ಶ್ರೀಕೃಷ್ಣದೇವರಾಯ ತೆನ್ನಾಲಿರಾಮನಿಗೆ “ ತೆನ್ನಾಲಿ, ಈ ಜಗತ್ತಿನಲ್ಲಿ ಅತ್ಯಂತ ಉಚಿತವಾಗಿ ಸಿಗುವುದು ಯಾವುದು?” ಎಂದು ಕೇಳಿದ. ಕ್ಷಣಮಾತ್ರವೂ ಯೋಚಿಸದ ತೆನ್ನಾಲಿರಾಮ “ ವೈದ್ಯಕೀಯ ಸಲಹೆ ಪ್ರಭೂ” ಎಂದ. ಶ್ರೀಕೃಷ್ಣದೇವರಾಯಗೆ ಆಶ್ಚರ್ಯ. ಮುಂದೇನಾಯಿತು ಡಾ.ಎನ್.ಬಿ.ಶ್ರೀಧರ ಅವರ ಶ್ರೀಕೃಷ್ಣದೇವರಾಯ ಮತ್ತು ತೆನ್ನಾಲಿರಾಮರ ಕಥೆಯನ್ನು ತಪ್ಪದೆ ಮುಂದೆ ಓದಿ…
ಒಮ್ಮೆ ಶ್ರೀಕೃಷ್ಣದೇವರಾಯ ಮತ್ತು ತೆನ್ನಾಲಿರಾಮ ನಗರ ಸಂಚಾರಕ್ಕೆ ಹೋಗಿದ್ದರು. ಕುಶಾಗ್ರಮತಿಯಾದ ತೆನ್ನಾಲಿರಾಮ ಹತ್ತಿರ ಅನೇಕ ಸಂದೇಹಗಳನ್ನು ಶ್ರೀಕೃಷ್ಣದೇವರಾಯ ಎಂದಿನ0ತೆ ಪ್ರಶ್ನೆಗಳನ್ನು ಕೇಳಿ ಬಗೆಹರಿಸಿಕೊಳ್ಳುತ್ತಿದ್ದ. ಶ್ರೀಕೃಷ್ಣದೇವರಾಯ ತೆನ್ನಾಲಿರಾಮನಿಗೆ “ ತೆನ್ನಾಲಿ, ಈ ಜಗತ್ತಿನಲ್ಲಿ ಅತ್ಯಂತ ಉಚಿತವಾಗಿ ಸಿಗುವುದು ಯಾವುದು?” ಎಂದು ಕೇಳಿದ. ಕ್ಷಣಮಾತ್ರವೂ ಯೋಚಿಸದ ತೆನ್ನಾಲಿರಾಮ “ ವೈದ್ಯಕೀಯ ಸಲಹೆ ಪ್ರಭೂ” ಎಂದ. ಶ್ರೀಕೃಷ್ಣದೇವರಾಯಗೆ ಆಶ್ಚರ್ಯ. ಅದು ಹೇಗೆ ಸಾಧ್ಯ ರಾಮಕೃಷ್ಣ? ಉಚಿತವಾಗಿ ಸಿಗುವ ಇತರ ಅನೇಕ ವಸ್ತುಗಳಿದ್ದಾಗ ವೈದ್ಯಕೀಯ ಸಲಹೆ ಎಂದು ಅಷ್ಟು ಖಚಿತವಾಗಿ ಹೇಳುತ್ತಿಯಾ?” ಎಂದು ಪ್ರಶ್ನಿಸಿದ.
ರಾಮಕೃಷ್ಣ ವಿನಯದಿಂದ “ಪ್ರಭು.. ನಾಳೆ ಮುಂಜಾನೆಯಿ0ದ ಸಂಜೆಯವರೆಗೆ ಹುಶಾರಿಲ್ಲ ಎಂದು ಹಾಸಿಗೆಯಲ್ಲಿ ಮಲಗಿ ಬಿಡಿ. ತಿಳಿಯುತ್ತದೆ” ಎಂದ. ಸರಿ ಪರೀಕ್ಷಿಸಿಯೇ ಬಿಡೋಣ ಎಂದು ಶ್ರೀಕೃಷ್ಣದೇವರಾಯ ಅರಮನೆಯಲ್ಲಿ ಭಾರಿ ತಲೆನೋವು ಎಂದು ಮಲಗಿಬಿಟ್ಟ.
ಎಲ್ಲರಿಗೂ ಸುದ್ಧಿ ತಿಳಿಯಿತಲ್ಲ. ದೊರೆಗೆ ಜಡ್ಡು ಎಂದು. ರಾಜವೈದ್ಯರು ಬಂದು ಏನೇನೋ ಔಷಧಿ ಮಾಡಿದರೂ ಸುಳ್ಳು ಕಾಯಿಲೆ ಕಡಿಮೆಯಾಗುತ್ತದೆಯೇ? ಇಲ್ಲವಲ್ಲ. ಸೇನಾಧಿಪತಿ ಬಂದ “ಪ್ರಭು.. ವೀಳ್ಯದೆಲೆಯನ್ನು ತೆಂಗಿನೆಣ್ಣೆ ಹಚ್ಚಿ ಬಾಡಿಸಿ ಹಣೆಯ ಮೇಲಿಟ್ಟು ಕೊಳ್ಳಿ, ತಲೆ ನೋವು ಮಂಗ ಮಾಯ” ಎಂದ. ಮಂತ್ರಿ ಬಂದವ “ ಮಹಾರಾಜಾ, ಬಾಳೆಯ ದಿಂಡಿನ ರಸವನ್ನು ಹತ್ತು ಹನಿ ಮೂಗಿಗೆ ಬಿಟ್ಟು ಕೊಳ್ಳಿ. ತಲೆನೋವು ಮಾಯವಾಗದಿದ್ದರೆ ಹೇಳಿ” ಎಂದ. ಮಹಾರಾಣಿಗೆ ರಾಜನ ಆರೋಗ್ಯದ ಬಗ್ಗೆ ಬಹಳ ಕಾಳಜಿ. “ರಾಜಾ, ತಲೆನೋವು ಬಂದಾಗ ತಣ್ಣೀರು ಸ್ನಾನ ಮಾಡಿ, ಬಿಸಿ ಬಿಸಿ ಹಬೆಯ ಸೇವನೆ ಮಾಡಬೇಕು. ಕೂಡಲೇ ಹೊರಟು ಹೋಗುತ್ತದೆ” ಎಂದಳು.
ಇಷ್ಟರಲ್ಲಿಯೇ ಸಾಮಂತ ರಾಜರಿಗೆಲ್ಲಾ ಸುದ್ಧಿ ಗೊತ್ತಾಯಿತು. ಅವರಲ್ಲೊಬ್ಬ “ ಹೇ ರಾಜನ್, ತಲೆ ನೋವು ಬಹಳ ಅಪಾಯಕಾರಿ. ಅದನ್ನು ಓಡಿಸದಿದ್ದರೆ ಮುಂದೆ ವಿಚಾರಶಕ್ತಿ ಕ್ಷೀಣವಾದೀತು. ಚೂಪನೆ ಕುಡುಗೋಲಿನ ತುದಿಯನ್ನು ಕೆಂಪಗೇ ಕಾಯಿಸಿ ಕಿವಿಯ ಕೆಳಗೆ 5 ಕಡೆ ಸಣ್ಣಗೆ ಚುಚ್ಚಿದರೆ ಸಹಸ್ರಾರ್ಕ ಚಕ್ರ ತೆರೆದು ಅಲ್ಲಿಂದ ಶಕ್ತಿಯ ಧಾರೆ ಮೂಲಾಧಾರದವರೆಗೂ ಹರಿದು ಭೂಗತವಾದ ಮೇಲೆ ಜೀವಮಾನದಲ್ಲೇ ತಲೆನೋವು ಬರದು” ಎಂದ. ಮತ್ತೊಬ್ಬ “ಮಹಾರಾಜಾ, ನಿಮ್ಮ ಏಳ್ಗೆಯನ್ನು ಸಹಿಸದ ಜನ ಮಾಡಿದ ಮಾಟದಿಂದ ಪ್ರಭಾವದ ಮೊದಲ ಹಂತವೇ ತಲೆನೋವು. ದಕ್ಷಿಣ ಭಾರತದ ಭಾಗದಲ್ಲಿ ಅತಿಶಕ್ತಿಯನ್ನು ಹೊಂದಿದ ಮಾಂತ್ರಿಕರಿದ್ದು ಅವರನ್ನು ಕರೆಸಿ ಮಾಟವನ್ನು ಇಳಿಸಿಬಿಟ್ಟರಾಯಿತು” ಎಂದ.

ಫೋಟೋ ಕೃಪೆ : google
ಮತ್ತೊಬ್ಬ “ ರಾಜಾ, ನೀವು ಶೂರರೂ, ವೀರರೂ,ಸಕಲ ಗುಣಗಳಿಂದ ಪೌರುಷಶಾಲಿಯೂ ಆದ ನಿಮ್ಮ ಮೇಲೆ ಅನೇಕ ಜನ ಸುಂದರ ಸ್ತಿçÃಯರ ವಕ್ರ ದೃಷ್ಟಿ ತಗಲಿದೆ. ಪಕ್ಕದ ರಾಜ್ಯದಲ್ಲಿ ಪ್ರಸಿದ್ಧ ದೃಷ್ಟಿ ತೆಗೆಯುವವ ಒಬ್ಬನಿದ್ದೇನೆ. ಆತ ದೃಷ್ಟಿ ತೆಗೆದರೆ ಖಂಡಿತಾ ನಿಮ್ಮ ಕಾಯಿಲೆ ಓಟ ಕೀಳದಿದ್ದರೆ ಹೇಳಿ” ಎಂದ. ಇದನ್ನು ಕೇಳಿಸಿಕೊಳ್ಳುತ್ತಾ ಇದ್ದ ಮತ್ತೊಬ್ಬ “ ರಾಜಾ, ಇದಕ್ಕೆ ಕ್ಷುದ್ರ ಗೃಹಗಳ ದೋಷವೇ ಕಾರಣ. ನಮ್ಮಲ್ಲಿ ಇದಕ್ಕೆ ನಿಮ್ಮ ಜಾತಕ ನೋಡಿ ಪರಿಹಾರ ಹೇಳುವ ಪ್ರಸಿದ್ಧ ಜ್ಯೊತಿಷಿ ಇದ್ದಾನೆ. ಅವನನ್ನು ಕರೆಸಿ ಆತ ಹೇಳುವ ಯಾಗ, ಯಜ್ಞ ಮತ್ತು ಜಪ, ತಪ, ಪಾರಾಯಣಗಳನ್ನು ಮಾಡಿಸಿಬಿಟ್ಟರೆ ತಲೆ ನೋವೇನು? ಮುಂಬರುವ ಸಕಲ ಅರಿಷ್ಟಗಳೆಲ್ಲಾ ಪರಿಹಾರ ಗೊಳ್ಳುವವು” ಎಂದ.
ರಾಜನ ಚಲನವಲನಗಳನ್ನು ಸದಾ ಗಮನಿಸುತ್ತಿದ್ದ ಅರಮನೆಯ ಪರಿಚಾಲಕಿಯಲ್ಲಿ ಒಬ್ಬಳು “ರಾಜಾ, ನೀವು ಶನಿವಾರ ಸಂಜೆ ಉಗುರು ಕತ್ತರಿಸಿಕೊಂಡಿದ್ದೀರಿ. ಇದರಿಂದಲೇ ನಿಮಗೆ ಈ ತೊಂದರೆ ಬಂದಿದೆ. ಈ ದೋಷ ನಿವಾರಣೆಗೆ ಹನುಮಂತನ ಗುಡಿಗೆ ಹೋಗಿ ಎಳ್ಳೆಣ್ಣೆಯ ದೀಪ ಹಚ್ಚಿ ನಿಮ್ಮ ಹೆಸರಿನಲ್ಲಿ ಅರ್ಚನೆ ಮಾಡಿ ಬರುವೆ” ಎಂದು ಹೊರಟಳು. ಅರಮನೆಯ ಮತ್ತೊಬ್ಬ ಸಖಿ “ ಈರುಳ್ಳಿ ಮತ್ತು ಕತ್ತಿಯನ್ನು ನಿಮ್ಮ ಹಾಸಿಗೆಯ ಅಡಿ ಇಟ್ಟರೆ ದುಷ್ಟ ಶಕ್ತಿಗಳೆಲ್ಲಾ ಓಡಿಹೋಗಿ ನಿಮ್ಮ ಆರೋಗ್ಯ ಸುಧಾರಿಸುವುದು” ಎನ್ನುತ್ತಾ ಅವೆರಡನ್ನೂ ರಾಜನ ಹಾಸಿಗೆಯಲ್ಲಿನ ದಿಂಬಿನಡಿ ಇಟ್ಟು ಕಾದು ಕುಳಿತಳು. ಮತ್ತೊಬ್ಬಳು “ರಾಜಾ, ನೀವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದ್ದೀರಾ. ಕಾರಣ ಭೂಮಿಯ ಎಳೆತ ನಿಮ್ಮ ತಲೆಯ ಮೇಲೆ ಜಾಸ್ತಿಯಾಗಿದೆ. ಕಾರಣ ಪೂರ್ವಕ್ಕೆ ತಲೆ ಹಾಕಿ ಮಲಗಿ” ಎಂದು ರಾಜನ ಶಯನ ಭಂಗಿಯನ್ನು ಬದಲಾಯಿಸಿದಳು.
ಇನ್ನು ರಾಜನ ಅಪಾರ ತಲೆನೋವಿನ ವಿಷಯ ರಾಜ್ಯದಲ್ಲಿನ ಯೋಗಿಗಳಿಗಳಿಗೆ ಸುದ್ದಿ ಗೊತ್ತಾಗಿ ಅವರು ಧಾವಿಸಿ ಬಂದರು. “ಪ್ರಭು, ಅನುಲೋಮ, ವಿಲೋಮ ಇತ್ಯಾದಿ ಪ್ರಾಣಾಯಾಮಗಳ ನಂತರ ಹಸ್ತಪಾದಾಸನ, ನಂತರ ಸೇತುಬಂಧಾಸನ, ಪಶ್ಚಿಮೋತ್ತಾಸನ ಮತ್ತು ಕೊನೆಯಲ್ಲಿ ಶವಾಸನ ಮಾಡಿ ಪ್ರಭು, ತಲೆನೋವೇನು? ಎಲ್ಲಾ ಕಾಯಿಲೆಗಳೂ ಸನಿಹ ಸುಳಿಯುವುದಿಲ್ಲ” ಎಂದರು.
ನಾಟಿ ವೈದ್ಯರು ಓಡೋಡಿ ಬಂದರು. “ ತುಳಸಿ, ಹಸಿ ಶುಂಟಿ ಜಜ್ಜಿ ನಿಂಬೆಯ ರಸದೊಂದಿಗೆ ಆಘ್ರಾಣಿಸಿ ಮಹಾ ಪ್ರಭು” ಎಂದರು. ಇದಕ್ಕೆ ಕಡಿಮೆಯಾಗದಿದ್ದರೆ ಒಳ್ಳೆಯ ನಶ್ಯದ ಪುಡಿ ತರಿಸಿ ಯಾವ ಭಾಗದಲ್ಲಿ ತಲೆನೋವಿದೆಯೋ ಆ ಮೂಗಿನ ಹೊರಳೆಗೆ ಏರಿಸಿಕೊಂಡು ಬಿಡಿ, ಮೂರು ಸಲದ ಚಿಕಿತ್ಸೆಗೆ ತಲೆ ನೋವು ಮಂಗಮಾಯ” ಎಂದರು.
ಸಂಜೆಯಾಗುತ್ತಾ ಬಂತು. ತೆನ್ನಾಲಿ ರಾಮಕೃಷ್ಣ ಅರಮನೆಯತ್ತ ಬಂದ. ನೋಡುತ್ತಾನೆ, ರಾಜ ನರಳುತ್ತಾ ಮಲಗಿದ್ದಾನೆ. “ನಾಟಕ ಸಾಕುಮಾಡಿ ಪ್ರಭು. ನಾನು ರಾಮಕೃಷ್ಣ ಬಂದಿದ್ದೇನೆ” ಎಂದ. ಶ್ರೀಕೃಷ್ಣದೇವರಾಯ “ ಅಯ್ಯಾ ವಿಕಟಕವಿ. ಅದು ಯಾವ ಬಾಯಲ್ಲಿ ವೈದ್ಯಕೀಯ ಸಲಹೆಯಷ್ಟು ಉಚಿತ ಯಾವುದೂ ಅಲ್ಲ ಎಂದಿದ್ದೆಯೋ. ಹೌದು ಮಾರಾಯಾ. ನೋಡು ನನಗೀಗ ಇವರೆಲ್ಲರ ಉಚಿತ ಸಲಹೆ ಕೇಳಿ, ಕೇಳಿ ನಿಜವಾಗಿಯೂ ತಲೆನೋವು ಬಂದಿದೆ, ಏನಾದರೂ ಮಾಡು” ಎಂದ.
ನಿಜ. ವೈದ್ಯಕೀಯ ಸಲಹೆಯಷ್ಟು ಉಚಿತವಾಗಿ ಸಿಗುವುದು ಯಾವುದೂ ಇಲ್ಲ. ಅದೆಲ್ಲಾ ನಮ್ಮ ಆರೋಗ್ಯ ಸುಧಾರಿಸಲೆಂದು ನಮ್ಮ ಆಪ್ತರೆಲ್ಲಾ ಕಾಳಜಿಯಿಂದ ನೀಡುವ ಉಚಿತ ಸಲಹೆಗಳು. ಆದರೆ ಕಾಯಿಲೆಗೆ ಪರಿಣಿತ ವೈದ್ಯರನ್ನು ಸರಿಯಾಗಿ ಹುಡುಕಿ ಕಾಯಿಲೆಗೆ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುವುದು ಜಾಣತನ. ಕೇಳಲು ಎರಡು ಕಿವಿಗಳಿವೆಯಲ್ಲ. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟರಾಯಿತು.
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
