ಜನ ಮಾನಸದಲ್ಲಿ ತ.ರಾ.ಸು.ಎಂದೇ ಪ್ರಖ್ಯಾತರಾದ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಚಲನಚಿತ್ರವನ್ನು ನೋಡಿದ ತರಾಸು ಇದು ನಾಗರಹಾವು ಅಲ್ಲ, ಕೆರೆಹಾವು ಎಂದಿದ್ದರಂತೆ. ಇವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಲ್ಲಿ. ಇವರ ಹಿರಿಯರು ಅಂದ್ರದಿಂದ ಬಂದು ದುರ್ಗದ ಸಮೀಪ ತಳುಕುವಿನಲ್ಲಿ ನೆಲೆಸಿದ್ದರು. ವಸಂತ ಗಣೇಶ್ ಅವರು ತ.ರಾ.ಸು. ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….
ಜನನ: ಏಪ್ರಿಲ್ 21,1920
ಸ್ಥಳ : ಚಿತ್ರದುರ್ಗ
ಮರಣ: ಏಪ್ರಿಲ್ 10, 984
ಕುಡಿತ ಸಿಗರೇಟು ಇಂತಹ ವ್ಯಸನಗಳನ್ನು ಅಂಟಿಸಿಕೊಂಡು ಆರೋಗ್ಯವನ್ನು ಹಾಳುಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಮಲ್ಲಾಡಿಹಳ್ಳಿ ಆಶ್ರಮದಲ್ಲಿ ಮಧ್ಯಪಾನ ತ್ಯಜಿಸುವ ಸಲುವಾಗಿ ಸೇರುತ್ತಾರೆ. ಒಂದೆಡೆ ಅಲ್ಲಿ ವ್ಯಸನಗಳನ್ನ ತ್ಯಜಿಸುವ ಕುರಿತು ಚಿಕಿತ್ಸೆಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಅವ್ಯಾಹತವಾಗಿ ಮಧ್ಯ ಸೇವಿಸುತ್ತಿದ್ದ ವ್ಯಕ್ತಿ, ನನ್ನಿಂದ ವ್ಯಸನಗಳನ್ನ ತ್ಯಜಿಸಲಾಗದು ಎಂದು ನಿರ್ಧರಿಸಿ ಅಲ್ಲಿಂದ ಹೊರಡಲು ಅಣಿಯಾಗುತ್ತಾರೆ. ಆಗ ಅಲ್ಲಿಗೆ ಆತನನ್ನು ನೋಡಲು ಬಂದ ಸಾವಿರಾರು ಜನ ಅಭಿಮಾನವನ್ನು ಕಂಡು ಮನದುಂಬಿ ಮಾತನಾಡುವಾಗ ನಾನು ದುರ್ಗದ ಕುರಿತು ಒಂದು ಕಾದಂಬರಿ ಬರೆಯುತ್ತೇನೆ ಎನ್ನುವ ಪ್ರತಿಜ್ಞೆ ಮಾಡುತ್ತಾರೆ. ಆದರೆ ಅಲ್ಲಿದ್ದ ಜನಗಳಲ್ಲಿ ಅನುಮಾನ, ಕುಡಿತದಿಂದ ಕೈಯಲ್ಲಿ ಪೆನ್ನು ಹಿಡಿಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇರುವ ಈತ ಕಾದಂಬರಿ ಬರೆಯಬಲ್ಲನೇ ಎಂದು. ಇದೆಲ್ಲ ಅಗಿ ಸರಿಯಾಗಿ ನಾಲ್ಕು ತಿಂಗಳಿಗೆ ಹೊರಬಂದಿದ್ದು ದುರ್ಗದ ಕುರಿತ ಕಾದಂಬರಿ “ದುರ್ಗಾಸ್ತಮಾನ” ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಆತನ ಕೊನೆಯ ದಿನಗಳಲ್ಲಿ ಬರೆದ ಕಾದಂಬರಿ. ಅದೇ ಅವರ ಕೊನೆಯ ಕಾದಂಬರಿಯೂ ಆಯಿತು. ಅವರೇ ತ.ರಾ.ಸುಬ್ಬರಾಯರು. ಅಂದರೆ #ತಳುಕಿನ_ರಾಮಸ್ವಾಮಯ್ಯ_ಸುಬ್ಬರಾವ್. ಜನ ಮಾನಸದಲ್ಲಿ ತ.ರಾ.ಸು. ಎಂದೇ ಪ್ರಖ್ಯಾತರಾದವರು. ಇವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಲ್ಲಿ. ಇವರ ಹಿರಿಯರು ಅಂದ್ರದಿಂದ ಬಂದು ದುರ್ಗದ ಸಮೀಪ ತಳುಕುವಿನಲ್ಲಿ ನೆಲೆಸಿದ್ದರು. ಹಾಗಾಗಿ ತಳುಕು ಇವರ ಹೆಸರಿನ ಜೊತೆಗೆ ತಳುಕು ಹಾಕಿಕೊಂಡಿದೆ.
ತಂದೆ ರಾಮಸ್ವಾಮಿ ವಕೀಲರಾಗಿದ್ದರು, ತಾಯಿ ಸೀತಮ್ಮನವರು. ಬಾಲ್ಯದಲ್ಲಿ ಅತೀ ತುಂಟ ಹುಡುಗನಾಗಿದ್ದರು. ದುರ್ಗದಲ್ಲಿ ಶಾಲಾ ಶಿಕ್ಷಣ ಪಡೆದರು, ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. 17ರ ವಯಸ್ಸಿನಲ್ಲಿ ಬಾಗೂರಿನಲ್ಲಿ ಚಳುವಳಿ ಮಾಡುವಾಗ ಇವರನ್ನು ಬಂಧಿಸಿ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ನಂತರ ಬಿಡುಗಡೆಯಾಗಿ ಬಂದ ಮೇಲೆ ತಂದೆ ರಾಮಸ್ವಾಮಿ ಅವರು ಊರಿನಲ್ಲಿ ಇದ್ದರೆ ಮತ್ತೆ ಚಳುವಳಿಯಲ್ಲಿ ಭಾಗವಹಿಸಬಹುದು , ಓದಿನತ್ತ ಗಮನ ಹರಿಸದೆ ಹೋಗಬಹುದು ಎಂದು ಯೋಚಿಸಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಗೆ ಸೇರಿಸುತ್ತಾರೆ. ಅಲ್ಲಿ sslc ಮುಗಿಸಿದವರು ನಂತರ ಇಂಟರ್ ಓದಲು ಶಿವಮೊಗ್ಗಕ್ಕೆ ಹೋಗುತ್ತಾರೆ, ಮತ್ತೆ ಒಂದು ವರ್ಷದ ನಂತರ ತುಮಕೂರಿಗೆ ಬಂದು ಓದನ್ನು ಮುಂದುವರೆಸಿದರು. ಆ ವೇಳೆಗೆ ಸ್ವಾತಂತ್ರ ಚಳುವಳಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗ ಕ್ವಿಟ್ ಇಂಡಿಯಾ ಚಳುವಳಿ ಸಮಯ. ಸರ್ಕಾರದ ಗಮನ ಸೆಳೆಯಲು ರೈಲು ಹಳಿಗಳನ್ನು ತೆಗೆದು ಚಳುವಳಿ ಮಾಡುವ ಸಮಯದಲ್ಲಿ ಮತ್ತೆ ಪೊಲೀಸ್ ಕೈಗೆ ಸಿಕ್ಕಿ ಬಿದ್ದು ಜೈಲು ಸೇರುತ್ತಾರೆ. ಅಲ್ಲಿಂದ ಹೊರ ಬಂದ ಮೇಲೆ ಮುಂದೆ ನಾನು ಓದುವುದಾದರೆ ಸ್ವಾತಂತ್ರ ಭಾರತದ ಕಾಲೇಜಿನಲ್ಲಿ ಮಾತ್ರ ಎಂದು ಪ್ರತಿಜ್ಞೆ ಮಾಡಿದ ತರಾಸು ಮುಂದೆ ಕಾಲೇಜ್ ಮೆಟ್ಟಿಲು ಹತ್ತಲೇ ಇಲ್ಲ.

ಫೋಟೋ ಕೃಪೆ : google
ಇಂಟರ್ ಮೀಡಿಯಟ್ ವರೆಗೆ ಮಾತ್ರ ಓದಿದ ತರಾಸು ಕಾದಂಬರಿ ಲೋಕದ ಅನರ್ಘ್ಯ ರತ್ನವಾಗಿ ಬೆಳೆದದ್ದು ತಮ್ಮ ಸ್ವಂತ ಪರಿಶ್ರಮದಿಂದ. ಇವರು ಓದಿದ್ದು ಇಂಟರ್ ಅಷ್ಟೇ ಆದರೂ ಇವರಿಗೆ ಶಿಕ್ಷಕರಾಗಿ ಸಿಕ್ಕಿದ್ದ ಎಸ್ ವಿ.ಪರಮೇಶ್ವರಭಟ್ಟರು ಹಾಗೂ ಹೊಯ್ಸಳ ಎಂದು ಖ್ಯಾತಿ ಪಡೆದ ಅರಗ ಲಕ್ಷ್ಮಣರಾವ್ ಅಂತಹವರು. ಅಂತಹ ಗುರುಗಳ ಶಿಷ್ಯರಾದ ತರಾಸು ಅವರು ನಮ್ಮ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿ ಬೆಳೆದರು.
ಕನ್ನಡದ ಅಶ್ವಿನಿ ದೇವತೆಗಳು ಎಂದೇ ಹೆಸರಾದ ಟಿ.ಎಸ್..ವೆಂಕಣ್ಣಯ್ಯ ಹಾಗೂ ತ.ಸು. ಶಾಮರಾಯರು ಇವರ ದೊಡ್ಡಪ್ಪ ಹಾಗೂ ಚಿಕ್ಕಪ್ಪನವರು.ಇವರಿಬ್ಬರ ಪ್ರಭಾವ ತರಾಸು ಮೇಲೆ ಅಗಿತ್ತು, ಅದರ ಪರಿಣಾಮವಾಗಿ ಓದಿನ ಹುಚ್ಚು ಹತ್ತಿತ್ತು. ಇದರೊಂದಿಗೆ ವೆಂಕಣ್ಣಯ್ಯ ಅವರನ್ನು ಭೇಟಿಯಾಗಲು ಬರುತ್ತಿದ್ದ ಬಿ.ಎಂ.ಶ್ರೀ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು, ವಿ. ಸೀತಾರಾಂ ಇವರೆಲ್ಲರ ಒಡನಾಟ ತರಾಸು ಅವರಿಗೆ ದೊರಕಿತ್ತು.
ತೀರಾ ತರಲೆ ತುಂಟತನವನ್ನು ಮಾಡುತ್ತಿದ್ದ ತರಾಸು ಅವರಿಗೆ ದೊಡ್ಡಪ್ಪ ವೆಂಕಣ್ಣಯ್ಯನವರು ನಿನ್ನೆಲ್ಲ ಈ ಬುದ್ದಿವಂತಿಕೆಯನ್ನು ಏನನ್ನಾದರೂ ಬರೆಯುವುದರಲ್ಲಿ ತೋರಿಸು ನೋಡೋಣ ಎಂದರಂತೆ. ಅಂದೇ ಸಂಜೆ ತರಾಸು “ಪುಟ್ಟನ ಚೆಂಡು” ಎನ್ನುವ ಕಥೆಯನ್ನು ಬರೆದು ದೊಡ್ಡಪ್ಪನಿಗೆ ಕೊಟ್ಟರಂತೆ. ಓದಿದ ವೆಂಕಣ್ಣಯ್ಯ ನವರು ಬಹಳ ಖುಷಿ ಪಟ್ಟು ಹತ್ತು ರೂಪಾಯಿಗಳ ಬಹುಮಾನ ನೀಡಿದ್ದರಂತೆ.
ಇನ್ನು ಅ.ನ. ಕೃ ಅವರನ್ನು ತನ್ನ ಗುರು ಎನ್ನುತ್ತಿದ್ದರು ತರಾಸು ಅವರು. ಗುರು ಅನಕೃ ಅವರು ಬರೆದ ಕಾದಂಬರಿಗಳ ಸಂಖ್ಯೆಯಲ್ಲಿ ಅತೀ ಹೆಚ್ಚು ಆದರೆ, ಗುಣಮಟ್ಟದ ದೃಷ್ಟಿಯಲ್ಲಿ ತರಾಸು ಅವರ ಕಾದಂಬರಿಗಳು ಗುರುವನ್ನು ಮೀರಿಸುವಂತೆ ಇದ್ದವು ಎನ್ನುವುದು ಸಾಹಿತ್ಯಿಕ ಲೋಕದಲ್ಲಿ ಇದೆ. ಬರೆದಂತೆ ಬದುಕಿದವರು ಕೆಲವರು, ಬರದೇ ಬದುಕಿದವರು ಮತ್ತೆ ಕೆಲವರು. ಆದರೆ ಬರೆದಂತೆಯೇ ಬದುಕಿದವರು ಮತ್ತು ಬರೆಯುತ್ತಲೆ ಬದುಕಿದವರು ಒಬ್ಬರೇ ಅವರೇ ತರಾಸು ಎನ್ನುವ ಮಾತಿದೆ. ಕಾದಂಬರಿ, ನಾಟಕ, ಕಥೆಗಳು ಎಲ್ಲವನ್ನೂ ಬರೆದರು. ಜೀವನ ಪೂರಾ ಬರಹಕ್ಕೇ ಮೀಸಲಿಟ್ಟವರು. ಚಂದವಳ್ಳಿಯ ತೋಟ, ದುರ್ಗಾಸ್ತಮಾನ, ನಾಗರಹಾವು, ಆಕಸ್ಮಿಕ, ಬಿಡುಗಡೆಯ ಬೇಡಿ, ಬೆಂಕಿಯ ಬಲೆ, ನೃಪತುಂಗ, ವಿಜಯೋತ್ಸವ, ಚಕ್ರತೀರ್ಥ, ಕಂಬನಿಯ ಕುಯಿಲು, ರಕ್ತರಾತ್ರಿ, ಚದುರಂಗದ ಮನೆ, ತಿರುಗು ಬಾಣ, ಮಸಣದ ಹೂವು, ಹಂಸಗೀತೆ ಮುಂತಾದ 65ಕ್ಕು ಹೆಚ್ಚು ಕಾದಂಬರಿಗಳನ್ನು ಬರೆದವರು. ಅದರಲ್ಲಿ 12 ಚಲನಚಿತ್ರಗಳಾಗಿವೆ.

ಫೋಟೋ ಕೃಪೆ : google
ತರಾಸು ಅವರ ವ್ಯಕ್ತಿತ್ವವನ್ನೇ ಹೋಲುವ ನಾಗರಹಾವು ಸಿನೆಮಾದ ರಾಮಾಚಾರಿಯ ಪಾತ್ರ ಮರೆಯಲು ಸಾಧ್ಯವಿಲ್ಲ. ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಚಲನ ಚಿತ್ರವನ್ನು ನೋಡಿದ ತರಾಸು ಇದು ನಾಗರಹಾವು ಅಲ್ಲ, ಕೆರೆಹಾವು ಎಂದಿದ್ದರಂತೆ.
ಇವರ ಚಂದವಳ್ಳಿಯ ತೋಟ ಮತ್ತು ಹಂಸಗೀತೆ ಇವು ಪದವಿ ತರಗತಿಗೆ ಪಠ್ಯ ಪುಸ್ತಕಗಳಾಗಿದ್ದವು. ಹಂಸಗೀತೆ ಮೊದಲು ಹಿಂದಿಯಲ್ಲಿ ಬಸಂತ್ ಬಹಾರ್ ಹೆಸರಿನಲ್ಲಿ ಚಲನ ಚಿತ್ರವಾಗಿತ್ತು, ನಂತರ ಕನ್ನಡಲ್ಲಿ ಅನಂತನಾಗ್ ಅಭಿನಯದಲ್ಲಿ ಚಲನಚಿತ್ರವಾಯಿತು. ತರಾಸು ಅವರೇ ಕೆಲವೊಂದು ಸಿನೆಮಾಗಳಿಗೆ ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಬರೆದಿದ್ದರಂತೆ. ಮತ್ತೊಂದು ವಿಶೇಷ ಎಂದರೆ ಇವರ ಈ ಎಲ್ಲ ಚಲನಚಿತ್ರಗಳೂ ಚೆನ್ನಾಗಿಯೇ ಹಣ ಸಂಪಾದಿಸಿದ ಚಿತ್ರಗಳು. ಇವು ನಿರ್ಮಾಪಕ ನಿರ್ದೇಶಕರ ಜೇಬು ತುಂಬಿದವೇ ಹೊರತು ತರಾಸು ಅವರಿಗೆ ಹೆಚ್ಚೇನೂ ಲಾಭ ಆಗಲಿಲ್ಲ ಎನ್ನುವುದು ಸತ್ಯ. ತರಾಸು ಅವರು ಒಂದು ರೀತಿಯ ಆರ್ಥಿಕ ಸಂಕಷ್ಟದಲ್ಲಿಯೇ ಜೀವನ ನಡೆಸಿದರು ಎನ್ನಬಹುದು.
ಅವರು 1942 ರಲ್ಲಿ ಪತ್ರಕರ್ತರಾಗಿ ಕೆಲಸ ಆರಂಭಿಸಿದರು. ಸಂಪಾದಕರಾಗಿ, ಉಪ ಸಂಪಾದಕರಾಗಿ ದುಡಿಯುತ್ತಾರೆ. ನಂತರ ಪ್ರಜಾವಾಣಿಯ ಮುಖ್ಯ ಉಪ ಸಂಪಾದಕರಾಗಿ ಸೇರುತ್ತಾರೆ. ಜೊತೆಗೆ ಕನ್ನಡದ ಹಲವಾರು ಪತ್ರಿಕೆಗಳಿಗೆ ಅಂಕಣ ಕಾರರಾಗಿ ಬರೆಯುತ್ತಾರೆ. ಅವರು ಮರಣ ಹೊಂದುವ ಕೆಲ ದಿನಗಳ ಹಿಂದಿನವರೆಗೂ ಅಂದರೆ 1984 ರ ವರೆಗೂ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಲೇ ಇದ್ದರು. ಪತ್ರಿಕಾಲಯದಲ್ಲಿ ಕುಳಿತೇ ಕಾದಂಬರಿ ಬರೆಯುತ್ತಿದ್ದರು ಎನ್ನಲಾಗಿದೆ. ಇವರು ಮದುವೆ ಆಗಿದ್ದು ದೂರದ ಸಂಬಂಧಿಯೂ ಅದ ಅಂಬುಜಾ ಅವರೊಂದಿಗೆ. ಇವರಿಗೆ ಮೂವರು ಮಕ್ಕಳು.
1985ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದು ದುರ್ಗಾಸ್ತಮಾನಕ್ಕೆ. ಆದರೆ ಅದನ್ನು ಪಡೆಯಲು ತರಾಸು ಅವರೇ ಇರಲಿಲ್ಲ. 1984 ರ ಏಪ್ರಿಲ್ 10ರಂದು ಮರಣಿಸಿದ್ದರು.
ಅವರು ಮರಣಿಸಿಯೇ 40 ವರ್ಷಗಳು ಆಗುತ್ತಾ ಬಂದರೂ ಇಂದಿಗೂ ಅವರ ಕಾದಂಬರಿಗಳು ಓದುಗರ ಅಚ್ಚುಮೆಚ್ಚಿನ ಕೃತಿಗಳು. ಕಾದಂಬರಿ ಲೋಕದ ಧ್ರುವತಾರೆ ಎಂದೇ ಹೆಸರಾದ ತರಾಸು ಇನ್ನಷ್ಟು ವರ್ಷ ಬದುಕಿದ್ದರೆ ಮತ್ತಷ್ಟು ಮಗದಷ್ಟು ಕೃತಿಗಳು ಕನ್ನಡ ತಾಯಿಯ ಪಾದಾರವಿಂದಕ್ಕೆ ಅರ್ಪಣೆ ಆಗುತ್ತಿತ್ತು. ದುರಾದೃಷ್ಟ ಎಂದರೆ ಅವರ ಕುಡಿತ, ಸಿಗರೇಟಿನಂತಹ ವ್ಯಸನಗಳು ಅವರ ಜೀವಕ್ಕೆ ಮುಳ್ಳಾಗಿ ಪರಿಣಮಿಸಿದ್ದು.
ಡಾಕ್ಟರ್ ಸಿ. ಎನ್.ರಾಮಚಂದ್ರ ಸರ್ ಅವರು ಒಂದೆಡೆ ಮಾತನಾಡುತ್ತಾ ಹೇಳುತ್ತಾರೆ. ತರಾಸು ಅವರು ಒಮ್ಮೆ ಮೈಸೂರಿನ ಕಾಲೇಜಿನಲ್ಲಿ ” ಇಂದಿನ ಕಾದಂಬರಿಯ ಸುತ್ತ ಮುತ್ತ” ಎನ್ನುವ ವಿಷಯದ ಕುರಿತು ಮಾತನಾಡುತ್ತಾ ತರಾಸು ಅವರು ಅನಕೃ ಅವರ ಕುರಿತು ಬಹಳ ಗೌರವದಿಂದ ಮಾತನಾಡುತ್ತಾರೆ, ನಂತರ ಚದುರಂಗರು, ತದನಂತರ ಕಾರಂತರು ಹಾಗೂ ಕಟ್ಟಿಮನಿ ಅವರ ಕುರಿತಂತೆ ಮಾತನಾಡಿ ಒಂದರೆಕ್ಷಣ ನಿಲ್ಲಿಸುತ್ತಾರೆ, ಮುಂದೆ ನಾನು ಯಾರು ಕುರಿತು ಮಾತನಾಡಲಿ ಎಂದಾಗ ಸಭಿಕರೆಲ್ಲ ತರಾಸು ತರಾಸು ಎಂದು ಕೂಗಿದ್ದರಂತೆ. ಆಗ ನಸು ನಗು ನಕ್ಕು ಮಾತನಾಡಲು ಮುಂದಾದರಂತೆ. ಅಂತಹ ಒಂದು ದಂತಕಥೆ ತರಾಸು ಎನ್ನುತ್ತಾರೆ ರಾಮಚಂದ್ರ ಚಿಲಕುಂದರು.

ಫೋಟೋ ಕೃಪೆ : google
ಹಾಗೇ ಮಾತು ಮುಂದುವರೆಸುತ್ತಾ ಅವರು ತರಾಸು ಅವರ ಕಾದಂಬರಿಯಲ್ಲಿ ವಸ್ತು ವೈವಿಧ್ಯ ಹೆಚ್ಚಾಗಿತ್ತು. ಅಂದಿನ ಕೆಲವು ಸಾಮಾಜಿಕ ಪಿಡುಗುಗಳ ಮೇಲೆ ಬರೆದಿದ್ದಾರೆ. ಅದರಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಕುರಿತಾಗಿ ಬರೆದದ್ದು “ಬಿಡುಗಡೆಯ ಬೇಡಿ”. ವೇಶ್ಯಾ ವೃತ್ತಿ ಕುರಿತು ಬರೆದದ್ದು “ಮಸಣದ ಹೂವು”, ಜೀತದ ಕುರಿತು ಬರೆದದ್ದು “ಜೀತದ ಜೀವ”, “ಮುಂಜಾವಿನಿಂದ ಮುಂಜಾವು” ಪತ್ರಕರ್ತರ ಕುರಿತದ್ದು. ಇನ್ನು ಇತಿಹಾಸ ಕುರಿತಾಗಿ ಬರೆದದ್ದು ಎಲ್ಲರಿಗೂ ತಿಳಿದೇ ಇದೆ ಎನ್ನುತ್ತಾರೆ. ಕೆಲವು ಕೃತಿಗಳ ಅನುವಾದ ಕೂಡ ಮಾಡಿದ್ದಾರೆ.
ಇನ್ನು ಕೆಲವು ಕೃತಿಗಳನ್ನು ನೋಡುವಾಗ ಅವು ಸಾಹಿತ್ಯದ ದೃಷ್ಟಿಯಿಂದ ಅಷ್ಟೊಂದು ಉತ್ಕೃಷ್ಟ ಎನ್ನಲಾಗದಿದ್ದರೂ ಕಾದಂಬರಿಯ ಓದುಗರೇ ಇಲ್ಲದಂತಹ ಸಮಯದಲ್ಲಿ ಸಹಸ್ರಾರು ಓದುಗರನ್ನ ಹುಟ್ಟು ಹಾಕಲು, ಹಾಗೆಯೇ ಬರವಣಿಗೆಯಿಂದಲೇ ಜೀವನ ನಡೆಸಬೇಕಾದ ಅನಿವಾರ್ಯತೆಯಿಂದ ಅವುಗಳು ಅವಶ್ಯಕವಾಗಿದ್ದವು ಎನ್ನುತ್ತಾರೆ. ಹಾಗೆಯೇ ತರಾಸು ಅವರ ಕಾದಂಬರಿಗಳು ಪ್ರಕಟಣೆ ಆದಾಗ ಸರದಿಯಲ್ಲಿ ಘಂಟೆಗಟ್ಟಲೆ ನಿಂತು ಪುಸ್ತಕ ಕೊಂಡು ರಾತ್ರಿಯೆಲ್ಲ ಓದುತ್ತಿದ್ದೆವು ಎಂದೂ ಹೇಳುತ್ತಾರೆ ರಾಮಚಂದ್ರ ಸರ್ ಅವರು.
ರಾಘವೇಂದ್ರ ಪಾಟೀಲ್ ಅವರು ಮಾತನಾಡುತ್ತಾ ತರಾಸು ಹಠಮಾರಿತನ ದಿಂದ ಬೆಳೆದವರು. ಮನೆಯಾಗಲೀ ಶಾಲೆಯಾಗಲೀ ಎಲ್ಲಿಯೂ ಶಿಸ್ತಿಗೆ ಒಳಪಡದೆ ಬೆಳೆದವರು. ಗಣಿತ ವಿಷಯ ತರಾಸು ಅವರಿಗೆ ಅತೀ ಕಷ್ಟವಾಗಿತ್ತು. ತರಾಸು ಅವರಿಗೆ HAL ನಲ್ಲಿ ನೌಕರಿಗಾಗಿ ಸಂಬಂಧಿಗಳು ಪತ್ರ ಕೊಟ್ಟು ಕಳಿಸುತ್ತಾರೆ, ಆದರೆ ಅಲ್ಲಿನ ವಾತಾವರಣ ಇಷ್ಟವಾಗದೆ ಕೆಲಸಕ್ಕೆ “ನಿಮ್ಮ ಕೆಲಸ ನನಗೆ ಬೇಡ” ಎಂದು ಹೇಳಿ ಕೆಲಸಕ್ಕೆ ಸೇರದೇ ವಾಪಸ್ ಬರುತ್ತಾರೆ. ಇದರ ಮೂಲಕ ಲೇಖನಕನಾಗುತ್ತ ತಮ್ಮ ಹೆಜ್ಜೆಯನ್ನು ಭದ್ರಮಾಡಿಕೊಳ್ಳುತ್ತಾರೆ. ಚಿಕ್ಕಂದಿನಿಂದಲೂ ಓದುವ ಹುಚ್ಚಿಗೆ ಬಿದ್ದಿದ್ದ ತರಾಸು ಅವರು ಅಪ್ಪನ ಜೇಬಿನಲ್ಲಿ ಹಣ ಕದ್ದು ಓದುವ ಉದ್ದೇಶದಿಂದ ಅಗಡಿಯ ಅನಂದಾಶ್ರಮದಲ್ಲಿ ಗುರುಗಳ ಒಪ್ಪಿಗೆಯ ಮೇರೆಗೆ ತಿಂಗಳುಗಟ್ಟಲೆ ಇದ್ದು , ಅಲ್ಲಿನ ಗ್ರಂಥಾಲಯದಲ್ಲಿ ಗಳಗನಾಥ, ಕೆರೂರು ಮುಂತಾದವರ ಕೃತಿಗಳನ್ನು ಅಭ್ಯಸಿಸಿದರು. ಇನ್ನೊಮ್ಮೆ ಮತ್ತೆ ಮನೆಯಲ್ಲಿ ಹೇಳದೇ ದೊಡ್ಡಪ್ಪ ವೆಂಕಣ್ಣಯ್ಯನವರ ಮನೆಗೆ ಹೋಗಿ ಅವರ ಗ್ರಂಥಾಲಯದ ಪುಸ್ತಕವನ್ನು ಓದಿದರು. ಕೇವಲ ಸೀನಿಯರ್ ಇಂಟರ್ ಓದಿದ ಕಾರಂತರು “ಎಲಿಟ್” ನಂತಹ ವಿಷಯ ಕುರಿತಂತೆ ತಜ್ಞಸರಣಿ ಲೇಖನಗಳನ್ನು ಬರೆಯಲು ಸಾಧ್ಯವಾಗಿದ್ದು ಇಂತಹ ಓದಿನಿಂದ ಎನ್ನುತ್ತಾರೆ.
ಬಿ.ಎಲ್. ವೇಣು ಅವರು ಮಾತನಾಡುತ್ತಾ ತರಾಸು ಎಂದರೆ ಚಿತ್ರದುರ್ಗ, ಚಿತ್ರದುರ್ಗ ಎಂದರೆ ತರಾಸು ಎನ್ನುವಂತೆ ಆಗಿದೆ. ದುರ್ಗದ ಕುರಿತು ಅಷ್ಟು ಕೃತಿಗಳನ್ನು ಬರೆದಿದ್ದಾರೆ ಎನ್ನುತ್ತಾರೆ.
ಸಾಹಿತ್ಯದ ದೃಷ್ಟಿಯಿಂದ ಅತ್ಯುತ್ಕೃಷ್ಟ ಕೃತಿಗಳನ್ನು ರಚಿಸಿದ್ದರೂ, ಜೀವನ ನಿರ್ವಹಣೆಗಾಗಿ ರೋಚಕತೆ ತುಂಬಿದ ಕಥೆ ಕಾದಂಬರಿಗಳನ್ನು ಬರೆದಿರುವ ಈ ಕಾದಂಬರಿ ಲೋಕದ ಸಾಮ್ರಾಟ ರ ಜನ್ಮ ಶತಾಬ್ದಿ ಅಗಿ ಎರಡು ವರ್ಷಗಳು ಆಗಿವೆ. ಮರಣಿಸಿ 40 ವರ್ಷಗಳು ಆಗುತ್ತಾ ಬಂದರೂ ಇಂದಿಗೂ ಅವರ ಕಾದಂಬರಿಗಳು ಮರು ಪ್ರಕಟಣೆ ಗೊಳ್ಳುತ್ತಿರುವುದು, ಓದುಗರನ್ನು ತನ್ನೆಡೆ ಸೆಳೆಯುತ್ತಿರುವುದು ಅವರ ಬರವಣಿಗೆಗೆ ಸಿಕ್ಕಿರುವ ಬೆಲೆ ಮತ್ತು ಅವರ ಸಾಹಿತ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.
- ವಸಂತ ಗಣೇಶ್
