ಅನಾವಶ್ಯಕ ರಸ್ತೆಗಳಲ್ಲಿ ಇಳಿದು ಪೊಲೀಸ್ ರ ಕೈಯಲ್ಲಿ ಲಾಠಿ ಏಟು ತಿನ್ನುವ ಬದಲು ಇನ್ನೊಬ್ಬರ ಉಸಿರಿಗೆ ಉಸಿರಾಗಿ, ಜೀವನ ಸಾರ್ಥಕವಾಗುವುದು. ಉಸಿರು ಬಳಗದ ಬಗ್ಗೆ ಒಂದಿಷ್ಟು ಮಾಹಿತಿ…
ಕೊರೋನಾ ಮಹಾಮಾರಿಯ ಎರಡನೆಯ ಅಲೆಯಲ್ಲಿ ಜನ ಜರ್ಜರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದನ್ನು ಬಿಟ್ಟು, ಜನರನ್ನು ಇನ್ನಷ್ಟು ಭಯಭೀತಿಗೊಳ್ಳಿಸುವುದು, ಅವರಿವರ ಲೋಪದೋಷಗಳನ್ನು ಎತ್ತಿ ಹಿಡಿಯುವುದನ್ನು ಬಿಟ್ಟು ಎಲ್ಲರೂ ಕೈ ಸೇರಿಸಬೇಕಿದೆ. ಏಕತೆಯ ಅವಶ್ಯಕತೆ ಇದೆ ಮತ್ತು ಎಲ್ಲರೂ ಒಂದಾದರೆ ಮಾತ್ರ ಕೋವಿಡ್ ನಂತಹ ದೊಡ್ಡ ವೈರಸ್ ನ್ನು ಹಿಮ್ಮೆಟ್ಟಿಸಲು ಸಾಧ್ಯ.
ಆಕ್ಸಿಜನ್ ಸಮಸ್ಯೆ, ಬೆಡ್ ಸಮಸ್ಯೆ, ವೆಂಟಿಲೇಟರ್ ಸಮಸ್ಯೆ ಹೀಗೆ ಸಮಸ್ಯೆಗಳ ಆಗರದಲ್ಲಿಯೇ ಬಿದ್ದು ಮನುಷ್ಯ ಜೀವ ಕಳೆದುಕೊಳ್ಳುವಾಗ ಕರುಳು ಕಿತ್ತುಬರುತ್ತದೆ. ಇದನ್ನೆಲ್ಲಾ ನ್ಯೂಸ್ ಚಾನೆಲ್ ಮುಂದೆ ಕೂತು ಕಣ್ಣೀರು ಹಾಕುವ ಬದಲು ನಿಮ್ಮ ಕೈಲಾದ ಸಹಾಯ ಮಾಡಿ. ನಿಮ್ಮ ಒಂದು ಸಹಾಯ ಹಸ್ತದಿಂದ ಎಷ್ಟೋ ಜೀವ ಉಳಿಸಬಹುದು.
ಜೀವ ಉಳಿಸುವ ಮನಸ್ಸಿದ್ದರೇ, ‘ಉಸಿರು‘ ಕೋವಿಡ್ ಆಕ್ಸಿಜನ್ ಕೇರ್ ಬಳಗದ ಜೊತೆ ಕೈ ಜೋಡಿಸಿ.
ಕವಿರಾಜ್ ಸಾರಥ್ಯದಲ್ಲಿ ಅಕ್ಷತಾ ಪಾಂಡವಪುರ, ನೀತು ಶೆಟ್ಟಿ,ವಿನಯ್ ಪಾಂಡವಪುರ ಸೇರಿದಂತೆ ಚಿತ್ರರಂಗದ ಹಲವಾರು ನಿರ್ದೇಶಕರು, ಕಲಾವಿದರು,ತಂತ್ರಜ್ಞರು ಸೇರಿ ಕಟ್ಟಿದಂತಹ ಬಳಗವಿದು. ಈ ಉಸಿರಿನ ಮುಖ್ಯ ಉದ್ದೇಶ ಕೋವಿಡ್ ಸೋಂಕಿತರಿಗೆ ಉಸಿರಾಟದ ತೊಂದರೆಯಾದಾಗ ಅವರು ಆಸ್ಪತ್ರೆಯಲ್ಲಿ ಬೆಡ್ ಪಡೆದು ದಾಖಲಾಗುವವರೆಗೂ ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರಗಳ ಮೂಲಕ ಉಚಿತವಾಗಿ ತಾತ್ಕಾಲಿಕ ಆಕ್ಸಿಜನ್ ಪೂರೈಸುವ ವ್ಯವಸ್ಥೆಯನ್ನು ಈ ಬಳಗ ಮಾಡುತ್ತದೆ . ಹತ್ತು ಲಕ್ಷ ವೆಚ್ಚದಲ್ಲಿ ಹತ್ತು ಯಂತ್ರಗಳನ್ನು ಈ ಬಳಗ ಹೊಂದಿದೆ.
ಈಗಾಗಲೇ ಅವರ ಕಾರ್ಯಾರಂಭವಾಗಿದ್ದು, ಮೊದಲು ಸೋಂಪುರ ಗ್ರಾಮದ ವಯೋವೃದ್ಧರಿಗೆ ಆಕ್ಸಿಜನ್ ಪೂರೈಕೆ ಮಾಡಿತ್ತು. ಅವರ ಉಸಿರಿಗೆ ಉಸಿರಾದ ಕ್ಷಣ ನೆನೆದಾಗ ಸಾರ್ಥಕ ಭಾವ, ಕಣ್ಣಂಚಿನಲ್ಲಿ ನೀರು ಹರಿಯಿತು ಎಂದು ಕವಿರಾಜ್ ಹೇಳುತ್ತಾರೆ. ಈ ಸಂದರ್ಭದಲ್ಲಿ ಡಾ.ಕಿರಣ್ ತೋಟಂಬೈಲ್ , ಚಾಮರಾಜಪೇಟೆಯ ನರ್ಸ್ ಥೆರೇಸಾ ಪ್ರೇಮ, ಬಳಗದ ಪ್ರತಿನಿಧಿಯಾಗಿರುವ ಮಾದೇಶ್ ಗೌಡರ ಸೇವೆಯನ್ನು ಕವಿರಾಜ್ ನೆನೆಯುತ್ತಾರೆ.
ಈ ಸೇವೆಯನ್ನು ಇನ್ನಷ್ಟು ಹೆಚ್ಚಿಸುಲು ತಂಡ ಸಿದ್ಧವಿದೆ. ಅವರೊಂದಿಗೆ ಸಹೃದಯಿಗಳು ಕೈ ಜೋಡಿಸಿರೆ, ಹೆಚ್ಚೆಚ್ಚು ಜನರನ್ನು ತಲುಪಬಹುದು ಎಂದು ಉಸಿರು ಬಳಗ ಕೇಳಿಕೊಳ್ಳುತ್ತದೆ. ಜೊತೆಗೆ ಸೇವಾ ಮನೋಭಾವದ ಫೋಸ್ಟರ್ ಡಿಸೈನ್ ಮತ್ತು ವೀಡಿಯೊ ಎಡಿಟಿಂಗ್ ಕೆಲಸ ಬಲ್ಲವರು ಉಸಿರು ಬಳಗಕ್ಕೆ ಬೇಕಾಗಿದ್ದಾರೆ.
ಈ ಬಳಗವನ್ನು ತಲುಪಲು ೭೭೯೫೦೫೦೩೮೦ ಕರೆ ಮಾಡಬಹುದು. ಅಥವಾ ಫೇಸ್ಬುಕ್ ನಲ್ಲಿ #Usirucovidoxygencare ಮೇಸಜ್ ಮಾಡಬಹುದು.
ಉಸಿರು ಬಳಗದ ಇನ್ನೊಂದು ವಿಶೇಷತೆ ಏನೆಂದರೆ ಕೋವಿಡ್ ಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಅವರ ತಂಡ ಸಾಧ್ಯವಾದಷ್ಟು ಬಗೆಹರಿಸಲು ಸದಾ ಮುಂದಾಗಿರುತ್ತದೆ. ಈ ಬಳಗದ ಅಪೂರ್ವ ಸೇವೆಯನ್ನು ಸಾಕಷ್ಟು ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಇನ್ನಷ್ಟು ಜನರಿಗೆ ಈ ತಂಡ ಉಸಿರಾಗಿರಲಿ ಎಂದು ಶುಭ ಹಾರೈಸೋಣ, ಕೈ ಜೋಡಿಸೋಣ.
- ಶಾಲಿನಿ ಹೂಲಿ ಪ್ರದೀಪ್
