‘ತಿಪ್ಪಜ್ಜಿ ಸರ್ಕಲ್ ‘ ಸಿನಿಮಾ – ಡಾ. ಕೃಷ್ಣವೇಣಿ. ಆರ್. ಗೌಡ

ಡಾ. ಬಿ. ಎಲ್. ವೇಣು ಅವರ ನಿರ್ದೇಶನದ ಪೂಜಾ ಗಾಂಧಿ ಮುಖ್ಯ ಭೂಮಿಕೆಯ ‘ತಿಪ್ಪಜ್ಜಿ ಸರ್ಕಲ್’ ಸಿನಿಮಾ ಕುರಿತು ಡಾ. ಕೃಷ್ಣವೇಣಿ. ಆರ್. ಗೌಡ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಸಿನಿಮಾ ಹಳೆಯದಾದರೂ ಕತೆಯ ಗಟ್ಟಿತನ ನೋಡುಗರನ್ನು ಇನ್ನು ಸೆಳೆದಿಟ್ಟಿದೆ, ಈ ಸಿನಿಮಾದ ಕುರಿತು ತಪ್ಪದೆ ಮುಂದೆ ಓದಿ…

ನಾನು ವೀಕ್ಷಿಸಿದ ಡಾ. ಬಿ. ಎಲ್. ವೇಣು ರವರ ನಿರ್ದೇಶನದ ಹಾದಿಯಲಿ ಮೂಡಿ ಬಂದ ಈ ನೈಜ ಭಾವನೆಯ ಮಿಡಿತ ಇಂತಹ 5G ಯುಗದಲ್ಲಿಯೂ ಕಣ್ ತುಂಬಿ ಬರುವಂತಿದೆ. ಕಮರ್ಶಿಯಲ್ ಜಗತ್ತಿನ ಸಾಗರದಲಿ ನಂಬಿಕೆ, ವಿಶ್ವಾಸಕ್ಕೂ ಬೆಲೆ, ನೆಲೆ ಇಲ್ಲದ ನದಿಯಲಿ ತಿಪ್ಪಜ್ಜಿ ಸರ್ಕಲ್ ಭಾವನಾತ್ಮಕ ಪ್ರಪಂಚವನು ಸೃಷ್ಟಿಸಿದೆ. ಬದಲಾದ ಪೀಳಿಗೆಗಳಲ್ಲಿ ಅದೆಷ್ಟೋ ಸರ್ಕಲ್ ಗಳಿಗೆ ನಾಮಫಲಕಗಳು ಬದಲಾಗಿವೆ.

ಫೋಟೋ ಕೃಪೆ : google

ಉದಾಹರಣೆ : 80ವರ್ಷಕ್ಕೂ ಮೀರಿದ ಹೊಸಪೇಟೆ ಯ ‘ಶಾನಭಾಗ್ ‘ಸರ್ಕಲ್ ಈಗ ಪುನೀತ್ ರಾಜ್ ಕುಮಾರ್ ಸರ್ಕಲ್ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಹಾಗೇನೇ ತಿಪ್ಪಜ್ಜಿ ಸರ್ಕಲ್ ಚಿತ್ರದುರ್ಗದಲ್ಲಿ ಒಂದಾಣೆ, ಎರಡಾಣೆ ಯುಗದಲ್ಲಿ ತಿಪ್ಪಜ್ಜಿ ಸರ್ಕಲ್ ಇದ್ದದ್ದು ಈಗ ಬಸವೇಶ್ವರ ವೃತ್ತ ಎಂದು ಹೊಸದಾಗಿ ನಿರ್ಮಾಣ ಗೊಂಡಿದೆ. ನಿರ್ದೇಶಕ ಬಿ. ಎಲ್. ವೇಣು ತಾವು ನಡೆದು ಬಂದ ಹಾದಿಯ ಹಿಂದಿನ ನೆನಪನ್ನು ಮರೆಯದೆ ಒಂದು ಹೆಣ್ಣಿನ ಅದರಲ್ಲೂ ನೈತಿಕತೆ, ನ್ಯಾಯದ ಒಬ್ಬ ಜನಪದ ಮಹಿಳೆಯ ವಾಸ್ತವ ಚಿತ್ರಣವನ್ನು ಮೆಲುಕು ಹಾಕಿದ್ದಾರೆ.

ಊರು ಬಸವಿಯರೆಂದರೆ ಬರೀ ಸೆರಗು ಹಾಸುವವರಲ್ಲ, ಬದಲಾಗಿ ಅವರಿಗೂ ಮಾನವೀಯ ಮೌಲ್ಯದ ಗುಣಗಳಿರುತ್ತವೆ. ಅವರ ಧರ್ಮ, ಕರ್ಮ, ಸಂಪ್ರದಾಯ ಮರೆಯದೆ ತ್ಯಾಗದ ಮನೋಧರ್ಮದವಳಾಗಿ ಒಬ್ಬ ಗಂಡಿಗೆ ಸೀಮಿತಳಾಗಿ ಚಿರ ಮುತ್ತೈದೆಯಾಗಿ ಚಿತ್ರದುರ್ಗದ ತಿಪ್ಪಿ ಸ್ಫೂರರೂಪಿಯಾಗಿ ಕಾಣಿಸುವಳು. ಕಾಣುವ ಕಾಮುಕರಿಗೆ ತಿಳುವಳಿಕೆ ಹೇಳಿ ಸ್ನೇಹ ಸಂಪಾದಿಸುತ್ತಾಳೆ. ತುಂಡು ಬಟ್ಟೆಯ ಮೈ ಪ್ರದರ್ಶನ ತೋರುವ ವಾಸ್ತವ ಕಾಲದಲ್ಲಿ ‘ತಿಪ್ಪಿ’ ಮೈ ತುಂಬಾ ಸೆರಗು ಹಾಕಿಕೊಂಡು ಊರ ಗರತಿಯಾಗಿ ಲಕ್ಷ್ಯ ಗೊಳ್ಳುತ್ತಾಳೆ. ಈ ಚಿತ್ರೀಕರಣದಲ್ಲಿ ಹಾವೇರಿ, ದಾವಣಗೆರೆ, ಹರಿಹರ, ರಾಣೆಬೆನ್ನೂರ, ಉತ್ತರ ಕರ್ನಾಟಕದ ಭಾಷಾ ಶೈಲಿ ಹಾಗೂ ಇಲಕಲ್ ಟೋಪು ಸೆರಗು ಘಮ್ಯತೆಯ ಗೈದಿದೆ. ಕಾಲದ ಪರಿಧಿಯಲ್ಲಿ ಮುತ್ತು ಕಟ್ಟುವ ಪದ್ಧತಿ ಹೋಗಿದ್ದರೂ ಮನೆ ಮನೆಗೂ 5, 6ಮುತ್ತು ಕಟ್ಟಿರುವ ಜೋಗತೀಯರನ್ನು ಉತ್ತರ ಕರ್ನಾಟಕ ದ ಒಳ ಹಳ್ಳಿಗಳಲ್ಲಿ ಕಾಣುತ್ತೇವೆ. ಇದು ನನ್ನ ಸಂಶೋಧನೆಯ ಅವಧಿಯಲ್ಲಿ ಕಂಡಿದ್ದು. ಇದಕ್ಕೆ ಕಾಣುವ ಕಣ್ ರೆಪ್ಪೆ ಮೌನವಾಗಿ ಅಳುತ್ತದೆ. ಹವಾಮಾನ ಬದಲಾದರೂ ಮಾನವನ ರೀತಿ ಕೆಲವು ಕಡೆ ಹಾಗೇ ಉಳಿದಿದೆ.

ಫೋಟೋ ಕೃಪೆ : google

ಈ ಚಿತ್ರದಲ್ಲಿ ಮೈ ನೆರೆದ ತಿಪ್ಪಿ ತಾನು ಮುತ್ತು ಕಟ್ಟಿಸಿಕೊಂಡು ಒಬ್ಬನಿಗೆ ಸೀಮಿತವಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ನೂಲಿನಂತೆ ಸೀರೆ ತಾಯಿಯಂತೆ ಮಗಳಾಗಬಾರದೆಂದು ಸಂಪ್ರದಾಯಕ್ಕೆ ಕಡಿವಾಣ ಹಾಕಿ ಅವಳಿಗೆ ಮದುವೆ ಮಾಡಿ ಮನೆ ತೊರೆದು ಮರ್ಯಾದೆಯಿಂದ ಪಡಲಿಗೆ ಹಿಡಿದು ಉಧೋ ಉಧೋ ಹುಲಿಗೆಮ್ಮ, ಎಲ್ಲಮ್ಮ ಎಂದು ಭಿಕ್ಷೆ ಎತ್ತಿ ಮಾನವಾಗಿ ಬದುಕು ಕಟ್ಟಿ ಕೊಳ್ಳುತ್ತಾಳೆ. ಆಪತ್ಕಾಲದ ಸಮಯದಲ್ಲಿ ಬಯಲಾಟ ಮಾಡಿಸಿ ಊರಲ್ಲಿ ಮಳೆ ಬರುವ ಹಾಗೇ ದೈವದ ಮೊರೆ ಹೋಗುತ್ತಾಳೆ. ಹೊಸಪೇಟೆ ಗಂಗಾವತಿ, ಬಳ್ಳಾರಿ, ಸಿರುಗುಪ್ಪ ಭಾಗದಲ್ಲಿ ಜೋಗತಿಯರು ಪಡಲಿಗೆ ಹಿಡಿದು ಊರಾಡಿ ಬರುವ ಪದ್ಧತಿ ಇಂದಿಗೂ ಇದೆ.

ನಾವು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಸಾವಿತ್ರಿಬಾಯಿಪುಲೆ, ಸರೋಜಿನಿ ನಾಯ್ದು, ಇಂದಿರಾ ಗಾಂಧಿ, ಮದರತೆರೇಸಾ, ಲತಾಮಂಗೇಷ್ಕರ ಇಂತವರ ಹೆಸರುಗಳ ಜೊತೆಗೆ ತಿಪ್ಪಜ್ಜಿಯಂತ ಮಾನವೀಯ ಹೆಣ್ಣನ್ನು ನೆನೆದರು ತಪ್ಪಿಲ್ಲ. ಯಾಕೆಂದರೆ ಯಾವ ಮಾಶಾಸನಗಳಿಲ್ಲದ ದಿನದಲ್ಲಿ ತನ್ನದೇ ಛಾಪು ಮೂಡಿಸಿ ಬೇರೆಯವರು ಆಕೆಯನ್ನು ಊರ ಬಸವಿಯ ಹಾಗೇ ಕಾಣದೆ ತಾನು ಎಲ್ಲರೊಡಗೂಡಿ ಬದುಕುವ ಊರ ನಾಯಕಿಯಾಗಿ ಮೆರೆಯುತ್ತಾಳೆ. ಈ ಚಿತ್ರ ನಮಗೆಲ್ಲ ಹೃದಯ ಹಸನಾಗಿಸುತ್ತದೆ. ಪಾತ್ರಕ್ಕೆ ಜೀವ ತುಂಬುವ ದಿಟ್ಟತನವನು ಕಲಾವಿದರು, ನಿರ್ದೇಶಕರು ತಂದಿಟ್ಟು, ಜನಪದ ಅದರಲ್ಲೂ ಕನ್ನಡ ಜನಪದದ ಬೇರು ಸತ್ತಿಲ್ಲ. ಸಾಹಿತ್ಯದ ಕೌಶಲ್ಯ ಸಂಭಾಷಣೆ ಮೂಲಕ ವಸ್ತ್ರ ವಿನ್ಯಾಸದ ಜಾಡು ಹಳ್ಳಿಯ ಸೊಗಡನ್ನು ಎತ್ತಿ ಹಿಡಿದಿದೆ. ಎಲ್ಲಾ ಹಳ್ಳಿಗಳು ಸೇರಿ ನಗರವಾಗಿರುವಾಗ ಹಳೇ ವೃತ್ತಗಳು ಹೊಸವೃತ್ತಗಳಾಗಿ ಸೈಕಲ್ ಚೈನಿನ ಪೆಡಲ್ ಗಳಾಗಿವೆ ಎನ್ನಬಹುದು.

ಫೋಟೋ ಕೃಪೆ : google

ಕೊನೆಗಾಲದಲ್ಲಿ ಕೂತು ತಿನ್ನಬಾರದೆಂದು ಸರ್ಕಾರಿ ಶಾಲೆ ಹತ್ತಿರ ಪೆಪ್ಪರ್ಮೆಂಟ್ ಬಿಸ್ಕೆಟ್ ಅಂಗಡಿ ಇಟ್ಟು ಅದರಲ್ಲಿಯೇ ತಿಪ್ಪಜ್ಜಿಯಾಗಿ ಕೊನೆ ಉಸಿರೆಳೆಯುವುದು ಭಾವನಾ ಪ್ರಪಂಚಕ್ಕೆ ಎಳೆದೊಯುತ್ತದೆ.

ಆಣೆಯ ಯುಗದಲ್ಲಿ ತಿಪ್ಪಜ್ಜಿ ಊರ ಹಿರಿಯರಿಗೆ ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಸಹಾಯಕಳಾಗಿ ಊರ ತಿದ್ದುವ ಕೋಟೆಯಾಗುವಳು.

ಕಥಾನಾಯಕಿ ಪೂಜಾ ಗಾಂಧಿಯವರು ತಮ್ಮ ಪಾತ್ರವನ್ನು ತುಂಬಾ ಅಚ್ಚು ಕಟ್ಟಾಗಿ ನಿರ್ವಹಿಸಿರುವುದು ಎಲ್ಲೂ ತೊಡಕಿಲ್ಲದೆ ಮೂಡಿಬಂದಿದೆ. ಅಲ್ಲಲ್ಲಿ ಅಶ್ಲೀಲತೆಯ ಹಾಡು ಮೂಡಿ ಬಂದರೂ ಅದನ್ನು ಬದಿಗಿರಿಸಿ ಇಡೀ ಚಿತ್ರಣ ಭವ್ಯತೆ ಮೆರೆದಿದೆ. ಅಲ್ಲದೆ ಊರಿನ ದಾಸಯ್ಯ ಸತ್ಯಜಿತ್ ರವರು ಮತ್ತು ಸಲೀಮಣ್ಣನ ಪಾತ್ರಧಾರಿಯಾಗಿ ಶ್ರೀನಿವಾಸ್ ಮೂರ್ತಿಯವರು ಕೊನೆ ತನಕ ಸ್ನೇಹ ಉತ್ತಮವಾದುದು.

ಕಾಮದ ದೃಷ್ಟಿಯಲ್ಲಿ ಕಂಡ ಈ ಇಬ್ಬರು ತಿಪ್ಪಿಯನ್ನು ಓರ್ವ ಸ್ನೇಹಿತೆಯಾಗಿ ಕಂಡು ಅವಳು ಮಣ್ಣಾಗುವ ತನಕ ಕೈ ಹಿಡಿಯುವ ದೃಶ್ಯ ನಿಜಕ್ಕೂ ಕಣ್ಣಲ್ಲಿ ನೀರು ತುಂಬಿ ಕೊಳ್ಳುವಂತಹುದು. ಎರಡಾಣೆ ಯ ಕಾಲದ ಸ್ನೇಹ ಕ್ಕೂ ಇವತ್ತಿನ ಸ್ನೇಹಕ್ಕೂ ಬಹಳ ವ್ಯತ್ಯಾಸವನ್ನು ಈ ಸಿನಿಮಾ ಸೂಚಿಸುತ್ತದೆ.

ಭವ್ಯ ದಾವಣಗೆರೆ ಸಾಹುಕಾರನ ಹೆಂಡತಿಯಾಗಿ ಗಂಡನ್ನ ತಿದ್ದುವ ಪ್ರಯತ್ನ ನೈಜ್ಯ ಜೀವನದ ಲೋಕವನ್ನು ಚಿತ್ರ ಎತ್ತಿ ಹಿಡಿದಿದೆ.

ನಿಜಕ್ಕೂ ನನಗೆ ಈ ಸಿನಿಮಾ ಗೆ ಲೈಕ್ ಕೊಡಬೇಕೆನಿಸಿತು…..


  • ಡಾ. ಕೃಷ್ಣವೇಣಿ. ಆರ್. ಗೌಡ – ಹೊಸಪೇಟೆ,ವಿಜಯ ನಗರ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading