ಯುಗಾದಿ ದಿನ ಬ್ರಹ್ಮಾಂಡದಲ್ಲಿ ಸೃಷ್ಠಿಯಾದ ಎಲ್ಲ ಜೀವಿಗಳಲ್ಲಿಯೂ ಸರ್ವವ್ಯಾಪ್ತಿ ಪರಮಾತ್ಮನ ಮಹಿಮೆಯನ್ನು ಸ್ಮರಿಸುತ್ತ ಪರಮಾತ್ಮನ ಪರಿವಾರವಾದ ಶ್ರೀ ಲಕ್ಷ್ಮೀ ಸಹಿತ ಎಲ್ಲ ದೇವತೆಗಳನ್ನು ಚಿಂತನೆ ಮಾಡಿ ಅವರ ಅನುಗ್ರಹ ಪಡೆಯುವ ದಿನವೇ ಚಂದ್ರಮಾನ ಯುಗಾದಿ. ಸಂಧ್ಯಾ ಟಿ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
“ವಾಸುದೇವ ವಿಗತಾಘ ಸಂಘತವ
ದಾಸೋಹಂ ತವ ದಾಸೋಹಂ
ಕಾಲಾಂತರ್ಗತ ಕಾಲನಿಯಾಮಕ ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲ ಮೂರ್ತಿ ತವ ದಾಸೋಹಂ”
ಎಂದು ಶ್ರೀ ಜಗನ್ನಾಥದಾಸರು ತುಂಬಾ ಸ್ವಾರಸ್ಯಕರವಾಗಿ ರಚಿಸಿದ್ದಾರೆ. ಇದರಂತೆ ಅನೇಕ ಜ್ಞಾನಿಗಳು, ಪಂಡಿತರು ಶರಣರು ಸಮಯದ ಬಗ್ಗೆ ವಿಸ್ತಾರವಾಗಿ ತಿಳಿಸಿ ನಿತ್ಯವೂ ಸ್ಮರಿಸಲು ತಿಳಿಸಿದ್ದಾರೆ.
ಯುಗ ಯುಗಾದಿ ಕಳೆದರೂ ಮರಳಿ ಯುಗಾದಿ ಬರುತಿದೆ ಅಕ್ಷರಗಳನ್ನು ಸಂಪತ್ತೆಂದು ಸಂಪಾದಿಸಿದ ಶ್ರೇಷ್ಠ ವಿದ್ವಾಂಸರಾದ ದ,ರಾ ಬೇಂದ್ರೆಯವರ ಈ ಕಾವ್ಯ ಸಮಯದ ಮಹತ್ವ ತಿಳಿಸಿದೆ. ಸಮಯ ಯಾವತ್ತೂ ಹೊಸತನ್ನು ತರುತ್ತದೆ.ಯುಗಾದಿ ಅಂದರೆ ಸಮಯದ ಪ್ರಾರಂಭ. ಎಲ್ಲದಕ್ಕೂ ಸಮಯ ತುಂಬಾ ಮುಖ್ಯ. ಈಗಿರುವ ಸಮಯ ಮತ್ತೆ ಮರಳಿ ಬಾರದು. ಹೊಸ ಸಮಯ ಬರುವುದು. ಹೊಸತನ್ನೆ ತರುವುದು. ಕಾರಣ ಹೊಸ ವರ್ಷದ ಮೊದಲನೆಯ ದಿನ ಸಮಯದ ಕೊಡುಗೆಯನ್ನು ಸ್ಮರಿಸುವ ದಿನ. ಸಮಯವನ್ನು ನಾವು ಯಾವ ಭಾವನೆಯಿಂದ ಸ್ವೀಕರಿಸುವೆವೋ ಅದೇ ರೀತಿಯಾಗಿ ಪ್ರಕೃತಿಯು ನಮಗೆ ಸಮಯಾನುಸಾರವಾಗಿ ಕೊಡುಗೆಯನ್ನು ಕೊಡುತ್ತದೆ. ಬ್ರಹ್ಮದೇವರು ಪ್ರಪಂಚವನ್ನು ಸೃಷ್ಟಿಸಿದ ಸಮಯವೇ ಯುಗಾದಿ ಎನಿಸಿಕೊಂಡಿದೆ. ಈ ಸಮಯದಲ್ಲಿ ಪ್ರಕೃತಿಯಲ್ಲಿಯೂ ಗಿಡ ಮರಗಳಲ್ಲಿ ಹೊಸ ಚಿಗುರು ಹೂವು ಆರಂಭ ಹವಾಮಾನದಲ್ಲಿ ವಿಭಿನ್ನ. ಇದಕ್ಕೆ ವಸಂತ ಋತು ಎಂದು ಹೇಳುವರು. ಚೈತ್ರ ಮಾಸ ಶುಕ್ಲ ಪಕ್ಷದ ಮೊದಲನೆಯ ದಿನ ಈ ಹಬ್ಬವನ್ನು ಭಕ್ತಿ ಶ್ರದ್ಧೆ ಸಂಭ್ರಮದಿಂದ ಆಚರಿಸುತ್ತಾರೆ. ಬ್ರಹ್ಮಾಂಡವು ಪಂಚಭೂತದಿಂದ ಸೃಷ್ಟಿ ಮಾಡಿದ್ದಾನೆ.
ಈ ದಿನ ಬ್ರಹ್ಮಾಂಡದಲ್ಲಿ ಸೃಷ್ಠಿಯಾದ ಎಲ್ಲ ಜೀವಿಗಳಲ್ಲಿಯೂ ಸರ್ವವ್ಯಾಪ್ತಿ ಪರಮಾತ್ಮನ ಮಹಿಮೆಯನ್ನು ಸ್ಮರಿಸುತ್ತ ಪರಮಾತ್ಮನ ಪರಿವಾರವಾದ ಶ್ರೀ ಲಕ್ಷ್ಮೀ ಸಹಿತ ಎಲ್ಲ ದೇವತೆಗಳನ್ನು ಚಿಂತನೆ ಮಾಡಿ ಅವರ ಅನುಗ್ರಹ ಪಡೆಯುವ ದಿನ. ಅಲ್ಲದೆ ಮನೆಯ ಹಿರಿಯರ ಗುರುಗಳ ಸಜ್ಜನರ ಆಶೀರ್ವಾದ ಪಡೆಯಬೇಕು. ಅವತ್ತು ಶುಭವಾದ ಪವಿತ್ರವಾದ ದಿನ ಎಂದು ವರುಷದಿಂದ ಆಚರಣೆ ಮಾಡುವರು.

ಮನೆಯನ್ನು ಮಾವಿನ ತೋರಣ ಹಾಗೂ ಹೂವುಗಳಿಂದ ಅಲಂಕಾರ ಮಾಡುವರು. ನೀರಿನಲ್ಲಿ ಗಂಗೆಯನ್ನು ಆವಾಹನ ಮಾಡಿ ಅಭ್ಯಂಗಸ್ನಾನ ಮಾಡುವುದು ಯೋಗ್ಯ. ಸಿಹಿ, ಖಾರ ಪಕ್ವಾನ್ನಗಳನ್ನು ಮತ್ತು ಹಣ್ಣು ಹಾಲು ನೈವೇದ್ಯ ಮಾಡುತ್ತಾರೆ.ಮುಖ್ಯವಾಗಿ ಬೇವಿನ ಹೂವು ಬೆಲ್ಲವನ್ನು ಪರಮಾತ್ಮನಿಗೆ ಸಮರ್ಪಿಸಿ ಸೇವಿಸುವರು.ದು:ಖ ಅನುಭವಕ್ಕೆಂದು ತಿಳಿದು ಸುಖ ದುಃಖಗಳನ್ನು ಸಮನಾಗಿ ಅರ್ಥೈಸಿ ಪರಮಾತ್ಮನಲ್ಲಿ ವಿಶ್ವಾಸದಿಂದ ಶಾಂತಿ ಸಮೃದ್ಧಿ ನೀಡೆಂದು ಪ್ರಾರ್ಥಿಸುವರು.ಕೆಲವು ಕಡೆಗೆ ಬೇವು ಬೆಲ್ಲದ ಜೊತೆಗೆ ಆರು ರಸಗಳಾದ ಸಿಹಿ, ಕಹಿ,ಖಾರ,ಹುಳಿ,ಲವಣ ವಗರು ಎಲ್ಲ ಸೇರಿಸಿ ಸೇವಿಸುವರು.
ಸಾಯಂಕಾಲ ಹೊಸ ಬಟ್ಟೆ ಧರಿಸಿ ಆಕಾಶದ ಸೌರವ್ಯೂಹದಲ್ಲಿ ಬರುವ ಗ್ರಹ, ನಕ್ಷತ್ರ, ಯೋಗ, ಕರಣ, ತಿಥಿ ವಾರ ಸಹಿತ ಗುರು, ಹಿರಿಯರ ಮುಖಾಂತರ ಶ್ರವಣ ಮಾಡುವರು. ಸಂವತ್ಸದ ಹೆಸರನ್ನು ತಪ್ಪದೆ ಉಚ್ಚರಿಸುವರು.ಈ ಸಂವತ್ಸರ ಪರಾಭವ ಎಂದಾಗಿದೆ. ಈ ಶುಭ ಮುಹೂರ್ತದಲ್ಲಿ ಎಲ್ಲ ಇಂದ್ರಯಾಭಿಮಾನಿಗಳನ್ನು, ದೇವತೆಗಳನ್ನು ಸ್ಮರಿಸುತ್ತ ಸರ್ವೋತ್ತಮನಾದ ಶ್ರೀ ಲಕ್ಷ್ಮೀ ನಾರಾಯಣರಲ್ಲಿ ನಮ್ಮ ಪಾಪಗಳನ್ನು ಪರಾಭವ ಮಾಡಿ ಸುಸಮಯಾತ್ಮಕದಲ್ಲಿ ನಮ್ಮೆಲ್ಲರನ್ನು ರಕ್ಷಿಸಲಿ ಎಂದು ನಮ್ಮ ಪ್ರಾರ್ಥನೆ.
ಕಾಲೇ ವರ್ಷತು ಪರ್ಜನ್ಯ:ಪೃಥಿವಿ ಸಸ್ಯ ಶಾಲಿನೀ /
ದೇಶೋಯಂ ಕ್ಷೋಭರಹಿತೋ ಸಜ್ಜನ:ಸಂತು ನಿರ್ಭಯಾ://
ಅಪುತ್ರಾ:ಪುತ್ರಿಣ: ಸಂತು ಪುತ್ರಿಣ:ಸಂತು ಪೌತ್ರಿಣ:/
ಅಧನಾ: ಸಧನಾ: ಸಂತು ಜೀವಂತು ಶರದಾಂ ಶತಕ//
ಇತಿ ಶ್ರೀ ಭಾರತೀ ರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ಮಸ್ತು..
ಕವನ
ಸಮಯ ಬಂದಿದೆ ಸುಸಮಯ ಬಂದಿದೆ
ಪದುಮನಾಭನ ನೆನೆವ ಸುದಿನ ಬಂದಿದೆ
ಬದುಕಿನ ಕ್ಷಣವ ತಿಳಿವ ಕಾಲ ಬಂದಿದೆ
ಇಂದು ನಮ್ಮ ಪುಣ್ಯದ ಸುಕಾಲ ಬಂದಿದೆ
ಅಂದ ಚೆಂದದ ಸೃಷ್ಟಿ ಕೊಡುಗೆ ತಂದಿದೆ
ಇಂದು ನೀ ಆರಿಸು ನಿಂದೇನಿದೆ
ಎಂದೆಂದು ಸೋಲಬೇಡ ನಿಂದನೆಗೆ
ತಂದಾಯಿತು ಯುಗಾದಿ ಮುಗುಳುನಗೆ
ಋತುಗಳು ಆರು ಹಿಡಿಯುವರಾರು
ಶೃತಿಗಳು ಅಭಯಕೆ ಸಾವಿರಾರು
ಪ್ರತಿ ಕ್ಷಣ ಹರಿಯಲಿ ತತ್ವಸಾರ
ಕೃತಿ ಪತಿಗೆ ಮುಟ್ಟಲಿ ನಮಸ್ಕಾರ
ಯುಗಾದಿ ಸಂವತ್ಸರ ಪರಾಭವ
ಆಗದಿರಲಿ ಮಾಯೆಯ ಮೋಹಭವ
ಬಾಗುನೀ ವಾಯು ಶ್ವಾಸಕೆ ಕಾವನವ
ನೀಗುವನು ಸಂಕರ್ಷಣ ಪಾಪ ಭವ
ಎಂತಹ ಸುಂದರ ಎಂತಹ ಕಾರುಣ್ಯ
ನಿಂತಿಹ ಅನಿರುದ್ಧ ಸದ್ಗುಣಗಣ್ಯ
ಚಿಂತಿಸು ನಾರಾಯಣ ಮಾನದ ಮಾನ್ಯನ
ಶಾಂತಿ ಸಮೃದ್ಧಿಗೆ ನೀಡು ಆವಾಹನ
ಜಯ ಜಯ ದುರ್ಗಾಪತಿ ಶ್ರೀ ಧರಗೆ
ಜಯ ಜಯ ರಮಾಪತಿ ಹೃಷಿಕೇಶಗೆ
ಜಯ ಜಯ ಶಾಂತಿಪತಿ ಅನಿರುದ್ಧಗೆ
ಜಯ ಜಯ ಕೃತಿಪತಿ ಪ್ರದ್ಯುಮ್ನಗೆ
ಜಯ ಜಯ ಜಯಾಪತಿ ಸಂಕರ್ಷಣನಿಗೆ
ಜಯ ಜಯ ಮಾಯಾಪತಿ ವಾಸುದೇವಗೆ
ಜಯ ಜಯ ಶ್ರೀ ಲಕ್ಷ್ಮೀ ನಾರಾಯಣಗೆ
ಶ್ರೀಧರ – ಭೂಮಿತತ್ವ.
ಹೃಷಿಕೇಶ – ಆಕಾಶತತ್ವ.
ಅನಿರುದ್ಧ – ಅಗ್ನಿತತ್ವ.
ಪ್ರದ್ಯುಮ್ನ – ವಾಯುತತ್ವ.
ಸಂಕರ್ಷಣ – ಜಲತತ್ವ
ವಾಸುದೇವ – ರಹಸ್ಯವಾದ ಭಕ್ತಿ ತತ್ವ
ಶ್ರೀ ಲಕ್ಷ್ಮೀ ನಾರಾಯಣ ಜ್ಞಾನದ ಮೂಲ ತತ್ವ.
ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.
ಸರ್ವೇ ಜನಾ: ಸುಖಿನೋ ಭವಂತು.
- ಸಂಧ್ಯಾ ಟಿ
