ಮುದ್ದಿನ ಎರಡು ಪಿಟ್ ಬುಲ್ ಶ್ವಾನಗಳಿಗೆ ನಾಗರಹಾವು ಕಚ್ಚಿದಾಗ, ಆರೋಗ್ಯ ಚಿಂತಾಜನಕವಾಗಿತ್ತು, ಹೇಗೆ ಅವುಗಳು ಬದುಕುಳಿದವು? ಎನ್ನುವುದರ ಬಗ್ಗೆ ಡಾ.ಯುವರಾಜ್ ಅವರು ತಮ್ಮ ಅನುಭವದ ಮಾಲಿಕೆಯನ್ನು ಲೇಖನದ ಮೂಲಕ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ. ಓದಿ…
ಹೊರಬೈಲು ಪೃಥ್ವಿ ನಿಮಗೆಲ್ಲಾ ಪರಿಚಿತರೇ ಆಗಿರುವ ಗಂಟೇಹಕ್ಲು ಶ್ರೀಮತಿ ಭವಾನಿ ವಾಸುದೇವ ಮೂರ್ತಿ ದಂಪತಿಗಳ ಪುತ್ರ. ವಾರದ ಹಿಂದೆ ತಮ್ಮ ಮುದ್ದಿನ ಎರಡು ಪಿಟ್ ಬುಲ್ ಶ್ವಾನಗಳಿಗೆ ನಾಗರಹಾವು ಕಡಿತಕ್ಕೊಳಗಾದಾಗ ಛಲಬಿಡದೆ ಪ್ರಯತ್ನಿಸಿ ಚಿಕಿತ್ಸೆ ಕೊಡಿಸಿದ್ದಲ್ಲದೆ ಯಶಸ್ವಿಯೂ ಆದರು.
ವರ್ಷದ ಹಿಂದೆ ತಂದ ಎರಡು ಪಿಟ್ ಬುಲ್ ಶ್ವಾನಗಳನ್ನು ಬಹಳ ಅಕ್ಕರೆ, ಮುತುವರ್ಜಿಯಿಂದ ಸಾಕಿದ್ದ ಇವರು, ಅರ್ಧ ಗಂಟೆ ಮನೆಯಂಗಳದಲ್ಲಿ ಓಡಾಡಲು ಬಿಟ್ಟಾಗ ಅಲ್ಲಿಯೇ ಇದ್ದ ನಾಗರ ಹಾವನ್ನು ನಾಯಿಗಳು ಅಟ್ಟಾಡಿಸಿವೆ. ಅದರಿಂದ ಬಿಡಿಸಿ ತರುವಷ್ಟರಲ್ಲಿ ಒಂದು ನಾಯಿಗೆ ಗಲ್ಲದ ಎರಡು ಕಡೆಗಳಲ್ಲಿ ಕಡಿತಕ್ಕೊಳಗಾಗಿರುವುದು ಖಾತ್ರಿಯಾಗಿತ್ತು. ಚಿಕಿತ್ಸೆಗೆಂದು ಆಸ್ಪತ್ರೆಗೆ ತಂದಾಗ ಪ್ರಥಮ ಚಿಕಿತ್ಸೆ ಮಾಡಿದೆವಾದರೂ ವಿಷವನ್ನು ತಗ್ಗಿಸುವ ಔಷಧವನ್ನು ಹಲವಾರು ಮೆಡಿಕಲ್ ಗಳಲ್ಲಿ ವಿಚಾರಿಸಿ ಸಿಗದೆ ಕೊನೆಗೆ ಕೈಚೆಲ್ಲಿದೆವು. ಆದರೆ ಮಾಲಿಕ ಪೃಥ್ವಿ ಮಾತ್ರ ತನ್ನ ಪ್ರಯತ್ನ ಮುಂದುವರೆಸಿ, ತೀರ್ಥಹಳ್ಳಿಯ ನರ್ಸಿಂಗ್ ಹೋಂ ಗಳ ಬಳಿ ಇರುವ ಮೆಡಿಕಲ್ ಗಳಲ್ಲಿ ವಿಚಾರಿಸಿ ಕೊನೆಗೆ ಮೆಡಿಕಲ್ ಮೇಳಿಗೆಯಲ್ಲಿ ಔಷಧಿ ಲಭ್ಯ ಇರುವುದು ತಿಳಿದು ಅದನ್ನು ಪಡೆಯುವಲ್ಲಿ ಸಫಲರಾದರು. ಹೀಗೆ ರಾತ್ರಿ ೮ ಗಂಟೆಗೆ ಪ್ರಾರಂಭವಾದ ಚಿಕಿತ್ಸೆ ಎರಡು ತಾಸುಗಳಲ್ಲಿ ಮುಕ್ತಾಯಗೊಂಡು ನಾಯಿ ಸಾಕಷ್ಟು ಚೇತರಿಸಿಕೊಂಡ ಬಳಿಕ ಕಳಿಸಿಕೊಡಲಾಗಿತ್ತು.
ಆದರೆ ಮರುದಿನ ಬೆಳಗ್ಗೆ ೬.೩೦ ರ ವೇಳೆಗೆ ಮತ್ತೆ ಅವರದ್ದೇ ಫೋನ್ ಕರೆ. ಮತ್ತೊಂದು ನಾಯಿ ಈಗ ತೀವ್ರ ನಿತ್ರಾಣವಾಗಿದ್ದು, ನಿನ್ನೆಯೇ ಅದಕ್ಕೂ ಹಾವಿನ ಕಡಿತ ಆಗಿತ್ತಾದರೂ ವಿಷದ ಪ್ರಮಾಣ ಕಡಿಮೆ ಇದ್ದ ಕಾರಣ ತಡ ರಾತ್ರಿಯ ನಂತರ ಅದು ಅಸ್ವಸ್ಥಗೊಂಡಿತ್ತು.ಈಗಾಗಲೇ ತಡವಾಗಿದ್ದ ಕಾರಣ ದೇಹದ ಉಷ್ಣಾಂಶವೂ ಕಡಿಮೆಯಾಗಿ ಉಸಿರಾಟವೂ ನಿಧಾನವಾಗಿತ್ತು. ಅಷ್ಟು ಬೇಗ ಮೆಡಿಕಲ್ ಕೂಡ ತೆರೆದಿರುವುದಿಲ್ಲ. ಆದರೆ ಪೃಥ್ವಿ ಸುಮ್ಮನೆ ಕೂರಲಿಲ್ಲ. ಮೇಳಿಗೆ, ನರ್ಸಿಂಗ್ ಹೋಂ ವೈದ್ಯರಿಗೆ ವಿನಂತಿಸಿಕೊಂಡು ಶ್ವಾನಕ್ಕೆ ಬೇಕಾದ ಅಗತ್ಯ ಔಷಧ ಪಡೆದು ತಂದೇ ಬಿಟ್ಟರು. ಚಿಕಿತ್ಸೆಯನ್ನು ಪ್ರಾರಂಭಿಸಿ ಸಂಜೆಯವರೆಗೂ ನಿಗಾವಹಿಸಿದೆ. ಎರಡೂ ನಾಯಿಗಳು ಅಪಾಯದಿಂದ ಪಾರಾದವು. ವಿಷವನ್ನು ಹೊಂದಿರುವ ಹಾವಿನ ಕಡಿತಕ್ಕೊಳಗಾದಾಗ ಎಷ್ಟು ವಿಷದ ಪ್ರಮಾಣ ದೇಹ ಸೇರಿದೆ, ಕಡಿತಕ್ಕೊಳಗಾದ ಪ್ರಾಣಿಯಲ್ಲಿ ಅದನ್ನು ನಿಗ್ರಹಿಸುವ ಶಕ್ತಿ ಮುಂತಾದ ಅಂಶಗಳು ಪರಿಗಣನೆಗೆ ಬರುತ್ತವೆ.
ಮನೆಯಲ್ಲಿ ಪ್ರಾಣಿಗಳನ್ನು ಸಾಕಿದಾಗ ಅವುಗಳ ಆರೋಗ್ಯ ರಕ್ಷಣೆ ನಮ್ಮ ಕರ್ತವ್ಯ ಸರ್ ಎಂದು ಪೃಥ್ವಿ ಹೇಳಿದಾಗ ಅವರ ಬಗ್ಗೆ ಹೆಮ್ಮೆ ಎನಿಸಿತು. ಸುಮಾರು ಹತ್ತು ವರ್ಷಗಳ ಹಿಂದೆ ಅವರದ್ದೇ ಒಂದು ಲ್ಯಾಬ್ರಡಾರ್ ಶ್ವಾನಕ್ಕೆ ಹೀಗೆಯೇ ಹಾವಿನ ಕಡಿತ ಆಗಿತ್ತಾದರೂ ಆ ಸಮಯದಲ್ಲಿ ನನಗೆ ಅದರ ಬಗ್ಗೆ ಇದ್ದ ಅರಿವಿನ ಕೊರತೆ, ಈಗಿರುವ ಯುವ ಪಶುವೈದ್ಯ ಮಿತ್ರರ ಸಂಪರ್ಕವೂ ಸಾಧ್ಯವಿರದೆ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.
ಈಗ ಅವಶ್ಯಕತೆ ಬಂದಾಗ ಒಂದಷ್ಟು ಜಾಲತಾಣಗಳಲ್ಲಿ ಹುಡುಕಾಟ, ನುರಿತ ಪಶುವೈದ್ಯರ ಸಂಪರ್ಕ, ಪಶುವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಿರುವ ವೈಜ್ಞಾನಿಕ ಬದಲಾವಣೆಗಳಿಂದ ಹೆಚ್ಚಿನದ್ದನ್ನು ಸಾಧಿಸಲು ಅನುಕೂಲವಾಗಿರುವುದಂತೂ ಸತ್ಯ. ಈ ಸಮಯದಲ್ಲಿ ನನ್ನ ಚಿಕಿತ್ಸಾ ನ್ಯೂನ್ಯತೆಗಳನ್ನು ಸರಿಪಡಿಸಿ, ಹೆಚ್ಚಿನ ವಿಷಯಗಳನ್ನು ತಿಳಿಸಿದ ಮತ್ತು ಚಿಕಿತ್ಸೆಗೆ ಸಹಕರಿಸಿದ ವೈದ್ಯರೆಲ್ಲರಿಗೂ ಧನ್ಯವಾದಗಳು .
- ಡಾ. ಯುವರಾಜ್ ಹೆಗಡೆ (ಪಶುವೈದ್ಯರು) ತೀರ್ಥಹಳ್ಳಿ
