ಟೂರ್ ಡಿ 100 (Tour De100) – ಆರ್. ಪಿ. ರಘೋತ್ತಮ



ಸೈಕಲ್ ಸ್ಪರ್ಧೆಯಿಂದ ಸ್ಫೂರ್ತಿಗೊಂಡು ದೆಹಲಿಯ ಸಂಸ್ಥೆಯೊಂದು ಭಾರತದಲ್ಲಿ ವರ್ಷಕ್ಕೊಮ್ಮೆ “ಟೂರ್ ಡಿ 100” ಎಂಬ ಒಂದು ಸ್ಪರ್ಧೆಯನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಟೂರ್ ಡಿ 100, ನೂರು ದಿನಗಳ ಅವಧಿಯಲ್ಲಿ ನಡೆಯುವ ಸ್ಪರ್ಧೆ.ಈ ಸ್ಪರ್ಧೆಯ ಕುರಿತು ಲೇಖಕರಾದ ಆರ್. ಪಿ. ರಘೋತ್ತಮ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಟೂರ್ ಡಿ ಫ್ರಾನ್ಸ್ (Tour De France) ಎನ್ನುವುದು ವರ್ಷಕ್ಕೊಮ್ಮೆ ಫ್ರಾನ್ಸ್ ದೇಶದಲ್ಲಿ ನಡೆಯುವ ಪುರುಷರ ಸೈಕಲ್ ತುಳಿಯುವ ಸ್ಪರ್ಧೆ. ಈ ಜಗದ್ವಿಖ್ಯಾತ ಸ್ಪರ್ಧೆ ಸುಮಾರು 21 ಹಂತಗಳಲ್ಲಿ ನಡೆಯುತ್ತದೆ. ಒಂದೊಂದು ಹಂತವೂ ಸರಾಸರಿ ಒಂದು ದಿನದಲ್ಲಿ ಪೂರ್ಣಗೊಳಿಸುವಂತೆ ವಿನ್ಯಾಸ ಮಾಡಿರುತ್ತಾರೆ. ಸಾಮಾನ್ಯವಾಗಿ ಈ ಸ್ಪರ್ಧೆ 23 ದಿನಗಳಲ್ಲಿ ಮುಗಿಯುತ್ತದೆ. ಹೆಸರಿನಲ್ಲಿ ಫ್ರಾನ್ಸ್ ಎಂದಿದ್ದರೂ ಸ್ಪರ್ಧೆಯ ಮಾರ್ಗ ಫ್ರಾನ್ಸ್ ದೇಶದ ಸುತ್ತಮುತ್ತಲಿನ ದೇಶಗಳಲ್ಲೂ ಸಾಗುತ್ತದೆ. ಜಗತ್ತಿನ ಅತೀ ಪ್ರಸಿದ್ಧ ಕ್ರೀಡಾಕೂಟಗಳಲ್ಲಿ ಇದೂ ಒಂದು.

ಇಂತಹ ಒಂದು ಅದ್ಭುತವಾದ ಸೈಕಲ್ ಸ್ಪರ್ಧೆಯಿಂದ ಸ್ಫೂರ್ತಿಗೊಂಡು ದೆಹಲಿಯ ಸಂಸ್ಥೆಯೊಂದು ಭಾರತದಲ್ಲಿ ವರ್ಷಕ್ಕೊಮ್ಮೆ “ಟೂರ್ ಡಿ 100” ಎಂಬ ಒಂದು ಸ್ಪರ್ಧೆಯನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಟೂರ್ ಡಿ 100, ನೂರು ದಿನಗಳ ಅವಧಿಯಲ್ಲಿ ನಡೆಯುವ ಸ್ಪರ್ಧೆ. ಈ ಸ್ಪರ್ಧೆಗೆ ಸಮಯ ಮತ್ತು ಸ್ಥಳಗಳ ನಿರ್ಬಂಧಗಳಿಲ್ಲದೆ, ಸ್ಪರ್ಧಿಗಳು ತಾವು ಇರುವ ಊರುಗಳಲ್ಲೇ, ತಮಗೆ ಅನುಕೂಲವಾಗುವ ಸಮಯದಲ್ಲೇ ತುಳಿಯಬಹುದು (Virtual event). ಈ ಸ್ಪರ್ಧೆ 5 ಹಂತಗಳಲ್ಲಿ ನಡೆಯುತ್ತದೆ, ಪ್ರತೀ ಹಂತವೂ 20 ದಿನಗಳ ಕಾಲಾವಧಿ ಹೊಂದಿರುತ್ತದೆ. ಮೊದಲ ಹಂತ ತೀರಾ ಸುಲಭವಾಗಿದ್ದು, ಆರಂಭಿಕರೂ ಕೂಡ ಮೊದಲ ಹಂತದ ಎಲ್ಲ ಗುರಿಗಳನ್ನೂ ಸುಲಭವಾಗಿ ತಲುಪಬಹುದು. ಎರಡನೇ ಹಂತ ಮೊದಲ ಹಂತಕ್ಕಿಂತಲೂ ಕೊಂಚ ಕಷ್ಟ ಪಡಬೇಕಾದ ಗುರಿಗಳನ್ನು ಹೊಂದಿರುತ್ತದೆ. ಮೂರನೇ ಹಂತ ಇನ್ನೂ ಸ್ವಲ್ಪ ಕಷ್ಟವಿದ್ದು, ಕೊಂಚ ತಿಣುಕಾಡಿ, ಕಷ್ಟಪಟ್ಟರೆ ಸಾಧಿಸಬಹುದಾದದ್ದು. ಆದರೆ ಕೊನೆಯ ಎರಡು ಹಂತಗಳು ತುಂಬಾ ಶ್ರಮವನ್ನು, ಸಮಯವನ್ನು ಬೇಡುತ್ತವೆ. ಬಹುಶಃ ಕೇವಲ ಹವ್ಯಾಸಿ ಸೈಕಲ್ ರೈಡರ್’ಗಳು ಮತ್ತು ಸಾಧಿಸಬೇಕೆಂಬ ತುಡಿತವಿರುವವರು ತಲುಪಬಹುದಾದ ಹಂತವಿದು.

ಅಂತದ್ದೇನಿರುತ್ತದೆ ಈ ಸ್ಪರ್ಧೆಯಲ್ಲಿ? ಹಂತ ಹಂತವಾಗಿ ನೋಡೋಣ ಬನ್ನಿ.

ಫೋಟೋ ಕೃಪೆ : reuters

ಮೊದಲ ಹಂತ : 

  •  ಕನಿಷ್ಠ 8 ದಿನಗಳಂದು ತುಳಿಯಬೇಕು
  • 50 ಕಿಲೋಮೀಟರ್’ ಗಳ ಒಂದು ರೈಡ್
  • 10 ಕಿಲೋಮೀಟರ್’ಗಳ 5 ರೈಡ್
  • 20 ದಿನಗಳಲ್ಲಿ ಕನಿಷ್ಠ 100 ಕಿಲೋಮೀಟರ್ ತುಳಿಯಬೇಕು
  • 15 ಕಿಲೋಮೀಟರ್’ಗಳ 4 ರೈಡ್
  • 20 ಕಿಲೋಮೀಟರ್’ಗಳ 3 ರೈಡ್

ಎರಡನೇ ಹಂತ : 

  •  ಕನಿಷ್ಠ 10 ದಿನಗಳಂದು ತುಳಿಯಬೇಕು
  • 80 ಕಿಲೋಮೀಟರ್ (50 ಮೈಲಿ)ಗಳ ಒಂದು ರೈಡ್
  • 20 ಕಿಲೋಮೀಟರ್’ಗಳ 4 ರೈಡ್
  •  20 ದಿನಗಳಲ್ಲಿ ಕನಿಷ್ಠ 150 ಕಿಲೋಮೀಟರ್ ತುಳಿಯಬೇಕು
  • 15 ಕಿಲೋಮೀಟರ್’ಗಳ 5 ರೈಡ್
  •  30 ಕಿಲೋಮೀಟರ್’ಗಳ 3 ರೈಡ್

ಮೂರನೇ ಹಂತ :

  •  ಕನಿಷ್ಠ 12 ದಿನಗಳಂದು ತುಳಿಯಬೇಕು
  • 100 ಕಿಲೋಮೀಟರ್’ ಗಳ ಒಂದು ರೈಡ್
  • 30 ಕಿಲೋಮೀಟರ್’ಗಳ 4 ರೈಡ್
  •  20 ದಿನಗಳಲ್ಲಿ ಕನಿಷ್ಠ 200 ಕಿಲೋಮೀಟರ್ ತುಳಿಯಬೇಕು
  •  20 ಕಿಲೋಮೀಟರ್’ಗಳ 5 ರೈಡ್
  • ಸತತ 7 ದಿನಗಳಲ್ಲಿ 300 ಕಿಲೋಮೀಟರ್’ ತುಳಿಯಬೇಕು

ನಾಲ್ಕನೇ ಹಂತ :

  • ಕನಿಷ್ಠ 15 ದಿನಗಳಂದು ತುಳಿಯಬೇಕು
  • 160 ಕಿಲೋಮೀಟರ್ (100 ಮೈಲಿ)ಗಳ ಒಂದು ರೈಡ್
  • 40 ಕಿಲೋಮೀಟರ್’ಗಳ 4 ರೈಡ್
  • 20 ದಿನಗಳಲ್ಲಿ ಕನಿಷ್ಠ 250 ಕಿಲೋಮೀಟರ್ ತುಳಿಯಬೇಕು
  • 25 ಕಿಲೋಮೀಟರ್’ಗಳ 5 ರೈಡ್
  •  ಸತತ 7 ದಿನಗಳಲ್ಲಿ 400 ಕಿಲೋಮೀಟರ್’ ತುಳಿಯಬೇಕು

ಐದನೇ ಹಂತ : 

  • ಕನಿಷ್ಠ 18 ದಿನಗಳಂದು ತುಳಿಯಬೇಕು
  • 200 ಕಿಲೋಮೀಟರ್’ಗಳ ಒಂದು ರೈಡ್
  • 50 ಕಿಲೋಮೀಟರ್’ಗಳ 4 ರೈಡ್
  •  20 ದಿನಗಳಲ್ಲಿ ಕನಿಷ್ಠ 300 ಕಿಲೋಮೀಟರ್ ತುಳಿಯಬೇಕು
  • 30 ಕಿಲೋಮೀಟರ್’ಗಳ 5 ರೈಡ್
  • ಸತತ 7 ದಿನಗಳಲ್ಲಿ 500 ಕಿಲೋಮೀಟರ್’ ತುಳಿಯಬೇಕು



ಮೇಲೆ ತಿಳಿಸಿದ ವೈಖರಿಯಲ್ಲಿ ನಾವು ತುಳಿದರೆ, ನಾವು ತುಳಿದ ದೂರದ ಆಧಾರದ ಮೇಲೆ ನಮ್ಮ ಅಂಕಗಳು ನಿರ್ಧಾರವಾಗುತ್ತದೆ. ಅದಕ್ಕೆ ತಕ್ಕಂತೆ ಸ್ಪರ್ಧೆಯಲ್ಲಿ ನಮ್ಮ ಸ್ಥಾನವೂ ಕೆಳಗಿನಂತೆ ನಿರ್ಧಾರವಾಗುತ್ತದೆ.

  •  20,000 ಪಾಯಿಂಟ್ – Diamond Finisher
  • 15000 ಪಾಯಿಂಟ್ – Platinum Finisher
  • 10,000 ಪಾಯಿಂಟ್ – Gold Finisher
  • 6,000 ಪಾಯಿಂಟ್ – Silver Finisher
  • 3,000 ಪಾಯಿಂಟ್ – Bronze Finisher
  • 1,5000 ಪಾಯಿಂಟ್ – Iron Finisher

ಈ ಸ್ಪರ್ಧೆಯ ಮೂರನೇ ಆವೃತ್ತಿ 20.11.2021ರಂದು ಪ್ರಾರಂಭವಾಗಿ ಇತ್ತೀಚೆಗೆ 27.02.2022ರಂದು ಮುಗಿಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸುಮಾರು 18,000 ಪಾಯಿಂಟ್ ಗಳಿಸಿ Platinum Finisher ಆಗಿದ್ದು ನನ್ನ ಸೈಕಲ್ ಜೀವನದಲ್ಲೇ ಒಂದು ಮರೆಯಲಾಗದ ಸಾಧನೆ.

ಫೋಟೋ ಕೃಪೆ : bleacherreport

ನಾನು ಸ್ಪರ್ಧೆಯನ್ನು ಪ್ರಾರಂಭಿಸಿದ್ದು ನನ್ನ ಹಳೆಯ ಹೀರೋಜೆಟ್ ಸೈಕಲ್ಲಿನಲ್ಲಿ. ತುಂಬ ದಿನಗಳಿಂದ ಗೇರ್ ಸೈಕಲ್ ಕೊಳ್ಳಬೇಕೆಂಬ ಆಸೆಗೆ ಒಂದು ನೆಪವಾಗಿ ಒದಗಿಬಂದದ್ದು ಈ ಟೂರ್ ಡಿ 100 ಸ್ಪರ್ಧೆ. ಕಳೆದ ಡಿಸೆಂಬರ್ ತಿಂಗಳಲ್ಲಿ 21 ಗೇರುಗಳುಳ್ಳ Firefox Rapide 21S ಎಂಬ ಹೈಬ್ರಿಡ್ ಸೈಕಲ್ ಕೊಂಡ ನಂತರ ನಮ್ಮೂರಿನ ಸುತ್ತ ನಾನು ತುಳಿಯದ ರಸ್ತೆಗಳೇ ಇಲ್ಲ ಎಂಬಂತಾಗಿಹೋಗಿದೆ. ಜೀವನವನ್ನು ಬೇರೆಯೇ ಕೋನದಿಂದ ನೋಡಲು ಕಲಿಸಿದ್ದು ಕೂಡ ಈ ನೂರು ದಿನಗಳ ಪಯಣವೇ.

ಸ್ಪರ್ಧೆಗೆ ನೊಂದಾಯಿಸಿಕೊಳ್ಳುವಾಗ ಅತಿಹೆಚ್ಚು ಅಂದರೆ ಹತ್ತು ಸಾವಿರ ಪಾಯಿಂಟ್ ಪಡೆದು Gold Finisher ಆಗಬಹುದು ಎಂದು ಊಹೆ ಮಾಡಿದ್ದೆ. ಆದರೆ ಸ್ಪರ್ಧೆಯ ಟ್ಯಾಗ್ ಲೈನಿನಂತೆ (#Explore_Your_Limits) ನನ್ನ ಮಿತಿಗಳನ್ನು ಕಂಡುಕೊಂಡು 18 ಸಾವಿರ ಪಾಯಿಂಟ್ ಪಡೆದು Platinum Finisher ಅನ್ನಿಸಿಕೊಂಡೆ. ಈ ಆವೃತ್ತಿಯಲ್ಲಿ ಭಾಗವಹಿಸಿದ್ದು 4178 ಜನ. ಅದರಲ್ಲಿ ನಾನು ಪಡೆದುಕೊಂಡ ಸ್ಥಾನ 212. ಈ ನೂರು ದಿನಗಳಲ್ಲಿ ತುಳಿದ ದೂರ 4,143 ಕಿಲೋಮೀಟರ್’ಗಳು.

ಫೋಟೋ ಕೃಪೆ : reuters

ಅನಿವಾರ್ಯ ಕಾರಣಗಳಿಂದ ಒಂದೇ ಒಂದು ದಿನ ತಪ್ಪಿಸಿದ್ದನ್ನು ಹೊರತುಪಡಿಸಿದರೆ, ಉಳಿದ 99 ದಿನಗಳೂ ಸಮೃದ್ಧವಾಗಿ ಸೈಕಲ್ ಹೊಡೆದಿದ್ದೇನೆ. ಈ ನೂರು ದಿನಗಳಲ್ಲಿ ನನಗೆ ಮನೆಯವರಿಂದ, ಮಕ್ಕಳಿಂದ, ಸ್ನೇಹಿತರಿಂದ ದೊರೆತಿರುವ ಸಹಕಾರ, ಉತ್ತೇಜನ ಅಪಾರವಾದದ್ದು. ನೂರು ದಿನಗಳಲ್ಲಿ ಕನಿಷ್ಠ 50 ದಿನಗಳು ನನ್ನ ಜೊತೆಗೆ ಬಂದು ಉತ್ತೇಜನ ಕೊಟ್ಟಿದ್ದು ಗೆಳೆಯ ಸುಧೀರ್. ನೊಂದಾಯಿಸಿಕೊಂಡಿದ್ದರೆ ಈ ಸ್ಪರ್ಧೆಯಲ್ಲಿ ಖಂಡಿತ Platinum Finisher ಆಗುವ ಸಾಮರ್ಥ್ಯವಿರುವ ಸುಧೀರ್ ಕಾರಣಾಂತರಗಳಿಂದ ಸ್ಪರ್ಧಿಸಲಿಲ್ಲ.



ಈ ನೂರು ದಿನಗಳು ಸ್ಪರ್ಧೆಯಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೆನೆಂದರೆ, ಸ್ಪರ್ಧೆ ಮುಗಿದ ನಂತರ ಸೈಕಲ್ ತುಳಿಯುವುದಕ್ಕೊಂದು ಉದ್ದೇಶವೇ ಇಲ್ಲ ಎನ್ನಿಸಿಬಿಟ್ಟಿತ್ತು. ಇಂತಹ ಸ್ಪರ್ಧೆಗಳು ಹವ್ಯಾಸಿ ಸೈಕಲ್ ಪಟುಗಳಿಗೆ ನಿಜಕ್ಕೂ ಸ್ಫೂರ್ತಿದಾಯಕ.

ಕೆಲವೊಮ್ಮೆ ಪುಟ್ಟ ಪುಟ್ಟ ಸಂಗತಿಗಳೇ ಬದುಕಿಗೆ ಎಲ್ಲಿಲ್ಲದ ಚೈತನ್ಯವನ್ನು, ಜೀವನ ಪ್ರೀತಿಯನ್ನು ತಂದುಕೊಡುತ್ತದೆ. ಮಾತ್ರವಲ್ಲ, ನಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತವೆ.

ನೀವೇನಂತೀರಿ ?


  • ಆರ್. ಪಿ. ರಘೋತ್ತಮ (ಲೇಖಕರು, ಕತೆಗಾರರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW