ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಕವನ, ತಪ್ಪದೆ ಮುಂದೆ ಓದಿ…
ಉಳ್ಳವರು ಕೂಡಿ ಶಿವಾಲಯ ಮಾಡಲಿ !
ಇಲ್ಲದವರು ಹಗಲಿರುಳು ದುಡಿದು ಸಾಯಲಿ !!
ಉಳ್ಳವರು ಮೃಷ್ಟಾನ್ನಭೋಜನ ಮಾಡಲಿ !
ಇಲ್ಲದವರು ದಿನನಿತ್ಯವೂ ಉಪವಾಸ ಸಾಯಲಿ !!
ಉಳ್ಳವರು ಒಳ್ಳೆಯ ಮನೆಯಲ್ಲಿ ವಾಸಿಸಲಿ !
ಇಲ್ಲದವರು ಹರಕು ಗುಡಿಸಲಿನಲಿ ತಲೆಯೊಡ್ಡಲಿ !!
ಉಳ್ಳವರು ರೇಷ್ಮೆ ಅರಿವೆ ಧರಿಸಿ ಮೆರೆಯಲಿ !
ಇಲ್ಲದವರು ಹರಕು ಅಂಗಿಯಲಿ ಬದುಕು ಸವೆಸಲಿ !!
ಉಳ್ಳವರು ನಿರಂತರ ದಬ್ಬಾಳಿಕೆ ಮಾಡುತ್ತಿರಲಿ !
ಇಲ್ಲದವರು ಎಲ್ಲವನು ಸಹಿಸಿ ನಂಜುಂಡರಾಗಲಿ !!
ಉಳ್ಳವರ ಹಗೆತುಂಬಾ ಹಣ ತುಂಬಿತುಳುಕಲಿ !
ಇಲ್ಲದವರು ದಿನನಿತ್ಯ ಬದುಕಲು ಹೋರಾಡುತ್ತಿರಲಿ !!
ಉಳ್ಳವರು ಮುಂದಿನ ಪೀಳಿಗೆಗೆ ಆಸ್ತಿ-ಪಾಸ್ತಿ ಕೂಡಿಡಲಿ !
ಇಲ್ಲದವರು ಮಕ್ಕಳಿಗೆ ಸಾಲದ ಹೊರೆಯನು ಬಳುವಳಿ ಬಿಡಲಿ !!
ಉಳ್ಳವರು ಮಾಡಿದ ಪಾಪಕ್ಕೆ ರೋಗರುಜಿನಗಳಿಗೆ ಬಲಿಯಾಗಲಿ !
ಇಲ್ಲದವರು ಶ್ರಮವಹಿಸಿ ದುಡಿದು ದೇಹ ಮುಪ್ಪಾದರೂ ಆರೋಗ್ಯವಂತರಾಗಿರಲಿ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ.
