ವಂಶಾವಳಿ ಹೇಳುವವರು – ಟಿ.ಶಿವಕುಮಾರ್

ನೂರಾರು ವರ್ಷಗಳ ದಾಖಲೆಯನ್ನು ಹೇಳುವ ‘ಹೆಳವರ’ ಇವರ ಹತ್ತಿರ 14-15ನೇ ತಲೆಮಾರಿನ ವಂಶವೃಕ್ಷ ಮಾಹಿತಿ ಸಂಗ್ರವಿರುತ್ತದೆ. ಆ ‘ಹೆಳವರ’ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದ ಅಪೂರ್ವ ಮಾಹಿತಿಯ ಲೇಖನವನ್ನು ತಪ್ಪದೆ ಓದಿ….

ಸುಗ್ಗಿಯ ಕಾಲ ಬಂತೆಂದರೆ ಊರಾಚೆಯ ಬಯಲಿನಲ್ಲಿ ಕಾಲನಿಗಳ ಸಾಲು ಸಾಲು ಆ ಕಾಲದಲ್ಲಿ ಮಾತ್ರ ಹುಟ್ಟಿಕೊಳ್ಳುವ ಕಾಲನಿಗಳಲ್ಲಿ ‘ಹೆಳವರ’ ಕಾಲನಿಯೂ ಒಂದು. ಬಿಸಿಲು ಬೀಳದಂತೆ ಕಮಾನು ಕಟ್ಟಿದ ಎತ್ತನ ಗಾಡಿಯೇ ಇವರ ಮನೆ. ಅಲ್ಲೇ ಸುತ್ತ ಮುತ್ತ ಮುಸುರೆ ತಿಕ್ಕುವ ಕಲ್ಲು ಹೂಡಿ ಒಲೆ ಹೊತ್ತಿಸುವ ಹೆಂಗಸರು ಆಡುವ ಎಳೆಯರು ಬಯಲೇ ಆಲಯ ಇವರ ದೈಹಿಕವಾಗಿ ಹೆಳವರಲ್ಲ ಹಿಂದಿನ ಕಾಲದ್ದನ್ನು ‘ಹೇಳುವುದು’ ಇವರ ಕುಲ ಕಸಬು. ನಿಮ್ಮ ಕುಲು-ಗೋತ್ರ- ಕಸುಬು- ಮೂಲದೇವರು ಎಲ್ಲದರ ಬಗ್ಗೆ ವಿವರ ಇವರ ಬಳಿ ಇರುತ್ತದೆ.

ನಿಮ್ಮ ಪೂರ್ವಜರು ಎಲ್ಲಿಯವರು? ಅಡ್ಡಹೆಸರು ಯಾವುದಿತ್ತು? ಬದಲಾಗಿದ್ದರೆ ಯಾಕೆ ಆಯಿತು? ಯಾವ ಊರು? ಯಾಕೆ ವಲಸೆ ಬಂದರು? ಕುಟುಂಬದ ಮೂಲ ಪುರುಷ ಯಾರು? ಕುಲದೇವರು ಯಾವುದು? ಎಷ್ಟು ಆಸ್ತಿ ಇತ್ತು?.

ಈ ಎಲ್ಲ ವಿವರಗಳ ಬಗ್ಗೆ ನೂರಾರು ವರ್ಷಗಳ ದಾಖಲೆ ಹೇಳುವವರು ಇವರು. ಜನರ ಬಾಯಿಯಲ್ಲಿ “ ಹೇಳುವವರು” ಹೆಳವರು ಹಾಗಿದ್ದಾರೆ. ಊರೂರು ಅಲೆಯುವುದು, ಜನರ ವಂಶಾವಳಿಯನ್ನು ಬರೆಯುವುದು ಜತನದಿಂದ ರಕ್ಷಿಸಿ ಮತ್ತೆ ಆ ಊರಿಗೆ ತೆರಳಿದಾಗ ವಂಶಾವಳಿ ಬಿತ್ತರಿಸುವುದು ಇವರ ಕಾಯಕ.

ಪೇಟ, ದೋತ್ರ, ಹೆಗಲಮೇಲೆ ಗಂಟು, ಕೆಲವೊಮ್ಮೆ ಕೋಟನ್ನು ಧರಿಸುವ ಹೆಳವರು ಮಹದೇಶ್ವರನ ಕಾವ್ಯ, ಚಾಮುಂಡಿ ಕಥೆಯನ್ನು ಬಲ್ಲವರಾಗಿದ್ದಾರೆ. ವಂಶಾವಳಿಯನ್ನು ಜಾನಪದ ಶೈಲಿಯಲ್ಲಿಯೇ ಹೇಳುವುದು ಇವರಿಗೆ ಕರಗತ.

‘ನಿಮ್ಮ ಪೂರ್ವಜ ನಿಂಗಪ್ಪ ಅಪ್ಪಾವ್ರಿಗೆ ಮೂರು ಜನ ಮಕ್ಕಳು. ಮೊದಲನೆಯವ್ರು ಆಶೋಕಪ್ಪ ಬಳ್ಳಿ ಒಳಗೆ ಬೇಕಾದರೆ ಎರಡನೆಯವ್ರು ಕರಿಯಣ್ಣ ಬಳ್ಳಿ ಒಳಗೆ ಬೇಕಾದರೆ ಮೂರನೆಯವ್ರು ಪರಮಣ್ಣ. 500 ವರ್ಷಗಳ ಹಿಂದೆ ನಿಮ್ಮದು ಗೌಡಕಿ ಮನೆತನ. ಊರಿಗೆ ಊರೇ ಬರ ಬಂದು ಊರು ಬಿಟ್ಟು ಬಂದ ಅಶೋಕಪ್ಪ.. .. ಹೀಗೆ ಲಯ ಬದ್ದವಾಗಿ ವಂಶಾವಳಿಯನ್ನು ಹೆಳವರು ಬಿಚ್ಚಿಡುವುದನ್ನು ಕೇಳುವುದೇ ಒಂದು ಸೊಗಸು.

ಹೆಳವ ಜನಾಂಗದವು ಮೂಲತಃ ಹಾಲುಮತ ಜನಾಂಗಕ್ಕೆ ಸೇರಿದವು. ಮನೆ ದೇವರು ಹನುಮಪ್ಪ. ಆದರೆ ಎಲ್ಲಾ ದೇವರನ್ನು ಹಾಡಿ ಹೊಗಳುತ್ತಾರೆ. ಹೆಳವರು ಹೆಚ್ಚಾಗಿ ಕಾಣಸಿಗುವುದು ಬೆಳಗಾವಿ ಜಿಲ್ಲೆಯಲ್ಲಿ. ವಿಶೇಷತಃ ಗೋಕಾಕ ತಾಲ್ಲೂಕಿನ ಹೂಲಿಕಟ್ಟಿ, ಹಿರೇನಂದಿ, ಜಕಾನಟ್ಟಿ, ತೆಳಕಟ್ಟಿನಾಳ ಗ್ರಾಮಗಳಲ್ಲಿದ್ದು ಎತ್ತಿನ ಗಾಡಿಯ ಮೇಲೆ ಜಿಲ್ಲೆಯಿಂದ ಜಿಲ್ಲೆಗೆ ಅಲೆಯುತ್ತಾರೆ. ದೂರದ ಜಿಲ್ಲೆಗಳಾದ ಧಾರವಾಡ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಇನ್ನು ಅನೇಕ ಕಡೆ ಹೋಗುತ್ತಾರೆ.

ಇವರ ಹತ್ತಿರ 14-15ನೇ ತಲೆಮಾರಿನ ವಂಶವೃಕ್ಷ ಮಾಹಿತಿ ಸಂಗ್ರವಿರುತ್ತದೆ. ಸಂತತಿ ಹಾಗೂ ತಲೆಮಾರಿನ ವಂಶವೃಕ್ಷ ಮಾಹಿತಿಗಾಗಿ ಸಹ ಸಿಗುತ್ತದೆ. ಕುಟುಂಬದಿಂದ ಊರವರಿಂದ ಮಾಹಿತಿ ಪಡೆದಿದ್ದನ್ನೆಲ್ಲ ನಮ್ಮ ಪೂರ್ವಜರು ದಾಖಲಿಸಿದ್ದಾರೆ. ಈಗ ಇರುವವರು ಇತ್ತೀಚಿನ ಬೆಳವಣಿಗೆಯ ಬಗ್ಗೆಯೂ ಮಾಹಿತಿ ಪಡೆದು ಬರೆದುಕೊಂಡು ಹೋಗುತ್ತೇವೆ, ಹಾಗಾಗಿ ವಂಶಾವಳಿಯನ್ನು ನಿಖರವಾಗಿ ಹೇಳುತ್ತೇವೆ. ಕೋರ್ಟ್ ಕಛೇರಿಗಳಲ್ಲಿ ನಮ್ಮನ್ನು ಸಾಕ್ಷಿಗಾಗಿ ಕರೆದ ಸಂದರ್ಭಗಳೂ ಇವೆ. ನಾವು ವಂಶಾವಳಿಯನ್ನು ಹೇಳುತ್ತೇವೆಯೇ ಹೊರತು ದಾಖಲೆಯನ್ನು ತೋರಿಸುವುದಿಲ್ಲ. ಇದು ನಮ್ಮ ವೃತ್ತಿ ಗುಟ್ಟು ಎಂದು ಹೇಳುತ್ತಾರೆ.

‘ಇಂತಿಂಥಿ ಹಳ್ಳಿಗೆ ಇಂತಿಂಥವರೇ ಹೋಗಬೇಕು ಎಂಬಂಥ ರೂಢಿ ನಮ್ಮಲ್ಲಿ ಇದಿದ್ರಿಂದ ಒಬ್ಬರು ಹೋದಲ್ಲಿ ಮತ್ತೊಬ್ಬರು ಹೋಗುವ ಪದ್ದತಿಯಿಲ್ಲ’ ಎನ್ನುವ ಇವರ ದಾಖಲೆಗಳಲ್ಲಿ ಹೆಣ್ಣು ಮಕ್ಕಳ ಹೆಸರು ದಾಖಲಾಗುವುದಿಲ್ಲ ಕೇಳಿದರೆ ಎಲ್ಲ ಹೆಳವರು ಉತ್ತರಿಸುವುದು ಹೆಣ್ಣು ಮಕ್ಕಳು ಮದುವೆಯಾಗಿ ಹೊರ ಕುಟುಂಬಕ್ಕೆ ಹೋಗುತ್ತಾರಲ್ಲ ಅದಕ್ಕೆ ಅವರ ಹೆಸರಿಲ್ಲ ಎಂದು. ಬಹುತೇಕ ಕುಟುಂಬಗಳಲ್ಲಿ ಹಿಂದೆ ಹೆಣ್ನು ಮಕ್ಕಳಿಗೆ ಆಸ್ತಿ ಹಕ್ಕಿನಲ್ಲಿ ಪಾಲು ಇಲ್ಲದಿದ್ದುದು ಇದಕ್ಕೆ ಕಾರಣ ಇರಬೇಕು. ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದಿದ್ದರೆ ಮಾತ್ರ ಹೆಣ್ಣು ಮಕ್ಕಳ ಹೆಸರು ದಾಖಲಾಗುತ್ತದೆ.

ಹಿಂದಿನ ದಾಖಲೆಗಳನ್ನು ಹೇಗೆ ರಕ್ಷಿಸಿದ್ದಿರಿ ಎಂದು ಕೇಳಿದರೆ ಹೆಗಲ ಮೇಲೆ ಇಳಿಬಿಟ್ಟಿದ್ದ ಭಾರೀ ತೂಕದ ಬಟ್ಟೆ ಗಂಟನ್ನು ಬಿಚ್ಚಿಡುತ್ತಾರೆ. ರೆಕಾಡ್ ್ ಪುಸ್ತಕವನ್ನು ತೋರಿಸಿ ಒಂದೂವರೆ ಅಡಿ ಅಗಲ, ಒಂದಡಿ ಉದ್ದದ ಸುಮಾರು 500 ಪುಟಗಳ ಪುಸ್ತಕಕ್ಕೆ ಮೇಲೆ ಬಟ್ಟೆಯ ಹೊದಿಕೆ. ಒಳಗೆ ನೂರಾರು ಜನರ ವಂಶಾವಳಿ ವಿವರ ನಕ್ಷೆ. ಎಲ್ಲ ವಿವರವನ್ನು ತೋರಿಸುತ್ತಾರೆ. ಇಂತಹ ಪುಸ್ತಕಗಳು ನೂರಾರಿವೆ. ಮನೆಯಲ್ಲಿ ಈ ಪುಸ್ತಕಗಳನ್ನು ಇಡುವುದಕ್ಕೆ ಪ್ರತ್ಯೇಕ ಕಪಾಟಿನ ವ್ಯವಸ್ಥೆ ಇದೆ. 500 ವರ್ಷಗಳಿಗೂ ಹಿಂದಿನ ದಾಖಲೆಗಳು ಕಂಚಿನ ಪತ್ರಗಳಲ್ಲಿವೆ. ತಾಮ್ರ ಪತ್ರದ ಮೂಡಿ ಅಕ್ಷರಗಳು ಈಗ ಓದಲು ಕಷ್ಠ ಎಂದು ಹೇಳುತ್ತಾರೆ.

ವಂಶಾವಳಿ ಕೇಳುವವರು ಧವಸ ಧಾನ್ಯ, ಹಣ ಕೊಡುವವರು ಇದ್ದಾರೆ. ಶ್ರೀಮಂತರು ಖುಷಿಯಾಗಿ ಬಂಗಾರ ಕೊಟ್ಟಿದ್ದು ಉಂಟು.

‘ಆದರೂ ಮೊದಲಿನಾಂಗ ಹೆಚ್ಚು ಕೊಡೋದಿಲ್ಲ. ಕೆಲವರು ವಂಶಾವಳಿ ತಗೊಂಡು ತನಗೇನಾಗಬೇಕಿದೆ ಎಂದು ಅಸಡ್ಡೆ ಮಾಡುತ್ತಾರೆ. ಈಗಿನ ಕಾಲಕ್ಕೆ ನಮ್ಮ ಮಂದಿಯೂ ಸುಧಾರಿಸಿದ್ದಾರೆ. ಕಲೀಲಿಕ್ಕೆ ಆರಂಭಿಸಿದ್ದಾರೆ, ನಮ್ಮ ಹಾಗೆ ಮನೆಯಲ್ಲೇ ಕಲಿತು ಊರಿಂದೂರಿಗೆ ತಿರುಗುವವರ ಸಂಖ್ಯೆ ಬಹಳ ಕಮ್ಮಿ ಆಗ್ತಾ ಇದೆ ಸ್ವಾಮಿ’ ಎಂದೂ ಹೇಳುತ್ತಾರೆ.

ನಾಲ್ಕು-ಐದನೇ ತರಗತಿಗೆ ಹೋಗಿ ಶಾಲೆ ಬಿಡುತ್ತಿದ್ದೆವು ಯಾಕೆಂದರೆ ಓದಲು ಬರೆಯಲು ಬಂದರೆ ಸಾಕು ಎಂದು. ಈಗಾ ಕಂಪ್ಯೂಟರ್ ನೆರವಿನಿಂದ ದಾಖಲೆಗಳನ್ನು ಜೋಪಾನವಾಗಿಡುವ ವ್ಯವಸ್ಥೆ ಇದೆ. ಆದರೆ ನಮ್ಮು ಪೂರ್ವಿಕರ ಬಗ್ಗೆ ನಮಗೆ ಅಷ್ಟೊಂದು ಆಸಕ್ತಿ ಇಲ್ಲ. ಆದಿರಲಿ ತಮ್ಮ ಕುಲ ಕಸುಬಿನ ಬಗ್ಗೆ ಹೆಳವರಿಗೇ ಈಗ ಕಾಳಜಿ ನಿಧಾನವಾಗಿ ಕರಗುತ್ತಿದೆ. ಅವರಲ್ಲಿನ ದಾಖಲೆಗಳು ವಿನಾಶದ ಅಂಚಿನಲ್ಲಿವೆ.


  • ಟಿ.ಶಿವಕುಮಾರ್ (ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ) ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW