ಡಾ.ಟಿ.ವಿ.ಚಂದ್ರಶೇಖರ್ ತಾವು ಕಂಡುಂಡ ಅನುಭವಗಳನ್ನೇ ಸರ್ವಜ್ಞನಂತೆ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಹಲವು ನೂರು ಸಂದೇಶಗಳನ್ನು ಬರೆದು ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಪುಸ್ತಕವೊಂದನ್ನು ಓದುಗರ ನೀಡಿದ್ದಾರೆ. ಲೇಖಕರಾದ ಡಾ.ಲಕ್ಷ್ಮಣ ಕೌಂಟೆ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ವೈದ್ಯ ಅರಿತ ಬದುಕಿನ ಸತ್ಯಗಳು
ಲೇಖಕರು: ಡಾ. ಟಿ. ವಿ. ಚಂದ್ರಶೇಖರ
ಪ್ರಕಾಶನ : ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ ರೂ. ೧೩೦.೦೦
ಖರೀದಿಗಾಗಿ : 9739561334/9740069123
ಡಾ. ಟಿ. ವಿ. ಚಂದ್ರಶೇಖರ ಜನ್ಮತಃ ಬೆಂಗಳೂರಿನವರು, ವೃತ್ತಿಯಲ್ಲಿ ವೈದ್ಯರಾಗಿ ಹಲವು ದಶಕಗಳ ಕಾಲ ದೇಶ ವಿದೇಶಗಳಲ್ಲಿ ಸೇವೆ ಮಾಡಿ ಎಂಭತ್ತರ ವಯೋಮಾನ ದಾಟಿದ ಶ್ರೀಯುತರು ಸಧ್ಯ ಮರಳಿ ಬೆಂಗಳೂರಿನಲ್ಲಿ ವಿಶ್ರಾಮದಲ್ಲಿದ್ದಾರೆ. ಮುಂಚೆ ಇಂಗ್ಲೆಂಡಿನಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕನ್ಸಲ್ಟೆಂಟ್ ವೈದ್ಯರಾಗಿ ತಮ್ಮ ಶ್ರದ್ಧಾಪೂರ್ವ ಸೇವೆಯಿಂದಾಗಿ ಅಲ್ಲಿನ ಜನರ ಮನಸನ್ನು ಗೆದ್ದು, ಮತ್ತೆ ಅರಬ್ ರಾಷ್ಟ್ರಗಳಲ್ಲಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ಬೆಂಗಳೂರಿಗೆ ಮರಳಿದವರು. ಇಲ್ಲಾದರೂ ನಾರಾಯಣ ರುಗ್ಣಾಲಯ ಮತ್ತಿತರ ಆಸ್ಪತ್ರೆಗಳಲ್ಲಿ ಸೇವಾ ಮನೋಭಾವದೊಂದಿಗೆ ಸಂಬಳ ರಹಿತವಾಗೆ ಸೇವೆ ಸಲ್ಲಿಸಿ ತದನಂತರ ವಿಶ್ರಾಂತಿಗೆ ಮರಳಿದ್ದಾರೆ.
ಇವರು ಕಡುಬಡತನದಲ್ಲಿ ಬೆಳೆದವರು. ಬಾಲ್ಯಾವಸ್ಥೆಯಲ್ಲಿಯೇ ತಂದೆಯನ್ನು ಕಳೆದುಕೊಂಡವರು, ತಾಯಿಯ ಪರಿಶ್ರಮದಿಂದ ಅವರ ಆಶಯದಂತೆ ತಮ್ಮ ಶಿಕ್ಷಣವನ್ನು ಮುಂದುವರೆಸಿ ಮೊದಲು ಕಾನೂನು ಶಿಕ್ಷಣ ಪಡೆದು ತದನಂತರ ವೈದ್ಯಶಿಕ್ಷಣ ಪೂರೈಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಅದನ್ನು ಪೂರೈಸಿ ತಮ್ಮ ಪ್ರತಿಭೆಯಿಂದಲೇ ಇಂಗ್ಲೆಂಡಿನಲ್ಲಿಯೇ ವೈದ್ಯವೃತ್ತಿಯನ್ನು ಕೈಕೊಂಡವರು.

ಅದೇನೇ ಆದರೂ ವೃತ್ತಿ ವೈದ್ಯಕೀಯ ಕ್ಷೇತ್ರವೇ ಆದರೂ ಇವರೊಳಗಿನ ಸೃಜನಶೀಲ ಸುಮ್ಮನಿರಬೇಕಲ್ಲ!! ಇವರೊಳಗೆ ವೈದ್ಯನೋರ್ವನೇ ಅಲ್ಲ ಓರ್ವ ಚಿಂತಕ, ಸಮಾಜದ ಕುರಿತು ಕಳಕಳಿಯುಳ್ಳ ಸದಾಶಯಿ ಮನೆ ಮಾಡಿದ್ದ. ಜೀವನದ ಅನಂತ ಮುಖಗಳ ದರ್ಶನ ಮಾಡಿದ ಇವರು ಮಹಾನ್ ಜೀವನಾನುಭವಿಗಳಾಗಿದ್ದರು. ಕನ್ನಡದ ಖ್ಯಾತ ಬರಹಗಾರರಾದ ಎಸ್. ಎಲ್. ಭೈರಪ್ಪನವರ ಆತ್ಮೀಯರು.
ಡಾ. ಟಿ. ವಿ. ಚಂದ್ರಶೇಖರ್ ತಾವು ಕಂಡುಂಡ ಅನುಭವಗಳನ್ನೇ ಸರ್ವಜ್ಞನಂತೆ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಹಲವು ನೂರು ಸಂದೇಶಗಳನ್ನು ಬರೆದು ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಪುಸ್ತಕವೊಂದನ್ನು ಓದುಗರ ಕೈಗಿತ್ತಿದ್ದಾರೆ.
ಇವರು ಅವರು ತಾಯಿ ಹೇಳಿದ ಹಲವು ಹಿತ ನುಡಿಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಹಾಗೆಯೇ ಬದಲಾದ ಕಾಲ ಘಟ್ಟದಲ್ಲಿ ತಮ್ಮ ಜೀವನದ ಅನುಭವಗಳನ್ನು ಟಿಪ್ಪಣಿ ರೂಪದಲ್ಲಿ ಇಲ್ಲಿ ಸೇರಿಸಿದ್ದಾರೆ.
ಇವರು ಕನ್ನಡದಲ್ಲಿ ಓದಿದ್ದು ಪಿಯುಸಿವರೆಗೆ ಮಾತ್ರ. ಆನಂತರ ಸುದೀರ್ಘ ಆರು ದಶಕಗಳ ಕಾಲ ಕನ್ನಡ ಓದಿನಿಂದ ಅನಿವಾರ್ಯ ಕಾರಣಗಳಿಂದಾಗಗಿ ದೂರ ಇದ್ದವರು. ಇವರ ಧರ್ಮಪತ್ನಿಯೂ (ಡಾ. ಕಮಲಾ) ವೈದ್ಯರೇ. ಅವರ ಮನೆ ಮಾತು ತೆಲಗು. ಆ ಮೇಲೆ ಅವರೂ ಕನ್ನಡ ಕಲಿತು ಓದುವುದನ್ನು ರೂಢಿ ಮಾಡಿಕೊಂಡವರು. ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಓದಿದವರು. ಇವರ ಈ ಕೃತಿ ಅನುಭಾನ ನುಡಿಮುತ್ತುಗಳನ್ನು ಹೊಂದಿದ ಮಣಿಸಂಪುಟ.

ಈ ಕಿರು ಹೊತ್ತಿಗೆಯಲ್ಲಿ ಉಕ್ತವಾದ ಕೆಲವು ಮಣಿಮುತ್ತುಗಳನ್ನು ಗಮನಿಸಬಹುದು :
* ಹಣಕ್ಕೆ ಆನೆಯಷ್ಟು ದೈತ್ಯಶಕ್ತಿ ಇರಬಹುದು, ಆದರೆ ಗುಣಕ್ಕೆ ಲೋಕವೇ ಮತ್ಸರ ಪಡುವಷ್ಟು ಶಕ್ತಿ ಇದೆ… ಹಣ ಸಂಪಾದನೆಗಿಂತ ಗುಣ ಸಂಪಾದನೆ ದೊಡ್ಡದು.
* ಸೂರ್ಯನ ರಶ್ಮಿ, ಪರಿಶುದ್ಧ ಗಾಳಿ, ಶುಭ್ರ ನೀರು, ಪ್ರಶಾಂತ ವಾತಾವರಣ ಹಾಗೂ ಪೌಷ್ಠಿಕ ಆಹಾರ ಇವು ಹಿಂದಿನ ಕಾಲದಲ್ಲಿ ಔಷಧಿಯನ್ನು ಕಂಡು ಹಿಡಿಯುವ ಮೊದಲು ನಮ್ಮ ಹಿರಿಯರು ಅನುಸರಿಸುತ್ತಿದ್ದ ನೈಸರ್ಗಿಕ ಚಿಕಿತ್ಸೆಗಳು.
* ನ್ಯಾಯಾಲಯಗಳು ‘ನಿಧಾನವೇ ಸೂಕ್ತ ದಾನ’ ಎಂಬ ತತ್ತ್ವವನ್ನು ರೋಮನ್ನರ ಕಾಲದಿಂದಲೂ ಪಾಲಿಸಿಕೊಂಡು ಬಂದಿವೆ. ಆದರೆ ಮಹಮ್ಮದಿಯರ ಶರಿಯಾ ಕಾನೂನು ಮಾತ್ರ ಇದಕ್ಕೆ ತದ್ವಿರುದ್ಧ. ಕೆಲವು ಸಲ ದುಷ್ಟರಿಗೆ ಬೇಗ ಶಿಕ್ಷೆ ಕೊಡಲು ದೇಶದ ಕಾನೂನಿಗಿಂತ ಧರ್ಮದ (ಶರಿಯಾ) ಕಾನೂನೇ ಅವಶ್ಯಕವೆನ್ನಿಸುತ್ತದೆ.
* ವಿಕೃತ ಮನಸ್ಸು ಎಂದೆಂದಿಗೂ ಅಪಾಯಕಾರಿ. ಅದು ಅರಿವಿಲ್ಲದೇ ಅತ್ಯಂತ ಕ್ರೂರ, ಹೀನ ಕೃತ್ಯಗಳನ್ನು ಮಾಡಿಸಿಬಿಡುತ್ತದೆ. ಅದಕ್ಕಾಗಿ ಅದು ಪಶ್ಚಾತಾಪ ಕೂಡ ಪಡುವುದಿಲ್ಲ.
* ಆರೋಗ್ಯ ಮತ್ತು ಆತ್ಮೀಯ ಗೆಳೆಯನನ್ನು ಕಳೆದುಕೊಂಡಾಗಲೇ ಅದರ ಮೌಲ್ಯ ನಮಗೆ ಅರಿವಾಗುವುದು.
ಇನ್ನೂ ಇಂತಹ ಅದೆಷ್ಟೋ ಅನುಭವದ ನುಡಿಗಳು ಈ ಕೃತಿಯಲ್ಲಿ ಇವೆ.
- ಡಾ. ಲಕ್ಷ್ಮಣ ಕೌಂಟೆ
