ಲೇಖಕ ತಿಚ್ ನ್ಹಾತ್ ಹಾನ್ ಅವರ ಮೂಲ ಎರಡು ಪುಸ್ತಕಗಳನ್ನು ಕನ್ನಡಕ್ಕೆ ಸುಭಾಷ್ ರಾಜಮಾನೆ ಅವರು ಅನುವಾದಿಸಿದ್ದು, ಪುಸ್ತಕಕ್ಕೆ ಹಿರಿಯ ಚಿಂತಕ, ಅನುವಾದಕ ಕೇಶವ ಮಳಗಿ ಅವರು ಮುನ್ನುಡಿ ಬರೆದಿದ್ದಾರೆ, ತಪ್ಪದೆ ಓದಿ…

1ಪುಸ್ತಕ : ಮಿರಾಕಲ್ ಆಫ್ ಮೈಂಡಪುಲನೆಸ್
ಮೂಲ: ತಿಚ್ ನ್ಹಾತ್ ಹಾನ್
ಅನುವಾದ: ಸುಭಾಷ್ ರಾಜಮಾನೆ
ಮುಖಪುಟ: ಎಂ.ಎಸ್. ಮೂರ್ತಿ
ಮುಖಬೆಲೆ: 125

2. ಬುದ್ಧಪ್ರಜ್ಜೆಯ ನಡಿಗೆ (ಅನುಭವ ಕಥನ)
ಮೂಲ: ತಿಚ್ ನ್ಹಾತ್ ಹಾನ್
ಅನು: ಸುಭಾಷ್ ರಾಜಮಾನೆ
ಮುಖಪುಟ: ಎಂ.ಎಸ್. ಮೂರ್ತಿ
ಮುಖಬೆಲೆ: 175
(ಎರಡೂ ಸೇರಿ ₹300 ಆಗುತ್ತದೆ)
****ಪ್ರಕಟನಾಪೂರ್ವ ರಿಯಾಯಿತಿ ದಿನಾಂಕ 23-12-2022ರಿಂದ 31-12-2022 ವರೆಗೆ ಮಾತ್ರ.
ಎರಡೂ ಪುಸ್ತಕ ಸೇರಿ
ಒಂದು ಸೆಟ್ ಬೆಲೆ: 220
ಎರಡು ಸೆಟ್ ಬೆಲೆ: 420
ಮೂರು ಸೆಟ್ ಬೆಲೆ: 620
(ಅಂಚೆವೆಚ್ಚ ಇಲ್ಲ)
****
ಹಣ ಸಂದಾಯ ಮಾಡುವ ಬ್ಯಾಂಕ್ ಖಾತೆ ವಿವರ:
SBI S/B A/c No: 41215660196
IFSC: SBIN0040799
Branch: Dattagalli, Mysore
Name: Mounish Murthy
ಹಣ ಸಂದಾಯ ಮಾಡಿದವರು ತಮ್ಮ ವಿಳಾಸವನ್ನು ವಾಟ್ಸಪ್ ನಂಬರ್ 8073397463 ಗೆ ಕಳುಹಿಸುವುದು.
“ಮಿರಾಕಲ್ ಆಫ್ ಮೈಂಡಫುಲನೆಸ್” ಕೃತಿಗೆ ಕತೆಗಾರರು, ಅನುವಾದಕರೂ ಆದ ಕೇಶವ ಮಳಗಿ ಅವರು ಬರೆದ ಮುನ್ನುಡಿ ನಿಮ್ಮ ಓದಿಗೆ..
****
ವಿಯೆಟ್ನಾಮಿನ ಬುದ್ಧ ಸಿದ್ಧಾಂತದ ವಿರಕ್ತ ತಿಚ್ ನ್ಹಾತ್ ಹಾನ್ ಅವರನ್ನು ವಿಶ್ವದ ಕೆಲವು ಭಾಗಗಳಲ್ಲಿ ಅತ್ಯಂತ ಪ್ರಭಾವಶಾಲಿ ಆಧ್ಯಾತ್ಮಿಕ ಗುರು ಎಂದು ಗುರುತಿಸಲಾಗುತ್ತದೆ. ಕಳೆದ ಶತಮಾನದ ಅರವತ್ತು-ಎಪ್ಪತ್ತರ ದಶಕಗಳಲ್ಲಿ ಎಲ್ಲ ಬಗೆಯ ಹಿಂಸೆ ಮತ್ತು ಯುದ್ಧಗಳ ವಿರುದ್ಧ ವಿಶ್ವ ನೆಲೆಯ ಆಂದೋಲನವನ್ನು ಸಂಘಟಿಸಿದವರು. ತಮ್ಮ ಸಮಕಾಲೀನ ಮಾರ್ಟಿನ್ ಲೂಥರ್ ಕಿಂಗ್ರೊಂದಿಗೆ ಶಾಂತಿ ಮತ್ತು ಸಹಬಾಳ್ವೆಯ ಅಗತ್ಯವನ್ನು ಅಮೆರಿಕ ಹಾಗೂ ಯುರೋಪ್ಗಳಲ್ಲಿ ಸಂಚರಿಸಿ ಬಿತ್ತಿದವರು. ಬದುಕಿನ ಅರ್ಥ, ಶಾಂತಿ, ನೆಮ್ಮದಿಗಳನ್ನು ಹುಡುಕಿ ಬರುವವರಿಗೆ ದಾರಿ ತೋರುವ ಕರುಣಾಮಯ ಗುರುವಾಗಿ ಕಾಣಿಸಿಕೊಳ್ಳುವ ಇವರಿಗೆ ಎಲ್ಲೆಡೆ ಲಕ್ಷಾಂತರ ಶಿಷ್ಯರು.
ಹಾನ್ರನ್ನು ಜೆನ್ ಸಂಪ್ರದಾಯದ ಆಧ್ಯಾತ್ಮಿಕ ಗುರು ಎಂದು ಸ್ವೀಕರಿಸಲಾಗುತ್ತದೆ. ಸಂಪ್ರದಾಯ ಯಾವುದೇ ಆದರೂ ಹಾನ್ರ ದೃಷ್ಟಿಕೋನ, ಬದುಕು, ಉಪದೇಶಗಳು ಬೇರಿರುವುದು ಬುದ್ಧನ ಚಿಂತನೆಗಳಲ್ಲಿ. ಮನುಷ್ಯರ ದಿನನಿತ್ಯದ ಬದುಕಿನ ತಳಮಳ, ಪಡಿಪಾಟಲು, ವ್ಯಥೆ, ಉದ್ವಿಗ್ನತೆ, ಪಾಪಪ್ರಜ್ಞೆಗಳಿಗೆ ಕಾರಣವೇನು? ಮನುಷ್ಯ ತನ್ನ ಶಾಂತಿ ಹಾಗೂ ಬಿಡುಗಡೆಯನ್ನು ಹೊರಮುಖಿಯಾಗಿ ಹುಡುಕಬೇಕೋ? ಅಥವ ಒಳಮುಖಿಯಾದಾಗ, ಮನಶುದ್ಧಿಯ ಕ್ರಿಯೆಗಳಲ್ಲಿ ನಿರತವಾದಾಗ ಅರ್ಥ-ಮೋಕ್ಷಗಳು ತಾನೇ ತಾನಾಗಿ ದೊರಕುತ್ತವೋ? ಎಂದು ತಮ್ಮ ಶಿಷ್ಯರಿಗೆ ಸರಳವಾಗಿ ತಿಳಿಸಿಕೊಡುತ್ತ ಸಾಧನೆಯ ಮಾರ್ಗಕ್ಕೆ ಹಚ್ಚುವುದು ಹಾನ್ರ ವಿಶಿಷ್ಟತೆ. ಹೀಗಾಗಿಯೇ, ಮಾನವ ಬದುಕಿನಲ್ಲಿ ಯಾವುದನ್ನು `ಕ್ಷುದ್ರ’ವೆಂದು, ನಿರರ್ಥಕವೆಂದು ಕರೆಯುತ್ತೇವೆಯೋ ಅವನ್ನು ಆಧ್ಯಾತ್ಮಿಕ ಉನ್ನತಿಗೆ ಏರಿಸುವ ಕೆಲಸವನ್ನವರು ಮಾಡುತ್ತಾರೆ.

ತಿಚ್ ನ್ಹಾತ್ ಹಾನ್
ಫೋಟೋ ಕೃಪೆ : progressive
ಕ್ಷುದ್ರ ವಿಚಾರಗಳಲ್ಲಿ ತಲ್ಲೀನವಾಗಿರುವ ಮನಸ್ಸಿಗೆ ಸಂವೇದನಾಶೀಲತೆ ತುಂಬಿ ಎಚ್ಚರಗೊಳಿಸುವುದು, ಕ್ಷುಲ್ಲಕ ಕೆಲಸವನ್ನು ದೈವಿಕತೆಗೇರಿಸಿ ಅದನ್ನು ಸಾರ್ಥಕಗೊಳಿಸುವ ವಿಧಾನವನ್ನು ಹುಡುಕುವುದು, ಎಲ್ಲ ಇಂದ್ರೀಯಗಳನ್ನು ನಿಧಾನ ಹುರಿಗೊಳಿಸಿ ಕ್ರಿಯೆಯಲ್ಲಿ ತೊಡಗುವಂತೆ ಮಾಡುವುದು ಹಾನ್ರ ವಿಧಾನ. ಅಂದರೆ, ಅವರ ಆಧ್ಯಾತ್ಮಿಕ ಚಿಕಿತ್ಸಾ ವಿಧಾನದಲ್ಲಿ ನಡೆನುಡಿ, ಕಾಯ-ಕ್ರಿಯೆ, ಎಚ್ಚರ-ನಿದ್ರೆ ಇತ್ಯಾದಿಗಳು ಬೇರೆ ಬೇರೆಯಲ್ಲ. ಇಲ್ಲಿನ ನಡೆದಾಟ ಅಥವ ಚಲನೆ, ಸ್ಥಿತ ಅಥವ ಚಲನೆಯಿಲ್ಲದಿರುವುದು, ಕೃತ ಇಲ್ಲವೆ ಕೆಲಸ ಮಾಡುತ್ತಿರುವುದು ಎಲ್ಲವೂ ಏಕಕಾಲಕ್ಕೆ ನಡೆಯುವಂಥವು. ನಿಷ್ಕಿçಯತೆಯನ್ನು ಹೋಗಲಾಡಿಸಿ ಕ್ರಿಯೆಯಲ್ಲಿ ತಲ್ಲೀನರಾಗುವುದು ಮತ್ತು ಮಾಡುತ್ತಿರುವ ಕೆಲಸದ ಬಗೆಗೆ ಪ್ರತಿ ಗಳಿಗೆಯೂ ಸಂಪೂರ್ಣ ಎಚ್ಚರವಿದ್ದು ಪರಿಣಾಮವನ್ನು ನಿರೀಕ್ಷಿಸುವುದು ಅಂತಹ ವಿಧಾನಗಳಲ್ಲಿ ಒಂದು. ಇದನ್ನೇ ಬೇರೊಂದು ಬಗೆಯಲ್ಲಿ ಹೇಳುವುದಾದರೆ ದೇಹ-ಮನಸ್ಸು-ಕೆಲಸಗಳ ನಡುವೆ ನಾವು ಮಾಡಿಕೊಂಡ ವಿಭಜನೆಯನ್ನು ಇಲ್ಲವಾಗಿಸಿಕೊಂಡು ಮೂರನ್ನು ಲೀನಗೊಳಿಸಿ ಜೀವಿಸುವುದು. ಅತಿ ಹೆಚ್ಚು ಎಚ್ಚರವಹಿಸಿ ಶ್ರಮವನ್ನು ಗಮನಿಸುತ್ತ ಶ್ರಮದ ಸಾರ್ಥಕತೆಯನ್ನು ಅರಿತುಕೊಳ್ಳುವುದು.
ಇಂಥವು ಹೇಗೆ ಸಾಧ್ಯ? ಮಾಡುವುದು ಹೇಗೆ? ಎಂಬ ಪ್ರಶ್ನೆಗಳು ಹುಟ್ಟಿದರೆ, ಸದ್ಯ ಸುಭಾಷ್ ರಾಜಮಾನೆಯವರು ಪ್ರಕಟಿಸುತ್ತಿರುವ `ಮಿರಾಕಲ್ ಆಫ್ ಮೈಂಡ್ಫುಲ್ನೆಸ್’ ಓದಿದರೆ ಮನದಟ್ಟಾಗುವುದು. ತಿಚ್ ನ್ಹಾತ್ ಹಾನ್ ಅವರ ಮಾತು, ಪ್ರವಚನ, ಉಪದೇಶಗಳನ್ನು ಆಧರಿಸಿದ `ಮಿರಾಕಲ್ ಆಫ್ ಮೈಂಡ್ಫುಲ್ನೆಸ್’ ಕೃತಿಯ ಅನುವಾದವಾಗಿರುವ ಈ ಪುಸ್ತಕವು ಆಧುನಿಕ ಮನುಷ್ಯನ ಕೆಲವು ಆಧ್ಯಾತ್ಮಿಕ ಗೊಂದಲಗಳಿಗೆ ಸರಳ ಉತ್ತರವನ್ನು ನೀಡಬಲ್ಲುದು. ಮೈಂಡ್ಫುಲ್ನೆಸ್ ಎಂಬ ಪದವನ್ನು ರಾಜಮಾನೆ `ಮನೋಮಗ್ನತೆ’ ಎಂದು ಟಂಕಿಸಿದ್ದಾರೆ. ಈ ಶಬ್ದದ ಮೂಲಕವೇ ಕೃತಿಯಲ್ಲಿನ ಅನುವಾದದ ಗುಣಾತ್ಮಕತೆ ತಿಳಿಯುತ್ತದೆ. ಇಲ್ಲಿನ ಭಾಷೆ ಸರಳವಾಗಿದೆ. ಸಾಮಾನ್ಯ ಓದುಗರು ಕೃತಿಯಲ್ಲಿ ಕಣ್ಣಾಡಿಸತೊಡಗಿದ್ದೇ ತಲ್ಲೀನರಾಗುವ ಗುಣವನ್ನು ಪಡೆದಿದೆ. ಇಲ್ಲಿನ ನುಡಿಗಟ್ಟು, ವಾಕ್ಯರಚನೆ, ಸಹಜ ಕನ್ನಡಗಳು-ವಿಚಾರ, ಆಧ್ಯಾತ್ಮಿಕ ವಿಷಯವನ್ನು ಅರ್ಥಮಾಡಿಸಲು ಸಹಕಾರಿಯಾಗಿವೆ.

‘ಮಿರಾಕಲ್ ಆಫ್ ಮೈಂಡಪುಲನೆಸ್’ ಹಾಗೂ ‘ಬುದ್ಧಪ್ರಜ್ಜೆಯ ನಡಿಗೆ’ ಲೇಖಕ ಸುಭಾಷ್ ರಾಜಮಾನೆ
ಮನಸ್ಸುಸಂಕಟದಲ್ಲಿದ್ದಾಗ,ಧಾವಂತ-ಉದ್ವಿಗ್ನತೆಯಲ್ಲಿದ್ದಾಗ ಸಾವಧಾನ, ಸಮಾಧಾನ, ಸಾವಕಾಶ ಎಂಬ ಪದಗಳು ನಮಗೆ ನೆನಪಿಗೆ ಬರಬೇಕು. ಆ ಬಗೆಯ ಕೆಲಸವನ್ನು ಈ ಚಿಕ್ಕ ಪುಸ್ತಕವು ಮಾಡುತ್ತದೆ. ಹೊತ್ತಿಗೆ ಕಿರಿದಾದರೂ ಅದನ್ನು ರೂಪಿಸಿರುವುದು ಶ್ರೇಷ್ಠ ಮನಸ್ಸು. ಆ ವಿರಕ್ತ ಉತ್ತಮ ಮನಸ್ಸನ್ನು ಕಟ್ಟಿರುವುದು ಬುದ್ಧ ಸಿದ್ದಾಂತ. ಅಕ್ಷರಶಃ ಸಾವಿರಾರು ವರ್ಷಗಳಿಂದ ಬುದ್ಧ ವಚನಗಳು ನಮಗರಿವಿಲ್ಲದಂತೆಯೇ ನಮ್ಮ ಬದುಕನ್ನು ಆವರಿಸಿವೆ. ಜಾತಕ ಕತೆಗಳು, ಸೂತ್ತಗಳು, ನಿಕಾಯಗಳು ಯಾವುದೋ ಮಾತಿನ ರೂಪದಲ್ಲಿ, ದೃಷ್ಟಾಂತವಾಗಿ ನಮ್ಮ ವೈಚಾರಿಕತೆಯನ್ನು ತಿಳಿಗೊಳಿಸುತ್ತ ಬಂದಿವೆ. ಈಗ ಹಾನ್ರ ಮೂಲಕ ರಾಜಮಾನೆಯವರನ್ನು ನಿಮಿತ್ತವಾಗಿಸಿಕೊಂಡು ಕನ್ನಡಕ್ಕೆ ಬರುತ್ತಿವೆ. ಈ ಕಿರು ಕೃತಿಯ ಓದು, ಅಲ್ಲಿನ ವಿಷಯಗಳ ಆಚರಣೆ ನಮಗೆ ಶಮನವನ್ನೇ ನೀಡುವುದು ನಿಶ್ಚಯ. ಪಾತ್ರೆ ತೊಳೆಯುವಾಗಿನ ನಿಮಗ್ನತೆಯಿಂದ ಮನೋಮಗ್ನತೆಯ ವ್ಯಾಯಾಮಗಳು ಎಂಬಲ್ಲಿನವರೆಗೆ ಇಲ್ಲಿನ ಸರಳ ಸೂತ್ರಗಳ ಹಬ್ಬಿವೆ.
ಈ ಪುಸ್ತಕದಲ್ಲಿ: “ನಮ್ಮ ಸ್ವಂತ ಜೀವನವಷ್ಟೇ ಅತ್ಯಮೂಲ್ಯವಲ್ಲ. ಪ್ರತಿಯೊಂದು ಬೇರೆ ಜೀವಿಯ ಜೀವ ಮತ್ತು ವಾಸ್ತವತೆ ಕೂಡ ಅಷ್ಟೇ ಮುಖ್ಯ. ಸ್ವಂತ ಜೀವನದ ಅಸ್ತಿತ್ವಕ್ಕಾಗಿ ಉಳಿದವರ ಜೀವನವನ್ನು ನಾಶ ಮಾಡುವುದರಲ್ಲಿ ತೊಡಗುವ ತಪ್ಪುಗ್ರಹಿಕೆಯಿಂದ ನಾವು ಹೊರ ಬರಬೇಕು.” ಇಂತಹ ಅರಿವು ಮೂಡಿಸುವ ಮಾತಿಗಿಂತ ಬೇರೆ ಬೇಕಿಲ್ಲ.

– ಕೇಶವ ಮಳಗಿ
*****
ತಿಚ್ ನ್ಹಾತ್ ಹಾನ್ ರ ಎರಡು ಅನುವಾದಿತ ಪುಸ್ತಕಗಳು :
ವಿಯೆಟ್ನಾಂ ದೇಶದ ಮಹಾನ್ ಬೌದ್ಧ ಗುರು, ಜೆನ್ ಮಾಸ್ಟರ್, ಆಕ್ಟಿವಿಸ್ಟ್, ಲೇಖಕ ತಿಚ್ ನ್ಹಾತ್ ಹಾನ್ ಅವರದ್ದು ವಿಶ್ವವಿಖ್ಯಾತ ಹೆಸರು. ಮನೋಮಗ್ನತೆಯ (Mindfulness) ಹರಿಕಾರ ಎಂದೇ ಖ್ಯಾತರು. ಬೀದಿಗಿಳಿದು ಮನೋಮಗ್ನತೆಯಿಂದ ಹೋರಾಟ ನಡೆಸಿದ್ದರಿಂದ “ಕಾರ್ಯಪ್ರವೃತ್ತ ಬೌದ್ಧತೆ” (Engaged Buddhist) ಎಂಬ ಹೊಸ ಮಾರ್ಗವನ್ನು ಅನುಷ್ಠಾನಕ್ಕೆ ತಂದವರು. ವಿಯೆಟ್ನಾಂನಿಂದ ಗಡಿಪಾರಾದವರು; ಫ್ರಾನ್ಸ್ ದೇಶದಲ್ಲಿ ನಿರಾಶ್ರಿತರೊಂದಿಗೆ ಸೇರಿಕೊಂಡು “ಪ್ಲಮ್ ವಿಲೇಜ್” ನ್ನು ಸ್ಥಾಪಿಸಿದರು. ನೊಂದ ಬಾಳಿಗೆ ಭರವಸೆಯ ಬೆಳಕಾಗುವ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. ಅವರ ಕೃತಿಗಳು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.
