‘ಉದ್ಧಾರ – ಸಂತೆ’ ನಾಟಕ ಪರಿಚಯ

ದಿವಾಕರ ಹೆಗಡೆ ಕೆರೆಹೊಂಡ ಮೂಲತಃ ಉತ್ತರಕನ್ನಡದ ಶಿರಸಿಯವರು. ಉದ್ಯೋಗ ಆಕಾಶವಾಣಿ ಧಾರವಾಡದಲ್ಲಿ. ಯಕ್ಷಗಾನದ ವಿನೂತನ ಪ್ರಯೋಗಕ್ಕೆ ಪರಿಚಿತರು. ಏಕವ್ಯಕ್ತಿ ಯಕ್ಷಗಾನ, ತಾಳ ಮದ್ದಳೆ ಅರ್ಥಧಾರಿಗಳು. ಅನೇಕ ದೃಶ್ಯ, ಶ್ರಾವ್ಯ ನಾಟಕ ರಚಿಸಿದ್ದಾರೆ. ಉದ್ಧಾರ – ಸಂತೆ ನಾಟಕಗಳ ಕುರಿತು ವಾಣಿಭಟ್, ಹಂಡ್ರಮನೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ಉದ್ಧಾರ – ಸಂತೆ (ಎರಡು ನಾಟಕಗಳು)
ಲೇಖಕರು: ದಿವಾಕರ ಹೆಗಡೆ ಕೆರೆಹೊಂಡ
ಮುದ್ರಿತ ವರ್ಷ: ೨೦೦೯
ಪುಟಗಳು: ೧೨೨
ಬೆಲೆ: ₹೭೫/-
ಪುಸ್ತಕ ಲಭ್ಯತೆ – ೯೯೪೫೩೪೮೦೧೦

ಈ ಪುಸ್ತಕದಲ್ಲಿರುವ “ಉದ್ಧಾರ” ನಾಟಕ ಒಂದು ವಿಭಿನ್ನ ಪ್ರಯೋಗಕ್ಕಾಗಿಯೇ ರಚಿಸಿದ್ದು. ರಂಗದ ಮೇಲೆ ಪ್ರಪಾತ ಸೃಷ್ಟಿಸುವ ಬದಲು, ಪ್ರಪಾತದಲ್ಲೇ ರಂಗ ಸಜ್ಜುಗೊಳಿಸಲಾಯ್ತು. ಹೌದು! ಪ್ರಕೃತಿಯ ಮಡಿಲಿನಲ್ಲಿ, ಕಕ್ಕಳ್ಳಿಯ ಸೂಸಬ್ಬಿ ಪ್ರಪಾತದಲ್ಲೇ ಈ ನಾಟಕವನ್ನು ಮೊದಲು ಪ್ರಯೋಗಿಸಲಾಯ್ತು! ಅದಕ್ಕೆಂದೇ ರಚಿಸಲಾದ ಈ ನಾಟಕ ಯಶಸ್ವೀ ಪ್ರಯೋಗವಾಗಿ ಜನಪ್ರಿಯವಾಯ್ತು. ಸುಂದರ ಹಾಡುಗಳು, ಮನಮುಟ್ಟುವ ಸಂಭಾಷಣೆಗಳು, ನವಿರು ಹಾಸ್ಯ ನಾಟಕವನ್ನು ರಂಜಕವಾಗಿಸುವುದು.

ಈ ನಾಟಕವನ್ನು ರಂಗದಲ್ಲೂ ಪ್ರದರ್ಶಿಸಬಹುದಾದರೂ, ದೃಶ್ಯಗಳು ನೈಜ ಪ್ರಕೃತಿಯ ನಡುವೆ ಹೆಚ್ಚು ಪ್ರಭಾವಶಾಲಿ ಆಗಬಹುದು. ಪ್ರಪಾತದಲ್ಲೇ ಕಿರುಚಿತ್ರವಾಗಿ ಚಿತ್ರಿಸಿದರೆ ಮತ್ತಷ್ಟು ಚಂದವಾಗಬಹುದು. ಈಗ ಓದುವಾಗಲೂ ಪ್ರಕೃತಿಯ ನಡುವೆ ನಡೆಯುವಂತೆ ಕಲ್ಪಿಸಿಕೊಂಡರೆ ನಾಟಕ ನಿಮಗೆ ಹೆಚ್ಚು ಇಷ್ಟವಾಗಬಹುದು.

ಮುಖ್ಯಪಾತ್ರಗಳು :

ಸುಬ್ಬಜ್ಜ – (ಪಕೃತಿಯ ನಡುವೆ ಏಕಾಂತವಾಗಿ ತಪಸ್ವಿಯಂತೆ ಬದುಕಿರುವಾತ)
ಶಿವ ಸಿದ್ದಿ (ಕಷ್ಟ ಸಹಿಷ್ಣುವಾದ ಒಂದು ಕಾಡು ಜನಾಂಗದ ಯುವಕ)
ಕೋಚ್ (ಅಡ್ವೆಂಚರ್ ಟ್ರೆಕ್ಕಿಂಗ್, ರಾಕ್ ಕ್ಲೈಬಿಂಗ್ ಗೆ ಪೇಟೆಯ ಜನರನ್ನು ಕರೆತರುವಾತ)
ಗಣೇಶ್ ವೈದ್ಯ (ಕಕ್ಕಳ್ಳಿ ನಿವಾಸಿ, ಓದಿಯೂ ಊರಲ್ಲಿದ್ದವ ಈತನಿಗೆ ಮದುವೆ ಆಗಿಲ್ಲ. ಟ್ರೆಕ್ಕಿಂಗ್ ಗೆಂದು ಕಕ್ಕಳ್ಳಿಗೆ ಬರುವವರಿಗೆ ಈತನ ಮನೆಯಲ್ಲಿಯೇ ವಸತಿ)
ಅನಂತ ವೈದ್ಯ – ಊರ ಹಿರಿಯ
ಪರಮೇಶ್ ಹೆಗಡೆ – ಊರ ನಾಗರಿಕ
ಸಹನಾ – ಪೋಟೊಗ್ರಫಿಯ ಹವ್ಯಾಸದಿಂದ ಕಕ್ಕಳ್ಳಿಗೆ ಬಂದಾಕೆ
ಜಾನಕಿ – ಪಿಎಚ್ಡಿ ಮಾಡುವ ಸಲುವಾಗಿ, ಕಾಡಿನ ಜೀವ ವೈವಿಧ್ಯ ಸಂಶೋಧಿಸಲು ಬಂದವಳು
ನಕ್ಸಲರು
ಮಂತ್ರಿಗಳು
ಭುಜಂಗರಾಯ – ಪರಿಸರವಾದಿ ಹೋರಾಟಗಾರ
ಕಿರಣ್ ಝಾ – ಮೊಬೈಲ್ ನೆಟ್ವರ್ಕ್ ಕಂಪನಿಯಾತ

ಇನ್ನು ಉದ್ಧಾರ ನಾಟಕದಲ್ಲಿ ಏನಿದೆ ಎಂದು ನೋಡೋಣ. ಕಕ್ಕಳ್ಳಿಯ ರುದ್ರ ರಮಣೀಯ ಪ್ರಪಾತ, ಹಸಿರು ಸುಂದರ ಪ್ರಕೃತಿ ನೋಡಲು ಬಂದ ಪಟ್ಟಣದ ಒಂದು ಗುಂಪು. ಇವರ ನಾಯಕನಾಗಿ ಒಬ್ಬ ಕೋಚ್. ಆತ ಅಡ್ವೆಂಚರ್ ಸ್ಪೋರ್ಟ್ಸ್, ರಾಕ್ ಕ್ಲೈಂಬಿಂಗ್ ಎಂದು ಅವರನ್ನೆಲ್ಲಾ ಒಟ್ಟಾಗಿಸಿ ತಂದವ.

ಹಳ್ಳಿಯ ಸುಂದರ ತಾಣದಲ್ಲಿ, ತಮಗೆ ಗೊತ್ತಿರೋ ವಿದ್ಯೆಯಲ್ಲಿ ಅವನ ಹೊಟ್ಟೆಪಾಡು. ಊರ ಜನರಿಗೆ ಏನೂ ಗೊತ್ತಿಲ್ಲ ಎಂಬಂತಹ ಅವನ ನಡವಳಿಕೆ ಹಾಸ್ಯಾಸ್ಪದ. ಶಿವು ಸಿದ್ದಿಯ ಆಗಮನ, ಆತ ಕಲ್ಲು ಕೊಡ್ಲನ್ನು(ಪ್ರಪಾತ) ವನ್ನು ಅನಾಯಾಸವಾಗಿ ಹತ್ತೋದು ಕೋಚ್ ನಿಗೆ ಮುಖಭಂಗವಾಗುತ್ತದೆ. ಮಲೆನಾಡ ಕಾಡ ಉಂಬ್ಳದ ಕಾಟಕ್ಕೆ ಬೆದರುವ ನಗರವಾಸಿಗಳು ಇತ್ಯಾದಿಗಳಿಂದ ದೃಶ್ಯ ಹಾಸ್ಯಮಯವಾಗಿದೆ.

ಬರುವವರ ದೃಷ್ಟಿಯಲ್ಲಿ ಇದೊಂದು ಅದ್ಭುತ ಪ್ರವಾಸೀ ತಾಣ. ಸುತ್ತ ಹಸಿರುವನ, ಕಲ್ಲು ಪ್ರಪಾತ, ಜಲಪಾತ ಇತ್ಯಾದಿ. ಇದನ್ನು ಪ್ರವಾಸೀ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂಬುದು ಅಲ್ಲಿ ಬಂದವರ ಇಚ್ಛೆ. ಅದರ ಮು‌ಂದಾಳತ್ವ ವಹಿಸುತ್ತಾನೆ ಕೋಚ್.ರಾತೋರಾತ್ರಿ ಸೂಸಬ್ಬಿ ಪ್ರಪಾತ ಪ್ರಖ್ಯಾತವಾಗುತ್ತೆ. “ಗ್ರೀನ್ ರಾಕ್ ವ್ಯಾಲಿ” ಎಂದು ಅವರೇ ಹೆಸರಿಡ್ತಾರೆ. ಶಿವುಸಿದ್ದಿಗೆ ಟ್ರೆಕ್ಕಿಂಗ್ ಹೆಲ್ಪರ್ ಆಗಿ ಕೆಲಸ ಸಿಗುತ್ತದೆ. ಊರಲ್ಲಿ ಗಣೇಶ್ ವೈದ್ಯನಿಗೆ ಪ್ರವಾಸಿಗಳಾಗಿ ಬರುವವರಿಗೆ ವಸತಿ, ಊಟ ಕಲ್ಪಿಸುವ ಹೊಸ ಉದ್ಯೋಗ ಕಂಡುಕೊಳ್ಳುತ್ತಾನೆ.
ಇಲ್ಲಿ, ವಿದ್ಯಾವಂತರಾಗಿಯೂ ಹಳ್ಳಿಯಲ್ಲಿ ನೆಲೆಸಿದ ಹುಡುಗರಿಗೆ ಹೆಣ್ಣು ಸಿಗದ ಸಮಸ್ಯೆ ಚರ್ಚಿಸಲಾಗಿದೆ. ಮೊದಲು ಅಪರೂಪಕ್ಕೆ ಪೇಟೆಗೆ ಹೋಗಿ ಬರ್ತಿದ್ದರು, ಈಗ ಪೇಟೆಯಲ್ಲಿ ನೆಲೆಸಿ, ಆಗಾಗ ಹಳ್ಳಿಗೆ ಬರುತ್ತಾರೆ ಎಂಬ ಸ್ಥಿತ್ಯಂತರದ ಚರ್ಚೆಯಾಗುತ್ತದೆ. ಹಳ್ಳಿಯ ಶಾಂತ ಜೀವನಶೈಲಿ ಪಟ್ಟಣದ ಬೆಡಗಿಗೆ ಮಾರು ಹೋಗುತ್ತಿರುವುದು, ಹೋಮ್ ಸ್ಟೇ, ಪ್ರವಾಸಗಳಿಂದ ಯುವಕರು ದುಡ್ಡಿನ ಹಿಂದೆ ಬಿದ್ದು ಶಾಂತ ಪರಿಸರ ಹಾಳಾಗುತ್ತಿರುವುದರ ಬಗ್ಗೆ ಚರ್ಚಿಸಲಾಗಿದೆ.

ಮುಂದೆ ಈ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸಿ, ಕಕ್ಕಳ್ಳಿಯನ್ನು ಉದ್ಧಾರ ಮಾಡಬೇಕೆಂದು ಮಂತ್ರಿಗಳ ಬಳಿ ಹೋಗುತ್ತಾರೆ. ಮಂತ್ರಿಗಳು ರೋಡ್ ಹಾಗೂ ಪ್ರಪಾತದ ಪಕ್ಕ ಮೆಟ್ಟಿಲನ್ನು ಸ್ಯಾಂಕ್ಷನ್ ಮಾಡುತ್ತಾರೆ. ವಿದ್ಯುತ್ ಈಗ ಅಗತ್ಯವಿಲ್ಲ ಎಂದ ಮಂತ್ರಿಗಳು, ತಮಗೆ ಲಾಭವಿರುವ ಕಂಪನಿಗೆ ಮೊಬೈಲ್ ಟವರ್ ನಿರ್ಮಿಸಲು ಅನುಮತಿ ಕೊಡಿಸುತ್ತಾರೆ. ಜನರು ವಿರೋಧಿಸದೇ ಇರಲು, ಅವರ ಭಾವನೆಗಳಿಗೆ “ಬೆಲೆ” ಕೊಡಬೇಕು ಎಂದು ಸೂಚ್ಯವಾಗಿ ನೆಟ್ವರ್ಕ್ ಕಂಪನಿ ಮಾಲಿಕರಿಗೆ ಹೇಳುತ್ತಾರೆ.

ಅದೇ ಸಮಯಕ್ಕೆ ಪರಿಸರವಾದಿ ಹೋರಾಟಗಾರರು ಪಶ್ಚಿಮ ಘಟ್ಟದ ಕಾಡು ಉಳಿಯಬೇಕು! ಎಂದು ಕೂಗಾಡುತ್ತಾರೆ. “ಉದ್ಧಾರ” ಮಾಡಲು ಹೋಗಿ ಕಾಡು ನಾಶವಾಗುತ್ತೆ, ರೋಡು, ವಿದ್ಯುತ್ ನೆಟ್ವರ್ಕ್ ಅಂತ ಕಾಡು ಕಡೀತೀರಿ ಅಂತ ರಗಳೆ ಎಬ್ಬಿಸುತ್ತಾರೆ. ಅಂತವನನ್ನೂ ತಮ್ಮ ಮನೆಗೆ ಆತ್ಮೀಯವಾಗಿ ಕರೆಯುತ್ತಾರೆ ಅನಂತ ವೈದ್ಯ(ಮಲೆನಾಡ ಅತಿಥಿ ಸತ್ಕಾರದ ಅನಾವರಣ).

ಆದರೆ ಒಂದು ದಿನಕ್ಕೂ ಕಕ್ಕಳ್ಳಿಯಲ್ಲಿರಲು ಭುಜಂಗರಾಯ ಒಪ್ಪುವುದಿಲ್ಲ, ಕಾರಣ ಅಲ್ಲಿ ಮೊಬೈಲ್ ಕನೆಕ್ಶನ್ ಸಿಗುವುದಿಲ್ಲ! ಇದೊಂದು ವಿಡಂಬನಾತ್ಮಕ ರೂಪಕ. ಒಂದು ರಾತ್ರಿಯೂ ಮೊಬೈಲ್ ನೆಟ್ವರ್ಕ್ ಇಲ್ಲದ ಜಾಗದಲ್ಲಿ ಉಳಿದುಕೊಳ್ಳಲಾರದವ, ಆ ಊರಿನ ಅಭಿವೃದ್ಧಿ ತಡೆಯುವುದು ವಿಪರ್ಯಾಸ. ಇದರ ಜೊತೆ ನಕ್ಸಲರ ಹಾವಳಿ! ಮೊಬೈಲ್ ಟವರನ್ನೇ ಅವರು ಉಡಾಯಿಸುತ್ತಾರೆ! “ಬಾ, ದುಡಿ ಅಂದರೆ ಇವರಿಗಾಗದು, ಮತ್ತೊಬ್ಬರು ದುಡಿದಿಟ್ಟರೆ ಬಂದು ದೋಚುತ್ತಾರೆ!” ಎಂಬ ಸುಬ್ಬಜ್ಜನ ಮಾತೇ ನಕ್ಸಲರ ಅಸಲಿಯತ್ತು ತೆರೆದಿಡುತ್ತದೆ.
ಇಲ್ಲಿ ಬಂದ ಎಲ್ಲರೂ ತಾವು ಕಕ್ಕಳ್ಳಿಯ ಅಭಿವೃದ್ಧಿಗಾಗಿ “ಉದ್ಧಾರಕ್ಕಾಗಿ” ಎಲ್ಲವನ್ನೂ ಮಾಡುತ್ತೇವೆ ಎನ್ನುತ್ತಾರೆ. ಆದರೆ ಪ್ರತಿಯೊಬ್ಬರ ಇಚ್ಛೆಯೂ ಒಂದಕ್ಕೊಂದು ವಿರುದ್ಧವಾಗಿರುತ್ತವೆ. ಇಲ್ಲಿ ಯಾರೂ ಯಾರನ್ನೂ ಉದ್ಧಾರ ಮಾಡುವುದಿಲ್ಲ! ಎಲ್ಲರೂ ಸ್ವಂತದ ಉದ್ಧಾರ ಬಯಸುತ್ತಾರೆ. ಹಾಗೇ, ನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇಕು” ಎಂಬ ಸುಬ್ಬಜ್ಜನ ಮಾತು ಗಟ್ಟಿಯಾಗಿ ನಿಲ್ಲುತ್ತದೆ. ಪಟ್ಟಣದಿಂದ ಪಿ ಎಚ್ಡಿ ಸಂಶೋಧನೆಗಾಗಿ ಬಂದ ಜಾನಕಿ ಹಾಗೂ ಗಣೇಶ ವೈದ್ಯನ ನಡುವೆ ಪ್ರೇಮ ಉಂಟಾಗಿ ಕಥೆಗೆ ಹೊಸ ದಿಕ್ಕು ದೊರಕುತ್ತದೆಮ
ಹಲವು ವಿಡಂಬನೆಗಳೊಡನೆ ಸಕಾರಾತ್ಮಕತೆಯನ್ನೂ ತೋರಿಸಿದ ನಾಟಕ. ಅಭಿವೃದ್ಧಿಗೂ ಉದ್ಧಾರಕ್ಕೂ ಇರುವ ವ್ಯತ್ಯಾಸ ತಿಳಿಸುತ್ತದೆ. ಉದ್ಧಾರ ಎಂದರೇನು? ಎಂದು ಪದೇ ಪದೇ ಪ್ರಶ್ನಿಸುತ್ತದೆ. “ಮೇಲಿಂದ ನೋಡಿದರೆ ಇದು ಪ್ರಪಾತ, ಕೆಳಗಿಂದ ನೋಡಿದರೆ ಪರ್ವತ! ಆದ್ದರಿಂದ ಏರುವುದು ಉದ್ಧಾರ, ಇಳಿಯುವುದು ಅವಸಾನ ಎಂದರ್ಥವಲ್ಲ. ನಮ್ಮ ಉದ್ಧಾರ ಏರುವುದರಿಂದಲೋ, ಇಳಿಯುವುದರಿಂದಲೋ ನಾವೇ ಅರಿಯಬೇಕು” ಎಂಬ ಮಾತು ನೋಡುಗನಲ್ಲಿ ಹೊಸ ಹೊಳಹು ಹುಟ್ಟಿಸುತ್ತದೆ. ಸಕಾರಾತ್ಮಕತೆಯತ್ತ ಪ್ರೇರೇಪಿಸುತ್ತದೆ.

ಸಂತೆ

ಹಲವು ವೇದಿಕೆಗಳಲ್ಲಿ ಯಶಸ್ವಿ ಪ್ರದರ್ಶನಗೊಂಡ ನಾಟಕ. ಜಾಗತೀಕರಣದ ಲೋಪ ದೋಷಗಳನ್ನು ವಿಡಂಬನಾತ್ಮಕವಾಗಿ ಹೇಳುತ್ತಾ ಹೋಗುತ್ತದೆ. ಧಾರಾವಾಡದ ಭಾಷೆಯ ಸೊಗಡಿದೆ. ಪ್ರತೀ ದೃಶ್ಯವೂ ಹಾಸ್ಯಮಯವಾಗಿದೆ. ನೋಡುಗರನ್ನು ಚಿಂತನೆಗೂ ಹಚ್ಚುತ್ತದೆ.

“ಕಂತು ಕಂತಿನ ಸಾಲ ನಾಳೆಗಳ ನುಂಗಿದವು
ಇಂದಿನನ್ನವು ಕೂಡ ಸೇರದಂತೆ
ಬಂತೀಗ ಹೊಸಕಾಲ ಹಿಂತಿರುಗಿ ನೋಡಿದರೆ
ಸಂತೆ ಸರಕಿನ ಬಾಳು ನಿಂತಂತಿದೆ”

ಈ ಹಾಡಿನಲ್ಲಿ ಈ ನಾಟಕದ ತಾತ್ಪರ್ಯ ಅಡಗಿದೆ. ಇನ್ನೂ ಬಾರದ ಆದಾಯಕ್ಕೆ ಸಾಲ! ಕಂತಿನಲ್ಲಿ ಕೊಳ್ಳುವ ಕಾರು, ಸೀರೆಗಳ ಬಗ್ಗೆ ವಿಡಂಬನೆಯಿದೆ. ಕೊಳ್ಳುಬಾಕ ಸಂಸ್ಕೃತಿಯ ಅನಾವರಣವಿದೆ. ಎತ್ತ ಸಾಗುತ್ತಿದೆ ನವಪೀಳಿಗೆ? ಎಂಬ ಆತಂಕ ತೋರುವ ನಾಟಕವಿದು.

ಕೆಲವು ವಿಡಂಬನಾತ್ಮಕ ರೂಪಕಗಳು :

  • ಮಾರಾಟವಾಗದ ವಸ್ತುವನ್ನು ಸುಂದರ ಮಾಡೆಲ್ ಮಾರುವ ಪರಿ!
  • ಸನ್ಮಾನ ಮಾಡಲು ಮುಖ್ಯ ಅತಿಥಿಗಳಾಗಿ ಬಂದು, ತಮ್ಮ ಕಂಪನಿಯ ಚಪ್ಪಲಿ ಮಾರಾಟ ಮಾಡಿಕೊಳ್ಳುವವರೊಬ್ಬರು.
  • ಭಾಷಣಕಾರರಾಗಿ ಬಂದು ತಮ್ಮ ಪುಸ್ತಕದ ಸಂತೆ ಮಾಡಿ, ಕುಟುಂಬದ ಪ್ರವಾಸವನ್ನೂ ಮಾಡಿಕೊಳ್ಳುವ ಮತ್ತೊಬ್ಬರು!
  • ಇನ್ಸೂರೆನ್ಸ್ ಕಂಪನಿ ಏಜೆಂಟ ಕೊಡುವ ಪಾಲಿಸಿಗಳು

ವಿಚ್ಛೇದನ ಪಾಲಿಸಿ – ವಿವಾಹವಾದ ನಂತರ ದಂಪತಿಗಳಲ್ಲಿ ಮನಸ್ತಾಪ ಏರ್ಪಟ್ಟರೆ, ಆ ಆರ್ಥಿಕ ನಷ್ಟ ಭರಿಸುವ ಪಾಲಿಸಿ!

ಪಿಂಡ ಪಾವನ ಪಾಲಿಸಿ! – ಗಂಡು ಮಗು ಬೇಕು ಎಂಬಾಸೆ ಇದ್ದು, ಹೆಣ್ಣು ಮಗು ಆಗುವುದನ್ನು ತಪ್ಪಿಸಲು ಇರುವ ಪಾಲಿಸಿ.

ಈ ಏಜೆಂಟನ ಬಳಿ ಮಾ.ಪು.ಲೆ. (ಮಾರಾಟವಾಗದ ಪುಸ್ತಕ ಲೇಖಕರ ಸಂಘ) ಎಂದುಕೊಂಡು ಬರುವವನೊಬ್ಬ ಪಾಲಿಸಿ ಕೇಳುತ್ತಾನೆ. ಅಂತಹ ಪಾಲಿಸಿ ಕೊಟ್ಟರೆ ತನಗೆ ನಷ್ಟವಾಗುತ್ತದೆಂದು, ಏಜೆಂಟ ಓಡುತ್ತಾನೆ.

ಹೀಗೆ ಇಲ್ಲಿ ಎಲ್ಲವೂ ಮಾರಾಟದ ಸರಕು. ಖಾಲಿಯಾದ ಹೃದಯದ ಬದಲಾಗಿ, ಜೇಬಿಗೆ ಏನಾದರೂ ಬಂದಿತೇ? ಎಂದು ಹುಡುಕುವ ಕಾಲ ಇದು ಎನ್ನುತ್ತಾನೆ ಸೂತ್ರಧಾರ. ಇಲ್ಲಿ ಜೋಳ ಮಾರಲು ಬರುವ ಅಜ್ಜಿಯೊಬ್ಬಳು, ಜೀವನದ ಇನ್ನೊಂದು ಮುಖ ತೋರಿಸುತ್ತಾಳೆ. ಈ ಅಜ್ಜಿ ರಂಗದ ಮೇಲೆ ಹಲವು ಬಾರಿ ಬಂದು ೧ಕೆ.ಜಿ. ಜೋಳಕ್ಕೆಷ್ಟು? ಅಂತ ಕೇಳುತ್ತಿರುತ್ತಾಳೆ. ಎಲ್ಲರೂ ಒಂದು‌ ಕೆಜಿ ಜೋಳದ ಬೆಲೆ ಹೇಳುತ್ತಾರೆ. ಅವಳ ಪ್ರಶ್ನೆಗೆ ಅಜ್ಜಿಯದೇ ಉತ್ತರ;

“ಒಂದು ಕೆಜಿ ಜೋಳ ತಿನ್ನೋದಾದರೆ ಇಪ್ಪತ್ತು ರೊಟ್ಟಿ, ಬಿತ್ತೋದಾದರೆ ನೂರು ಪಟ್ಟು ಬೆಳೆ!” ಎಂಬ ಮಾತು ಸಂತೆಯ ಹೊರಾತಾಗಿಯೂ ಜೀವನವಿದೆ ಎಂದು ಹೇಳುತ್ತದೆ.
ಒಟ್ಟಾರೆ ಜೀವನವೇ ವ್ಯಾಪಾರೀಕರಣಗೊಂಡ ಜಾಗತಿಕ ಅವ್ಯವಸ್ಥೆಯ ಬಗ್ಗೆ ಇರುವ ವಿಡಂಬನಾತ್ಮಕ ರೂಪಕವಿದು.


  • ವಾಣಿಭಟ್,ಹಂಡ್ರಮನೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading