ಅಪ್ಪ ಎಂದರೆ ಭದ್ರತೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಶಿಸ್ತು….ಎರಡು ಅಕ್ಷರದ ‘ಅಪ್ಪ’ನಲ್ಲಿರುವ ಅಡುಗಿರುವ ಶಕ್ತಿಯ ಕುರಿತು ಲೇಖಕಿ ವೀಣಾ ವಿನಾಯಕ ಅವರು ಬರೆದಿರುವ ಭಾವನಾತ್ಮಕ ಬರಹ, ಜೊತೆಗೆ ಅಪ್ಪನ ಹುಟ್ಟುಹಬ್ಬಕ್ಕೆ ಮಗಳ ಪ್ರೀತಿಯ ಅಕ್ಷರದೊಲುಮೆಯ ಪತ್ರ.
ಅಮ್ಮನ ಬಗೆಗೆ ಬರೆದಷ್ಟು ಸಲೀಸಲ್ಲ ಅಪ್ಪನ ಬಗ್ಗೆ ಬರೆಯಲು ಸಾಧ್ಯವಿಲ್ಲ . ಅಮ್ಮ ಹೆತ್ತಿದ್ದು, ಹೊತ್ತದ್ದು, ಅವಳ ಪ್ರೀತಿ, ಅವಳ ತ್ಯಾಗದ ಬಗ್ಗೆ ಎಷ್ಟು ಬೇಕಾದರೂ ಬರೆಯಬಹುದು. ಅಪ್ಪನದ್ದೆಲ್ಲಾ ಅಗೋಚರ. ಅಮ್ಮ, ತನ್ನ ಮಡಿಲಿನಲ್ಲಿ ಮಕ್ಕಳನ್ನು ಎಷ್ಟು ಜೋಪಾನ ಮಾಡುತ್ತಾಳೋ, ಅಷ್ಟೇ ಜೋಪಾನ ಅಪ್ಪನೂ ಮಾಡುತ್ತಾನೆ. ಸಂಸಾರದ ತೇರು ಎಳೆಯುವಲ್ಲಿ ಅಷ್ಟೇ ಸಮಪಾಲು ಅಪ್ಪನದ್ದು. ಆದ್ರೇ ಅದು ನಮಗೆ ಗೊತ್ತಾಗೋದೇ ಇಲ್ಲ. ಅದು ಅಪ್ಪ ಯಾವಾಗಲೂ ಹೊರಗೆ ಇರೋದೇ ಕಾರಣವೋ ?? ಅಥವಾ ಅಪ್ಪನ ಬಿಗುಮಾನವೋ..?? ಗೊತ್ತಿಲ್ಲ.
ಆದರೆ ಅಪ್ಪಾ ಅಪ್ಪಾನೇ. ಅವರ ಸ್ಥಾನ ತುಂಬೋಕೆ ಅಥವಾ ಅವರ ಹೋಲಿಕೆಗೆ ಬಹುಶಃ ಯಾವುದೂ ಇಲ್ಲ. ಹೆಣ್ಮಕ್ಕಳು ಮೊದಲು ತಮ್ಮ ಪುಟ್ಟ ಕಣ್ಣುಗಳನ್ನ ತೆರೆದಾಗ ನೋಡೋ ಮೊದಲ ಗೆಳೆಯ, ಮೊದಲ ಆಪ್ತ, ಮೊದಲ ಹೀರೋ ಪ್ರತಿಫಲಾಪೇಕ್ಷೆ ಇಲ್ಲದೇ ಹೆಣ್ಣು ಮಕ್ಕಳನ್ನ ತುಂಬಾ ಪ್ರೀತ್ಸೊ ಜಗತ್ತಿನಲ್ಲಿರುವ ಏಕೈಕ ಪುರುಷ ಅಂದರೆ ಅದು ಅಪ್ಪಾನೇ. ಅದಕ್ಕೇ ಅಪ್ಪನ ಜೊತೆಯಿದ್ದಾಗ ಭದ್ರತೆಯ ಭಾವ.
ಅಮ್ಮಂಗೆ ಒಂದ್ಸಲ ಕೇಳಿದ್ದೆ “ಅಮ್ಮಾ… ಮೊದಲ ಮಗು ಹೆಣ್ಣು ಮಗು ಎಂದಾಗ ಅಪ್ಪನ ರಿಯಾಕ್ಷನ್ ಹೆಂಗಿತ್ತು?” ಅಂತ. ಅಪ್ಪನ ಮುಖದಲ್ಲಿ ಕಂಡ ಆ ದಿನದ ಸಂತೋಷ ಮತ್ತೆ ಯಾವತ್ತೂ ನಾನು ನೋಡಿಲ್ಲ, ಗಂಡು ಮಗು ಆಗಿಲ್ಲ ಅನ್ನೋ ಒಂದು ಚಿಕ್ಕ ಬೇಜಾರು ಕೂಡಾ ಅವರ ಮನಸ್ಸಲ್ಲಿ ಬರದೇ ಇದ್ದದ್ದನ್ನು ನಾನು ನೋಡಿದೆ” ಅಂದಿದ್ಲು ಅಮ್ಮ.

ಅಪ್ಪಾ ಕಥೆ ಹೇಳಿದ್ದು ನೆನಪಿಲ್ಲ. ಆದ್ರೇ ಹೆಗಲ ಮೇಲೆ ಹೊತ್ತು ಹಾಡುತ್ತಿದ್ದದ್ದು ನೆನಪಿದೆ. ಹಾಗಂತ ಅಪ್ಪ ಹುಟ್ಟು ಹಾಡುಗಾರನಲ್ಲ. ಕಷ್ಟದ ದಿನಗಳಲ್ಲೂ ಅದರ ಬಿಸಿ ನಮಗೆ ತಟ್ಟದ ಹಾಗೆ ನಮ್ಮನ್ನ ಕಾಪಾಡಿದ್ದು ನೆನಪಿದೆ. ಬಣ್ಣ ಬಣ್ಣದ ಫ್ರಾಕ್ ತೊಡಿಸಿ ಸಂಭ್ರಮಿಸಿದ್ದು ನೆನಪಿದೆ. ಹಾಗೆಲ್ಲಾ ಕಣ್ಣೀರಿಗೆ ಕರಗದ ಅಪ್ಪ ನನ್ನ ತಂಗಿ ಮದುವೆಯಾದಾಗ ಅಪ್ಪಾ ಎಲ್ಲೋ ಒಂದು ಬದೀಲಿ ನಿಂತು ಅತ್ತಿದ್ದು ಇನ್ನೂ ನೆನಪಿದೆ. ಅದು ಯಾರಿಗೂ ಕಾಣಬಾರದೆಂಬ ಬಿಗುಮಾನವೋ ಅಥವಾ ಅವರ ಕಣ್ಣೀರು ನೋಡಿ ನಾವೂ ಅಳುತ್ತೀವಿ ಅನ್ನೋ ಆತಂಕವೋ..?? ಅದು ಕೂಡಾ ಗೊತ್ತಿಲ್ಲ. ಇದು ಪ್ರತಿಯೊಬ್ಬ ಅಪ್ಪ ಹಾಗೂ ಪ್ರತಿಯೊಬ್ಬ ಮಗಳ ನಡುವಿನ ಬಾಂಧವ್ಯವನ್ನು ಅರಿತ ಮಾತಿದು.
ನಾವು ಚಿಕ್ಕವರಿರುವಾಗ ಅಪ್ಪಾ ಯಾವುದೇ ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೂ ನಾನು ಅಥವಾ ನನ್ನ ತಂಗಿ ಯಾರಾದರೂ ಒಬ್ಬರು ಎದುರು ಬರಬೇಕಿತ್ತು. ಅವತ್ತು ಆ ಕೆಲಸ ಆಗತ್ತೆ ಅನ್ನೋ ನಂಬಿಕೆ ಅಪ್ಪನದು. ಹೆಣ್ಣು ಮಗು ಅಂದ್ರೇ ದೇವತೆಗೆ ಸಮಾನನಳು,ಅದೃಷ್ಟದ ದೇವತೆಯೆಂದು ನಂಬಿದವರು. ಗಂಡು ಮಕ್ಕಳ ಮೇಲೆ ಕೂಡ ಅಷ್ಟೇ ಪ್ರೀತಿ ಇತ್ತಾದರೂ ಅದನ್ನ ತೋರಿಸಿಕೊಳ್ಳುತ್ತಿದ್ದದ್ದು ಕಡಿಮೆಯೇ..ಹಾಗಾಗಿಯೇ ಕೆಲವೊಮ್ಮೆ ಅಪ್ಪ ಅವರಿಗೆ ವಿಲ್ಲನ್ ಆಗುತ್ತಿದ್ದರು.

ಮೊನ್ನೆ ನನ್ನ ಕಾಲು ಸರ್ಜರಿಯಾಗಿ ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಬಿಗಿದಪ್ಪಿ ಅವರ ಮುಖವನ್ನು ನನ್ನ ಮುಖಕ್ಕೆ ಸವರಿ ‘ಬೇಗ ವಾಸಿಯಾಗುತ್ತೆ, ಯೋಚ್ನೆ ಮಾಡ್ಬೇಡ’ ಅಂತ ಹೇಳಿ ಅವರ ಕಣ್ಣಲ್ಲೇ ನೀರಾಡಿದ್ದು, ಇನ್ನೂ ಅವರ ದೃಷ್ಟಿಯಲ್ಲಿ ನಾನು ಮಗುವಿನಂತೆ ಇದ್ದದ್ದು ನೋಡಿ ನನ್ನ ಕಣ್ಣಲ್ಲಿ ನೀರು ಬಂತು.
ಅಪ್ಪನ ಬಗ್ಗೆ ಬರೆಯುವುದಾದರೆ ಅದು ಮುಗಿಯದ ಅಧ್ಯಾಯ. ಅಪ್ಪಾ… ಇವತ್ತು ನಿಮ್ಮ ಹುಟ್ಟುಹಬ್ಬ. ನನ್ನ ಅನುಪಸ್ಥಿತಿಯಲ್ಲಿ ಮೊಮ್ಮಕ್ಕಳೆಲ್ಲ ಸೇರಿ ಅತ್ಯಂತ ಸಂಭ್ರಮದಿಂದ ನಿಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಮುಂದಿನ ವರ್ಷ ನಾನು, ಅಮ್ಮ, ಅಳಿಯ, ಮೊಮ್ಮಕ್ಕಳೊಂದಿಗೆ ಇನ್ನೂ ವಿಜೃಂಭಣೆಯಿಂದ ಆಚರಿಸೋಣ.
ಆ ಭಗವಂತ ನಿಮಗೆ ಆಯಸ್ಸು, ಆರೋಗ್ಯ ಕರುಣಿಸಲಿ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಪ್ಪಾ. ಸದಾ ಖುಷಿಯಾಗಿರಿ.
- ವೀಣಾ ವಿನಾಯಕ
