‘ಭಾಡೇ ಕೀ ದೀದಿ’ ಸಣ್ಣಕತೆ

“ಲಕ್ಕಿ…ನಿನ್ನಮ್ಮ ಸತ್ತು ಹೋದ್ಲು, ಗಂಗೆ ನಿನ್ನ ಮಲತಾಯಿ” ಎಂದಾಗಲೇ ಸಂಬಂಧದ ಸೂಕ್ಷ್ಮತೆ ಅರ್ಧಂಬರ್ಧ ಅರ್ಥವಾಗಿದ್ದು. ವಯಸ್ಸಿಗೆ ಬಂದಾಗ ಅವಳಿಗೆ ಗೊತ್ತಾಗಿದ್ದು ಮಹೇಶ. ಅವನಾಡುತ್ತಿದ್ದ ಸಿಹಿ ಮಾತಿನಿಂದ ಪ್ರೀತಿಯ ಅಗಾಧತೆಯನ್ನು ಅಳೆದಳು, ಅವನ ಬಲೆಗೆ ಬಿದ್ದಳು. ಲಕ್ಕಿಯ ಬದುಕು ಮುಂದೇನಾಯಿತು ಕತೆಗಾರ್ತಿ ಗೀತಾ ಕುಂದಾಪುರ ಅವರ ಸಣ್ಣಕತೆಯನ್ನು ತಪ್ಪದೆ ಓದಿ…

ರೈಲು ‌ʻಸೂರತ್ʼ ದಾಟಿ ಮುಂದೆ ಸಾಗುತ್ತಿತ್ತು. ರೈಲಿನ ಕಿಟಕಿಯಲ್ಲಿ ಇಣಕಿದಾಗ ಮರ ಗಿಡಗಳು, ಲೈಟ್‌ ಕಂಬಗಳು ಓಡುತ್ತಿದ್ದಂತೆ ಕಾಣಿಸುತ್ತಿತ್ತು. ಅವುಗಳನ್ನು ಲೆಕ್ಕ ಹಾಕಲು ಪ್ರಯತ್ನಿಸುತ್ತಿದ್ದಳು. ಲೆಕ್ಕ ತಪ್ಪಿದಂತಾಗಿ ಮತ್ತೆ ಶುರು ಮಾಡುತ್ತಿದ್ದಳು. ಮೊದಲ ಬಾರಿ ರೈಲು ಹತ್ತಿದ್ದವಳಿಗೆ ಪ್ರತಿಯೊಂದೂ ಹೊಸತೇ. ಪ್ರತಿ ಕ್ಷಣವನ್ನು ತೆರೆದ ಕಣ್ಣುಗಳಿಂದ ಸೆರೆ ಹಿಡಿದು, ಮುಷ್ಟಿಯಲ್ಲಿ ಹಿಡಿಯಲು ಬಯಸುತ್ತಿದ್ದಳು. ಪಕ್ಕದಲ್ಲಿ ಅವಳನ್ನು ಒತ್ತಿಕೊಂಡು ಮೌನವಾಗಿ ಕೂತಿದ್ದವ ಮಾತಾಡಿಸಿ ಅವಳು ಮುಷ್ಟಿಯಲ್ಲಿ ಹಿಡಿಯಲು ಪ್ರಯತ್ನಿಸುತ್ತಿದ್ದ ಕೌತುಕವನ್ನು ಕಡಿಮೆ ಮಾಡಲು ಇಚ್ಚಿಸಲಿಲ್ಲ. ಇಲ್ಲಾ ಅವನ ಲೆಕ್ಕ ಮತ್ತೇನೋ ಆಗಿತ್ತು. ಅದೇ ಬೋಗಿಯಲ್ಲಿದ್ದ ಕೆಲವರು ತೂಕಡಿಸುತ್ತಿದ್ದರೆ, ಕೆಲವರು ಇವರಿಬ್ಬರನ್ನು ತಮ್ಮದೇ ರೀತಿಯಲ್ಲಿ ಅಳೆಯುತ್ತಿದ್ದರು.

ಕೆಂಪು ಬಣ್ಣದ ಜರಿ ಬಾರ್ಡರ್‌ ಇರುವ ಬ್ಲೌಸಿಗೆ ಚೂರೂ ಒಪ್ಪದ ನೀಲಿ ಬಣ್ಣದ ನೈಲಾನ್‌ ಸೀರೆ ಉಟ್ಟಿದ್ದಳು. ಕೈಯಲ್ಲಿ ಕೆಂಪು ಗಾಜಿನ ಬಳೆಗಳು. ಜಡೆಯಲ್ಲಿ ಒಣಗಿದ ಮಲ್ಲಿಗೆ ಮಾಲೆ, ಹಣೆಯಲ್ಲಿ ದೊಡ್ಡ ಸ್ಟಿಕ್ಕರ್‌ ಬೊಟ್ಟಿತ್ತು. ಅವಳ ಮುಖದಲ್ಲಿ ಖುಷಿ, ಭದ್ರತೆ, ಸಂತ್ರಪ್ತಿಯ ಭಾವನೆಯನ್ನು ಯಾರೂ ಓದಬಹುದಾದಷ್ಟು ಸ್ಪಷ್ಟವಾಗಿತ್ತು. ಅವಳ ಖುಷಿಗೆ ಕಾರಣ ಇಲ್ಲದಿಲ್ಲ, ಬಯಸಿದವನನ್ನು ಮದುವೆಯಾಗಿ ವಾರ ಕಳೆದಿತ್ತಷ್ಟೇ. ಮದುವೆಗೆ ಅವಳ ಗಂಡನೇ ಕೆಂಪು ಸೀರೆ, ಕೆಂಪು ಬಳೆ, ಕಾಲ್ಗೆಜ್ಜೆ, ಮೂಗುತಿ ಕೊಡಿಸಿದ್ದ. ಕಾಲ್ಗೆಜ್ಜೆ ಬೆಳ್ಳಿಯದೆಂದೂ, ಮೂಗುತಿ ಚಿನ್ನದ್ದೆಂದೂ, ಕರಿಮಣಿ ಒಂದು ಗ್ರಾಮಿನ ಗೋಲ್ಡನದ್ದೆಂದೂ ಹೇಳಿದ್ದ. ಅಷ್ಟು ಸಾಕಾಗಿತ್ತು ಅವಳ ಸಂತೋಷಕ್ಕೆ. ಮದುವೆಯಾಗಿ ಗುಜರಾತಿನಲ್ಲಿರುವ ಗಂಡನ ಮನೆಗೆ ಹೊರಟಿದ್ದಳು.

“ಚಾಯ್‌, ಚಾಯ್‌” ಚಹಾ ಮಾರುತ್ತಾ ಬಂದ ಹುಡುಗನೊಬ್ಬ ʻದೀದಿ ಚಾಯ್‌ʼ ಎಂದ. ಗಂಡ ಚಹಾ ಖರೀದಿಸಿ ಅವಳ ಕೈಗಿತ್ತ, ಅವಳು ಸೊರ್‌ ಎನ್ನುತ್ತಾ ಕುಡಿದವಳು ವಾರದ ಹಿಂದಷ್ಟೇ ಕುತ್ತಿಗೆಯನ್ನು ಅಲಂಕರಿಸಿದ್ದ ಕರಿಮಣಿಯನ್ನು ಕೈ ಬೆರಳಿಗೆ ಸುತ್ತಿ ಆಟವಾಡುತ್ತಾ ಪ್ರಶ್ನೆಯೊಂದನ್ನು ತೂರಿದಳು “ನಿಮ್ಮ ಮನೆ ದೊಡ್ಡದಾ?” ಅವಳ ಮಾತಿಗೆ ದೊಡ್ಡದಾಗಿ ನಕ್ಕವನೆಂದ “ದೊಡ್ಡದಾ!! ನೀನು ಹತ್ತು ಮಕ್ಕಳನ್ನು ಹೆತ್ತರೂ ಆಡಿಕೊಳ್ಳಲು ಜಾಗವಿದೆ, ನೀನೆಷ್ಟು ಮಕ್ಕಳನ್ನು ಹೆರಲು ರೆಡಿ ಇದ್ದಿ?” ಅವಳ ಕೈಯನ್ನು ಹಿಂಡಿದ. ಅವನ ಹೆಗಲ ಮೇಲೊರಗಿದಳು. ಅವಳು ಕಣ್ಣು ತೆರೆದುಕೊಂಡೇ ತನ್ನ ಭೂತಕಾಲದಿಂದ ಎದ್ದು ಬಂದ ಭವಿಷ್ಯದ ಬಗ್ಗೆ ಇದ್ದ ದಿಗಿಲನ್ನು ಬದಿಗೊತ್ತಿ ಸುಂದರ ಸ್ವಪ್ನಗಳನ್ನು ಮಾತ್ರ ತನ್ನದಾಗಿಸಿಕೊಂಡಳು. ಎದುರಿನ ಸೀಟಿನಲ್ಲಿದ್ದ ಮಗುವೊಂದು ಅವಳ ಸೀರೆಯನ್ನು ಜಗ್ಗಿತು. ಅವಳು ಅದನ್ನು ತನ್ನದೇ ಮಗುವೆಂಬಂತೆ ಎತ್ತಿಕೊಂಡಳು.

ಅವಳ ಹೆಸರುʻಲಕ್ಕಿʼಯೋ ʻಲಕ್ಷ್ಮೀʼಯೋ ಮತ್ತೇನೋ, ಅವಳಿಗೇ ಸರಿಯಾಗಿ ಗೊತ್ತಿಲ್ಲ. ಒಟ್ಟಿನಲ್ಲಿ ಕರೆಯಲೊಂದು ಹೆಸರಿತ್ತು. ಹಾಗೆ ನೋಡಿದರೆ ಅವಳ ಮನೆಯವರು ಹೆಸರಿಡಿದು ಕರೆದದ್ದೇ ಇಲ್ಲ, ಅವಳ ಮಲತಾಯಿ ʻಬೋಸುಡಿʼ, ʻಗೂಬೆʼ ಅಂತ ಕರೆದರೆ ಅವಳ ತಂದೆ, ಮಲತಮ್ಮ, ತಂಗಿಯರು ʻಏಯ್ʼ ಎಂದೇ ಕರೆಯುತ್ತಿದ್ದರು. ಇಂಗ್ಲೀಷಿನಲ್ಲಿ ಲಕ್ಕಿ ಎಂದರೆ ಕನ್ನಡದಲ್ಲಿ ಅದೃಷ್ಟವಂತ ಎನ್ನುವುದೂ ಗೊತ್ತಿರಲಿಲ್ಲ ಅವಳಿಗೆ.

ಅವಳಿಗೆ ತಾಯಿಯ ಮುಖವನ್ನಾಗಲಿ, ಅವಳ ಪ್ರೀತಿಯನ್ನಾಗಲಿ ಉಂಡ ನೆನಪಿಲ್ಲ. ಏನಿದ್ದರೂ ಮನೆಯಲ್ಲಿರುವ ಚಿಕ್ಕಬ್ಬೆ ಗಂಗೆಯಿಂದ ಬೈಗುಳು ಉಂಡು, ಪೆಟ್ಟು ತಿಂದದ್ದು ಮಾತ್ರ. ಚಿಕ್ಕಬ್ಬೆ ತನ್ನ ಮಕ್ಕಳಿಗೆ ಪ್ರೀತಿಯಿಂದ ಉಣ್ಣಿಸುವಾಗ, ಅವರ ತಲೆಯ ಹೇನು ಹೆಕ್ಕುವಾಗ, ಸ್ನಾನ ಮಾಡಿಸುವಾಗ ತನಗ್ಯಾಕೆ ಇದೆಲ್ಲಾ ಸಿಕ್ಕಿಲ್ಲ ಎಂದು ಗೊತ್ತಾಗಲಿಲ್ಲ. ಪಕ್ಕದ ಮನೆಯ ಪಾತಜ್ಜಿ “ಲಕ್ಕಿ…ನಿನ್ನಮ್ಮ ಸತ್ತು ಹೋದ್ಲು, ಗಂಗೆ ನಿನ್ನ ಮಲತಾಯಿ” ಎಂದಾಗಲೇ ಸಂಬಂಧದ ಸೂಕ್ಷ್ಮತೆ ಅರ್ಧಂಬರ್ಧ ಅರ್ಥವಾಗಿದ್ದು. ಚಿಕ್ಕಬ್ಬೆಯ ಮಕ್ಕಳು ಶಾಲೆಗೆ ಹೋದರೆ ಇವಳು ಕಸ, ಮುಸುರೆ ತೊಳೆಯಲು ಡಾಕ್ಟರ್ ಮನೆಗೆ ಹೋಗುತ್ತಿದ್ದಳು. ಡಾಕ್ಟರ್‌ ಮನೆಯ ಪಾತ್ರೆಯನ್ನು ತಿಕ್ಕಿ, ತಿಕ್ಕಿ ತೊಳೆದು ಹೊಳೆಯುವಂತೆ ಮಾಡಿ ಅದರಲ್ಲಿ ತನ್ನ ಮುಖ ನೋಡುವುದರಲ್ಲೇ ಖುಷಿ ಕಂಡಳು. ಡಾಕ್ಟರಮ್ಮ ಕೊಡುತ್ತಿದ್ದ ಕಾಫಿ ಹೆಸರಿನ ಕಷಾಯವನ್ನು, ಎಣ್ಣೆ, ತುಪ್ಪ ಕಾಣದ ಇಡ್ಲಿ, ದೋಸೆಯನ್ನು ಪಂಚಭಕ್ಷ ಪರಮಾನ್ನದಂತೆ ತಿಂದು ಸಂತುಷ್ಟಳಾಗಿದ್ದಳು. ಇದಕ್ಕಿಂತ ಮೀರಿದ ಮತ್ತೇನು ಖುಷಿ ಇದೆ ಎನ್ನುವುದೂ ಅವಳಿಗೆ ಗೊತ್ತಿರಲಿಲ್ಲ. ಪರದೇಸಿ ಮಕ್ಕಳಿಗೆ ಬುದ್ದಿ ಜಾಸ್ತಿ ಎನ್ನುವಂತೆ ಶಾಲೆಗೆ ಹೋಗುತ್ತಿದ್ದ ಚಿಕ್ಕಬ್ಬೆಯ ಮಕ್ಕಳು ಸ್ಲೇಟಿನಲ್ಲಿ ಬರೆಯುತ್ತಿರಬೇಕಾದರೆ ಇವಳೂ ಓದಿ ಬರೆಯುವುದನ್ನು ಕಲಿತಳು.

ಜೀವನದ ಪ್ರತಿಯೊಂದು ಘಟನೆಗಳು ಒಂದಕ್ಕೊಂದು ಜೋಡಿಸಿಕೊಂಡಿರುತ್ತದೆ. ಭವಿಷ್ಯಕ್ಕೆ ಭೂತ, ವರ್ತಮಾನವೆರಡೂ ಮೆಟ್ಟಿಲಾಗಿರುತ್ತದೆ. ಊರಿನಲ್ಲಿ ಗೇರು ಬೀಜದ ಫ್ಯಾಕ್ಟರಿ ಶುರುವಾಯಿತು. ಫ್ಯಾಕ್ಟರಿಯಲ್ಲಿ ಗೇರುಬೀಜ ಸುಲಿಯುವ ಕೆಲಸಕ್ಕೆ ಹೆಣ್ಣು ಮಕ್ಕಳು, ಹೆಂಗಸರು ಸೇರಿಕೊಂಡರು. ದಿನಕ್ಕೆ 10 ಗಂಟೆ, ವಾರಕ್ಕೆ 6 ದಿನದ ಕೆಲಸ, ಸಂಬಳ ದಿನಕ್ಕೆ 300 ರೂಪಾಯಿ. ಗೇರುಬೀಜ ಸುಲಿಯುವಾಗ ಅದರ ಸೊನೆ ತಾಗಿ ಹೆಂಗಸರ ಕೈಯ ಚರ್ಮ ಸುಲಿದು ಉರಿಯುತ್ತಿದ್ದರೂ, ವಾರದ ಕೊನೆಯಲ್ಲಿ ಸಿಗುವ ನೋಟುಗಳ ಬಿಸಿ ನೋವನ್ನು ಕಡಿಮೆ ಮಾಡುತ್ತಿತ್ತು. ಗಂಗೆಯೂ ಲಕ್ಕಿಯನ್ನು ಗೇರು ಬೀಜದ ಫ್ಯಾಕ್ಟರಿಗೆ ಸೇರಿಸಿದಳು. ಆದರೆ ಸಂಬಳ ಎಣಿಸಲು ಗಂಗೆಯೇ ಫ್ಯಾಕ್ಟರಿಗೆ ಬರುತ್ತಿದ್ದಳು. ಡಾಕ್ಟರ್ ಮನೆ ಕೆಲಸಕ್ಕೆ ಹೋಗುತ್ತಿದ್ದಾಗ ಉದ್ದ ಲಂಗ, ಬ್ಲೌಸನ್ನು ಹಾಕುತ್ತಿದ್ದವಳೀಗ ಲಂಗ ದಾವಣಿ, ಹರಕು ಸೀರೆ ಉಡುತ್ತಿದ್ದಳು.

ಜೀವನಕ್ಕೆ ಮತ್ತೊಂದು ಮಗ್ಗುಲಿದೆಯೆಂದು ಅವಳಿಗೆ ಗೊತ್ತಾಗಿದ್ದು ಮಹೇಶನ ಪರಿಚಯವಾದಾಗ. ಮಹೇಶ ಗುಜರಾತಿನವ, ಬಂದ ಎರಡು ವರ್ಷದಲ್ಲೇ ಕನ್ನಡ ಕಲಿತಿದ್ದ, ಅವಳು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಗೆ ಇದ್ದಿಲು ಸಪ್ಲೈ ಮಾಡುತ್ತಿದ್ದ. ಟೈಟ್‌ ಪ್ಯಾಂಟು, ಚಿಗುರು ಮೀಸೆಯವ, ಸಿಗರೇಟನ್ನು ಹತ್ತಿಸಿ ಆಕಾಶಕ್ಕೆ ಹೊಗೆಯುಗುಳುವ ಅವನ ಸ್ಟೈಲು ಬಹಳ ಇಷ್ಟವಾಯಿತು. ಅವನು ಬಾಳೆ ಎಲೆಯಲ್ಲಿ ಕಟ್ಟಿಸಿಕೊಂಡು ಬರುತ್ತಿದ್ದ ಮಸಾಲೆದೋಸೆ ಮತ್ತು ಅವನಾಡುತ್ತಿದ್ದ ಸಿಹಿ ಮಾತಿನಿಂದ ಪ್ರೀತಿಯ ಅಗಾಧತೆಯನ್ನು ಅಳೆದಳು, ಅವನ ಬಲೆಗೆ ಬಿದ್ದಳು. “ಏಯ್‌ ಸುಂದರಿ…ಮದ್ವೆ ಆಗ್ತಿಯಾ ನನ್ನನ್ನು? ಊರಲ್ಲಿ ಸ್ವಂತ ಮನೆ, ಕುಟುಂಬದವರಿದ್ದಾರೆ” ಎಂದಾಗ ಕುಣಿದು ಕುಪ್ಪಳಿಸಿದಳು.

ಗಂಗೆ ಈ ಮದುವೆಗೆ ಮೊದಲು ತಕರಾರು ತೆಗೆದರೂ ಕಡೆಗೆ ಸುಮ್ಮನಾದಳು. ಒಂದು ಶುಕ್ರವಾರ ಮೇಳ, ಮೆರವಣಿಗೆ ಒಂದೂ ಇಲ್ಲದೆ ಮಹೇಶ ಲಕ್ಕಿಗೆ ತಾಳಿ ಕಟ್ಟಿದ, ಹೂವಿನ ಹಾರ ಬದಲಾಯಿಸಿಕೊಂಡರು. ಮದುವೆಯಾಗಿ ಒಂದು ವಾರಕ್ಕೆ ಅವರಿಬ್ಬರೂ ಗುಜರಾತ್‌ಗೆ ಹೊರಟರು.

ಅವಳ ಗಂಡನ ಮನೆ ಯಾವುದೋ ಗತಕಾಲದ ವೈಭವದ ಪಳಿಯುಳಿಕೆಯಂತಿತ್ತು. ದೊಡ್ಡ ಮನೆ, ದೊಡ್ಡ ಅಂಗಳ, ಎತ್ತರದ ಗೋಡೆಗಳು, ದಪ್ಪ ಬಾಗಿಲು, ದೊಡ್ಡ ಕಿಟಕಿಗಳು. ಇಷ್ಟು ದೊಡ್ಡ ಮನೆ ತನ್ನ ಗಂಡನದ್ದೇ? ಮನದಲ್ಲೆದ್ದ ಪ್ರಶ್ನೆಗಳನ್ನು ಮನದೊಳಗೇ ತಳ್ಳಿ, ಬಲಗಾಲಿಟ್ಟು ಮನೆಯೊಳಗೆ ಕಾಲಿಟ್ಟಳು.

ಧೂಳು, ಕಸ ತುಂಬಿದ ದೊಡ್ಡ ಮನೆಯಲ್ಲಿ ಮೌನ ಎದುರಾಯಿತು. ಬೀಸುವ ಗಾಳಿ, ಮನೆಯ ಸುತ್ತ ಹಾರುವ ಒಣ ತರಗೆಲೆಗಳು, ಹಕ್ಕಿಗಳ ಕೂಗಿನಲ್ಲೂ ಮೌನ, ಅದರೊಂದಿಗೆ ನಿಗೂಢತೆ ಇತ್ತು.

ಮನೆ ಮಾತ್ರವಲ್ಲ, ಮನೆಯಲ್ಲಿರುವವರೂ ಲಕ್ಕಿಗೆ ಪ್ರಶ್ನೆಯಾಗತೊಡಗಿದರು. ಮನೆಯಲ್ಲಿ 7-8 ಜನರಿದ್ದರೂ ಅಮ್ಮನನ್ನು ಬಿಟ್ಟರೆ ಬೇರೆ ಹೆಂಗಸರಿಲ್ಲ, ಅಮ್ಮ ಸದಾ ರೊಟ್ಟಿ ತಟ್ಟುತ್ತಿರುತ್ತಾರೆ. ವಯಸ್ಸಾದವ ತಂದೆಯೆಂದು, ಉಳಿದವರು ಅಣ್ಣ-ತಮ್ಮಂದಿರೆಂದು ಮಹೇಶ ಹೇಳಿದ. ತಂದೆ ಹಗಲು ಹೊತ್ತಿನಲ್ಲಿ ಅಲ್ಲಿ, ಇಲ್ಲಿ ಓಡಾಡಿಕೊಂಡಿದ್ದು ಕತ್ತಲಾಗುತ್ತಿದ್ದಂತೆ ಎಲ್ಲಿಗೋ ಹೋಗುತ್ತಿದ್ದವ ಬೆಳಗ್ಗಿನ ಜಾವ ವಾಪಸ್ಸು ಬರುತ್ತಿದ್ದ. ಉಳಿದ ಗಂಡಸರು ಬಂದು ಹೋಗಿ ಮಾಡುತ್ತಿದ್ದರು. ಮನೆಯ ಪಕ್ಕದಲ್ಲಿ ಒಂದು ಹಸು, ಕರುವಿತ್ತು, ಅವಳತ್ತೆಯೇ ಅದರ ಹಾಲು ಕರೆಯುತ್ತಿದ್ದರು, ಸೆಗಣಿ ಬೆರಟಿ ತಟ್ಟುತ್ತಿದ್ದರು, ಆಗಾಗ ತನ್ನಷ್ಟಕ್ಕೇ ಮಾತಾಡಿಕೊಳ್ಳುತ್ತಿದ್ದರು.

ಮನೆಯ ಜಡ್ಡುಗಟ್ಟಿದ ವಾತಾವರಣವನ್ನು ಸರಿಪಡಿಸಲು ಕಿಟಕಿಯ ಬಾಗಿಲನ್ನು ತೆರೆಯಲು ಹೊರಟಳು. ಕಿಟಕಿಯ ಗಾಜು ಒಡೆಯಿತೇ ಹೊರತು ಕಿಟಕಿ ತೆರೆದುಕೊಳ್ಳಲಿಲ್ಲ, ಒಡೆದ ಕಿಟಕಿಯ ಗಾಜಿನೊಳಗೆ ಸೂರ್ಯಕಿರಣಗಳು, ಗಾಳಿ ತೂರಿ ಬಂದವು. ನೈಟಿಯನ್ನು ಕಟ್ಟಿಕೊಂಡು ಈಚಲು ಕಸಬರಿಕೆಯಿಂದ ಗುಡಿಸಿದರೆ ಮೂಲೆಯಲ್ಲಿ ಒಂದಿಷ್ಟು ಇಂಜಕ್ಷನ್‌ ಸಿರಿಂಜುಗಳು, ಮಾತ್ರೆ ಕವರ್‌, ಗುಟ್ಕ ಪ್ಯಾಕೆಟ್‌, ಒಣಗಿದ ಬಾಳೆ ಹಣ್ಣಿನ ಸಿಪ್ಪೆಗಳು ಸಿಕ್ಕಿದವು.

ದಿನ ಕಳೆದಂತೆ ಸಗಣಿ ಬೆರಟಿ ಮಾಡುವುದನ್ನೂ, ಒಲೆಯ ಮುಂದೆ ಕೂತು ರೊಟ್ಟಿ ತಟ್ಟುವುದನ್ನೂ ಕಲಿತಳು. ಗೇಟಿನ ಹೊರಗೆ ಮಕ್ಕಳು ಕ್ರಿಕೆಟ್‌ ಆಡುತ್ತಿದ್ದರು. ಚೆಂಡು ಗೇಟಿನೊಳಗೆ ಬಂದರೆ ಕೂಡಲೆ ಹೆಕ್ಕಿ ಕೊಡುತ್ತಿದ್ದಳು. ಅಥವಾ ಹಾಗೆ ಚೆಂಡು ಬರುವುದನ್ನೇ ಕಾಯುತ್ತಿದ್ದಳು. ಅವರ ಮಾತಿನಿಂದ ಹಿಂದಿ ಕಲಿಯತೊಡಗಿದಳು. ದೊಡ್ಡ ಮನೆಯೊಳಗೆ ದೊಡ್ಡದಾಗಿ ಹರಡಿಕೊಂಡಿಕೊಂಡಿರುವ ಕತ್ತಲು, ದಾರಿದ್ರ್ಯ, ನಿಗೂಢತೆ ಮತ್ತು ಜನಗಳಿದ್ದರೂ ಮೌನದ ಬಗ್ಗೆ ಮಹೇಶನಲ್ಲಿ ಕೇಳಿದಾಗ ಅವನೆಂದ “ಈ ಜಾಗ, ಮನೆ ನಮ್ಮ ಪೂರ್ವಜರದ್ದು, ಇದರ ಮೇಲೆ ಕೋರ್ಟ್‌ ಕೇಸ್‌ ಇದೆ, ಕೇಸಿನಲ್ಲಿ ಜಯ ನಮ್ಮದೇ, ಕೊಟ್ಯಾಂತರ ಬೆಲೆಬಾಳುವ ಜಾಗ ಕಣೇ. ಮುಂದಿರುವ ಜಾಗ ಮಾರಾಟ ಮಾಡಿದರೇ ಸಾಕು, ನೀನು ರಾಣಿ, ನಾನು ರಾಜ, ಅಲ್ಲಿಯವರೆಗೆ ಸ್ವಲ್ಪ ಕಷ್ಟ” ಎನ್ನುತ್ತಾ ಅವಳನ್ನು ಹತ್ತಿರಕ್ಕೆ ಎಳೆದುಕೊಂಡ. “ಇದೇ ಒಂದೆರಡು ಕೋಣೆಗಳಲ್ಲಿ ಮಾತ್ರ ಓಡಾಡಿಕೊಂಡಿರು ಚಿನ್ನ” ಪದೇ, ಪದೇ ಎಂದ. ʻಕೋರ್ಟ್‌ ಕೇಸಿನಲ್ಲಿ ಈ ಮನೆ ನಮ್ಮದಾಗದಿದ್ದರೆ!ʼ ಎನ್ನುವ ಅವಳ ಪ್ರಶ್ನೆ ಗಂಟಲಲ್ಲೇ ಉಳಿಯಿತು.

ಏನಾದರಾಗಲಿ ತಾನು ಪೂರ್ತಿ ಮನೆಯನ್ನು ನೋಡಲೇಬೇಕೆಂದುಕೊಂಡು ಒಂದು ದಿನ ಕಸಬರಿಕೆ ಹಿಡಿದುಕೊಂಡು ಒಳಗಡೆ ಹೋದಳು. ಉಪ್ಪರಿಗೆಯ ಮೇಲೆ ನರಳಿಕೆ ಕೇಳಿಸಿತು, ಹೆಣ್ಣಿನ ಸ್ವರ! ಅಂದರೆ ತನಗೆ ಗೊತ್ತಿಲ್ಲದ ಇನ್ನೊಂದು ಹೆಣ್ಣು ಜೀವ ಇಲ್ಲಿದೆ. ಅವಳು ಉಪ್ಪರಿಗೆ ಹತ್ತುವುದರಲ್ಲಿದ್ದಳು. ಅಷ್ಟರಲ್ಲಿ ಅವಳನ್ನು ಹಿಂದಿನಿಂದ ಯಾರೋ ಗಟ್ಟಿಯಾಗಿ ಹಿಡಿದುಕೊಂಡಂತಾಯಿತು. ಕಷ್ಟಪಟ್ಟು ಬಿಡಿಸಿಕೊಂಡು ತಿರುಗಿದಾಗ ಮಹೇಶನ ತಮ್ಮ! ಇವಳ ಗಾಬರಿ ನೋಡಿ ಅವನು ಚಪ್ಪಾಳೆ ತಟ್ಟಿ ನಕ್ಕ. ರಾತ್ರಿ ಹತ್ತಿರ ಬಂದ ಗಂಡನನ್ನು ದೂರ ತಳ್ಳಿ ಮನೆ ಮತ್ತು ಮನೆಯವರ ಬಗ್ಗೆ ಸತ್ಯ ಹೇಳೆಂದು ಪೀಡಿಸಿದಳು “ಅಧಿಕ ಪ್ರಸಂಗ ಬೇಡ, ನನ್ನ ಕಷ್ಟ ನಿನಗೇನು ಗೊತ್ತು? ಕೋರ್ಟ್‌ ಕೇಸಿನದ್ದೇ ತಾಪತ್ರಯ, ದುಡ್ಡು ಶಾರ್ಟೇಜ್‌ ಆಗಿದೆ, ಲಾಯರ್‌ ಫೀಸ್‌ ಕೊಡಲು ದುಡ್ಡಿಲ್ಲ” ಎಂದ. “ನಾವು ಊರಿಗೆ ಹೋಗೋಣ, ನೀವು ಮೊದಲಿನ ಬ್ಯೂಸನೆಸ್‌ ಮಾಡಿ, ನಾನು ಕೆಲಸಕ್ಕೆ ಹೋಗುವೆ”, “ದುಡ್ಡು ಸಿಕ್ಕರೆ ದೊಡ್ಡ ಮೊತ್ತ ಸಿಗಬೇಕು, ಅದಕ್ಕೆಲ್ಲಾ ಟೈಮ್‌ ಬರಬೇಕು, ಸ್ವಲ್ಪ ದಿನ ತಡಿ ಚಿನ್ನ”, ಅವಳೂ ಪಟ್ಟು ಬಿಡದೆ “ಇಲ್ಲೇ ಕೆಲಸಕ್ಕೆ ಹೋಗ್ತೀನಿ, ಮನೆ ಕೆಲಸವಾದರೂ ಸರಿಯೇ” ಎಂದಾಗ ದಪ ದಪನೆ ಹೊರಗೆ ನಡೆದ. ತನ್ನ ವರ್ತಮಾನ, ಭವಿಷ್ಯವೇನೂ ಭೂತಕಾಲಕ್ಕಿಂತ ಹೆಚ್ಚು ಭಿನ್ನವಾಗಿಲ್ಲ ಎನಿಸಿತವಳಿಗೆ.

ಮರುದಿನ ಅವಳನ್ನು ಸಿಂಗರಿಸಿ ಅಲ್ಲಿ ಇಲ್ಲಿ ನಿಲ್ಲಿಸಿ ಮೊಬೈಲಿನಲ್ಲಿ ಫೋಟೋ ತೆಗೆದ, ತನ್ನದೇ ಫೋಟೋದಲ್ಲಿ ಯಾವ್ಯಾವುದೋ ಸಿನೆಮಾ ತಾರೆಯರನ್ನು ಕಂಡು ಖುಷಿ ಪಟ್ಟ.

ಸಂಜೆ 6ಕ್ಕೆಲ್ಲಾ ಮನೆಗೆ ಬಂದ ಮಹೇಶ ಖುಷಿಯಲ್ಲಿದ್ದ, ಅವಳ ಗಲ್ಲವನ್ನು ಹಿಡಿದೆತ್ತಿ ಲೊಚಲೊಚನೆ ಮುತ್ತಿಟ್ಟು ಎಂದ “ದುಡ್ಡಿನ ತಾಪತ್ರಯಕ್ಕೊಂದು ದಾರಿಯಾಗಿದೆ, ನಿನ್ನ ಸಹಕಾರ ಬೇಕು, ಒಳ್ಳೇ ಆಫರ್‌ ಕಣೇ, ಇನ್ನಾರು ತಿಂಗಳು ನೀನು ರಾಣಿಯೇ, ನೀನು ರಾಣಿಯ ಹಾಗಿರಬೇಕೆನ್ನುವುದೇ ನನ್ನಾಸೆ” ಯಾವುದೋ ಅಪಾಯದ ವಾಸನೆ ಬಂದಂತಾಯಿತು, ಅನುಮಾನದಿಂದಲೇ ಅವನ ಮುಖ ನೋಡಿದಳು, “ಒಂದಾರು ತಿಂಗಳು ಒಬ್ಬರ ಮನೆಯಲ್ಲಿ ನೀನು ಇದ್ದರಾಯಿತು” ಅವನೆಂದಾಗ “ಮನೆ ಕೆಲಸಕ್ಕಾ? ರಾಣಿ ಯಾಕಂದೆ?ನೀನೂ ಬಾ” ಹಾಗಂದರೂ ಖುಷಿಯಾದಳು, ಅಂತೂ ತನಗೆ ಈ ನಿಗೂಢ ಕತ್ತಲ ಮನೆಯಿಂದ ಮುಕ್ತಿ.

ಮತ್ತೆರಡು ದಿನಕ್ಕೆ ಯಾವುದೋ ಮನೆಗೆ ಬಿಟ್ಟು ಬಂದ ಮಹೇಶ. ಲಕ್ಕಿಯ ಬದುಕು ಮತ್ತೊಂದು ದಿಕ್ಕಿನಲ್ಲಿ ತಿರುಗಿತು. ಧಾರಾಳ ಬೆಳಕಿರುವ ಚಿಕ್ಕ ಮನೆ, ಮನೆಯಲ್ಲಿ ಟಿವಿ, ಫ್ರಿಡ್ಜ್‌, ಅಡಿಗೆ ಸಾಮಾನುಗಳಿದ್ದವು; ಮನೆಯೊಳಗೆ ಯಾರೂ ಕಾಣಲಿಲ್ಲ. ರಾತ್ರಿ 10 ಗಂಟೆಯ ನಂತರ ಗಂಡಸೊಬ್ಬ ಮನೆಯೊಳಗೆ ಬಂದ, ಬಂದವನು ಇವಳನ್ನು ಅಡಿಯಿಂದ ಮುಡಿಯವರೆಗೆ ನೋಡಿ ಖುಷಿ ಪಟ್ಟು ಅವಳ ಕೈ ಹಿಡಿದುಕೊಂಡ. ಅವಳು ಕೊಸರಿಕೊಂಡಳು, ಅವಳನ್ನು ಹಾಸಿಗೆಗೆ ದೂಡಿದವನೆಂದ “ತುಮೇಃ 6 ಮಹಿನೇಕೇಲಿಯೆ ಭಾಡೆ ಪೇ ಲಿಯಾ, ಫ್ರೀ ನಹಿ, ತುಮಾರ ಪತಿ ಕೋ ಡೇಢ್ ಲಾಖ್ ಭಾಡಾ ದಿಯಾ (ನಿನ್ನನ್ನು 6 ತಿಂಗಳಿಗೆ ಬಾಡಿಗೆ ಮೇಲೆ ಕೊಂಡಿದ್ದೇನೆ, ಫ್ರೀ ಅಲ್ಲ, ನಿನ್ನ ಗಂಡನಿಗೆ 1.50 ಲಕ್ಷ ಬಾಡಿಗೆ ಕೊಟ್ಟಿದ್ದೇನೆ)”, ಅವನಾಡಿದ ಪ್ರತೀ ಶಬ್ಧವೂ ಅರ್ಥವಾಯಿತು, ಪರ ಪುರಷನೊಬ್ಬ ತನ್ನನ್ನು ಆಕ್ರಮಿಸುತ್ತಿದ್ದಾನೆ ಎನ್ನುವ ಗಾಬರಿಗಿಂತ ಗಂಡನಾದವನೇ ಹೀಗೆ ಒಪ್ಪಂದ ಮಾಡಿಕೊಂಡನಲ್ಲ ಎನ್ನುವ ದುಃಖ, ಹೇಸಿಗೆ ಅವಳಲ್ಲಿ ಜಾಸ್ತಿಯಾಯಿತು. ಗೆಳತಿ ಸಾವಿತ್ರಿಯ ನೆನಪಾಯಿತು. ಅವಳ ಕೈಯನ್ನು ಯಾರೋ ಹಿಡಿದುಕೊಂಡರೆಂದು ಅವಳ ಗಂಡ ಅವನನ್ನು ಥಳಿಸಿದ್ದ, ಆದರಿಲ್ಲಿ? ಗಂಡನೇ ಬಾಡಿಗೆ ಮೇಲೆ ಕೊಟ್ಟಿದ್ದಾನೆ! ಇದಕ್ಕಿಂತ ದೊಡ್ಡ ದುರ್ಗತಿ ಮತ್ತೊಂದಿಲ್ಲ, ಈ ಚೆಂದಕ್ಕೆ ಮದುವೆ ಬೇಕಿತ್ತೇ ಎನಿಸಿತು. ಅವಳನ್ನು ಬಾಡಿಗೆ ಪಡೆದ ಗಂಗಾಧರ ನೀರವ್ ಮಧ್ಯರಾತ್ರಿ ಬಂದರೆ ಬೆಳಿಗ್ಗೆ ಹೊರಟು ಹೋಗುತ್ತಿದ್ದ, ಬಾಡಿಗೆ ಪಡೆದ ವಸ್ತುಗಳನ್ನು ಹೇಗೆ ಉಪಯೋಗಿಸಬೇಕೋ ಹಾಗೆ ಅವಳನ್ನು ಉಪಯೋಗಿಸುತ್ತಿದ್ದ.

6 ತಿಂಗಳು ಕಳೆಯುತ್ತಿದ್ದಂತೆ ಮಹೇಶ ಹಾಜರಾದ “ಊಟ, ತಿಂಡಿಗೆ ತೊಂದರೆ ಇರಲಿಲ್ಲ ಅಲ್ವಾ? ಅವನಿಂದ ಯಾವ ಗಿಫ್ಟ್‌ ವಸೂಲಿ ಮಾಡಿದಿ?‌ ನನಗೇನು ಗಿಫ್ಟ್‌ ತಂದೆ?” ಅವಳು ಮಾತಾಡಲಿಲ್ಲ, ಶೂನ್ಯವನ್ನೇ ದಿಟ್ಟಿಸುತ್ತಿದ್ದಳು. ಅವಳ ಗಂಟು ಮುಖ ನೋಡಿ “ಇದೆಲ್ಲಾ ಇಲ್ಲಿ ಕಾಮನ್‌, ನೀನೊಬ್ಬಳೇನಲ್ಲಾ, ನನ್ನಣ್ಣನನ್ನು ನೋಡಿದ್ದಿಯಲ್ವಾ? ಅವನ ಹೆಂಡತಿಯೂ ಬಾಡಿಗೆ ಮೇಲೆ ಬೇರೊಂದು ಊರಿಗೆ ಹೋಗಿದ್ದಾಳೆ, ಬಾಡಿಗೆ ಮುಗಿಸಿ ಬರುವಾಗ ನಮಗೆಲ್ಲಾ ಗಿಫ್ಟ್‌ ತರುತ್ತಾಳೆ.”

ಅವಳು ಗಂಡನ ಮನೆಗೆ ಬಂದು 3-4 ವಾರ ಕಳೆಯಿತು. ಮಹೇಶ ಅವಳನ್ನು ಚೆನ್ನಾಗಿಯೇ ನೋಡಿಕೊಂಡ, ಒಂದು ಮಧ್ಯಾಹ್ನ ಬರುವಾಗ ಗುಲಾಬಿ ಬಣ್ಣದ ಪೇಪರಿನೊಳಗೆ ಕಟ್ಟಿಕೊಂಡು ಬಂದ ಪಳ, ಪಳ ಹೊಳೆಯುವ ಕರಿಮಣಿಯನ್ನು ಎತ್ತಿ ತೋರಿಸುತ್ತಾ.. “ಬೆಳ್ಳಿಯದು, ಪೂರಾ 5 ಸಾವಿರ ಕೊಟ್ಟಿದ್ದೇನೆ. ಎಲ್ಲಿ ನಗು.. ಮುಂದಿನ ವರ್ಷ ನಿನ್ನೂರಿಗೆ ಕರೆದುಕೊಂಡು ಹೋಗುವೆ, ಒಳ್ಳೆ ಸೆಠಾಣಿ ತರಹ ಕಾಣಿಸಬೇಕು”, “ಚಿನ್ನವಾದರೇನು, ಬೆಳ್ಳಿಯದಾದರೇನು, ನೀನು ಕಟ್ಟುವ ಕರಿಮಣಿಗೆ ಬೆಲೆಯಿಲ್ಲ” ಕೂಗಿಕೊಂಡವಳು ಅವನು ತಂದ ಕರಿಮಣಿಯನ್ನು ಮೂಲೆಗೆ ಎಸೆದಳು. “ಏನು ಗಂಡ ಬೇಡ್ವಾ ನಿಂಗೆ?” ಎಂದು ಅವಳ ಮುಖಕ್ಕೆ ಎರಡು ಬಿಗಿದ, ಕೆನ್ನೆ ಹರಿದು ರಕ್ತ ಬಂದರೂ ನೋವಾಗಲಿಲ್ಲ; ಮನದಲ್ಲಿ ಅಡಗಿ ಕುಳಿತ ನೋವು ಇನ್ನೂ ಜಾಸ್ತಿ ಇತ್ತು.

ಗೇಟಿನ ಹೊರಗೆ ಮಕ್ಕಳು ಕ್ರಿಕೆಟ್‌ ಆಡುತ್ತಿದ್ದರು. ದೊಡ್ಡವರಾಗಿದ್ದಾರೆ ಎನಿಸಿತು. ಜೋರಾಗಿ ಕೇಳಿದಳು “ಕೈಸೇ ಹೋ? (ಹೇಗಿದ್ದೀರಿ?)” ಮಕ್ಕಳು ಇವಳನ್ನು ನೋಡಿ ನಕ್ಕು “ಭಾಡೇ ಕೀ ದೀದಿ (ಬಾಡಿಗೆಯ ಅಕ್ಕ)” ಎಂದವು. ಗಂಡ ಹೊಡೆದದ್ದಕ್ಕಿಂತ ಜೋರಾಗಿ ನೋವಾಯಿತು.

ಮತ್ತೊಂದು ಬಾಡಿಗೆ ಬಂತು, ಬ್ಯಾಗನ್ನು ಹಿಡಿದುಕೊಂಡು ಹೊರಟಳು. ಹೀಗೆ 4-6 ತಿಂಗಳಿಗೊಮ್ಮೆ ಬಾಡಿಗೆ ಮನೆ, ಬಾಡಿಗೆ ಹಿಡಿದವರು ಬದಲಾದರು. ಪ್ರತಿ ಸಲ “ಕೋರ್ಟಿನ ಕೇಸು ಇನ್ನೇನು ಮುಗಿಯಲಿದೆ, ಕಡೆಗೆ ಈ ಮನೆಗೆ ನೀನೇ ರಾಣಿ” ಎನ್ನುತ್ತಿದ್ದ. ಅವಳೂ ಬದಲಾಗುತ್ತಾ ಬಂದಳು. ಮಾತು ಕಮ್ಮಿಯಾಗಿ ಸ್ಥಿತಪ್ರಜ್ಞತೆಯನ್ನು ರೂಢಿಸಿಕೊಂಡಳು. ಬಾಡಿಗೆ ಕೊಟ್ಟ ವಸ್ತುಗಳು ಬಾಳಿಕೆ ಬರುವುದು ಕಮ್ಮಿ, ಇವಳೂ ಅಕಾಲವಾಗಿ ನಜ್ಜುಗುಜ್ಜಾದಳು. ಮಹೇಶನೂ ಬಾಡಿಗೆ ಮೇಲೆ ಮತ್ಯಾರನ್ನೋ ಇಟ್ಟುಕೊಂಡಿದ್ದಾನೆಂದು ತಿಳಿಯಿತು. ಇತ್ತೀಚಿನ ದಿನಗಳಲ್ಲಿ ಮಹೇಶನ ತಂದೆ ಕಾಣಿಸಲಿಲ್ಲ. ತಾಯಿ ತನ್ನಷ್ಟಕ್ಕೇ ಮಾತಾಡಿಕೊಳ್ಳುವುದು ಜಾಸ್ತಿಯಾಗಿತ್ತು. ಉಪ್ಪರಿಗೆಯ ಮೇಲೆ ಹೋಗಲು ಧೈರ್ಯ ಸಾಕಾಗದಿದ್ದರೂ ಕೆಳಗಡೆಯಿಂದಲೇ ಇಣಕಿದಾಗ ಹಿಂದೆ ಕೇಳಿದ್ದ ಹೆಣ್ಣಿನ ಸ್ವರ ಕೇಳಿಸಲಿಲ್ಲ. ಎಲ್ಲವೂ ವಿಚಿತ್ರವಾಗಿ ಕಂಡರೂ ಯಾರನ್ನು ಕೇಳುವುದು?

ಲಕ್ಕಿ ಈ ಸಲ ಗಂಡನ ಮನೆಗೆ ಬಂದು ಮೂರು ತಿಂಗಳಾಯಿತು. ಮಹೇಶ ಆಗಾಗ ಅವಳನ್ನು ಅಲ್ಲಿ, ಇಲ್ಲಿ ಕೂರಿಸಿ ಫೋಟೋ ತೆಗೆಯುತ್ತಿದ್ದ. ಅವನ ಸಿಡಿಮಿಡಿ ಜಾಸ್ತಿಯಾಯಿತು “ಏನಾಗಿದೆ ನಿಂಗೆ? ಯಾವ ಖಾಯಿಲೆ ಅಂಟಿಕೊಂಡಿದೆ? ಪರಕೆ ಕಡ್ಡಿಯ ಹಾಗಾಗಿದ್ದಿ, ಬಾಡಿಗೆ ಸಿಗುತ್ತಿಲ್ಲ, ಗುಜರಿಗೆ ಹಾಕಲು ಲಾಯಕ್‌” ಮಹೇಶನೂ ಅವಳನ್ನು ದೂರವೇ ಇಟ್ಟ. ಮಹೇಶನ ಅಣ್ಣನ ಹೆಂಡತಿ ಬಾಡಿಗೆಗೆ ಹೋದವಳು ಸತ್ತ ಸುದ್ಧಿ ಬಂತು. ಶವ ಮನೆಗೆ ತರಬೇಕೇ ಬೇಡವೇ ಎನ್ನುವುದರ ಬಗ್ಗೆ ಚರ್ಚೆಯಾಗಿ ಕಡೆಗೆ ಅವಳನ್ನು ಮನೆಗೆ ತರದೆ ಸುಡುವುದೆಂದು, 12ರ ತಿಥಿಯನ್ನು ಮನೆಯಲ್ಲೇ ಮಾಡುವುದೆಂದು ತೀರ್ಮಾನವಾಯಿತು.

ಮುಸ್ಸಂಜೆಯ ಹೊತ್ತಿನಲ್ಲಿ ಯಾರೋ ಕಾರಿನಲ್ಲಿ ಬಂದರು. ಚೆನ್ನಾಗಿ ಸಿಂಗರಿಸಿಕೊಳ್ಳಬೇಕೆಂದು ಮಹೇಶ ಮೊದಲೇ ತಾಕೀತು ಮಾಡಿದ್ದ. ಇವಳು ಗೇಟಿನ ಒಳಗಿದ್ದರೆ, ಬಂದವ ಹೊರಗಿನಿಂದಲೇ ನೋಡುತ್ತಿದ್ದ. ಬಂದವ ಹೋದ ನಂತರ ಮಹೇಶ ಭುಸುಗುಟ್ಟಿದ “25 ಸಾವಿರ ಕೊಡಲೂ ರೆಡಿ ಇಲ್ಲ, ಅದೂ 6 ತಿಂಗಳಿಗೆ. ಇತ್ತೀಚೆಗೆ ಖರ್ಚು ಜಾಸ್ತಿಯಾಗಿದೆ, ಬಾಡಿಗೆ ಮಾತ್ರ ಕಮ್ಮಿ.” “ಮಹೇಶ ಇದೆಲ್ಲಾ ಬೇಡ, ನಮ್ಮೂರಿಗೆ ಹೋಗೋಣ, ನಾನು ಮುಸುರೆ ತಿಕ್ಕಲು ಹೋಗ್ತೀನಿ, ಇಬ್ರೂ ದುಡಿದರೆ ಸಂಸಾರಕ್ಕೆ ಸಾಕಾಗುತ್ತಲ್ವಾ?” “ನಮ್ಮದು ರಾಜ ಮನೆತನ, ಬ್ಯೂಸನೆಸ್‌ ಮಾಡಬಹುದೇ ಹೊರತು ಕೆಲ್ಸವಲ್ಲ, ಅದಕ್ಕೆ ನಿನ್ನನ್ನೂ ರಾಣಿಯ ಹಾಗಿರು ಎಂದಿದ್ದು.”

ಗಂಡನ ಮನೆಗೆ ಬಂದು 4 ತಿಂಗಳಾದ ಮೇಲೆ ವ್ಯವಹಾರ ಕುದುರಿತು. “ಭಾಡಾ ಮಿಲ್‌ ಗಯಾ, ಅಲ್ಲಿ ಏನೇನು ಬೇಕೋ ಎಲ್ಲಾ ತರಿಸಿ ತಿನ್ನು, ಮಜಾ ಮಾಡು, ಸುಧಾರಿಸಿಕೊ. ಇನ್ನೂ ಹೀಗೆಯೇ ಇದ್ದರೆ ಎಲ್ಲಾದರೂ ಬಿಟ್ಟು ಬರ್ತಿನಿ” ಎಂದು ಹರಸಿ ಕಳಿಸಿದ.

ಸಚೀಂದ್ರ ಅವಳ ಮಾಲೀಕ, ಪ್ಯಾಂಟು, ಶರ್ಟನ್ನು ಅವನು ಹಾಕಿಕೊಂಡಿದ್ದಾನೋ, ಇಲ್ಲಾ ಪ್ಯಾಂಟು, ಶರ್ಟೇ ಅವನನ್ನು ಹಾಕಿಕೊಂಡಿದೆಯೋ ಎನ್ನುವಷ್ಟು ತೆಳ್ಳಗಿದ್ದ. ವಿಪರೀತ ಕೆಮ್ಮ, ಕೆಮ್ಮಿ, ಕೆಮ್ಮಿ ಹಂಡೆಗಟ್ಟಲೆ ಕಫ ಉಗಿಯುತ್ತಿದ್ದ. ಅವನಿಗೆ ಉಗುಳು ಬಂದಾಗಲೆಲ್ಲಾ ಅವಳು ಪಾತ್ರೆ ಹಿಡಿಯಬೇಕು. ಈ ಚಂದಕ್ಕೆ ಬಗಲಲ್ಲೊಂದು ಹೆಣ್ಣು ಬೇಕಾಗಿತ್ತವನಿಗೆ. ಮುಂದೇನು ಎನ್ನುವ ಪ್ರಶ್ನೆ ಯಾವತ್ತೂ ಅವಳ ಮುಂದಿರಲಿಲ್ಲ. ಆದರೆ ದೊಡ್ಡ ಆಪತ್ತೊಂದು ತನಗಾಗಿ ಕಾಯುತ್ತಿದೆಯೆಂದು ಮಾತ್ರ ಇತ್ತೀಚೆಗೆ ಎನಿಸುತ್ತಿತ್ತವಳಿಗೆ.

***

“ಯಾವ ಊರು, ಎಲ್ಲಿಗೆ ಹೋಗ್ಬೇಕು?” ಕಿಟಕಿಯ ಹೊರಗೆ ಶೂನ್ಯವನ್ನೇ ದಿಟ್ಟಿಸುತ್ತಿದ್ದವಳನ್ನು ಅವಳೆಡೆಗೆ ಬಂದ ಪ್ರಶ್ನೆಯೊಂದು ಬಡಿದೆಬ್ಬಿಸಿತು. ಸೀರೆಯುಟ್ಟ ಹೆಂಗಸೊಬ್ಬಳು ಅವಳ ಮುಂದಿದ್ದಳು. ಯಾವುದೋ ತೀರ್ಥ ಕ್ಷೇತ್ರಕ್ಕೆ ಹೋಗಿ ಬಂದಿರಬೇಕು. ಹಣೆಯ ಮೇಲೆ ಧಾರಾಳ ಕುಂಕುಮವಿತ್ತು. ಹೆಂಗಸು ಕೇಳಿದ ಪ್ರಶ್ನೆ ಕನ್ನಡದಲ್ಲಿತ್ತು, ಬಹಳ ದಿನಗಳ ಮೇಲೆ ಕನ್ನಡ ಕೇಳಿದರೂ ಕೂಡಲೆ ಅರ್ಥವಾಯಿತವಳಿಗೆ, ಅದು ಸರಿ ತಾನೆಲ್ಲಿಗೆ ಹೋಗಬೇಕು? ಅಜ್ಮೇರ್-ಮೈಸೂರು ಎಕ್ಸಪ್ರೆಸ್‌ ಹತ್ತಿದ್ದು ಹೌದು, ಇದರಲ್ಲಿ ಕೂತರೆ ತನ್ನ ಊರು ತಲುಪುವುದೂ ಹೌದು. ಊರು ತಲುಪಿದರಾಯಿತೇ, ಊರಿನಲ್ಲಿ ಮಾಡುವುದೇನು? ಅಲ್ಲಿ ಎದುರಾಗುವ ಪ್ರಶ್ನೆಗಳಿಗೂ ಉತ್ತರವಿಲ್ಲ. ಮನಸ್ಸಿನ ತಕಲಾಟದಲ್ಲಿ ಇವಳು ಕಳೆದು ಹೋಗಿರುವಾಗ ಇವಳ ಮೌನ ನೋಡಿ ಪ್ರಶ್ನೆ ಕೇಳಿದವರು ಸುಮ್ಮನಾದರು.

ಅವಳನ್ನು ಬಾಡಿಗೆ ಹಿಡಿದ ಸಚೀಂದ್ರನ ಕಣ್ಣು ತಪ್ಪಿಸಲು ಕಷ್ಟವಾಗಲಿಲ್ಲ. ಕೆಮ್ಮಿ, ಕೆಮ್ಮಿ ಸುಸ್ತಾಗಿ ಹಾಸಿಗೆಯಲ್ಲಿ ಸತ್ತಂತೆ ಬಿದ್ದವನ ಪರ್ಸ್‌ ತೆಗೆದುಕೊಂಡು ರೈಲ್ವೆ ಸ್ಟೇಷನ್ನಿಗೆ ಬಂದಾಗ ಅಜ್ಮೇರ್-ಮೈಸೂರು ಎಕ್ಸಪ್ರೆಸ್ ಕಾಣಿಸಿತು. ರೈಲು ಹತ್ತಿ ಗುಜರಾತ್‌ ಯಾತ್ರೆಗೆ ಇಂತಿಶ್ರೀ ಹಾಡಲು ಹೊರಟಳು. ರೈಲಿನಲ್ಲಿ ಕೂತವಳಿಗೆ ಯಾರೂ ಇಲ್ಲದ ತನಗೆ ತನ್ನೂರೂ ಒಂದೇ, ಗುಜರಾತೂ ಒಂದೇ, ಜೀವಿಸಬೇಕೆಂದರೆ ಬಾಡಿಗೆಗೆ ಹೋಗಬೇಕು. ತನಗಿನ್ನು ತಿಂಗಳ ಬಾಡಿಗೆ ಕಷ್ಟ, ದಿನದ ಬಾಡಿಗೆ ಸಿಗಬಹುದು. ಇಲ್ಲಾ ಕೂಲಿ ಮಾಡಬೇಕು. ಇದಕ್ಕೆಲ್ಲಾ ಯಾವ ಊರಾದರೇನೆ? ಗುಜರಾತಿನಲ್ಲೇ ಇರಬಹುದಿತ್ತು. ಗುರುತಿಸುವವರಿರಲಿಲ್ಲ. ಹಾಗೆಂದುಕೊಂಡವಳು ರೈಲಿನಿಂದ ಇಳಿಯಲು ಹೊರಟಳು, ಅಷ್ಟರಲ್ಲಿ ರೈಲಿನ ಸ್ಪೀಡ್ ಜಾಸ್ತಿಯಾಯಿತು. ಅವಳನ್ನು ಯಾರೋ ಒಳಗೆ ತಳ್ಳಿದರು. ಅವಳು ಮತ್ತು ರೈಲು ಅವಳೂರಿನತ್ತ ಹೊರಟರು.


  • ಗೀತಾ ಕುಂದಾಪುರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading