ಶಕ್ತಿ ಸ್ವರೂಪಿಣಿಯಲ್ಲಿ ತುಳಜಾಪುರ ‘ ಅಂಬಾ ಭವಾನಿ’ಯು ಅವತಾರವು ಒಂದು. ತುಳಜಾ ಭವಾನಿ ಇತಿಹಾಸ ಮತ್ತು ದೇವಾಲಯ 51 ಶಕ್ತಿ ಪೀಠಗಳಲ್ಲಿ ತುಳಜಾಪುರವು ಒಂದು ಎಂದು ಹೇಳಲಾಗುತ್ತದೆ. ತುಳಜಾ ಭವಾನಿ ದೇವಿಯ ಅವತಾರದ ಬಗ್ಗೆ ಅನೇಕ ದಂತಕಥೆಗಳಿವೆ. ಪುಣ್ಯಕ್ಷೇತ್ರ ತುಳಜಾಪುರ ದೇವಿಯ ಸನ್ನಿಧಿಯ ಕುರಿತು ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬ್ರಹ್ಮಾಂಡದೊಡತಿಯಾದ ಆದಿಶಕ್ತಿಯು ತಾನೆ ಸೃಷ್ಟಿಸಿದ ಜಗದಲ್ಲಿ ತನ್ನಣತಿಯು ಮೀರಿ ಲೋಕದಿ ಅಧರ್ಮದ ಅಟ್ಟಹಾಸ ಅತಿಯಾದಾಗ ಅಸುರ ಮನವನು ಸಂಹರಿಸಲು, ತನ್ನಯ ಚಿಚ್ಛೇಕ್ತಿಯಿಂದ ಹಲವಾರು ಶಕ್ತಿ ಸ್ವರೂಪಗಳಲ್ಲಿ ಭುವಿ ಮೇಲೆ ಪ್ರಕಟವಾಗಿ ದುರ್ಮುಖಿಗಳ ಸಂಹಾರ ಮಾಡಿದ್ದಾಳೆ. ಅಂತಹ ಶಕ್ತಿ ಸ್ವರೂಪಿಣಿಯಲ್ಲಿ ತುಳಜಾಪುರ ‘ ಅಂಬಾಭವಾನಿ’ಯು ಅವತಾರವು ಒಂದು.
ನನ್ನ ಆರಾಧ್ಯ ದೈವವಾದ ಮಾತೆಯ ಕುರಿತು ನನಗೆ ತಿಳಿದಷ್ಟು ಬರೆಯಲು ನನಗಿಂದು ಅತೀವ ಸಂತಸವಾಗುತ್ತಿದೆ, ತಪ್ಪಿದ್ದಲ್ಲಿ ಕ್ಷಮೆ ಇರಲಿ. ತುಳಜಾ ಭವಾನಿ ಇತಿಹಾಸ ಮತ್ತು ದೇವಾಲಯ 51 ಶಕ್ತಿ ಪೀಠಗಳಲ್ಲಿ ತುಳಜಾಪುರವು ಒಂದು ಎಂದು ಹೇಳಲಾಗುತ್ತದೆ.
ತುಳಜಾ ಭವಾನಿ ದೇವಿಯ ಬಗ್ಗೆ ಹಲವಾರ ದಂತಕಥೆಗಳು ಶ್ರೀ ಸ್ಕಂದ ಪುರಾಣ. ಮಾರ್ಕಂಡೇಯ ಹಾಗು ದೇವಿ ಪುರಾಣದಿಂದ ಬಂದಿವೆ. ತುಳಜಾ ಭವಾನಿ ದೇವಿಯ ಅವತಾರದ ಬಗ್ಗೆ ಅನೇಕ ದಂತಕಥೆಗಳಿವೆ. ಜಗನ್ಮಾತೆಯ ಪರಮ ಆರಾಧಕರಾದ ಕರ್ದಮ ಎಂಬ ಋಷಿಯು ಅಕಾಲಮೃತ್ಯುವಿಗೆ ತುತ್ತಾದಾಗ, ಋಷಿಯ ಮರಣವು ಅವನ ಪತ್ನಿ ‘ಅನುಭೂತಿ’ಗೆ ದೊಡ್ಡ ಜವಾಬ್ದಾರಿಯನ್ನು ತಂದಿತು.ಪತಿ ಮರಣದ ನಂತರ, ಅವನ ಪತ್ನಿ ‘ಅನುಭೂತಿ’ಯು,ತನ್ನ ಮಗುವಿನ ಭವಿಷ್ಯಕ್ಕಾಗಿ, ಭವಾನಿ ಮಾತೆಯೇ ತನ್ನ ಶಿಶುವನ್ನು ನೋಡಿಕೊಳ್ಳಬೇಕೆಂದು ಬೊರಿ ನದಿಯ ದಡದಲ್ಲಿ ತಪಸ್ಸು ಮಾಡಿದಳು. ತಪಸ್ಸು ಮಾಡುವಾಗ ‘ಕುಕುರ್’ ಎಂಬ ರಾಕ್ಷಸ ಅವಳನ್ನು ತೊಂದರೆಗೊಳಿಸಲು ಪ್ರಯತ್ನಿಸಿದಳು. ದೇವಿಯು ತನ್ನ ನಿಷ್ಠಾವಂತ ಭಕ್ತೇ ‘ಅನುಭೂತಿ’ಯ ಸಹಾಯಕ್ಕೆ ಬಂದು ರಾಕ್ಷಸನನ್ನು ಕೊಂದಳು. ಆ ದಿನದಿಂದ, ಭವಾನಿ ದೇವಿಯು ಅನುಭೂತಿಯ ಕೋರಿಕೆಯ ಮೇರೆಗೆ ಯಮುನಾಚಲ ಪರ್ವತದಲ್ಲಿ ( ಈಗಿನ ತುಳಜಾಪುರ )ವಾಸಿಸುತ್ತಿದ್ದಾಳೆ ಎನ್ನಲಾಗಿದೆ.

ತುಳಜಾ ಭವಾನಿಯ ಇನ್ನೊಂದು ದಂತಕಥೆಯ ಪ್ರಕಾರ, ದುರ್ಗಾ ದೇವಿಯು ಚಾಮುಂಡಿ ಬೆಟ್ಟದಲ್ಲಿ ರಾಕ್ಷಸ ಮಹಿಷಾಸುರನನ್ನು ಕೊಂದ ನಂತರ ವಿಶ್ರಾಂತಿ ಪಡೆಯಲು ಯಮುನಾಚಲ ಬೆಟ್ಟಕ್ಕೆ ಬಂದಳು ಎನ್ನಲಾಗುತ್ತದೆ. ತ್ರೇತಾಯುಗದಲ್ಲಿ, ಶ್ರೀ ಭಗವತಿಯು ರಾಮನ ವನವಾಸದ ಸಮಯದಲ್ಲಿ ಕಾಣಿಸಿಕೊಂಡು, ರಾಮನ ತಪಸ್ಸಿನ ನಂತರ ಅವನ ಪತ್ನಿ ಸೀತೆಯು ಶೀಘ್ರದಲ್ಲೇ ಸಿಗಲಿ ಎಂದು ಆಶೀರ್ವದಿಸಿದಳು. ಅಂಬಾ ಭವಾನಿಯ ಮಹಾನ್ ಭಕ್ತನಾಗಿದ್ದ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾತೆಯೇ ಪ್ರತ್ಯಕ್ಷಳಾಗಿ ‘ಖಡ್ಗ’ ನೀಡಿರುವಳೆಂದು ಹೇಳಲಾಗುತ್ತದೆ.
ನಾನು ನನ್ನ ಜೀವನದಲ್ಲಿ ಸ್ವಂತ ಅನುಭವಿಸಿದ ಮಾತೆಯ ಲೀಲೆ ಕುರಿತು ಹೇಳಲೇಬೇಕು, ನಾವು ನಂಬಿದ್ದವರೇ, ನಮ್ಮರೆನಿಸಿಕೊಂಡವರೇ ಹಿತಶತ್ರುಗಳಾದಾಗ, ಯಾರಿಗಾಗಿ ನಾವು ಎಷ್ಟೆಲ್ಲ ಅನವರತ ಕಷ್ಟ ಪಟ್ಟೆವೋ, ಆ ಕೆಲ ಬಂಧು – ಭಾಂದವರೆನಿಸಿಕೊಂಡವರು ನನ್ನನ್ನು ಬೀದಿಗೆ ತರಬೇಕೆಂದು ಅತಿವಿನಯದಿ, ಸಂಚು ಮಾಡಿ, ಹೊಂಚು ಹಾಕಿದ್ದಾಗ, ಅವರ ಕುತಂತ್ರಿತನವನ್ನು ಕ್ಷಣಮಾತ್ರದಿ ದಹಿಸಿದವಳು ಅಂಬಾ ಭವಾನಿ. (ಇದು ಕಟ್ಟು ಕತೆಯಲ್ಲ ಬಾಳಲ್ಲಿ ನಡೆದ ದುರಂತ ಘಟನೆಗೆ ಮಾತೆಯ ಶುಭ ಸಮಾಪ್ತಿ. )
ಆಧ್ಯಾತ್ಮಿಕ ಭಾರತದಲ್ಲಿ, ದೇವಿಯ ಆದಿಶಕ್ತಿಯ ಸ್ಥಾನಗಳು :
1. ಶ್ರೀ ಮಹಾ ಕಾಳಿ, ಕೋಲ್ಕತ್ತಾ ತನ್ನ ‘ತಮೋ ಗುಣ’ಕ್ಕೆ ಹೆಸರುವಾಸಿಯಾಗಿದೆ.
2. ಶ್ರೀ ಮಹಾ ಲಕ್ಷ್ಮಿ, ಕೊಲ್ಹಾಪುರ ತನ್ನ ‘ರಜೋ ಗುಣ’ಕ್ಕೆ ಹೆಸರುವಾಸಿಯಾಗಿದೆ.
3. ಶ್ರೀ ಮಹಾ ಸರಸ್ವತಿ, ಮಾಹುರ್ ತನ್ನ ‘ಸತ್ವ ಗುಣ’ಕ್ಕೆ ಹೆಸರುವಾಸಿಯಾಗಿದೆ.
ತುಳಜಾ ಭವಾನಿ ದೇವಿಯು ತ್ರಿಗುಣಾತ್ಮಕ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾಳೆ, ಅಂದರೆ, ಮೇಲಿನ ಮೂರು (ತಮೋ, ರಜೋ ಮತ್ತು ಸತ್ತ್ವ) ಗುಣದ ಸ್ಥಾನದಲ್ಲಿ. ಮಹಾರಾಷ್ಟ್ರವು ಪ್ರಾಚೀನ ದಂಡಕಾರಣ್ಯ ಪ್ರದೇಶದ ಅಡಿಯಲ್ಲಿ ಬರುತ್ತದೆ. ತುಳಜಾಪುರ ದೇವಾಲಯವು ಯಮುನಾಚಲ ಪರ್ವತ ಅಂದ್ರೆ ಬಾಲಘಾಟ್ ಪರ್ವತದ ಗುಡ್ಡಗಾಡು ಪ್ರದೇಶದಲ್ಲಿದೆ. ದೇವಿಯ ವಿಗ್ರಹವು ಸ್ವಯಂಭು ಮೂರ್ತಿ (ಸ್ವಯಂ-ವ್ಯಕ್ತವಾದ ವಿಗ್ರಹ) ಆಗಿದ್ದು, ಇದು ಸಾಲಿಗ್ರಾಮದಿಂದ (ನಾಶವಾಗದ ಕಲ್ಲು) ಮಾಡಲ್ಪಟ್ಟಿದೆ. 8 ನೇ ಶತಮಾನದ ಮಧ್ಯಭಾಗದಲ್ಲಿ ಆದಿ ಶಂಕರಾಚಾರ್ಯರು ಶ್ರೀಯಂತ್ರದ ಮೇಲೆ ವಿಗ್ರಹದ ಪ್ರತಿಷ್ಠಾಪನೆಯನ್ನು ಮಾಡಿದರು.
ಇತರ ದೇವಾಲಯಗಳಿಗೆ ಹೋಲಿಸಿದರೆ ದೇವಿಯ ವಿಗ್ರಹದ ಪ್ರತಿಷ್ಠಾಪನೆಯು ಸ್ಥಿರವಾಗಿರದೆ ಕ್ರಿಯಾತ್ಮಕವಾಗಿದೆ. ಕ್ರಿಯಾತ್ಮಕ ವಿಗ್ರಹ ಎಂದರೆ ವರ್ಷದಲ್ಲಿ ಮೂರು ಬಾರಿ ಪ್ರದಕ್ಷಿಣೆಗಾಗಿ ವಿಗ್ರಹವನ್ನು ಶ್ರೀಯಂತ್ರದಿಂದ ಹೊರತೆಗೆಯಲಾಗುತ್ತದೆ, ಕಾರಣ ಮಾತೆಯು ವರ್ಷದಲ್ಲಿ ಮೂರು ಬಾರಿ, ವಿಶ್ರಾಂತಿ ಪಡೆಯಲು ಶಯನಗೃಹಕ್ಕೆ ತೆರಳಿ ನಿದ್ರಾವಸ್ಥೆಗೆ ಜಾರುವಳು.ಮತ್ತು ಶ್ರೀಯಂತ್ರ, ಮಹಾದೇವ ಮತ್ತು ಖಂಡೇರಾವ್‌ಗಳೊಂದಿಗೆ ಪ್ರದಕ್ಷಿಣೆ ಮಾಡಲಾಗುತ್ತದೆ.

ಮುಖ್ಯವಾಗಿ ಮಹಾಲಯ ಅಮವಾಸೆ ಮರು ದಿನ,ಅಂದ್ರೆ ನವರಾತ್ರಿ ಉತ್ಸವ ಪ್ರಾರಂಭದ ದಿನದಂದು ಭವಾನಿಯು ಶಯನ ಗೃಹಕ್ಕೆ ತೆರಳಿ ನಿದ್ರಿಸುವಳು. ಈ ಸಮಯದಲ್ಲಿ ಜನಸಂದಣಿ ವಿಪರೀತವಾಗಿರುವದು ಆದ್ರೆ ಮಾತೆಯ ದರ್ಶನ ಶಯನಾವಸ್ಥೆಯಲ್ಲಿ ಆಗುವದು, ಮಾತೇಯು ಸೀಗೆ ಹುಣ್ಣಿಮೆಯ ದಿನ ಬ್ರಾಹ್ಮಿಎದ್ದು ಗರ್ಭಗುಡಿಯ ಮೂಲ ಶ್ರೀಯಂತ್ರದಿ ವಿರಾಜಮಾನಳಾಗುವಳು. ಆ ಅಂಬಾಭವಾನಿಯ ಜಾತ್ರಾ ಮಹೋತ್ಸವವು, ಬಹಳ ವಿಜೃಂಭಣೆಯಿಂದ ನಡೆಯುವದು. ಹುಣ್ಣಿಮೆ ಹಿಂದಿನ ದಿನ ಸಾಯಂಕಾಲ, ಸೊಲ್ಲಾಪುರದಲ್ಲಿ ಇರುವ ಮಾತೆಯ ಪ್ರತಿರೂಪವಾದ, ‘ರೂಪಾಭವಾನಿ’ಮಂದಿರದಿಂದ ಲಕ್ಷಾಂತರ ಭಕ್ತಾದಿಗಳು ಪಾದಯಾತ್ರೆ ಕೈಗೊಂಡು, ಬೆಳಗ್ಗೆ ಅಂಬೆಯ ಸನ್ನಿಗೆ ಆಗಮಿಸಿ ದರ್ಶನ ಭಾಗ್ಯವ ಪಡೆಯುವರು. ಆ ದಿನ ಸೊಲ್ಲಾಪುರದಿಂದ, ತುಳಜಾಪುರದ ವರೆಗೂ, ಪ್ರಸಾದ ವ್ಯವಸ್ಥೆ ಇರುವದು.ಯಾವುದೇ ಆಹಾರ ತರುವ ಅವಶ್ಯಕತೆ ಭಕ್ತರಿಗೆ ಇರುವದಿಲ್ಲ. (ಆದ್ರೆ ದಯವಿಟ್ಟು ಯಾರು ಮತ್ತಿನಲ್ಲಿ ಬರಬೇಡಿ, ಬಂದು ಮಾತೆಯ ಕೋಪಕ್ಕೆ ಗುರಿಯಾಗಬೇಡಿ )
ತುಳಜಾ ಭವಾನಿ ದೇವಾಲಯವು ಮಹಾರಾಷ್ಟ್ರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಅನೇಕ ಆಡಳಿತಗಾರರು ಮತ್ತು ಅವರ ವಾಸ್ತುಶಿಲ್ಪ ಶೈಲಿಗೆ ಸಾಕ್ಷಿಯಾಗಿದೆ, ಉದಾಹರಣೆಗೆ 12-13 ನೇ ಶತಮಾನದಲ್ಲಿ ಯಾದವ ಸಾಮ್ರಾಜ್ಯವು ಅದರ ಹೇಮದ್ಪಂತಿ ಶೈಲಿಯ ವಾಸ್ತುಶಿಲ್ಪದೊಂದಿಗೆ, ಮತ್ತು 17 ನೇ ಶತಮಾನದ ಕೊನೆಯಲ್ಲಿ ಮತ್ತು 18 ನೇ ಶತಮಾನದ ಆರಂಭದಲ್ಲಿ ಮರಾಠಾ ಸಾಮ್ರಾಜ್ಯವು ಅದರ ಮರಾಠಾ ಶೈಲಿಯ ವಾಸ್ತುಶಿಲ್ಪದೊಂದಿಗೆ. ಮತ್ತು ನಂತರ, ಈ ಪ್ರದೇಶವನ್ನು ಹೈದರಾಬಾದ್‌ನ ನಿಜಾಮರು ಆಳಿದರು, ಅವರು ಡೆಕ್ಕನ್ ಶೈಲಿಯ ವಾಸ್ತುಶಿಲ್ಪವನ್ನು ಖರೀದಿಸಿದರು. ದೇವಾಲಯದ ಮುಖ್ಯ ದ್ವಾರವನ್ನು ಡೆಕ್ಕನ್ ಮತ್ತು ಮರಾಠಾ ಶೈಲಿಯ ವಾಸ್ತುಶಿಲ್ಪದ ಮಿಶ್ರಣದಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ಅಲಂಕರಿಸಲಾಗಿದೆ, ಇದನ್ನು ಹೈದರಾಬಾದ್‌ನ ನಿಜಾಮನ ಆಡಳಿತಗಾರ ಸರ್ದಾರ್ ನಿಂಬಾಳ್ಕರ್ ನಿರ್ಮಿಸಿದ್ದಾರೆ. ದೇವಾಲಯದ ಇತರ ಎರಡು ಪ್ರವೇಶದ್ವಾರಗಳಿಗೆ ಮರಾಠಾ ದೊರೆ, ರಾಜ ರಾಜ ಶಹಾಜಿ ಮತ್ತು ರಾಣಿ ರಾಜಮಾತಾ ಜಿಜೌ, ಅವರ ಹೆಸರನ್ನು ಇಡಲಾಗಿದೆ, ಅವರು ಛತ್ರಪತಿ ಶಿವಾಜಿ ಮಹಾರಾಜರ ಪೋಷಕರಾಗಿದ್ದರು, ಅವರು ಸಹ ಅವುಗಳನ್ನು ನಿರ್ಮಿಸಿದರು. ಈ ದೇವಾಲಯವನ್ನು ಯಾದವ ರಾಜವಂಶವು ಹೇಮದ್ಪಂತಿ ಶೈಲಿಯ ವಾಸ್ತುಶಿಲ್ಪದೊಂದಿಗೆ ನಿರ್ಮಿಸಿದೆ.ಭರತ ಭುವಿಯ ಸುಜನರು ಒಮ್ಮೆಯಾದರು ಬೇಟಿ ನೀಡಲೇ ಬೇಕಾದ ಪುಣ್ಯಕ್ಷೇತ್ರ ತುಳಜಾಪುರ.

ತಲುಪುವುದು ಹೇಗೆ ?
ನಮ್ಮ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ವಿಜಯಪುರ – ಮತ್ತು ಕಲ್ಬುರ್ಗಿಗೆ ಬಸ್ಸುಗಳ ವ್ಯವಸ್ಥೆ ಇದೆ, ಇಲ್ಲಿಂದ ತುಳಜಾಪುರ ಹತ್ತಿರ ಇನ್ನು, ಉತ್ತರ ಕರ್ನಾಟಕದ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ತುಳಜಾಪುರಕ್ಕೆ ನೇರ ಬಸ್ಸಿನ ಸೌಕರ್ಯವಿದೆ ಮತ್ತು ವಿಮಾನದ ಮೂಲಕ ಬರುವದಾದರೆ
- ವಿಮಾನ
ಸೋಲಾಪುರ ನಿಲ್ದಾಣ 44 ಕಿಮೀ, ಔರಂಗಾಬಾದ್ ವಿಮಾನ ನಿಲ್ದಾಣ 288 ಕಿಮೀ ಮತ್ತು ಪುಣೆ ವಿಮಾನ ನಿಲ್ದಾಣ 296 ಕಿಮೀ. - ರೈಲು
ಸೋಲಾಪುರ ರೈಲು ನಿಲ್ದಾಣ 45 ಕಿ.ಮೀ. - ರಸ್ತೆ
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ ನಿಗಮವು ತುಳಜಾಪುರ ಪಟ್ಟಣ ಮತ್ತು ಮಹಾರಾಷ್ಟ್ರದ ಇತರ ನಗರಗಳ ನಡುವೆ ಉತ್ತಮ ಸಂಪರ್ಕ ಹೊಂದಿದೆ. ಬನ್ನಿರಿ ಮಾತೆಯ ದರ್ಶನ ಮಾಡಿ ಕೃಪೆಗೆ ಪಾತ್ರರಾಗಿ.
- ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.
