ಇಂದು ವಿಮರ್ಶಕ, ಚಿಂತಕ ಡಿ.ಆರ್.ನಾಗರಾಜ್ ಅವರ ಜನ್ಮದಿನ, ಅವರ ಅವರ ‘ದಿ ಫ್ಲೇಮಿಂಗ್ ಫೀಟ್’ ಪುಸ್ತಕದ ಕುರಿತು ಅವರ ಶಿಷ್ಯ, ಚಿಂತಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ದಿ ಫ್ಲೇಮಿಂಗ್ ಫೀಟ್
ಲೇಖಕರು : ಡಿ.ಆರ್.ನಾಗರಾಜ್
ಪ್ರಕಾಶಕರು : ಪರ್ಮನೆಂಟ್ ಬ್ಲಾಕ್
ಬೆಲೆ : 350 / –
ಗಾಂಧಿಯವರು ಸಂತ ಪರಂಪರೆಯಿಂದ ಬಂದರೂ ಸನಾತನಿಗಳನ್ನು ಎದುರು ಹಾಕಿಕೊಂಡರು. ಅಸ್ಪಶ್ಯರನ್ನು ಮತ್ತು ಅವರ ಸಮಸ್ಯೆಗಳನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿಯೇ ಗ್ರಹಿಸುತ್ತಾರೆ ಮತ್ತು ಸವರ್ಣೀಯರ ಆತ್ಮಶುದ್ಧೀಕರಣದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಾರೆ. ಆದರೆ ಅಂಬೇಡ್ಕರ್ ಇದಕ್ಕೆ ವಿರುದ್ಧವಾಗಿ ಪಾಶ್ಚಾತ್ಯ ಸಮಾಜ ವಿಜ್ಞಾನಿಗಳ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಜಾತಿ ಸಮಸ್ಯೆಯನ್ನೂ, ಅಸ್ಪಶ್ಯತೆಯನ್ನೂ ಗ್ರಹಿಸುತ್ತಾರೆ. ಅಸ್ಪಶ್ಯರು ನೆಲ ಮತ್ತು ನೀರುಗಳಿಂದ ವಂಚಿತರಾಗಿ ನಿರಂತರವಾಗಿ ಸವರ್ಣೀಯರಿಂದ ಅಪಮಾನಿತರಾಗಿ ಬದುಕುಬೇಕಾಗಿ ಬಂದದ್ದರಿಂದ ಅವರಿಗೆ ಹಿಂದೂಧರ್ಮದಲ್ಲಿ ಯಾವ ಭರವಸೆಯೂ ಕಾಣುವುದಿಲ್ಲ. ಆದ್ದರಿಂದಲೇ ಅದರಿಂದ ಬಿಡುಗಡೆ ಹೊಂದಲು ಅಸ್ಪಶ್ಯರಿಗೆ ಅವರು ವಿದ್ಯೆ, ಆತ್ಮಾಭಿಮಾನ ಮತ್ತು ಸಂಘರ್ಷಗಳ ಹಾದಿಯನ್ನು ಹಾಕಿಕೊಡುತ್ತಾರೆ. ಇದಕ್ಕಾಗಿ ಇಂಗ್ಲೆಂಡಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ಅವರು ಬ್ರಿಟಿಷರ ಮುಂದೆ ಅಸ್ಪøಶ್ಯರಿಗಾಗಿ ಪ್ರತ್ಯೇಕ ಮತಗಟ್ಟೆಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಗಾಂಧೀಜಿಯವರು ಅದಕ್ಕೆ ಪ್ರಬಲ ವಿರೋಧವನ್ನು ವ್ಯಕ್ತ ಪಡಿಸಿದರೂ- ಹಿಂದೂ ಸಮಾಜವನ್ನು ಅದು ಛಿದ್ರಗೊಳಿಸುತ್ತದೆ ಎಂಬ ಕಾರಣ್ಕಾಗಿ. ಗಾಂದಿಸಿದಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸುತ್ತಾರೆ. ಆಗ ಅವರ ಬಳಿಗೆ ಬಂದ ಹರಿಜನ ಬಾಲಕ “ನಮ್ಮನ್ನು ಯಾಕೆ ಬಿಟ್ಟು ಹೋಗುತ್ತೀರಿ? ನಮ್ಮನ್ನು ಬಿಟ್ಟರೆ ನಿಮ್ಮ ಸುತ್ತ ಇರುವವರಲ್ಲಿ ನಮಗೆ ನಂಬಿಕೆ ಇಲ್ಲ” ಎಂದು ಕಣ್ಣೀರಿಡುತ್ತಾನೆ. ಆಗ ಅವರೊಂದಿಗೆ ಒಂದು ಒಪ್ಪಂದಕ್ಕೆ ಬರುತ್ತಾರೆ. ಅವನು ಮೇ 29 1933 ರಂದು ಕಿತ್ತಳೆ ಹಣ್ಣಿನ ರಸದೊಂದಿಗೆ ಬರಬೇಕೆಂದೂ ಅದನ್ನು ಕುಡಿದು ತಾನು ಉಪವಾಸ ನಿಲ್ಲಿಸುವುದಾಗಿಯೂ ಅವನಿಗೆ ಹೇಳುತ್ತಾರೆ. ಅದನ್ನು ಒಪ್ಪಿದ ಆ ಹರಿಜನ ಬಾಲಕ ಸಂತೋಷದಿಂದ ಮರಳಿ ಹೋಗುತ್ತಾನೆ. ಆದರರೆ ಆ ದಿನ ಅವನು ಗಾಂಧಿಯವರ ಬಳಿಗೆ ಬರುವುದಿಲ್ಲ. ಈ ರೂಪಕದ ಮೂಲಕ ಗಾಂಧಿಯವರ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡ ಅಸ್ಪಶ್ಯ ಜನಾಂಗದ ಪ್ರತೀಕವಾಗಿ ಅವನು ಕಂಡು ಬರುತ್ತಾನೆ.
ಗಾಂಧಿಯವರ ಗ್ರಾಮ ಸ್ವರಾಜ್ಯದ ಮೂಲಕ, ಖಾದಿಯನ್ನು ಕೈಗೊಳ್ಳುವುದರ ಮೂಲಕ ಅಸ್ಪಶ್ಯರು ಸ್ವಾವಲಂಬಿಗಳಾಗ ಬಹುದೆಂದು ನಂಬುತ್ತಾರೆ. ಆದರೆ ಅಂಬೇಡ್ಕರ್, ಗ್ರಾಮಗಳನ್ನು ಜಾತಿ ಕೂಪದ ನರಕಗಳೆಂದು ಪರಿಗಣಿಸುತ್ತಾರೆ. ಸವರ್ಣೀಯರಿಂದ ಅವರಿಗೆ ಯಾವ ಬಗೆಯ ಆರ್ಥಿಕ, ಸಾಮಾಜಿಕ ನ್ಯಾಯವೂ ದೊರೆಯುವುದಿಲ್ಲವೆಂದು ಅವರಿಗೆ ಖಚಿತವಾಗಿ ಗೊತ್ತಿರುತ್ತದೆ. ಆದ್ದರಿಂದ ಗ್ರಾಮಗಳಿಂದ ಹೊರಬರುವುದು, ವಿದ್ಯೆಯನ್ನು ಪಡೆಯುವುದು, ಮೀಸಲಾತಿಯ ಮೂಲಕ ಉದ್ಯೋಗ ಪಡೆದು, ಸ್ವಾವಲಂಬಿಗಳಾಗಿ ಆತ್ಮವಿಶ್ವಾಸದಿಂದ ತಲೆಯೆತ್ತಿ ಬದುಕ ಬಹುದೆಂದು ಅಸ್ಪøಶ್ಯರಿಗೆ ಅವರು ಕÀರೆ ಕೊಡುತ್ತಾರೆ.
ಅಸ್ಪಶ್ಯರಿಗೆ ಸಾಮಾಜಿಕ ಮತ್ತು ಧಾರ್ಮಿಕ ಅವಕಾಶಗಳನ್ನು ದೊರಕಿಸುವ ಸಲುವಾಗಿ ಅವರು ಸಾರ್ವಜನಿಕವಾಗಿ ಬಾವಿಗಳಲ್ಲಿ ನೀರು ಕುಡಿಯುವುದರ ಮೂಲಕ, ಕಾಳಾರಾಮ್ ಮಂದಿರವನ್ನು ಪ್ರವೇಶಿಸುವುದರ ಮೂಲಕ ಅವರಲ್ಲಿ ಹೊಸ ಅಸ್ಮಿತೆಯನ್ನು ಮೂಡಿಸಲು ಪ್ರಯತ್ನಿಸುತ್ತಾರೆ.
ಅಂತಿಮವಾಗಿ ಈ ಬಗೆಯ ದೇವಾಲಯಗಳ ಪ್ರವೇಶದಿಂದ ಯಾವ ಪ್ರಯೋಜನವೂ ಇಲ್ಲವೆಂದು ಸಾರಿ ತಾನು ಹಿಂದುವಾಗಿಯೇ ಹುಟ್ಟಿದ್ದರೂ ಹಿಂದುವಾಗಿ ಸಾಯುವುದಿಲ್ಲವೆಂದು ಘೋಷಿಸಿ ತನ್ನ ಲಕ್ಷಾಂತರ ಹಿಂಬಾಲಕರೊಂದಿಗೆ ಸಮಾನತೆಯನ್ನು ಪ್ರತಿಪಾದಿಸುವ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಇದು ಅವರ ಜೀವನದ ಮಹಾ ತಿರುವು.
ಮೇಲಿನ ಹಿನ್ನೆಲೆಯಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಹುಟ್ಟಿಕೊಂಡ ದಲಿತ ಚಳವಳಿಗಳು ಮತ್ತು ಅದರ ಪರಿಣಾಮವಾಗಿ ಹುಟ್ಟಿಕೊಂಡ ಸಾಹಿತ್ಯವನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್‍ನ ದಯಾ ಪವಾರ್ ಮುಂತಾದ ಬರಹಗಾರರನ್ನು ಮುಖ್ಯವಾಗಿ ಗಮನಿಸಲಾಗಿದೆ. ಕನ್ನಡಕ್ಕೆ ಸಂಬಂಧಪಟ್ಟಂತೆ ವಿಶೇಷವಾಗಿ ನೆಲದ ಸಮಸ್ಯೆಯ ಪ್ರತೀಕವಾಗಿ ಕಾರಂತರ “ಚೋಮನ ದುಡಿ”ಯನ್ನು ದಲಿತೇತರ ಸಾಹಿತ್ಯದ ಭಾಗವಾಗಿ ಗಮನಿಸಿಲಾಗಿದೆ.
ಆನಂತರ ಬಂದ ದಲಿತ ಲೇಖಕರಲ್ಲಿ ಎರಡು ವಿಧವೆಂದು ವಿಂಗಡಿಸಿದ್ದಾರೆ. ಅವು, ಸಿದ್ಧಲಿಂಗಯ್ಯನವರಿಂದ ಪ್ರಾರಂಭವಾದ “ಹೊಲೆಮಾದಿಗರ ಹಾಡು” ವಿನ ಆಕ್ರೋಷದ ಮಾದರಿ, (ಮುಂದಿನ ಅಧ್ಯಾಯಗಳಲ್ಲಿ ಅವರ “ಅಲ್ಲೇ ಕುಂತವ್ರೆ” ಮತ್ತು “ಊರುಕೇರಿ” ವಿಶ್ಲೇಷಣೆಗಳ ಮೂಲಕ ಅವರ ಬೆಳವಣಿಗೆಯನ್ನು ಕಾಮಿಕ್ ವ್ಯೂನ ಮೂಲಕವೇ ದಲಿತ ಜೀವನದ ಅಂತಃಚೈತನ್ಯ ಪ್ರಕಟವಾಗುವುದನ್ನು ಅನಾವರಣ ಮಾಡಿದ್ದಾರೆ) ದೇವನೂರರ “ಒಡಲಾಳ”ದ ಮೂಲಕ ಪ್ರಾರಂಭಿಸಿದ ಮಾದರಿ ಎಂದು ಇವೆರಡನ್ನೂ ಸಮಗ್ರವಾಗಿ ಒಳಗೊಳ್ಳುವ ಪ್ರಕ್ರಿಯೆಯೊಂದು ಪ್ರಾರಂಭವಾಗಬೇಕೆಂದು ಆಶಿಸುತ್ತಾರೆ.
ಅನಂತ ಮೂರ್ತಿಯವರ “ಸಂಸ್ಕಾರ” ಮತ್ತು ದೇವನೂರರ “ಕುಸುಮಬಾಲೆ”ಯನ್ನು ಒಟ್ಟಿಗೆ ಇಟ್ಟು ಪರೀಕ್ಷಿಸುತ್ತಾರರೆ. ಎರಡೂ ಜಾತಿ ವಿರೋಧದ ಆಶಯದಿಂದ ಹೊರಟರೂ ಭಿನ್ನ ಪ್ರಕಾರಗಳ ಮೂಲಕ ಅಭಿವ್ಯಕ್ತಿಗೊಂಡಿವೆ. ವಾಸ್ತವವಾದಿ ನೆಲೆಯಲ್ಲಿ ರೂಪುಗೊಂಡ “ಸಂಸ್ಕಾರ”ದ ಮಿತಿಗಳನ್ನು ಇಲ್ಲಿ ಗುರುತಿಸಲಾಗಿದೆ. ಜಾನಪದ ಕಥನ ಕಾವ್ಯದ ಧಾಟಿಯನ್ನು ಒಳಗೊಂಡ “ಕುಸುಮಬಾಲೆ” ಹೊಸ ಸಾದ್ಯತೆಗಳನ್ನು ಅನ್ವೇಶಿಸುತ್ತದೆ. ದಲಿತ ಸಂಘರ್ಷ ಸಮಿತಿಯ ರಾಜಕೀಯ ವೈಫಲ್ಯವನ್ನು ಮತ್ತು ಸಾಫಲ್ಯವನ್ನು ಏಕಕಾಲಕ್ಕೆ ಚಿತ್ರಿಸಲಾಗಿದೆ.
ಸಾಮಾಜಿಕ ಬದಲಾವಣೆಯನ್ನು ಹೇಗೆ ಸಾಧಿಸಬಹುದು ಎನ್ನುವುದಕ್ಕೆ ನಿದರ್ಶನವಾಗಿ ಮತ್ತೆ ದೇವನೂರರ”ಕುಸುಮಬಾಲೆ” ಹಾಗೂ ಅನಂತಮೂರ್ತಿಯವರ “ಸೂರ್ಯನ ಕುದುರೆ” ಕತೆಗಳನ್ನು ತೌಲನಿಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. “ಕುಸುಮಬಾಲೆ”ಯಲ್ಲಿ ವಿದ್ಯಾವಂತ ದಲಿತ ತರುಣ (ಚನ್ನ) ಮೇಲ್ಜಾತಿಯ ಹೆಣ್ಣನ್ನು ಮದುವೆಯಾಗಿ, ಅವಳನ್ನು ಬಸಿರು ಮಾಡಿ ಅವಳ ಕಡೆಯವರಿಂದ ಹತ್ಯೆಗೆ ಒಳಗಾಗುತ್ತಾನೆ.
‘ ದಿ ಫ್ಲೇಮಿಂಗ್ ಫೀಟ್’ ಲೇಖಕರು ಡಿ.ಆರ್.ನಾಗರಾಜ್
ಅನಂತಮೂರ್ತಿಯವರ “ಸೂಯ್ನ ಕುದುರೆ” ಕಥೆಯ ಮೂಲಕ ಅಲ್ಲಿ ಬರುವ ಹಡೆ ವೆಂಕಟನ ಪಾತ್ರದಿಂದ ಆಧುನಿಕ ವೈಚಾರಿಕತೆಯ ಮಿತಿಗಳನ್ನು ಗುರುತಿಸುವುದು. ಯಾರ ಪಕ್ಷ್ಷವನ್ನೂ ವಹಿಸದ “ಕುಸುಮ ಬಾಲೆ”ಯ ಕುರಿಯಯ್ಯ ಮತ್ತು ಹಡೆ ವೆಂಕಟನ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಚಹರೆಗಳ ಮಿತಿಯನ್ನು ದಾಟಿ ಸಾಂಸ್ಕøತಿಕ ಪರಂಪರೆಯೊಂದನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯ ಕಡೆಗೆ ಲೇಖಕರ ಒಲವು ತುಡಿಯುವುದನ್ನು ಇಲ್ಲಿ ಗುರುತಿಸಬಹುದು. ಆದರೆ ವರ್ತಮಾನದ ಸದ್ಯದ ಸನ್ನಿವೇಶದಲ್ಲಿ ಲೇಖಕರ ಗೆಳೆಯ ಕೃಷ್ಣನಂತಹವರ ಮೂಲಕ ಅದು ಸದ್ಯದಲ್ಲಿ ಸಾಧ್ಯವಿಲ್ಲದಿದ್ದರೂ ಮುಂದಿನ ಭವಿಷ್ಯದಲ್ಲಿ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ.
ಇದು ಏಕಕಾಲಕ್ಕೆ ಅಸ್ಪಶ್ಯರ ಸಾಂಸ್ಕøತಿಕ ಪರಂಪರೆಯ ನಿರಾಕರಣೆಯನ್ನು ಅಲ್ಲಗಳೆದು ಅವರಿಗೆ ಅದರ ಅವಶ್ಯಕತೆ ಇರುವುದನ್ನು ಮನಗಾಣಿಸುವುದರ ಮೂಲಕ ಅಂಬೇಡ್ಕರ್ ವಾದದ ಮಿತಿಗಳನ್ನು ದಾಟಲು ಪ್ರಯತ್ನಿಸುತ್ತಾರೆ.
ಈ ಕೃತಿಯ ಮೂಲಕ ಆಧುನಿಕ ಸಂದರ್ಭದಲ್ಲಿ ದಲಿತ ಚಳವಳಿ ಮತ್ತು ಸಾಹಿತ್ಯಗಳು ಎದುರಿಸುತ್ತಿರುವ ಆತಂಕಗಳನ್ನೂ ಮತ್ತು ಸವಾಲುಗಳನ್ನೂ ಹಾಗೂ ಅದನ್ನು ಎದುರಿಸಲು ಅವರು ಕಂಡು ಕೊಳ್ಳಬೇಕಾದ ಮಾರ್ಗೋಪಾಯಗಳನ್ನು ಏಕಕಾಲಕ್ಕೆ ಸೂಚಿಸುವುದರಿಂದ ಆಧುನಿಕ ಭಾರತೀಯ ಸಮಾಜದ ಆತ್ಯಂತಿಕ ತಲ್ಲಣಗಳಿಗೆ ಕನ್ನಡಿ ಹಿಡಿಯುವುದರಿಂದಾಗಿ ಇದೊಂದು ಮಹತ್ವದ ಐತಿಹಾಸಿಕ ಮೈಲಿಗಲ್ಲಾದ ಕೃತಿಯಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಇದನ್ನು ವೈಜ್ಞಾನಿಕವಾಗಿ ಸಂಪಾದಿಸುವುದರ ಮೂಲಕ ಪೃಥ್ವಿ ದತ್ ಶೋಬಿಯವರು ಮತ್ತು ಆಶಿಷ್ ನಂದಿಯವರು ಮುನ್ನುಡಿ ಬರೆಯುವುದರ ಮೂಲಕ ಲೋಕ ಮುಖಕ್ಕೆ ಡಿ.ಆರ್,ಎನ್ ಅವರ ಬೌದ್ಧಿಕ ಪ್ರಖರತೆಯನ್ನು ಮತ್ತು ಸಂಯೋಜನಾತ್ಮಕ ಕೌಶಲವನ್ನು ಪರಿಚಯಿಸಿದ ಶ್ರೇಯಸ್ಸು ಅವರದು.
ಈ ಕೃತಿಯ ಮಹತ್ವದ ಸಾಧನೆಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು:
1. ಅಸ್ಪಶ್ಯರಿಗೆ ಒಂದು ಅಸ್ಮಿತೆಯನ್ನು ಕಲ್ಪಿಸಿದ ಅಂಬೇಡ್ಕರ್ ವಾದದ ಉಗಮವನ್ನು ಖಚಿತವಾಗಿ ನಿರೂಪಿಸಿರುವುದು.
2. ಗಾಂಧಿ ಮತ್ತು ಅಂಬೇಡ್ಕರ್ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೂ ಅವರು ಪರಸ್ಪರ ಪ್ರಭಾವಿತವಾದದ್ದನ್ನು ಕೂಡ ದಾಖಲಿಸಿರುವುದು.
3. ಅಂಬೇಡ್ಕರ್‍ವಾದ ಸಾಂಸ್ಕತಿಕ ಪರಂಪರೆಯನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುವುದರ ಮೂಲಕ ಆದ ನಷ್ಟವನ್ನು ಗುರುತಿಸಿರುವುದು ಮತ್ತು ಅದರಿಂದಾಗಿ ದಲಿತ ಚಳವಳಿಯ ವ್ಯಾಪ್ತಿಯನ್ನು ಮಿತಿಗೊಳಿಸಿದ್ದು
4. ದಲಿತ ಚಳವಳಿಗಳ ಸಾಧನೆ ಮತ್ತು ವಸ್ತುನಿಷ್ಠವಾಗಿ ವಿಶ್ಲೇಷಣೆಗೆ ಒಳಪಡಿಸಿರುವುದು.
5. ರೂಪಕಗಳ ಮೂಲಕ ಇಡೀ ಕೃತಿಯನ್ನು ಕಟ್ಟಿರುವುದು (ಗಾಂಧಿಯ ಬಳಿಗೆ ಬಂದ ದಲಿತ ಬಾಲಕ, ನೀರಿಗಾಗಿ ಹಪಹಪಿಸಿದ ಅಂಬೇಡ್ಕರ್ ಸೋದರರ ಪ್ರಸಂಗ)
6. ದಲಿತ ಸಾಹಿತ್ಯದ ಅನನ್ಯತೆ ಮತ್ತು ಮಿತಿಗಳನ್ನು ಏಕಕಾಲಕ್ಕೆ ಅನ್ವೇಷಿಸಿರುವುದು.
7. ಪ್ರತಿಯೊಂದನ್ನೂ ಸಾಧಾರವಾಗಿ ಅಡಿಪಟ್ಟಣಿಗಳು ಮತ್ತು ಉಲ್ಲೇಖಗಳ ಮೂಲಕ ಅಪಾರವಾದ ಆಕರ ಸಾಮಗ್ರಿಯನ್ನು ವ್ಯವಸ್ಥಿತವಾಗಿ ಮಂಡಿಸಿರುವುದು.
ಕಳೆದ ಎರಡು ದಶಕಗಳ ಹಿಂದೆ ನಾನಿದ್ದ ಮನೆಯ ಪ್ರವೇಶದ್ವಾರದಲ್ಲಿ ಗಣಪತಿಯ ಪಟ ರಾರಾಜಿಸುತ್ತಿದ್ದರೆ ಈಚೆಗೆ ನಾವಿರುವ ಮನೆಯ ಪ್ರವೇಶದ್ವಾರ ಅಂಬೇಡ್ಕರ್ ಮತ್ತು ಬುದ್ಧನ ಪಟಗಳು ಅಕ್ಕಪಕ್ಕದಲ್ಲಿ ರಾರಾಜಿಸುತ್ತಿವೆ. ವಿಪರ್ಯಾಸದ ಸಂಗತಿಯೆಂದರೆ ಅಲ್ಲಿ ಗಾಂಧಿ ಪಟದ ಅನುಪಸ್ಥಿತಿ. ಇದು ಡಿ. ಆರ್. ಎನ್. ಮೂರು ದಶಕಗಳ ಹಿಂದೆ ಕಂಡ ಮತ್ತು ಕಂಡಿರಿಸಿದ ದಲಿತ ಚಳವಳಿಯ ವರ್ತಮಾನ ಮತ್ತು ಸದ್ಯದ ಭವಿಷ್ಯದ ರೂಪಕವಾಗಿ ನನಗೆ ಕಾಣುತ್ತದೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು