ಬಾಂಧವ್ಯದ ಸಂಕೇತ ಹಚ್ಚೆಯ ಕುಡಿಕೆ….

ನಮ್ಮ ಅಜ್ಜಿಗಳ ಕಾಲದಲ್ಲಿದ್ದ ಹಚ್ಚೆ, ಈಗ ಟ್ಯಾಟೂ ಕಾಲವಾಗಿದೆ. ಹಿಂದಿನ ಕಾಲದವರು ಹಚ್ಛೆಯನ್ನು ಯಾಕೆ ಹಾಕಿಕೊಳ್ಳುತ್ತಿದ್ದರು ಎನ್ನುವುದನ್ನು ತಿಳಿದರೆ ಸೂಜಿಗವೆನ್ನಿಸುತ್ತದೆ. ಡಾ. ಕೃಷ್ಣವೇಣಿ. ಆರ್. ಗೌಡ ಅವರ ಲೇಖನಿಯಲ್ಲಿ ಮೂಡಿ ಬಂದ ಹಚ್ಛೆಯ ಕುರಿತಾದ ಲೇಖನವನ್ನು ತಪ್ಪದೆ ಮುಂದೆ ಓದಿ…

ಭಾರತದ ಹಳೇ ಜಾಡಿನಲ್ಲಿ ಜನಪದ ದ ಹಚ್ಚೆಯ ಕುಡಿಕೆ ಮಾಯಾಜಾಲವಾಗಿದೆ. ಇದು ಸ್ವಲ್ಪ ಬೇಸರದ ಸಂಗತಿಯಾದರು ಈವತ್ತಿಗೂ ಹಣೆಯ ಮೇಲೆ ಹಚ್ಚ ಹಸಿರು ಬೊಟ್ಟು ಕಂಗೊಳಿಸದೇ ಅಳಿಯದ ಕಲೆಯಾಗಿ ನಿಂತಿದೆ.

ಸುಮಾರು 50, 60 ವರ್ಷಗಳ ಕಪ್ಪು ಬಿಳಪು ಯುಗದತ್ತ ಮುಖ ಮಾಡಿದಾಗ ಎಲ್ಲರ ಹಣೆಯ ಮೇಲೆ ಮತ್ತು ಬಲಗೈ ಹೆಬ್ಬೆಟ್ಟು ಮೇಲೆ ತ್ರಿಕೋನಕಾರದ ಶೈಲಿಯಲ್ಲಿ 3 ಚುಕ್ಕೆಗಳ “ಹಚ್ಚೆ “ಗುರುತು ಕಾಣಿಸುತ್ತಿತ್ತು. ಇದರ ಅರ್ಥ ಹುಡುಕಾಟದೊಂದಿಗೆ ಜೊತೆಗೂಡಿದಾಗ ಹಿರಿಯ ಮುದುಕಿಯರು ಎಲೆ ಅಡಿಕೆ ಜಿಗಿಯುತ್ತ ಗಂಡ ಸತ್ತಾಗ ನಾವು ಕುಂಕುಮ ತೆಗೆದರೂ ನಾವು ಮಣ್ಣಾಗುವಾಗ ನಮ್ಮ ಚರ್ಮದ ಜೊತೆ ಬರುವುದು ಈ ಹಚ್ಚೆ ಕಲೆ ಮಾತ್ರ ಎಂದರು. ಆಶ್ಚರ್ಯಚಕಿತೆಯಾಗಿದೆಯಲ್ಲವೇ? ಮತ್ತು ಬಲಮುಂಗೈ ಮೇಲೆ ಮೂರು ಚುಕ್ಕೆ ಇದ್ದರೆ ಮಾಡಿದ ಅಡುಗೆ ರುಚಿ ಕೆಡುವುದಿಲ್ಲ ಎನ್ನುವ ಜನಪದ ನಂಬಿಕೆ ಹುಸಿಯಾಗಿಲ್ಲ.

‘ಹಚ್ಚೆ’ ಗೆ ಯಾವ ಜಾತಿಯೂ ಇಲ್ಲ ಜಾತ್ಯತೀತದ ಸಾಂಕೇತಿಕವಾಗಿ 12 ಸಣ್ಣ ಸೂಜಿಯೊಡಗೂಡಿ ಹಾಕುವ ಈ “ಹಚ್ಚೆ” ಗೆ ಒಂದು ಸಲಾಂ. ಚಿಕ್ಕ ವಯಸ್ಸಿನಲ್ಲಿ ನಾನು ಕಂಡಾಗ ಒಂದು ಸಣ್ಣ ಕುಡಿಕೆ (ಮಡಿಕೆ) ಯಲ್ಲಿ “ಹಚ್ಚೆ “ಹಾಕುವವರು ತಾವೇ ತಯಾರು ಮಾಡಿದ ಮಸಿ ಉದ್ದನೆಯ ಕಡ್ಡಿ ಜೊತೆಗೆ ನಗಿಸುವ ಪದವನ್ನು ಹೇಳುತ್ತಾ ಮೈ ಮರೆಸಿ ಚುಚ್ಚುವ ಕಲೆ ಕಲಾತ್ಮಕ ವಾದದ್ದು. ಇದಕ್ಕೆ ಯಾವ ತರಗತಿಗೆ ಹೋಗಿ ಕಲಿಯುವ ಅಗತ್ತ್ಯ ಇಲ್ಲ. ದೈವ ತಂದ ಈ ಕಲೆಗೆ ಹಳೇ ಮುದುಕಿಯರು ಹೊಟ್ಟೆ ಪಾಡಿಗಾಗಿ ಮಾಡುವ ಈ “ಹಚ್ಚೆ” ಕಲೆ ಓಣಿಗಳಲ್ಲಿ ಜನ ನಿಂತು ನೋಡುವುದೇ ಸೊಗಸು. “ಹಚ್ಚೆ” ಗಳಲ್ಲಿ ನಾನಾ ವಿಧಗಳು ಗಲ್ಲದ ಮೇಲೆ ಮೂರು ತರಹದ ಚುಕ್ಕೆಯ ಹಚ್ಚೆ. ಕೈಯ ಮೇಲೆ ಎಳೆ ರಂಗೋಲಿಯ ಹಚ್ಚೆ. ನಾಗಪ್ಪನನ್ನು ಬಿಡಿಸುವ ಹಚ್ಚೆ. ಗಂಡ ಹೆಂಡತಿಯ ಹೆಸರಲ್ಲಿ, ಹೆಂಡತಿ ಗಂಡನ ಹೆಸರಲ್ಲಿ ಹಾಕಿಸುವ “ಹಚ್ಚೆ “ಬಾಂಧವ್ಯದ ಸಂಕೇತವಾಗಿತ್ತು. ಸುಟ್ಟರೂ ಮಾಸದ ಈ ಕಲೆ ಒಂದು ಚಹರೆಯನ್ನೇ ಸೃಷ್ಟಿಸುತ್ತದೆ. ಮೊನ್ನೆ ಇತ್ತೀಚಿಗೆ A to Z ಚಾನೆಲ್ ನತ್ತ ಗಮನ ಸೆಳೆದಾಗ ನ್ಯಾಷನಲ್ ಜಿಯಾಗ್ರಫಿ ಚಾನೆಲ್ ನಲ್ಲಿ ಹಾವು ಹಿಡಿಯುವ ವಿದೇಶಿಯರ ಮೈಯೆಲ್ಲಾ ಮಿಷಿನರಿ ಹಚ್ಚೆ ಎಂಬ ಹೆಜ್ಜೆ ಗುರುತು ವಿಕೃತವಾಗಿತ್ತು. ಕಲೆ ಕಲಾತ್ಮಕನ ಮತ್ತು ನೋಡುಗನ ಕಣ್ ತಣಿಸಬೇಕೆ ವಿನಃಹ ವಿಕೃತಗೊಳ್ಳಬಾರದು. ಇದು ನನ್ನ ಸಣ್ಣ ಅಭಿಪ್ರಾಯ ಅಷ್ಟೇ.

ಕಾಲಗಣನೆಗೆ ಬೆನ್ನ ಮೇಲೆ, ತೋಳ ಮೇಲೆ, ಹೊಕ್ಕುಳದ ಮೇಲೆ ಟ್ಯಾಟೂಸ್ ಎನ್ನುವ ಈ ಕಲೆ ಅಷ್ಟೊಂದು ರಸಿಕತೆ ಉಂಟು ಮಾಡಲಿಲ್ಲ. ಮೈ ಎಲ್ಲಾ ಮಚ್ಚೆಯೋ ಅಥವಾ ಮಚ್ಚೆಯೇ ಮೈಯೋ ಅರಿಯದು. ಹಚ್ಚೇಗೂ, ಮಚ್ಚೆಗೂ ಅಜಗಜದ ಅಂತರವಿದೆ. ಯುಗದಲ್ಲಿ ಎಷ್ಟೇ ಮಿಷಿನರೀಕರಣದ ಕಲೆ ಬಂದರೂ ಹಳೇ ಬೇರ ಜನಪದದ ಕಲೆಯು ಘಮ್ಯ ಮತ್ತು ಗೌಣವಾದುದು. ಹಚ್ಚೆ ಹಾಕಿದವರಿಗೆ ಎಲೆ ಅಡಿಕೆ ದಕ್ಷಿಣ ಇಟ್ಟು ಕೊಟ್ಟಾಗ ಅವರು ಪಡುವ ಖುಷಿ ಯಾವ ನಾಣ್ಯಕ್ಕೂ ಸಮಯಿಲ್ಲ. ಪುನರಾವರ್ತನೆಯ ನಂಬಿಕೆಯಡಿ “ಹಚ್ಚೆ “ಯು ಮರುಕಳಿಸಲಿ. Modified ಎನ್ನುವುದು ಕ್ಷಣ ಗಣನೆ, ಸಾಂಪ್ರದಾಯಿಕ “ಹಚ್ಚೆ “ಯುಗ ಯುಗಾಂತರ….


  • ಡಾ. ಕೃಷ್ಣವೇಣಿ. ಆರ್. ಗೌಡ – ಹೊಸಪೇಟೆ, ವಿಜಯ ನಗರ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading