ಸತ್ತುಹೋದ ಪ್ರಾಣಿಯ ಚರ್ಮವನ್ನು ಬಳಸಿ ಗೊಂಬೆಯನ್ನು ತಯಾರು ಮಾಡುವ ಕಲೆಗೆ ‘ಟ್ಯಾಕ್ಸಿ ಡರ್ಮಿ ಕಲೆ’ ಎನ್ನುತ್ತಾರೆ. ಆ ಕಲೆಯನ್ನು ಕರಗತ ಮಾಡಿಕೊಂಡಿದ್ದ ಕೆಂಡಗಣ್ಣಸ್ವಾಮಿ ಅವರು ಮುಂದೆ ತಮ್ಮ ಮಗಳಿಗೂ ಆ ಕಲೆಯನ್ನು ಧಾರೆಯೆರೆಯುತ್ತಾರೆ, ಅವರ ಮಗಳ ಹೆಸರೇ ಕೆ. ಮಂಜುಳಾ. ಈಗ ಈ ಚರ್ಮ ಪ್ರಸಾಧನ ಕಲೆಯನ್ನು ನಿಷೇಧಿಸಿರುವುದರಿಂದ ಮಂಜುಳಾ ಅವರು ಈಗಾಗಲೇ ಇರುವ ಗೊಂಬೆಗಳಿಗೆ ಹೊಸರೂಪ ನೀಡುತ್ತಿದ್ದಾರೆ, ‘ಟ್ಯಾಕ್ಸಿ ಡರ್ಮಿ ಕಲೆ’ ಹಾಗೂ ಕೆ ಮಂಜುಳಾ ಅವರ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದಿರುವ ಲೇಖನ ತಪ್ಪದೆ ಓದಿ…
ನೀವುಗಳು ಯಾವುದಾದರೂ ಸಿನಿಮಾಗಳಲ್ಲಿ ಅಥವಾ ಮೈಸೂರಿನ ಅರಮನೆಗೂ, ಇನ್ನಿತರೇ ಪ್ರಾಣಿ ಸಂಗ್ರಹಾಲಯಗಳಲ್ಲಿ ನೀವು ನೋಡಿರಬಹುದು ಹುಲಿ, ಸಿಂಹ, ಆನೆ, ಜಿರತೆ, ಕರಡಿಯಂತಹ ಪ್ರಾಣಿಗಳು ಜೀವವಿರುವಂತೆ ಕಾಣುವ ಗೊಂಬೆಗಳನ್ನು ನೋಡಿರಬಹುದು ಅವುಗಳನ್ನು ನೋಡಿ ಹೆದರಿ ಭಯಪಟ್ಟಿರುವುದು ಉಂಟು, ಹಾಗೆ ನೈಜವಾಗಿ ಕಾಣುವಂತೆ ಅವುಗಳನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಕುತೂಹಲ ನಿಮ್ಮನ್ನು ಕಾಡುವುದೇ ಬಿಡದು, ಹಾಗಾದರೇ ನೀವು ಮೈಸೂರಿನ ಆರ್.ಎಸ್. ನಾಯ್ಡು ನಗರಕ್ಕೆ ಒಮ್ಮೆ ಬರಲೇಬೇಕು.
ಪ್ರತಿಷ್ಠೆ ಹಾಗೂ ಶ್ರೀಮಂತಿಕೆಯ ಸಂಕೇತವಾಗಿ ರಾಜಕಾರಣಿಗಳ, ಶ್ರೀಮಂತರು, ಗಣ್ಯರು, ರಾಜಮನೆತನದವರ ಮನೆಗಳಲ್ಲಿ ರಾರಾಜಿಸುತ್ತಿದ್ದ ‘ ಟ್ಯಾಕ್ಸಿ ಡರ್ಮಿ ಕಲೆ’ ಕನ್ನಡದಲ್ಲಿ ಪ್ರಾಣಿ ಪ್ರಸಾದನ/ಚರ್ಮ ಪ್ರಸಾದನ ಎನ್ನುವ ಕಲೆಯನ್ನು ಇನ್ನು ಜೀವಂತವಾಗಿಸಿದ್ದಾರೆ ಮೈಸೂರಿನ ದಿ. ಕೆಂಡಗಣ್ಣಸ್ವಾಮಿ ಹಾಗೂ ವೆಂಕಟಲಕ್ಷ್ಮಮ್ಮ ದಂಪತಿಗಳ ಪುತ್ರಿ ಕೆ. ಮಂಜುಳಾ.
ಟ್ಯಾಕ್ಸಿ ಡರ್ಮಿ/ಪ್ರಾಣಿ ಪ್ರಸಾಧನ ಕಲೆ ಎಂಬುದು ವಿವಿಧ ಅಯಾಮಗಳಲ್ಲಿ ಕೆಲಸ ಮಾಡಬೇಕಾದ ಕಲೆಯಾಗಿದೆ.

ಸಮಗ್ರ ವಿನ್ಯಾಸ, ವಿವಿಧ ಪರಿಕರಗಳು, ಪ್ರಾಣಿದೇಹದ ವಿಜ್ಞಾನ, ದೇಹ ರಚನಾಶಾಸ್ತ್ರಗಳ ಸಮ್ಮಿಶ್ರಣವಾಗಿದೆ. ಈ ಎಲ್ಲ ಅಂಶಗಳ ಪರಿಜ್ಞಾನವುಳ್ಳ ಪ್ರಾಣಿ ಪ್ರಸಾಧನಾ ತಜ್ಞರು ಸಿದ್ಧಪಡಿಸಿದ ಒಂದು ಗೊಂಬೆ ನೈಜಪ್ರಾಣಿಯಂತೆ ಮನಸೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ಒಬ್ಬ ಟ್ಯಾಕ್ಸಿಡರ್ಮಿಸ್ಟ್‍ನ ಅಂತಿಮ ಗುರಿ. ಸತ್ತ ನಿರ್ದಿಷ್ಠ ಪ್ರಾಣಿಯ ಚರ್ಮವನ್ನು ಬಳಸಿ ಗೊಂಬೆಯನ್ನು ಸಿದ್ಧಪಡಿಸಿ ಅದರ ಅಂದವನ್ನು ಹೆಚ್ಚಿಸಿ ಅದು ಜೀವಂತ ಪ್ರಾಣಿಯ ರೀತಿ ಭಾಸವಾಗುವಂತೆ ಮಾಡುವುದೇ ಈ ಪ್ರಾಣಿ ಪ್ರಸಾಧನ ಕಲೆ.
ಟ್ಯಾಕ್ಸಿ ಡರ್ಮಿ ಕಲೆಯನ್ನು ಇವರ ಕುಟುಂಬಕ್ಕೆ ಪರಿಚಯಿಸಿದ್ದು ಬ್ರಿಟನ್ ಮೂಲದ ಜಾನ್ ಡೆವಿಡ್ ವ್ಯಾನಿಂಗನ್, ಚರ್ಮಪ್ರಸಾದನ ಕಲೆಯನ್ನು ಮೈಸೂರಿಗೆ ಪರಿಚಯಿಸಲೆಂದು ಮೈಸೂರಿನ ನಜರ್‍ಬಾದ್ ನಲ್ಲಿ ವ್ಯಾನ್ ಇಂಗನ್ ಅಂಡ್ ವ್ಯಾನ್ ಇಂಗನ್ ಹೆಸರಿನ ಕಂಪನಿಯವರು. ಎಡ್ವಿನ್ ಹೆನ್ರಿ ಬೋತ, ಎಡ್ವಿನ್ ಜುಬೇಟ್ ಮತ್ತು ಕ್ರೂಗ ಎಂಬುವರು ವ್ಯಾನಿಂಗನ್‍ಗೆ ಸಾಥ್ ನೀಡಿದರು. ಹತ್ತು ವರ್ಷದ ಬಾಲಕನಾಗಿದ್ದ ಕೆಂಡಗಣ್ಣಸ್ವಾಮಿ ಕೆಲಸಕ್ಕೆಂದು ವ್ಯಾನಿಂಗನ್ ಸೇರಿಕೊಂಡರು ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಇವರು ದಿನ ಕಳೆದಂತೆ ಟ್ಯಾಕ್ಸಿ ಡರ್ಮಿ ಕಲೆಯನ್ನು ಕರಗತ ಮಾಡಿಕೊಂಡು. ಅಪ್ಪನ ಜೊತೆಯಲ್ಲಿಯೇ ಅಡಿಕೊಂಡು ಬೆಳೆದ ಮಂಜುಳಾ ಟ್ಯಾಕ್ಸಿಡರ್ಮಿ ಕಲೆಯಲ್ಲಿ ಪ್ರಾವಿಣ್ಯತೆಯನ್ನು ಪಡೆದರು.
ವ್ಯಾನ್ ಇಂಗನ್ ಅಂಡ್ ವ್ಯಾನ್ ಇಂಗನ್ ಈ ಕಂಪನಿಯು ಸರಿ ಸುಮಾರು 100 ವರ್ಷಗಳ ಕಾಲ ತಯಾರಿಕೆ ಹಾಗೂ ರಕ್ಷಣಾ ಕಾರ್ಯ ನಿರ್ವಹಿಸಿತ್ತು. ಅರಣ್ಯ ಇಲಾಖೆಯ ಸೂಚನೆಯ ಮೇರೆಗೆ ವ್ಯಾನಿಂಗನ್ ಕಂಪನಿ 1998-99 ರಲ್ಲಿ ಮುಚ್ಚಲ್ಪಟ್ಟಿತ್ತು. ಅಂದು ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಂಡಗಣ್ಣಸ್ವಾಮಿ ಸೇರಿದಂತೆ ಅನೇಕ ಮಂದಿ ಬೀದಿಗೆ ಬೀಳುವಂತಾಯಿತು. ಆದರೆ ಕೆಂಡಗಣ್ಣಸ್ವಾಮಿ ಅವರು ನಿರುದ್ಯೋಗಿಗಳಾಗಿದ್ದ ವ್ಯಾನಿಂಗನ್ ಸಂಸ್ಥೆಯ ಕೆಲವರನ್ನು ಒಂದುಗೊಡಿಸಿ ತಾವೇ ಸ್ವತಃ ತಯಾರಿಸಿದ ಪ್ರಾಣಿ ಗೊಂಬೆಗಳಿಗೆ ಚಿಕಿತ್ಸೆ ನೀಡುವ ಕಾಯಕವನ್ನು ಆರಂಭಿಸಿದರು. ಕಳೆದ ಆರು ವರ್ಷಗಳ ಹಿಂದೆ ನಿಧನರಾದ ತಂದೆ ಕೆಂಡಗಣ್ಣಸ್ವಾಮಿಯವರು ನಡೆಸಿಕೊಂಡು ಬಂದ ಈ ಕಾಯಕವನ್ನು ಮಗಳು ಕೆ.ಮಂಜುಳಾ ಪ್ರಾಣಿ ಪ್ರಸಾಧನಕ್ಕೆ ಚಿಕಿತ್ಸೆ ಮುಂದುವರೆಸುವ ಮುಂದುವರೆಸುಕೊಂಡು ಯಶಸ್ಸು ಸಾಧಿಸಿದ್ದಾರೆ.
ಈಗಾಗಲೇ ಹಲವು ವರ್ಷಗಳಿಂದ ನಿರ್ಮಿಸಿರುವ ಈ ಪ್ರಾಣಿಪ್ರಸಾಧನ ಕಲೆಯನ್ನು ಕಾಪಾಡಿಕೊಳ್ಳುವುದು ಕಷ್ಠ ಸಾಧ್ಯ, ಅವುಗಳ ಚರ್ಮ, ಹುಳುಗಳ ಹಾವಳಿ, ಕ್ರಿಮಿ ಕೀಟಗಳ ಪ್ರಭಾವದಿಂದ ನಾಶವಾಗುವ ಸಾಧ್ಯತೆ ಹೆಚ್ಚಾಗಿದೆ. ವರ್ಷಕ್ಕೊಮ್ಮೆ ಇವುಗಳಿಗೆ ರಾಸಾಯನಿಕ ವಸ್ತುಗಳೊಂದಿಗೆ ಔಷಧಿಯನ್ನು ಸಿಂಪಡಿಸದಿದ್ದಲ್ಲಿ ಅತ್ಯಮೂಲ್ಯವಾದ ಪ್ರಾಣಿಗಳ ಚರ್ಮದಿಂದ ಕೂದಲು ಉದುರಿ ಹೋಗುತ್ತವೆ. ಮತ್ತು ಬಿಸಿಲಿನ ತಾಪಕ್ಕೆ ಸೀಳಲಾರಂಭಿಸಿ ನಶಿಸುತ್ತವೆ. ಚಿಕಿತ್ಸೆ ನೀಡದಿದ್ದರೆ ವಿರೂಪಗೊಳ್ಳುತ್ತವೆ. ಮೊದಲೇ ಕಾಡುಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಈ ಪ್ರಾಣಿ ಪ್ರಸಾಧನ ಹೆಚ್ಚು ಮಹತ್ವ ಪಡೆದಿದೆ ಎಂದು ಹೇಳುತ್ತಾರೆ ಕೆ.ಮಂಜುಳಾ.

ಟ್ಯಾಕ್ಸಿಡರ್ಮಿ ಗೊಂಬೆಗಳನ್ನು ಎಲ್ಲರೂ ಇಟ್ಟುಕೊಳ್ಳುವಂತಿಲ್ಲ ಕೇವಲ ಅನುಮತಿ ಪಡೆದವರು ಮಾತ್ರ. ಪ್ರಾಣಿಗಳ ಮಾರಣ ಹೋಮ ಹೆಚ್ಚಾದಂತೆ ಅವುಗಳ ಊಳುವಿನ ಕಡೆಗೆ ಗಮನ ಹರಿಸಿದ ಸರ್ಕಾರ ಚರ್ಮಪ್ರಸಾಧನ ಮಾಡುವುದನ್ನು ನಿಷೇಧಿಸಿತು. ಹಿಂದೆ ರಾಜ ಮಹಾರಾಜರುಗಳು ಬೇಟೆಯಾಡಿ ಕೊಂದ ಪ್ರಾಣಿಗಳ ಚರ್ಮದಿಂದ ಗೊಂಬೆಗಳನ್ನು ತಯಾರಿಸಿ ಅರಮನೆ, ವಸ್ತುಸಂಗ್ರಹಾಲಯಗಳಲ್ಲಿ ಇಟ್ಟುಕೊಳ್ಳುತ್ತಿದ್ದರು. ಇದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಅಲ್ಲದೇ ಶ್ರೀಮಂತರು ಗಣ್ಯರು ಮನೆಗಳಲ್ಲಿ ಇಂತಹ ಗೊಂಬೆಗಳಿರುವುದು ಸಾಮಾನ್ಯವಾಗಿತ್ತು. ದಿನಕಳೆದಂತೆ ಎಲ್ಲರೂ ಇದನ್ನು ದುರುಪಯೋಗಪಡಿಸಿಕೊಳ್ಳಲು ಶುರುಮಾಡಿದರು. ಇದರಿಂದ ಪ್ರಾಣಿಸಂಕಲಕ್ಕೆ ಸಂಚಕಾರ ಬಂದೊದಗಿತು ಇದನ್ನರಿತ ಸರ್ಕಾರ ಟ್ಯಾಕಿಡರ್ಮಿ ಕಲೆಯನ್ನು ನಿಷೇಧಿಸಿ ಗೊಂಬೆ ಮಾಡುವುದು ಮತ್ತು ಮಾಡಿಸುವುದು ಶಿಕ್ಷಾರ್ಹ ಅಪರಾಧವಾಯಿತು ಹಾಗಾಗಿ ಈ ಕಲೆ ಹೆಚ್ಚಾಗಿ ಬೆಳೆಯಲಿಲ್ಲ.
ಚರ್ಮ ಪ್ರಸಾಧನ ಕಲೆಯನ್ನು ನಿಷೇಧಿಸಿದರೂ ಮಂಜುಳಾ ಅವರಿಗೆ ಯಾವ ಅಡೆ ತಡೆ ಇಲ್ಲದೇ ಹೊಸದಾಗಿ ಗೊಂಬೆಗಳನ್ನು ತಯಾರು ಮಾಡದೇ ಇದ್ದರೂ ಇರುವ ಗೊಂಬೆಗಳನ್ನು ಕಾಪಾಡಬೇಕಲ್ಲವೇ? ಹೀಗಾಗಿ ಅರಣ್ಯ ಇಲಾಖೆಯೇ ಅನುಮತಿಯನ್ನು ನೀಡಿದೆ.
ಮೈಸೂರು ಆರಮನೆ, ಮೃಗಾಲಯ, ಮೈಸೂರು ಅರಣ್ಯ ಭವನ, ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್, ಬೆಳಗಾವಿಯ ಮರಾಠ ಲೈಟ್ ಇನ್ಷೆಂಟ್ರಿ ಕಛೇರಿ, ಅಲ್ಲದೇ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ನಲ್ಲಿ ಇರುವ ಇಂಥ ಗೊಂಬೆಗಳಿಗೆ ಹೊಸರೂಪ ನೀಡಿದ್ದಾರೆ. ಇಷ್ಟೇ ಅಲ್ಲಾ ಹೊರ ರಾಜ್ಯಗಳಾದ ದೆಹಲಿ, ಊಟಿ, ಗ್ವಾಲಿಯರ್, ಹೈದ್ರಾಬಾದ್, ಇನ್ನು ಮುಂತಾದ ಕಡೆ ಹೋಗಿ ಗೊಂಬೆಗಳಿಗೆ ಹೊಸರೂಪ ನೀಡಿದ್ದಾರೆ ಎನ್ನುತ್ತಾರೆ ಮಂಜುಳಾ.
ತಮ್ಮ ಮನೆಯನ್ನೇ ಟ್ಯಾಕ್ಸಿಡರ್ಮಿ ಗೊಂಬೆಗಳ ದುರಸ್ತಿ ಮಾಡುವ ಕಾರ್ಯಾಗಾರವನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಜಮೀನು ನೀಡಿದರೆ ಒಂದು ಮ್ಯೂಸಿಯಂ ಮಾಡುವ ಬಯಕೆ ಮಂಜುಳಾ ಇವರದು. ಅರಣ್ಯ ಇಲಾಖೆಯ ಕೆಲವು ಕಚೇರಿಗಳಲ್ಲಿ ನಿರ್ವಹಣೆ ಕೊರತೆಯಿಂದ ಕೆಲವು ಅಮೂಲ್ಯ ಪ್ರಾಣಿಗಳ ಗೊಂಬೆಗಳು ವ್ಯರ್ಥವಾಗುತ್ತಿವೆ. ಅವುಗಳನ್ನು ದುರಸ್ತಿ ಮಾಡಿ ಸಂರಕ್ಷಿಸಬೇಕು ಎನ್ನುವುದು ಮಂಜುಳಾರ ಕಳಕಳಿ.
- ಟಿ.ಶಿವಕುಮಾರ್ (ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ) ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.
