇಲೆ ಹಾರ್ಮೋನುಗಳ ಬದಲಾವಣೆಯಿಂದ ಕೆಲವರು ಸ್ಥೂಲವಾಗುವುದನ್ನೂ ನೋಡಬಹುದು.

ಕೆಲವರಿಗೆ ಹೆಂಡತಿ ದಪ್ಪಗಾದರೆ ಚಿಂತೆ ಈ ಬಗ್ಗೆ ಹಾಸ್ಯಕವನದೊಂದಿಗೆ ಈ ಲೇಖನ ಮುಗಿಸುವೆ.

ದಷ್ಟಪುಷ್ಟಗೆ ದಪ್ಪಗಾಗಲು ಮಡದಿ
ಒಮ್ಮೊಮ್ಮೆ ಗಂಡನಿಗೆ ಭಾಗ್ಯವಂತೆ
ಗಾಡಿಯನೇ ಎಳೆಯುವ ತೋಳ್ಬಲವು
ಆಕೆಗಿರೆ ಎಮ್ಮೆ ಎತ್ತುಗಳೇನೂ ಬೇಡವಂತೆ

ಬಳ್ಳಿಯಂತಿದ್ದವಳು ಬಳುಕುತ್ತ ನಡೆವವಳು
ಹೆಮ್ಮರವು ತಾನಾಗೆ ಚಿಂತೆ ನನಗೇಕೆ
ಬಿದಿರಿನಂತಿದ್ದವಳು ಫಸಲಿನ ತೆನೆಯಾಗಿ ತೂಗೆ
ನನ್ನ ಪ್ರೀತಿ ಆರೈಕೆಗೆ ಇನ್ನು ಸಾಕ್ಷಿ ಬೇಕೆ

ತೊಲೆಯಂತೆ ಮನೆಯಲ್ಲಿ ಅವಳನ್ನು ಕಂಡಾಗ
ಅನಿಸಿತು ಏಣಿಯು ಕಂಬವು ಬೇಕೇನು
ಗ್ರಹಚಾರ ಕೆಟ್ಟು ನನ್ನ ಮೇಲೆ ಅವಳು ಬಿದ್ದಾಗ
ಶಿವಾಶಿವಾ ಮುಂದೆ ನನ್ನ ಗತಿಯೇನು?.


  • ಪದ್ಮನಾಭ. ಡಿ.   ( ನಿವೃತ್ತ ಪೋಸ್ಟ್ ಮಾಸ್ಟರ್,  ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018,  ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ– 2022 ಕವಿಗಳು, ಲೇಖಕರು) ಮೈಸೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW