೧೯ ನೇ ಶತಮಾನದ ಆದಿಯಲ್ಲಿ ಚರಿತ್ರೆಗೂ ಪುರಾಣಕ್ಕೂ ರೂಪಸಿಗತೊಡಗಿದ್ದು ರಾಜಾ ರವಿವರ್ಮ ಅವರ ಕಲಾಕೃತಿಗಳಿಂದ. ಆ ಕಲಾಕೃತಿಗಳಲ್ಲಿ ಬರುವ ಪಾತ್ರಗಳ ವೇಷ-ಭೂಷಣಗಳಿಂದ ಹಿಡಿದು ಹಿನ್ನೆಲೆ-ಮುನ್ನೆಲೆಗಳೆಲ್ಲವಕ್ಕೂ ಪರ್ಷಿಯನ್, ವಸಾಹತುಶಾಹಿ ಪ್ರಭುತ್ವಗಳೇ ಪ್ರೇರಣೆ.

(ತೇಜೋ-ತುಂಗಭದ್ರ ಕಾದಂಬರಿ ಲೇಖಕರಾದ ವಸುಧೇಂದ್ರ)
ಹಾಗಾಗಿ ಪಾಪ್ಯುಲರ್ ಚರಿತ್ರೆ ಮತ್ತದರ ಪಾಪ್ಯುಲರ್ ವಿಶುವಲೈಸೇಷನ್ – ಎರಡೂ ಕೂಡ ಸಿಂಕ್ ಹೋಲ್‌ಗಳೇ! ವಸುಧೇಂದ್ರ ಅವರ #ತೇಜೋ-ತುಂಗಭದ್ರ ಎಂಟನೇ ಮುದ್ರಣಕ್ಕೆ ಸಿದ್ಧಗೊಳ್ಳುತ್ತಿದೆಯಂತೆ. ನಾನು ಓದಿದ್ದಿದು ಏಳನೇ ಮುದ್ರಣವನ್ನು. ಲಿಸ್ಬನ್-ವಿಜಯನಗರ-ಗೋವಾ ನಡುವಿನ ಬಲವಾದ ಚಾರಿತ್ರಿಕ ಎಳೆಯೊಂದಕ್ಕೆ ತೋರಣ ಕಟ್ಟಿರುವ ಈ ಕಾದಂಬರಿ ಮೊದಲೆಲ್ಲ ಓದುತ್ತಿದ್ದ ರೋಚಕ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡೂ ಹೋಯಿತು ಅಂದರೆ ಈ ಮುದ್ರಣಗಳ ಸಂಖ್ಯೆಯಲ್ಲಿ ಕ್ಷಿಪ್ರ ಏರಿಕೆಗೆ ಕಾರಣದ ಬಗ್ಗೆ ಹೇಳಿದಂತಾಯಿತು. ವಸುಧೇಂದ್ರ ಅವರ ಬರವಣಿಗೆಯಲ್ಲಿ ಒಂದು ಲೇಯ್ಡ್ ಬ್ಯಾಕ್ ಹದ, ಆಕರ್ಷಕ ಶೈಲಿ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.
ಕಾದಂಬರಿ ಓದಿದ ಬಳಿಕ ಏನು ಉಳಿಯಿತು? ಎಂಬ ಪ್ರಶ್ನೆ ಕೇಳಿಕೊಂಡರೆ ನನ್ನಲ್ಲಿ ಉಳಿದುದು ಒಂದಿಷ್ಟು ಹತ್ಯಾಕಾಂಡಗಳು (ಯಹೂದಿ-ಕ್ರಿಶ್ಚಿಯನ್; ಮುಸ್ಲಿಂ-ಕ್ರಿಶ್ಚಿಯನ್; ಹಿಂದೂ-ಮುಸ್ಲಿಂ’ ಹಿಂದೂ-ಕ್ರಿಶ್ಚಿಯನ್); ಸತಿ ಪದ್ಧತಿ; ಲೆಂಕಪದ್ಧತಿ; ಸುನ್ನತಿ; ಸುಲಿಗೆಕೋರತನ… ನಡುವಿನಲ್ಲಿ ವಾಸ್ಕೋ ಡ ಗಾಮಾ, ಮಸಾಲೆ ಇಕಾನಮಿ, ಕಾಗದದ ಹುಟ್ಟು, ಪುರಂದರ ದಾಸರು,…
ಚರಿತ್ರೆ ಎಂದರೆ ಅದು ಬರಿಯ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಕಥನವೆ? ಜಗತ್ತಿನಾದ್ಯಂತ ಮನುಷ್ಯ-ಮನುಷ್ಯರ ನಡುವೆ ಬೇಲಿ ಹಾಕಿಕೊಳ್ಳುವ ವಾದಗಳು ಬೆಳೆಯುತ್ತಿರುವ ಈ ಹೊತ್ತಿನಲ್ಲಿಯಾದರೂ “ಮನುಷ್ಯರೆಲ್ಲ ಒಂದೇ” ಎಂದು ಹೇಳುವ “ಸಾಹಿತ್ಯ-ಬರಹ-ಸೃಜನಶೀಲತೆ” ತುರ್ತಾಗಿ ಬೇಕಿದೆ. ಇಂತಹದೊಂದು ಸಂಕಟದ ಸನ್ನಿವೇಶದಲ್ಲಿ ಈ ಪಾಪ್ಯುಲಿಸ್ಟ್ ಕಾದಂಬರಿ ಎಲ್ಲಿ ನಿಲ್ಲುತ್ತದೆ? ಏನನ್ನು ಎತ್ತಿ ತೋರಿಸಿ ಪ್ರತಿಪಾದಿಸುತ್ತದೆ?

ತನ್ನ ಎಲ್ಲ ರೋಚಕ ವಿವರಗಳ ಆಚೆ ಕಾದಂಬರಿ ನನ್ನ ಗಮನ ಸೆಳೆದದ್ದು ಈ ಎರಡು ಕಾರಣಗಳಿಗೆ:
- ಕಾದಂಬರಿಯ ಉದ್ದಕ್ಕೂ ಕಾಣಿಸಿಕೊಳ್ಳುವ ವಲಸೆ; ಅದರ ಮ್ಯಾಕ್ರೋ ಮತ್ತು ಮೈಕ್ರೋ ರೂಪಗಳು (ಅರ್ಥಾತ್ ಒಂದು ದೊಡ್ಡ ಪಯಣ ಮತ್ತದರ ಉದ್ದಕ್ಕೂ ಹಲವು ಸಣ್ಣ ಪಯಣಗಳು) – ಅದರ ಪರಿಣಾಮವಾಗಿ ಕಾಣಿಸಿಕೊಳ್ಳುವ ಸಂಬಂಧಗಳ ಸೇರ್ಪಡೆ-ಬೇರ್ಪಡೆಗಳ ಚೆಂದದ ಸಿಂಥೆಸಿಸ್.
- ಸರಳ ಪ್ರೇಮಕಥೆಯ ಎರಡು ಎಳೆಗಳನ್ನು ಹೆಣಿಗೆ ಹಾಕಿ, ಅದಕ್ಕೆ ಚರಿತ್ರೆಯ ತೋರಣದಿಂದ ಅಲಂಕರಿಸಿದ ಕೌಶಲ ಮತ್ತು ಹೀಗೆ ಚರಿತ್ರೆಯನ್ನು ತಾನು ಒಳಗೊಂಡು ಸಾಗಬಲ್ಲೆ ಎಂಬ ಕಾದಂಬರಿಯ ಧೈರ್ಯ!
- ರಾಜಾರಾಂ ತಲ್ಲೂರ್ (ಸಾಹಿತಿಗಳು, ಲೇಖಕರು)
