ಡಾ.ಅಜಿತ್ ಹರೀಶಿ ಅವರ ಎಲ್ಲಾ ಕವಿತೆಗಳು ಮಾನವೀಯತೆ, ಆತ್ಮವಿಶ್ವಾಸ, ಜೀವನಪ್ರೀತಿ, ಜೀವಸೆಲೆ ಮತ್ತು ಬದುಕಿಗೆ ಹೊಸ ಚೈತನ್ಯ ಮೂಡಿಸುವ ಪ್ರಸ್ತುತ ಮತ್ತು ವಾಸ್ತವ ಸನ್ನಿವೇಶಕ್ಕೆ ತಕ್ಕಂತೆ ಜಾಗತಿಕವಾಗಿ ಒಪ್ಪುವ ಕವಿತೆಗಳಾಗಿ ಮೂಡಿಬಂದಿದ್ದು, ಕವಿ ಸುರೇಶ್ ಮಲ್ಲಿಗೆ ಮನೆ ಅವರು “ತೇಲಿ ಬಿಟ್ಟ ಆತ್ಮ ಬುಟ್ಟಿ” ಕವನ ಸಂಕಲನದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಡಾ.ಅಜಿತ್ ಹರೀಶಿಯವರ “ತೇಲಿ ಬಿಟ್ಟ ಆತ್ಮ ಬುಟ್ಟಿ” ಕವನ ಸಂಕಲನವು ಮಾನವೀಯ ಮೌಲ್ಯಗಳು, ಆತ್ಮವಿಶ್ವಾಸ ಮತ್ತು ಜೀವ ಚೈತನ್ಯವನ್ನು ಮೂಡಿಸುವ ಪ್ರಸ್ತುತ ವಾಸ್ತವತೆಗೆ ತಕ್ಕಂತೆ ಜಾಗತಿಕವಾಗಿ ಒಪ್ಪುವ ಕವಿತೆಗಳು.
ಡಾ. ಅಜಿತ್ ಹರೀಶಿಯವರು ವೃತ್ತಿಯಲ್ಲಿ ವೈದ್ಯರಾದರೂ ಸದಾ ಹಸನ್ಮುಖಿ, ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರನ್ನು ಸಮನಾಗಿ ಗೌರವಿಸುವ ಸದ್ಗುಣ, ಮೌನ ಮತ್ತು ತಮ್ಮ ಸರಳತೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದ ಹೃದಯಶ್ರೀಮಂತರು. ಸದಾ ಯುವಪೀಳಿಗೆಯ ಬಗ್ಗೆ ಕಾಳಜಿಯನ್ನು ವಹಿಸುವ ಇವರು ಯುವ ಬರಹಗಾರರಿಗೂ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ನನ್ನ ಕವನ ಸಂಕಲನವೊಂದಾದ “ಜುಮುಕಿ ಹೂ” ಕೃತಿಗೆ ಮುನ್ನುಡಿಯನ್ನು ಬರೆದು ಕೊಟ್ಟು ನನ್ನ ಬೆನ್ನನ್ನೂ ತಟ್ಟಿ ಹರಸಿದ್ದಾರೆ.
ಈಗಾಗಲೇ ಅವರ “ಬಿಳಿ ಮಲ್ಲಿಗೆಯ ಬಾವುಟ”, “ಸೂರು ಸೆರೆಹಿಡಿಯದ ಹನಿಗಳು” ಮತ್ತು ಎಲ್ಲರ ಮನೆಮಾತಾಗಿ ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿಕೊಂಡಂತಹ ಕವನ ಸಂಕಲನ “ಕನಸಿನ ದನಿ” ಯಂತಹ ಕೃತಿಗಳನ್ನು ರಚಿಸಿದ್ದರೂ ಇದೀಗ ಬಿಡುಗಡೆಯಾದ “ತೇಲಿ ಬಿಟ್ಟ ಆತ್ಮ ಬುಟ್ಟಿ” ಕವಿತೆಗಳು ವಿಷೇಶವೆಂದೇ ಹೇಳಬಹುದು. ಇನ್ನು ಈ “ತೇಲಿ ಬಿಟ್ಟ ಆತ್ಮ ಬುಟ್ಟಿ”ಯ ಕವಿತೆಗಳ ಬಗ್ಗೆ ಹೇಳುವುದಾದರೆ.

“ಹಿಂದೆ ಬಿದ್ದ ನೆರಳು” ಕವಿತೆಯಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆವ , ಗೋಡೆ ಗೋಡೆಗಳ ನಡುವಿನ ವೈಮನಸ್ಸು ಮತ್ತು ದೇಶ ದೇಶಗಳ ನಡುವಿನ ಮನಸ್ತಾಪಗಳು, ಅದರಿಂದಾಗುವ ಪರಿಣಾಮಗಳನ್ನು ಹೀಗೆ ವಿವರಿಸುತ್ತಾರೆ;
“ನೆರಳ ಹಿಂದಿಕ್ಕುವ ಆಟಕ್ಕೆ
ನೋಕಿದ್ದ ಗೊಂಬೆಯಾಡಿಸುವಾತ
ಓಡಿ ಓಡಿ ದಣಿವಾಗಿ ಬಾಗಿ
ತಲೆಯೆತ್ತಿನಿಂದಾಗ ದೀಪಗಳ ಆವಲಿ
ಎಲ್ಲೆಲ್ಲೂ ಬೆಳಕಿನ ಹಣತೆಗಳ ಸರಮಾಲೆ
ಅಂತರಂಗದಲ್ಲಿ ಅರಿವಿನ ಅಲೆ. “
“ಸಾಕ್ಷ್ಯಚಿತ್ರ” “ದೃಷ್ಟಿಕೋನ” ಮತ್ತು”ಜಾಲ”ಕವಿತೆಗಳು ಮನುಷ್ಯನ ಹುಟ್ಟಿನಿಂದ ಸಾವಿನ ವರೆಗಿನ ವಾಸ್ತವೀಕತೆಯ ಜೀವನ ಚಕ್ರವನ್ನೇ ಹೇಳುವಂತಿದೆ. ಇತ್ತೀಚಿಗಿನ ಹವಾಮಾನ ವೈಪರಿತ್ಯದಿಂದಾಗುವ ಅತಿವೃಷ್ಟಿ ಅನಾವೃಷ್ಟಿಯಿಂದ ರೈತಪಿ ವರ್ಗದವರು ಅನುಭವಿಸುವ ನೋವು ಮತ್ತು ವೇದನೆಯನ್ನು”ಮುತ್ತುಗದೆಲೆಯ ಮೇಲಿನ ಬೆಲ್ಲ” ಕವಿತೆಯಲ್ಲಿ;
“ಇತ್ತಿತ್ತಲಾಗೆ ವೃಷ್ಟಿ ಎಂದರೆ ಎದೆಯೊಳಗೆ
ಭತ್ತ ಕುಟ್ಟಿದ ಹಾಗೆ
ಬಂತೋ ಬರೋಬ್ಬರಿ
ಇಲ್ವೋ ಕಣ್ಣೀರ ಬೆವರ ಹನಿ ಖಾತರಿ”… ಎನ್ನುತ್ತಾರೆ.
“ರೂಪಾಂತರ” ಕವಿತೆಯಲ್ಲಿ ಒಂದು ತಾಯಿ ತಾನು ಹೊತ್ತು ಹೆತ್ತು ಸಾಕಿ ಸಲಹುವ ಜೀವಿಯನ್ನು ಹಂತ ಹಂತವಾಗಿ ಬೆಳೆಯುವಂತೆ ಮಾಡಿ ಮಾರ್ಗದರ್ಶಿಸುತ್ತಾ ;
“ಸ್ವಲ್ಪ ಮೇಲೆ ಇರು, ಇನ್ನೊಂಚೂರು
ಆಗುತ್ತೆ ಅಭ್ಯಾಸ ಬಿಡದಿರು
ಇರಲಿ ಏಕಾಗ್ರತೆ ಅತ್ತರೆ ಪೆಟ್ಟು
ನಿರ್ದಾಕ್ಷಿಣ್ಯದ ಬಿಗಿಪಟ್ಟು
ಪ್ರಗತಿ ಪಥದಲ್ಲಿರೆ
ಖುಷಿ ಉಬ್ಬಿ ಕೊರಳ ಸೆರೆ”…
“ಬರಬಹುದು ಮಿಂಚು ಗುಡುಗು ಸಿಡಿಲು
ಬಿಸಿಲು ಬೆಂಕಿ ತಾಕೀತು ಜೋಕೆ
ಸುಡಬಹುದು ರೆಕ್ಕೆ
ಇದೇ ಇಲ್ನೋಡು ಕಲೆ
ಮಾದ ಗಾಯದ್ದು”…
ಇವರ ಅಂತರಂಗದ ಮಾತು “ಜೋಪಾನ” ಎಂದು ರೂಪಾಂತರ ಹೊಂದುವಂತೆ ಮಾಡುವ ಪರಿಯು ಮುದ ನೀಡುತ್ತದೆ. ಇನ್ನೊಂದೆಡೆ ನಮಗೆ ನಾವೇ ಶ್ರೇಷ್ಠರು… ನಮ್ಮಗಳ ನಡುವಿನ ಕಿಚ್ಚುಗಳಿಗೆ ಸಾಕ್ಷಿಯಾಗಿ ಒಡೆದು ಚೂರಾದ ನಡುಗೋಡೆಯ ಮನಸ್ಸಿನ ಪ್ರತಿಬಿಂಬ….”ಲಿಪ್ಸ್ಟಿಕ್ ಕವಿತೆ”..

ಎದೆಗೊಳದ ಅವಳ ಒಲವನ್ನು ತಡಕಾಡುತ್ತ ;
“ನಿಘಂಟಿನ ಪುಟಗಳಲ್ಲಿ ಅಡಗಿದ್ದ
ಶಬ್ದಗಳ ತೋಡಿ ತೆಗೆದು
ಮುಕ್ತಿ ತೋರಿಸಲು
ಕಾರಣ ಅವಳು…..”ಎನ್ನುವರು..
“ನಟ್ಟ ನಡೆದಾರಿಯಲ್ಲಿ ಬಿಟ್ಟ ಹೂವಿನಂತೆ” ವಿರಹದ ಭಾವೋಧ್ವೇಗದಲ್ಲಿ ಕಲ್ಲು ಅಹಲ್ಯೆಯು ಕಾಯವಾಗಿ ಪ್ರಕಟಗೊಂಡಂತಾಗಿ ಕಾಯುವಿಕೆಯ ಸುಖ;
“ಜಗತ್ತು ಸಣ್ಣಗಿದೆ ಭೂಮಿ ದುಂಡಗಿದೆ
ಸಿಕ್ಕವರು ಸಿಗರೇ? ಭಾವ ಉದ್ದೀಸರೇ?
ದೇಹ ಹಗುರ ನೆನಪು ಭಾರ
ಆ ಗಳಿಗೆ ಮತ್ತೆ ಮತ್ತೆ ತಿರುಗಿ ಬಾರ”…
“ಹುಲಿಯ ಪಾಡು”,”ಪಿಸಾಗೋಪುರ”ಕವಿತೆಯಲ್ಲಿ ಬದುಕಲಿ ನೊಂದ ಅಸಹಾಯಕ ಜೀವಿಯೊಂದು ತಾನು ಮಾಡಿದ ಪುಣ್ಯದ ಫಲದಿಂದ ಪ್ರಾಪ್ತಿಯನ್ನು ಪಡೆದುಕೊಂಡು ವಿಶೇಷ ಶಕ್ತಿಯಿಂದ ಜೀವಚೈತನ್ಯ ಪಡುವಂತಹ ದೃಷ್ಟಾಂತವು ಕವಿತೆಯಲ್ಲಿ ಕಥೆಯಂತೆ ಅದ್ಭುತವಾಗಿ ಮೂಡಿ ಬಂದಿದೆ.
“ಬತ್ತಿ ಹೋಗುವ ಮುನ್ನ” ಕವಿತೆಯು ಒಂದು ವೃಕ್ಷವು ತನ್ನನ್ನು ನಾಶಪಡಿಸಿದರೂ ಹಗೆತನವನ್ನು ಮಾಡದೆ ತನಗೆ ನೋವು ಕೊಟ್ಟವರಿಗೂ ಸಿಹಿಯಾದ ಫಲವನ್ನು ಕೊಡುವಂತೆ; ನೀ ನಡೆಯುವ ದಾರಿಯಲ್ಲಿ ಮುಳ್ಳು ಚೆಲ್ಲಿದವರ ಹಾದಿಯಲ್ಲಿ ಹೂವು ಚೆಲ್ಲು ಎನ್ನುತ್ತಾರೆ ಕವಿಗಳು.
“ವಿಸ್ತರಿಸಿದ ತೋಟಕ್ಕೆ ಅಡಚಣೆಯೆಂಬ
ಕಾರಣಕ್ಕೆ ಕಾಂಡಕ್ಕೆ ಮಾಡಿ ರಂದ್ರ
ತುರಿಕಿ ಇಂಗು ಉಪ್ಪು ತುಂಬ
ಹಾಕುವುದು ಮರವೊಂದ ಬತ್ತು
ಕ್ರಮೇಣವದು ಲಡ್ಡಾಗುವುದು ಸತ್ತು”…ಎನ್ನುವಂತೆ.
“ದೀಪದೆಣ್ಣೆಗೆ ತಾಕದ ಬತ್ತಿ” ಕವಿತೆಯು ಜಾಗತಿಕವಾಗಿ ಪ್ರಸ್ತುತ ಸನ್ನಿವೇಶಗಳ ಕುರಿತಾದ ವಸ್ತುನಿಷ್ಠತೆ ಮತ್ತು ಸತ್ಯ ಸತ್ಯತೆಯನ್ನು ಪ್ರತಿಫಲಿಸುತ್ತ;
“ಹೊಸೆದ ಹತ್ತಿಯ ಬತ್ತಿಯು
ಹಣತೆಯ ದೀಪದೆಣ್ಣೆಗೆ ತಾಕದೇ
ಪ್ರಭೇ ಬೆಳಗುವುದೆಷ್ಟು ಹೊತ್ತು?
ಲೆಕ್ಕಕ್ಕೆ ಸಿಕ್ಕದು ಬದುಕು”.
ಬತ್ತಿ ಹೋದ ನಂತರ ಚಿಂತೆಯಿಲ್ಲ..ಎನ್ನುತ್ತಾರೆ.
ಹೀಗೆ “ಮನದ ಬಿತ್ತಿಯಲ್ಲಿ ಹೊನ್ನ ಅಕ್ಷರವ ಕೆತ್ತಿ”, ನವಿಲುಗರಿಯ ಬೆನ್ನ ಸವರಿ, ಮರದಿಂದ ಬಿದ್ದ ಮಳೆ ಹನಿ.. ಎಲ್ಲಾ ಕವಿತೆಗಳು ಮಾನವೀಯತೆ, ಆತ್ಮವಿಶ್ವಾಸ, ಜೀವನಪ್ರೀತಿ , ಜೀವಸೆಲೆ ಮತ್ತು ಬದುಕಿಗೆ ಹೊಸ ಚೈತನ್ಯ ಮೂಡಿಸುವ ಪ್ರಸ್ತುತ ಮತ್ತು ವಾಸ್ತವ ಸನ್ನಿವೇಶಕ್ಕೆ ತಕ್ಕಂತೆ ಜಾಗತಿಕವಾಗಿ ಒಪ್ಪುವ ಕವಿತೆಗಳಾಗಿ ಮೂಡಿಬಂದಿದೆ.
ಇಲ್ಲಿ ಕವಿತೆಗಳಲ್ಲಿನ ಸಾಲುಗಳು ಗ್ರಾಂಥಿಕ ಎನಿಸಿದರೂ ಉಪಮೇ ಪ್ರತಿಮೆಗಳನ್ನು ಜೋಡಿಸುವ ಕ್ರಮದಲ್ಲಿ ವಿಭಿನ್ನತೆ ಕಂಡುಬರುತ್ತದೆ. ಕವಿತೆಗಳಲ್ಲಿ ಜಾಗತೀಕರಣದಿಂದ ತಂತ್ರಜ್ಞಾನದಲ್ಲಾಗುತ್ತಿರುವ ದುಷ್ಪರಿಣಾಮಗಳು, ಹದಗೆಡುತ್ತಿರುವ ಮಾನವ ಸಂಬಂಧಗಳ ಬಗ್ಗೆ ವಿಷಾದವಿದೆ.
ಪ್ರತಿಯೊಂದು ಕವಿತೆಗಳನ್ನು ಆಹ್ಲಾದಿಸುತ್ತ ಓದುಗರೆಲ್ಲರೂ ಇಷ್ಟಪಟ್ಟು ಓದಿದ್ದೇ ಆದಲ್ಲಿ ಖಂಡಿತವಾಗಿಯೂ ಒಮ್ಮೆ ನಮ್ಮ ಆತ್ಮದ ಕದ ತಟ್ಟುತ್ತವೆ ಈ ಕವಿತೆಗಳು. ಇಂತಹ ಒಂದು ಅಪರೂಪದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಡಾ. ಅಜಿತ್ ಹರೀಶಿ ಸರ್ ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್.
- ಸುರೇಶ್ ಮಲ್ಲಿಗೆ ಮನೆ
