ಎರಡು ಟಿಕೆಟ್ ಕಳ್ದ್ರೆ ಏನಯ್ಯಾ ಮಾಡ್ತೀಯಾ?…ಅಂತ ಕಂಡಕ್ಟರ್ ಕೇಳಿದಾಗ ಗುಂಡ ಕೊಟ್ಟ ಉತ್ತರ ಏನಿರಬಹುದು ಗೊತ್ತೇ??? ಊಹಿಸಿ…ಅನಂತ ನಾಯಕ ಅವರು ಬರೆದ ಹಾಸ್ಯ ಮಿನಿ ಕತೆ, ಮುಂದೆ ಓದಿ…
ಅಂದು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸಿನಲ್ಲಿ ವಿಪರೀತ ಜನಸಂದಣಿ. ಹೇಗೋ ಹಿಂದಿನ ಸೀಟ್ ನಲ್ಲಿ ಒಂದು ಜಾಗ ಮಾಡಿಕೊಂಡ, ನಮ್ಮೂರ ಗುಂಡ. ನೂಕುನುಗ್ಗಲಿನಲ್ಲಿ ಸಿಕ್ಕಿ ಕೊಂಡಿದ್ದ ಕಂಡಕ್ಟರನ್ನು ಕುರಿತು ಗುಂಡ ಜೋರು ದನಿಯಲ್ಲಿ ಕೂಗುತ್ತಿದ್ದ~ “ರೀ ಕಂಡಕ್ಟರ್ ಎರಡು ಟಿಕೇಟ್ ಕೊಡಿ, ಶಿವಮೊಗ್ಗಕ್ಕೆ”.. ಕಂಡಕ್ಟರ್ ತುಂಬಾ ಬ್ಯುಸಿ ಇದ್ದ ಕಾರಣ, ತಕ್ಷಣ ಕೊಡಲಾಗಲಿಲ್ಲ. ಇವನು ಬಿಡದೇ ನಿರಂತರವಾಗಿ ಕೂಗುತ್ತಿದ್ದು, ಕಂಡಕ್ಟರ್ ಹಲವು ಸಲ ಇವನ ಮೇಲೆ ರೇಗಿದ್ದೂ ಆಗಿತ್ತು. ಅಂತೂ ಕಡೆಗೊಮ್ಮೆ ಗುಂಡನ ಸಮೀಪಕ್ಕೆ ಬರಲು ಸಾಧ್ಯವಾಯಿತು.

“ಎಷ್ಟು ಟಿಕೇಟ್ರೀ”~ ಎಂದು ಕಂಡಕ್ಟರ್ ಕೇಳಲು, ಗುಂಡ “ಎರಡು ಸರ್” ಎಂದು ಹೇಳಿ ಎರಡು ಟಿಕೇಟನ್ನು ಹರಿಸಿದ. “ಇನ್ನೊಬ್ರು ಯಾರ್ರೀ” ಎಂದು ಕಂಡಕ್ಟರ್ ಕೇಳಿದರೆ ~ ಗುಂಡ “ನನಗೇ ಎರಡು ಟಿಕೇಟ್ ಬೇಕು”. ಆಶ್ಚರ್ಯಕರವಾಗಿ ಇವನ ಮುಖ ನೋಡುತ್ತಾ “ಅದ್ಯಾಕಪ್ಪ ಎರಡು?” ಎಂದು ಕೇಳಲು, ಗುಂಡ ಉತ್ತರಿಸಿದ ~ “ಊ, ಅಕಸ್ಮಾತ್ತಾಗಿ ಒಂದು ಟಿಕೇಟ್ ಕಳ್ಕೊಂಬಿಟ್ರೆ, ಅಕಸ್ಮಾತ್ ಚೆಕ್ಕಿಂಗ್ ಬಂದು ಬಿಟ್ರೆ, ಅದಿಕ್ಕೇ ಇನ್ನೊಂದು ಇರ್ಲೀ ಅಂತ..!”.
ಕಂಡಕ್ಟರ್ ಗೆ ಬಹಳ ತಮಾಷೆ ಅನ್ನಿಸ್ತು. ಈ ತರಹ ಗಿರಾಕಿಗಳು ದಿವ್ಸಾ ಒಂದು ಐದು ಸಿಕ್ರೆ~ ನನಗೆ ಒಳ್ಳೆ ವರ್ಕ್ ಔಟ್ ಆಗುತ್ತೆ ಅಂದ್ಕೊಳ್ತಿದ್ದ. ಸ್ವಲ್ಪ ಮುಂದೆ ನಡೆದ ಕಂಡಕ್ಟರ್ ಗೆ ಮತ್ತೆ ತಮಾಷೆ ಮಾಡಬೇಕು ಅನ್ನಿಸ್ತು. ಮತ್ತೆ ಹಿಂದಿರುಗಿ ಬಂದು “ಅಲ್ಲಾ ಸಾರ್, ಅಕಸ್ಮಾತ್ ಎರಡೂ ಟಿಕೇಟ್ ಕಳ್ಕೊಂಡ್ರಿ, ಅಕಸ್ಮಾತ್ ಚೆಕ್ಕಿಂಗ್ ಬಂದು ಬಿಟ್ರು, ಅವಾಗ್ ಏನ್ಮಾಡ್ತೀರಿ” ಎಂದು ಕೇಳಿದ. ಅವಾಗ ಗುಂಡ ಉತ್ತರಿಸಿದ “ಆಹಾ, ನಾನೇನು ದಡ್ಡಾ ನಾ, ಹಂಗಂತ ನನ್ಹತ್ರ ಪಾಸ್ ಕೂಡಾ ಇದೆ ಗೊತ್ತಾ..!”
ಕಂಡಕ್ಟರ್ ತಲೆ ತಿರುಗಿ ಬೀಳಲಿಲ್ಲ ಅಷ್ಟೆ…!
- ಅನಂತ ನಾಯಕ (ಲೇಖಕರು, ಸಾಹಿತಿಗಳು)
