ಖ್ಯಾತ ಅರ್ಥಶಾಸ್ತ್ರಜ್ಞರಾದ ಡಿ ಎಂ ನಂಜುಂಡಪ್ಪನವರು ಓದಿದ್ದು ತಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಮದ್ದೇರು ಚನ್ನಬಸಪ್ಪ ಮೇಷ್ಟ್ರು ಒಂದನೆ ತರಗತಿಯ ನನ್ನ ಮೊದಲ ಗುರುಗಳು. ಲೇಖಕರಾದ ರವಿನಾಗ್ ತಾಳ್ಯ ಅವರ ಮೆಚ್ಚಿನ ಗುರುಗಳ ಕುರಿತು ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…
ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಣ ಅನಿವಾರ್ಯ ಹಾಗೂ ಕಲಿಕೆ ನಿರಂತರವಾದದ್ದು. ನಮ್ಮ ಹುಟ್ಟಿನಿಂದ ಪ್ರಾರಂಭಗೊಂಡು ಸಾಯುವವರೆಗೆ ಪ್ರತಿ ಹಂತದಲ್ಲಿ, ಪ್ರತಿ ಕ್ಷಣ ಪ್ರತಿ ಒಬ್ಬರಿಂದ ನಾವು ಕಲಿಯುತ್ತಲೇ ಸಾಗುತ್ತೇವೆ. ನನ್ನ ಬದುಕಿನ ಕೆಲವರು ಗುರುಗಳನ್ನು ಇಂದು ನಿಮ್ಮೊಟ್ಟಿಗೆ ಈ ಬರಹದ ಮೂಲಕ ಸ್ಮರಿಸಿಕೊಳ್ಳುತ್ತಿದ್ದೇನೆ.
ಹೇಗೆ ಮರೆಯಲಿ ನಾನು, ಧರೆಗೆ ನಾನು ಕಾಲಿಟ್ಟ ಮರುಕ್ಷಣ ಅಮ್ಮಾ ಎಂಬ ಅಕ್ಷರ ಉಲಿವುದನ್ನು ಕಲಿಸಿದವರ. ಹೇಗೆ ಮರೆಯಲಿ ನಾನು ಪುಟ್ಟ ಕಂದನಾಗಿರುವಾಗ ಹೆಜ್ಜೆ ಹೆಜ್ಜೆಗೂ ಕನ್ನಡದಲ್ಲಿ ಮುದ್ದಾಡಿ, ಮಾತನಾಡಿಸಿ ಕನ್ನಡ ಪದಗಳ ಪರಿಚಯಿಸಿ ಕನ್ನಡತನ ನನ್ನೊಳಗೆ ಬಿತ್ತಿದವರ. ಅಮ್ಮ ಹೇಳಿಕೊಟ್ಟ ವರ್ಣಮಾಲೆ, ಕಾಗುಣಿತ, ಅಪ್ಪ ಕೈಹಿಡಿದು ತಿದ್ದಿಸಿ ಬಳಪದಲ್ಲಿ ಬರೆಸಿದ್ದು, ನನ್ನ ಚಿಕ್ಕಮ್ಮಂದಿರು ಕಲಿಸಿದ ಮಗ್ಗಿ, ಲೆಕ್ಕ, ಪದಗಳು, ನಮ್ಮ ಸಾಕಜ್ಜಿ, ನಾರಜ್ಜಿಯ ದೃಷ್ಟಾಂತ ಕಥೆಗಳು, ಮಹೇಶ್ವರಜ್ಜ ಹೇಳುತ್ತಿದ್ದ ಭಾರತ ಎಲ್ಲವೂ ನನ್ನೊಳಗೆ ಈಗ ನೆನಪಿನ ಬುತ್ತಿಯಲ್ಲಿ. ಇವರೆಲ್ಲರೂ ನನ್ನ ಶೈಶವದ ಗುರುಗಳು. ಅಂಗನವಾಡಿಯಲ್ಲಿ ಶಾಂತಮ್ಮ ಮಾತೃ ಮಮತೆ ತೋರಿ ತಿನಿಸಿದ್ದ ಉಪ್ಪಿಟ್ಟಿನ ಉಂಡೆ, ಉಂಡಾಡಿಗುಂಡ ಹಾಡು ಈಗ ನನ್ನ ನೆನಪಿನ ಪುಟಗಳಲ್ಲಿ. ಬಡತನದ ನನ್ನ ಓದಿಗೆ ಧನಸಹಾಯ ಮಾಡಿದ ನನ್ನ ಸೋದರ ಮಾವಂದಿರನ್ನು ನಾನೆಂದೂ ಮರೆಯಲಾರೆ. ಗೀತಾಮೃತದ ಮೂಲಕ ನನಗೆ ಆತ್ಮ ಸ್ಥೈರ್ಯವಾಗಿರುವ ಜಗದ್ಗುರು ಶ್ರೀಕೃಷ್ಣನನ್ನು ಅರೆ ಕ್ಷಣ ಮರೆಯಲಾರೆ.

ಇನ್ನು ಬದುಕಿನ ಹೋರಾಟದ ಕಲಿಕೆಯ ಪ್ರಥಮ ಹೆಜ್ಜೆ ಪ್ರಾರಂಭವಾಗುವುದು ಪ್ರಾಥಮಿಕ ಶಾಲೆಯಿಂದ. ಖ್ಯಾತ ಅರ್ಥಶಾಸ್ತ್ರಜ್ಞರಾದ ಡಿ ಎಂ ನಂಜುಂಡಪ್ಪನವರು ಓದಿದ ತಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ನಾನು ಓದಿದ್ದು ನನಗೆ ಹೆಮ್ಮೆಯ ಸಂಗತಿ. ಆಗಿನ ಕಾಲದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಈಗಿನಂತೆ ಖಾಲಿ ಹೊಡೆಯುತ್ತಿರಲಿಲ್ಲ. ಮಕ್ಕಳ ಕಲರವ ತುಂಬಿ ತುಳುಕುತ್ತಿತ್ತು. ಮದ್ದೇರು ಚನ್ನಬಸಪ್ಪ ಮೇಷ್ಟ್ರು ಒಂದನೆ ತರಗತಿಯ ನನ್ನ ಮೊದಲ ಗುರುಗಳು. ಕಚ್ಚೆ ಪಂಜೆಯ ನಗುಮೊಗದ ಈ ಮೇಷ್ಟ್ರು ನನಗೆ ಆಗಲೂ ಈಗಲೂ ಗಾಂಧಿ ತಾತನನ್ನು ನೆನಪಿಸುತ್ತಾರೆ. ಇವರು ನಗು ನಗುತ್ತಾ ಕುಣಿಯುತ್ತಾ ನಮ್ಮನ್ನು ನಗಿಸುತ್ತಾ ಅಕ್ಷರ ಕಲಿಸುತ್ತಿದ್ದರು. ಅವರು ತರಗತಿಯೊಳಗೆ ಬಂದರೆ ಮಕ್ಕಳಿಗೆ ಖುಷಿಯೋ ಖುಷಿ. ಹೋ ಎಂದು ಜೋರಾಗಿ ಕೂಗಾಡುತ್ತಿದ್ದರು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ಅವರು ನಮ್ಮ ತೊಡೆಯ ಮೇಲೆ ಕಾಲಿಟ್ಟು ಕಚಗುಳಿ ಕೊಟ್ಟು ನಗಿಸುತ್ತಿದ್ದರು.

ಇನ್ನು ಎರಡನೆ ತರಗತಿಯಲ್ಲಿ ಸತ್ಯನಾರಾಯಣ ಮೇಷ್ಟ್ರು ತಮ್ಮ ಒಡೆದ ನಾಲಿಗೆ ಹೊರ ತೆಗೆದು, ಕೆಂಗಣ್ಣಿನಿಂದ ದುರುಗುಟ್ಟಿ ನೋಡಿದರೆ ಮಕ್ಕಳು ಥರ ಥರ ನಡುಗುತ್ತಿದ್ದರು. ಕಲಿಯಲು ಅಸಡ್ಡೆ ಮಾಡುತ್ತಿದ್ದ ಮಕ್ಕಳ ರಟ್ಟೆಯನ್ನು ಹಿಂಡಿ ಅಕ್ಷರಮುಖಿಯನ್ನಾಗಿಸುತ್ತಿದ್ದರು. ಈ ಹಿಂಡುವಿಕೆಯನ್ನು ಮಕ್ಕಳು ಶುಂಠಿ ಖಾರ ಎನ್ನುತ್ತಿದ್ದರು. ಹಾಗಾಗಿ ಮಕ್ಕಳು ಇವರಿಗೆ ಶುಂಠಿ ಮೇಷ್ಟ್ರು ಎಂಬ ಅಡ್ಡ ಹೆಸರೂ ಇಟ್ಟಿದ್ದರು. ಗುರುಗಳ ಈ ನಡೆ ಭಯ ಹುಟ್ಟಿಸಿದರೂ ಮಕ್ಕಳ ಓದಿನ ತಾತ್ಸಾರಕ್ಕೆ ಅದು ಔಷಧವಾಗಿತ್ತು. ಇದರ ಪರಿಣಾಮವಾಗಿ ಮಕ್ಕಳು ಮೂರು ಮತ್ತು ನಾಲ್ಕನೆ ತರಗತಿಗೆ ಹೋಗುವಷ್ಟರಲ್ಲಿ ಸಲೀಸಾಗಿ ಅಕ್ಷರಗಳನ್ನು ತಪ್ಪಿಲ್ಲದೆ ಬರೆಯುವುದನ್ನು ಕಲಿಯುತ್ತಿದ್ದರು. ಅವರ ಈ ಕೋಪದ ವರ್ತನೆಯ ಹಿಂದೆ ಮಕ್ಕಳು ಕಲಿಯಲಿ ಎಂಬ ವಿಶೇಷ ಕಾಳಜಿ ಇತ್ತು. ಆದರೆ ಈಗ ಮಕ್ಕಳನ್ನು ಹೆದರಿಸುವಂತಿಲ್ಲ ಬಿಡಿ. ಮಕ್ಕಳಿಗೆ ಶಿಕ್ಷಕರು ಹೆದರಬೇಕಾದ ಪರಿಸ್ಥಿತಿ ಈಗಿನದ್ದು. ನನ್ನ ನೆನೆಪಿನಂಗಳದಲ್ಲಿ ಶರಣಪ್ಪ ಮೇಷ್ಟ್ರು, ರಾಜಪ್ಪ ಮೇಷ್ಟ್ರು, ಚಂದ್ರಪ್ಪ ಮೇಷ್ಟರ ಮುದ್ದಾದ ಬರಹಗಳು, ಪಾಠ ಹೇಳುವ ಶೈಲಿ ಮನೆ ಮಾಡಿವೆ. ಮದ್ದೇರು ಪರಮೇಶ್ವರಪ್ಪ ಮೇಷ್ಟ್ರ ಅಕ್ಕರೆಯ ರವಿ ನಾನಾಗಿದ್ದೆ. ನನ್ನ ಓದಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದ ಗುರುಗಳಿವರು.

ಇನ್ನು ಮಾಧ್ಯಮಿಕ ಶಾಲೆಗೆ ಬಂದಾಗ ನೆನಪಾಗುವವರು ಲೋಕ್ಯಾನಾಯ್ಕ ಮೇಷ್ಟ್ರು, ದುಮ್ಮಿ ಬಸವರಾಜಪ್ಪ ಮೇಷ್ಟ್ರು, ಗೋವಿಂದಪ್ಪ ಮೇಷ್ಟ್ರು, ಮೈತ್ರ ಟೀಚರ್, ಅನಸೂಯ ಟೀಚರ್, ದೈಹಿಕ ಶಿಕ್ಷಕರಾಗಿದ್ದ ಕೆ ಪರಮೇಶ್ವರಪ್ಪ ಮೇಷ್ಟ್ರು ಮತ್ತು ಮುಖ್ಯೋಪಾಧ್ಯಾಯರಾಗಿದ್ದ ಸಹೀದಾ ಬೇಗಂರವರು. ಹಳ್ಳಿಯ ಕನ್ನಡ ಶಾಲೆ ಮಕ್ಕಳಿಗೆ ಇಂಗ್ಲಿಷ್ ಎಂದರೆ ಕಬ್ಬಿಣದ ಕಡಲೆ. ನಾವು ಎ,ಬಿ,ಸಿ,ಡಿ ಕಲಿತದ್ದೇ ಐದನೇ ತರಗತಿಯಲ್ಲಿ. ಆದರೆ ಇಂಗ್ಲಿಷ್ ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ನಮಗೆ ಅರ್ಥೈಸಿ ಕಲಿಸಿದವರು ಮುಖ್ಯೋಪಾಧ್ಯಾಯರಾದ ಸಹೀದಾ ಬೇಗಂರವರು. ಇಂಗ್ಲಿಷ್ ಭಾಷೆಯ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸಿ ನನ್ನ ಇಂಗ್ಲಿಷ್ ಕಲಿಕೆಗೆ ಭದ್ರ ಬುನಾದಿ ಹಾಕಿದ ಈ ಮೇಡಂರವರು ನನ್ನ ಹೃದಯಕ್ಕೆ ಆಪ್ತ ಗುರುಗಳಲ್ಲಿ ಒಬ್ಬರು. ಇವರು ವರ್ಗಾವಣೆ ಆದಾಗ ನಾವೆಲ್ಲಾ ಬಿಕ್ಕಿ ಬಿಕ್ಕಿ ಅತ್ತಿದ್ದೆವು. ಲೋಕ್ಯಾನಾಯ್ಕ ಮೇಷ್ಟ್ರು ಬಹು ಭಾಷಾ ಪಂಡಿತರು. ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು ಹೀಗೆ ಅನೇಕ ಭಾಷೆಗಳನ್ನು ಇವರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಇವರು ಪುಸ್ತಕದ ಪಾಠದ ಜೊತೆಗೆ ವಿದ್ಯಾರ್ಥಿಗಳ ಓದಿಗೆ ಪ್ರೇರಣೆಯಾಗುವಂತಹ ಆದರ್ಶದ ವಿಚಾರಗಳನ್ನು, ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತಾ ಪಾಠದ ಕಡೆಗೆ ಸೆಳೆಯುತ್ತಿದ್ದರು. ಇವರ ತರಗತಿ ಮುಗಿದದ್ದೇ ತಿಳಿಯುತ್ತಿರಲಿಲ್ಲ. ದುಮ್ಮಿ ಬಸವರಾಜಪ್ಪ ಮೇಷ್ಟ್ರು ತಮ್ಮ ಸೌಮ್ಯ ಸ್ವಭಾವ ಮತ್ತು ದುಂಡಾದ ಅಕ್ಷರಗಳಿಗೆ ನೆನಪಾಗುವರು. ಅನಸೂಯ ಟೀಚರ್ ಮತ್ತು ಮೈತ್ರ ಟೀಚರ್ ಮಕ್ಕಳ ನೆಚ್ಚಿನ ಗುರುಗಳಾಗಿದ್ದರು.
ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಮನೆ ಪಾಠಕ್ಕೆ ಹೋಗುತ್ತಿದ್ದೆ. ತಿಂಗಳಿಗೆ ಹತ್ತು ರೂಪಾಯಿ. ಆಗಿನ ಕಾಲಕ್ಕೆ ಅದು ನಮಗೆ ದೊಡ್ಡ ಮೊತ್ತ. ಟಿ. ಕೆ ಶೇಷಗಿರಿಯವರು ಗಣಿತ ಕಲಿಸುತ್ತಿದ್ದರು. ಅವರ ಅಕ್ಕ ಉಮಾ ಟೀಚರ್ ಇಂಗ್ಲಿಷ್ ಹಾಗೂ ವಿಜ್ಞಾನ ಕಲಿಸುತ್ತಿದ್ದರು. ಮತ್ತವರ ತಾಯಿ ರತ್ನಮ್ಮ ಕನ್ನಡ ಮತ್ತು ಸಮಾಜ ಪಾಠ ಮಾಡುತ್ತಿದ್ದರು. ಇವರುಗಳು ಮಾಡುತ್ತಿದ್ದ ಪಾಠ ನನ್ನ ಕಲಿಕೆಗೆ ತುಂಬಾ ನೆರವಾಗಿತ್ತು.

ಮಕ್ಕಳಿಗೆ ಪ್ರಾಥಮಿಕ ಶಾಲೆ ಮತ್ತು ಮಾಧ್ಯಮಿಕ ಶಾಲೆಗಿಂತ ಬದುಕಿನ ಮೇಲೆ ಹೆಚ್ಚು ಪರಿಣಾಮ ಬೀರುವುದು, ಅನೇಕ ಸುಂದರ ನೆನಪುಗಳನ್ನು ಕಟ್ಟಿಕೊಡುವುದು ಪ್ರೌಢಶಾಲೆ. ನನ್ನ ಬದುಕಿನಲ್ಲಿಯೂ ಪ್ರೌಢಶಾಲೆಯ ಶಿಕ್ಷಣ ಅವಿಸ್ಮರಣೀಯ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಮಲ್ಲಾಡಿಹಳ್ಳಿ ಶಾಲೆಯನ್ನು ಬಿಟ್ಟರೆ ಶಿಸ್ತಿಗೆ ಹೆಸರಾಗಿದ್ದ ಮತ್ತೊಂದು ಶಾಲೆ ಎಂದರೆ ತಾಳ್ಯದ ಶ್ರೀ ಆಂಜನೇಯ ಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ. ಈ ಶಾಲೆಗೆ ಆಧಾರ ಸ್ತಂಭವಾಗಿದ್ದವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯರಾಗಿದ್ದ ಟಿ ಶ್ರೀನಿವಾಸ ಮೂರ್ತಿಯವರು. ತಾಳ್ಯದ ಈ ಪ್ರೌಢಶಾಲೆಯಲ್ಲಿ ಹುಡುಗರಿಗೆ ಗಾಂಧಿ ಟೋಪಿ, ಬಿಳಿ ಅಂಗಿ, ಕೆಂಪು ಪ್ಯಾಂಟು, ಹುಡುಗಿಯರಿಗೆ ಬಿಳಿ ರವಿಕೆ, ಕೆಂಪು ಲಂಗ ಸಮವಸ್ತ್ರವಾಗಿತ್ತು. ಶಾಲಾ ಆವರಣಕ್ಕೆ ಕಾಲಿಡುವಾಗ ಶಾಲೆಯ ದ್ವಾರಬಾಗಿಲಿಗೆ ನಮಸ್ಕರಿಸಿ ಬರುವುದು ಕಡ್ಡಾಯವಾಗಿತ್ತು. ಪ್ರತ್ಯೇಕ ಪ್ರಾರ್ಥನಾ ಗೀತೆಗಳ ಪುಸ್ತಕವನ್ನೇ ಪ್ರತಿ ವಿದ್ಯಾರ್ಥಿಗೆ ನೀಡಲಾಗುತ್ತಿತ್ತು. ಇದರಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆಯ ಪ್ರಾರ್ಥನೆ ವೇಳೆ ಹೇಳಲಾಗುವ ದೇಶ ಭಕ್ತಿ ಗೀತೆ ಮತ್ತು ದೈವ ಭಕ್ತಿ ಗೀತೆಗಳಿದ್ದವು. ವಿದ್ಯಾರ್ಥಿ ಪ್ರತಿನಿಧಿಗಳ ಹೆಸರುಗಳಿರುತ್ತಿದ್ದವು. ಹುಡುಗರು ಗಾಂಧಿ ಟೋಪಿ ಧರಿಸದೆ ಬಂದಲ್ಲಿ ದಂಡ ವಿಧಿಸಲಾಗುತ್ತಿತ್ತು. ಬೆಳಗಿನ ಸುಮಾರು ಒಂದು ತಾಸು ಪ್ರಾರ್ಥನೆಗೆ, ನೈತಿಕ ಮತ್ತು ವೈಜ್ಞಾನಿಕ ವಿಷಯಗಳ, ದೇಶ ಭಕ್ತಿಯ ವಿಷಯಗಳ ಬೋಧನೆಗೆ, ನಿಯತಕಾಲಿಕೆಗಳ ಓದಿಗೆ ಮೀಸಲಾಗಿತ್ತು.

ಈ ಶಾಲೆ ತುಂಬಾ ಸುಂದರ ಇತಿಹಾಸ ಹೊಂದಿದ ಶಾಲೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಉಪನ್ಯಾಸಕ, ಶಿಕ್ಷಕ, ರಾಜಕಾರಣಿ, ಕೃಷಿಕ, ಪೊಲೀಸ್, ಸೈನಿಕ, ಐ.ಎಫ್.ಎಸ್ ಅಧಿಕಾರಿ, ಸಿನಿಮಾ, ಸಾಹಿತ್ಯ, ಕಲೆ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡಿ ಅನೇಕರು ನಿವೃತ್ತರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಗೆ ಭೂದಾನ ಮಾಡಿದವರು ತಾಳ್ಯದ ಪಟೇಲ್ ಸಿದ್ದಪ್ಪನವರು. ಈ ಶಿಕ್ಷಣ ಸಂಸ್ಥೆ ಬೆಳೆಯಲು ಮುಖ್ಯ ಕಾರಣಕರ್ತರು ಆ ಇಬ್ಬರು ಶಿಕ್ಷಕ ದಂಪತಿಗಳು. ಅವರೇ ಹೆಚ್ ಆರ್ ಸುಶೀಲಮ್ಮ ಟಿ ಶ್ರೀನಿವಾಸ ಮೂರ್ತಿ ದಂಪತಿಗಳು. ಶ್ರೀನಿವಾಸ ಮೂರ್ತಿಯವರು ಮುಖ್ಯೋಪಾಧ್ಯಾಯರಾಗಿದ್ದರೆ ಸುಶೀಲಮ್ಮನವರು ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದ ಆಗಿನ ಕಾಲದಲ್ಲಿ ಸುಶೀಲಮ್ಮನವರು ಹಳ್ಳಿ ಹಳ್ಳಿಗಳನ್ನು ಸುತ್ತಿ, ಮನೆ ಮನೆಗಳಿಗೆ ತೆರಳಿ ಪೋಷಕರ ಮನವೊಲಿಸಿ ನಿಮ್ಮ ಮಗಳಿಗೆ ತಾಯಿಯಾಗಿ ಶಾಲೆಯಲ್ಲಿ ನಾನಿರುತ್ತೇನೆ, ಧೈರ್ಯವಾಗಿ ನಿಮ್ಮ ಮಗಳನ್ನು ಶಾಲೆಗೆ ಕಳಿಸಿ ಎಂದು ಬೇಡಿಕೊಂಡರು. ಅವರು ನೀಡಿದ ಧೈರ್ಯದ ಮೇರೆಗೆ ಆಗಿನ ಪೋಷಕರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾದರು. ಸುಶೀಲಮ್ಮನವರು ಮಾಡುತ್ತಿದ್ದ ಕನ್ನಡ ಪಾಠ ಕನ್ನಡ ಸಾಹಿತ್ಯದ ಮೇಲೆ ನನಗೆ ಒಲವಾಗುವಂತೆ ಮಾಡಿತು. ಎಂಟನೇ ತರಗತಿಯಲ್ಲಿಯೇ ಕವಿತೆ ಬರೆದು ಮೇಡಂಗೆ ತೋರಿಸಿದ್ದೆ. ಅವರು ನನ್ನನ್ನು ಪ್ರಶಂಸಿಸಿ ಕವಿತೆ ಬರೆಯಲು ಒಂದಿಷ್ಟು ಸಲಹೆಗಳನ್ನು ನೀಡಿದ್ದರು. ನನ್ನ ಕವಿತೆ ಬರೆಯುವ ಹವ್ಯಾಸವನ್ನು ಅವರು ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಮೂರ್ತಿಯವರಿಗೆ ತಿಳಿಸಿದರು. ಈ ಬಗ್ಗೆ ಸಂತಸಗೊಂಡ ಅವರು ನಾನು ಬರೆದ ಕವಿತೆಗಳನ್ನು ಶಾಲಾ ಪ್ರಾರ್ಥನೆಯ ವೇಳೆ ಮಕ್ಕಳೆದುರಿಗೆ ಓದಿಸುತ್ತಿದ್ದರು. ಸ್ವಾಮಿ ವಿವೇಕಾನಂದರ ಪುಸ್ತಕ, ಶೃಂಗೇರಿ ಶಾರದೆಯ ಪೋಟೋ ಉಡುಗೊರೆಯಾಗಿ ನೀಡಿದ್ದರು. ಶ್ರೀರಾಮನ ಪರಮಭಕ್ತರಾಗಿದ್ದ ಅವರು ಮಕ್ಕಳನ್ನೆಲ್ಲಾ ಪ್ರತಿ ಶನಿವಾರ ತಾಳ್ಯದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದರು. ಸಹಶಿಕ್ಷಕರು ಪಠ್ಯದ ವಿಷಯಗಳನ್ನು ಹೇಳಿಕೊಡುತ್ತಿದ್ದರೆ ಶ್ರೀನಿವಾಸ ಮೂರ್ತಿಯವರು ಮಾನವೀಯ ಮೌಲ್ಯಗಳನ್ನು, ಸಾತ್ವಿಕ ವಿಚಾರಗಳನ್ನು, ರಾಷ್ಟ್ರಪ್ರೇಮ, ಭಾಷಾಭಿಮಾನದ ವಿಚಾರಗಳನ್ನು ತಿಳಿಸುತ್ತಾ ಮನುಷ್ಯರಾಗಿ ಬದುಕಲು ಬೇಕಾದ ಅನೇಕ ಉತ್ತಮ ವಿಷಯಗಳನ್ನು ನಮ್ಮೊಳಗೆ ತುಂಬುತ್ತಿದ್ದರು.

ಇನ್ನು ಇಂಗ್ಲಿಷ್ ಕಲಿಕೆಗೆ ನನಗೆ ಸಹಕಾರಿಯಾಗಿದ್ದು ಶಿಕ್ಷಕರಾದ ಟಿ ಹನುಮಂತಪ್ಪನವರು. ಅವರ ಬೋಧನಾ ಶೈಲಿ, ಇಂಗ್ಲಿಷ್ ಭಾಷೆ ಮತ್ತು ವ್ಯಾಕರಣವನ್ನು ಉತ್ಸಾಹದಿಂದ ಕಲಿಯುವಂತೆ ಮಾಡಿತು. ಬಿ ನಾಗರಾಜ ಶೆಟ್ಟರು, ಪಿ ಕೆ ದೊಡ್ಡ ತಿಮ್ಮಪ್ಪನವರ ಗಣಿತ ಪಾಠ, ಎನ್ ಎಂ ತಿಪ್ಪೇಸ್ವಾಮಿಯವರು, ಟಿ.ಎಂ. ಲೋಕೇಶ್ವರಪ್ಪನವರ ಸಮಾಜ ಶಾಸ್ತ್ರದ ಬೋಧನಾ ಶೈಲಿ ಪರಿಣಾಮಕಾರಿಯಾಗಿತ್ತು. ನನಗೆ ಭಾಷಾ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಬಿ ಹೆಚ್ ರಾಮಚಂದ್ರ ಶೆಟ್ಟರು ಹೇಳಿಕೊಡುತ್ತಿದ್ದ ಹಿಂದಿ ಪಾಠ ನಾನು ಬಲು ಬೇಗ ಹಿಂದಿಯಲ್ಲಿ ಮಾತನಾಡುವಷ್ಟರ ಮಟ್ಟಿಗೆ ತಯಾರು ಮಾಡಿತು. ಕೇವಲ ಮೂರು ವರ್ಷಗಳಲ್ಲಿ ನಾನು ಅಂದು ಹಿಂದಿಯನ್ನು ಉತ್ತಮವಾಗಿ ಕಲಿತೆ.

ಭಾಷಾ ವಿಷಯಗಳಲ್ಲಿ ಮುಂದಿದ್ದ ನಾನು ಇತರೆ ವಿಷಯಗಳಲ್ಲಿ ಒಂದಿಷ್ಷು ಹಿಂದೆ ಉಳಿದಿದ್ದೆ. ಒಳ್ಳೆಯ ವಿದ್ಯಾರ್ಥಿ ನೀನು, ನಿನಗೆ ಮನೆಯಲ್ಲಿ ಕೂತು ಕಲಿಯಲು ಕಷ್ಟವಾದಲ್ಲಿ ಸಂಜೆ ನಮ್ಮ ಮನೆಯಲ್ಲಿ ಕುಳಿತು ಓದು ಎಂದು ಹೇಳಿ ಮೂರು ವರ್ಷ ಪುಕ್ಕಟೆಯಾಗಿ ಮನೆ ಪಾಠ ಹೇಳಿಕೊಟ್ಟ ಗುರುಗಳು ವಿಜ್ಞಾನ ಶಿಕ್ಷಕರಾದ ಟಿ ಎಸ್ ಕೃಷ್ಣಮೂರ್ತಿಯವರು. ಶಾಲಾ ಸಮಯ ಮುಗಿದ ಬಳಿಕ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇರುವವರ ನಡುವೆ ಟಿ ಎಸ್ ಕೃಷ್ಣಮೂರ್ತಿಯವರು ಅಪರೂಪದ ವ್ಯಕ್ತಿ. ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಜೆ ವೇಳೆ ನನಗೆ ಮನೆ ಪಾಠ ಹೇಳಿಕೊಟ್ಟರು. ಇವರು ಕೇವಲ ಶಿಕ್ಷಕರಷ್ಟೇ ಆಗಿರದೆ ಸಾಹಿತ್ಯದಲ್ಲೂ ತೊಡಗಿಸಿಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ. ನನ್ನನ್ನು ವಿಜ್ಞಾನ ವಸ್ತು ಪ್ರದರ್ಶನ, ರಸ ಪ್ರಶ್ನೆ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆಗಳಿಗೆ ಕರೆದೊಯ್ಯುತ್ತಿದ್ದರು. ಒಮ್ಮೆ ಅವರು ನನ್ನನ್ನು ವಿಜ್ಞಾನ ವಸ್ತುಪ್ರದರ್ಶನಕ್ಕೆ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅರಣ್ಯ ಇಲಾಖೆಯಿಂದ ಪ್ರಬಂಧ ಸ್ಪರ್ಧೆ ಏರ್ಪಡಿಸಿರುವುದು ಸ್ಪರ್ಧೆಯ ಅರ್ಧತಾಸು ಮುಂಚೆ ಗೊತ್ತಾಯಿತು. ಪ್ರಬಂಧದಲ್ಲಿ ಬರೆಯಬೇಕಾದ ವಿಷಯಗಳ ಬಗ್ಗೆ ಒಂದು ಮರದ ಕೆಳಗೆ ಕೂತು ಹದಿನೈದು ನಿಮಿಷ ನನ್ನ ಗುರುಗಳು ವಿವರಿಸಿದರು. “ನೀನು ಗೆಲ್ತೀಯೋ ಇಲ್ವೋ ಅನ್ನೋದು ಮುಖ್ಯ ಅಲ್ಲ. ಭಾಗವಹಿಸೋದು ಮುಖ್ಯ. ಸಮಯ ಕಡಿಮೆ ಇದೆ. ನಾನು ತಿಳಿಸಿರುವ ವಿಷಯ ಮನದಟ್ಟು ಮಾಡಿಕೊಂಡು ಬರೆ, ನೋಡೋಣ” ಎಂದು ಧೈರ್ಯ ತುಂಬಿ ಕಳಿಸಿದರು. ಅವರು ನನಗೆ ಕೇವಲ ಹದಿನೈದು ನಿಮಿಷಗಳಲ್ಲಿ ಬಹಳ ಸೂಚ್ಯವಾಗಿ ವಿಷಯವನ್ನು ಮನವರಿಕೆ ಮಾಡಿಸಿದ್ದರು. ಪರಿಣಾಮವಾಗಿ ಪ್ರಬಂಧ ಸ್ಪರ್ಧೆಯಲ್ಲಿ ನಾನು ಎರಡನೇ ಸ್ಥಾನ ಗಳಿಸಿದ್ದೆ. ಫಲಿತಾಂಶ ಘೋಷಣೆಯಾದಾಗ ನನಗಿಂತ ಹೆಚ್ಚು ಖುಷಿಪಟ್ಟದ್ದು ಈ ನನ್ನ ನೆಚ್ಚಿನ ಗುರುಗಳಾದ ಕೃಷ್ಣಮೂರ್ತಿಯವರು. ನನಗೆ ಸಿಕ್ಕ ಪ್ರಶಸ್ತಿಪತ್ರ ಹಾಗೂ ಪುಸ್ತಕ ಬಹುಮಾನಗಳನ್ನು ಶಾಲೆಯಲ್ಲಿ ಮತ್ತೆ ಮುಖ್ಯೋಪಾಧ್ಯಾಯರ ಮೂಲಕ ಮಕ್ಕಳೆದುರು ನನಗೆ ನೀಡಿ ಸನ್ಮಾನಿಸಿದ್ದರು. ಇಂತಹ ಗುರುಗಳನ್ನು ಪಡೆದ ನಾನು ನಿಜಕ್ಕೂ ಭಾಗ್ಯಶಾಲಿ. ಪ್ರೌಢಶಾಲೆಯಲ್ಲಿ ನೆನಪಾಗುವ ಮತ್ತಷ್ಟು ಗುರುಗಳೆಂದರೆ ಟಿ ಆರ್ ಶಿವಣ್ಣ, ಮಂಜುನಾಥ ನಾಯಕ್, ಚಂದ್ರಪ್ಪ, ಕುಬೇರಪ್ಪ, ಜಯಣ್ಣ, ಸಂಧ್ಯಾ ಮೇಡಂ, ಶೈಲಜಾ ಮೇಡಂ, ವಿಜಯ ಮೇಡಂ, ಸದಾಶಿವಪ್ಪ, ಲಲಿತ ಮೇಡಂ, ಸುಜಾತ ಮೇಡಂ, ಶಿವಕುಮಾರ್, ಸೋಮಶೇಖರ್, ಮಲ್ಲಿಕಾರ್ಜುನ್, ದೈಹಿಕ ಶಿಕ್ಷಕರಾದ ಟಿ ಆರ್ ವೆಂಕಟೇಶ್, ಜಿ ವಿ ಗುರುಮೂರ್ತಿ, ಗ್ರಂಥಾಲಯ ಪಾಲಕರಾದ ರಾಮಚಂದ್ರಪ್ಪ, ಕಚೇರಿ ಸಿಬ್ಬಂದಿ ರೇವಣ್ಣ ನವರು ಹೀಗೆ ಹೇಳುತ್ತಾ ಹೋದರೆ ನೆನಪಿನ ಪುಟಗಳಲ್ಲಿ ಅನೇಕ ಶಿಕ್ಷಕರು ಚಿರಸ್ಥಾಯಿಯಾಗಿ ಉಳಿದಿದ್ದಾರೆ.

ಸಮಾಜದ ಏಳ್ಗೆಯಲ್ಲಿ, ಸಮಾಜ ಸರಿಯಾದ ಹಾದಿಯಲ್ಲಿ ಸಾಗಲು ಶಿಕ್ಷಕರ ಪಾತ್ರ ಮಹತ್ತರವಾದದ್ದು. ಜ್ಞಾನವನ್ನು ನಮಗೆ ಧಾರೆ ಎರೆಯುವ ಮೂಲಕ ನಮ್ಮ ಬದುಕಿನಲ್ಲಿ ಬದಲಾವಣೆಯನ್ನು ತಂದುಕೊಟ್ಟ ಒಂದಕ್ಷರ ಕಲಿಸಿದ ಪ್ರತಿಯೊಬ್ಬರೂ ಶಿಕ್ಷಕರೇ. ಶಿಕ್ಷಕರೆಲ್ಲರನ್ನೂ ನಾವು ವರ್ಷಕ್ಕೆ ಒಮ್ಮೆಯಾದರೂ ಸ್ಮರಿಸಿಕೊಳ್ಳೋಣ. ಬೆಲೆ ಕಟ್ಟಲಾಗದ ಅವರ ವಿದ್ಯಾದಾನಕ್ಕೆ ನಾವೆಂದೂ ಅವರಿಗೆ ಆಜನ್ಮ ಋಣಿಗಳು.
ಶಿಕ್ಷಕರ ದಿನಾಚರಣೆಯ ಶುಭಾಶಯಗಳೊಂದಿಗೆ….
- ರವಿನಾಗ್ ತಾಳ್ಯ
