ಅಂಗಾಲ ಜೀವ – ಮಂಜಯ್ಯ ದೇವರಮನಿ

ಆನಿಗಾಲಿನವರ ಚಪ್ಪಲಿಯನ್ನು ಚಪ್ಪಲಿ ಕಳ್ಳರು ಕದ್ದು ಬಿಟ್ಟಾಗ ಅವರ ಪಜೀತಿ ಹೇಳತೀರದಾಗುತ್ತಿತ್ತು, ಇಂಥ ಪಜೀತಿಯಿಂದ ಪಾರಾಗಲು ಕೆಲವರು ಮಾಡುತ್ತಿದ್ದ ಉಪಾಯವನ್ನು ಲೇಖಕ ಮಂಜಯ್ಯ ದೇವರಮನಿ ಅವರು ತಮ್ಮ ಲೇಖನದಲ್ಲಿ ವರ್ಣಿಸಿದ್ದಾರೆ, ಈ ಲೇಖನ ಓದುವಾಗ ಹಳ್ಳಿಗಾಡಿನ ನೈಜ್ಯತೆ ಚಿತ್ರಣ ಕಣ್ಣಿನ ಮುಂದೆ ಕಟ್ಟುತ್ತದೆ, ತಪ್ಪದೆ ಓದಿ…

ನಮ್ಮೂರಿನ ಜಮೀನುಗಳಲ್ಲಿ ಮಣ್ಣಿಗಿಂತ ಕಲ್ಲುಗಳೆ ಜಾಸ್ತಿ. ಎಲ್ಲಿ ನೋಡಿದರೂ ಕಲ್ಲುಗಳ ರಾಶಿ ರಾಶಿ. ಹೊಲಗಳ ತುಂಬಾ ಬೆಣಚು ಕಲ್ಲುಗಳು ಸಮುದ್ರದ ಅಲೆಯಂತೆ ಒಡ್ಡುಗಟ್ಟಿವೆ. ಆದ್ದರಿಂದ ನಮ್ಮೂರಿನ ಜನರಿಗೆ ಸಂಗಾಪುರದ ಕಲ್ಲುಗಳು ಎಂದು ಕರೆಯುತ್ತಿದ್ದರು. ನೋಡಲು ಗಟ್ಟಿಮುಟ್ಟಾಗಿ ಬಂಡೆಗಲ್ಲಿನಂತೆ ಇದ್ದರು ನನ್ನೂರು ಜನರು. ಈ ಕಲ್ಲಿನ ಹೊಲಗಳಲ್ಲಿ ಹೆಚ್ಚಾಗಿ ಹುರುಳಿ ಸಾಮೆ ಜೋಳ ಬೆಳೆಯುತ್ತಾರೆ.

ಕಲ್ಲಿನ ಹೊಲಗಳಿಗೂ ನಾನು ಹೇಳುವ ವಿಷಯಕ್ಕೂ ಸಂಬಂಧವಿದೆ. ನಮ್ಮೂರಿನ ಹತ್ತು ಜನರಲ್ಲಿ ಐದು ಜನಗಳಿಗೆ ಆನಿಗಾಲಿದೆ. ಕಾಲಿನಲ್ಲಿ ಎಂದು ತುಳಿದ ಗೊರಪಿ (ಬೆಣಚು ಕಲ್ಲಿನ ಚೂರು) ಕೊಳೆತ ಮುಳ್ಳು, ಕೂಕು ಆಗಿ ಕಾಲನಂತರ ಗಡ್ಡೆಯಾಗುತ್ತದೆ ಇದನ್ನೇ ಆನಿಗಾಲು ಎನ್ನುವರು. ಇವರು ಹೊಲಕ್ಕೆ ಹೋಗುವುದಿಲ್ಲ. ಬರಿಗಾಲಿನಲ್ಲಿ ನಾಕು ಹೆಜ್ಜೆ ನೆಡೆಯಲು ಭಯ ಬೀಳುತ್ತಾರೆ. ನೆಲದ ಮೇಲೆ ಅಲ್ಲ ಹೂವಿನ ಮೇಲೆ ಕಾಲಿಡಲು ನಡುಗುತ್ತಾರೆ. ನೋಡಲು ಬಲಿಷ್ಠವಾಗಿ, ದಷ್ಟಪುಷ್ಟವಾಗಿ ಕಾಣುವ ಇವರು ಕಾಲಿನ ವಿಚಾರದಲ್ಲಿ ಮೆತ್ತಗಾಗಿದ್ದಾರೆ. ಬೇಗ ಬೇಗ ನಡೆಯುವಂತಿಲ್ಲ, ಬರಿಗಾಲಲ್ಲಿ ನಡೆಯುವಂತಿಲ್ಲ, ತಮ್ಮ ಬಲಿಷ್ಠವಾದ ಜೀವ ಇವರ ಅಂಗಾಲಿನಲ್ಲಿ ಕುಳಿತು ಅಣಕಿಸುತ್ತಿತ್ತು. ಕೆಲವರಿಗೆ ಮಧ್ಯವಯಸ್ಸಿಗೆ ಕಾಲಿನಲ್ಲಿ ಆನಿ ಬೆಳೆದು ಕಟ್ಟೆಯಿಡಿದು ಕೂರಬೇಕಾಗಿ ಬಂದಿದೆ.

ಫೋಟೋ ಕೃಪೆ : clipstock

ಆನಿಗಾಲಿನವರಿಗೆ ಅಪವಾದವೆಂಬಂತೆ ಶಿವಪ್ಪಜ್ಜನಿದ್ದ. ಇವನು ತನ್ನ ಜೀವನದಲ್ಲಿ ಒಮ್ಮೆಯೂ, ಅಪ್ಪಿತಪ್ಪಿಯೂ ಚಪ್ಪಲಿಗಳನ್ನು ಹಾಕಿಲ್ಲ. ಬರಿಗಾಲಿನಲ್ಲೇ ತನ್ನ ಜೀವನವನ್ನು ಸವೆಸಿದ್ದಾನೆ. ಅವನ ಕಾಲುಗಳು ಮರವಟ್ಟು ಹೋಗಿದ್ದವು. ಯಾವ ಮುಳ್ಳು ಯಾವ ಗೊರಪಿ ಏನು ಮಾಡಲಾಗಿರಲಿಲ್ಲ. ತನ್ನ ಕಾಲಿಗೆ ಮುಳ್ಳು ನೆಟ್ಟಿತು ಎಂದು ಬಗ್ಗಿ ತೆಗೆದುಕೊಂಡವನಲ್ಲ ಹಾಗೆ ಮುಳ್ಳನ್ನು ಹೊಸಕಿ ಹಾಕಿ ಬಿಡುತ್ತಿದ್ದ. ಎಲ್ಲರೂ ಪೀಕಜಾಲಿ ಮುಳ್ಳಿಗೆ ( ಇದು ತುಂಬಾ ವಿಷ) ಹೆದರುತ್ತಿದ್ದರು. ಆದರೆ ಅವನ ಕಾಲಲ್ಲಿ ಆ ಮುಳ್ಳು ಮೈಮುರಿದುಕೊಂಡು ಬೀಳುತ್ತಿತ್ತು. ನಿಮಗೆ ಬಹುತೇಕ ಮುಳ್ಳಿನ ಸಹವಾಸ ಗೊತ್ತಿಲ್ಲ ಎನ್ನಿಸುತ್ತದೆ. ನಮ್ಮ ಬಯಲು ಸೀಮೆಯಲ್ಲಿ ಮುಳ್ಳುಗಳ ಕುರಿತು ದೊಡ್ಡ ಕಾದಂಬರಿಯನ್ನೇ ಬರೆಯಬಹುದು. ಮುಳ್ಳುಗಳಲ್ಲಿ ನಾನಾವಿಧ. ಕರಿಜಾಲಿ ಮುಳ್ಳು, ಪಿಕುಜಾಲಿ ಮುಳ್ಳು, ಜೀಕಜಾಲಿ ಮುಳ್ಳು, ಕಾರೆ ಮುಳ್ಳು, ಬಾರಿ ಮುಳ್ಳು, ಕವಳಿ ಮುಳ್ಳು, ಹಿಪ್ಪಿ ಮುಳ್ಳು, ಪೆರಗಿ ಮುಳ್ಳು ಒಂದೇ ಎರಡೇ…. ಇವುಗಳಿಂದ ಕಚ್ಚಿಸಿಕೊಂಡಿದ್ದರೆ ಗೊತ್ತಾಗುತ್ತದೆ. ಇವಗಳ ವರತೇ ಎಂತದ್ದು ಅಂತಾ…! ಹೊಲಗಳ ರಕ್ಷಣೆಗಾಗಿ ಮುಳ್ಳು ಬೇಲಿಗಳು ಕಾವಲಿಗಿರುತ್ತವೆ. ಈಗಿನ ರೀತಿ ತಂತಿ ಬೇಲಿಗಳರಲಿಲ್ಲ. ಬಿತ್ತಿದ ನಂತರ ಬೆಳೆಗಳ ರಕ್ಷಣೆಗೆ ಹೊಲಗಳಿಗೆ ಮುಳ್ಳು ಕಟ್ಟುವುದು ಸಾಮಾನ್ಯವಾಗಿತ್ತು. ಮುಳ್ಳಿನ ಗಿಡವನ್ನು ಅಥವಾ ಮರವನ್ನು ಕಡಿದು ಎಸೆ ಕಟ್ಟಿಕೊಂಡು ಬಂದು ಘನವಾಗಿ ಬೇಲಿ ಕಟ್ಟಬೇಕಿತ್ತು. ಆಗೆಲ್ಲ ಮುಳ್ಳುಗಳು ಮೈ ಮೇಲೆ ದಾಳಿ ಮಾಡುತ್ತಿದ್ದವು. ಒಂದೊಂದು ಮುಳ್ಳು ಒಂದೊಂದು ರೀತಿ ದಾಳಿ ಮಾಡುತ್ತಿದ್ದವು. ಬೇಲಿ ಕಟ್ಟಲು ಹೆಚ್ಚಾಗಿ ಬಾರಿ ಮುಳ್ಳು ಮತ್ತು ಪರಿಗೆ ಮುಳ್ಳು ಬಳಸುತ್ತಿದ್ದರು. ಈ ಮುಳ್ಳುಗಳು ಹುಲಿ ಉಗುರಿನಂತೆ ಪರಚುತಿದ್ದವು. ಬಂಡಿ ಜಾಡುಗಳಿಗೆ ಕರಿಜಾಲಿ ಮುಳ್ಳನ್ನು ಬಳಸುತ್ತಿದ್ದರು. ಹಳ್ಳಿಗರಿಗೆ ದಿನಬೆಳಗಾದರೆ ಮುಳ್ಳಿನ ಸವಾಸ. ಎಷ್ಟು ಹೆಣ್ಣುಮಕ್ಕಳು ಮುಳ್ಳು ಮುರಿದು ಒಲೆ ಹಚ್ಚುತ್ತಿದ್ದರು. ಈಗಿನಂತೆ ಸಿಲೆಂಡರ್ ಇರಲಿಲ್ಲ. ಸೌದಿಗೆ ಮುಳ್ಳು ಕಡಿಯುವುದು ಸಾಮಾನ್ಯವಾಗಿತ್ತು. ಅದೇನೇ ಇರಲಿ ಕಲ್ಲು ಮುಳ್ಳಿನಿಂದ ನಮ್ಮೂರಿನ ಜನ ಕಾಲು ಕಳೆದುಕೊಂಡಿದ್ದರು.

ಇದರಿಂದ ಚಪ್ಪಲಿಗಳಿಗೆ ಬಹು ಬೇಡಿಕೆಯಿತ್ತು. ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಹುಡುಗರು ಈ ಆನಿಗಾಲಿನವರ ಚಪ್ಪಲಿಯನ್ನು ಕದ್ದು ಬಿಡುತ್ತಿದ್ದರು. ಆಗ ಇವರ ಪಜೀತಿ ಹೇಳತೀರದು ಜೀವ ಕಳೆದುಕೊಂಡವರಂತೆ ಹಲುಬುತ್ತಿದ್ದರು. ಇಂಥ ಪಜೀತಿಯಿಂದ ಪಾರಾಗಲು ಕೆಲವರು ತಮ್ಮ ಚಪ್ಪಲಿಗಳನ್ನು ಬಿಚ್ಚಿ ಸೊಂಟದಲ್ಲಿ ಸಿಗಿಸಿಕೊಂಡು ಮನೆಯೊಳಗೆ ಓಡಾಡುತ್ತಿದ್ದರು. ಇನ್ನು ಕೆಲವರು ಚಪ್ಪಲಿಗಳಿಗೆ ಹಗ್ಗ ಕಟ್ಟಿ ಜೋಪಾನವಾಗಿಟ್ಟುಕೊಳ್ಳುತ್ತಿದ್ದರು.

ಚಪ್ಪಲಿ ಹೊಲಿಯುವ ಮುಳ್ಳಜ್ಜ ಅನಿಗಾಲಿನವರ ಪಾದದ ಅಳತೆ ತೆಗೆದುಕೊಂಡು ಮೆತ್ತನೆ ಚರ್ಮದ ಜೋಡು ಹೊಲೆದು ಕೊಡುತ್ತಿದ್ದ. ಇವನ ಮಗಳು ಗುತ್ತಲಿಗೆವ್ವ ಆನಿಗಾಲಿನ ದುರ್ಮಾಮ್ಸದ ಗಡ್ಡೆ ತೆಗೆಯುವ ಸರ್ಜನ್. ಗಂಡ ಬಿಟ್ಟು ತವರು ಸೇರಿದ್ದಳು. ಮಕ್ಕಳಾಗಲಿಲ್ಲ ಗೊಡ್ಡು ಎಂದು ಗಂಡ ಹೊರ ದಬ್ಬಿದ್ದ. ತವರಿನಲ್ಲೇ ನೆಲೆ ಕಂಡುಕೊಂಡಿದ್ದಳು. ತುಂಬಾ ನಾಜುಕಾಗಿ ನೋವಾಗದಂತೆ ತೆಗೆಯುವ ಕಲೆ ಗುತ್ತಲಿಗೆವ್ವಳಿಗೆ ಕರಗತವಾಗಿತ್ತು. ಆದ್ದರಿಂದ ಎಲ್ಲರೂ ಇವಳ ಬಳಿ ತಮ್ಮ ಆನಿಗಾಲು ತರುತ್ತಿದ್ದರು. ಸೂಪರ್ ಮ್ಯಾಕ್ಸ್ ಬ್ಲೆಡ್ ನಿಂದ ಕೂಕು ಕುಂತಿದ್ದ ಮಾಂಸದ ಗಡ್ಡೆಯನ್ನು ಕೆತ್ತಿ ತೆಗೆಯುತ್ತಿದ್ದಳು. ನೋವು ಹೆಚ್ಚಾದಾಗ “ಹಲ್ಲುಕಚ್ಚಿ ಕುಂದ್ರಿ”ಎಂದು ಹೇಳುತ್ತಿದ್ದಳು. ಸುತ್ತ ನೆರೆದವರೆಲ್ಲಾ ಹಲ್ಲು ಕಿರಿದು ನಗುತ್ತಿದ್ದರು.


  • ಮಂಜಯ್ಯ ದೇವರಮನಿ (ವೃತ್ತಿಯಲ್ಲಿ ಸರಕಾರಿ ಶಾಲಾ ಶಿಕ್ಷಕ. “ಕರಿಜಾಲಿ ಮರ” ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ನೆಚ್ಚಿನ ಹವ್ಯಾಸಗಳು) ಸಂಗಾಪುರ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW