ಹಿರಿಯ ಪತ್ರಕರ್ತರೂ, ನಿವೃತ್ತ ಉಪನ್ಯಾಸಕರೂ, ಚಿಂತಕರೂ ಆಗಿರುವ ಶ್ರೀಯುತ ಅರುಣಕುಮಾರ ಹಬ್ಬು ಅವರ ಇತ್ತೀಚಿನ ಕೃತಿ ‘ಚಾಣಕ್ಯ ನೀತಿ’ಯನ್ನು ಓದಿ ಮುಗಿಸಿದಾಗ ಇದೊಂದು ವಿಶಿಷ್ಟ ಹಾಗೂ ವಿಶೇಷ ಪುಸ್ತಕ ಎನ್ನಿಸಿತು. ಕೃತಿ ಕುರಿತು ಪ್ರೊ. ನಾಗ ಎಚ್. ಹುಬ್ಳಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…..
ಪುಸ್ತಕ :ಚಾಣಕ್ಯ ನೀತಿ
ಲೇಖಕರು : ಅರುಣಕುಮಾರ ಹಬ್ಬು
ಚಾಣಕ್ಯ ಹಾಗೂ ಚಾಣಕ್ಯ ನೀತಿಯನ್ನು ಕುರಿತಾಗಿ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಲವಾರು ಕೃತಿಗಳು ಪ್ರಕಟವಾಗಿವೆ. ಆದರೆ ಹಬ್ಬು ಅವರ ಈ ಕೃತಿಯಲ್ಲಿನ ಟಿಪ್ಪಣಿಗಳು ತುಂಬಾ ಸರಳವಾಗಿವೆ, ವಿಭಿನ್ನವಾಗಿವೆ ಮತ್ತು ಗಮನೀಯವಾಗಿವೆ.
ಕ್ರಿಸ್ತ ಪೂರ್ವ ನಾಲ್ಕನೇ ಶತಮಾನದಲ್ಲಿ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಅಧ್ಯಾಪಕನಾಗಿದ್ದ ಮತ್ತು ರಾಜಕೀಯ ಮುತ್ಸದ್ದಿಯಾಗಿದ್ದ ಚಾಣಕ್ಯನು ರೂಪಿಸಿದ ನೀತಿಗಳು ಆತ ಬರೆದ ಅರ್ಥಶಾಸ್ತ್ರದಷ್ಟೇ ವಿಶ್ವವಿಖ್ಯಾತ. ಈತನ ನೀತಿಗಳು ಸಾರ್ಥಕ ಬದುಕಿನ ಗುಟ್ಟನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತವೆ. ಇವು ಕೇವಲ ಸಿದ್ಧಾಂತಗಳಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವಗಳು.
ಚಾಣಕ್ಯನ ನೀತಿಗಳು ಒಂದರ್ಥದಲ್ಲಿ ಜೀವನ ದರ್ಶನ. ಇಂದಿಗೂ ಜೀವನದ ಮಾರ್ಗದರ್ಶಿ. ಇವು ಆತನ ಇಡೀ ಜೀವನದ ಸಾಧನೆಯ ಅನುಭವದ ಸಾರ. ಅನೇಕ ಪ್ರಯೋಗಗಳನ್ನು ಮಾಡಿ, ಹತ್ತು ಹಲವಾರು ವೈಫಲ್ಯಗಳನ್ನು ಅನುಭವಿಸಿ, ಅವುಗಳ ಮೂಲಕ ಕಲಿತ ಪಾಠಗಳ ಫಲವೇ ಈ ನೀತಿಗಳು. ಹಾಗಾಗಿಯೇ ಇವುಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ.

ಜೀವನದ ಪ್ರತಿ ಕ್ಷಣವನ್ನೂ ಕೂಲಂಕಷವಾಗಿ ವಿಮರ್ಶೆ ಮಾಡಿ, ಅವುಗಳ ಸಾಧಕ-ಬಾಧಕಗಳನ್ನು ಅವಲೋಕಿಸಿ, ಜನರ ನಡವಳಿಕೆ ಹೀಗೆಯೇ ಇರಬೇಕೆಂದು ಚಾಣಕ್ಯ ಹೇಳಿದ್ದಾನೆ. ಮಹಿಳೆ, ಆರೋಗ್ಯ, ಹಣಕಾಸು, ಸಾಮಾಜಿಕ ನಡವಳಿಕೆ, ಧರ್ಮ, ನೀತಿ, ನೈತಿಕತೆ ಇತ್ಯಾದಿ ಹಲವಾರು ಅಂಶಗಳನ್ನು ಅಧ್ಯಯನ ಮಾಡಿ, ವಿವಿಧ ಧರ್ಮಶಾಸ್ತ್ರಗಳನ್ನು ಓದಿ, ಅರಗಿಸಿಕೊಂಡು ಬರೆದ ಮಾರ್ಗದರ್ಶಿ ನುಡಿಗಳೇ ಈ ‘ಚಾಣಕ್ಯ ನೀತಿ.’
ಅರುಣಕುಮಾರ ಹಬ್ಬು ಅವರು ಸಂಸ್ಕ್ರತದಲ್ಲಿರುವ ಚಾಣಕ್ಯ ನೀತಿಯನ್ನು ಸೋಸಿ, ವರ್ತಮಾನಕ್ಕೆ ಪ್ರಸ್ತುತವಾದ ಸಾಲುಗಳನ್ನಷ್ಟೇ ಆಯ್ಕೆ ಮಾಡಿ, ಚೌಪದಿಯ ರೂಪದಲ್ಲಿ ಅವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮತ್ತು ಅವುಗಳಿಗೆ ಸರಳ ಭಾಷೆಯಲ್ಲಿ ಸೂಕ್ತ ಉದಾಹರಣೆಗಳ ಸಮೇತ ವಿವರಗಳನ್ನು ನೀಡಿದ್ದಾರೆ.
ಅರ್ಥ ಮಾಡಿಕೊಳ್ಳಲು ಕಠಿಣವಾದ ‘ಚಾಣಕ್ಯ ನೀತಿ’ಯನ್ನು ಹಬ್ಬು ಅವರು ಆಳವಾದ ಅಧ್ಯಯನ, ಪ್ರಬುದ್ಧ ಭಾಷೆ, ಸರಳವಾದ ನಿರೂಪಣೆ ಮುಂತಾದವುಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

ಈ ಕೃತಿಯ ಪ್ರತಿ ಪುಟದಲ್ಲಿಯೂ ಹಬ್ಬು ಅವರ ಶ್ರಮ ಹಾಗೂ ಕಾಳಜಿ ಎದ್ದುಕಾಣುತ್ತದೆ. ಚಾಣಕ್ಯನ ನೀತಿಗಳನ್ನು ಓದುಗರ ಮನಮುಟ್ಟುವ ಹಾಗೆ ನಿರೂಪಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಶ್ರೀಯುತ ಅರುಣಕುಮಾರ ಹಬ್ಬು ಅವರ ಈ ಮಹತ್ವದ ಕೃತಿ ಸಹಸ್ರಾರು ಜನರನ್ನು ತಲುಪುವಂತಾಗಲಿ ಎಂದು ಆಶಿಸುತ್ತೇನೆ; ಹಬ್ಬು ಅವರಿಗೆ ಶುಭ ಕೋರುತ್ತೇನೆ; ಅವರನ್ನು ಅಭಿನಂದಿಸುತ್ತೇನೆ.
- ಪ್ರೊ. ನಾಗ ಎಚ್. ಹುಬ್ಳಿ – ಲೇಖಕರು, ಕಾದಂಬರಿಕಾರರು, ಉಪನ್ಯಾಸಕರು, ರಾಂಚಿ
