ಮಗಳ ವಯಸ್ಸಿನಲ್ಲಿ ನನಗೆ ಮದುವೇನೇ ಆಗಿ ಹೋಗಿತ್ತು. ಅಮ್ಮ ಏನಾಗಿದೆ ಅಂತ ಕೇಳುವ ಸೌಜನ್ಯ ಕೂಡಾ ಮಕ್ಕಳಿಗೆ ಇಲ್ಲದಾಯಿತಾ? ಇವರೆಲ್ಲ ಮುಂದೆ ಹೇಗೆ ತಮ್ಮ ಬದುಕನ್ನು ನಡೆಸಿಕೊಂಡು ಹೋಗ್ತಾರೆ? ಯಾಕೋ ನಾವೇ ಸರೀಯಾಗಿ ಸಂಸ್ಕಾರ ಕಲಿಸಿಲ್ವಾ? ತುಂಬಾ ಮುದ್ದಾಗಿ ಬೆಳೆಸಿ ಬಿಟ್ವಿ. ಅಂದುಕೊಂಡ ತಾಯಿಗೆ ಇಂದು ಸರ್ಪ್ರೈಸ್ ಸಿಕ್ಕಿತ್ತು…ಶೋಭಾ ನಾರಾಯಣ ಹೆಗಡೆ ಅವರ ಈ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಬೆಳಿಗ್ಗೆ ಎದ್ದೇಳೋಕೂ ಆಗ್ತಿಲ್ಲ. ಅಷ್ಟೊಂದು ತಲೆ ಸಿಡಿತ. ಯಾರಾದರೂ ಚೂರು ಹೆಲ್ಪ್ ಮಾಡಬಾರದಾ ಅನಿಸುವಷ್ಟು ಅಸಹಾಯಕತೆ. ಆದರೂ ಸಾವರಿಸಿಕೊಂಡು ಎದ್ದೆ. ಮೊದಲು ಮಗಳ ರೂಮ್ ನ್ನು ಇಣುಕಿದೆ. ಮಗ, ಚೂರು ತಿಂಡಿ ಮಾಡು ಬಾರೋ ಅಂತ. ಏ ಹೋಗಮ್ಮ, ಆಮೇಲೆ ಇಡೀ ದಿನ ಆನ್ಲೈನ್ ಕ್ಲಾಸ್ ಇದೆ ನನಗೆ. ಈ ಚಳಿಯಲ್ಲಿ ಏಳೋಕಾಗಲ್ಲ ನನಗೆ. ನೀನೇ ಏನಾದರೂ ಮಾಡು, ಮುಸುಕೆಳೆದು ಮಲಗೇ ಬಿಟ್ಟಳು. ಕಾಲೇಜಿಗೆ ಅದರಲ್ಲೂ ಡಿಗ್ರಿ ಓದ್ತಿರೋ ನನ್ನ ಮಗಳು. ಕೋಪ ನೆತ್ತಿಗೆ ಏರಿದರೂ, ಬೈದರೂ ಪ್ರಯೋಜನ ಇಲ್ಲ ಅಂತ ವಾಪಸ್ ಬಂದೆ. ಪಕ್ಕದ ಮಗನ ರೂಮಿಗೆ ಇಣುಕಿ ಕರೆದೆ. ಪುಟ್ಟ ಎದ್ದೇಳೋ. ಚೂರು ಅಮ್ಮಂಗೆ ಹೆಲ್ಪ್ ಮಾಡೋ ಇವತ್ತು ಅಂದೆ. ಮಮ್ಮಿ, ನಿಂಗಾಗಲ್ಲ ಅಂದ್ರೆ ಹೋಟೆಲ್ ನಿಂದ ತರಿಸು. ನನಗೆ ರಾತ್ರಿ, ಮಲಗೋಕೆ ತುಂಬಾ ಲೇಟ್ ಆಗಿದೆ. ಇನ್ನೂ ನಿದ್ದೆ ಬರ್ತಿದೆ ಮಮ್ಮಿ ಪ್ಲೀಸ್… ಅಂತ ರಾಗ ಎಳೆದು ಮಗ್ಗಲು ಬದಲಾಯಿಸಿದ.
ಹ್ಮ… ಎಲ್ಲಾ ನನ್ನ ಹಣೇಬರಹ ... ತುಂಬಾ ಕೋಪ ಉಕ್ಕಿ ಬಂದು ಹಣೆ ಚಚ್ಚಿಕೊಂಡೆ..ಚಚ್ಚಿಕೊಂಡ ರಭಸಕ್ಕೆ ಮತ್ತೂ ನೋವು ಜಾಸ್ತಿ ಆಯಿತು. ತಡೆಯಲಾರದಷ್ಟು. ಹಾಗೇ ಕೂತೆ. ಝಂಡುಬಾಂಬ್ ಸವರಿದೆ. ತುಸು ಹಾಯೆನಿಸಿತು. ಸ್ವಲ್ಪ ನಿಶ್ಯಕ್ತಿ ಕಾಡಿತು. ವಯಸ್ಸಾಯಿತಲ್ಲ. ಆಗಲೇ ನಲವತ್ತೈದು ದಾಟುತ್ತಾ ಬಂತು. ರಾಯರು ಆಗಲೇ ಎದ್ದು ತಮ್ಮ ಕೆಲಸಕ್ಕೆ ಹೋಗಿದ್ದಾರೆ. ಈ ಮಕ್ಕಳನ್ನಂತೂ ಎಬ್ಬಿಸಲಾಗದು. ಏನಾದರೂ ಮಾಡಬೇಕು ತಿಂಡೀನ ನಾನೇ ಅಂತ ಮುಖ ತೊಳೆಯೋಕೆ ಹೊರಟೆ.
ಮುಖ ತೊಳೆದು, ದೇವರಿಗೆ ದೀಪ ಹಚ್ಚಿ ಅಡುಗೆ ಮನೆ ಹೊಕ್ಕೆ. ಭಾರವಾದ ತಲೆ ತುಂಬಾ ಕಷ್ಟ ಕೊಡಲಾರಂಭಿಸಿತು. ದುಪ್ಪಟ ತೆಗೆದು ತಲೆಗೆ ಬಿಗಿಯಾಗಿ ಬಿಗಿದುಕೊಂಡೆ. ತಿಂಡಿ ಏನು ಮಾಡೋದು? ರವಾ ಇದೆ. ತರಕಾರಿ ಹಾಕಿ ಉಪ್ಪಿಟ್ಟು ಮಾಡೋಣ ಅನಿಸಿ, ರವಾ ಹುರಿಯತೊಡಗಿದೆ. ಯಾಕೋ ಕಣ್ಣೀರು ಜಾರತೊಡಗಿತು. ಮಕ್ಕಳು, ಮಕ್ಕಳ ಭವಿಷ್ಯ ಅಂತ ಎಷ್ಟು ಕಷ್ಟ ಪಡ್ತೀವಿ. ಈ ಮಕ್ಕಳು ಮಾತ್ರ, ಓದುವ ಪ್ರಪಂಚ ಬಿಟ್ರೆ, ಮೊಬೈಲ್, ಟಿವಿ ಇಷ್ಟೇ ಆಯಿತಲ್ಲ ಇವರಿಗೆ. ಅಪ್ಪ, ಅಮ್ಮ ಕಷ್ಟ ಪಡ್ತಾರೆ. ಚೂರಾದರೂ ಸಹಾಯ ಮಾಡಬೇಕು ಏನೂ ಇಲ್ಲ.
ಹಾಗೆ ನೋಡಿದರೆ, ಮಗಳ ವಯಸ್ಸಿನಲ್ಲಿ ನನಗೆ ಮದುವೇನೇ ಆಗಿ ಹೋಗಿತ್ತು. ಅಮ್ಮ ಏನಾಗಿದೆ ಅಂತ ಕೇಳುವ ಸೌಜನ್ಯ ಕೂಡಾ ಮಕ್ಕಳಿಗೆ ಇಲ್ಲದಾಯಿತಾ? ಇವರೆಲ್ಲ ಮುಂದೆ ಹೇಗೆ ತಮ್ಮ ಬದುಕನ್ನು ನಡೆಸಿಕೊಂಡು ಹೋಗ್ತಾರೆ? ಯಾಕೋ ನಾವೇ ಸರೀಯಾಗಿ ಸಂಸ್ಕಾರ ಕಲಿಸಿಲ್ವಾ? ತುಂಬಾ ಮುದ್ದಾಗಿ ಬೆಳೆಸಿ ಬಿಟ್ವಿ. ಚೂರು ಕಷ್ಟ, ಸುಖ ಅನ್ನೋದನ್ನೂ ಕಲಿಸಬೇಕಿತ್ತು. ನಾನಂತೂ ಚಿಕ್ಕವಳಿದ್ದಾಗಿಂದ, ತುಂಬಾ ಕಷ್ಟದಲ್ಲಿ ಬೆಳೆದೆ. ಯಾರದೋ ಮನೆಯಲ್ಲಿ ಇದ್ದು, ಆ ಮನೆಯ ಕಸ ಮುಸುರೆ ಮಾಡಿ, ಓದಿದೆ. ಆದರೆ ತನ್ನ ಮಕ್ಕಳಿಗೆ ಆ ಕಷ್ಟ ಬೇಡ ಅನಿಸಿತ್ತು. ಮುದ್ದು ಮುದ್ದಾಗಿ ಬೆಳೆಸಿದ ಹಣೇಬರಹಕ್ಕೆ ಈಗ ನಾನೇ ಅನುಭವಿಸಬೇಕು.

ಇಷ್ಟೇನಾ ನಮ್ಮ ಬದುಕು ಅನಿಸಿಬಿಟ್ಟಿತು. ಯೋಚನೆಯ ಭರದಲ್ಲಿ ತವಾ ಕೈಗೆ ತಾಕಿ ಒಂದಂಗುಲ ಸುಟ್ಟು ಹೋಯಿತು. ಥೂ… ಇದೊಂದು ಮತ್ತೆ ಕೋಪ ನೆತ್ತಿಗೆ ಏರಿತು. ಇತ್ತೀಚೆಗೆ ಕೋಪ ಆಪ್ತ ನೆಂಟನಂತೆ ಆಗಿಬಿಟ್ಟಿದೆ. ವಯಸ್ಸಿನ ಮಹಿಮೆ ಇರಬಹುದೇನೋ. ಬರ್ನಾಲ್ ಹುಡುಕಿ ಗುಳ್ಳೆ ಬರದಂತೆ ಬೇಗ ಹಚ್ಚಿಕೊಂಡೆ.ಅಂತೂ ಉಪ್ಪಿಟ್ಟು ರೆಡೀ ಆಯಿತು. ತಿನ್ನೋಕೆ ಯಾಕೋ ಮನಸಿಲ್ಲ. ತಲೆ ತುಂಬಾ ಯೋಚನೆ. ಮಗಳ ಭವಿಷ್ಯ ಹೇಗೋ.ಎಷ್ಟೇ ಓದಿದರೂ ಹೆಣ್ಣು ಮನೆ ನಡೆಸೋದನ್ನು ಕಲಿಯಬೇಕು. ಆ ಜಾಣತನ ಇಲ್ಲ ಅಂದ್ರೆ ಅವಳ ಬದುಕು ತುಂಬಾ ಕಷ್ಟ. ನಾನಾದರೂ ಎಲ್ಲಿ ತನಕ ಇರ್ತೀನಿ ಅವಳ ಜೊತೆ? ಹೇಳಿದ್ರೂ ಅರ್ಥ ಮಾಡಿಕೊಳ್ಳಲ್ಲ ಅವಳು.ಮಗನದು ಹೇಗಾದರೂ ನಡೆದೀತು?ಮಗಳದೇ ಯೋಚನೆ ತುಂಬಾ. ಅಮ್ಮನ ಬಗ್ಗೆ ಮೃದು ಭಾವ ಇಲ್ಲದವಳು ,ಇನ್ನು ಅವಳ ಅತ್ತೆಯನ್ನು ಹೇಗೆ ನೋಡಿಕೊಳ್ತಾಳೆ?ಗಂಡನ ಮನೆಯಲ್ಲಿ ಅದ್ಹೇಗೆ ಬಾಳ್ತಾಳೋ..ಅಕಸ್ಮಾತ್ ನನಗೆ ಏನಾದರೂ ಹೆಚ್ಚು ಕಮ್ಮಿ ಆದರೆ, ಮಗಳು ಹೇಗೆ ಮನೆ ನಡೆಸ್ತಾಳೆ?ಭಯವೇ ಆಯಿತು.ಕೆಲಸ ಕಲಿ ಅಂದ್ರೆ ಟೈಮ್ ಇಲ್ಲ ಅಂತಾಳೆ.ಯೋಚನೆ ಮಾಡಿ ಮಾಡಿ ಇನ್ನೂ ತಲೆ ನೋವು ಹೆಚ್ಚೇ ಆಯಿತು.
ಒಂದೆರಡು ಸ್ಪೂನ್ ತಿಂದು, ಚಹಾ ಕುಡಿದೆ. ಟ್ಯಾಬ್ಲೆಟ್ ಬೇಕೇ ಬೇಕು ಎನಿಸಿತು. ತಗೋಂಡು ಮಲಗಿಬಿಟ್ಟೆ. ಮಕ್ಕಳು ಎದ್ದವರು, ಏನಮ್ಮಾ… ಅದೇ ಕಾಂಕ್ರೀಟ್ ಮಾಡಿ ಇಟ್ಟಿದೀಯಾ… ನಮಗೆ ಸೇರಲ್ಲ ಅಂತ ಗೊತ್ತಿದೆ ತಾನೇ?ಮತ್ಯಾಕೆ ಮಾಡಿದೆ? ಒಂದೇ ಸಮನೆ ಬೊಬ್ಬೆ ಹಾಕತೊಡಗಿದ್ರು. ಬೇಕಾದರೆ ತಿನ್ನಿ, ಇಲ್ಲ ಅಂದ್ರೆ ಹಾಗೇ ಇರಿ. ಒಂದಿನ ತಿಂದಿಲ್ಲ ಅಂದ್ರೆ ಏನು ಆಗಲ್ಲ. ನನಗೆ ತುಂಬಾ ತಲೆ ನೋವು .ಅದಕ್ಕೆ ಬೇರೆ ಮಾಡೋಕೆ ನನ್ನ ಕೈಯಲ್ಲಿ ಆಗಿಲ್ಲ. ಮಲಗಿದೆ. ನಿದ್ದೆ ಆವರಿಸಿತು ನನಗೆ. ಮತ್ತೆ ಎಚ್ಚರ ಆಗುವಷ್ಟರಲ್ಲಿ, ಮದ್ಯಾಹ್ನ ಎರಡುಗಂಟೆ. ಅಯ್ಯೋ ದೇವ್ರೇ, ಊಟಕ್ಕೆ ರೆಡಿ ಆಗಿಲ್ಲ . ಅಂತ ಅವಸರಿಸಿ ಅಡುಗೆ ಮನೆಯತ್ತ ಧಾವಿಸಿದೆ. ಟೊಮೆಟೊ ರಸಂನ ಘಮ ಘಮ ಅಡುಗೆ ಮನೆಯಿಂದ ಬರುತ್ತಿತ್ತು. ಹೋಟೇಲ್ ನಿಂದ ತರಿಸಿದರೇನೋ ಅಂದುಕೊಂಡು ಒಳಗೆ ನೋಡಿದೆ. ಹಬ್ಬದ ಊಟ ರೆಡೀ ಆಗಿತ್ತು. ಹಪ್ಪಳ, ಸಂಡಿಗೆ, ಅನ್ನ,ರಸಂ,ಕೋಸಂಬರಿ, ಖೀರು..ತರಕಾರಿ ಪಲ್ಲೆ ಅಬ್ಬಾ… ಎಲ್ಲಿಂದ ತರಿಸಿದಿರಿ ಮಕ್ಕಳನ್ನು ಕೇಳಿದೆ. ನಾವೇ ಮಾಡಿದ್ದು ಅಂದ್ರು. ನನಗೋ ಅಚ್ಚರಿ. ನೀವೇ ಮಾಡಿದ್ದಾ ನಿಜಕ್ಕೂ ಅಂದೆ. ಹೂ ಅಮ್ಮ. ಯೂಟ್ಯೂಬ್ ನೋಡಿ ಮಾಡಿದ್ವಿ. ನಾನು ತರಕಾರಿ ಹೆಚ್ಚಿದೆ. ಅಕ್ಕ ಅಡುಗೆ ಮಾಡಿದ್ಲು. ಅಪ್ಪ ಚೂರು ಡೈರೆಕ್ಷನ್ ಕೊಟ್ರು ಅಂದ ಮಗ.
ಅಲ್ಲಿ ನಿಲ್ಲಲಾರದೇ, ಈಗ ಬಂದೆ ಅಂತ ಕೋಣೆಗೆ ಬಂದೆ. ಖುಷಿಯಿಂದ ಅಳು ಬಂದಿತ್ತು. ನನ್ನ ಯೋಚನೆಯ ಲಹರಿಯೇ ತಪ್ಪಾಗಿತ್ತು. ಲೆಕ್ಕ ತಪ್ಪಿ ಯೋಚನೆ ಮಾಡಿಬಿಟ್ಟಿದ್ದೆ. ಮಕ್ಕಳು ದೊಡ್ಡವರಾಗಿದ್ದಾರೆ. ಅವರವರ ಜವಾಬ್ದಾರಿಯ ಅರಿವು ಅವರಿಗಿದೆ. ಸಂಸ್ಕಾರ ನೀಡಿದ್ದು ತಪ್ಪಾಗಿಲ್ಲ. ಚೆನ್ನಾಗಿ ನೀಡಿದೀನಿ ಎಂಬ ಸಂತೃಪ್ತಿ ನನಗಾಗಿತ್ತು. ಅಳುತ್ತಾ ಕೂತವಳ ಭುಜದ ಮೇಲೆ ಇವರು ಕೈ ಇಟ್ಟು ನುಡಿದ್ರು. ರಶ್ಮಿ, ಅವು ನಮ್ಮ ಮಕ್ಕಳು ಕಣೇ. ನಮ್ಮ ಗುಣವೇ ಅವಕ್ಕೆ ಬಂದಿರೋದು. ನಮ್ಮ ಕಾಲಘಟ್ಟವೇ ಬೇರೆ. ಇಂದಿನ ಮಕ್ಕಳ ಕಾಲಘಟ್ಟವೇ ಬೇರೆ. ಇಂದಿನ ಈ ಓಟದ ಬದುಕನಲ್ಲಿ ಒತ್ತಡ, ಟೆನ್ಷನ್ ಎಲ್ಲಾ ಸಹಜ. ಓದುವುದರಲ್ಲೂ ಓಟ ಕಿತ್ತು ಓಡಬೇಕು. ಅವರ ಮುಂದಿನ ಭವಿಷ್ಯಕ್ಕಾಗಿ ಈಗ ಆರಾಮಾಗಿ ಇರಲಿ…ಟೈಮ್ ಬಂದಾಗ ಜವಾಬ್ದಾರಿ ಹೊರುತ್ತಾರೆ ಕಣೇ. ಇವತ್ತು ನೋಡು ಎಷ್ಟೊಂದು ತರಹದ ಅಡುಗೆ ಮಾಡಿದಾಳೆ ನಿನ್ನ ಮಗಳು. ಇನ್ನೊಂದು ವಿಷಯ ಗೊತ್ತಾ… ನಿನಗಿಂತಲೂ ರುಚಿಯಾಗಿ ಅಡುಗೆ ಮಾಡಿದಾಳೆ ಮಗಳು ಕಣೇ ಎಂದರು ರಾಯರು ಕಣ್ಣು ಹೊಡೆದು. ಸರೀ ಬಿಡಿ, ನನ್ನ ಅಡುಗೆ ತಿಂದು, ರಾಯರು ಸಣ್ಣ ಆಗಿದ್ರಿ. ಮಗಳ ಅಡುಗೆ ತಿಂದು ರಾಯರ ಹೊಟ್ಟೆ ರಾಜಕಾರಣಿಗಳ ಹೊಟ್ಟೆಯಂತೆ ಬೆಳೆಯಲಿ ಅಂತ ಅವರನ್ನು ಕಿಚಾಯಿಸಿ ನಕ್ಕೆ. ಬೇಡ ಮಾರಾಯ್ತಿ. ಈಗ ಹೋಗುವವರು ಬರುವವರು ಚೂರಾದರೂ ನೋಡ್ತಿದ್ದಾರೆ ನನ್ನ. ಆಮೇಲೆ ಅದೂ ಇಲ್ಲ ಅಂದಾಗ ಗೊಳ್ಳೆಂದು ನಕ್ಕೆವು ಇಬ್ಬರೂ. ಮಕ್ಕಳು ಊಟಕ್ಕೆ ಕರೆಯ ಬಂದರು. ಬನ್ನಿ ಹಸಿವಾಗಿದೆ ಊಟ ಮಾಡೋಣ ಒಟ್ಟಿಗೆ ಅಂತ. ಮಗಳು ಅಮ್ಮ ಹುಷಾರಾದಾ. ಅಂತ ಹಣೆಯ ಮೇಲೆ ಕೈ ಇಟ್ಟು ಕೇಳಿದಾಗ,ಅವಳ ಕೈಗೊಂದು ಮುತ್ತು ನೀಡಿ, ಅವಳ ತಬ್ಬಿ ಹಿಡಿದು ಇನ್ನೊಂದು ಮುತ್ತು ನೀಡಿದೆ. ಆಗವಳು ಬೆಳೆದ ಮಗಳು ಅನಿಸಲೇ ಇಲ್ಲ ನನಗೆ… ನನ್ನ ಒಡಲಲ್ಲಿ ಆಡುತ್ತಿರುವ ಹಸುಳೆಯಂತೆ ಗೋಚರಿಸಿದಳು.
- ಶೋಭಾ ನಾರಾಯಣ ಹೆಗಡೆ
