ಉಡತಡಿಯಿಂದ ಕದಳಿಯವರೆಗೆ..

ಉಡತಡಿಗೆ ಅಕ್ಕಮಹಾದೇವಿಯ ಜನ್ಮಸ್ಥಳದಲ್ಲಿ ಕಾಲಿಡುವುದು ಪ್ರತಿ ಬಾರಿಯೂ ಒಂದು ಅನನ್ಯ ಅನುಭವ. ಶಿಕಾರಿಪುರದ ಮಾರ್ಗದಲ್ಲೇ ರಸ್ತೆಯ ಪಕ್ಕಕ್ಕೆ ಈ ದೇಗುಲ ಇದ್ದು ಮೂರ್ತಿಯೂ ದೂರದಿಂದ ಗೋಚರಿಸುತ್ತದೆ. ನೂತನ ದೋಶೆಟ್ಟಿ ಅವರ ಉಡತಡಿಗೆ ಕುರಿತಾದ ಪ್ರವಾಸದ ಅನುಭವವನ್ನು ತಪ್ಪದೆ ಮುಂದೆ ಓದಿ….

ಸಂಬಂಧಿಗಳ ಮನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಿರಾಳಕೊಪ್ಪಕ್ಕೆ ಹೋಗಿದ್ದೆ. ಅಲ್ಲಿಂದ ರಾತ್ರಿ ಬೆಂಗ್ಳೂರಿಗೆ ಹೊರಡುವ ಮೊದಲು ಸ್ವಲ್ಪ ಸಮಯ ಸಿಕ್ಕಿತು. ಆಗ ಅಲ್ಲಿಂದ ಕೇವಲ 6-7 ಕಿ.ಮೀ. ದೂರದಲ್ಲಿರುವ ಉಡತಡಿಗೆ ಹೋದೆ. ಅಕ್ಕಮಹಾದೇವಿಯ ಜನ್ಮಸ್ಥಳದಲ್ಲಿ ಕಾಲಿಡುವುದು ಪ್ರತಿ ಬಾರಿಯೂ ಒಂದು ಅನನ್ಯ ಅನುಭವ. ಅದು ಮುಸ್ಸಂಜೆಯ ಸಮಯವಾದ್ದರಿಂದ ಅಕ್ಕನ ದೇಗುಲದ ಆವರಣ ವಿಶೇಷ ಕಳೆಗಟ್ಟಿತ್ತು. ಅವಳೆದುರು ಕೂತು ನನ್ನ ನೆಚ್ಚಿನ ಬೆಟ್ಟದ ಮೇಲೊಂದು ಮನೆಯ ಮಾಡಿ ವಚನದಿಂದ ಆರಂಭಿಸಿ ಕೆಲ ವಚನಗಳನ್ನು ಮನಃಪೂರ್ವಕ ಹಾಡಿಕೊಂಡು ಹೊರಡುವಾಗ ಅಕ್ಕ ಇಲ್ಲಿಂದ ನಿನ್ನ ಗಮ್ಯ ಸ್ಥಾನಕ್ಕೆ ಬರುತ್ತೇನೆ ಎಂದುಕೊಂಡು ಹೊರಟೆ. ಮನದಲ್ಲಿ ಅವರ್ಣನಿಯ ಸಮಾಧಾನ ಮನೆ ಮಾಡಿತ್ತು.

ಅಕ್ಕನ ದೇಗುಲದ ಹೊರ ಆವರಣ ಈಗ ವಿಸ್ತಾರವಾಗಿದ್ದು ಅಲ್ಲಿ ಅಕ್ಕನ ಬೃಹತ್ ಪುತ್ಥ್ ಳಿಯ ನಿರ್ಮಾಣವಾಗಿದೆ. ಅದರಲ್ಲಿ ಅಕ್ಕನ ಸೌಂದರ್ಯ, ಭಕ್ತಿಭಾವ, ನಿರ್ಮಲತೆ ಎಲ್ಲವುಗಳ ಹದವಾದ ಮಿಳಿತವಿದೆ. ಎಡಗೈಯಲ್ಲಿ ಆತ್ಮಲಿಂಗವನ್ನು ಹಿಡಿದು, ಬಲಗೈಯಲ್ಲಿ ಧ್ಯಾನಮುದ್ರೆ ಹಾಕಿರುವ ಅಕ್ಕನ ಅರ್ಧ ನಿಮಿಲಿತ ನೇತೃಗಳು ನಮ್ಮನ್ನು ಆವರಿಸಿಕೊಂಡು ಬಿಡುತ್ತವೆ. ಎತ್ತರದಲ್ಲಿ ನಿರ್ಮಿಸಲಾಗಿರುವ ಈ ಮೂರ್ತಿಯ ಕೆಳಭಾಗದಲ್ಲಿ ಸುತ್ತಾವರಿಸಿದಂತೆ ಕಣಿವೆಯ ನಿರ್ಮಾಣವಾಗಿದ್ದು ಅದರಲ್ಲಿ ನೀರು ಹರಿಸಿ ದೋಣಿ ವಿಹಾರವನ್ನು ಯೋಜಿಸಲಾಗಿದೆ. ಅದರಲ್ಲಿ ಸಾಗುತ್ತಾ ಅಲ್ಲಲ್ಲಿ ಸಿಗುವ ವಚನಕಾರರ ಮೂರ್ತಿಗಳನ್ನು ನೋಡುತ್ತಾ ಹೋಗಬಹುದು. ಕೆಲಸ ನಿಧನ ಗತಿಯಲ್ಲಿ ನಡೆಯುತ್ತಿದ್ದು ಇನ್ನೂ ಆಗಬೇಕಾದ ಕೆಲಸ ಬಹಳಷ್ಟಿದೆ. ಎಲ್ಲ ಕೆಲಸಗಳು ಮುಗಿದ ಮೇಲೆ ಇದೊಂದು ಪ್ರವಾಸ ಕೇಂದ್ರವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಶಿಕಾರಿಪುರದ ಮಾರ್ಗದಲ್ಲೇ ರಸ್ತೆಯ ಪಕ್ಕಕ್ಕೆ ಈ ದೇಗುಲ ಇದ್ದು ಮೂರ್ತಿಯೂ ದೂರದಿಂದ ಗೋಚರಿಸುತ್ತದೆ.

ಅಕ್ಕನ ಮಾರ್ಗದರ್ಶನ ಎಂದೆಂದೂ ಅವಶ್ಯ. ಅವಳ ಚಿಂತನೆಗಳು ಇಂದಿನ ಅತ್ಯಂತ ವಿದ್ಯಾವಂತ ಮಹಿಳೆಯರನ್ನು ಮೀರಿಸುವಂತವು. ಇಂಥ ಅಕ್ಕನ ದೇಗುಲದ ಅಭಿವೃದ್ಧಿಗೆ ಮಾಜಿ ಮಂತ್ರಿಗಳಾಗಿದ್ದ ಲೀಲಾದೇವಿ ಪ್ರಸಾದ ಅವರ ಪರಿಶ್ರಮ ಬಹಳವಾಗಿದೆ. ಈ ವಾರ ಸಾಲು ರಜೆಗಳು ಬಂದು ಶ್ರೀಶೈಲದ ಪ್ರವಾಸ ನಿರ್ಧಾರವಾಯಿತು. ಬುಧವಾರ ಕಛೇರಿ ಮುಗಿಸಿ ನಮ್ಮ ಕುಟುಂಬ ಶ್ರೀ ಶೈಲದ ಪ್ರಯಾಣಕ್ಕೆ ಹೊರಟಿತು.

ಗುರುವಾರ ಬೆಳಿಗ್ಗೆ 10 ಗಂಟೆಗೆ ಅಕ್ಕ ತಪಸ್ಸು ಮಾಡಿದ್ದ ಗುಹೆಗಳತ್ತ ನಮ್ಮ ಪಯಣ. ನಾವು ಇಳಿದುಕೊಂಡಿರುವ ಹೋಟೆಲ್ಲಿನ ಸಮೀಪದಲ್ಲಿ ಪಾತಾಳಗಂಗೆ ಎಂದು ಕರೆಯಲಾಗುವ ಸ್ಥಳಕ್ಕೆ ಕರೆದೊಯ್ಯುವ ರೋಪ್ ವೇ ಇದೆ. ಒಬ್ಬರಿಗೆ 80 ರೂಪಾಯಿ ಪಾವತಿಸಿ ಅದರಲ್ಲಿ ಕುಳಿತು ಕೃಷ್ಣಾ ನದಿಯ ತೀರದ ತಳಭಾಗ ತಲುಪಿ ಅಲ್ಲಿಂದ ಮತ್ತೆ ಒಬ್ಬರಿಗೆ 650 ರುಪಾಯಿ ಪಾವತಿಸಿ ಅಕ್ಕನ ಗುಹೆಗೆ ದೋಣಿಯಲ್ಲಿ ಪಯಣಿಸಿದೆವು. ಸುಮಾರು ಒಂದು ತಾಸು ಸಾಗುವ ಈ ದೋಣಿಯ ಪಯಣದಲ್ಲಿ ನಾನು ಅಕ್ಕನ ಪಯಣದ ಬಗ್ಗೆಯೇ ಯೋಚಿಸುತ್ತಿದ್ದೆ. ಉಡತಡಿಯಿಂದ ಹೊರಟ ಅಕ್ಕ ಕದಳಿಯವರೆಗೆ ನಡೆದು ಬರುವ ತನಕ ಅವಳ ಬದುಕಿನಲ್ಲಿ ಎದುರಿಸಿದ ಸಂಕಷ್ಟಗಳು, ಅವನ್ನು ಅವಳು ಎದುರಿಸಿದ ಬಗೆ ಎಲ್ಲ ಕಾಲದಲ್ಲೂ ಎಲ್ಲ ಮಹಿಳೆಯರಿಗೂ ಮಾರ್ಗದರ್ಶಕ ಸ್ಫೂರ್ತಿ.

ಇಂದು ಅಂಥ ಅಕ್ಕ ನೆಲೆಸಿದ ಸ್ಥಳಕ್ಕೆ ಬಂದಿಳಿದಾಗ ಮಾತು ಹೊರಡದಾಗಿತ್ತು. ಕೃಷ್ಣೆಯ ಒಡಲ ಮೇಲೆ ತೇಲಿ ಬರುವಾಗ ಸುತ್ತಲೂ ಪೂರ್ವ ಘಟ್ಟದ ನಲ್ಲಮಲ್ಲ ಬೆಟ್ಟಗಳ ಕೋಟೆಯ ಆವರಣವಿರುತ್ತದೆ. ಈಗ 36-40 ಡಿಗ್ರಿ ಕಾದ ಬಿಸಿಲ ಹೊಡೆತಕ್ಕೆ ಒಣಗಿ ನಿಂತಿದ್ದರೂ ಈ ಕಾಡಿಗೆ ಅದರದ್ದೇ ಆದ ಸೌಂದರ್ಯವಿದೆ.

ತೀರದಲ್ಲಿ ಇಳಿದು ಸುಮಾರು 100 ಮೆಟ್ಟಿಲುಗಳನ್ನು ಏರಿ 1-1.50 ಕೀ.ಮೀ ದೂರದ ಗುಹೆಯ ಮುಂಭಾಗಕ್ಕೆ ಬಂದು ನಿಂತಾಗ ಅಲ್ಲಿ ಪ್ರಕೃತಿಯ ಇನ್ನೊಂದು ಅಚ್ಚರಿ ಕಾದಿರುತ್ತದೆ. ಇಲ್ಲಿ ನೀರಿನ ಹರಿತದಿಂದ ನಿರ್ಮಿತವಾಗಿರುವ ಈ ಗುಹೆ ಸುಮಾರು 1.5 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಗುಹೆಯ ಮುಂಭಾಗಕ್ಕೆ ಸುಮಾರು 220 ಅಡಿ ಅಗಲದ ಕಲ್ಲಿನ ತೋರಣ ನಿರ್ಮಾಣವಾಗಿದೆ. ಎದುರಲ್ಲಿ ಅಕ್ಕನ ಕುಳಿತಿರುವ ಮೂರ್ತಿಯಿದೆ. ಅದರ ಹಿಂಭಾಗದಲ್ಲಿ ಗುಹೆಯ ಮುಖ್ಯ ದ್ವಾರವಿದ್ದು ಅದರ ಒಳಗೆ ಸುಮಾರು 70 ಅಡಿ ನಡೆದು ಹೋಗಬೇಕು. ಮೊದಲ 40 ಅಡಿಗಳು ವಗಳ ವಿಸ್ತಾರ ಹಾಗೂ ಎತ್ತರವಾಗಿದ್ದು ನಂತರದ 30 ಅಡಿಗಳನ್ನು ಬೆನ್ನು ಬಾಗಿಸಿ ಮೆಲ್ಲಗೆ ಹೋಗಬೇಕು. ಇಲ್ಲಿ ಒಂದು ಬಾರಿಗೆ 2-3 ಮಂದಿ ಮಾತ್ರ ಹೋಗಬಹುದು. ಅಲ್ಲಿಂದ ಮುಂದಿನ 10 ಅಡಿ ಅತ್ಯಂತ ಕಿರಿದಾಗಿದ್ದು ಇದರಲ್ಲಿ ದಪ್ಪ ದೇಹದವರು ದಾಟಲಾರರು. ಅದರ ಕೊನೆಯ ತುದಿಯಲ್ಲಿ ಲಿಂಗರೂಪಿ ಶಿವ ಸ್ವರೂಪವಿದೆ. ಅದನ್ನು ಮುಟ್ಟಿ ಬಂದಂತೆಯೇ ಹಿಂದಿರುಗಬೇಕು.

ಗುಹೆಯ ಆಕೃತಿ ಇಂದಿಗೂ ಸುವ್ಯವಸ್ಥಿತವಾಗಿದೆ. ಆದರೆ ಒಳಗೆ ಬಾವಲಿಗಳ ಘಾಟು ವಾಸನೆ ಉಸಿರಾಟಕ್ಕೆ ತೊಂದರೆಯಾಗುವಷ್ಟು ದಟ್ಟವಾಗಿದೆ. ಕಾಲ ಕೆಳಗೆ ಕಪ್ಪು ಹುಡಿ ಮಣ್ಣಿನ ಧೂಳು. ಇಲ್ಲಿ ಧ್ಯಾನಸ್ಥಲಾಗಿದ್ದ ಅಕ್ಕ ಹುಲಿ, ಕರಡಿ, ಹಾವುಗಳು ಈಗಲೂ ಹೇರಳವಾಗಿರುವ i ಜಾಗದಲ್ಲಿ ಹೇಗಿದ್ದಿರಬಹುದು?!! ಇಲ್ಲಿನ ಎದುರಿನ ಗುಡ್ಡದ ಮದ್ಯದಲ್ಲಿ ಕಾಣುವ ಗುಹೆಯನ್ನು ದಾಟಿ ಕದಳಿವನಕ್ಕೆ ಹೇಗೆ ಹೀಗಿರಬಹುದು?!! ಅವಳ ಶಕ್ತಿ,ಸ್ಥೈರ್ಯ, ಭಕ್ತಿ, ಅವಳೊಂದು ಸೋಜಿಗವೇ ಸರಿ. ಬೆಟ್ಟದ ಮೇಲೊಂದು..ವಚನ ಅವಳು ಎಲ್ಲಿ ಬರೆದಳೋ ಗೊತ್ತಿಲ್ಲ. ಆದರೆ ಇಲ್ಲಿ ಬರೆದರೂ ಬರೆದಿರಬಹುದು ಎಂದು ಈ ಸ್ಥಳದಲ್ಲಿ ನಿಂತಾಗ ಅನ್ನಿಸದೆ ಇರದು. ಇಂಥ ಕಠಿಣ ಬದುಕನ್ನು ಬದುಕಿಯೂ ಪ್ರಕ್ರತಿಪೂರಕವಾದ, ಮಾರ್ದವವಾದ, ಅತ್ಯಂತ ಪ್ರೇಮಪೂರ್ವಕ ವಚನಗಳನ್ನು ಅಕ್ಕ ಬರೆದಳಲ್ಲ!! ನಿನಗೆ ನೀನೇ ಸಾಟಿ ಅಕ್ಕ.

ಕಳೆದ 24 ವರ್ಷಗಳಿಂದ ಇಲ್ಲಿ ವಾಸವಾಗಿರುವ ಕಲಬುರ್ಗಿಯ ಗೌರಮ್ಮ ಅಕ್ಕನಿಂದ ಪ್ರೇರಿತರು ಎನ್ನುತ್ತಾರೆ. ನಾವು ಅಲ್ಲಿರುವಾಗಲೇ ಎದುರಿನ ಪುಟ್ಟ ಗುಹೆಯಲ್ಲಿ ದಪ್ಪ ಹಾವೊಂದು ಮಲಗಿತ್ತು. ಅಕ್ಕ, ಗೌರಮ್ಮ, ದೋಣಿಯ ಚಾಲಕ, ಗುಹೆ… ಎಲ್ಲವೂ ಒಂದೊಂದು ಅಚ್ಚರಿ.


  • ನೂತನ ದೋಶೆಟ್ಟಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW