‘ಒಣಜಂಭದ ಮರಿಬೆಕ್ಕು’ ಮಕ್ಕಳ ಕತೆ

ಸೋನು ಎನ್ನುವ ಮುದ್ದಾದ ಬೆಕ್ಕಿನ ಮರಿಯಿತ್ತು. ಅದಕ್ಕೆ ತನ್ನ ಮೇಲೆ ಜಂಭವಿತ್ತು. ತನ್ನನ್ನು ತಾನು ಹುಲಿ ಅಂದುಕೊಂಡಿತು. ಆ ಹುಂಬು ಧೈರ್ಯದ ಮೇಲೆ ಏನುಮಾಡಿತು ಕತೆಗಾರ್ತಿ ವಾಣಿ ಭಟ್ ಅವರ ಮಕ್ಕಳ ಕತೆಯನ್ನು ತಪ್ಪದೆ ಓದಿ…

ಒಂದೂರಿನಲ್ಲಿ ಬೆಳ್ಳಿ ಅನ್ನೋ ಬೆಕ್ಕು ಇತ್ತು. ಅದಕ್ಕೊಂದು ಮುದ್ದಾದ ಪುಟಾಣಿ ಮರಿ. ಅದ್ರ ಹೆಸರು ಸೋನು ಅಂತ. ಸೋನು ಅಂದ್ರೆ ಬೆಳ್ಳಿಗೆ ತುಂಬಾ ಪ್ರೀತಿ. ಸೋನುಗೆ ತುಂಬಾ ಮುದ್ದು ಮಾಡ್ತಿದ್ಳು. ತನ್ನ ಮರಿ ಏನು ಮಾಡಿದರೂ ಹೊಗಳ್ತಿದ್ದಳು. ಸೋನು ಚಿಕ್ಕ ಪುಟ್ಟ ಹುಳ ಹಿಡಿದರೂ, ಇಲಿಯನ್ನೇ ಬೇಟೆಯಾಡಿದಂತೆ ಸಂಭ್ರಮ ಪಡ್ತಿದ್ಳು. ಸೋನುವನ್ನ ಹೊಗಳಿ ಅಟ್ಟಕ್ಕೇರಿಸ್ತಿದ್ಳು. ಇದರಿಂದ ಸೋನುಗೆ ತುಂಬಾ ಜಂಭ ಬಂತು. ಅದು ಬರೀ ಜಂಭವಲ್ಲ, ಒಣಜಂಭ. ಒಣಜಂಭಾ ಅಂದ್ರೆ ಏನು ಗೊತ್ತಾ? ಇಲ್ಲದಿರೋ ಶಕ್ತಿಯನ್ನ ಇದೇ ಅಂತ ಭ್ರಮಿಸಿ ಅಹಂಕಾರ ಪಡೋದು.

ಬೆಳ್ಳಿ ಹಾಗೂ ಸೋನುವನ್ನು ಸಾಕಿದ್ದ ಮನೆಯಲ್ಲಿ ಒಂದು ಆಕರ್ಷಕ ದೀಪವಿತ್ತು. ಆ ದೀಪದಲ್ಲಿ ಯಾವಾಗಲೂ ನೀಲಿ ಬೆಳಕಿನ ದೀಪ ಉರೀತಿತ್ತು. ಸೋನುಗೆ ಆ ನೀಲಿಬೆಳಕನ್ನ ಹಿಡಿಯೋಕೆ ಆಸೆ.

ಒಂದಿನ ಆ ಮನೆಯ ಜನರೆಲ್ಲಾ ಹೊರಗೆ ಹೋದಾಗ, ಸೋನು ಆ ನೀಲಿ ಬೆಳಕನ್ನು ಹಿಡಿಯಲು ಬಯಸಿತು. ದೀಪ ಎತ್ತರದ ಮೇಜಿನ ಮೇಲಿತ್ತು. ಕೆಳಗಿರುವ ಪುಟ್ಟ ಕಪಾಟಿನ ಮೇಲೆ ನಿಂತ ಸೋನು, ಜಿಗಿದು ಹಾರಿ ಅದನ್ನು ಹಿಡಿಯಲು ಹೋಯ್ತು. ಜಿಗಿದು ಹಾರಿ ದೀಪ ಹಿಡಿವ ಪ್ರಯತ್ನದಲ್ಲಿ ಆ ದೀಪ ಜಾರಿ ಕೆಳಗೆ ಬಿತ್ತು. ಬಿದ್ದ ರಭಸಕ್ಕೆ ಜಾದೂ ದೀಪದಲ್ಲಿದ್ದ ಮಾಯಾತೈಲವೆಲ್ಲಾ ಚೆಲ್ಲಿಹೋಯ್ತು. ಗೊಂದಲದಲ್ಲಿದ್ದ ಸೋನು, ನೆಲದ ಮೇಲೆ ಬಿದ್ದ ದೀಪದ ಬಳಿ ಹೋಗುವಾಗ ಚೆಲ್ಲಿದ್ದ ಮಾಯಾತೈಲವನ್ನು ಎರಗಿ ನೋಡಿತು.

ಏನಾಶ್ಚರ್ಯ!! ಆ ಮಾಯಾತೈಲದಲ್ಲಿ ಸೋನುವಿನ ಬಿಂಬ ಹುಲಿಯಂತೆ ಕಾಣ್ತಿತ್ತು. ಒಮ್ಮೆ ಸೋನುವಿಗೆ ಭಯವಾಯ್ತು. ಹುಲಿಯೇ ಎದುರಿಗೆ ಬಂದುಬಿಟ್ಟಿದೆಯಾ? ಅಂತ. ಮತ್ತೊಮ್ಮೆ ಕಣ್ಣರಳಿಸಿ ನೋಡಿತು ಸೋನು. ತಾನು ಮಾಡಿದಂತೆಯೇ ಬಿಂಬವೂ ಮಾಡ್ತಿರೋದು ನೋಡಿ, ಅಲ್ಲಿರೋದು ತನ್ನದೇ ಬಿಂಬ ಅಂತ ಅದಕ್ಕೆ ಗೊತ್ತಾಯ್ತು. ಆದರೆ ಜಾದೂ ತೈಲದ ಪ್ರಭಾವದಿಂದ ತನ್ನ ಬಿಂಬ ದೊಡ್ಡ ಹುಲಿಯಂತೆ ಕಾಣ್ತಿರೋದು ಅದಕ್ಕೆ ಗೊತ್ತಾಗ್ಲಿಲ್ಲ. ತಾನು ನಿಜಕ್ಕೂ ಹುಲಿಯಾಗಿ ಬೆಳೆದಿದ್ದೇನೆ ಎಂದು ಭಾವಿಸಿತು. ತಾನು ಹುಲಿಯೆಂಬ ಭ್ರಮೆಯಲ್ಲಿ ಸೊಕ್ಕಿನಿಂದ ಬೀಗಿತು.

ಹುಲಿಯಾದ ತಾನು ಕಾಡಿಗೆ ಹೋಗುತ್ತೇನೆ. ಅಲ್ಲಿ ಹೋಗಿ ಘರ್ಜಿಸಿ ಪ್ರಾಣಿಗಳನ್ನ ಹೆದರಿಸ್ತೇನೆ. ಹೆಚ್ಚು ಕಷ್ಟವಿಲ್ಲದೇ ಬೇಟೆಯಾಡುತ್ತೇನೆ! ಹೀಗೆ ಹಗಲುಗನಸು ಕಾಣುತ್ತಾ ಕಾಡಿಗೆ ಹೋಯ್ತು.ಹುಲಿಯೆಂಬ ಗತ್ತಿನಲ್ಲಿ ಠೀವಿಯಿಂದ ನಡೆಯುತ್ತಾ ಜಿಂಕೆ, ಮೊಲಗಳೆಲ್ಲಾ ಆಟವಾಡುತ್ತಿದ್ದೆಡೆ ಬಂತು. ಅದರ ಪ್ರಕಾರ ಪ್ರಾಣಿಗಳೆಲ್ಲಾ ಅದನ್ನು ಕಂಡೊಡನೇ ಓಡಿ ಹೋಗಬೇಕಿತ್ತು, ಆದರೆ ಅಂತದ್ದೇನೂ ನಡೆಯಲಿಲ್ಲ. ಪ್ರಾಣಿಗಳು ತಮ್ಮ ಪಾಡಿಗೆ ತಾವಿದ್ದವು. ಯಾರೂ ಸೋನುವನ್ನು ಗಮನಿಸಲಿಲ್ಲ.

ಸೋನೂಗೆ ಕೆಟ್ಟ ಕೋಪ ಬಂತು.”ಹುಂ, ಇವರಿಗಿನ್ನೂ ನಾನ್ಯಾರು ಅಂತ ಗೊತ್ತಿಲ್ಲ, ಈಗಲೇ ತೋರಿಸ್ತೀನಿ” ಅಂತ ಜಂಭ ಪಟ್ಟುಕೊಳ್ತಾ, ತನ್ನೆದುರಿದ್ದ ಕಾಡುಕೋಣಗಳ ಗುಂಪಿನೆಡೆ ಬಂತು. ಹೂಂಕರಿಸುತ್ತಿದ್ದ ಕೋಣದೆದುರು ಹುಲಿಯಂತೆ ಜೋರಾಗಿ ಘರ್ಜಿಸಿ ಹೆದರಿಸಬೇಕು ಅಂತ ಬಯಸಿತು. ಉಸಿರೆಳೆದುಕೊಂಡು ಜೋರಾಗಿ ಸ್ವರ ಹೊರಡಿಸಿತಾದರೂ “ಮಿಯ್ಯಾಂ” ಎನ್ನುವ ಸ್ವರವೇ ಹೊರಬಂತು. ಸುತ್ತಲಿದ್ದ ಪ್ರಾಣಿಗಳೆಲ್ಲ ಜೋರಾಗಿ ನಕ್ಕವು. ಪುಟ್ಟ ಬೆಕ್ಕೊಂದು ತನ್ನೆದುರು ಗುರುಗುಟ್ಟಿದರೆ ಕಾಡುಕೋಣ ಸುಮ್ಮನಿರುವುದೇ? “ನಿನ್ನ ದನಿಗೆ ಹೆದರೋಕೆ ನಾನೇನು ಇಲಿ ಅಂದ್ಕೊಂಡ್ಯಾ?” ಎನ್ನುತ್ತಾ ಕಾಡುಕೋಣ ಜೋರಾಗಿ ಹೂಂಕರಿಸಿ, ಕೊಂಬಿನಲ್ಲಿ ತಿವಿದಂತೆ ಮಾಡಿ ಸೋನುವನ್ನು ಹೆದರಿಸಿತು. ಸೋನು ಮಿಯಾಂ ಮಿಯಾಂ ಎನ್ನುತ್ತಾ ಬಾಲಮುದುರಿ ಹಿಂದೆ ಸರಿಯಿತು. ಜಂಭದ ಬೆಕ್ಕು ಸೋನುವಿಗೆ ಮುಖಭಂಗವಾಯ್ತು. ಬದುಕಿದೆಯಾ ಬಡಜೀವ ಎಂದುಕೊಳ್ತಾ ತನ್ನೂರಿಗೆ ಮರಳಿತು.

ನೀತಿ: ನಮ್ಮ ಶಕ್ತಿಯ ಬಗ್ಗೆ ಆತ್ಮವಿಶ್ವಾಸ ಇರಬೇಕು ಅದರ ಜೊತೆಗೆ, ನಮ್ಮ ಇತಿಮಿತಿಗಳ ಅರಿವೂ ಇರಬೇಕು. ಸುಮ್ಮನೇ ಜಂಭ ಪಟ್ಟರೆ ಅಪಮಾನ ನಿಶ್ಚಿತ.


  • ವಾಣಿ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading