ಒಂದು ಕಾಲದಲ್ಲಿ ಖಳನಾಯಕನಾಗಿ ಎಲ್ಲರ ಮನಗೆದ್ದ ಜನಪ್ರಿಯ ನಟರೆಂದರೆ ವಜ್ರಮುನಿ ಅವರು, ಕನ್ನಡ ಚಿತ್ರರಂಗದಲ್ಲೇ ತಮ್ಮದೇಯಾದ ಒಂದು ಇತಿಹಾಸವನ್ನು ಬರೆದಂತಹ ಕಲಾವಿದ. ಆಕೃತಿಕನ್ನಡ ಇತ್ತೀಚಿಗೆ ಅವರ ಧರ್ಮಪತ್ನಿಯವರು ಜೊತೆ ಮಾತಾಡಿದಾಗ ವಜ್ರಮುನಿ ಅವರ ತೆರೆಯ ಹಿಂದಿನ ಬದುಕಿನ ಚಿತ್ರಣ ಅನಾವರಣಗೊಂಡಿತು. ತಪ್ಪದೆ ಓದಿ….
ಹೆಸರಿನ ಮುಂದೆ ‘ನಟ ಭಯಂಕರ’ ಎನ್ನುವ ಫ್ಯಾನ್ಸಿ ಹೆಸರನ್ನು ಇಟ್ಟುಕೊಂಡೆ ಭಯ ಹುಟ್ಟಿಸುತ್ತಲ್ಲೇ ಎಲ್ಲರ ಮನ ಗೆದ್ದಂತಹ ವ್ಯಕ್ತಿ ಇವರು. ತಮ್ಮ ಕೆಂಡದಂತಹ ಕಣ್ಣು, ವ್ಯಂಗ್ಯ ನಗು, ಕಂಚಿನ ಕಂಠ ಕೇಳ್ತಿದ್ರೆ ಎದುರಿಗಿದ್ದವರೆಲ್ಲ ಗಡ ಗಡನೆ ನಡುಗುತ್ತಿದ್ದರು. ಅದರಲ್ಲೂ ಹೆಣ್ಣು ಮಕ್ಕಳಂತೂ ಸೀರೆಯ ಸೆರಗನ್ನ ತಮ್ಮ ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದು ಕೂರುತ್ತಿದ್ದರು. ಒಬ್ಬ ಖಳನಾಯಕನೆಂದರೆ ಹೇಗಿರುತ್ತಾನೆ ಎನ್ನುವ ಒಂದು ಕಲ್ಪನೆಯನ್ನು ಸೃಷ್ಟಿಸಿದ ಏಕೈಕ ಕಲಾವಿದರೆಂದರೆ ಅದು ವಜ್ರದಂತೆ ಮಿನುಗಿದ ಧೃವತಾರೆ ವಜ್ರಮುನಿ ಅವರು. ಇಂದು ಅವರು ನಮ್ಮೊಂದಿಗೆ ಇಲ್ಲ. ಆದರೆ ಅವರು ನೀಡಿದ ಚಿತ್ರಗಳಿಂದ ಎಂದೆಂದಿಗೂ ಅವರು ಅಮರ.
ಪರಭಾಷೆಯ ವ್ಯಾಮೋಹವಿಲ್ಲದೆ ಕನ್ನಡ ಚಿತ್ರರಂಗವನ್ನೇ ನೆಚ್ಚಿಕೊಂಡು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು ೩೫೦ ಕ್ಕೂ ಹೆಚ್ಚು. ಒಂದೇ ಪರದೆಯ ಮೇಲೆ ರಾಜಕುಮಾರ ಅವರು ನಾಯಕರಾದರೆ, ವಜ್ರಮುನಿ ಅವರು ಖಳನಾಯಕರಾಗಿ ನಟಿಸಿದರೆ ಆ ಸಿನಿಮಾ ಸೂಪರ್ ಡೂಪರ್ ಆಗುತ್ತಿತ್ತು . ನಾಯಕನಿಗಿರುವಷ್ಟೇ ತೂಕವನ್ನು ಖಳನಾಯಕನಲ್ಲೂ ಹುಟ್ಟು ಹಾಕಿದ್ದು ವಜ್ರಮುನಿಯವರು ಎಂದರೆ ತಪ್ಪಾಗಲಾರದು.

ವಜ್ರಮುನಿ ಅವರ ಮೊಮ್ಮಗಳು ಅನಿಕಾ ಹಾಗೂ ಶಾಲಿನಿ ಹೂಲಿ ಪ್ರದೀಪ್
ಮಿಣ ಮಿಣನೇ ಮಿನುಗಿದ ವಜ್ರಮುನಿಯವರ ತೆರೆಯ ಹಿಂದಿನ ಬದುಕಿನ ಕುರಿತು ತಿಳಿಯುವ ಒಂದು ಕುತೂಹಲ ಪ್ರತಿಯೊಬ್ಬರಿಗೂ ಇದೆ. ಆ ಕುತೂಹಲ ಬೆನ್ನಟ್ಟಿ ಅಂಜನಾಪುರದ ಫಾರ್ಮ ಹೌಸ್ ಗೆ ಆಕೃತಿ ತಂಡ ಭೇಟಿ ನೀಡಿತು . ದೊಡ್ಡದಾದ ನರ್ಸರಿ ಗಿಡಗಳು, ಹಸುಗಳು, ಕೋಳಿಗಳು, ವಿವಿಧ ಜಾತಿಯ ನಾಯಿಗಳು ಇವುಗಳ ಮಧ್ಯೆದಲ್ಲಿ ದೊಡ್ಡದ ಮನೆ. ವಜ್ರಮುನಿ ಅವರ ಮನೆ ಅಂದ ಮೇಲೆ ಸಹಜವಾದ ಭಯ ಇದ್ದೆ ಇತ್ತು. ಮನೆಯೊಳಗೇ ಕಾಲಿಡುತ್ತಿದ್ದಂತೆ ಗೋಡೆಯ ಸುತ್ತಲೂ ವಜ್ರಮುನಿಯವರ ಹಾಗೂ ಹಳೆಕಲಾವಿದರ ಜೊತೆಗಿನ ಭಾವಚಿತ್ರಗಳು, ಅವರಿಗೆ ಬಂದಂತಹ ಪ್ರಶಸ್ತಿಗಳು, ಸನ್ಮಾನ ಪತ್ರಗಳು, ವಜ್ರಮುನಿ ಅವರು ಕೂತು ಕೆಲಸ ಮಾಡುತ್ತಿದ್ದಂತಹ ಮೇಜು ಖುರ್ಚಿಗಳಿದ್ದವು. ಎಲ್ಲೆಡೆ ಕಣ್ಣಾಡಿಸುತ್ತಿದ್ದಂತೆ ಒಳಗಿನಿಂದ ಬಂದವರು ವಜ್ರಮುನಿಯವರ ಕಿರಿ ಮಗ ಜಗದೀಶ ವಜ್ರಮುನಿ ಅವರು. ಅವರ ಕಣ್ಣುಗಳು ಮಾತ್ರ ಎಲ್ಲೋ ಒಂದು ಕಡೆ ವಜ್ರಮುನಿ ಹೋಲಿಕೆ ಅನಿಸಿತ್ತಾದರೂ, ಅವರ
ಹಿರಿಮಗ ಮಾತ್ರ ವಜ್ರಮುನಿಯವರ ಜೆರಾಕ್ಸ್ ಅಂತಲೇ ಹೇಳಬಹುದು.ಅಪ್ಪನಂತೆ ತದ್ರೂಪಿ. ಮಕ್ಕಳ್ಯಾರೂ ಚಿತ್ರರಂಗಕ್ಕೆ ಬರದೇ ಉದ್ಯಮಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡವರು.
ಅನಂತರ ನಮ್ಮ ಸಂದರ್ಶನಕ್ಕೆ ಸಿದ್ದವಾಗಿ ಬಂದದ್ದು ವಜ್ರಮುನಿಯವರ ಧರ್ಮಪತ್ನಿ ಲಕ್ಷ್ಮಿ ಅಮ್ಮನವರು. ಹೆಸರಿಗೆ ತಕ್ಕಂತೆ ಲಕ್ಷ್ಮಿ ಸ್ವರೂಪ, ನಗು ಮುಖದ, ಮಿತಭಾಷಿಣಿ ಲಕ್ಷ್ಮಿ ವಜ್ರಮುನಿ ಅವರು. ನಮ್ಮ ಕುಶಲೋಪಚಾರ ವಿಚಾರಿಸಿ ಆಕೃತಿ ಕನ್ನಡ ಜೊತೆಗೆ ಮಾತಿಗಿಳಿದರು.

ಮನೆಯಲ್ಲಿ ಸಣ್ಣ ಮಕ್ಕಳು, ಅವರಿವರು ಓಡಾಡುತ್ತಿದ್ದರಿಂದ ಮನೆಯ ಸದಸ್ಯರಿಂದ ಮಾತು ಶುರುವಾಯಿತು. ನಮ್ಮದು ದೊಡ್ಡ ಕುಟುಂಬ ಎಲ್ಲರೂ ಒಟ್ಟಿಗೆ ಇದ್ದೇವೆ. ಮೂರೂ ಮಕ್ಕಳು, ಮೊಮ್ಮಕ್ಕಳೆಲ್ಲ ಒಂದೇ ಸೂರಿನಡಿಯಲ್ಲಿ ಬಾಳುತ್ತಿದ್ದೇವೆ ಎನ್ನುವುದರ ಮೂಲಕ ಒಬ್ಬೊಬ್ಬರದೇ ಕುಟುಂಬದ ಪರಿಚಯ ಮಾಡುತ್ತಾ ಹೋದರು. ಅದರಲ್ಲೂ ಜಗದೀಶ ಅವರ ಹಿರಿಯ ಮಗಳು ಅನಿಕಾ ಸ್ಕೇಟಿಂಗ್ ನಲ್ಲಿ ನ್ಯಾಷನಲ್ ಆಟಗಾರ್ತಿಯಾದರೆ, ಮಗ ಆಕರ್ಷ ನ ಮೈಯಲ್ಲಿ ಅಜ್ಜನ ರಕ್ತ ಹರಿಯುತ್ತಿದ್ದು, ಅಜ್ಜನಂತೆ ನಟಿಸುವ ಪ್ರಚಂಡ. ಈಗಾಗಲೇ ನಟನೆಗೆ ಬೇಕಾದ ತಯಾರಿ ನಡೆಯುತ್ತಿದ್ದು ತಿಳಿದು ಬಂತು . ಮುಂದಿನ ದಿನಗಳಲ್ಲಿ ವಜ್ರಮುನಿ ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಸೂಚನೆ ನೋಡಿ ಸಂತೋಷವಾಯಿತು.
ವಜ್ರಮುನಿಯವರ ಬಣ್ಣದ ಬದುಕು :
ವಜ್ರಮುನಿಯವರ ಮದುವೆ ಆಗ್ಬೇಕಾದ್ರೆ ಭಯ ಇತ್ತಾ? ಎನ್ನುವ ನೇರ ಪ್ರಶ್ನೆಗೆ ಲಕ್ಷಿಯವರು ನಗುತ್ತಾ ‘ನನಗೆ ಯಾವುದೇ ಭಯವಿರಲಿಲ್ಲ. ಏಕೆಂದರೆ ನಾನು ಮದುವೆ ಆದಾಗ ಅವರು ಸಿನಿಮಾದಲ್ಲಿ ನಟಿಸಲು ಇನ್ನು ಶುರುವೇ ಮಾಡಿರಲಿಲ್ಲ. ಅವರ ಬಣ್ಣದ ಬದುಕು ಶುರುವಾಗಿದ್ದೇ ರಂಗಭೂಮಿಯಿಂದ. ಅವರನ್ನ ನೋಡಿ ಭಯ ಆಗಿದ್ದು , ಪುಟ್ಟಣ್ಣ ಕಣಗಾಲ್ ಅವರ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರೀ ಅವರ ನಿರ್ದೇಶನದ ‘ಪ್ರಚಂಡ ರಾವಣ’ ನಾಟಕದಲ್ಲಿ ಅವರು ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದಾಗ. ಆಗತಾನೆ ನಮ್ಮದು ಮದುವೆ ಆಗಿತ್ತು, ಗಂಡನ ಅಭಿನಯ ನೋಡಬೇಕು ಎನ್ನುವ ಆಸೆಯಿಂದ ಮುಂದಿನ ಸಾಲಿನಲ್ಲಿ ಖುರ್ಚಿ ಹಿಡಿದು ಕೂತಿದ್ದೆ . ನಾಟಕ ಶುರುವಾಯ್ತು, ಆಗ ನಮ್ಮ ಯಜಮಾನ್ರು ಬಂದ್ರೂ ನೋಡಿ ಅವರ ಕಂಠ, ಗಟ್ಟಿ ಮಾತುಗಳು, ವ್ಯಂಗ್ಯ ನಗು ನೋಡಿ ನಡುಕ ಶುರುವಾಗಿ ಮುಂದಿನ ಖುರ್ಚಿ ಬಿಟ್ಟು ಓಡಿ ಹೋಗಿ ಹಿಂದಿನ ಖುರ್ಚಿಯಲ್ಲಿ ಕೂತೆ. ಅವರ ನಟನೆಯಿಂದ ನಾನು ಕೂಡಾ ಬೆವತಿದ್ದೀನಿ ಅನ್ನೋದು ಬಿಟ್ಟರೆ, ಬೇರೆ ಸಮಯದಲ್ಲಿ ಅವರ ಮೇಲೆ ಭಯ ಇರಲಿಲ್ಲ’ ಎಂದರು.
ಪಾತ್ರ ಅವರನ್ನ ಆವರಿಸಿ ಬಿಡುತ್ತಿತ್ತು. ನಾಟಕದಲ್ಲಿ ಅವರ ಅಭಿನಯವನ್ನು ಪೂರ್ತಿಯಾಗಿ ನೋಡಿದ ಪುಟ್ಟಣ್ಣ ಕಣಗಾಲ್ ಅವರು ನಮ್ಮ ಯಜಮಾನ್ರನ್ನ ತಮ್ಮ ಸಿನಿಮಾಕ್ಕೆ ಖಳನಾಯಕನಾಗಿ ಆಯ್ಕೆ ಮಾಡಿಕೊಂಡರು. ೧೯೬೭ ರಲ್ಲಿ ಪುಟ್ಟಣ್ಣನವರ “ಸಾವಿರ ಮೆಟ್ಟಿಲು” ಚಿತ್ರದ ಮೂಲಕ ನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದರಾದರೂ ಆ ಚಿತ್ರ ಕಾರಣಾಂತರದಿಂದ ಬಿಡುಗಡೆಯಾಗಲಿಲ್ಲ. ಮುಂದೆ ಪುಟ್ಟಣ್ಣನವರೇ ನಿರ್ದೇಶಿಸಿದ “ಮಲ್ಲಮ್ಮನ ಪವಾಡ” ಚಿತ್ರ ವಜ್ರಮುನಿಯವರ ಭವಿಷ್ಯವನ್ನೇ ಬದಲಾಯಿಸಿತು. ಸಂಪತ್ತಿಗೆ ಸವಾಲ್, ಗೆಜ್ಜೆಪೂಜೆ, ನಾಗರಹಾವು , ಉಪಾಸನೆ, ಮಯೂರ, ಬಹದ್ದೂರ್ ಗಂಡು, ಭರ್ಜರಿ ಭೇಟೆ, ಪ್ರೇಮದ ಕಾಣಿಕೆ, ಶಂಕರ್ ಗುರು , ಬಂಗಾರದ ಮನುಷ್ಯ , ಗಿರಿಕನ್ಯೆ , ಆಕಸ್ಮಿಕ , ಭಕ್ತ ಕುಂಬಾರ ಸೇರಿದಂತೆ ಹಲವಾರು ಚಿತ್ರಗಳಿಗೆ ಬಣ್ಣ ಹಚ್ಚಿದರು, ಅವರ ಪಾತ್ರವನ್ನು ಜನ ಇಷ್ಟಪಟ್ಟಿದ್ದರಿಂದ ಸಾಲು ಸಾಲು ಚಿತ್ರಗಳು ಅವರನ್ನು ಹುಡುಕಿಕೊಂಡು ಬಂದವು.
ಯಾವಾಗಲೂ ಜನರ ಮಧ್ಯೆನೇ ಅವರು ಇರುತ್ತಿದ್ದರು, ಶೂಟಿಂಗ್ ಹೋಗಲಿ, ಮನೆಯಲ್ಲೇ ಇರಲಿ ಅವರ ಸುತ್ತ ಅಭಿಮಾನಿಗಳು,ಸ್ನೇಹಿತರು, ಕಲಾವಿದರು ಇದ್ದೆ ಇರುತ್ತಿದ್ದರು. ಮನೆಯಲ್ಲಿ ರಾತ್ರಿ ೩ಗಂಟೆಯವರೆಗೂ ಜನ ಇರುತ್ತಿದ್ದರು, ಅವರು ಯಾವಾಗ ಮಲಗ್ತಿದ್ರೋ ಅದು ನಮಗೆ ಗೊತ್ತಾಗ್ತಿರಲಿಲ್ಲ. ಅವರಿಗೆ ಜನ ಇದ್ದರೇ ಸಮಯವೇ ಗೊತ್ತಾಗ್ತಿರಲಿಲ್ಲ . ಅವರದು ಮಾತು ಮಾತು… ಅಷ್ಟು ಮಾತಾಡ್ತಿದ್ರು , ನಾನೆ ಎಷ್ಟು ಮಾತಾಡ್ತರಪ್ಪಾ ಇವರು ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದೆ ಎಂದು ಗಂಡನ ಸ್ವಭಾವದ ಬಗ್ಗೆ ಲಕ್ಷ್ಮಿಯವರು ಹೇಳಿ ನಕ್ಕರು.
ಗಂಡ ಒಬ್ಬ ಸೆಲೆಬ್ರೆಟಿ ಆದ್ರೆ ಸಾಮಾನ್ಯ ಗಂಡನಂತೆ ನಿಮ್ಮೊಂದಿಗೆ ಓಡಾಡಲು ಸಾಧ್ಯವಿರುತ್ತಿರಲಿಲ್ಲವಲ್ಲಾ ಅವಾಗ ನಿಮಗೆ ಗಂಡನ ಮೇಲೆ ಸಿಟ್ಟು, ಬೇಸರ ಇತ್ತಾ? ಎನ್ನುವ ಪ್ರಶ್ನೆಗೆ ಖಂಡಿತಾ ಇರಲಿಲ್ಲ. ಅವರು ಒಂದು ತರ ಬ್ಯುಸಿ ಆದ್ರೆ, ನಾನು ಒಂದು ತರ ತುಂಬು ಕುಟುಂಬದ ನಡುವೆ ಬ್ಯುಸಿ ಇರುತ್ತಿದ್ದೆ. ಅತ್ತೆ ಮಾವ, ಮೈದುನರು, ಮಕ್ಕಳು ಎಲ್ಲರೂ ಇದ್ದಾಗ ಬೇಸರಕ್ಕೆ ಸಮಯವೇ ಇರುತ್ತಿರಲಿಲ್ಲ. ನಮಗೆ ಒಂಟಿಯಾಗಿ ಬದುಕಿ ಅಭ್ಯಾಸವೇ ಇಲ್ಲ. ಕೂಡು ಕುಟುಂಬದಲ್ಲಿ ಎಲ್ಲರ ಮಧ್ಯೆ ಇದ್ದೆ ಅಭ್ಯಾಸ. ಈಗಿನ ಕಾಲವೇ ವಿಚಿತ್ರ ಗಂಡ,ಹೆಂಡ್ತಿ, ಮಕ್ಕಳು ಇದ್ರೆ ಸಾಕು ಅಂತಾರೆ. ಆ ತರ ನನಗೆ ಇಷ್ಟನೇ ಇಲ್ಲ. ನನ್ನ ಮಕ್ಕಳೆಲ್ಲಾ ಈಗಲೂ ಜೊತೆಗೆ ಇರೋದು ನನ್ನ ಪುಣ್ಯ, ಎಂದು ತಮ್ಮ ಕುಟುಂಬದ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತಾರೆ .
ಸರ್ ದು, ಬೆಂಗಳೂರಿನಲ್ಲಿ ಶೂಟಿಂಗ್ ಇದ್ರೆ ಮನೆಯಿಂದ ೧೦೦ ಮುದ್ದೆ ಊಟ ಶೂಟಿಂಗ್ ಸೆಟ್ ಗೆ ಹೋಗ್ತಿತ್ತು ಅಂತ ಕೇಳಿದ್ದೆ, ನಿಜಾನಾ? ಅಂತ ಪ್ರಶ್ನೆ ಕೇಳಿದಾಗ, ಹೌದು ನಿಜ. ನಮ್ಮ ಯಜಮಾನರಿಗೆ ಒಬ್ಬರಿಗೆ ಊಟ ಕಳಸಿದ್ರೆ ಇಷ್ಟ ಆಗ್ತಿರಲಿಲ್ಲ. ಸೆಟ್ ಲ್ಲಿರೋರಿಗೆಲ್ಲ ಮುದ್ದೆ ಕಳಿಸಬೇಕಿತ್ತು. ವಜ್ರಮುನಿ ಅವರ ಮನೆಯಿಂದ ಊಟ ಬಂತು ಅಂತ ಸೆಟ್ ನಲ್ಲಿ ಗೊತ್ತಾಗ್ತಿದ್ದ ಹಾಗೆ ಎಲ್ರು ಖುಷಿಯಿಂದ ಊಟಕ್ಕೆ ಓಡಿ ಬರ್ತಿದ್ರು, ಆ ತರ ನಮ್ಮ ಯಜಮಾನರು. ಅದೇ ತರ ಮನೆಗೆ ಯಾರೇ ಬಂದ್ರೂ ಖಾಲಿ ಹೊಟ್ಟೇಲಿ ಕಳುಹಿಸಿದ್ದೆ ಇಲ್ಲ. ಅವರ ಹೋದ ಮೇಲು ಅದೇ ಪದ್ಧತಿ ನಮ್ಮನ್ನೆಲ್ಲಿ ಮುಂದುವರೆದೆ, ನೀವು ಕೂಡಾ ಹಾಗೆಯೆ ಹೋಗೋ ಹಾಗಿಲ್ಲ ಎಂದು ಮಜ್ಜಿಗೆ ಲೋಟವನ್ನು ನಮ್ಮ ಮುಂದೆ ತಂದಿಟ್ಟರು. ಅವರ ಪ್ರೀತಿಗೆ ಕಟ್ಟು ಬಿದ್ದು, ಮಜ್ಜಿಗೆ ಕುಡಿಯುತ್ತಾ ಮಾತು ಮುಂದೊರೆಯಿತು.
ಪ್ರೊಡಕ್ಷನ್ ವಿಷಯಕ್ಕೆ ಬರೋದಾದ್ರೆ ವಜ್ರ ಪ್ರೊಡಕ್ಷನ್ ನಲ್ಲಿ “ತಾಯಿಗಿಂತ ದೇವರಿಲ್ಲ “,”ಬ್ರಹ್ಮಾಸ್ತ್ರ”, “ಗಂಡುಭೇರುಂಡ” ಸೇರಿದಂತೆ ಹಲವಾರು ಚಿತ್ರಗಳು ನಿರ್ಮಾಣವಾದವು. ನಮ್ಮ ಪ್ರೊಡಕ್ಷನ್ ಇದ್ದಾಗ ಮಾತ್ರ ಸಿನಿಮಾ ನೋಡೋಕೆ ಹೋಗ್ತಿದ್ವಿ. ನಮ್ಮ ಕುಟುಂಬದ ಸದಸ್ಯರು ಶೋಟಿಂಗ್ ಜಾಗಕ್ಕೆ ಹೋಗೋದ್ರಿಂದ ನಮ್ಮ ಊಟ, ತಿಂಡಿ, ಕಾರ್ ವ್ಯವಸ್ಥೆ ನಿರ್ಮಾಪಕರಿಗೆ ಹೊರೆಯಾಗಬಾರದು ಎನ್ನೋ ಕಾರಣಕ್ಕೆ ಬೇರೆ ಪ್ರೊಡಕ್ಷನ್ ಸಿನಿಮಾಗಳಿಗೆ ನಮ್ಮನ್ನ ಕರಕೊಂಡು ಹೋಗ್ತಿರಲಿಲ್ಲ. ಅಷ್ಟು ಸೂಕ್ಷ್ಮ ಸ್ವಭಾವ ನಮ್ಮ ಯಜಮಾನರದು.
ಹಾಗೆ ಮಾತು ಮುಂದುವರೆಸಿ, ಸಿನಿಮಾ ಅಂದ್ರೆ ಕೇವಲ ತೆರೆಮೇಲೆ ಕಣೋ ನಟರಷ್ಟೇ ಅಲ್ಲ, ಸುಮಾರು ೨೦೦ ಜನರ ಬದುಕು ಅಡಗಿರುತ್ತದೆ. ಶೂಟಿಂಗ್ ಹೋದಾಗ ಅಲ್ಲಿಯ ಕಷ್ಟಗಳು ಅರ್ಥವಾಯಿತು. ಅಣ್ಣಾವ್ರು ಅಭಿಮಾನಿಗಳನ್ನ ದೇವರು ಅಂತ ಕರೆದದ್ದು ಬಾಯಿ ಮಾತಿಗಲ್ಲ. ಒಂದು ಸಿನಿಮಾ ಗೆಲ್ಲಬೇಕು ಎಂದ್ರೆ ಅಭಿಮಾನಿಗಳು ಹೋಗಿ ಸಿನಿಮಾ ನೋಡಬೇಕು . ಆಗ ನಿರ್ಮಾಪಕ ಮುಂದಿನ ಸಿನಿಮಾ ಮಾಡೋಕೆ ಧೈರ್ಯ ಮಾಡ್ತಾರೆ. ಕಾರ್ಮಿಕರಿಗೆ ಅನ್ನ ಸಿಗುತ್ತದೆ ಎನ್ನುವುದರ ಮೂಲಕ ಸಿನಿಮಾ ಹಿಂದಿನ ಕಷ್ಟದ ಬಗ್ಗೆ ಮಾತಾಡಿದರು ಲಕ್ಷಿಯವರು.
ನಮ್ಮ ಮಾವ ವಜ್ರಪ್ಪ ಕಾರ್ಪೊರೇಟರ್ ಆಗಿದ್ದ ಕಾರಣ ರಾಜಕೀಯದಲ್ಲಿ ಸಾಕಷ್ಟು ಪ್ರಭಾವಿ ವ್ಯಕ್ತಿಯಾಗಿದ್ದರು. ಮುಂದೆ ನಮ್ಮ ಯಜಮಾನರು ಕೂಡಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಎಲೆಕ್ಷನ್ ಗೆ ನಿಂತು ಕೇವಲ ೨,೦೦೦ ಮತಗಳ ಅಂತರದಲ್ಲಿ ಸೋತರು. ಅವರು ಸೋತ ಮಾತ್ರಕ್ಕೆ ಸುಮ್ಮನೆ ಕೂರಲಿಲ್ಲ.ಯಾವುದೇ ಅಧಿಕಾರವಿಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದ್ದರು. ಒಂದು ವೇಳೆ ಎಲೆಕ್ಷೆನ್ ಗೆದ್ದು ಅಧಿಕಾರಕ್ಕೆ ಬಂದಿದ್ದರೇ, ಅವರು ಸಮಾಜದಲ್ಲಿ ಸಾಕಷ್ಟು ಉತ್ತಮ ಬದಲಾವಣೆಯನ್ನು ತರುತ್ತಿದ್ದರು ಎನ್ನುತ್ತಾ ರಾಜಕೀಯ ಒಡನಾಟದ ಕುರಿತು ಮಾತಾಡಿದರು.
ಜನವರಿ ೫, ೨೦೦೬ ರಂದು ಅವರು ನಿಧನರಾದರು. ಅವರ ನಿಧನರಾದಾಗ ಯಾರ ಬಳಿನೂ ಕೈ ಚಾಚದೆ ನಮ್ಮ ತೋಟದಲ್ಲಿ ನಮ್ಮ ಅತ್ತೆ ,ಮಾವನ ಸಮಾಧಿ ಪಕ್ಕದಲ್ಲಿ ಅವರ ಸಮಾಧಿ ಮಾಡಲಾಯಿತು. ಮುಂದಿನ ದಿನಗಳಲ್ಲಿ ತೋಟದ ಜಾಗದಲ್ಲಿ ರಂಗಮಂದಿರ ಕಟ್ಟುವ ಯೋಚ್ನೆ ಇದೆ. ಜೊತೆಗೆ ಅವರು ಹಾಕುತ್ತಿದ್ದ ವಾಚ್, ಚಪ್ಪಲಿ, ಬಟ್ಟೆ ಎಲ್ಲವನ್ನು ಮ್ಯೂಸಿಯಂ ರೀತಿಯಲ್ಲಿ ಮಾಡಿ ಅದನ್ನು ಸಾರ್ವಜನಿಕರಿಗೆ ನೋಡುವ ಅವಕಾಶ ಕಲ್ಪಿಸಿಕೊಡುವ ಯೋಚ್ನೆ ಇದೆ. ಜೊತೆಗೆ ಬಡಮಕ್ಕಳಿಗೆ ಹಾಸ್ಟೆಲ್ ಮಾಡುವ ಯೋಚನೆಯೂ ಇದೆ. ಎಂದು ಗಂಡನ ಹೆಸರನ್ನು ಶಾಶ್ವತವಾಗಿ ಉಳಿಸುವುದರ ಈ ನೆಲದಲ್ಲಿ ಉಳಿಸುವುದರ ಬಗ್ಗೆ ಮಾತನಾಡುತ್ತಾ ಗಂಡನ ಭಾವ ಚಿತ್ರದತ್ತ ಮುಖ ಮಾಡಿ ಭಾವುಕರಾದರು.

ಅಷ್ಟೋತ್ತಿಗೆ ಮಾತು ಮುಗಿಯಿತು. ಲಕ್ಷ್ಮಿಮ್ಮನಿಗೆ ಹೊರಡುತ್ತೇನೆ ಎಂದು ಅಲ್ಲಿಂದ ನಾವು ಹೊರಟು ನಿಂತೆವು, ನನ್ನನ್ನು ಬರಿಗೈಯಲ್ಲಿ ಕಳುಹಿಸದೆ ಕುಂಕುಮ ಕೊಟ್ಟು, ಆಶೀರ್ವಾದಿಸಿದರು. ಮನೆಯ ಹೊರಕ್ಕೆ ಬಂದು ಬೀಳ್ಕೊಡುವಾಗ ಮನೆಯ ಮುಂದೆ ನಿಂತಿದ್ದ ಬಿಳಿ ಕಾರಿನ ಮೇಲೆ ನನ್ನ ಗಮನ ಹರಿಯಿತು. ಅನುಮಾನವೇ ಇಲ್ಲ ಅದು ವಜ್ರಮುನಿಯವರು ಉಪಯೋಗಿಸುತ್ತಿದ್ದಂತಹ ಅಚ್ಚು ಮೆಚ್ಚಿನ ಕಾರ್ ಅದು ಎಂದು ತಿಳಿಯಿತು. ಕಾರ್ ತುಂಬಾ ಹಳೆದಾದರೂ ಅದಕ್ಕೆ ಸಣ್ಣದೊಂದು ಗೆರೆಯೂ ಕೂಡಾ ಆಗದಂತೆ ಮಕ್ಕಳು ತುಂಬಾ ಚನ್ನಾಗಿ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ, ವಿಷ್ಮಯದ ಸಂಗತಿಯೆಂದರೆ ಆ ಕಾರು ಈಗಲೂ ಚಾಲ್ತಿಯಲ್ಲಿದೆ. ಆಗಾಗ ಸರ್ವಿಸ್ ಕೊಟ್ಟು ಅಪ್ಪನ ನೆನಪು ಮತ್ತು ರಾಜ್ ಕುಮಾರ್ ಅವರು ಸೇರಿದಂತೆ ಘಟಾನುಘಟಿ ಕಲಾವಿದರ ಕೂತ ಕತೆಯನ್ನು ಈ ಕಾರ್ ಹೇಳುತ್ತದೆ.
ಹಿರಿಯ ಕಲಾವಿದರ ಸರಳ ಬದುಕು ಇಂದಿನ ಸಾಕಷ್ಟು ಕಲಾವಿದರಿಗೆ ಪ್ರೇರಣೆಯಾಗಲಿ ಮತ್ತು ವಜ್ರಮುನಿಯವರ ವಂಶವೃಕ್ಷ ಆದಷ್ಟು ಬೇಗ ಚಿತ್ರರಂಗದಲ್ಲಿ ಮೊಳಕೆಯೊಡೆಯಲಿ ಎಂದು ಶುಭ ಹಾರೈಸುತ್ತದೆ ಆಕೃತಿಕನ್ನಡ.
- ಶಾಲಿನಿ ಹೂಲಿ ಪ್ರದೀಪ್ , ಆಕೃತಿಕನ್ನಡ ಸಂಪಾದಕಿ
