ಕಾಶಿ ಅನುಭವ (ಭಾಗ ೧೦) – ಡಾ.ಪ್ರಕಾಶ ಬಾರ್ಕಿ



ಗಂಗೆಯ ತೀರದಲ್ಲಿ “ಕರ್ನಾಟಕ ಘಾಟ್” ಹೆಸರು ಓದಿದಾಕ್ಷಣ ಹೃದಯ ಪುಳಕಿತಗೊಂಡಿತು. ಮನದೊಳಗೆ ಅವರ್ಣನೀಯ ಹೆಮ್ಮೆ.”ಕರ್ನಾಟಕ ವಸತಿ ಗೃಹ”ದಲ್ಲಿ ವಾಸ್ತವ್ಯ, ಕನ್ನಡದ ಕಂಪು ಪಸರಿಸುವ ವಾತಾವರಣ. ಡಾ ಪ್ರಕಾಶ ಬಾರ್ಕಿ ಅವರ ಲೇಖನಿಯಲ್ಲಿ ಮೂಡಿ ಬಂದ ಕಾಶಿ ಅನುಭವದ ಕೊನೆಯ ಕಂತು ಕರ್ನಾಟಕ ಘಾಟ್, ಮುಂದೆ ಓದಿ…

ಕಾಶಿಯಲ್ಲಿ ಸುಮಾರು 88 ಘಾಟ್’ಗಳಿವೆ. ಒಂದೊಂದು ಘಾಟ್’ಗಳಿಗೆ ಒಂದೊಂದು ಐತಿಹ್ಯ. ಇಲ್ಲಿನ ರಸ್ತೆಗಳ ನಾಮಕರಣವಾಗಿದ್ದು ಘಾಟ್’ಗಳ ಹೆಸರಿನಿಂದಲೆ. ವಿಶ್ವನಾಥ ಮಂದಿರಕ್ಕೆ ತೀರಾ ಸನಿಹದ ದಶಾಶ್ವಮೇಧ ಘಾಟ್,‌ ಮಣಿಕರ್ಣಿಕಾ ಘಾಟ್’ನಿಂದ ಹಿಡಿದು ಅನತಿ ದೂರದ ಅಸ್ಸಿ ಘಾಟ್‌’ನವರೆಗೆ ಪ್ರತೀ ಘಾಟ್ ವಿಶಿಷ್ಟ ಅನುಭವದ ತಾಣ.

ಫೋಟೋ ಕೃಪೆ : amarujala

ಆಯಾ ಕಾಲ ಘಟ್ಟದ ರಾಜರು ತಮ್ಮದೊಂದು ಅರಮನೆಯನ್ನು ಕಟ್ಟಿಕೊಂಡು, ತಮ್ಮದ್ದೇ ಘಾಟ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿನ ವಿಶಾಲ ಕಟ್ಟಡಗಳು ರಾಜ ಪರಿವಾರಕ್ಕಷ್ಟೇ ಅಲ್ಲದೇ ಆಯಾ ರಾಜ್ಯಗಳಿಂದ ಬರುವ ಭಕ್ತರಿಗೂ ಉಪಯೋಗವಾಗುತ್ತಿವೆ. ಘಾಟ್’ಗಳ ಮೂಲಕ ಹೆಜ್ಜೆ ಹಾಕುತ್ತಾ ಚಲಿಸಿದಷ್ಟೂ ಗಂಗೆಯ ಸೌಂದರ್ಯವನ್ನು ವಿಭಿನ್ನವಾಗಿ ಆಸ್ವಾದಿಸಬಹುದು. ದೋಣಿ ವಿಹಾರದ ಆನಂದ ವರ್ಣಿಸಲಸದಳ.

1928 ರಲ್ಲಿ ಮಹಾರಾಜ “ನಾಲ್ವಡಿ ಕೃಷ್ಣರಾಜ ಒಡೆಯರ್” ತಂಗಲು ವಿಶಾಲ ಕಟ್ಟಡ ನಿರ್ಮಾಣಕ್ಕಾಗಿ “ಹನುಮಾನ್ ಘಾಟ್”ನ ಪಾರ್ಶ್ವ ಭಾಗ ಖರೀದಿಸಿ “ಮೈಸೂರು ಘಾಟ್” ನಿರ್ಮಿಸಿದರು. ಹನುಮಾನ್ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ಮಧ್ಯ. ಇವಾಗ ಅದು “ಕರ್ನಾಟಕ” ಘಾಟ್. ವಿವಿಧ ರಾಜ್ಯದ ರಾಜರು ನಿರ್ಮಿಸಿದ ಹಲವು ಬೃಹತ್ ಕಟ್ಟಡಗಳು ಮತ್ತು ಘಾಟ್’ಗಳು ಇಂದಿಗೂ ಸುಪ್ರಸಿದ್ಧ.

ಹೀಗೆ ಗಂಗೆಯ ತೀರದಲ್ಲಿ “ಕರ್ನಾಟಕ ಘಾಟ್” ಹೆಸರು ಓದಿದಾಕ್ಷಣ ಹೃದಯ ಪುಳಕಿತಗೊಂಡಿತು. ಮನದೊಳಗೆ ಅವರ್ಣನೀಯ ಹೆಮ್ಮೆ. ಕೊನೆಗೆ ಇಲ್ಲಿನ “ಕರ್ನಾಟಕ ವಸತಿ ಗೃಹ”ದಲ್ಲಿ ವಾಸ್ತವ್ಯ ಹೂಡಿದ್ದಾಯಿತು. ಕನ್ನಡದ ಕಂಪು ಪಸರಿಸುವ ವಾತಾವರಣ. ವ್ಯವಸ್ಥಾಪಕ ಸಿಬ್ಬಂದಿಗಳು ಕನ್ನಡಿಗರು.

ಭುಜಕ್ಕೆ ಭುಜ ಒರಗಿಸಿಕೊಂಡು ಒಂಟಿ ಕಾಲಿನಲ್ಲಿ ಹರಟೆಗೆ ನಿಂತ ಬೃಹತ್ ಕಟ್ಟಡಗಳ ನಡುವಿನ ಕಿರಿದಾದ ಇಕ್ಕೆಲಗಳೆ ಗಲ್ಲಿಗಳು. ಕಿರಿದಾದ ಗಲ್ಲಿಗಳು ಘಾಟ್’ನಿಂದ ಮುಖ್ಯ ರಸ್ತೆಗೆ ತೆರೆದುಕೊಂಡಿವೆ.
ಅಲ್ಲಿನ ಹಲವು ಮನೆಗಳಿಗೆ ಅಂಟಿಸಿದ್ದ ನಾಮ ಫಲಕಗಳು ಕನ್ನಡದಲ್ಲಿರುವದನ್ನು ನೋಡಿದಾಕ್ಷಣ “ನಮ್ಮವರು” ಎಂದು ಸೆಳೆದು, ಕುಣಿದು ಕುಪ್ಪಳಿಸುವ ಮನಸ್ಸು‌. ದೂರದ ಅಪರಿಚಿತ ನಾಡಲ್ಲಿ ನಮ್ಮವರು ಅಚಾನಕ್ ಭೇಟಿಯಾದ ಸಂತಸ. ಇಲ್ಲಿನ ಕೆಲ ಮನೆಗಳ ಫಲಕ, ದೇವಸ್ಥಾನ, ಮಠಗಳ ಫಲಕದಲ್ಲಿ ಕನ್ನಡ ಕಂಡಾಗಲ್ಲಂತೂ “ನಮ್ಮದು” ಅಂತಾ ಮುಖವರಳಿ, ರೋಮಾಂಚನವಾಯಿತು.
ಕಾಶಿಯಲ್ಲಿ ಸುಮಾರು ಜನ ಕನ್ನಡದವರು ನೆಲೆಗೊಂಡಿದ್ದಾರೆ. ಹಲವು ಮನೆಗಳು “ಕರ್ನಾಟಕ ಘಾಟ್” ಮತ್ತು “ಅಸ್ಸಿ ಘಾಟ್” ಗಲ್ಲಿಗಳಲ್ಲಿವೆ. ಕೆಲವು ಕನ್ನಡಿಗರು “ಬನಾರಸ್ ಹಿಂದೂ ವಿಶ್ವವಿದ್ಯಾಲಯ”ದ ವಿವಿಧ ವಿಭಾಗಗಳಲ್ಲಿ ಸೇವೆಯಲ್ಲಿರುವುದು ಸಹ ನಮ್ಮ ಹೆಮ್ಮೆ.

ಕನ್ನಡಿಗರ ಮಠಗಳನ್ನು…. ಕಂಡಾಕ್ಷಣ ಬರಸೆಳೆಯುವಂತ ಬೆಚ್ಚನೆಯ ಭಾವ.

ಗೋದೌಲಿಯಾ ರಸ್ತೆಯ ಮೂಲಕ ವಿಶ್ವನಾಥ ಮಂದಿರ ತಲುಪುವ ದಾರಿಯಲ್ಲಿ ಸಿಗುವ “ಜಂಗಮವಾಡಿ ಮಠ” ಅಕ್ಷರಶಃ ನನ್ನನ್ನು ಪುಳಕಿತನನ್ನಾಗಿಸಿತು. ಬೃಹತ್ ಮಠದ ತೀರಾ ಪಕ್ಕಕ್ಕೆ “ಕನ್ನಡ ಫಲಕ”ವಿರುವ ಅನ್ನಪೂರ್ಣ ಬನಾರಸ್ ಸೀರೆಯ ಅಂಗಡಿ.

ವೀರಶೈವ ಸಂಪ್ರದಾಯದ “ಜಂಗಮವಾಡಿ ಮಠ” ನೂರಾರು ವರ್ಷಗಳ ಇತಿಹಾಸವಿರುವ ಕ್ಷೇತ್ರ. ಈಗಿನ ಜಗದ್ಗುರುಗಳು ಸಹ ಕರ್ನಾಟಕದವರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ 80 ಎಕರೆ ಭೂಮಿ ಧಾನ ಮಾಡಿದ ಶ್ರೇಷ್ಠ ಮಠ. ಈ ಮಠ ಗುರುಕುಲವನ್ನು ನಡೆಸುತ್ತಿದ್ದು ಅನೇಕರಿಗೆ ವಿಶೇಷ ಶಾಸ್ತ್ರಾಧ್ಯಯನ ಸೌಲಭ್ಯ ನೀಡುತ್ತಿದೆ. ಭಕ್ತರಿಗೆ ವಸತಿ, ಊಟದ ವ್ಯವಸ್ಥೆ ಕೂಡ ಮಠದಲ್ಲಿದೆ.
ಪಂಚಾಚಾರ್ಯ ಪೀಠಗಳಲ್ಲೊಂದಾದ ಕಾಶಿಪೀಠದ ಕೇಂದ್ರ ಇರುವುದು ಕೂಡ ಇಲ್ಲಿಯೇ.

ಅಸ್ಸಿ ಘಾಟ್‌ನ ಬಳಿಯಲ್ಲಿ ಉಡುಪಿಯ ಕೃಷ್ಣಮಠದ ಕೇಂದ್ರವಿದೆ.

ಪಂಚಗಂಗಾ ಘಾಟ್‌ನಲ್ಲಿ “ಗೋಕರ್ಣ ಪರ್ತಗಾಳಿ ಮಠ”ದ ಅಂಗಸಂಸ್ಥೆ ಇದೆ.

ಬ್ರಹ್ಮ ಘಾಟ್’ನಲ್ಲಿ ಗೌಡ ಸಾರಸ್ವತ ಬ್ರಾಹ್ಮಣರ “ಕಾಶಿ ಮಠ”ವಿದೆ.

ಹೀಗೆ ಪಟ್ಟಿ ಬೆಳೆಯುವ ಅನೇಕ ಕನ್ನಡಿಗರ ಮಠಗಳು ಇನ್ನೂ ಇರಬಹುದು. ನಾನು ಕಂಡು ಪುಳಕಿತಗೊಂಡ ಸ್ಥಳಗಳಿವು. ಕಾಶಿಯಲ್ಲಿ ನಡೆದಾಡುವಾಗ ಒಮ್ಮೇ ಸುತ್ತಾಡಿ ಬನ್ನಿ. ಪದೇ ಪದೇ ಕಾಶಿ ತನ್ನ ತೆಕ್ಕೆಗೆ ಸೆಳೆಯುತ್ತದೆ. ಅಪರಿಚಿತರಾಗಿ ನಗರ ಪ್ರವೇಶಿಸಿದ ಯಾತ್ರಾರ್ಥಿಗಳನ್ನು ಕಾಶಿ ತೀವ್ರ ಆಕರ್ಷಿಸಿ, ಚಿರಪರಿಚತರನ್ನಾಗಿಸುತ್ತೆ. ಇಲ್ಲಿನ ಆಹಾರ ಪದ್ದತಿ, ಜೀವನಶೈಲಿ, ಜನ, ನಡವಳಿಕೆ, ಕಿರಿದಾದ ಗಲ್ಲಿಗಳು, ಗಂಗೆ, ಶಿವನ ಒಲವು, ಸಾಧುಗಳ ಮುಖಭಾವ ಎಲ್ಲವೂ ತೀರಾ ಆಪ್ತ ಭಾವ.




ಪ್ರವಾಸದ ಕೊನೆಯ ದಿನವಂತೂ.. ಮನಸ್ಸು ಒಲ್ಲದ ಹೃದಯದಿಂದ ಭಾರವಾಗಿ ರಚ್ಚೆ ಹಿಡಿಯುವುದು. ಆನಂದ ಭಾಷ್ಪ ಸುರಿಸುತ್ತಾ ಮರಳಿ ಬರುವ ದಿನವಂತೂ ಪದೇ ಪದೇ ಕಾಶಿ ಯಾತ್ರೆ ಕಾಡದೆ ಇರಲಾರದು. ಮತ್ತೊಮ್ಮೆ ಕಾಶಿ ಯಾತ್ರೆ ಅನುಭವಿಸುವ ಕಾತರ.

ಜೈ ಭೋಲೆನಾಥ…


  • ಡಾ. ಪ್ರಕಾಶ ಬಾರ್ಕಿ  (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW